ಮಂಗಳವಾರ, ಆಗಸ್ಟ್ 3

ಆಫೀಸೆಲ್ಲಾ..... ನಾತಮಯಾ....

ಆಗೀಗ ಗಾಳಿಯೊಂದಿಗೆ ಕೆಟ್ಟ ವಾಸನೆ ಪಸರಿಸುತ್ತಿತ್ತು. ಭಾನುವಾರದ ಗಮ್ಮತ್ತಿನೂಟದ ಪ್ರಭಾವವಿರಬೇಕು. ನಮ್ಮಾಫೀಸಿನ ಸಿಬ್ಬಂದಿಯೊಬ್ಬರು ಕಾಲಮೇಲೆ ಕಾಲು ಹಾಕಿ, ಒಂದು ಭಾಗವನ್ನು ಒಂಚೂರು ಎತ್ತಿ, ಒಂಥರಾ ಭಂಗಿಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದರು. ಇವರ ಭಂಗಿ ನೋಡಿ ದುರ್ನಾತಕ್ಕೆ ಕಾರಣ ಕಂಡು ಹಿಡೆದೆ. ನಕ್ಕುಬಿಟ್ಟರೆ ಅವರಿಗೆ ಅವಮಾನವಾದೀತೆಂದು ಆಡಲೂ ಆಗದೆ, ಅನುಭವಿಸಲೂ (ವಾಸನೆಯನ್ನು) ಆಗದೇ ಕುಳಿತಿದ್ದೆ. ನಿಮಗೂ ಈಗ ಕಾರಣ ಗೊತ್ತಾಗಿರಬಹುದು. ಸುಸಂಸ್ಕೃತಿಯಿಂದ ಮಂಡಿಸುವುದಾದರೆ ಅಪಾನವಾಯು ಅಥವಾ ಅಧೋವಾಯು ಹೊರಡುತ್ತಿತ್ತು. ಸಮ್ಮನೆ ನೇರವಾಗಿ ಹೇಳುವುದಾದರೆ ಹೂಸು ಬಿಡುತ್ತಿದ್ದರು.

ತಕ್ಷಣ ಅನ್‌ಲೈನ್ ನಿಘಂಟಿಗೆ ಹೋಗಿ ಹೂಸು ಕೊಟ್ಟು (ಬಿಟ್ಟು?) ನೋಡಿದೆ. "ದೇಹಗತವಾದ ಐದು ಬಗೆಯ ಪ್ರಾಣವಾಯುಗಳಲ್ಲಿ ಒಂದು, ಗುದಸ್ಥಾನದ ವಾಯು, ಅಪಾನವಾಯು, ಅಧೋವಾಯು" ಎಂಬೆಲ್ಲ ಸಮಾನಾರ್ಥಕ ಶಬ್ದಗಳು ಬಿಚ್ಚಿಕೊಂಡವು. ಇಷ್ಟರಲ್ಲಿ ಇದಕ್ಕೆ ಸಂಬಂಧಿಸಿದ ಅನುಭವಗಳು, ಗಾದೆಗಳು, ಜೋಕುಗಳು ಪುಂಖಾನುಪುಂಖಾನುವಾಗಿ ಮನದಲ್ಲಿ ಹರಡಿ ಬ್ಲಾಗಿಸಬೇಕೆಂಬ ತುಡಿತ ಒದ್ದುಕೊಂಡು ಬಂತು. ನಮ್ಮೂರಲ್ಲಿ ಸುರಿದ ಜಡಿಮಳೆಯ ಬಗ್ಗೆ ಬರಯೋಣ ಎಂದು ಒಂದು ತಿಂಗಳಿಂದಲೇ ಪ್ಲಾನು ಹಾಕುತ್ತಿದ್ದ ನಾನು ಸಡನ್ನಾಗಿ ವಿಷಯಾಂತರಿಸಿ ಅಪಾನವಾಯು ಬಗ್ಗೆ ಬರೆಯ ಹೊರಟಿರುವೆ. ನಿಮಗೆ ಛೀ..., ಅಸಂಹ್ಯ....., ಗಲೀಜು... ಹೇಸಿಗೆ ಎಂದೆಲ್ಲ ಅನಿಸುತ್ತದೆಯೇನೋ....? ಆದರೆ ನಾನೇನೂ ಮಾಡುವಂತಿಲ್ಲ. ಇದು ಸ್ವಲ್ಪ ನಾತಮಯ ವಿಷಯವೇ. ನೀವು ಬೇಕಾದರೆ ಮೂಗು ಮುಚ್ಚಿಕೊಂಡೇ ಓದಿ.

