ಭಾನುವಾರ, ನವೆಂಬರ್ 13

ಗರ್ಭಿಣಿ ಐಶ್ವರ್ಯಾಳೂ ಮಾಧ್ಯಮಗಳ ಪ್ರಸವ ವೇದನೆಯೂ

(ಸುಳ್ಳು ಸುಳ್ಳೇ ಸುದ್ದಿ ಮೂಲದಿಂದ)
ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ, ಬಾಲಿವುಡ್ ಪ್ರಥಮ (ಕುಟುಂಬದ) ಸೊಸೆ ಐಶ್ವರ್ಯಾ ರೈ ಬಚ್ಚನ್ ದಿನ ತುಂಬಿದ ಬಸುರಿಯಾಗಿದ್ದರೆ, ಇತ್ತ ಕೆಲ ಮಾಧ್ಯಮಗಳು ಹೆರಿಗೆ ಬೇನೆ ಭರಿಸಲಾಗದೇ ಒದ್ದಾಡುತ್ತಿವೆ ಎಂಬುದಾಗಿ ನಮ್ಮ ಸುಳ್ಳುಸುಳ್ಳೇ ಸುದ್ದಿ ಬ್ಯೂರೋ ತಿಳಿಸಿದೆ.

ತನ್ನ ಸೊಸೆ ಬಸುರಿ ಎಂಬುದಾಗಿ ಅಮಿತಾಭ್ ಬಚ್ಚನ್ ಟ್ವೀಟಿದಂದಿನಿಂದ ಮಾಧ್ಯಮಗಳ ಸಂಭ್ರಮ ಹೇಳಲಾಗುತ್ತಿಲ್ಲ. ಬಸುರಿ ಹೆಣ್ಣುಮಗಳು ತಪಾಸಣೆಗಾಗಿ ಯಾವ ಆಸ್ಪತ್ರೆಗೆ ಹೋದಳು, ಆಕೆಯ ಬಯಕೆ ಏನು, ಏನು ತಿಂದಳು, ಹೇಗೆ ಬಂದಳು, ಸೀಮಂತಕ್ಕೇನು ಗಮ್ಮತ್ತು, ಯಾರ್ಯಾರು ಬಂದಿದ್ದರು, ಯಾವ ಉಡುಪನ್ನು ಹೇಗೆ ದೇಹಾಕಾರಕ್ಕೆ ಸರಿಯಾಗಿ ಹೊಲಿಯಲಾಗಿದೆ, ಯಾರು ವಿನ್ಯಾಸಗೊಳಿಸಿದ್ದಾರೆ ಎಂಬ ತನಿಖಾ ಸುದ್ದಿಗಳು ಮಾಧ್ಯಮಗಳ ಗರಿಷ್ಠ ಜಾಗ ತಿಂದಿವೆ.


ಈ ಮಧ್ಯೆ ಹೆಚ್ಚಿನೆಲ್ಲಾ ಪತ್ರಿಕೆಗಳ ಸುದ್ದಿ ಸಂಪಾದಕರು ತಮ್ಮೆಲ್ಲ ವರದಿಗಾರರಿಗೆ ಐಶ್ವರ್ಯಾ ಬಸುರು, ಹೆರಿಗೆ, ಬಾಣಂತನಗಳಿಗೆ ಸಂಭಂದಿಸಿದಂತೆ ಯಾವುದೇ ಸುದ್ದಿ ಮಿಸ್ ಆಗಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬೆಲೆ ಏರಿಕೆ, ಹಸಿವು, ಬಡತನ, ಶಿಶುಮರಣ, ಬಡವ - ಬಲ್ಲಿದರ ನಡುವೆ ಹೆಚ್ಚುತ್ತಿರುವ ಅಂತರ ಮುಂತಾದ ಸುದ್ಧಿಗಳು ಯಾವಾಗಲೂ ಇರುವಂತಹುದೇ ಆಗಿದ್ದು ಈ ಕುರಿತು ಯಾವಾಗ ಬೇಕಿದ್ದರೂ ವರದಿ ಮಾಡಬಹುದಾಗಿರುವ ಕಾರಣ
ಸುದ್ದಿಗಾರರೂ ಸಹ, ಐಶ್ವರ್ಯಾ ಹೆರಿಗೆಯ ಕುರಿತೇ ಗಮನ ಕೇಂದ್ರೀಕರಿಸಲು ಟೊಂಕ ಕಟ್ಟಿದ್ದಾರೆಂಬುದಾಗಿ ಕಾರ್ಯಮರೆತ ಪತ್ರಕರ್ತರ ಸಂಘದ ಅನಧಿಕೃತ ಮೂಲಗಳು ತಿಳಿಸಿವೆ. ಯಾಕೆಂದರೆ ಐಶ್ವರ್ಯಾ ಬಸಿರು, ಬಾಣಂತನಗಳು ಅಪರೂಪದಲ್ಲಿ ಅಪರೂಪದ ಪ್ರಸಂಗವಾಗಿದ್ದು ಈ ಕುರಿತು ನಿರ್ಲಕ್ಷ್ಯ ವಹಿಸಲು ಛಾನ್ಸೇ ಇಲ್ಲ ಎಂದು ಅವೇ ಮೂಲಗಳು ಸ್ಪಷ್ಟ ಪಡಿಸಿವೆ.
 

ಅದಾಗ್ಯೂ, ಐಶ್ವರ್ಯಾ 11.11.11 ರಂದೇ 11.11ಕ್ಕೇ ಪ್ರಸವಿಸಲಿದ್ದಾರೆ ಎಂಬುದಾಗಿ ನಂಬಿದ್ದವರಿಗೆ ಇಂತಹ ಯಾವುದೇ ಅಧಿಕೃತ ಸುದ್ದಿ ಇಲ್ಲದೆ ಪ್ರಸವ ವೇದನೆ ಆರಂಭವಾಗಿದೆ. ಆದರೂ ಸಹ ಐಶ್ವರ್ಯಾಳ ಬಯಕೆ ಏನು ಅದನ್ನು ತೀರಿಸಲು ಅಭಿಷೇಕ್ ಬಚ್ಚನ್ ಎಲ್ಲೆಲ್ಲ ಓಡಾಡಿದರು ಎಂಬ ಕುರಿತು ಓದುಗರ ಕುತೂಹಲ ತಣಿಸಲು ಪಾವ್ ಬಾಜಿಗೆ ಹಿಂಡಿದ ನಿಂಬೆ ಹಣ್ಣಿನ ಒಂದು ಹೋಳೂ ಮಿಸ್ಸಾಗದಂತೆ ವರದಿ ಮಾಡಿ ಭೇಷ್ ಅನ್ನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಐಶ್ ಹೆರಿಗೆ ಆಸ್ಪತ್ರೆಯ ನರ್ಸ್‌ಗಳ ಮುಷ್ಕರದ ