ಶುಕ್ರವಾರ, ಏಪ್ರಿಲ್ 25

ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೂ...

(ಇದೂ ಸೊಳ್ಳೆಗೆ ಸಂಬಂಧಿಸಿದ್ದು. ಇವ್ಳಿಗೆ ಸೊಳ್ಳೆ ಬಿಟ್ರೆ ಬೇರೆ ವಿಷ್ಯವೇ ಇಲ್ವಾಂತ ಗೊಣಗಬೇಡಿ. ಇದು ಮಲೇರಿಯಾ ದಿನಕ್ಕಾಗಿ ಸ್ಪೆಷಲ್!)

ಹಾಗೆ ನೋಡಿದರೆ, ಒಂದಾನೊಂದು ಕಾಲದಲ್ಲಿ ನಾನು ಹುಟ್ಟುವ ಮುಂಚೆ ನನ್ನೂರು ಮಲೇರಿಯಾ ಫೇಮಸ್ ಆಗಿತ್ತಂತೆ. ಇದು ನಂಗೆ ಗೊತ್ತಾದ್ದು ನಾನು ಹುಟ್ಟಿ ಎಷ್ಟೂ ವರ್ಷಗಳ ಬಳಿಕ, ಯಾವುದೋ ಪುಸ್ತಕ ಓದಿದಾಗ. ಎಲ್ಲೇ ಹೋದರೂ ಹೋಗಿ ಬೀಳುವುದು ಸೊಳ್ಳೆ ಕೊಂಪೆಗೆ ಎಂದು ಈ ಮೊದಲು ಹೇಳಿದ್ದೇನೆ. ನಾನು ಪಿ.ಜಿ ಮಾಡೋವಾಗ ಇದ್ದು ಊರು ಸೊಳ್ಳೆ ಖ್ಯಾತಿಯದ್ದು. ಸೊಳ್ಳೆ ಬಂದು ,ಕಿವಿಯಲ್ಲಿ ಗುಂಯ್‌ಗುಡುತ್ತಾ ಗುಡ್‌ನೈಟ್ ಹೇಳಿದರೆ ಮಾತ್ರ ನಿದ್ರೆ ಅನ್ನೊವಷ್ಟು ನಾನವುಗಳಿಗೆ ಎಡಿಕ್ಟ್ ಆಗಿದ್ದೆ. ಇಂಥ ಸೊಳ್ಳೆ ಸಂಭ್ರಮದಲ್ಲಿ ನಾನು ಗಡದ್ದಾಗಿ ನಿದ್ದೆ ಹೊಡೆಯುವುದನ್ನು ಕಂಡ ಸ್ನೇಹಿತೆಯರು ನನ್ನನ್ನು ಛೇಡಿಸುತ್ತಿದ್ದರು. ಸೊಳ್ಳೆಯೂ ನಿನ್ನ ಬಳಿ ಸುಳಿಯುವುದಿಲ್ಲ ಎಂದಾದರೆ, ನೀನು ಅದ್ಯಾವ ಪರಿ ಕೊಳಕಿ ಇರಬಹುದು ಎಂಬುದು ರುಕ್ಮಿಣಿಯ ಸ್ಟೇಟ್‌ಮೆಂಟ್.

ನನ್ನ ರೂಂಮೇಟ್ ಮಲೇರಿಯಾ ಬಂದು ಮಲಗಿದ್ದರೂ ನಾನು ಸೊಳ್ಳೆ ಪರದೆ ಉಪಯೋಗಿಸದೆ ಇರುವುದನ್ನು ಕಂಡ ಜ್ಯೋತಿ, ಅನಾಫಿಲೀಸ್ ಹೆಣ್ಣು ಸೊಳ್ಳೆಯಾದ ಕಾರಣ ಈಕೆ ಬಳಿ ಸುಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಳು.

ನನ್ನ ಗೆಳತಿಯೊಬ್ಬಳಿದ್ದಾಳೆ. ಅವ್ಳದ್ದು ಮಲೇರಿಯಾ ಫ್ಯಾಮಿಲಿ. ಅವಳ ಎರಡರ ಹರೆಯದ ಮಗುವನ್ನು ಬಿಡದೇ, ಅವರ ಮನೆಯಲ್ಲಿ ಎಲ್ಲರಿಗೂ, ತಿರುತಿರುಗಿ ಮಲೇರಿಯಾ ಅಟ್ಯಾಕ್ ಆಗಿತ್ತು. ಹೀಗೆ ಆಕೆಯ ತಂಗಿಗೊಂದು ಬಾರಿ ಮಲೇರಿಯಾ ಆಗಿದ್ದಾಗ ನಾನು ಆಸ್ಪತ್ರೆ ಡ್ಯೂಟಿ ಮಾಡಿದ್ದೆ. ಮಲೇರಿಯಾ ಪೇಶಂಟ್‌ಗೆ ನಾನು ವಾಚ್‌ವುಮನ್ ಅಗಿರುವ ಸುಳಿವು ಸಿಕ್ಕಿದ್ದ ನನ್ನ ಬಾಸ್ ಅದೊಮ್ಮೆ "ನೀವೂ ಒಂದು ಆಂಟಿ ಮಲೇರಿಯಾ ವ್ಯಾಕ್ಸೀನ್ ಮಾಡ್ಸಿಕೊಳ್ಳಿ" ಅಂದಿದ್ದರು. ಅದು ನನ್ನ ಮೇಲಿನ ಕಾಳಜಿಗೋ ಅಥವಾ ಈಕೆಗೆ ಮಲೇರಿಯಾ ತಗುಲಿಬಿಟ್ರೆ ರಜೆಕೊಡಬೇಕೆಂಬ ಅವರ ಚಿಂತೆಗೋ! ಬೇಕಿಲ್ಲ ಸಾರ್, ಎಷ್ಟೇ ಸೊಳ್ಳೆ ಕಡಿದರೂ ನನ್ನನ್ನು ಮಲೇರಿಯಾ ಬಾಧಿಸುವುದಿಲ್ಲ ಎಂಬ ಸಮಜಾಯಿಷಿ ನೀಡಿದ್ದೆ ಅವರಿಗಾಗ. ಮರುಮಾತಾಡದ ಅವರು ನಾನೇ ಒಂದು ಸೊಳ್ಳೆ ಎಂಬಂತಹ ಲುಕ್ ಕೊಟ್ಟಿದ್ದರು.

ಈ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ನನ್ನನ್ನು ಇನ್ನೊಮ್ಮೆ ನಗೆಪಾಟಿಲಿಗೀಡಾಗಿಸಿತ್ತು. ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಸಲ್ಲಿಸಿ ಕೆಲವು ತಿಂಗಳ ಬಳಿಕ ಲಿಖಿತ ಪರೀಕ್ಷೆಗೆ ಹಾಜರಾಗಲು ಆದೇಶ ಬಂದಿತ್ತು. ಒಂದು ಹುದ್ದೆಗೆ 80ಕ್ಕಿಂತಲೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಕುರಿತೇ ಹೆಚ್ಚು ಪ್ರಶ್ನೆಗಳು. ಅದರಲ್ಲೊಂದು ಪ್ರಶ್ನೆ ಮಲೇರಿಯಾ ರೋಗ ಹರಡುವ ಸೊಳ್ಳೆಯಾವುದು ಎಂಬುದಾಗಿ. ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಅಮಿತಾಭ್ ಬಚ್ಚನ್ ನೀಡಿದಂತೆ 'ಚಾರ್ ಆಪ್ಷನ್' ಇರಲಿಲ್ಲ, 'ಕಂಪ್ಯೂಟರ್ ಸಾಬೂ' ಇರಲಿಲ್ಲ.

ಪರೀಕ್ಷೆ ಮುಗಿಸಿ ನನ್ನೂರಿಗೆ ತಲುಪುವ ಧಾವಂತದಲ್ಲಿ ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದೆ. ದಾರಿಯಲ್ಲಿ ಸಿಕ್ಕ ಸಹ ಅಭ್ಯರ್ಥಿಯೊಬ್ಬಾತ, ಹಲೋ ಮೇಡಂ ಹೇಗೆ ಮಾಡಿದ್ದೀರಿ ಅಂತ ವಿಚಾರಿಸಿದ. ಪರವಾಗಿಲ್ಲ ಅಂದೆ. ಆತನ ಹೆಸರು ಶರತ್ಚಂದ್ರ ಎಂತಲೂ, ಕುಮುಟಾದಲ್ಲಿ ವಕೀಲನೆಂದೂ ಗೊತ್ತಾಯಿತು. ನನ್ನ ಜತೆ ಹೆಜ್ಜೆ ಹಾಕಿದ ಆತ ಪ್ರಶ್ನೆಗಳ ಬಗ್ಗೆ ಚರ್ಚಿಸಿದ. ಎಲ್ಲದಕ್ಕೂ ಸರಿಯುತ್ತರ ಬರೆದಿದ್ದೇನೆಂಬ ಹಂಡ್ರೆಡ್ ಪರ್ಸೆಂಟ್ ನಂಬುಗೆಯಲ್ಲಿದ್ದ ನಾನು ಎಲ್ಲ ಪ್ರಶ್ನೆಗಳಿಗೂ ಚಟಪಟ ಉತ್ತರ ಹೇಳುತ್ತಾ ಹೋದೆ. ಸೊಳ್ಳೆಯ ಪ್ರಶ್ನೆಗೂ ಉತ್ತರಿಸುತ್ತಾ, 'ಸಿಫಿಲೀಸ್' ಅಂದೆ. ಆತ ಒಮ್ಮೆಗೇ ಮುಖವನ್ನು ಒಂದಿಂಚು ಹಿಂದೆ ಸರಿಸಿದನಾದರೂ ಮತ್ತೆ ಸರಾಗವಾಗೇ ವರ್ತಿಸಿದ.

ಪರೀಕ್ಷೆ ಮುಗಿಸಿ ಹಾಸ್ಟೆಲ್‌ಗೆ ಮರಳಿದಾಗ, ಲೆಕ್ಚರರ್ ಆಗಿದ್ದ ಗೆಳತಿ ಅನಿತಾ ಪ್ರಶ್ನೆ ಪತ್ರಿಕೆ ಇಸಿದುಕೊಂಡಳು. ಅದರ ಕುರಿತು ದೊಡ್ಡ ಚರ್ಚೆಯೇ ಆಯಿತು. ಸೊಳ್ಳೆ ಪ್ರಶ್ನೆ ಬಂದಾಗ, ಹೇಳು ನೋಡೋಣ ಇದ್ಯಾವ ಸೊಳ್ಳೆ ಅಂತ ಪ್ರಶ್ನಿಸಿದಳು. ಅಷ್ಟೂ ಗೊತ್ತಿಲ್ವ ಸಿಫಿಲೀಸ್ ಅಂತ ಮತ್ತಷ್ಟು ದೃಢವಾಗಿ ಅಂದೆ. ಎಲ್ಲರೂ ಬಿದ್ದುಬಿದ್ದು ನಗಲಾರಂಭಿಸಿದರು. ಯೇ.... ಕತ್ತೆ ಇದು ಅನಾಫಿಲೀಸ್. ಸಿಫಿಲೀಸ್ ಅಂದರೆ ಲೈಂಗಿಕ ಕಾಯಿಲೆ ಅಂದಳು. ಶರತ್ಚಂದ್ರನೆಂಬ ಕುಮುಟಾದ ವಕೀಲ ನನ್ನ ಉತ್ತರ ಕೇಳಿ ಯಾಕೆ ಮುಖವನ್ನು ಒಂದಿಂಚು ಹಿಂದೆ ಸರಿಸಿದನೆಂದು ಆಗ ಹೊಳೆಯಿತು!

ಇದಾದ ಬಳಿಕ ನನ್ನ ಗೆಳತಿಯರಿಗೆ ಈ ಸಿಫಿಲೀಸ್ ವಿಚಾರ ಎತ್ತಿ ದಿನಕೊಮ್ಮೆಯಾದರೂ ನನ್ನನ್ನು ಲೇವಡಿಮಾಡದಿದ್ದರೆ ಸೂರ್ಯ ಮುಳುಗುತ್ತಿರಲಿಲ್ಲ. ವಿಷಯ ತಿಳಿದ ಜ್ಯೋತಿ ನಿಂಗಂತೂ ಆ ಕೆಲಸ ಖಂಡಿತ ಸಿಗುವುದಿಲ್ಲ ಎಂದು ಷರಾ ಬರೆದಿದ್ದಳು. ನಾಳೆ ನೀನು ಹೀಗೆ ಗಡಿಬಿಡಿಯಲ್ಲಿ ಒಂದರ ಬದಲು ಇನ್ನೊಂದರ ಪ್ರಕಟಣೆ ಮಾಡಿದರೆ ಗೋ......ವಿಂದ ಅಂತ ಟಿಪ್ಪಣಿಯನ್ನೂ ಸೇರಿಸಿದ್ದಳು.
ಕೊನೆಗೆ ನಾನೇ, ಹೋಗಲಿ ಕೊನೆಯ ಮೂರು ಅಕ್ಷರಗಳು ಸರಿ ಇವೆಯಲ್ವೇ, ಅರ್ಧ ಮಾರ್ಕಾದರೂ ಕೊಟ್ಟಾರು ಅಂತ ಹೇಳಿಕೊಂಡಿದ್ದೆ. ಇದಾದ ಬಳಿಕ ಕ್ರಮೇಣ ಆ ವಿಷಯವನ್ನೂ, ಆ ಪರೀಕ್ಷೆಯನ್ನೂ ನಾವೆಲ್ಲರೂ ಮರೆತಿದ್ದೆವು.