ಹಾಗೇ ನೋಡಿದರೆ ನಾನು ಹುಟ್ಟಿದ ಮತ್ತು ಮೆಟ್ಟಿದ ಎರಡೂ ಮನೆಗಳೂ ಸಹ 'ಸೌಂಡ್' ಫ್ಯಾಮಿಲಿಗಳೇ. ಚಿಕ್ಕವರಿದ್ದಾಗ ಅಪ್ಪನ ಹೂಸಿನ ಶಬ್ದದೊಂದಿಗೇ ಬೆಳೆದವರು ನಾವು. ಮನೆಯಲ್ಲಿ ಯಾರಾದರೂ ನೆಂಟರಿದ್ದರೆ ಅದರ ಭರಾಟೆಗೊಂದಿಷ್ಟು ಕಡಿವಾಣ ಇರುತ್ತಿದ್ದಾದರೂ; ಮಿಕ್ಕಂತೆ, ಯಜಮಾನನೆಂಬ ಗತ್ತಿನೊಂದಿಗೆ ಭಯಂಕರವಾದ ಡೊಂರಂಕ್, ಡು...ರ್ರಂಕ್ ಶಬ್ದ ತಥಾನುಗತವಾಗಿ ಕೇಳಿಬರುತ್ತಿತ್ತು. ನಾವು ಮುಖಮುಖ ನೋಡಿ (ಸದ್ದಿಲ್ಲದೆ) ನಗುತ್ತಿದ್ದೆವು. ಸತ್ಯ ಹೇಳಬೇಕೆಂದರೆ, ಕಕ್ಕುಸಿಲ್ಲದ ಆ ಕಾಲದಲ್ಲಿ ಬಹಿರ್ದೆಸೆಗೆ ಗುಡ್ಡೆಗೆ ಓಡುತ್ತಿದ್ದ ನಾವು, ಅರ್ಜೆಂಟ್ ಆದಾಗೆಲ್ಲ, ಅಪ್ಪನ ಮಟ್ಟದಲ್ಲಿ ಢರುಂಕ್ ಢುರುಂಕ್ ಅಲ್ಲವಾದರೂ, ಪುಯಿಂಕ್, ಕುಯಿಂಕ್ ಎಂಬ ಸದ್ದು ಹೊರಡಿಸಿಕೊಂಡು ಓಡುತ್ತಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.

ಅವ್ವನಿಗೋ, ಅಪ್ಪನ ಈ ರೀತಿ ಅವಮರ್ಯಾದೆ ಅನಿಸುತ್ತಿದ್ದು, ಸಿಡಿಮಿಡಿ ಅನ್ನುತ್ತಿದ್ದರು. ಒಮ್ಮೊಮ್ಮೆ ಪರಮೋಶಿಯಿಂದ ಅವರ ದೇಹದಿಂದಲೂ ನಿಯಂತ್ರಣ ತಪ್ಪಿ ಹೊರಟು ಬಿಡುತ್ತಿತ್ತು. ಅಪ್ಪನಿಗಿಂತ ಹೆಚ್ಚು ಸಲಿಗೆ ಅವ್ವನ ಬಳಿ. ನಾವೆಲ್ಲ ಜೋರಾಗೇ ನಕ್ಕರೆ, ನಮ್ಮನ್ನೆಲ್ಲ ಬಯ್ದು- ಜಾಡಿಸಿ, 'ಹೂಸಿಗೆ ನಗುವವರು ಹೂಸಿಂದ ಕಡೆ' ಎಂಬ ಅವರವ್ವನ ಗಾದೆಯನ್ನು ಉಲ್ಲೇಖಿಸಿ ನಮ್ಮನ್ನು ಹೂಸಿಗಿಂತ ಕಡೆಯಾಗಿಸಲು ಪ್ರಯತ್ನಿಸುತ್ತಿದ್ದರು.

