ಗುರುವಾರ, ಜೂನ್ 12

ಬ್ಲಾಗ್ತಾಯಿಗೆ ಬ್ಲಾಗ್ಮುದ್ದು!

ಮೊನ್ನೆ ಮೊನ್ನೆ ನನ್ನ ಬ್ಲಾಗುರು ಅಸತ್ಯ ಅನ್ವೇಷಿಯವರು 50 ಸಾವಿರ ಹಿಟ್ಟುತಿಂದ ಕುರಿತು ವರದಿಯಾಗಿತ್ತಲ್ಲಾ... ಹಾಗೇ... ನಾನು ನನ್ನ ಹಿಟ್ಟುಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಏನಾಶ್ಚರ್ಯ....? 50 ಸಾವಿರ ಹಿಟ್ಟುಗಳಿಲ್ಲ। ಆದರೆ ಸಾವಿರ ಹಿಟ್ಟುಗಳು ದಾಟಿವೆ! ಸಂಭ್ರಮಾಚರಣೆಗೆ ಯೋಗ್ಯತಾನೆ.

ಒಂದು ರೀತಿಯ ಜಡಹಿಡಿದಂತೆಯೇ ಇರುವ ನಂಗೆ ಉದಾಸೀನ ಸ್ವಲ್ಪ ಹೆಚ್ಚು। ಹುಟ್ಟಾ 'ಉದಾಸೀನಿ' ಎಂದರೂ ತಪ್ಪಾಗಲಾರದು. ಹಾಗಾಗಿ ಅಫ್‌ಡೇಶನ್ ಡಿಸೀಪ್ಲೀನ್ ಇಟ್ಟುಕೊಂಡಿಲ್ಲ. ಇದಕ್ಕೆ ಪುರ್ಸೋತ್ತಿಲ್ಲ ಎಂಬ ಕಾರಣವೂ ಇದೆ. ಆಚೆ(2006) ನವೆಂಬರಿನಿಂದಲೂ ಬ್ಲಾಗೊಂದನ್ನು ಸೃಷ್ಟಿಸಬೇಕೆಂಬ ಇರಾದೆ ಹುಟ್ಟಿಕೊಂಡಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿದ್ದು ಕಳೆದ(2007) ನವೆಂಬರಿನಲ್ಲಿ.

ಕಂಪ್ಯೂಟರ್ ಇಲ್ಲಿಟ್ರೇಟ್ ಆಗಿರುವ ನಾನೂ ಥೇಟ್ ಕಂಪ್ಯೂಟರಿನಂತೆ(ಹೇಳಿದಷ್ಟೆ ಮಾಡೋ ಜಾಯಮಾನ)। (ಅ)ಮಾನ್ಯ ಅಸತ್ಯ ಅನ್ವೇಷಿಯವರ ಬೆನ್ನು ಬಿದ್ದು, ನಂಗೂ ಬ್ಲಾಗ್ ಬೇಕೆಂದು ರಚ್ಚೆ ಹಿಡಿಯುತ್ತಾ, ಅದು ಹ್ಯಾಗೆಂದು ಹೇಳಿಕೊಡಿ ಎಂದು ಅವರ (ಇಲ್ಲದ) ತಲೆಯನ್ನು ತಿಂದಿದ್ದೆ. ಅದಕ್ಕೇನು ಆನೆ-ಕುದುರೆ ಬೇಕಿಲ್ಲ ಎಂದ ಅವರು, ಕಳೆದ ನವೆಂಬರ್‌ನ ಒಂದಿನ ಗೋಧೂಳಿ ಸಮಯದಲ್ಲಿ ಕರೆದು ಬ್ಲಾಗ್ ಸೃಷ್ಟಿಯ ಮಂತ್ರ ಪಠಿಸಿದರು.