ಆದರೆ, ಒಂದು ದಿನ ನನಗೆ ಆಶ್ಚರ್ಯ ಹುಟ್ಟುವಂತೆ, ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ ನನ್ನನ್ನು ಆಡಿಯೋ ಟೆಸ್ಟ್‌ಗೆ ಕರೆದಿದ್ದರು. ನನ್ನ ಸ್ನೇಹಿತೆಯರಿಗೆ ಇದು ಇನ್ನೊಮ್ಮೆ ನಗುವಿನ ವಿಷಯವಾಗಿತ್ತು. 20 ಮಂದಿಯಲ್ಲಿ ಆಯ್ಕೆಗೊಂಡ ಐದು ಮಂದಿಯಲ್ಲಿ, ನನ್ನ ಹೆಸರಿದ್ದು ಅಂತಿಮ ಸುತ್ತಿನ ಸಂದರ್ಶನಕ್ಕೆ ಅರ್ಹತೆ ಗಳಿಸಿದ್ದೆ. ಅದೇದಿನ ಅಪರಾಹ್ನ ಸಂದರ್ಶನ. ಶರತ್ಚಂದ್ರನೂ ಬಂದಿದ್ದನಾದರೂ, voice testನಲ್ಲಿ ಫೇಲಾಗಿದ್ದ. ಹೀಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ಸಿಗದ ಸಹ ಅಭ್ಯರ್ಥಿಗಳು ಶಾನಿಯೇ ಆಯ್ಕೆಯಾಗಲಿ ಅಂತ ಹಾರೈಸಿ ಹೋಗಿದ್ದರು. ಶರತ್ಚಂದ್ರ ಸ್ವಲ್ಪ ಹೆಚ್ಚೇ ಹಾರೈಸಿದ್ದ. ಮುಕ್ಕಾಲು ಗಂಟೆ ಸಂದರ್ಶನ ಮಾಡಿದ್ದರು. ಅದಾಗ ಓದು ಮುಗಿಸಿದ್ದೆ ಅಷ್ಟೆ ನೋಡಿ, ಉತ್ಸಾಹದ ಮೂಟೆಯಾಗಿದ್ದ ನಾನು ಅದಮ್ಯ ಆತ್ಮವಿಶ್ವಾಸದಲ್ಲಿ ಪ್ರಶ್ನೆಗಳನ್ನು ಎದುರಿಸಿ ಕಂಡಾಪಟ್ಟೆ ಉತ್ತರ ಕೊಟ್ಟಿದ್ದೆ.

ಸಂದರ್ಶನ ಮುಗಿಸಿ ತೆರಳುವ ವೇಳೆಗೆ ಅನಿತ ಮತ್ತು ಇತರ ಗೆಳತಿಯರು ನಗುವಿಗೇನಾದರೂ ಹೊಸ ಸರಕಿದೆಯಾ ಎಂಬಂತೆ ಕಾಯುತ್ತಿದ್ದರು. ಜ್ಯೋತಿ ಮಾತ್ರ ಗಂಭೀರವಾಗಿ, ನಿಂಗೆ ಅರ್ಹತೆ ಇತ್ತೂ ಅಂತ ನೀನು ಧ್ವನಿಪರೀಕ್ಷೆಯಲ್ಲಿ ಪಾಸಾಗಿಲ್ಲ. ಸ್ನೇಹಿತೆಯೆಂಬ ದಾಕ್ಷಿಣ್ಯಕ್ಕೆ ನಿನ್ನ ಗೊರಗೊರ ಧ್ವನಿಯನ್ನು ಸುಮಧುರ ಅಂತ ನಾವು ಸಹಿಸಿಕೊಳ್ಳುತ್ತೇವೆ. ಆದರೆ ಅನಾಫಿಲೀಸನ್ನು ಸಿಫಿಲೀಸ್ ಅಂತ ಬರೆದವರ್ಯಾರು ಎಂಬ ನಿನ್ನ ಮೂತಿ ನೋಡುವ ಒಂದೇ ಉದ್ದೇಶದಿಂದ ನಿನ್ನನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆಂದಳು!! (ಇರಬಹುದಾ?)

ಮಂಗಳವಾರ, ಏಪ್ರಿಲ್ 22

ಮೇಜು ಗುದ್ದಿಗುದ್ದಿ ಭಾಷಣ ಮಾಡಿದೆವು

ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರ ಹುಟ್ಟೂರಿನಿಂದ ಸ್ಫರ್ಧಿಸಲು ನನಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ್ದರು. ನಾನು ಚುನಾವಣೆಗೆ ಸ್ಫರ್ಧಿಸಬೇಕೆಂಬ ಇರಾದೆಯಿಂದ ಇದ್ದವಳೇ ಅಲ್ಲ. ಸದಾನಂದರ ಹುಟ್ಟೂರಿನಿಂದ ಹೆಚ್ಚೆಂದರೆ ಗ್ರಾಮಪಂಚಾಯತ್ ಚುನಾವಣೆಗೆ ಸ್ಥಾನ ಲಭಿಸೀತು. ಆದರೆ ನಂಗೆ ಆಹ್ವಾನ ದೊರೆತದ್ದು ವಿಧಾನ ಸಭೆಗೆ! ರಾಜ್ಯಪಾಲ ಹುದ್ದೆ ತೊರೆದು ಬಂದ ಎಸ್ಸೆಂ ಕೃಷ್ಣರಂತಹ ಘಟಾನುಘಟಿಗಳಿಗೇ ಟಿಕೆಟ್ ಸಿಗದಿದ್ದಾಗ ಸೀನಲ್ಲೇ ಇಲ್ಲದ ಶಾನಿಗೆ ಹೇಗೆ ಟಿಕೆಟ್ ಸಿಕ್ಕಿತು ಅಂತ ತಲೆಕೆರೆಯಬೇಡಿ. ಕಾಂಗ್ರೆಸ್ ನಂಗೆ ಟಿಕೆಟ್ ನೀಡಿದ್ದು, ನಂಗೆ ನಿನ್ನ ಬಿದ್ದ ಕನಸಿನ ಹೆಡ್‌ಲೈನ್!

ಹಗಲೆಲ್ಲ ಚುನಾವಣೆ ಸುದ್ದಿಗಳನ್ನೇ ಪೇಪರ್‌ನಲ್ಲಿ ಓದುವುದಕ್ಕೋ ಅಥವಾ ಊರಿಂದ ದೂರದಲ್ಲಿ ಕುಳಿತ ನಾವುಗಳೆಲ್ಲ ಚುನಾವಣೆ ಕುರಿತು ಡಿಸ್ಕಸ್ ಮಾಡುವುದಕ್ಕೋ, ಅಂತೂ ಇದು ಸುಪ್ತ ಮನಸ್ಸಿನಲ್ಲಿ ತಳ ಊರಿದೆ ಎಂಬುದಾಗಿ ನಂಗೆ 'ಸಿಕ್ಕಿದ' ಟಿಕೆಟ್‌ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದ್ದೆ. ಆದರೂ, ಕಾಂಗ್ರೆಸ್ ಯಾಕೆ ನಂಗೆ ಕರೆದು ಟಿಕೆಟ್ ಕೊಟ್ಟಿತು ಅಂತ ಕನಸಿನುದ್ದಕ್ಕೂ ಯೋಚಿಸಿದ್ದು, ಎಚ್ಚರವಾದ ಮೇಲೂ ಮುಂದುವರಿದಿತ್ತು.

ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕನಸು ಕಾಣಿರಿ; ದೊಡ್ಡ ದೊಡ್ಡ ಕನಸು ಕಾಣಿರಿ ಎಂಬ ಕರೆನೀಡಿದ್ದಕ್ಕೇ ಇರಬೇಕು. ನಂಗೆ ರಾತ್ರಿ ನಿದ್ರೆಯಲ್ಲಿ ದೊಡ್ಡದೊಡ್ಡ ಕನಸುಗಳೇ ಬೀಳುವುದು. ಬಿಲ್ ಕ್ಲಿಂಟನ್ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರಲ್ಲಾ? ಆಗ ಅವರು ನಮ್ಮ ಮನೆಗೆ ಬಂದಂತೆ, ನಮ್ಮ ಅಂಗೈಯಗಲದ ತೋಟವೆಲ್ಲ ಸುತ್ತಾಡಿದಂತೆ, ಕೆಳಗಿನ ತೋಟದಲ್ಲಿ ಎಳನೀರು ಕುಡಿದಮೇಲೆ, ಅಲ್ಲಿಂದ ಅತ್ತಲೇ ಕಾಲ್ನಡಿಗೆಯಲ್ಲಿ ಕೊಡಗಿಗೆ ತೆರಳಿದಂತೆ (ನಮ್ಮ ಮನೆಯಿಂದ ಒಂದು ದಿಕ್ಕಿಗೆ ನಡೆದರೆ ಕೊಡಗೂ, ಇನ್ನೊಂದು ದಿಕ್ಕಿಗೆ ನಡೆದರೆ ಕೇರಳವೂ ಸಿಗುತ್ತದೆ) ಕನಸು ಬಿದ್ದಿತ್ತು. ಇನ್ನೊಮ್ಮೆ ವಾಯಪೇಯಿಯವರು ಪ್ರಧಾನಿಯಾಗಿದ್ದಾಗ ಅವರು ನಮ್ಮ ಹಟ್ಟಿಯಲ್ಲಿ ದನಗಳಿಗೆ ಹುಲ್ಲುಹಾಕಿದಂತೆ ಕನಸು. ಹೀಗೆ ಆಗೀಗ ನಾನು ದೊಡ್ಡದೊಡ್ಡ ವ್ಯಕ್ತಿಗಳನ್ನು ಭೇಟಿಯಾಗುತ್ತಿರುತ್ತೇನೆ, ಕನಸಿನಲ್ಲಿ.

ಚುನಾವಣೆ ದಿನಾಂಕ ಘೋಷಣೆಯಾಗುತ್ತಲೆ ಫೋನು ಮಾಡಿದ್ದ ಅಣ್ಣ, "ವೋಟಿಗೆ ಬಾ" ಅಂತ ಗದರುವ ದನಿಯಲ್ಲೇ ಹೇಳಿದ. ನನ್ನ ಪರಮೋಚ್ಚ ಹಕ್ಕಿನ ಚಲಾವಣೆಗೆ ಹೆಚ್ಚಾಗಿ ಹೋಗದಿರುವುದು, ಸದರೀ ಗದರಿಕೆಗೆ ಕಾರಣ. ಸರಿ, ಟ್ರೇನ್ ಟಿಕೆಟ್ ಕೊಡುಸ್ತಿಯಾ ಅಂದರೆ ಅದಕ್ಕೂ ಧನಾತ್ಮಕ ಉತ್ತರವನ್ನೇ ನೀಡಿದ. ಹೇಗಿದ್ದಾರೆ (ಮಾಜಿ)ಶಾಸಕರು, ಮಾತಿಗೆ ಸಿಗುತ್ತಾರಾ ಅಂತ ಕೇಳಿದೆ. ಇದಕ್ಕೇ ಕಾದವನಂತೆ, ಈಗ ಅವರ ಮೊಬೈಲ್ ಆಕ್ಸೆಸೇಬಲ್, ಇಲ್ಲವಾದರೆ ಯಾವಾಗಲೂ ಸ್ವಿಚ್‌ಆಫ್ ಆಗಿರುತ್ತಿತ್ತು ಅನ್ನುತ್ತಾ ನಕ್ಕ. ಆತನೂ ನಮ್ಮ ಎಮ್ಮೆಲ್ಯೆಯೂ ಒಂದು ಕಾಲದಲ್ಲಿ ಜತೆಗಿದ್ದವರು. ಆವರೀಗ ದೊಡ್ಡ ಲೀಡರಾಗಿದ್ದಾರೆ.

ನಾನೂ ಲೀಡರಾಗಿದ್ದವಳೇ.... ಮಾತ್ರ, ನಾಲ್ಕನೆ ಕ್ಲಾಸಿನಲ್ಲಿ ಕಲಿಯುತ್ತಿದ್ದಾಗ. ಮಾತನಾಡಿದವರ ಹೆಸರು ಬರೆಯುವುದು, (ಮಾಸ್ಟರ ಬಳಿ ಚಾಡಿ ಹೇಳುವುದು) ತರಗತಿಯಲ್ಲಿ ಎಲ್ಲರ ಕೋಪಿ ಪುಸ್ತಕ; ಯಾ; ಲೆಕ್ಕ ಪುಸ್ತಕ ಸಂಗ್ರಹಿಸಿ ಮೇಜಿನ ಮೇಲಿಡುವುದು ಮುಂತಾದುವುಗಳೆಲ್ಲ ನಾಯಕ/ಕಿಯರ ಜವಾಬ್ದಾರಿಗಳಾಗಿರುತ್ತಿದ್ದವು. ಮತ್ತೂ ಒಮ್ಮೆ ನಾಯಕಿಯಾಗ ಹೊರಟಿದ್ದೆ. ಇದು ಮಾತ್ರ ಕಾಲೇಜು ಮೆಟ್ಟಿಲೇರಿದ ಮೇಲೆ.