ಈ ನನ್ನ ಶ್ರೀಪತಿಯಂತೂ ಲೈಸನ್ಸೇ ಇಲ್ಲದವರಂತೆ ಬಿಡುತ್ತಾರೆ. (ಒಮ್ಮೊಮ್ಮೆ ಅತ್ತೆಮ್ಮನೂ ಇವರಿಗೆ ಸ್ಫರ್ಧೆಯೊಡ್ಡಿ ಜುಗಲ್ಬಂದಿ ಏರ್ಪಡುವುದಿದೆ) ಯಾರಾದರೂ ಹೊಸಬರೆದುರು ಇವರ ಸೌಂಡ್ ಹೊರಟರೆ ನಂಗಂತೂ ಒಂಥರಾ ಆಗೇ ಆಗುತ್ತೆ. ಒಂದ್ಸಾರಿ ಫ್ರೆಂಡ್ ಮನೆಗೆ ಹೋಗಿದ್ದೆವು. ಊಟವೆಲ್ಲ ಮುಗಿಸಿ ಬೀಳ್ಕೊಡುಗೆ ಸಂದರ್ಭ. ಕಾರೇರಲು ನಿಂತಿದ್ದಾಗ ಇವರ ಸೌಂಡ್ ಹೊರಟಿತು. ಸ್ವಲ್ಪವಾದರೂ ಕಂಟ್ರೋಲ್ ಮಾಡಲು ನೋಡ್ತಾರಾ ಮಹರಾಯ, ಕೆಟ್ಟವಾಯುವನ್ನು ಎಗ್ಗಿಲ್ಲದೆ ಹೊರಹಾಕುತ್ತಿದ್ದರು. ದೊಡ್ಡವರೆಲ್ಲ ನಿರ್ಲಕ್ಷಿಸಿದಂತೆ ಮಾಡಿದರೂ, ಅಲ್ಲಿದ್ದ ಮಕ್ಕಳು ಕೇಳ್ತಾವಾ? ಕಿಸಿಕಿಸಿ... ಪಿಸಿಪಿಸಿ.. ಅನ್ನುತ್ತಾ ಬಾಯಿಗೆ ಕೈಹಿಡಿದು ದೂರ ಓಡಿದವು. ಮನೆಗೆ ಬಂದಮೇಲೆ ಪಿರಿಪಿರಿ ಮಾಡಿದೆ. ಎಂಥ ನೀವು, ಮಕ್ಕಳೆದುರೆಲ್ಲಾ ಎಂಬ ಆಕ್ಷೇಪ ವ್ಯಕ್ತಪಡಿಸಿದರೆ ಕ್ಯಾರೇ ಇಲ್ಲದ ಅವರು ಅದರಲ್ಲೇನಿದೆ, ಎಲ್ಲರೂ ಬಿಡುತ್ತಾರೆ, ಇಟ್ಸ್ ಹೆಲ್ದೀ.. ನನ್ನ ಆಕ್ಷೇಪಣೆಯನ್ನು ಚಿಲ್ಲರೆ ಮಾಡಿಬಿಟ್ಟರು.

ನಮ್ಮೂರಲ್ಲೊಬ್ಬ ಅಪ್ಪಯ್ಯಣ್ಣ ಇದ್ದರು. ಈಗವರು ದಿವಂಗತ. ಗಾತ್ರದಲ್ಲಿ ಇವರು ಕುಳ್ಳಗೆ ಗುಂಡುಗುಂಡಾಗಿದ್ದರೆ, ಇನ್ನೋರ್ವ ಅಪ್ಪಯ್ಯಣ್ಣ ಸೊಣಕಲಾಗಿದ್ದರು. ಹಾಗಾಗಿ ಬೊಡ್ಡಪ್ಪಯ್ಯಣ್ಣ ಎಂಬ ನಾಮಾಂಕಿತರಾಗಿದ್ದ ಅವರು ಯಾವಾಗಲೂ, ನಗುತ್ತಾ ನಗಿಸುತ್ತಲೇ ಇರುತ್ತಿದ್ದರು. ಪುಟ್ಟ ಮಕ್ಕಳನ್ನು ಕಂಡಾಗೆಲ್ಲ ಇವರದ್ದೊಂದು ತಮಾಷೆ. ಕೈ ಬೆರಳುಗಳನ್ನೆಲ್ಲ ಮಡಿಚಿ "ಅಯ್ಯೋ ಬೆರಳು ಮುದ್ದೆ ಆಯ್ತು, ಬಿಡಿಸಲಾಗುತ್ತಿಲ್ಲ" ಎನ್ನುತ್ತಾ ಒದ್ದಾಡುವಂತೆ ನಾಟಕ ಮಾಡುತ್ತಾ ಮಕ್ಕಳ ಮನದಲ್ಲಿ ಅನುಕಂಪ ಗಿಟ್ಟಿಸುತ್ತಿದ್ದರು. ಪಾಪ ಅನ್ನುತ್ತಾ ನಾವು ಅವರ ಕೈ ಬೆರಳನ್ನು ಇನ್ನಿಲ್ಲದ ಶ್ರದ್ಧೆಯಿಂದ ಬಿಡಿಸುತ್ತಿರುವಾಗ ಬಾಂಬ್ ಸಿಡಿದಂತೆ ಡೊಂಯಿಂಕ್ ಎಂಬ ಸದ್ದಿನೊಂದಿಗೆ ಅವರ ದೇಹದೊಳಗಿನ ವಾಯುಹೊರಡುತ್ತಿತ್ತು. ನಮ್ಮ ಸ್ಥಿತಿ ಕಂಡು ಡೊಳ್ಳೊಟ್ಟೆಯನ್ನು ಕುಲುಕಿಸಿ ನಗುವ ಅವರ ಪರಿಯಿಂದಾಗಿ ತೀವ್ರವಾದ ಚಿತ್ತಕ್ಷೋಭೆಯನ್ನೂ, ವಾಸನೆಯನ್ನೂ ಒಟ್ಟೊಟ್ಟಿಗೆ ಸಹಿಸಲಾಗದೇ ಅವರನ್ನು ಅಲ್ಲೇ ಗುದ್ದಿಗುದ್ದಿ ಮುದ್ದೆ ಮಾಡಬೇಕೆನಿಸುತ್ತಿತ್ತು.

