ಶನಿವಾರ, ಮೇ 4

ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ

ಪ್ರಜಾವಾಣಿ ಬ್ಲಾಗಿಲನು ತೆರೆದಾಗ........
ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ


ಬ್ಲಾಗಿಲನು ತೆರೆದು...

ಶಾನಿಯ ರೈಲು!





ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು!
ಹೀಗೆ ತಮಾಷೆಯಾಗಿ ಬರೆಯುವ, ತನ್ನನ್ನೇ ತಮಾಷೆ ಮಾಡಿಕೊಳ್ಳುವ `ಶಾನಿ' ಅವರ ಬ್ಲಾಗು `ಶಾನಿಯ ಡೆಸ್ಕಿನಿಂದ' (shaanidesk.blogspot.in). ಯಾರೀ ಶಾನಿ- ಎನ್ನುವ ಕುತೂಹಲದಿಂದ ಇಣುಕಿ ನೋಡಿದರೆ ಹೆಚ್ಚಿನ ಮಾಹಿತಿಯೇನೂ ಸಿಗುವುದಿಲ್ಲ. `ಹೋಗಿದ್ದೇ ಊರು, ಸಾಗಿದ್ದೇ ದಾರಿ' ಎನ್ನುವ ಮನೋಭಾವದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- “ಕಂಡಾಪಟ್ಟೆ ಮೂರ್ಖತನ.
ಹುಟ್ಟಾ ಪೆದ್ದು. ಎರಡು ಬಾರಿ `ಅಂತಾರಾಷ್ಟ್ರೀಯ ಮೂರ್ಖ' ಪ್ರಶಸ್ತಿ ಲಭಿಸಿದೆ”. ಇಂಥ ಶಾನಿ, ವಿಮಾನ ಬಿಡಬೇಕು ಎಂದುಕೊಂಡಿದ್ದರಂತೆ. ಅದು ಒಗ್ಗದೆ ಹೋದ ಕಾರಣ ರೈಲು ಬಿಡಲು ಹೊರಟಿದ್ದಾರೆ, ಬ್ಲಾಗಿನ ಮೂಲಕ.
ಈಗ ಡೆಸ್ಕ್‌ನಲ್ಲಿ ಇಣುಕೋಣ. ಇಲ್ಲಿರುವುದೆಲ್ಲ ಹೆಚ್ಚೂಕಡಿಮೆ ರೈಲು ಬಿಡುವ ಬರಹಗಳೇ. `ಕ್ರಿಕೆಟ್ ತಂಡಗಳೂ ನಮ್ಮ ಹೀರೋಗಳೂ...' ಎನ್ನುವ ಬರಹ ನೋಡಿ:
“ಇವತ್ತು ಬೆಳ್ಳಂಬೆಳಿಗ್ಗೆ ನನ್ನ ಇಮೇಲ್ ಖಾತೆ ತೆರೆದು ನೋಡಿದಾಗ ಮಹೇಶ್ ಭಟ್ರ ಸಂದೇಶವಿತ್ತು. `ನಿಮ್ಮ ಇತ್ತೀಚಿನ ಬರಹಗಳಲ್ಲಿ ಗಂಡನ ಮನೆಯ ವ್ಯವಹಾರಗಳನ್ನು ಗುರಿಯಾಗಿಸಿದ್ದೀರಿ. ಯಾಕೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ `ಬೇರೆಯವರ ಗಂಡನ ಮನೆಯ ಬಗ್ಗೆ ಬರೆಯೋದಕ್ಕಿಂತ ನನ್ನ ಗಂಡನ ಮನೆಯ ವ್ಯವಹಾರಗಳನ್ನು ಬರೆಯುವುದೇ ಸೇಫ್ ತಾನೆ. ಹುಟ್ಟಾ ಸೋಂಬೇರಿಯಾಗಿರುವ ಮತ್ತು ತಲೆ ಇಲ್ಲದ ನನಗೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ' ಎಂದು ಉತ್ತರಿಸಿ ಬಚಾವಾಗಲು ಪ್ರಯತ್ನಿಸಿದ್ದೆ (ಈ ಹೇಳಿಕೆಯ ಮೇರೆಗೆ ಶಾನಿ ಅವರನ್ನು ಸ್ತ್ರೀಲಿಂಗಕ್ಕೆ ಸೇರಿಸಬಹುದು -ಸಾಕ್ಷಿ).
ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಟಿಕರ್ತ. ಇದನ್ನು ನಿಮಗೂ ಯಾರಾದರೂ ಕಳುಹಿಸಿರಲೂಬಹುದು. ಇಲ್ಲವಾದರೆ ಸುಮ್ಮನೆ ನಕ್ಕುಬಿಡಿ.