ಜೀ ಮೇಲ್ ಅಕೌಂಟ್ ಆರಂಭದಿಂದ ಹಿಡಿದು ಬ್ಲಾಗೀಗ ಯಾವ ರೂಪದಲ್ಲಿ ಬಿತ್ತರವಾಗುತ್ತಿದೆಯೋ ಅಲ್ಲಿತಂಕ ಅವರದ್ದೇ ಬಾಯ್ವಾಡ। ಕಂಪ್ಯೂಟರ್ ಮುಂದೆ ಕುಳಿತಿದ್ದ ನಾನು ಥೇಟ್ ಕಂಪ್ಯೂಟರ್ ಥರಾನೆ ಅವರು ಹೇಳಿದಂತೆಯೇ ಗುಂಡಿಗಳನ್ನು ಅದುಮುತ್ತಾ, ಕೀಲಿಗಳನ್ನು ಕುಟ್ಟುತ್ತಾ ನನ್ನ ಬ್ಲಾಗ್ ಕಟ್ಟಿ ಒಡ್ಡೋಲಗ ಮಾಡಿದ್ದೆ. ಬಳಿಕ ಬರಹಕ್ಕೆ, ಪ್ಲಾನೆಟ್ ಕನ್ನಡಕ್ಕೆ ಲಿಂಕಿಸುವ ಕುರಿತೂ ಅವರೇ ಹೇಳಿಕೊಟ್ಟಿದ್ದರು. ಅದು ಬಿಡಿ, ಈ ಬ್ಲಾಗ್ ಭೇಟಿಗರ ಸಂಖ್ಯೆಯ ಲೆಕ್ಕ ಹಾಗುವ ಕುರಿತೂ ಅವರೇ ಹೇಳಿದ್ದು. ಇದೆಲ್ಲ ನಂಗೆ ಗೊತ್ತೇ ಇರಲಿಲ್ಲ. ಹಾಗೀಗ ನಾನು ಸಂಪೂರ್ಣ ಅವರ ಬ್ಲಾಗ್ರುಣದಲ್ಲೇ ಇರುವುದು ಅಂತ ಯಾವ ಮುಲಾಜೂ ಇಲ್ಲದೆ ಹೇಳಿಕೊಳ್ಳುವೆ.

ಏನು ಬರೆಯಲೀ ಎಂಬ ಸಮಸ್ಯೆ ನನ್ನನ್ನು ಕಾಡುವುದಿಲ್ಲವಾದರೂ, ಪಿರ್ಕಿಪಿರ್ಕಿ ಬರೆಯಬೇಕೆಂಬುದೇ ಆಸೆ। ಮೊನ್ನೆ ಮಾರ್ಚಿ ತಿಂಗಳಲ್ಲಿ ನಡೆದ ಕನ್ನಡ ಬ್ಲಾಗಿರ ಪ್ರಥಮ ಸಮ್ಮೇಳನ ಚೆನ್ನಾಗಾಯ್ತಂತೆ ಎಂಬುದಾಗಿ, ಸಮ್ಮೇಳನಕ್ಕೆ ಹೋಗದೆ ಇಲ್ಲೇ ಕುಳಿತು ಬರೆದಿದ್ದೆನಲ್ಲಾ, ಅದನ್ನು ದಟ್ಸ್ ಕನ್ನಡದವರು ಲಿಂಕಿಸಿದ್ದರು. ಆವಾಗ ಶಾನಿಯ ಡೆಸ್ಕಿಗೆ ತುಂಬ ವೀಕ್ಷಕರು ಬಂದಿದ್ದರು. ಹಿಟ್ಟುಗಳ ಸಂಖ್ಯೆ ನಂಗೇ ಅಚ್ಚರಿ ಅನ್ನೋ ರೀತಿ ಏರಿತ್ತು. ಆ ಬಳಿಕ ಕೆಂಡಸಂಪಿಗೆಯ ದಿನದ ಬ್ಲಾಗಂಗಳದಲ್ಲಿ ಪರಿಚಯಿಸುತ್ತಾ ಕಥೆ, ಕವನ ಎಲ್ಲಾ ಬರೆಯುತ್ತೇನೆಂದು ಆರೋಪಿಸಿದ್ದರು. ಆದಾದ ಬಳಿಕ ಹಿಟ್ಟಿಗರ ಸಂಖ್ಯೆಯಲ್ಲಿ ಮತ್ತೂ ಹೆಚ್ಚಳವಾಯಿತು. ಅಂದ ಹಾಗೆ ಅದೊಮ್ಮೆ ಹಿರಿಯ ಮಿತ್ರರೊಬ್ಬರು ಹಿಟ್ ಶಬ್ದ ಬಳಸಬೇಡ, ಅದು ಸೂಕ್ತಪದ ಅಲ್ಲ ಅಂತ ಬಯ್ದಿದ್ದರು. ಮತ್ತೇ...? ಅಂತ ತಿರುಗಿ ಪ್ರಶ್ನಿಸಿದ್ದಕ್ಕೆ, ವೀಕ್ಷಕರು ಅಂತ ಹೇಳಬಹುದು ಎಂಬ ಸಲಹೆ ಕೊಟ್ಟಿದ್ದಾರೆ. ಆದರೆ, ಬ್ಲಾಗ್ ಲೋಕದಲ್ಲಿ ಹರಿದಾಡುವ ಶಬ್ದಗಳಲ್ಲಿ 'ಹಿಟ್‌' ಎಂಬ ಶಬ್ದವೇ ಹಿಟ್ ಆಗಿರುವ ಕಾರಣ ಸದ್ಯ ನಾನೂ ಇಲ್ಲಿ ಅದನ್ನೇ ಬಳಸುತ್ತಿದ್ದೇನೆ.