"ವ್ಹಾssssಸ್ದೇವ ಹ್ಹೂಸ್ ಬಿಟ್ಟ, ಊರಿಗೆಲ್ಲ ನಾತ ಕೊಟ್ಟ" ಎನ್ನತ್ತಾ ನಮ್ಮ ಸಹಪಾಠಿ ವಾಸುವನ್ನು ಅಣಕಿಸಿ ಓಡಿದವರ ಗುಂಪಿನಲ್ಲಿ ನಾನು ಇದ್ದೆ. ಆತ ಹೊಡಿತಾನೆಂದು ಬೆದರಿ ಓಡುವ ರಭಸದಲ್ಲಿ ಎಷ್ಟು ಜನ ಹೂಸು ಬಿಡುತ್ತಾ ಓಡಿದ್ದರೋ....? ಆಗಿನ ನಮ್ಮ ಮಂಗಾಟದ ವೇಳೆ ಅವನಿಗೆಷ್ಟು ಹ್ಯುಮಿಲಿಯಶನ್ ಆಗಿರಬೇಡ. ಸಾರಿ ಕಣೋ ವಾಸು. ಕ್ಷಮ್ಸಿ ಬಿಡು. ಹೂಸುವಾಸನೆ ಎಂಬ ಅಕ್ಷರಗಳ ಪುಂಜವನ್ನು 'ಹೂ' ಸುವಾಸನೆ ಹಾಗೂ 'ಹೂಸು' ವಾಸನೆ ಎಂದು ವಿಂಗಡಿಸಿ, ನಮ್ಮದು ಭಾರೀ ಪದ ಸಂಪತ್ತೆಂದು ಬೀಗಿದ್ದೂ ಉಂಟು.

ತುಳುವಿನಲ್ಲೊಂದು ಗಾದೆಯಿದೆ. ಬಾತ್‌ನಾಯೆಗ್ ಪೂತ್‌ನಾತ್ ಆಧಾರೋ. ಅಂದರೆ ಬಾತಿರುವಾತನಿಗೆ ಹೂಸು ಬಿಟ್ಟಷ್ಟೂ ಆರಾಮ ಅಂತ ಅರ್ಥ. ಅದೊಮ್ಮೆ (ಪುರಾತನ ಕಾಲದಲ್ಲಿ) ಯಾರದ್ದೋ ಮನೆಗೆ ನೆಂಟರು ಬಂದಾಗ ಅವರಿಗಾಗಿ ಕೋಳಿ ಸಾರು ರೊಟ್ಟಿಮಾಡಿ ಬಡಿಸಿದರು. ಕೋಳಿ, ರೊಟ್ಟಿ ಸವಿಯುವಾಗ ಕೆಮ್ಮು ಒತ್ತರಿಸಿಕೊಂಡು ಬಂತು. ಶಕ್ತಿಹಾಕಿ ಕೆಮ್ಮುವಾಗ ಒಂದೆರಡೂ ಹೂಸೂ ಹೋಯ್ತು. ಹಾಗಾಗಿ ನೆಂಟರ ಮನೆಯಲ್ಲಿ ಗಮ್ಮತ್ತೇನು ಎಂದು ಪ್ರಶ್ನೆಗೆ, ತುಳುವಿನಲ್ಲಿ "ಕೋರಿಲ ರೊಟ್ಟಿಲ; ತೆಮ್ಮಲ ಪೂಕಿಲ" (ಕೋಳಿ ಮತ್ತು ರೊಟ್ಟಿ, ಕೆಮ್ಮು ಮತ್ತು ....) ಎಂದು ನೀಡಿದ ಉತ್ತರ ಹಾಸ್ಯೋಕ್ತಿಯಾಗಿ ಚಾಲ್ತಿಯಲ್ಲಿದೆ.