ಆಸ್ಟ್ರೇಲಿಯಾ ತಂಡ = ರಾಜ್‌ಕುಮಾರ್ (ಯಾವಾಗಲೂ ಹಿಟ್!). ದಕ್ಷಿಣ ಆಫ್ರಿಕಾ = ಶಂಕರ್ ನಾಗ್ (ಪ್ರತಿಭಾವಂತ, ಆದರೆ ದುರದೃಷ್ಟವಂತ). ಶ್ರೀಲಂಕಾ = ಸುದೀಪ್ (ಪ್ರತಿಭಾವಂತ, ಆದರೆ ನೋ ಹಿಟ್!). ಬಾಂಗ್ಲಾದೇಶ = ಪ್ರೇಮ್ (ಅದೃಷ್ಟವಂತ). ನ್ಯೂಜಿಲೆಂಡ್ = ರಮೇಶ್ (ಸದ್ದಿಲ್ಲದಂತೆ ಉನ್ನತಿ). ಇಂಗ್ಲೆಂಡ್ = ಶಿವರಾಜ್‌ಕುಮಾರ್ (ಹಿಟ್ಟಾ ಫ್ಲಾಪಾ ಗೊತ್ತಿಲ್ಲ!). ಐರ್ಲೆಂಡ್ = ಗಣೇಶ್ (ಮೆಗಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ). ವೆಸ್ಟಿಂಡೀಸ್ = ವಿಜಯ್ (ಸದ್ದು ಮಾತ್ರ, ಪರ್ಫಾಮೆನ್ಸ್ ಸುದ್ದಿ ಇಲ್ಲ). ಪಾಕಿಸ್ತಾನ = ವಜ್ರಮುನಿ (ಯಾವಾಗಲೂ ಖಳನಾಯಕನೇ). ಭಾರತ = ಜಗ್ಗೇಶ್ (ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!)”.
ಕ್ರಿಕೆಟ್ ಬಗೆಗಿನ ಮೇಲಿನ ಬರಹದಲ್ಲಿನ ಹೋಲಿಕೆಗಳು ಈಗ ಕೊಂಚ ಹಳತು ಎನ್ನಿಸುವಂತಿವೆ. ಹಾಗೆಂದು, ಶಾನಿಯವರ ಹಾಸ್ಯಪ್ರಜ್ಞೆಗೆ ಸಮಕಾಲೀನ ಸ್ಪರ್ಶವಿಲ್ಲ ಎನ್ನುವಂತಿಲ್ಲ. ಇದಕ್ಕೆ ಉದಾಹರಣೆ, `ನಮ್ಮನೆಯಲ್ಲೂ ಪಟ್ಟಿ ಬಿಡುಗಡೆಯಾಯ್ತು!' ಎನ್ನುವ ಟಿಪ್ಪಣಿ. ಪ್ರಸ್ತುತ ನಾಡನ್ನೆಲ್ಲ ವ್ಯಾಪಿಸಿರುವ ಚುನಾವಣಾ ಜ್ವರದ ಕಾವು ಈ ಬರಹಕ್ಕೆ ಪ್ರೇರಣೆಯಾಗಿದೆ. ವಿವಿಧ ಪಕ್ಷಗಳ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಶಾನಿ, ತಮ್ಮ ಮನೆಯ ದಿನಸಿ ಪಟ್ಟಿಗೆ ಹೋಲಿಸುತ್ತಾರೆ. ಮನೆಯ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿ ಸ್ವಾರಸ್ಯಕರವಾಗಿದೆ. ಅದನ್ನು ಬ್ಲಾಗಿನಲ್ಲೇ ಓದಿ.
ಶಾನಿ ಅವರ ಡೆಸ್ಕ್‌ನ ವಸ್ತು ವೈವಿಧ್ಯ ಗಮನಸೆಳೆಯುವಂತಿದೆ. ತಮ್ಮ ಹುಟ್ಟಿದ ದಿನ ಗೊತ್ತಿಲ್ಲದೇ ಇರುವುದರಿಂದ ಸಾಕಷ್ಟು ಲಾಭವಾಗಿದೆ ಎನ್ನುತ್ತ, `ಹನ್ನೆರಡು ರಾಶಿಯೊಳಗೊಂದು ರಾಶಿ' ಬರಹದಲ್ಲಿ ಹದಿಮೂರನೇ ರಾಶಿಯನ್ನು ಬ್ಲಾಗಿಗರು ಸೃಷ್ಟಿಸುತ್ತಾರೆ. ಮರೆಗುಳಿ ಪ್ರೊಫೆಸರರೊಬ್ಬರ ಬಗ್ಗೆ ಸೊಗಸಾದ ಬರಹವಿದೆ. `ಮಳೆ, ಆಷಾಢ, ಅಳಿಯ, ಎಮ್ಮೆ, ಇತ್ಯಾದಿ...' ಬರಹ ಲಲಿತ ಪ್ರಬಂಧದ ಗುಣಗಳನ್ನು ಹೊಂದಿದೆ.
ಗದ್ಯದಿಂದ ಮತ್ತೆ ಪದ್ಯಕ್ಕೆ ಬರೋಣ. `ಏಡ್ಸ್' ಎನ್ನುವುದೊಂದು ಚುಟುಕು. ಅದು ಹೇಳುತ್ತದೆ- `ಏಡ್ಸ್ ಬಾರದಿರಲು / ಏನು ಮಾಡಬೇಕು? / ಏನೂ / ಮಾಡದಿರಬೇಕು!'. ಈ ಹನಿಗೆ ಓದುಗರ ಒಂದು ಪ್ರತಿಕ್ರಿಯೆ- `ಏನೂ ಬರೀಬೇಡಿ ಮತ್ತೆ. ರಾಜ್ಯಪಾಲರು ಡಾಕ್ಟರೇಟ್ ಕೊಡಲ್ಲ!'.
ನಗಿಸುವುದರಲ್ಲಿ ಶಾನಿ ಅವರು ತಮ್ಮ ಬರಹಗಳಲ್ಲಿ ಯಶಸ್ವಿ ಆಗಿರುವಂತೆಯೇ ವಿಫಲವಾಗಿರುವುದೂ ಇದೆ. ಆದರೆ, ನಗಿಸಲಿಕ್ಕಾಗಿ ಅವರು ಅಡ್ಡಮಾರ್ಗ ಹಿಡಿದಿಲ್ಲ ಎನ್ನುವುದನ್ನು ಮೆಚ್ಚಿಕೊಳ್ಳಬೇಕು.
-ಸಾಕ್ಷಿ.