ನಂಗೊತ್ತು ನನ್ನ ಬ್ಲಾಗ್ ಅಂಥಾ ಚೆಂದದ್ದೇನೂ ಅಲ್ಲ। ತುಂಬ ಕೊಚ್ಚಿಕೊಳ್ಳುವಂತೆಯೂ ಇಲ್ಲ. ಆದರೂ 'ಬ್ಲಾಗ್ತಾಯಿಗೆ, ಬ್ಲಾಗ್ಮುದ್ದು' ತಾನೆ. ಅದಿರಲಿ, ಇದೀಗ ನಂಗೂ ಬ್ಲಾಗೆಳೆಯರು, ಬ್ಲಾಗೆಳೆತಿಯರು ಇದ್ದಾರೆ ಎಂಬುದು ಖುಷಿ, ಖುಷಿ. ಮತ್ತೆ ಸಹಸ್ರಕ್ಕೂ ಮಿಕ್ಕು ಭೇಟಿಗರೂ ಬಂದು ಹೋಗಿರುವುದೂ ಮತ್ತೂ ಖುಷ್! ಇದೆಲ್ಲದರ ಕ್ರೆಡಿಟ್ಟೂ... ನನ್ನ ಬ್ಲಾಗುರುವಿಗೆ.

ಕೆಲವು ಸಹಬ್ಲಾಗಿಗರು ಅವರ ಪಟ್ಟಿಯಲ್ಲಿ ನನ್ನ ಬ್ಲಾಗನ್ನು ಲಿಂಕಿಸಿಕೊಂಡಿದ್ದಾರೆ. ಮತ್ತೆ ಕೆಲವರು ಕಮೆಂಟಿಸುತ್ತಾ, ಮೇಲ್ ಮಾಡುತ್ತಾ ಪ್ರೋತ್ಸಾಹಿಸಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವೂ ನಂಗೊಂದು ಬ್ಲಾಖುಷಿ ತಂದಿಟ್ಟಿದೆ. ಬಂದ, ಬಂದು ಹೋದ, ಮತ್ತೆ ಬರುತ್ತಿರುವ, ಮತ್ತು ಇನ್ನು ಬರಲಿರುವ ಎಲ್ಲರಿಗೂ ನಮೋಃ ನಮಃ

ಸೋಮವಾರ, ಜೂನ್ 2

ಮಾಟಮಾಡಿಯಾದರೂ ಅಧಿಕಾರ ದಕ್ಕಿಸಿ ಕೊಟ್ಟೇನು

ಬಲ್ಲಿರೇನಯ್ಯಾ.........?

ಈ ಹರಿದ ಹಳ್ಳಿಗೆ ಯಾರೆಂದು ಕೇಳಿಬಲ್ಲಿರೀ......

ವೇದೇ ಡೌಗರೆಂದು ಕೇಳಿಬಲ್ಲೆವೂ........

ಬಂದಂತಹ ಕಾರ್ಯ......?