ಶಾನಿಗೆ ಬಿಟ್ಟ ಅಭ್ಯರ್ಥಿ ಯಾರು? ಆಕೆಯೇ ಅಭ್ಯರ್ಥಿ ಎಂಬ ಒಕ್ಕೊರಲ ಅಭಿಪ್ರಾಯವನ್ನು ನಮ್ಮ ಕ್ಲಾಸು ಹೊರಹಾಕಿದ್ದಾಗ, ಉತ್ಸಾಹ ಪುಟಿಯುವ ಆ ವಯಸ್ಸಿನಲ್ಲಿ ಸುಮ್ಮನಿರಲಾಗುತ್ತದಾ? ಅಣ್ಣನ ಕಿಸೆಯಿಂದ ಹಾರಿಸಿದ ನೋಟುಗಳನ್ನು ಒಟ್ಟುಮಾಡಿ ಠೇವಣಿ ಇರಿಸಿ ಸೆನೆಟ್ ಎಲೆಕ್ಷನ್‌ಗೆ ನಾಮಪತ್ರ ಸಲ್ಲಿಸಿಯಾಯಿತು. ಕಾಲೇಜಿನ ಪ್ರತೀ ವಿದ್ಯಾರ್ಥಿಗೂ ಮತಹಾಕುವ ಅವಕಾಶ ಇರುವ ಕಾರಣ, ಮತ್ತು ನಾನೋರ್ವ ಜನಪ್ರಿಯ ವಿದ್ಯಾರ್ಥಿನಿಯಾಗಿದ್ದ ಕಾರಣ ಗೆಲುವು ನನ್ನದೇ ಎಂದು ನನ್ನ ದೋಸ್ತಿಗಳು ಮತ್ತು ಕೆಲವು ಲೆಕ್ಚರರ್ಸ್‌ಗಳೂ ಲೆಕ್ಕಹಾಕಿದ್ದರು.

ನನ್ನ ಎದುರಾಳಿ ಅಭ್ಯರ್ಥಿನಿ ವರಸೆಯಲ್ಲಿ ನಂಗೆ ನೆಂಟತಿಯೇ. ಆಕೆ ಅಂತಿಮ ಬಿ.ಎ. ನಾನು ಅಂತಿಮ ಬಿ.ಕಾಂ. ಕನ್ನಡ ಮೇಜರ್ ವಿದ್ಯಾರ್ಥಿನಿಯಾಗಿದ್ದ ಅವಳಿಗೆ ನೆಟ್ಟಗೆ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಒಂದು ವಾಕ್ಯದಲ್ಲಿ ಕನಿಷ್ಠ ಎರಡಾದರೂ ಮಾತೃ‌ಭಾಷಾ ಪದಗಳು ಮಿಳಿತಗೊಂಡಿರುತ್ತಿದ್ದವು. ಭಾಷಣ ಮಾಡಲು ಬರುತ್ತಿರಲಿಲ್ಲ. ಬರೆದು ತಂದು ಓದುತ್ತಿದ್ದಳು. ಆಕೆ ಯಾವ ಚಟುವಟಿಕೆಯಲ್ಲಿ ಇದ್ದವಳಲ್ಲ. ನಾನಾದರೋ, ಎನ್ಎಸ್ಎಸ್ ನಂದೇ. ಡ್ರಾಮಾದಲ್ಲೂ ನಾನೇ, ಸಾಂಸ್ಕೃತಿಕ ಸಂಘಟನೆಯಲ್ಲೂ ನಾನೇ. ಕಾಲೇಜಿನ ಕಂಬಕಂಬಕ್ಕೂ ಶಾನಿಯಾರೆಂದು ಗೊತ್ತು. ಹೀಗಿರುವಾಗ ಗೆಲುವು ನಮ್ಮದೇ ಎಂಬ ಗ್ಯಾರಂಟಿ.

ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯೊಂದು ಆಕೆಯ ಬೆಂಬಲಕ್ಕಿದೆ ಎಂದು ಗೊತ್ತಿದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ಶಾನಿಯ ಫೇವರ್ ಅಂತ, ನನ್ನ ಗೆಳತಿಯರ ಬಳಗದ ಸಮೀಕ್ಷೆ ಹೇಳಿತ್ತು. ಹಾಗಾಗಿ ನಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿಯೂ ಇದನ್ನು ಪ್ರಸ್ತಾಪಿಸಿ, ಯಾರದ್ದೇ ಬೆಂಬಲದ ಹಂಗಿಲ್ಲದ, ಸ್ವಂತ ಸಾಮರ್ಥ್ಯದ ಮೇಲೆ ಸ್ಫರ್ಧಿಸುತ್ತಿರುವ ಚುರಕಿನ, ಸ್ವತಂತ್ರ, ಅರ್ಹ ಅಭ್ಯರ್ಥಿ ಎಂದೆಲ್ಲ ಹೇಳುತ್ತಾ, ಮೇಜು ಗುದ್ದಿಗುದ್ದಿ, ಆಕೆಯ ಕ್ಲಾಸಿನಿಂದಲೇ ಭಾಷಣ ಆರಂಭಿಸಿದ್ದೆವು.
ಸಿಕ್ಕಸಿಕ್ಕವರ ಬಳಿ ಹಲ್ಲುಕಿರಿಯುತ್ತಾ ಮತಯಾಚನೆ ಮಾಡುವ ಕಾರಣ ನಮಗೆ ಬಾಯ್ಮುಚ್ಚುವುದೇ ಮರೆತುಹೋಗಿತ್ತು. ಚುನಾವಣೆಗೆ ಎರಡು ದಿನವಿರಬೇಕಿದ್ದರೆ ನನ್ನ ಹತ್ತಿರದ ಸಂಬಂಧಿಯೊಬ್ಬ ಕಾಲೇಜಿನ ಹೊರಗೆ ಸಿಕ್ಕಿದ. "ನಂಗೇ ವೋಟ್ ಹಾಕ್ತೀಯಲ್ಲಾ, ನಿನ್ನಬಳಿಯೂ ನಾನು ಕೇಳ್ಬೇಕಾ" ಅಂದೆ. ಬೇರೆಯೇ ಮಾತನ್ನಾಡಿದ ಆತ "ಒಂದು ಮಾತು. ನೀವು ಸೋತರೆ ಬೇಸರ ಮಾಡಬಾರದು" ಅಂದ. ಎಂಥಾ ಮಾತಾಡ್ತೀಯಾ? ನಾನೇ ಗೆಲ್ಲೋದು ಅಂತ ಕಾಲೇಜಿಗೆ ಕಾಲೇಜೇ ಮಾತಾಡ್ತಿದೆ, ನಿಂಗೆಲ್ಲೋ ಭ್ರಾಂತು ಅಂದೆ.

ಚುನಾವಣೆ ದಿನ ಬಂದೇ ಬಿಡ್ತು. (ಶಾಂತಿಯುತ) ಮತದಾನವಾಯ್ತು. ಮತಎಣಿಕೆ ದಿನದಂದು ಮಾತ್ರ ಆತ್ಮವಿಶ್ವಾಸದ ಜಾಗದಲ್ಲಿ ಸ್ವಲ್ಪ ಜ್ವರಬಂದಂತೆ ಭಾಸವಾಗುತ್ತಿತ್ತು. ಎಣಿಕೆ ಆರಂಭವಾಯ್ತು. ಆರಂಭದ 50 ವೋಟುಗಳ ತನಕ ನನ್ನ ಎದುರಾಳಿಯ ಅಕೌಂಟ್ ಓಪನ್ ಆಗಿರಲೇ ಇಲ್ಲ. ಬಳಿಕವೂ ಒಂದು ಹಂತದ ತನಕ ಶಾನಿಯೇ ಮುಂದಿದ್ದಳು. ಕೊನೆಕೊನೆಗೆ ಆಕೆಯ ಮತಗಳ ಸಂಖ್ಯೆ ಹೆಚ್ಚುತ್ತಿತ್ತು. ಒಮ್ಮೆ ಹಿನ್ನಡೆ, ಮತ್ತೊಮ್ಮೆ ಮುನ್ನಡೆ ಹೀಗೆ ಸಾಗಿತು. ಅಂತಿಮವಾಗಿ ಶಾನಿ 40 ವೋಟಿಗೆ ಸೋತಳು! ಸೋಲಿನ ಬಗ್ಗೆ ತಪ್ಪಿಯೂ ಆಲೋಚಿಸಿಯೇ ಇರದಿದ್ದ ನಾನು ಸೋತಾಗ ಹೇಗಾಗಬೇಕು? ಇಂಗು ತಿಂದ ಮಂಗಿಯಂತಾಗಿದ್ದ ನನಗೆ ಆಕೆಯನ್ನು ಅಭಿನಂದಿಸಬೇಕು ಎಂದೂ ಹೊಳೆಯಲಿಲ್ಲ. ಪ್ರಿನ್ಸಿಪಾಲರು ಹೇಳಿದಾದ ಎಚ್ಚರಗೊಂಡವಳಂತೆ ಶೇಕ್‌ಹ್ಯಾಂಡ್ ಮಾಡಿ, ನನಗಾಗಿ ನನ್ನ ಬಳಗ ತಂದಿದ್ದ ಹೂವಿನ ಹಾರವನ್ನು ಆಕೆಗೆ ಹಾಕಿ, ರಾಕೆಟ್‌ನಂತೆ ಸ್ನೇಹಿತೆ ಶಾಂತಿಯೊಂದಿಗೆ ಕಾಲೇಜು ಆವರಣದಿಂದ ಹೊರಬಿದ್ದೆ.

ನನ್ನ ಅಹಂಕಾರಕ್ಕೆ ಎಷ್ಟು ದೊಡ್ಡ ಏಟು ಬಿದ್ದಿತ್ತೆಂದರೆ ಅಲ್ಲಿಂದ ಬಸ್ ನಿಲ್ದಾಣಕ್ಕೆ ತೆರಳಲೂ ಅವಮಾನವಾದಂತಾಗುತ್ತಿತ್ತು. ಕಂಡವರೆಲ್ಲ ನನ್ನನ್ನೇ ನೋಡುತ್ತಿದ್ದಾರೆ, ಸೋತವಳೆಂದು ಹೀಯಾಳಿಸುತ್ತಾರೆ, ನಾನು ಸೋತೆ, ನಾನು ಸೋತೆ ಎಂಬುದೇ ತಲೆಯೊಳಗೆ ಗಿರಿಗಿಟ್ಲೆ ಹೊಡೆಯುತ್ತಿತ್ತು. ಹೇಗೋ ಅಂದು ಮನೆ ಸೇರಿದವಳು ಒಂದು ವಾರ ಮನೆಯಿಂದ ಹೊರಡಲೇ ಇಲ್ಲ. ಈಗ ನಗು ಬರುತ್ತದೆ.

ಒಂದು ವಾರ ನನ್ನ ಪತ್ತೆ ಇಲ್ಲದ್ದು ಕಂಡ ನಮ್ಮ ಅಕೌಂಟೆನ್ಸಿ ಸರ್ ಫೋನ್ ಮಾಡಿ, ಬಾಯ್ಮುಚ್ಚಿ ಕಾಲೇಜಿಗೆ ಬಾ ಅಂದರು. ಸ್ಫರ್ಧೆ ಅಂದರೆ ಸೋಲು, ಗೆಲುವು ಸಹಜ. ಇಷ್ಟಕ್ಕೂ ನೀನು ಸೋತಿದ್ದು ಬರಿಯ ನಲ್ವತ್ತು ವೋಟಿಗೆ. ಯಾವುದೇ ಹಂಗಿಲ್ಲದೆ ಅಷ್ಟು ವೋಟ್ ಪಡೆದದ್ದು ಗ್ರೇಟ್ ಅಂದಾಗ ನನ್ನ ಅವಮಾನ ಇಳಿಮುಖವಾಯಿತು.

ಸೋಮವಾರ, ಏಪ್ರಿಲ್ 14

ಸೊಳ್ಳೆಯ ಬಂಧ

ಸೊಳ್ಳೆಗಳು ಮತ್ತು ನನ್ನದು ಒಂಥರಾ ಬಿಡಿಸಲಾರದ(ಓಡಿಸಲಾರದ) ಸಂಬಂಧ. ಸೊಳ್ಳೆಯ (ಸು)ಸಂಸ್ಕೃತ ಹೆಸರು ಮಶಕ ಎಂದಂತೆ. ಅದಕ್ಕೇ ಇರಬೇಕು ಈ ಮಶಕಗಳು ಧಾಂಗುಡಿ ಇಡುವ ಪರಿಗೆ ಕೆಲವೊಮ್ಮೆ ಮಸ್ತಕವೇ ಬ್ಲಾಂಕ್ ಆಗಿಬಿಡುತ್ತೆ.