ಶುಕ್ರವಾರ, ಏಪ್ರಿಲ್ 19


ಯಾರ ಕಣ್ಣೋ
ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು...!
---

ನಾನೂ ನಕ್ಕೆ
ಅವಳು -
ಅವರ ನೋಡಿ ನಕ್ಕಳಂತೆ
ಅವರಿಗೀಗ -
ಎರಡು ಮಕ್ಕಳಂತೆ
(ಹೀಗೆ ಹೇಳಿದರು ಡುಂಡಿ)
ನಾನೂ ಅವನ ನೋಡಿ ನಕ್ಕೆ
ಅಂವ ಕೇಳಿದ
ನಿಂಗೇನು ಸೊಕ್ಕೇ?
---

ಶನಿವಾರ, ಏಪ್ರಿಲ್ 6

ನಮ್ಮನೆಯಲ್ಲೂ ಪಟ್ಟಿ ಬಿಡುಗಡೆಯಾಯ್ತು!


ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಹೆಣಗಾಡುತ್ತಿರುವಂತೆ ನಮ್ಮನೆಯಲ್ಲೂ ಪಟ್ಟಿಯ ಕುರಿತು ಗೊಂದಲ, ಆತಂಕ, ಅನುಮಾನ, ಸಮ್ಮತಿ, ಅಸಮ್ಮತಿಗಳೆಲ್ಲ ನಡೆಯುತ್ತಿದ್ದವು. ಪಕ್ಷಗಳ ಹೈ ಕಮಾಂಡಿನಂತೆಯೇ ನಮ್ಮನೆಯ ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ತಲೆಯನ್ನು ಕೆರೆದು ಕೊರೆದೂ ತಯ್ಯಾರಿಸಿದ ಪಟ್ಟಿ ಕೊನೆಗೂ 36 ಗಂಟೆಗಳ ಬಳಿಕ ಅಂತಿಮವಾಗಿ ಓಕೆಯಾಯಿತು. ಪಟ್ಟಿಯನ್ನು ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ಅಳೆದೂ ಸುರಿದೂ ಒಪ್ಪಿ ಕೊನೆಗೂ ನನ್ನ ಕೈಗೊಪ್ಪಿಸಿದರು.