ಎಂತಹ ಕಾರ್ಯ.....? ನಮ್ಮಲ್ಲ ಕಾರ್ಯಗಳೂ ಬುಡಮೇಲಾದುವಲ್ಲವೇ.... ಯಾವ ಕಾರ್ಯ ಅನ್ನಲೀಗ....ಯಾವುದೇ ಕಾರ್ಯವೂ ಇಲ್ಲವೀಗ!!!!

ಎಂದಿನಂತೆ ಚುಮುಚುಮು ನಸುಕಿಗೆ ಎದ್ದು, ರಾಗಿಮುದ್ದೆ ಮೆದ್ದು, ಬೊಕ್ಕ ತಲೆಯನ್ನೊಮ್ಮೆ ಬಾಚಿ, ಬಿಳಿಯ ಉಡುಪನ್ನು ತೊಟ್ಟು, ಶಲ್ಯವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊದ್ದು, ಅದನ್ನು ಸ್ವಲ್ಪವೇ ಮೇಲೆತ್ತಿ ಇಣುಕಿ ನೋಡಿ ಯಾರಲ್ಲೀ..... ಎಂದು ಘರ್ಜಿಸಿದರು....

ಅಲ್ಲೇ ಸನಿಹದಲ್ಲಿ ಪೂಜೆ, ಹೋಮ, ಹವನ, ದೇವರ ಪ್ರಸಾದಗಳನ್ನು ಹಣೆ, ಕತ್ತು ಮತ್ತು ಸಂದುಸಂದುಗಳಿಗೆ ಜ್ಯೋತಿಷ್ಯರು ಹೇಳಿದಂತೆ ಮೆತ್ತಿಕೊಳ್ಳುವಲ್ಲಿ ನಿರತರಾಗಿದ್ದ ರಾವಣ್ಣ, ಯಾರೂ ಇಲ್ಲ ಪಿತಾಶ್ರೀ... ಎಂದು, ಎಂದಿನಂತೆ ಓಡಿ ಬರದೆ, ಅಲ್ಲಿಂದಲೇ ಅರುಹಿದರು।

ತನಯನೇ..... ಇದೇನಾಗಿ ಹೋಯ್ತು..... ನಮ್ಮ ಸಂಸಾರದ ರಾಜಕೀಯ.... ನಮ್ಮ ಪ್ರಜೆಗಳು ಹೀಗೂ ನಮಗೆ ಬುದ್ಧಿಕಲಿಸುವುದೇ.... ಛೇ...ಛೇ..... ನಮ್ಮ ಹಿಂಬಾಲಕರು, ಮುಂಬಾಲಕರು, ದೀವಟಿಗೆಯವರು... ಭಟ್ಟಂಗಿಗಳು ಎಲ್ಲ ಎಲ್ಲಿ... ಎಲ್ಲಿ ಹಾಳಾಗಿ ಹೋದರೂ... ಅದಿರಲಿ..... ನನ್ನ ಕುಮಾರ ಎಲ್ಲೀ.....?????

ಅಪ್ಪಾಜೀ..... ಕುಮಾರ ಆಚೆ ಮನೆಯಲ್ಲಿ ಕುಳಿತು ಹಿಡಿಹಿಡಿ ಶಾಪ ಹಾಕುತ್ತಿದ್ದಾನೆ..... "ಪಿತಾಶ್ರೀ ನನ್ನ ಮಾತುಕೇಳಲಿಲ್ಲ.... ಇಂದು ಮಿರಿಮಿರಿ ಮಿಂಚುತ್ತಿರುವ ಆ ರಾಡಿಯೂರಪ್ಪಗೆ, ಅಂದು ಛಾಪಾ ಕಾಗದದ ಶರಾಬತ್ತು ಕುಡಿಸಲು ಹೊರಡದಿರುತ್ತಿದ್ದರೆ, ಬೆನ್ನಿಗೆ ಚೂರಿ ಹಾಕದಿರುತ್ತಿದ್ದರೆ ಇಷ್ಟು ಬೇಗ ಚುನಾವಣೆಯೂ ಬರುತ್ತಿರಲಿಲ್ಲ॥ ನಾವು ಮಾಡಿದ ಕೆಲವು ಒಳ್ಳೆಕಾರ್ಯಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿರಲಿಲ್ಲ....." ಎಂದೆಲ್ಲಾ ಹಲುಬುತ್ತಾ... ಏಕಾಂಗಿಯಾಗಿ ವಟಗುಟ್ಟುತ್ತಿದ್ದಾನೆ ಅಪ್ಪಾಜೀ......