ನಾನು ವಿದ್ಯಾರ್ಥಿನಿಯಾಗಿದ್ದ ಹಂತದಲ್ಲೂ, ಆ ಬಳಿಕ ದುಡಿಯುವ ಮಹಿಳೆಯಾಗಿ ಪರಿವರ್ತನೆಗೊಂಡ ಬಳಿಕವೂ, ಎಲ್ಲೇ ಹೋದರೂ ನಂಗೆ ಊಟ ಮತ್ತಿತರ ಸೌಲಭ್ಯಗಳಿಗೆ ಒಂದಿಷ್ಚು ಕೊರತೆಯಾದರೂ, ಸೊಳ್ಳೆಗಳಿಗೆ ಮಾತ್ರಬರವೆಂಬುದು ಬಂದುದೇ ಇಲ್ಲ. ಈಗ ಇರುವಲ್ಲೂ ಸಹ. ಹಾಗಂತ, ಇವುಗಳಿಂದ ಇತರರು ಅನುಭವಿಷ್ಟು ಹಿಂಸೆ ನಾನು ಅನುಭವಿಸಿದ್ದೇನೆ ಎಂದೇನಾದರೂ ಹೇಳಿದರೆ ಸೊಳ್ಳೆಗೆ ಅನ್ಯಾಯವಾದೀತು. ಅವೇನಿದ್ದರೂ, ನನ್ನ ಸುತ್ತಮುತ್ತ ಡಂಯೀ... ಡುಂಯೀ.. ಎಂಬ ಹಾಡು ಹಾಡುತ್ತಾ, ಹಾರಾಡುತ್ತವೆಯೇ ವಿನಹ ಅಂಥ ಪರಿ ಕಚ್ಚುವುದಿಲ್ಲ. ಫ್ಯಾನಿಲ್ಲದೆ, ಸೊಳ್ಳೆ ಪರದೆ ಇಲ್ಲದೆ, ಕಾಯಿಲಿಲ್ಲದೆ, ಮ್ಯಾಟಿಲ್ಲದೆ, ಗುಡ್ ನೈಟೂ ಇಲ್ಲದೆ ಸೊಳ್ಳೆಗಳ ಸಂಗೀತ ಮಾತ್ರ ಕೇಳಿ ನಿದ್ರಿಸುತ್ತೇನೆ ನಾನು. ಇತರರೆಲ್ಲ ನನ್ನ ಈ ಸಿದ್ಧಿಗೆ ಬೆರಗಾಗಿ ಹೋಗುತ್ತಾರೆ. ಒಂದೊಮ್ಮೆ ಒಂದೆರಡು ಕಡಿದರೂ ಮರುದಿನ ಅದರ ಕುರುಹೇನೂ ಇರುವುದಿಲ್ಲ.

ಸೊಳ್ಳೆ ಕಡಿತವಾದರೂ ಸಹಿಸಿಕೊಳ್ಳಬಹುದು. ಅದರೆ ಅದು ಹಾರಾಡುತ್ತಾ ಹೊರಡಿಸುವ ಸಂಗೀತ ಯಾರಿಗಾದೀತು. ಅವುಗಳು ಕಿವಿಬಳಿಬಂದು ಅದೇನು ಹೇಳುತ್ತವೆ ಎಂಬುದು ನನ್ನ ಕುತೂಹಲ. ಮೂರ್ನಾಲ್ಕು ಭಾಷೆಗಳನ್ನು ಅರ್ಧಂಬರ್ಧ ಕಲಿತಿರುವ ನಾನು ಸೊಳ್ಳೆ ಭಾಷೆಯನ್ನೂ ಕಲಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮತ್ತು ಪ್ರಾಮಾಣಿಕವಾಗಿ ಸೋತಿದ್ದೇನೆ. ಹಾಗಾಗಿ ಅವುಗಳು ಬಹುಶಃ "ನಿನ್ನ ರಕ್ತ ಇಷ್ಟ್ಯಾಕೆ ಕಹಿ ಅಂತ ಕೇಳ್ತಿರಬಹುದು" ಅಂತ ಅಂದುಕೊಂಡಿದ್ದೇನೆ.

ತಾಳ್ಮೆ ಮತ್ತು ನಾನು ಪರಸ್ಪರ ವಿರೋಧಾಭಾಸಗಳೇ.ಒಂದು ಸರ್ತಿ, ಎರಡು ಸರ್ತಿ, ಹೆಚ್ಚೆಂದರೆ ಮೂರು ಸರ್ತಿ. ಈ ಸೊಳ್ಳೆಗಳು ಡುಂಯ್‌ಡುಂಯ್ ಅನ್ನುತ್ತಾ ಕಿವಿ ಬಳಿ ಸುಳಿದಾಡುವಾಗ ಒಂಥರಾ ಕಿರಿಕಿರಿ. ಈ ಕಿರಿಕಿರಿ ಸ್ವಲ್ಪಹೊತ್ತಲ್ಲೇ ಮೈಯಿಡೀ ವ್ಯಾಪಿಸಿಕೊಂಡು ಉರಿಉರಿ ಅನ್ನತೊಡಗುತ್ತದೆ. ತಾಳ್ಮೆ ತಪ್ಪಿದರೆ, ಅದು ನನ್ನ ಹತ್ತಿರದವರಿರಲಿ, ದೂರದವರಿರಲಿ, ಗೆಳತಿಯರಿರಲಿ, ಉದ್ಯೋಗದಾತರಿರಲಿ, ಅಷ್ಟೆಲ್ಲ ಏಕೆ, ಇಂದಿಗೂ ನನ್ನನ್ನು ಕೂಸು... ಕೂಸು ಅನ್ನುತ್ತಾ ಜೋಪಾನ ಮಾಡುವ ಅಮ್ಮನೆ ಆಗಲಿ, ಯಾರೆಂದು ನೋಡದೆ, ನನ್ನೊಳಗಿನ ಕಿರಿಕಿರಿಯನ್ನು ಹೊರಗೆಡಹಿ ಬಿಡುತ್ತೇನೆ. ಇದರಿಂದ ಎಷ್ಟೋ ಅನಾಹುತಗಳು ಆಗಿವೆ. ಸ್ನೇಹಿತರು ವೈರಿಗಳಾಗಿದ್ದಾರೆ. ಹತ್ತಿರದವರು ದೂರಹೋಗಿದ್ದಾರೆ. ಕೆಲಸ ಕಳ್ಕೊಂಡಿದ್ದೇನೆ. ಅಹಂಕಾರಿ ಅನ್ನಿಸಿಕೊಂಡಿದ್ದೇನೆ. ಅದು ಹೌದೆಂದು ಗೋಚರವಾದರೂ, ಒಪ್ಪಿಕೊಳ್ಳಲು ಅಹಂಕಾರ ಅಡ್ಡಬರುವುದಿಲ್ಲವೇ... ಹಾಗಾಗಿ ಅದು ಅಹಂಕಾರವಲ್ಲ, ಅಲಂಕಾರ ಅಂತ ಸಮಾಧಾನಿಸಿಕೊಳ್ಳುತ್ತೇನೆ. ಹುಟ್ಟುಗುಣ ಹೋಗುತ್ತಾ...?

ಹೀಗಿರುವಾಗ ನಾನು ಈ ಯಕಶ್ಚಿತ್ ಸೊಳ್ಳೆಯ ಬಳಿ ತಾಳ್ಮೆಯಿಂದ ವರ್ತಿಸಲಾಗುತ್ತಾ? ಅದ್ಕೇ, ಅದೊಂದು ಸರ್ತಿ ನನ್ನ ಬಲಗಿವಿಯ ಬಳಿ ಓಡಿಸಿದಷ್ಟೂ, ಮತ್ತೆಮತ್ತೆ ವಕ್ಕರಿಸಿ ಕರ್ಣಕಠೋರ ಸಂಗೀತ ಹಾಡುತ್ತಿದ್ದ ಸೊಳ್ಳೆಯೊಂದಕ್ಕೆ ಕಲಿಸಬೇಕೆಂದು, ಎಷ್ಟು ಸಾಧ್ಯವೋ ಅಷ್ಟು ಶಕ್ತಿಹಾಕಿ, ಬಲವಾಗಿ ಅಪ್ಪಳಿಸಿದೆ. ಸೊಳ್ಳೆ ಸತ್ತಿತೋ, ಓಡಿತೋ ಯಾರಿಗೆ ಗೊತ್ತು. ಆದರೆ, ಆ ಬಲವಾದ ಏಟು ಆಯಕಟ್ಟಿನ ಜಾಗಕ್ಕೆ ಬಿದ್ದು ಶ್ರವಣ ಸಮಸ್ಯೆಯುಂಟಾಯಿತು. ಬಲಗಿವಿಯ ಕತೆ ಹೀಗಾದರೆ; ಎಡಗಿವಿಯ ಕತೆ ಬೇರೆಯೇ ಇದೆ. ಚಿಕ್ಕಂದಿನಲ್ಲಿ ಲಾಗಹಾಕುವ ವೇಳೆ ಬಿದ್ದು ಎಡ ಕಿವಿ ಮೊದಲೇ ಸಮಸ್ಯೆಯಲ್ಲಿತ್ತು. ಇದೀಗ ಎರಡೂ ಕಿವಿಯ ಶ್ರವಣ ಶಕ್ತಿ ಒಂದೇ ನಮೂನೆಯಾಗಿ ಹೋಗಿದೆ. ಹಾಗಾಗಿ ಈ ಸೊಳ್ಳೆಯ ದೆಸೆಯಿಂದಾಗಿ ಮೊದಲೇ ಕುರುಡುತನ ಅನುಭವಿಸುತ್ತಿದ್ದ ನನ್ನೊಂದಿಗೆ ಕಿವುಡುತನವೂ ಸೇರಿಕೊಂಡಿದೆ. ಹಾಗಂತ ನಂಗೇನು ಚಿಂತೆ ಇಲ್ಲ. ಇದರಿಂದ ನಂಗೆ ಅನುಕೂಲವೇ ಆಗಿದೆ. ಬೇಕಿರುವುದನ್ನು ಮಾತ್ರ ಕೇಳಿಸಿಕೊಂಡು, ಬೇಡದಿರುವುದನ್ನು ಕೇಳದಂತೆ ನಟಿಸುತ್ತೇನೆ. (ಹೆಚ್ಚಾಗಿ ಬಾಸ್ ಬಯ್ಯುವ ವೇಳೆ). ಸ್ನೇಹಿತೆಯ ಬಳಿ ಕೈಸಾಲವೇನಾದರೂ ಪಡೆದರೆ, ಫೋನ್ ಮೂಲಕ ಅವಳಾಚೆಯಿಂದ, ದುಡ್ಯಾವಾಗ ಹಿಂತಿರುಗಿಸುತ್ಯಾ... ಅಂತ ಕೇಳಿದರೆ, ಎಂಥಾ.... ಎಂಥಾ ಅನ್ನುತ್ತಾ ಅವಳಿಗೇ ದಾಕ್ಷಿಣ್ಯವಾಗಿ ವಿಷಯ ಮಾಚುವಂತೆ ನೋಡಿಕೊಳ್ಳುತ್ತೇನೆ.

ಆದರೆ ಇದನ್ನೇ ನೆಪವಾಗಿಟ್ಟು ಸರ್ಕಾರಿ ಕೆಲಸ ಗಿಟ್ಟಿಸಿ ದೂರುಗಳ ವಿಭಾಗಕ್ಕೇನಾದರೂ ಸೇರೋಣವೆಂದರೆ, ಅತ್ತ ಅಂಗವಿಕಲ ಕೋಟಾದಡಿಗೂ ಬರುವುದಿಲ್ಲ. ಏಕೆಂದರೆ ಈಚೆ ಪೂರ್ತಿ ಕುರುಡಿಯೂ ಅಲ್ಲ; ಆಚೆ ಪೂರ್ತಿ ಕೆಪ್ಪಿಯೂ ಅಲ್ಲವಲ್ಲ!

ಊಟ-ತಿಂಡಿ, ನಿದ್ರೆಯ ವಿಚಾರದಲ್ಲಿ ಅಂತಾ ಶಿಸ್ತಿನವಳಲ್ಲದ ನಂಗೆ ಅದೊಮ್ಮೆ ಮಧ್ಯರಾತ್ರಿ ಪೂರಿ ಮಾಡಬೇಕೆಂಬ ತುಡಿತ ಉಂಟಾಗಿತ್ತು. ಕಾರಣ ಮತ್ತೇನಿಲ್ಲ, ಹೊಟ್ಟೆಹಸಿವು. ಈ ಹಸಿವು ನನ್ನನ್ನು ಬೆಡ್‌ರೂಮಿನಿಂದ ಕಿಚನ್‌ಗೆ ತಂದು ನಿಲ್ಲಿಸಿತ್ತು. ಕಿಚನ್ನಲ್ಲಿ ಲೈಟ್ ಕಂಡದ್ದೇ, ಅಲ್ಲಿಗೆ ಬಂದ ಸೊಳ್ಳೆಗಳು, ನಾನು ಪೂರಿ ಲಟ್ಟಿಸುತ್ತಿರಬೇಕಿದ್ದರೆ ಸುತ್ತುಮುತ್ತು ಹಾರ(ಡ)ಲಾರಂಭಿಸಿದವು. ಕೈಯಲ್ಲಿ ಲಟ್ಟಣಿಗೆ ಇತ್ತಾದರೂ ಇದರಲ್ಲಿ ಸೊಳ್ಳಗೆ ಹೊಡೆದರೆ, ಸೊಳ್ಳೆಗಿಂತ ನಂಗೇ ಡೇಂಜರೆಂದು, ಬೇಕಾದ್ದು ಮಾಡಿಕೊಳ್ಳಲಿ ಅಂತ ನನ್ನಪಾಡಿಗೆ ನಾನಿದ್ದೆ. ಅಷ್ಟರಲ್ಲಿ ಸೊಳ್ಳೆಯೊಂದು ಹಾರುಹಾರುತ್ತಲೆ ಒಲೆ ಮೇಲೆ ಎಣ್ಣೆ ಮಳಲುತ್ತಿದ್ದ ಬಣಲೆಯೊಳಗೆ ಬಿತ್ತು. ಪೂರಿಯೊಂದು ಅದೇ ಎಣ್ಣೆಯಲ್ಲಿ ಕಾಯುತ್ತಿತ್ತು. ಯಾವುದನ್ನು ಬಿಸಾಕಲೀ.... ಎಣ್ಣೆಯನ್ನೋ? ಪೂರಿಯನ್ನೋ? ಬಿದ್ದು ಮರಗಟ್ಟಿದ ಸೊಳ್ಳೆಯನ್ನೋ....? ಹೊಟ್ಟೆಯೊಳಗಿನ ಹಸಿವು ಮತ್ತೊಮ್ಮೆ ಕುದಿಯಿತು. ಸೊಳ್ಳೆಯನ್ನು ತೆಗೆದೆಸೆದು, ಉಬ್ಬಿದ ಪೂರಿಯನ್ನು ಎಣ್ಣೆಯಿಂದ ತೆಗೆದು ಅದೇ ಎಣ್ಣೆಯಲ್ಲಿ ಇನ್ನೊಂದು ಪೂರಿ ಬಿಟ್ಟೆ...!!!