ನಮ್ಮನೆಯ ಹೈಕಮಾಂಡ್ ಆಗಿರುವ ಅ(ತ್ತೆ)ಮ್ಮ ಸತತ ಮೂರು ದಿನಗಳ ಕಾಲ ತಲೆ ಕೆಡಿಸಿಕೊಂಡು ತಯಾರಿಸಿದ ಪಟ್ಟಿಯನ್ನು ಇಂದು ಬೆಳಗ್ಗೆ ನಾನು ಹೊರಟು ನಿಂತಾಗ ಸಾಮಾನಿನ ಮಾಮೂಲಿ ಚೀಲದೊಡನೆ ನನ್ನ ಕೈಯಲ್ಲಿಟ್ಟರು.

ಬಿಡಿಸಿ ನೋಡಿದೆ. ಅನ್ನದ ಕ್ಷೇತ್ರದಿಂದ ಅಕ್ಕಿಗೆ ಜಾಗವಿತ್ತು. ಇಂಗು ಒಮ್ಮೆ ಸ್ಥಾನ ಪಡೆದಿದ್ದರೂ, ಮತ್ತೆ ಕಳೆದುಕೊಂಡಿತ್ತು. ಸಾಂಬಾರ ಕ್ಷೇತ್ರದಿಂದ ಸಾಂಬಾರ್ ಪೌಡರ್ ಹಾಗೂ ರಸಂ ಪೌಡರ್ ಎರಡಕ್ಕೂ ಧಕ್ಕಿದೆ. ಚಹಾ-ಕಾಫಿ ಕ್ಷೇತ್ರದಲ್ಲಿ ಸಕ್ಕರೆ ಸ್ಥಾನ ಪಡೆದಿದ್ದರೆ, ಕಾಳುಗಳ ಕಡೆಯಿಂದ ಕಡ್ಲೆ, ತಿಂಗಳವರೆ, ರಾಜ್ಮಾಗಳು ಅವಕಾಶ ಪಡೆದುಕೊಂಡಿದ್ದವು. ಮಿಕ್ಕಂತೆ ಎಣ್ಣೆ, ಗೋಧಿ ಹುಡಿ, ಹಪ್ಪಳ, ಪಪ್ಪಡ, ಸೆಂಡಿಗೆ, ಮೆಣಸಿನ ಹುಡಿ ಇವುಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದವು.

ವಿಷಯವಿಷ್ಟೆ. "ಮುಂದಿನವಾರ ನಾನು ಒಂದು ನಾಲ್ಕು ದಿನ ತವರಿಗೆ ಹೋಗುತ್ತಿದ್ದೇನೆ. ಏನಾದರೂ ಅಗತ್ಯ ವಸ್ತುಗಳು ಬೇಕಿದ್ದರೆ ಹೇಳಿ" ಎಂದಿದ್ದೆ ಅಮ್ಮನಿಗೆ. ಹಾಗಾಗಿ ಅವರು ತೀವ್ರವಾಗಿ ತಲೆಕೆಡಿಸಿಕೊಂಡು ಪಟ್ಟಿ ತಯ್ಯಾರಿಸಿದ್ದರು. "ಮೆಣಸು ಸ್ವಲ್ಪ ಇದೆ, ಬರಿಬೇಕೋ, ಬೇಡ ಕಾಣ್ತದೆ, ನಾಲ್ಕು ದಿನದಲ್ಲಿ ನೀನು ಬರ್ತಿಯಲ್ಲ" ಎನ್ನುತ್ತಾ ಪ್ರತಿಯೊಂದು ವಸ್ತುವನ್ನು ಬರೆದು - ಹೊಡೆದು - ಹರಿದು ಕುಳಿತಿದ್ದರು. ಏನೂ ಗಡಿಬಿಡಿ ಇಲ್ಲ ನಿಮಗೆ ನೆನಪಾದಂತೆಲ್ಲ ಬರೆಯುತ್ತಾ ಹೋಗಿ ಅಂತ ನಾನವರಿಗೆ 36 ಗಂಟೆಗಳ ಸಮಯಾವಕಾಶ ನೀಡಿದ್ದೆ.