ಛೇ.....ಎಂಥಾ ಮೂರ್ಖನವನು. ಅವನ ಅದ್ದೂರಿಯ ಪಟ್ಟಾಭಿಷೇಕ ನೋಡದೆ ನಾನು ಸಾಯುವುದುಂಟೇ? ಕಳೆದ ಬಾರಿ ನಾನು ಕೋಪದ ನಾಟಕವಾಡಬೇಕಾಗಿ ಬಂದುದರಿಂದ ಆಕಾಶದೃಶ್ಯದ ಮೂಲಕವಷ್ಟೆ ಆತನ ಪಟ್ಟಾಭಿಷೇಕದ ಆ ಅದ್ಭುತ, ರಮಣೀಯ ಕ್ಷಣಗಳನ್ನು ನಮ್ಮ ಅಕ್ಷಿಗಳಲ್ಲಿ ತುಂಬಿಕೊಳ್ಳಬೇಕಾಯಿತು. ಕೊಂಚ ತಾಳ್ಮೆ ವಹಿಸಲೀ... ಕಂದಾ...... ನಾನಿಲ್ಲವೇ.... ಒಂದಿಷ್ಟು ಸಮಯ ಆತ ವಿಶ್ರಾಂತಿ ಪಡೆದು, ತನ್ನ ಇತರೇ ಕಾರ್ಯಗಳತ್ತ ಗಮನಹರಿಸಲೀ....... ಏನಿಲ್ಲವಾದರೆ ಮಾಟಮಾಡಿಯಾದರೂ ನಿಮಗಿಬ್ಬರಿಗೆ ಅಧಿಕಾರ ಧಕ್ಕಿಸಿ ಕೊಟ್ಟೇನು... ನಮ್ಮ ಪಟ್ಟದರಸಿ ಮಹಾರಾಣಿ ಚಿನ್ನಮ್ಮನನ್ನು ಬಲಬದಿಯಲ್ಲಿ ಕುಳ್ಳಿರಿಸಿಕೊಂಡು, ನನ್ನ ಕುಲಪುತ್ರನ ಪಟ್ಟಾಭಿಷೇಕವನ್ನು ಕಣ್ಣಲ್ಲಿ ತುಂಬಿಕೊಳ್ಳುವೆ. ಮಗನೇ... ಚಿಂತೆಬೇಡ.... ಚಿಂತೆ ಬೇಡ..... ಚಿಂತೆ ಬೇಡ.....
ಪುತ್ರನೇ..... ಯೂರೂ ಇತ್ತ ಕಡೆ ತಲೆಹಾಕಿಯೂ ಮಲಗಲು ಇಚ್ಛಿಸದ ಈ ಅಮಾವಾಸ್ಯೆಯ ಸಮಯದಲ್ಲೀ.... ಅದಾರು? ಅದಾರು ಅಲ್ಲಿ ಸುಳಿದಾಡುತ್ತಿರುವುದೂ...?

ಅಪ್ಪಾಜೀ...ಭಾಗವತರು। ಇಲ್ಲಿ ಬರಬೇಡಿ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಮ್ಮ 'ಆಟ' ಸದ್ಯಕ್ಕಿಲ್ಲ ಅಂದರೂ ಹಲ್ಲುಕಿರಿಯುತ್ತಾ ಅಲ್ಲೇ ನಿಂತಿದ್ದಾರೆ....

ಏನೂ...? ಭಾಗವತರೇ...? ಅವರಿಗೆ ಇಲ್ಲೇನು ಕೆಲಸ? ತೊಲಗಲ್ಯಾಚೆ... ನಮಗೇನೂ ಈಗ ಒಡ್ಡೋಲಗದ ಇರಾದೆ ಇಲ್ಲ...
ಹೇಳಿದರೆ ಕೇಳುತ್ತಿಲ್ಲ ಪಿತಾಶ್ರೀ... ಒಂದಿಷ್ಟು ಅರ್ಥಗಾರಿಕೆಯೊಂದಿಗೆ ಸಾಗಹಾಕಿ...