ಇನ್ನೊಂದು ಹಳೆಯ ಜೋಕಿದೆ. ಕಚೇರಿಯಲ್ಲಿ ಕುಳಿತಿದ್ದ ಆತನಿಗೆ ಪಾಪ ನಿಯಂತ್ರಿಸಲಾಗದಷ್ಟು ಒತ್ತಿಕೊಂಡು ಬಂದ ವಾಯುವನ್ನು ಶಬ್ದರಹಿತವಾಗಿ ಹೊರಹಾಕಲಾಗಲಿಲ್ಲವಂತೆ. ಹಾಗಾಗಿ 'ಮರ್ಯಾದೆ ಕಾಪಾಡಿಕೊಳ್ಳಲು' ಅದರ ಪುರ್ಕ್ ಪುರ್ಕ್ ಶಬ್ದಕ್ಕೆ ಸರಿ ಎಂಬಂತೆ ಕಾಗದವನ್ನು ಸಶಬ್ದವಾಗಿ ಹರಿದು ಗೆದ್ದೆನೆಂದು ಬೀಗಿದ. ಅಷ್ಟರಲ್ಲಿ ಸಹೋದ್ಯೋಗಿ, ನಿನ್ನ ಐಡಿಯಾವೇನೋ ಚೆನ್ನಾಗಿದೆ, ಆದರೆ ವಾಸನೆ ಮಾತ್ರ ತುಂಬ ಕೆಟ್ಟದಾಗಿದೆ ಎಂದು ಪ್ರತಿಕ್ರಿಯಿಸಿದನಂತೆ!

"ಹೊಟ್ಟೆಯಲ್ಲಿ ಮೇಲ್ಮುಖವಾಗಿ ಚಲಿಸುವ ಗಾಳಿಯನ್ನು ಕೆಳಮುಖವಾಗಿ ತಳ್ಳಲ್ಪಟ್ಟಾಗ ಅದು ಎರಡು ತೆಳುವಾದ ಪದರಗಳ ನಡುವೆ ಹಾದು ಹೋಗುವಾಗ ಉಂಟಾಗುವ ಪುರ್, ಪುಸ್ಕ್, ಫುಯಿಂಕ್, ಟ್ರುರ್ರ್, ಟುರುಕ್, ಢರ್ರ್, ಡುಯಿಂಕ್ ಎಂಬ ಶಬ್ದವನ್ನು ಲೋಕಲ್ ಭಾಷೆಯಲ್ಲಿ 'ಪೂಕಿ' ಎಂದು ಕರೆಯುವರು" ಇದು ಹೂಸೆಸ್ಸೆಮ್ಮೆಸ್ ವ್ಯಾಖ್ಯಾನ. ತುಳುವಿನಲ್ಲಿ ಇದರ ಸಮಾನಾರ್ಥಕ ಶಬ್ದ ಪೂಕಿ. (ಫಾರ್ವರ್ಡಿಗೆ ಥ್ಯಾಂಕ್ಸ್ ಭುವನ್!)

ಇಷ್ಟಕ್ಕೂ, ನಾನೇನೂ ಸಾಚಾ ಅಲ್ಲ. ಆಗೀಗ ಅಚಾತುರ್ಯ ಆಗುವುದಿಲ್ಲ ಎಂದೇನಿಲ್ಲ. ಏಕಾಂತದಲ್ಲಿ ಈ ವಿಚಾರದಲ್ಲಿ ಬಿಂದಾಸ್ ಆಗಿದ್ದರೂ, ಈ ಬಿಂದಾಸ್‌ನಿಂದ ಒಂದೆರಡು ಬಾರಿ ಗೆಳತಿಯರಿಗೆ ಸಿಕ್ಕಿಬಿದ್ದು, ಬಿದ್ದು ಬಿದ್ದು ನಕ್ಕದ್ದೂ ಇದೆ. ಎಷ್ಟೇ ಸಂಸ್ಕಾರವಂತರೂ, ಸಭ್ಯರಾಗಿದ್ದರೂ ಸಹ ಒಮ್ಮೆಯೂ ಅಧೋವಾಯು ಹೊರಡಿಸಿಯೇ ಇಲ್ಲ ಎಂದರೆ ಅದು ಅಪ್ಪಟ ಆತ್ಮವಂಚನೆಯೇ ಸರಿ!