ಶುಕ್ರವಾರ, ಏಪ್ರಿಲ್ 11

ಕಂಕುಳಡಿಯಲಿ ಇಟ್ಟು ನಡೆದಳು...

ಗಜಮೂಖದವಗೇ..... ಗಣಪಗೇ.... ಶುರುವಾದರೂ ಅವ್ವನ ಹೊರಡಾಟ ಮುಗಿಯುತ್ತಿರಲೇ ಇಲ್ಲ। ಜಯಂತ್ಯಕ್ಕ ಬೆಳಿಗ್ಗೆಯಿಂದಲೇ ಗಿಡದಿಂದ ಕೊಯ್ದು ಕಟ್ಟಿದ ಅಬ್ಬಲ್ಲಿಗೆ(ಕನಕಾಂಬರ) ಹೂವಿನ ಮಾಲೆಯನ್ನು ಒಂದಿನಿತು ಹೆಚ್ಚು ಕಮ್ಮಿಯಾಗದಂತೆ ಹೊರಟು ರೆಡಿಯಾಗುತ್ತಿರುವ ಎಲ್ಲಾ ಹೆಣ್ಣು ತಲೆಗಳಿಗೂ ಸಮನಾಗಿ ಹಂಚುತ್ತಿದ್ದರೆ, ಗಾಯತ್ರಕ್ಕ ಇದ್ದುದರಲ್ಲಿ ಒಳ್ಳೆಯ ಚಾಪೆಯ ಆಯ್ಕೆ ಮಾಡುತ್ತಿದ್ದಳು. ದೊಡ್ಡಕ್ಕನಿಗೆ ನಮ್ಮ ವೇಷ - ಭೂಷಣಗಳ ಮೇಲ್ವಿಚಾರಣೆ....


ಇದು ನಮ್ಮೂರಲ್ಲಿ ಯಾವುದಾದರೂ ಮೇಳದವರು ವರ್ಷಕ್ಕೊಮ್ಮೆ ಹಾಕ್ಕೊಳ್ಳುತ್ತಿದ್ದ ಯಕ್ಷಗಾನ ಕಾರ್ಯಕ್ರಮದಂದು ನಮ್ಮ ಮನೆಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮ। ವರ್ಷಕ್ಕೊಂದಾವರ್ತಿಯ ನಮ್ಮೂರ ಏಕೈಕ ಮನರಂಜನೆಯಾದ ಯಕ್ಷಗಾನ ಇದೆ ಎಂದರೆ ನಮ್ಮಪ್ಪನ ಮುಖದಲ್ಲಿ ಕೋಪ ದಿಗಿಣಗುಟ್ಟುತ್ತಿತ್ತು. ನಾಟಕ, ಯಕ್ಷಗಾನ ಮುಂತಾದುವುಗಳಲ್ಲಿ ಆಸಕ್ತಿಯೇ ಇಲ್ಲದ ಅವರಿಗೆ "ಇವರೆಲ್ಲ(ಯಕ್ಷಗಾನದವರು) ಜನರೆಲ್ಲ ಮರುಳು ಮಾಡಲು ಬರುವವರು" ಎಂಬ ತಾತ್ಸಾರ. ಯಕ್ಷಗಾನವಿದ್ದರೆ ನಾವೆಲ್ಲ ಕಾಲಿಗೆ ಗೆಜ್ಜೆಕಟ್ಟಿಯೇ ಸಿದ್ಧ ಎಂದು ಗೊತ್ತಿರುವ ಅವರು, ಬೆಳಗ್ಗಿನಿಂದಲೇ ವಿನಾಕಾರಣ ಸಿಡಿಮಿಡಿಗುಟ್ಟಲಾರಂಭಿಸುತ್ತಾರೆ. ಅತ್ತ ಗಂಡನ ಕೋಪ, ಇತ್ತ ಮಕ್ಕಳ ಹಠದ ನಡುನೆ ಸಿಲುಕಿದ ಅವ್ವ, ಹೆದರಿಹೆದರಿ ಬೆದರಿ, ಅಪ್ಪನ ಬಳಿ, ಮಕ್ಕಳು ಆಟಕ್ಕೋಗಬೇಕೆನ್ನುತ್ತಾರೆ (ಯಕ್ಷಗಾನಕ್ಕೆ ಆಟ ಅನ್ನುವುದು ರೂಢಿ) ಎನ್ನುತ್ತಾ ಪರ್ಮಿಶನ್ ಕೇಳುತ್ತಾರೆ. ಇದಕ್ಕೆಂದೇ ಕಾಯುತ್ತಿದ್ದ ಅಪ್ಪ, ತನ್ನ ಉದ್ದ ಮೂಗನ್ನು ಇನ್ನಷ್ಟು ನೇತಾಡಿಸಿ, ನಮಗೂ, ಯಕ್ಷಗಾನ ಮೇಳಕ್ಕೂ ಇನ್ನಿಲ್ಲದಂತೆ ಚೆನ್ನಾಗಿ ಬಯ್ದು, ಹೋಗಿ ಸಾಯಿರಿ ಅನ್ನುತ್ತಾ ದುಡ್ಡು ಕೊಡದೆ ಪರ್ಮಿಶನ್ ಕೊಡುತ್ತಾರೆ. ನಾವಾದರೋ, ಗೇರುಬೀಜ, ಬಿದ್ದಆಡಿಕೆ, ಅಂಟುವಾಳಕಾಯಿ ಮುಂತಾದುವುಗಳನ್ನು ಸಂಗ್ರಹಿಸಿ ಮಾರಿದ ದುಡ್ಡನ್ನು ಒಟ್ಟುಗೂಡಿಸಿ ಯಕ್ಷಗಾನ ನೋಡಲು ಹೊರಟೇ ಹೊರಡುತ್ತೇವೆ.


ಬೆಳಿಗ್ಗೆಯೇ ಯಕ್ಷಗಾನದ ಪೀಠೋಪಕರಣ, ದಿರಿಸು, ಸಾಮಾನು-ಸರಾಂಜಾಮು ಹೇರಿಕೊಂಡು ಬರುವ ಲಾರಿ ಮೈಕ್ ಕಟ್ಟಿಕೊಂಡೇ ಬರುತ್ತದೆ। ಆ ಶಬ್ದ ಕೇಳಿದ ತಕ್ಷಣ ಊರಿಗೆ ಊರೇ ಪುಳಕಗೊಳ್ಳುತ್ತಿತ್ತು. ಯಾವಾಗೊಮ್ಮೆ ರಾತ್ರಿಯಾಗಲಿಲ್ಲ ಎಂಬ ಕಾತರ ನನ್ನಂತೂ ಕಾಡುತ್ತಿತ್ತು. ಮೂರುಗಂಟೆಗೆ ಬಿಸಿನೀರಿಗೆ(ನೀರೊಲೆಗೆ) ಬೆಂಕಿಹಾಕುವಲ್ಲಿಂದ ಯಕ್ಷಗಾನಕ್ಕೆ ಹೊರಡಲಾರಂಭ. (ನಮ್ಮ ಹಳ್ಳಿಗಳಲ್ಲೆಲ್ಲ ಸಂಜೆವೇಳೆ ಸ್ನಾನ) ದೊಡ್ಡಕ್ಕ ಅಡಗಿಸಿಡುತ್ತಿದ್ದ ಚಂದ್ರಿಕಾ ಸೋಪನ್ನು ಕದ್ದು, ಎರಡೆರಡು ಬಾರಿ ತಿಕ್ಕಿ ಸ್ನಾನಮಾಡಿ ಹೊರಡುವುದೆಂದರೆ ಖುಷಿಯೋ ಖುಷಿ. ಸಾಯಂಕಾಲವಾಗುತ್ತಲೇ ಮೈಕ್ ಜೋರುಜೋರಾಗುತ್ತದೆ. ಅಂದು ಅಡುಗೆ, ಊಟ ಎಲ್ಲ ಬೇಗಬೇಗ. ಏಳುಗಂಟೆಯ ವೇಳೆಗೆ ಕೇಳಿ ಹೊಡೆಯಲು ಆರಂಭಿಸಿ ಚೆಂಡೆಗೆ ಪೆಟ್ಟು ಬಿತ್ತೆಂದರೆ ನನ್ನ ಕಾಲು ನೆಲದಮೇಲೆ ನಿಲ್ಲುತ್ತಿರಲಿಲ್ಲ.


ಈ ಅವ್ವಂದು ಎಷ್ಟು ಹೊರಟರೂ ಮುಗಿಯುತ್ತಿರಲಿಲ್ಲ। ಅಪರೂಪಕ್ಕೆ ಮನೆಯಿಂದ ಹೊರಡುವ ಅವರಿಗೆ ತಲೆ ಬಾಚಿದಷ್ಟೂ ಸಮಾಧಾನವಿಲ್ಲ. ತಲೆಕಟ್ಟಕ್ಕೆ ಹೇಗೇಗೆ ಹುದುರಿ ಹಾಕಿದರೂ, ಮುಳ್ಳು ಚುಚ್ಚಿದರೂ ಅದು ಸೊಟ್ಟವೇ ಆಗುತ್ತದೆ ಎಂಬುದು ಅವರ ಅನಿಸಿಕೆ. ಈ ಮಧ್ಯೆ ನಾಯಿ ಅನ್ನತಿನ್ನದಿದ್ದರೆ, ಬೆಕ್ಕು ಬರದೇ ಇದ್ದರೆ, ರಾತ್ರಿಯ ಊಟದ ಬಳಿಕ ಉಳಿಯುವ ಸಾರು ಪದಾರ್ಥಗಳನ್ನು ಚೆನ್ನಾಗಿ ಕುದಿಸದೇ ಇದ್ದರೆ ಅವರ ತಲೆಬಿಸಿಯೇ ಬೇರೆ. ಮುಖಕ್ಕೆ ಢಾಳಾಗಿ ಮೆತ್ತುವ ಕುಟ್ಟಿಕೂರ ಪೌಡರನ್ನು ಬಟ್ಟೆಯಲ್ಲಿ ತಿಕ್ಕಿತಿಕ್ಕಿ ಮುಖ ನೋಯಿಸಿಕೊಳ್ಳುತ್ತಿದ್ದರು ಪಾಪ. (ಇಲ್ಲವಾದರೆ ದೊಡ್ಡಕ್ಕ ಇದೆಂತದು, ಬೂದಿ ಮೆತ್ತಿದಾಂಗೆ ಅಂತ ಬಯ್ತಾಳಲ್ಲ)


ಚೆಂಡೆಸದ್ದು ಕೇಳಿದ ತಕ್ಷಣ ಯಕ್ಷಗಾನ ಆರಂಭವಾಗೇ ಹೋಯಿತೆನ್ನುವ ನನಗೆ ಅವರ ಮೇಲೆ ಕೆಟ್ಟ ಸಿಟ್ಟು ಬರುತ್ತಿತ್ತು॥ ಕೇಳಿಹೊಡೆದಾಗಿ, ಗಜಮೂಖದವಗೇ...... ಆಗಿ, ಚಿಕ್ಕಪ್ರಾಯದ ಬಾಲೆ.... ಶುರುವಾದರೂ ಹೊರಟಾಗುತ್ತಿರಲಿಲ್ಲ। ಮನೆಯ ಸಮೀಪವೇ ಇರುವ ಶಾಲೆಯ ಮೈದಾನದಲ್ಲೇ ಆಟ. ಗಾಯತ್ರಕ್ಕನೂ ಅವ್ವನ ಮೇಲೆ ಸಿಡಿಮಿಡಿಗುಟ್ಟುತ್ತಿದ್ದಳು. ಯಾಕೆಂದರೆ ನಮ್ಮ ಬಜೆಟ್ಟಿಗೆ ನಿಲುಕುವುದು ಎರಡು ರೂಪಾಯಿ ಟಿಕೆಟ್ಟು. ಈ ಟಿಕೆಟಿಗೆ ಯಾವುದೇ ಆಸನಗಳಿಲ್ಲ. ನೆಲದ ಮೇಲೇ ಕುಳಿತುಕೊಳ್ಳಬೇಕು. ರಾತ್ರಿಯಿಡೀ ಬರಿಯ ನೆಲದ ಮೇಲೆ ಕುಳಿತು (ಮಲಗಿ) ಆಟ ನೋಡುವಾಗ ಕಲ್ಲೊತ್ತುತ್ತದೆಯೆಂದು ಚಾಪೆ ಒಯ್ಯುತ್ತಿದ್ದೆವು. ಅದನ್ನು ಹಾಸಿ ಕುಳಿತುಕೊಳ್ಳಲು, ತಡವಾದರೆ ಆಯಕಟ್ಟಿನ ಜಾಗ ದೊರೆಯದು ಎಂಬುದು ಅವಳ ಕಳವಳ.