ಹೂಂ... ಹೂಂ....

ಸ್ವಾಮೀ ವೇದೇ ಡೌಗರೇ..... ನಮ್ಮನ್ನು ಬಿಟ್ಟು ಅದ್ಯಾರು ಈ ಸಾಮ್ರಾಜ್ಯದ ಆಡಳಿತದ ಚುಕ್ಕಾಣಿಯನ್ನು, ಅದು ಹೇಗೆ ಹಿಡಿಯುತ್ತಾರೋ ನೋಡೇ ಬಿಡುತ್ತೇನೆ; ಈ ಬಾರಿಯೂ ಅರಸು ಆಯ್ಕೆಯ ಸೂತ್ರ ನಮ್ಮ ಕೈಯಲ್ಲೇ ಇರುತ್ತದೆ ಎಂದು ತೊಡೆತಟ್ಟಿ ಹೇಳಿದ ನೀವು ಮತ್ತು ನಿಮ್ಮ ಪಕ್ಷ ಮಣ್ಣುತಿಂದದ್ದಾದರೂ ಹೇಗೇ.....?

ಇಂಥಹ ಅಧಿಕ ಪ್ರಸಂಗದ ಮಾತುಗಳು ಬರುತ್ತವೆ ಎಂದೇ ನಿಮ್ಮಂತಹವರ ಬಳಿ ನಾವು ಮಾತಾಡಲಿಚ್ಚಿಸುವುದಿಲ್ಲ। ಮಣ್ಣುತಿಂದದ್ದು ಮಣ್ಣಾಂಗಟ್ಟಿ!! ಮಣ್ಣಿನ ಮಗನಾದ, ನಯವಿನಯವೇ ಮೂರ್ತಿವೆತ್ತಂತಿರುವ ನಮ್ಮ ಬಾಯಲ್ಲಿ ಅಂತಹ ಅಹಂಕಾರದ ಮಾತುಗಳು ಬರುವುದುಂಟೇ....? ಇದೆಲ್ಲವೂ ನಿಮ್ಮ ತುತ್ತೂರಿಯವರ ಅಪಪ್ರಚಾರದ ಫಲವಷ್ಟೆ. ನಿಮ್ಮಗಳ ಮುಸುಡಿಯನ್ನೂ ನೋಡಲು ನಾವು ಬಯಸುವುದಿಲ್ಲ....

ನಿಧಾನಾ.... ನಿಧಾನಾ.... ಡೌಗರೇ ನೀವು ಅಂದೊಮ್ಮೆ ಈ ಅಖಂಡ ಭರತಖಂಡದ ಸಾಮ್ರಾಟನಾಗಿ ಗದ್ದುಗೆ ಏರಿದಾಗ ಇದೇ ತುತ್ತೂರಿಯವರು ನಿಮ್ಮನ್ನು ವಾಚಾಮಗೋಚರ ಹೊಗಳಲಿಲ್ಲವೇ.....? ನಿಮ್ಮನ್ನು ಹೊಗಳುವ ಭರದಲ್ಲಿ 'ಡೌಗರ ಡೌಗ' ಎಂದೆಲ್ಲ ಬರೆದ ಕೈಗಳು, ಬಳಿಕದ ನಿಮ್ಮ ಗ್ರಾಮಪಂಚಾಯತ್ ಅಧ್ಯಕ್ಷ ಮಟ್ಟಕ್ಕಿಳಿದ ಕೊಳಕು ರಾಜಕೀಯ ನೋಡಿ ವಾಕರಿಸಿದ್ದಾರೆ....