12 ಕಾಮೆಂಟ್‌ಗಳು:

  1. ಶಾನಿ ಮೇಡಮ್,
    ಒಂದು ಸಂಸ್ಕೃತ ತುಂಡುಗವನ ನೆನಪಿಗೆ ಬಂದಿತು:

    "ಢರಂ ಢುರಂ ಭಯೋ ನಾಸ್ತಿ
    ಠುಸಕೋ ಹಿ ಪ್ರಾಣಘಾತುಕ:!"

    ಪ್ರತ್ಯುತ್ತರಅಳಿಸಿ
  2. ಸುನಾಥ್ ಕಾಕ,
    ನಿಮ್ಮ ತುಂಡುಗವನಕ್ಕೆ ಥ್ಯಾಂಕ್ಸ್,

    ಕಿರಿಯಳಾದ ನನ್ನನ್ನು ನೀವು ಮೇಡಮ್ ಅಂದಿದ್ದಕ್ಕೆ ಆಕ್ಷೇಪವಿದೆ!

    ಪ್ರತ್ಯುತ್ತರಅಳಿಸಿ
  3. ಅನಾಮಧೇಯರೇ,
    ನಿಮ್ಮ ನಾಮವೇನೇ ಇರಲಿ, ನಾತವನ್ನು ಭರಿಸುವ ಶಕ್ತಿಯನ್ನು ನಿಮಗೆ ಮೂಗು ನೀಡಲೀ...!

    ಪ್ರತ್ಯುತ್ತರಅಳಿಸಿ
  4. ಸದ್ದೇ ಇರಲಿಲ್ವಲ್ಲಾ ಅನ್ಕೊಂಡ್ರೆ, ಹೀಗೆ " ಸದ್ದು" ಮಾಡಿ ಬರೋದಾ??!

    ನಮ್ಮಜ್ಜಿ ಹೇಳಿಕೊಟ್ಟ ಶ್ಲೋಕ ನೆನಪಿಗೆ ಬಂತು :D

    " ಢರ್ರಂ ಭುರ್ರಂ ಭಯಂ ನಾಸ್ತಿ

    ಕೊಯ್ಯಂ ಪಿಯ್ಯಂ ಮಧ್ಯಮಂ

    ಪಿಸ್ಸಕಾರಿ ಮಹಾಘೋರಂ

    ನಿಶ್ಯಬ್ದಂ ಪ್ರಾಣಸಂಕಟಂ "

    ಪ್ರತ್ಯುತ್ತರಅಳಿಸಿ
  5. ಬ್ಲಾಗೆಳತಿಯೇ....,
    ಸುದ್ದಿಯಲ್ಲೇ ಇರದಿದ್ದ ನಾನು ಸದ್ದಿಲ್ಲದೆ ಬಂದರೆ ಯಾರಿಗೆ ತಿಳಿಯುತ್ತೆ. ಅದಕ್ಕೇ ಹೀಗೆ ಸದ್ದು ಮಾಡಿದ್ದು.
    'ನಿಶ್ಯಬ್ದಂ ಪ್ರಾಣಸಂಕಟಂ'- ಖರೇ
    ಥ್ಯಾಂಕ್ಸ್

    ಪ್ರತ್ಯುತ್ತರಅಳಿಸಿ
  6. ಸಂತೋಷ್,
    ನೀವು ನಕ್ಕು ಚೆನ್ನಾಗಿದೆ ಅಂದಿದ್ದು, ನನಗೆ ತುಂಬಾನೆ ಸಂತೋಷವಾಯ್ತು!

    ಪ್ರತ್ಯುತ್ತರಅಳಿಸಿ
  7. ಶೆಟ್ರೇ,
    ಖಂಡಿತಕ್ಕೂ ಗೊಳ್ಳೆಂದು ನಕ್ಕದ್ದು ಮಾತ್ರ ತಾನೆ. ಏನಾದ್ರೂ ಬಿಟ್ಟಿಲ್ವಲ್ಲಾ.. :)

    ಪ್ರತ್ಯುತ್ತರಅಳಿಸಿ