"ಚಿಕ್ಕ ಪ್ರಾಯದ ಬಾಲೆ ಚದುರೇ......" ಅಂತ ಭಾಗವತರು ಶುರುವಿಟ್ಟುದು ಮೈಕ್‌ನಲ್ಲಿ ಕೇಳಿದ ತಕ್ಷಣ, ಚಿಕ್ಕ ಪ್ರಾಯದ ಬಾಲೆಯಾದ ನನ್ನ ಮೇಲೆಯೇ ನನಗೆ ಕೋಪವುಕ್ಕುತ್ತಿತ್ತು। ಸ್ವಲ್ಪ ದೊಡ್ಡ ಪ್ರಾಯದ ಬಾಲಕ ನಾನಾಗುತ್ತಿದ್ದರೆ, ಇವರ್ಯಾರ ಹಂಗಿಲ್ಲದೇ ನನ್ನಷ್ಟಕೇ ನಾನು ಆಟ ನೋಡಲು ಹೋಗುತ್ತಿದ್ದೆ. ಛೇ.... ಅವ್ವ ಒಂದು, ಹೀಗೆ ಸಿಟ್ಟು ಮಾಡಿಕೊಂಡು ಅತ್ತು, ಜಗಳವಾಡಿ, ಹಾಗೂಹೀಗೂ ಕೊನೆಯ ಬಾರಿಗೊಮ್ಮೆ ಸೀರೆಯ ನೆರಿಗೆಯನ್ನು ಬಗ್ಗಿ ನೋಡಿ, 'ಹುಂ ಹೊರಡುವಾ' ಅಂತ ಸೂಟೆಗೆ ಬೆಂಕಿ ಇಕ್ಕುವಾಗ ಆತುರ, ಕಾತುರ, ನಿರಾಶೆ, ಕೋಪ, ದುಃಖದಿಂದ ಹೈರಾಣಾಗಿರುತ್ತಿದ್ದೆ.


ಆದರೂ, ಅವ್ವ ನಮಗೆಲ್ಲ ದಾರಿ ಕಾಣಲಿ ಎಂಬುದಾಗಿ ಹಿಡಿಯುತ್ತಿದ್ದ ಮಡಲಿನ ಸೂಟೆ(ತೆಂಗಿನ ಗರಿಯದೊಂದಿ)ಯ ಬೆಳಕಿನಲ್ಲಿ, ಪೆಟ್ಟಿಗೆಯೊಳಗಿಡುವ ಕರ್ಪೂರದ ಘಮಬೀರುವ ಅಂಗಿಯ ನೆರಿಗೆಯಾಡಿಸಿಕೊಂಡು, ನನ್ನ ಮುಂದಕ್ಕೆ, ಒಮ್ಮೊಮ್ಮೆ ಉದ್ದವಾಗಿ, ಗಿಡ್ಡವಾಗಿ ನನ್ನೊಂದಿಗೆ ಸ್ಫರ್ಧಿಸುತ್ತಿದ್ದ, ನನ್ನದೇ ನೆರಳನ್ನು ಓಡಿಸುವಂತೆ ನಡೆಯುತ್ತಿದ್ದೆ। ಗಾಯತ್ರಕ್ಕ ಕಂಕುಳಡಿಯಲ್ಲಿ ಚಾಪೆ ಇರಿಸಿಕೊಂಡು ಯಾವಾಗ ಜಾಗ ಸೆಲೆಕ್ಟ್ ಮಾಡಿ ಇದನ್ನು ಹಾಸಿಯೇನೂ ಎಂಬ ಧಾವಂತದಲ್ಲಿ ನಡೆಯುತ್ತಿದ್ದಳು. ಅವಳು ಚಾಪೆ ಹಿಡಿದು ನಡೆವ ಆ ಭಂಗಿ ನೆನಪಿಸಿಕೊಂಡರೆ, ಈಗ ನನಗೆ ಕೈಲಿ ಜಾಗಟೆ ಹಿಡಿದು ಭಾಗವತಿಯಾಗಿ "ಕಂಕುಳಡಿಯಲಿ ಇಟ್ಟು ನಡೆದಳು ಸುರುಳಿ ಸುತ್ತಿದ ಒಲಿಯ ಚ್ಹಾಪೆಯ್ಹಾ....." ಎಂಬುದಾಗಿ ಹಾಡಬೇಕೆಂದು ಟೆಮ್ಟ್ ಆಗುತ್ತದೆ. ಸಾಧು ಸ್ವಭಾವದ ಜಯಂತ್ಯಕ್ಕ, ಅವಸರದಲ್ಲಿ ಓಡುವ ನನ್ನ ಕೈ ಹಿಡಿದುಕೊಳ್ಳಲು ಬರುತ್ತಿದ್ದಳು. ದೊಡ್ಡಕ್ಕ ಮಾತ್ರ ನಮ್ಮೆಲ್ಲರ ಮೇಸ್ತ್ರಿಯಂತೆ, ಘನಗಾಂಭೀರ್ಯದಲ್ಲಿ, ಕೈಯಲ್ಲಿ ಪರ್ಸು ಹಿಡಿದು ಹದಾ ಗತ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದಳು.


ಜನ್ರೇಟರ್ ಸಹಾಯದಿಂದ ಉರಿವ ಸಾಲಾಗಿ ಕಟ್ಟಿದ ಟ್ಯೂಬುಲೈಟುಗಳ ಬೆಳಕು ಕಾಣುತ್ತಲೇ ಬೆಂಕಿ ನಂದಿಸಿ ಸೂಟೆ ಬಿಸಾಡುತ್ತಿದ್ದೆವು। ಆ ಲೈಟುಗಳ ಬೆಳಕು ಮೈಮೇಲೆ ಬೀಳುತ್ತಲೇ ಅನಿವರ್ಚನೀಯ ಆನಂದ ಉಂಟಾಗುತ್ತಿತ್ತು. ಒಂದು ಸ್ವಲ್ಪ ನಾಚಿಕೆ, ಮುಜುಗರ, ಸಂಕೋಚ ಎಲ್ಲ ಏಕಕಾಲಕ್ಕೆ ಮಿಳಿತಗೊಂಡು ಎಲ್ಲರೆದುರು ಹೆಜ್ಜೆ ಹಾಕಲೇ ಕಷ್ಟವೆನ್ನುವ ಪರಿಸ್ಥಿತಿ. ಅಂತೂ ಡೇರೆಯ ಒಳಗೆ ಹೋಗಿ ಕುಳಿತು ರಂಗಸ್ಥಳ ನೋಡಿದಾಗಲೇ ಸಮಾಧಾನ.


ರಂಗಸ್ಥಳದಲ್ಲಿ ಕೋಡಂಗಿ ಕುಣಿತ, ಸ್ತ್ರೀ ವೇಷ ಕುಣಿತಗಳೆಲ್ಲ ಮುಗಿದು, ಒಡ್ಡೋಲಗದ ಹೊತ್ತಿಗೆ ನಾನು ಮೆಲ್ಲ ನಿದ್ರೆಗೆ ಜಾರುತ್ತಿದ್ದೆ। ಇದು ಎಚ್ಚರಾವಾಗುವುದು ಒಂದೋ ರಾವಣನ(ಎಲ್ಲ ಬಣ್ಣದ ವೇಷವೂ ನನಗಾಗ ರಾವಣನೇ) ಪ್ರವೇಶದ ಸಂದರ್ಭದಲ್ಲಿ. ಯಾಕೆಂದರೆ, ಬಿರುಸಿನ ಚೆಂಡೆ, ಅವಸರದ ಮದ್ದಳೆ, ಇದಕ್ಕೆ ಸರಿಹೊಂದುವ ಚಕ್ರತಾಳ, ಭಾಗವತರ ಜಾಗಟೆಯ ಜೋರಿನೊಂದಿಗೆ ರಾವಣನ ಅಟ್ಟಹಾಸಕ್ಕೆ ಆಗಷ್ಟೆ ಎಚ್ಚರಗೊಂಡು ನಿದ್ದೆಯ ಮಂಪರಿನಲ್ಲೇ ಇರುತ್ತಿದ್ದ ನನ್ನಂಥವರಿಗೆ ಒಂದು ರೀತಿಯ ಕುತೂಹಲ ಮಿಶ್ರಿತ ಭಯವಾಗುತ್ತಿತ್ತು. ರಾವಣನ ಕಿರುಚಾಟಕ್ಕೆ ಮೈಯೀಡೀ ಕಂಪನ. ಅದು ದೇವಿಮಹಾತ್ಮೆ ಆಟವಾದರೆ ಮುಗಿಯಿತು. ಮಹಿಷಾಸುರ ಆರ್ಭಟಿಸುತ್ತಾ, ಸಭೆಯಲ್ಲಿ ಬೆಂಕಿಯೊಂದಿಗೆ ಆಟವಾಡುತ್ತಾ ಬರುವಾಗ ಕುಳಿತಲ್ಲಿಂದ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದೆವು. ಜಯಂತ್ಯಕ್ಕ ನನ್ನನ್ನು ಅವಚಿ ಹಿಡಿದುಕೊಂಡರೆ, ಗಾಯತ್ರಕ್ಕನಿಗೆ ಎಲ್ಲರೂ ತುಳಿದು ಚಾಪೆ ಹಾಳಾದೀತ ಎಂಬ ಚಿಂತೆ.


ನಿದ್ದೆಯಿಂದ ಎಚ್ಚರವಾಗುವ ಇನ್ನೊಂದು ಸಂದರ್ಭವೆಂದರೆ ಆಯಿಸಗಾರನ (ಹಾಸ್ಯಗಾರನಿಗೆ ನಮ್ಮ ವರ್ಷನ್!) ಪ್ರವೇಶ. ಜಯಂತ್ಯಕ್ಕ ಆಯಿಸಗಾರ ಬಂದ, ಏಳುಏಳು ಅಂತ ಎಬ್ಬಿಸುತ್ತಿದ್ದಳು. ಇಲ್ಲವಾದರೆ, ಮರುದಿನ ಅವರೆಲ್ಲ, ಹಾಸ್ಯಗಾರನ ಡಯಲಾಗ್‌ಗಳನ್ನು ಹೇಳುತ್ತಾ ರಸಸ್ವಾದ ಮಾಡುವಾಗ ನನ್ನ್ಯಾಕೆ ಎಬ್ಬಿಸಿಲ್ಲಾಂತ ಕಿರಿಕಿರಿ ಮಾಡುತ್ತೇನಲ್ಲಾ....
ಯಕ್ಷಗಾನಕ್ಕೆ ಹೊರಡುವುದೇ ಗೌಜಿ. ಅಲ್ಲಿ ತಲುಪಿದ ಬಳಿಕ ರಾತ್ರಿಯಿಡೀ ಎಷ್ಟು ಯಕ್ಷಗಾನ ನೋಡುತ್ತೇನೆ ಬಿಡುತ್ತೇನೆ ಎಂಬುದು ಬೇರೆ ವಿಚಾರ. ಮುಕ್ಕಾಲು ಪಾಲು ನಿದ್ರೆ. ಬೆಳಗಿನ ಜಾವ 'ಮಂಗಳಂ' ಆದಬಳಿಕ ಯಕ್ಷಗಾನ ಸ್ಪೆಷಲ್ ಕೃಷ್ಣ ಬಂಟ್ರ ಹೊಟೇಲಿನಿಂದ ಗರಿಗರಿ ಈರುಳ್ಳಿ ಬಜ್ಜಿ ಕಟ್ಟಿಸಿಕೊಂಡು ಹೋಗಿ ಮನೆಯಲ್ಲಿ ಅಪ್ಪನಿಗೆ ಕೊಟ್ಟು, ನಾವು ಹಂಚಿ ತಿನ್ನುವಲ್ಲಿಗೆ ಆ ವರ್ಷದ ಯಕ್ಷಗಾನ ಸಂಭ್ರಮ ಮುಗಿದು ಕಣ್ಣುರಿಯ ಸಂಭ್ರಮ ಆರಂಭಗೊಳ್ಳುತ್ತದೆ.

ಭಾನುವಾರ, ಏಪ್ರಿಲ್ 6

ನಮ್ಮ ಪ್ರಜೆಗಳಿಗೆ ನಾವೇ ನೀರು ಕುಡಿಸಬೇಕು

ಭಳಿರೇ ಪರಾಕ್ರಮ ಕಂಠೀರವ.........!!

ಬಲ್ಲಿರೇನಯ್ಯ..........?

ಈ ದ್ರಾವಿಡ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ.........?

ರಕುಣಾಧಿನಿ ಎಂದು ಕೇಳಿ ಬಲ್ಲೆವೂ.......

ಹಾಗೆಂದುಕೊಳ್ಳಬಹುದು... ಹಾಗೆಂದುಕೊಳ್ಳಬಹುದು।

ಇರುವಂತಹಾ ಸ್ಥಳ.......?

ಮುದಿರಾಸು ಎಂಬ ಮಹಾನರಕವೆಂದು ತಿಳಿದುಕೊಂಡಿದ್ದೇವೆ।

ಬಂದಂತಹಾ ಕಾರ್ಯ.......?

ಅನೇಕವಿದೆ....... ಅನೇಕವಿದೆ....... ಅನೇಕವಿದೆ........