 ಬೈ ಡಿಫಾಲ್ಟ್ ಆಗಿ ಕ್ಷುಲ್ಲಕ ವಿಚಾರಗಳಿಗೆಲ್ಲ ಬೇಕೋ- ಬೇಡವೋ, ಅದೋ-ಇದೋ ಎಂದೆಲ್ಲ ತಲೆ ಕೆಡಿಸಿಕೊಳ್ಳುತ್ತಾ ಗೊಂದಲಕ್ಕೆ ಬೀಳುವ ಅವರು ಈ ಸಾಮಾನು ಪಟ್ಟಿ ಮಾಡುವ ವಿಚಾರದಲ್ಲೂ ತಲೆಕೆಡಿಸಿಕೊಳ್ಳುತ್ತಿರುವುದು ನನಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪಟ್ಟಿ ತಯ್ಯಾರಿಯಂತೆಯೇ ಕಂಡಿತ್ತು!

ಗುರುವಾರ, ಫೆಬ್ರವರಿ 14

ಅವಳ ಹಿಂದೆ ನೀನು ನಡೆದು......



ಬಂಗಾರಪ್ಪೀ....,
ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು ಅಂತ ಟೀಕಿಸಿದವರೆ, ಆದರೆ ಈ ಸರ್ತಿ ಮಾತ್ರ ಪ್ರೇಮಿಗಳ ದಿನಾಚರಣೆ ಅಂದಾಗ ನಿನ್ನ ನೆನಪು ತುಂಬ ತುಂಬ ಆಗ್ತಾ ಇದೆ.

ನಾವು ಪ್ರೇಮಿಗಳಾಗದೇ ಸೀದ ಮದುವೆಯೇ ಆಗಿಬಿಟ್ಟೆವು. ಮತ್ತೆ ಪುರ್ಸೊತ್ತಲ್ಲಿ ಪ್ರೇಮಿಗಳಾಗೋಣ ಅಂತ ಭಾವಿಸಿದ್ದೆವು. ಸಿನಿಮೀಯ ರೀತಿಯಲ್ಲಿ ನಮ್ಮ ಮದುವೆ ಆಯಿತು. ನಮ್ಮ ಮದುವೆಯ ವೇಳೆಗೆ ನಾವಿಬ್ಬರು ಹದಿ ಹರೆಯ ದಾಟಿ, ಯೌವ್ವನದ ಕೊನೆಯಂಚಿಗೆ ಬಂದು ಮುದಿ ಹರೆಯದ ಹೊಸ್ತಿಲಲ್ಲಿದ್ದೆವು. ನಮ್ಮದು ಅಂತರ್ಜಾತಿ ವಿವಾಹ ಅಂದಾಗ, ಲವ್ವಾ ಅಂತ ಮಂದಿ ಕೇಳುತ್ತಿದ್ದರು. ಆದಕ್ಕೆ ನಾವು ಇಲ್ಲ ಇನ್ಮೇಲೆ ಲವ್ವು ಅನ್ನುತ್ತಾ ನೆಗಾಡಿದ್ದೆವಲ್ಲ.

ಸ್ವತಂತ್ರವಾಗಿ ಒಂಟಿಯಾಗೇ ಬದುಕುತ್ತಿದ್ದ ನಾವಿಬ್ಬರು ಮದುವೆಯ ಬಳಿಕದ ಜಂಟಿ ಜೀವನಕ್ಕೆ ಒಗ್ಗಿಕೊಂಡು ಸ್ವಲ್ಪ ದಿವಸ ಮಾತ್ರವೇ ಆಗಿತ್ತು. ಪರಸ್ಪರ ಅರ್ಥ ಮಾಡಿಕೊಂಡೆವೋ; ಅಥವಾ ಅಪಾರ್ಥ ಮಾಡಿಕೊಂಡೆವೋ ಅಂತೂ ಇನ್ನು ಪರ್ವಾಗಿಲ್ಲ ಅಂತ ಜೀವನದಲ್ಲಿ ಭದ್ರ ಹೆಜ್ಜೆಯೂರಿ ಮುನ್ನುಗ್ಗುತ್ತಿರುವಾಗಲೇ ಬಿತ್ತಲ್ಲ ಬ್ರೇಕ್!