ಭಾಗವತರೇ.... ಬಾಯಿಗೆ ಬಂದಂತೆ ವಟಗುಟ್ಟಬೇಡಿ.... ವಾಕರಿಗೆ ಬಂದವರು ವಾಂತಿ ಮಾಡಿಕೊಳ್ಳಲಿ ನಮಗೇನಿಲ್ಲ। ಆಗ ನಾವು ನೆರೆಯ ಬಾಂಗ್ಲಾದ ನದಿನೀರು ಸಮಸ್ಯೆಯನ್ನು ಸರಿಪಡಿಸಿದ್ದೆವು. ನಾವು ನರ್ಕಾಟಕದ ಸಾಮಂತರಾಗಿದ್ದವೇಳೆ ಇಂದು ಮೆರೆಯುತ್ತಿರುವ ಇದೇ ಕೋಮುವಾದಿಗಳು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹುಟ್ಟುಹಾಕಿದ್ದ ಧ್ವಜಹಾರಿಸುವ ಸಮಸ್ಯೆಯನ್ನು ಪರಿಹರಿಸಿದ್ದೆವು.... ಇಂತೆಲ್ಲ ಒಳ್ಳೆ ಕೆಲಸಗಳನ್ನು ನಾವು ಮಾಡಿದ್ದೆವು.... ಅದನ್ನು ಹೇಳಿರುತ್ತೀರಿ ಅಷ್ಟೆ. ಅದರಲ್ಲಿ ಹೊಗಳಿಕೆ ಏನು ಬಂತು?

ಇರಲಿ.... ಹರದನ ಹಳ್ಳಿಯ ಸಾಮ್ರಾಟರೇ..... ಜಾತ್ಯತೀತವಾದಿಯಾಗಿರುವ ನೀವು, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆದೆ ಎಂದು ಊರೀಡಿ ಸಾರುತ್ತಿದ್ದೀರಿ..... ಆದರೆ ರಾಜಕೀಯ ಬಲ್ಲವರು, ನಿಮ್ಮೆಲ್ಲ ನಡೆಗಳನ್ನು ಗಮನಿಸುವವರು ಬೇರೆಯದನ್ನೇ ಹೇಳುತ್ತಿದ್ದಾರಲ್ಲವೇ....?

ಏನು ಹೇಳತ್ತಿದ್ದಾರೆ ನಿಮ್ಮ ಕರ್ಮ....?

ಡೌಗರೇ... ಇದೇ, ಇದೇ, ನಿಮ್ಮ ಈ ದುರಹಂಕಾರ ಮತ್ತು ಅತಿ ಕೋಪ ಎಲ್ಲ ಕೆಡಿಸಿತು। ನಿಮ್ಮ ಸುಪುತ್ರ ಒಪ್ಪಿದಂತೆ ಆ ಕಮಲ ಮುಖಿಗಳಿಗೆ ಅಧಿಕಾರ ಬಿಟ್ಟುಕೊಡುತ್ತಿದ್ದರೆ ಇಂದು ಚುನಾವಣೆಯೂ ಬರುತ್ತಿರಲಿಲ್ಲ..... ಆ ಭಾಜಪಗೆ ಈ ನಮೂನೆಯ ಅನುಕಂಪ, ಬೆಂಬಲವೂ ಸಿಗುತ್ತಿರಲಿಲ್ಲ..... ಇದಕ್ಕೆಲ್ಲ ನೀವೇ ಕಾರಣ, ಕೋಮುವಾದಿಗಳೊಂದಿಗೆ ನಿಮ್ಮದು ಒಳಒಪ್ಪಂದ ಅನ್ನುತ್ತಾ ಕ್ಯಾಕರಿಸುತ್ತದ್ದಾರಲ್ಲಾ......