ನಮ್ಮಪಟ್ಟಣದ ಉರಿಉರಿಶೆಖೆಯೊಂದಿಗೆ, ಹಗೆಕಲ್ಲು ಬೆಂಕಿಯ ದಾವಿನ ಕಾವನ್ನೂ ತಂಪಾಗಿಸಿಕೊಳ್ಳುವ ನಿಟ್ಟಿನಿಂದ ಹವಾನಿಯಂತ್ರಿತ ಕೊಠಡಿಯಲ್ಲಿ ಪವಡಿಸಿದ್ದ ನಾವುಗಳು ಮುಂಜಾನೆಯಾಗುತ್ತಲೇ ಮೈಲಾಗದಿದ್ದರೂ ದಡಬಡಿಸಿ ಎದ್ದು, ಶೌಚ, ಸ್ನಾನಾಧಿ ಕಾರ್ಯಗಳನ್ನು ಮುಗಿಸಿ, ಉಪಾಹಾರವನ್ನು ಸ್ವೀಕರಿಸಿದ್ದಾಯಿತು। ಒಡ್ಡೋಲಗಕ್ಕೆ ತೆರಳುವ ಮುನ್ನ ಶ್ವೇತ ವರ್ಣದ, ಉತ್ಕೃಷ್ಟ ಗುಣಮಟ್ಟದ ಹತ್ತಿಯ ಧೋತರವನ್ನು ಉಟ್ಟು, ಅದೇಬಣ್ಣದ ಶರಟನ್ನೂ ತೊಟ್ಟು, ಹಳದಿ ಬಣ್ಣದ ಮೇಲ್ವವಸ್ತ್ರವನ್ನು ಹೊದ್ದುಕೊಂಡಿದ್ದಾಯಿತು. ನಮ್ಮ ಟ್ರೇಡ್ ಮಾರ್ಕ್ ಆಗಿರುವಂತಹ ಅಂಗೈಯಗಲದ ಕಪ್ಪು ಕನ್ನಡಕವನ್ನು ಕಣ್ಣಿಗೆ ಅಡ್ಡವಾಗುವಂತೆ ಮೂಗಿನ ಮೇಲೆ ಏರಿಸಿಕೊಂಡು, ನಮ್ಮ ಬೋಡು ಮಂಡೆಯಲ್ಲಿ ಇಲ್ಲದ ಕೂದಲುಗಳನ್ನು ಒಪ್ಪವಾಗಿ ಬಾಚಿದ್ದಾಯಿತು. ಸೇವಕ ತಂದಿಟ್ಟ ಕಾಲಿನ ಎಕ್ಕಡವನ್ನು ಮೆಟ್ಟಿ ಸಭೆಗೆ ಆಗಮಿಸಿ ಸಿಂಹಾಸನಕ್ಕೆ ವಂದಿಸಿ, ಸಿಂಹಾಸದ ಕೈಯನ್ನು ಆಧರಿಸಿಕೊಂಡು ನಿಧಾನವಾಗಿ ಆಸೀನರಾಗಿ, ನಮ್ಮನ್ನು ಇಡೀಯಾಗಿ ಆಸನದಲ್ಲಿ ಹುದುಗಿಸಿಕೊಂಡು, ಸಭೆಯನ್ನೊಮ್ಮೆ ನೋಡುತ್ತೇವೆ........! ಇದೇನಾಶ್ಚರ್ಯ........? ಇದೇನಾಶ್ಚರ್ಯ........?

ಸಭೆ ಎಂದಿಗಿಂತಲೂ ಇಂದು ತುಂಬಿ ತುಳುಕುತ್ತಿದೆ। ವಂದಿಮಾಗಧರಿದ್ದಾರೆ. ಮಾಗಣೆಯವರೂ ಬಂದಿದ್ದಾರೆ. ಮಂತ್ರಿಮಹೋದಯರು ಎದುರಿನ ಸಾಲಿನಲ್ಲಿ ರಾರಾಜಿಸುತ್ತಿದ್ದಾರೆ. ಯುವರಾಜರಾದ ರಕಟಕ ಮದನಕರೂ ತಮ್ಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತುತ್ತೂರಿಯವರ ಪಡೆಯೇ ಬೀಡುಬಿಟ್ಟಿದ್ದು, ನಾವು ಬಾಯಿಬಿಡುವುದನ್ನೇ ಅವಸರದಿಂದ ಕಾಯುತ್ತಿರುವಂತಿದೆ.... ಆದರೂ ಯಾಕೋ ಎಲ್ಲರ ಮುಖದಲ್ಲಿ ಒಂದು ನಮೂಊಊಊಊನೆಯ ಅಸಮಾಧಾನ ಮಡುಗಟ್ಟಿದಂತಿದೆಯಲ್ಲಾ......? ಇರಲಿ ನೋಡೋಣ. ಸಭೆ ಆರಂಭಿಸೋಣವಂತೆ..... ಯಾರಲ್ಲೀ.......?

ಸ್ವಾಮೀ ರಕುಣಾ ಧಿನಿಯವರೇ........ ನಿಗಿಗುಟ್ಟುತ್ತಿದ್ದ ಹಗೆಕಲ್ಲು ಎಂಬ ಕೆಂಡಕ್ಕೆ ನೀವು, ಈ ಮಾಸದ ಆದಿಯ ದಿನದಂದು ಮೇಲ್ಸೇತುವೆಯೊಂದರ ಉದ್ಘಾಟನೆ ಮಾಡುತ್ತಾ 'ಲೂಸುಲೂಸಾಗಿ' ಮಾತಾಡಿ ಪೆಟ್ರೋಲು ಸುರಿದಿರಂತೆ। ಏನೇ ಆದರೂ ಹಗೆಕಲ್ಲನ್ನು ಹೊಡಿಯದೆ 'ಬಿಡಮಾಟೇ.....' ಅನ್ನುತ್ತಾ ಅತ್ತ ನಿಮ್ಮ ನೆರೆಯ ಸಾಮ್ರಾಜ್ಯದ ನರ್ಕಾಟಕದವರನ್ನು ರೊಚ್ಚಿಗೆಬ್ಬಿಸಿದ್ದೀರಂತೆ.... ನರ್ಕಾಟಕದವರು ಬೆನ್ನುಮೂಳೆ ಮುರಿದರೂ ಬಿಡೆ ಎನ್ನುತ್ತಾ ಪಂಥಾಹ್ವಾನವನ್ನೇ ನೀಡಿದಿರಂತೆ.......

ಅರೇ... ಇದೇನಿದು ಭಾಗವತರೇ.... ನಮ್ಮ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಚಾರಕ್ಕೆ ನಾವಲ್ಲದೇ ಇನ್ಯಾರು ಮಾತನಾಡಲಾಗುತ್ತದೆ। ಈ ಸಂಸ್ಥಾನದ ಅಧಿಪತಿಯಾಗಿದ್ದುಕೊಂಡು ನಮ್ಮ ಪ್ರಜೆಗಳ ಹಿತಕಾಯುವುದು ನಮ್ಮ ಕರ್ತವ್ಯವಲ್ಲವೇ......? ನಮ್ಮ ಪ್ರಜೆಗಳಿಗೆ ನಾವು ನೀರುಕುಡಿಸದೇ ಇನ್ಯಾರು ನೀರು ಕುಡಿಸಲು ಸಾಧ್ಯ.....?

ಸ್ವಾಮಿ.... ದ್ರಾವಿಡ ಸಂಸ್ಥಾನದ ಅಧಿಪತಿಗಳೇ.... ನಿಮ್ಮ ಪ್ರಜೆಗಳಿಗೆ ನೀವು ನೀರುಕುಡಿಸಬೇಕಿರುವುದು ಉಚಿತವೇ ಆಗಿದ್ದರೂ, ಒಬ್ಬ ಆಸ್ಥಾನಪತಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಂತಹ ಪ್ರಚೋನಾಕಾರಿಯಾದಂತಹ ಮಾತುಗಳನ್ನಾಡುವುದು ಸಾಧುವೇ.....?

ಭಾಗವತರೇ......, ಒಂದು ಸಂಸ್ಥಾನದ ಅಧಿಪತಿಯಾಗಿರುವ ನಾವು, ನಮ್ಮ ಜನತೆಗಾಗಿ.... ಅವರ ಹಿತರಕ್ಷಣೆಗಾಗಿ..... ಅವರ ಹಿತರಕ್ಷಣೆಯ ಅವಕಾಶಕ್ಕೆ ಅಗತ್ಯವಿರುವ ವೋಟುಗಳಿಗಾಗಿ ಏನೂ ಮಾಡಲು ಸಿದ್ಧ, ಮತ್ತು ಎಂತಹ ಮಾತುಗಳನ್ನು ಹೇಳಲೂ, ಯಾರನ್ನು ಬೇಕಿದ್ದರೂ ಪ್ರಚೋದಿಸಲು ಸಿದ್ಧರಾಗಿರಬೇಕಾಗುತ್ತದೆ। ಇದನ್ನು ಸರಿಯೋ ತಪ್ಪೂ ಎಂದು ಅಳೆಯುವ, ಅಧಿಕ ಪ್ರಸಂಗಿತನದ ಮಾತುಗಳು ನಿಮಗೆ ಬೇಡ.

ಕರಿಯ ಚಾಳೀಸಿನ ಒಡೆಯರೇ...... ನಿಮ್ಮ ಸಾಮ್ರಾಜ್ಯದ ರಾಜಧಾನಿ ಹಾಗೂ ನಿಮ್ಮ ನೆರೆಯ ಸಾಮ್ರಾಜ್ಯದ ರಾಜಧಾನಿಗಳಲ್ಲಿ ಉಗ್ರರೂಪ ತಾಳಿದ, ಕಿಚ್ಚುಹತ್ತಿಕೊಳ್ಳಲು ಇಂಧನ ಸುರಿದಂತೆ ನೀವು ಆಡಿದ ಮಾತುಗಳಿಗೆ, ನಿಮ್ಮ ವಿರೋಧಿ ಲಯಜಲಿತಾ ತಾಯಿ, ನೀವು ನಿಮ್ಮ ಪ್ರಜೆಗಳ ರಕ್ಷಣೆಗೆ ಬದ್ಧರಾಗಿಲ್ಲ ಎಂದು ನಿಮ್ಮನ್ನು ಕೆರಳಸಿದ್ದು ಕಾರಣವ.....

ಮುಚ್ಚಿಬಾಯಿ ಭಾಗವತರೇ..... ನಮ್ಮ ಪ್ರಜೆಗಳ ಹಿತಕಾಯಲು ನಮಗೆ ಗೊತ್ತಿಲ್ಲವೇ.....? ಇಷ್ಟು ವಯಸ್ಸಿನ, ಇಷ್ಟೊಂದು ಸುದೀರ್ಘ ರಾಜ್ಯಾಡಳಿತದ ಅನುಭವ ಇರುವ ನಾವು ಆಯಮ್ಮನಿಂದ ಏನನ್ನೂ ಕಲಿಯಬೇಕಾಗಿಲ್ಲ.... ಇಂತಹ ಪ್ರಶ್ನೆಗಳನ್ನು ಎಸೆದರೆ ನಿಮ್ಮ ಗತಿ ನೆಟ್ಟಗಿರದೂ..... ಜಾಗ್ರತೆ!

ಸಮಾಧಾನ...... ಸಮಾಧಾನ...... ಉದ್ವೇಗಗೊಳ್ಳದಿರಿ..... ಪ್ರಜೆಗಳಿಗೆ ನೀರುಕುಡಿಸಲು ಕಂಕಣತೊಟ್ಟಿದ್ದ ತಾವುಗಳು, ನಿಮ್ಮ ನೆರೆರಾಜ್ಯದವರನ್ನು ಭಾಷಾ'ಕುರುಡರು' ಎಂದೆಲ್ಲ ಹೇಳುತ್ತಾ ಮತ್ತಷ್ಟು ತೈಲ ಸುರಿದವರು.... ನಿಮ್ಮ ದರ್ಬಾರಿನಲ್ಲಿ ನೆರೆರಾಜ್ಯದವರ ವಿರುದ್ಧ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದವರು, ಒಂದು ಹಂತದಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿರೋಧಿಗಳೆಲ್ಲ ಒಂದಾಗಲು ಕಾರಣವಾದ ಭಾಷಾಕುರುಡರಿಗೆ ವಂದನೆಗಳನ್ನೂ ಸಲ್ಲಿಸಿದ್ದ ನೀವು, ಇದ್ದಕ್ಕಿದ್ದಂತೆ ನಿಮ್ಮ ನೀರು ಕುಡಿಸುವ ಯೋಜನೆಯನ್ನು ತಡೆಹಿಡಿಯಲು ಕಾರಣವೇನು? ನರ್ಕಾಟಕದಲ್ಲಿ ಶಾಂತಿ ಕೆಡುತ್ತದೆಂಬ ವಿಚಾರ ನಿಮಗೆ ಮೊದಲೇ ಹೊಳೆಯಲಿಲ್ಲವೇ.....? ದೆಹಲಿ ಸಾಮ್ರಾಜ್ಯದಿಂದ ಅಖಂಡ ಭರತ ಖಂಡವನ್ನು ಆಳುತ್ತಿರುವ ನಿಮ್ಮ ಮೈತ್ರಿಕೂಟದ ಕಾಂಗೊರಸಿನ ಒತ್ತಡ ಕಾರಣವೇ? ನಿಸೋಯಾ ಮೇಡಮ್ಮರ ತಂತ್ರವೇ....ಇಲ್ಲ ಛೂ ಮಂತ್ರವೇ?