ಒಂದು ವರ್ಷ ಕಳೆದು ಎರಡನೇ ವರ್ಷಕ್ಕೆ ಅಡಿ ಇಟ್ಟಿದ್ದೆವು ಅಷ್ಟೆ. ನಮಗೆ ಈ ವಯಸ್ಸಲ್ಲಿ ಮಗು ಬೇಡವೆಂದು ನಿರ್ಧರಿಸಿದ್ದರೂ, ಮಗು ಬೇಕೆಂಬ ನನ್ನ ಸ್ತ್ರೀ ಸಹಜ ಬಯಕೆ ನಿನಗೆ ಅರ್ಥವಾಯಿತೋ ಎಂಬಂತೆ ನೀನೇ ನನಗೆ ಮಗುವಾಗಿ ಬಿಟ್ಟೆ!
ನಿನ್ನ ಫ್ರೆಂಚ್ ಫ್ರೆಂಡ್ ಒಬ್ಬಾಕೆ ನಿನನ್ನು ಮನುವಾ ಅಂತ ಕರೆಯುತ್ತಿದ್ದಳಂತೆ. ಆಗೊಮ್ಮೆ ಈಗೊಮ್ಮೆ ನಾನೂ ನಿನ್ನ ಮನುವಾ ಅಂದರೆ ನೀನೆಷ್ಟು ಪುಳಕಗೊಳ್ಳುತ್ತಿದ್ದೆ. ಫ್ರೆಂಚ್ ಭಾಷೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ನೀನು ನನಗೆ ಪಾರ್ ಅಮೋರ್, ಮುನಾಮಿ, ಬೀಝೂ... ಎಂಬೆಲ್ಲ ಶಬ್ದಗಳನ್ನು ಕಲಿಸಿದ್ದೆ. ನಿಂಗೊತ್ತಾ..... ನಮಗೇನು ಹದಿಹರೆಯವೇ ಎಂದೆಲ್ಲ ಒಣಜಂಭ ಕೊಚ್ಚಿಕೊಳ್ಳುತ್ತಿದ್ದ ನಾವುಗಳು ನಮಗೇ ಗೊತ್ತಿಲ್ಲದಂತೆ ಗಾಢವಾದ ಪ್ರೀತಿಗೆ ಬಿದ್ದಿದ್ದೆವು!

ನೀನು ನನಗೆ ಬೇಕು; ನಾನು ನಿನಗೆ ಬೇಕು- ಪ್ರಪಂಚ ಸುತ್ತಬೇಕು ಎಂದೆಲ್ಲ ಅನಿಸಲಾಂಭಿಸಿದ ಹೊತ್ತಲ್ಲಿ ಮಧ್ಯದಲ್ಲಿ ಅವಳು ಬಂದಳಲ್ಲ ಮಾರಿ. ಬಂದವಳು ನನ್ನಿಂದ ನಿನ್ನನ್ನು ಕಸಿದೇ ಬಿಟ್ಟಳು! ನಿನ್ನಲ್ಲಿದ್ದ ಗಾಢವಾದ ಇಚ್ಛಾಶಕ್ತಿಯನ್ನು ಬಲ್ಲವಳಾಗಿದ್ದ ನಾನು, ನೀನೇನು ಅವಳ ವಶವಾಗಲಾರೆ ಎಂದೇ ನಂಬಿದ್ದೆ. ಆದರೆ ಅವಳ ವಿರುದ್ಧದ ನಮ್ಮ ಹೋರಾಟ ವ್ಯರ್ಥವೇ ಆಯಿತು ಮತ್ತು ಕ್ಯಾನ್ಸರೆಂಬ ರಕ್ಕಸಿ ಹೆಸರಿನ ಅವಳೇ ಗೆದ್ದುಬಿಟ್ಟಳು.