ಶಿವಶಿವಾ..... ಶಿವಶಿವಾ.... ಶಿವಶಿವಾ ನನ್ನ ಕಿವಿಗಳು ಇದೇನನ್ನು ಕೇಳುತ್ತಿವೆ.....? ಅದಕ್ಕೇ ಅನ್ನೋದು। ಉತ್ತಮರಿಗೆ ಇದು ಕಾಲವಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ, ಪ್ರಜೆಗಳ ಹಿತದೃಷ್ಟಿಯಿಂದ ಮಾತ್ರ ನಾವು ಆ ಕೇಸರಿಯವರಿಗೆ ಅಧಿಕಾರ ನೀಡಲು ಒಪ್ಪಿರಲಿಲ್ಲ...... ನೋಡುತ್ತಿರಿ ಭಾಗವತರೆ...., ಫೀನಿಕ್ಸ್ ಎಂಬ ಹಕ್ಕಿಯ ಕಥೆ ಕೇಳಿರಬಹುದು ನೀವೂ.... ಬೂದಿಯಿಂದ ಮತ್ತೆ ಎದ್ದು ಬಂದ ಹಕ್ಕಿಯದು. ಆ ಹಕ್ಕಿಯಂತೆ ಮತ್ತೆ ಎದ್ದು ಬರಲು ನಾವು ಮತ್ತು ನಮ್ಮ ಮಕ್ಕಳು ಈಗ ಬೂದಿಯಲ್ಲಿ ಬಿದ್ದುಬಿದ್ದು ಹೊರಳಾಡುತ್ತಿದ್ದೇವೆ....

ಇರಲಿ ನಿಮಗೆ ಅಧಿಕಾರ ಸಿಗಲಿಲ್ಲವೆಂದು ಇಡಿಯ ರಾಜ್ಯಕ್ಕೆ ರಾಜ್ಯವೇ ಸಂತಸದಿಂದಿದೆ... ನೀವು ಎಲ್ಲೂ ಮೀಸೆ(ಇಲ್ಲದ) ತೂರಲಾಗದಂತೆ ಪ್ರಜೆ ಎಂಬ ಮಹಾಪ್ರಭು ತನ್ನ ಪರಮೋಚ್ಛ ಅಧಿಕಾರ ಚಲಾಯಿಸಿ ಷರಾ ಬರೆದಿದ್ದಾನೆ.....
ನೀವು ಮಣ್ಣು ಮುಕ್ಕಿಸಹೊರಟ ರಾಡಿಯೂರಪ್ಪರಿಗೆ ನ ಭೂತೋ... ಎಂಬಂತೆ ಅದ್ಧೂರಿಯ ಭಾರೀ ಸಭೆಯೊಂದಿಗೆ ಪಟ್ಟಾಭಿಷೇಕವಾಗಿದೆ.... ಇದನ್ನು ಕಂಡು ನಿಮಗೇನನ್ನಿಸಿತು.....?

ಇಂಥಾ ಪ್ರಶ್ನೆಗಳನ್ನು ಕೇಳುತ್ತಿರುವ ನಿಮ್ಮ ನಾಲಿಗೆ ಸೀದು ಹೋಗ...!!!! ನಮ್ಮ ಪುತ್ರ ಕುಮಾರಕಂಠೀರವನ ಪಟ್ಟಾಭಿಷೇಕವಾಗಬೇಕಿತ್ತು। ಅಂತಾದ್ದರಲ್ಲಿ ಆ ರಾಡಿಯೂರಪ್ಪನ ಮೆರೆದಾಟ ನೋಡಿದರೆ ಕರುಳು ಹಿಂಡಿದಂತಾಗುವುದಿಲ್ಲವೇ.... ಆ ದೃಶ್ಯವನ್ನು ನಮ್ಮ ಕಣ್ಣುಗಳು ನೋಡಿಯಾವಾದರೂ ಹ್ಯಾಗೆ....? ಅದಕ್ಕೇ ಅಲ್ಲವೇ ಮುಖಕಾಣದಂತೆ ತಲೆಮೇಲೆ ನಮ್ಮದೇ ಶಲ್ಯವನ್ನು ಹೊದ್ದು ಕುಳಿತಿರುವುದೂ..... ಅರ್ಥಗಾರಿಕೆ ಸಾಕೂ.... ಜಾಗಟೆ ಕೆಳಗಿಡಿ. ನನ್ನ ಮಕ್ಕಳಿಗೇ ಒಳಿತಾಗಲೀ... ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳಹಾಡಿ....

ಅರ್ಥವಾಯಿತೂ..... ಅರ್ಥವಾಯಿತೂ..... ಮತ್ತೆಂದಾದರೂ ಒಡ್ಡೋಲಗ ಮಾಡೋಣವಂತೆ.... ಸರ್ವರಿಗೂ ಒಳಿತಾಗಲೀ...

ಮಂಗಳಂ!