ಛೇ...... ಛೇ...... ಛೇ.....ಛೇ..... ಛೇ.... ಎಲ್ಲಿಂದೆಲ್ಲಿ ತಳುಕು ಹಾಕುತ್ತೀರಿ ನೀವು? ನಮಗೂ ಕೆಲವೊಮ್ಮ ಪ್ರಜ್ಞೆ ಎಂಬುದು ಇರುತ್ತದೆ। ನಮ್ಮ ಸಾಮ್ರಾಜ್ಯದ ಹಾಗೂ ನೆರೆಯ ಸಾಮ್ರಾಜ್ಯದ ಪ್ರಜೆಗಳು ಪರಸ್ಪರ ದ್ವೇಷ ಕಾರಿಕೊಳ್ಳುವುದನ್ನು ತಡೆಯಲು, ಇಂತಹ ಕ್ರಮಕ್ಕೆ ಮುಂದಾಗುವಂತೆ ನಮ್ಮ ಅಂತಪ್ರಜ್ಞೆ ನಮಗೆ ಕರೆ ನೀಡಿತು; ವಿನಹ ಗೋವರ್ಧನ ಗಿರಿಧಾರಿಯ ವಶೀಲಿ-ಭಾಜಿ ಅಥವಾ ಅಧಿಪತಿಗಳಿಲ್ಲದ ನೆರೆ ರಾಜ್ಯದ ಚುನಾವಣೆ ಇದ್ಯಾವುದೂ ಕಾರಣವಲ್ಲ.... ಭಾಗವತರೇ... ಸಾಕು ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ.......

ರಕುಣಾ ಧಿನಿಯವರೇ.... ಅರ್ಥವಾಯಿತು..... ಅರ್ಥವಾಯಿತು.... ಸಭೆಗೆ ಮಂಗಳ ಹಾಡೋಣವಂತೆ.ಎರಡೂ ಸಾಮ್ರಾಜ್ಯಕ್ಕೂ ಒಳಿತಾಗಲೀ..... ಸರ್ವರೂ ನೀರು ಕುಡಿದು ಸುಃಖವಾಗಿರಲಿ.... ಮಂಗಳಂ.

ಮಂಗಳವಾರ, ಏಪ್ರಿಲ್ 1

ಅಮ್ಮಾ ನಾ ಫೂಲಾದೇ.......

ಅಲ್ಲಾ, ಈ ಥರಾನೂ ನೀವು ಒಬ್ಬ ಫೂಲನ್ನು ಫೂಲ್ ಮಾಡೋದಾ? ನನ್ನ ದಿನವಾದ ಇಂದು ನಂಗೆ ಶುಭಾಶಯ ಕೋರ್ತೀರಾಂತ ಬೆಳಬೆಳಗ್ಗೇನೇ ಬೇಗನೆದ್ದು ಕೂತಿದ್ದೆ। ನಾಟ್ ಈವನ್ ಒನ್ ಎಸ್ಸೆಮ್ಮೆಸ್. ಹೋಗಲಿ ಒಂದು ಮೇಲ್? ಮೇಲೂ ಇಲ್ಲ; ಫೀಮೇಲೂ ಇಲ್ಲ! ನೀವೂ ಫೂಲ್ ಮಾಡಿದ್ರಿ ಬಿಡ್ರಿ. ಆದರೆ, ನೀವೆಂದಿಗೂ ಮೂರ್ಖರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.

ನಂಬುಗೆ, ಸಂಬಂಧ, ಹಣಕಾಸು ಮುಂತಾದ ಮಿಕ್ಕೆಲ್ಲ ಹಾಳೂಮೂಳೂ ವಿಚಾರದಲ್ಲಿ ಇತರರು ನನ್ನನ್ನು ಮೂರ್ಖಳನ್ನಾಗಿಸಿದ್ದರೆ, ಹುಟ್ಟಿದ ದಿನಾಂಕದ ಈ ವಿಚಾರದಲ್ಲಿ ನನ್ನ ಅಮ್ಮನೇ ನನ್ನನ್ನು ಯಾಮಾರಿಸಲು ಯತ್ನಿಸುತ್ತಾರೆ।

ಏಪ್ರಿಲ್ ಒಂದನೇ ತಾರೀಕೇ ನಾನು ಹುಟ್ಟಿದ ದಿನ ಅಂತ ನನ್ನ ಸ್ವಭಾವ, ವ್ಯಕ್ತಿತ್ವ ಹೇಳುತ್ತೆ। ಆದರೆ ನಿರಕ್ಷರಿಯಾದ ನನ್ನಮ್ಮ, ಬರೆದಿಟ್ಟ ದಿನಾಂಕದ್ದೋ; ಇಲ್ಲ ಜಾತಕದ್ದೋ ಪುರಾವೆಯನ್ನು ಒದಗಿಸಲಾಗದ ಕಾರಣ, ಅವರದ್ದೇ ಆದ ವಾದ ಮಂಡಿಸುತ್ತಾರೆ. ಅವರು ಹೇಳುವ ಪ್ರಕಾರ, ನಾನು ಜೋರು ಜಡಿಮಳೆ ಸುರಿಯೋ ದಿನ ಹುಟ್ಟಿದ್ದಂತೆ. ಕಾರ್ತಿಂಗಳ(ಕಾರ್ತೆಲ್) ಆ ದಿನ ಆಗಸಕ್ಕೇ ತೂತು ಬಿದ್ದಂತೆ, ದಿನ ಪೂರ್ತಿ ಧಿಸಿಲ್ಲನೆ ಮಳೆ ಸುರಿಯುತ್ತಲೇ ಇತ್ತಂತೆ. ಅಲ್ಲದೆ ಅಂದು ಕರ್ಕೂಟಿ(ಗಾಢ) ಕತ್ತಲೆ ಇತ್ತಂತೆ. ನನ್ನೂರಿನಲ್ಲಿ ಏಪ್ರಿಲ್ ತಿಂಗಳಲ್ಲಂತೂ ಈ ಪರಿ ಮಳೆ ಸುರಿಯಲು ಸಾಧ್ಯವೇ ಇಲ್ಲ. ಹಾಗಾಗಿ ನೀನು ಏಪ್ರಿಲ್‌ನಲ್ಲಿ ಹುಟ್ಟಿದ್ದಲ್ಲಂತ ಅವರ ವಾದ. ಹಾಗೂ ಹೀಗೂ ಆಗಸ್ಟ್ ತಿಂಗಳಿಗೆ ಅವರು ಇದನ್ನು ಥಳುಕು ಹಾಕುತ್ತಾರೆ.

ನನ್ನ ಅಸ್ತಿತ್ವದ ಬಹಳ ಸ್ಟ್ರಾಂಗ್ ಆದ ಪುರಾವೆಯಾಗಿರುವ ನನ್ನ ಎಸ್ಸೆಲ್ಸಿ ಸರ್ಟಿಫಿಕೇಟ್ ಹೇಳೋ ಮಾತೇ ಬೇರೆ। ಅದರ ಪ್ರಕಾರ ನಾನು ಹುಟ್ಟಿದ್ದು ಜೂನ್ ತಿಂಗಳಲ್ಲಿ. (ಈ ಮಧ್ಯೆ ರೇಶನ್ ಕಾರ್ಡ್ ಮತ್ತು ಶೇಷನ್ ಕಾರ್ಡ್‌ನಲ್ಲಿರುವ ಹುಟ್ಟಿದ ದಿನಾಂಕದ ವಿವರಗಳು ಇನ್ನೂ ಬೇರೆಬೇರೆ ಹೇಳುತ್ತೆ) ಆದರೆ, ಯಾರೇ- ಏನೇ ಹೇಳಲಿ, ನನ್ನ ನೇಚರೂ, ಫೀಚರೂ ಹೇಳುವಂತೆ ಅದು ಖಂಡಿತ ಏಪ್ರಿಲ್ ಫಸ್ಟೇ ಅಂತ ನಾನು ಗಟ್ಟಿ ಮಾಡಿಕೊಂಡಿದ್ದೇನೆ.

ಈ ದಿನವಂತೂ, ಹುಟ್ಟಾ ಮೂರ್ಖಳಾಗಿರುವ ಖಂಡಿತ ನಂದೇ, ಮತ್ತು ನೇರವಾಗೆ ನಂಗೆ ಸಂಬಂಧಿಸಿದ್ದು। ನಾನು ಮೂರ್ಖಳು ಅಂತ ಎಗ್ಗಿಲ್ಲದೆ ಒಪ್ಪಿಕೊಳ್ಳುವುದಕ್ಕೂ ನನ್ನ ಬಳಗದ ಕೆಲವರ ಆಕ್ಷೇಪ. ನೀನು ಹಾಗೆಲ್ಲ ಯಾಕೆ ಹೇಳ್ಕೋತಿಯಾ ಅಂತ ಸಿಡಿಮಿಡಿಗುಟ್ಟುತ್ತಾ ನನ್ನ ಸಂತೋಷಕ್ಕೇ ಅಡ್ಡಿ ಬರುತ್ತಾರವರುಗಳು. ಅವರಿಗೇನು ಗೊತ್ತು ಸದಾ ಮೂರ್ಖಳಾಗೇ ಇರೋದಲ್ಲಿರೋ ಸುಖ?

ಮೊದಮೊದಲೆಲ್ಲ ನಾನೂ ಈ ವಿಚಾರದಲ್ಲಿ ಒಂದು ನಮೂನೆಯ ಕನ್‌ಫ್ಯೂಶನ್‌ಗೆ ಬಿದ್ದಿದ್ದೆ। ಆದರೆ ಒಂದು ದಿನ ನಂಗೆ ಥಟ್ ಅಂತ ಜ್ಞಾನೋದಯವಾಯಿತು. ಆಗ ಬುದ್ಧನಷ್ಟೇ ವಯಸ್ಸಾಗಿತ್ತು. ಅದು ಮಧ್ಯರಾತ್ರಿಯಲ್ಲ. ನಟ್ಟ ನಡು ಹಗಲು. ಆದರೆ ನಾನು ಯಾವ ವೃಕ್ಷದಡಿಯೂ ಕುಳಿತಿರಲಿಲ್ಲ. ಬದಲಿಗೆ ಕೈಯಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಇತ್ತು. "ಈ ಮಧ್ಯೆ ನಡೆಯುವಾಗೆಲ್ಲ ನಾನು ಹೆಚ್ಚೆಚ್ಚು ಎಡವುತ್ತೇನೆ" ಎಂಬ ಪ್ರಶ್ನೆಯನ್ನು 'ಕೇಳಿ' ಅಂಕಣದಲ್ಲಿ ಯಾರೋ ಕೇಳಿದ್ದರು. ಅದಕ್ಕೆ ಉತ್ತರಿಸಿದ ರವಿಬೆಳಗೆರೆಯವರು "ಎಡವುದನ್ನೇ ಅಭ್ಯಾಸ ಮಾಡ್ಕೋ, ನಡೆಯೋದು ತಪ್ಪುತ್ತೆ" ಎಂಬ ಉತ್ತರ ಕೊಟ್ಟಿದ್ದರು.

ಇದನ್ನು ಓದುತ್ತಲೇ ಚಕ್ಕನೆ ನನ್ನ (ಇಲ್ಲದ)ಮೆದುಳೊಳಗೆ ಏನೋ ಸಂಚಾರವಾದಂತಾಗಿ, ಮಿಂಚು ಮೂಡಿತು। ಪದೇಪದೇ ಮೂರ್ಖಳಾದೆ, ಮೂರ್ಖಳಾದೆ ಅಂತ ಕೊರಗುವುದಕ್ಕಿಂತ ಪರ್ಮನೆಂಟ್ ಮೂರ್ಖಳೇ ಆಗಿ ಬಿಟ್ಟರೆ, ಮತ್ತೆ ಮತ್ತೆ ಯಾರು ಮೂರ್ಖಳಾಗಿಸಲು ಸಾಧ್ಯ? ಇದನ್ನೇ ಅಭ್ಯಾಸ ಮಾಡ್ಕೊಂಡಂದಿನಿಂದ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೂರ್ಖತನದೊಂದಿಗೆ ಸುಖ ಸಂತೋಷದಿಂದ ಬಾಳಿ ಬದುಕುತ್ತಿದ್ದೇನೆ.

ಈ ವರ್ಷವಂತೂ ನನ್ನ ಪಾಲಿಗೆ ಶುಭಾರಂಭವೇ। ಕರೆಕ್ಟಾಗಿ ಜನವರಿ ಒಂದರಂದು ನನ್ನ ಜಂಗಮವಾಣಿಯನ್ನು ಆಕ್ರಮಿಸಿಕೊಂಡಿದ್ದ ನಂಬರೊಂದು "ನೀನೊಂದು ಈಡಿಯೆಟ್, ಆದ್ರೆ ಸ್ವೀಟ್ ಈಡಿಯೆಟ್" ಅಂತ ಸ್ವೀಟಾದ ಎಸ್ಸೆಮ್ಮೆಸ್ಸೂ ಕಳಿಸಿತ್ತು. ಹೀಗೆ ಕಾಲಕಾಲಕ್ಕೆ ಸಾದ್ಯಂತವಾಗಿ ಸಂತಸದಿರುವಂತೆ, ನನಗೇ ತಿಳಿಯದಂತೆ ಘಟನೆಗಳು ಘಟಿಸಿಬಿಡುತ್ತವೆ. ಹಾಗಾಗೀ-


ಗಗನವೇ ಉರುಳಲಿ, ಭೂಮಿಯೇ ನಡುಗಲಿ, ಸುನಾಮಿ ಉಕ್ಕಲಿ, ಯಾರೇ ಸೊಕ್ಕಲಿ ಮೂರ್ಖಳಾಗದಿರಲಾರೇ.... ನಾನು ಮೂರ್ಖಳಾಗದಿರಲಾರೆ.....