ನೀನು ಅವಳ ಹಿಂದೆ ನಡೆದು ಒಂದು ವರ್ಷವೇ ಆಗುತ್ತಾ ಬಂತು. ಅಂದ ಹಾಗೆ ನಮ್ಮ ಮದುವೆಯ ಬಳಿಕ ಇದು ಮೂರನೆಯ ವ್ಯಾಲಂಟೈನ್ಸ್ ಡೇ. ಮೊದಲ ಬಾರಿ ಫೆಬ್ರವರಿ 14ರಂದು  ನಮಗೆ ಮದುವೆಯಾಗಿ ಒಂದೂ ಮುಕ್ಕಾಲು ತಿಂಗಳು ಆಗಿತ್ತು. ಆ ದಿನ ನಿನ್ನೊಬ್ಬ ಸ್ನೇಹಿತ ಬಾಂಬೆಯಿಂದ ಬಂದಿದ್ದರು ಅಂತ ನೀನು ನನ್ನನ್ನು ಬಿಟ್ಟು ಅವರೊಂದಿಗೆ ಹೋಗಿದ್ದೆ. ಮಿತ್ರರ ಮಧ್ಯೆ ನಾನ್ಯಾಕೆ ಇನ್ನೂ ಬೇಕಾದಷ್ಟು ಫೆಬ್ರವರಿಗಳು ಬರ್ತಾವಲ್ಲ ಅಂತ ನಾನೂ ಸುಮ್ಮನಿದ್ದೆ. ಎರಡನೇ ವರ್ಷದ ವ್ಯಾಲಂಟೈನ್ ಡೇಯಂದು ದಿನಗಳನ್ನೆಣಿಸುತ್ತಾ ಕೆಎಂಸಿ ಆಸ್ಪತ್ರೆಯಲ್ಲಿ ಮಲಗಿದ್ದೆ ನೀನು. ಅಂದು ನೋಡಲು ಬಂದ ನಿನ್ನ ಆಪ್ತಮಿತ್ರ ಹೌ ಆರ್ ಯೂ ಮೈ ವ್ಯಾಲಂಟೈನ್ ಅಂದಾಗ ಸಂಪೂರ್ಣ ಅಶಕ್ತನಾಗಿದ್ದ ನಿನ್ನ ಕಣ್ಣಲ್ಲಿ ಸುಳಿದ ಮಿಂಚು ಕಂಡು ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆದಾದ ಮೂರೇ ದಿವಸಕ್ಕೆ ನನ್ನನ್ನು ಶಾಶ್ವತವಾಗಿ ತೊರೆದು ಹೋಗಿದ್ದೆ.

ನೋಡ ನೋಡುತ್ತಿರುವಂತೆ ನನ್ನ ಕೈಯಿಂದ ಯಾರೋ ಕಸಿದುಕೊಂಡಂತೆ, ನನ್ನ ಕೈಗಳಲ್ಲೇ ನೀನು ಕೊನೆಯುಸಿರು ಬಿಟ್ಟೆ. ನೀನು ಸತ್ತ ಮೇಲೂ ನೀನು ಬದುಕಿರಬೇಕಿತ್ತು ಮುದ್ದಪ್ಪೀ.... ಕೊನೆ ಪಕ್ಷ. ನೀನು ಇರುವಾಗ ನಿನ್ನನ್ನು ದೂಷಿಸುತ್ತಿದ್ದವರೆಲ್ಲ ನಿನ್ನನ್ನು ಹಾಡಿಹಾಡಿ ಹೊಗಳುವುದನ್ನು ನೋಡುವುದಕ್ಕೆ ನೀನಿರಬೇಕಿತ್ತು. ನಂಬಿದ ಜನರ ತಿರುಗಿ ನಿಲ್ಲುವ ಪರಿ ಮತ್ತು ಅವರ ಮಾತು ವರ್ತನೆಗಳನ್ನು ನೋಡುವುದಕ್ಕಾದರೂ ನೀನಿರಬೇಕಿತ್ತು. ಒಂದೇ ಒಂದು ನಿಮಿಷದಲ್ಲಿ ಪ್ರಪಂಚ ಪರಿವರ್ತನೆಯಾಗಿರುವದನ್ನು ನೋಡುವುಕ್ಕೂ ನೀನು ಇರ ಬೇಕಿತ್ತು.

ಇರಲಿ, ನೀನು ಸತ್ತು ಬದುಕಿದೆ. ನಾನು ಬದುಕಿ ಸತ್ತೆ. ನನ್ನ ಆಧ್ಯಾತ್ಮ ಗುರುಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆತ್ಮಕ್ಕೆ ಸಾವಿಲ್ಲವಂತೆ. ಶಕ್ತಿ ಎಂದಿಗೂ ನಾಶವಾಗದು ಅದು ಬದಲಾಗುತ್ತದೆ ಅಥವಾ ರೂಪಾಂತರವಾಗುತ್ತದೆಯಂತೆ. ಹಾಗಾಗಿ ನೀನು ದೇಹ ತ್ಯಾಗ ಮಾಡಿದ ಬಳಿಕ ಹೇಗಿದ್ದಿ ನನಗೆ ಗೊತ್ತಿಲ್ಲ. ಎಲ್ಲಿದ್ದಿ ಎಂಬುದೂ ನನಗೆ ಗೊತ್ತಿಲ್ಲ. ಎಲ್ಲಿಯಾದರೂ ಇದ್ದಿಯಾ ಎಂಬುದಾಗಿ ಗಟ್ಟಿಯಾಗೇ ನಂಬಿದ್ದೇನೆ ನಾನು.

ನೀನು ಸತ್ತಮೇಲೆ ನಿನ್ನ ಮೇಲೆ ದೂರುಗಳಿಲ್ಲ. ನನ್ನೊಂದಿಗೆ ಬರುವುದಿಲ್ಲ, ಮಾತನಾಡುವುದಿಲ್ಲ ಎಲ್ಲೂ ಕರೆದೊಯ್ಯುವುದಿಲ್ಲ ಎಂಬ ಮುನಿಸೂ ಇಲ್ಲ. ಯಾಕೆಂದರೆ ಎಲ್ಲಿದ್ದರೂ, ಹೇಗಿದ್ದರೂ, ಯಾವಾಗಿದ್ದರೂ ನೀನು ನನ್ನೊಂದಿಗೇ, ನನ್ನೊಳಗೇ ಇರುತ್ತಿಯಲ್ಲ. ಕಾಯುವ, ಬೇಯುವ ಬೇಗೆಯಂತೂ ಇಲ್ಲವೇ ಇಲ್ಲ ಈಗ.

ಬದುಕಿದ್ದಾಗ ತಮಾಷೆಗೂ ನಿನ್ನನ್ನು ಏಕವಚನದಲ್ಲಿ ಕರೆಯುತ್ತಿರಲಿಲ್ಲ. ನೀನು ಸಹ ಆದಿಯಿಂದ ಅಂತ್ಯದ ತನಕವೂ ನನ್ನನ್ನು ಬಹುವಚನದಲ್ಲೇ ಮಾತನಾಡಿಸುತ್ತಿದ್ದೆ. ಆದರೆ, ನಾನು ನಿನಗೆ ಬರೆಯುತ್ತಿರುವ ಮೊದಲ ಪ್ರೇಮಪತ್ರವಿದು. ನೀನೀಗ ಅನುಗಾಲವೂ ನನ್ನಂತರಾತ್ಮವೇ ಆಗಿರುವುದರಿಂದ ನೀವು ಅಂದರೆ ಯಾರೋ ದೂರದವರು ಅಂದಹಾಗನಿಸುತ್ತದೆ. ಹಾಗಾಗಿ ನೀನು ಅಂದಿರುವೆ. ಕೋಪಿಸಬೇಡ. ಅಗೌರವ ಎಂದಂತೂ ಭಾವಿಸಲೇ ಬೇಡ.

ನನ್ನ ಅತ್ತೆ, ನಿನ್ನ ಅಮ್ಮನಾಗಿರುವ ಅತ್ತೆಮ್ಮ ಯಾವಾಗಲೂ ಹೇಳುತ್ತಿದ್ದರು, ಹೋದ ಜನ್ಮದ ನಿನ್ನ ಋಣವನ್ನು ನಾನು ಬಾಕಿ ಇರಿಸಿಕೊಂಡದ್ದಿಕ್ಕೇ ನಮ್ಮ ಮದುವೆಯಾಯಿತಂತೆ. ಮತ್ತು ಆ ಆರೇಳು ತಿಂಗಳು ನೀನು ನನಗೆ ಮಗುವೇ ಆಗಿದ್ದೆ. ಹಾಗಾಗಿ ನನ್ನ ಋಣವೇನೋ ಸಂದಾಯವಾಗಿರಬಹುದು. ಆದರೆ ಈ ಜನ್ಮದಲ್ಲಿ ನಮ್ಮ ಪ್ರೀತಿಯ ಋಣ ಹಾಗೇ ಬಾಕಿ ಉಳಿದಿದೆಯಲ್ಲಾ. ಅದಕ್ಕಾಗಿಯಾದರೂ ಮತ್ತೊಮ್ಮೆ ನಾನು ಮತ್ತು ನೀನು ಒಂದಾಗುವಾ. ಆಗ ಇನ್ನಷ್ಟು ಗಾಢವಾಗಿ, ಇನ್ನಷ್ಟು ಆಪ್ತವಾಗಿ ಪ್ರೀತಿಸೋಣ, ಏನಂತೀ?

ಚಿನ್ನಪ್ಪೀ.... ಪಾರ್ ಅಮೋರ್, ಮುನಾಮಿ, ಬೀಝೂ...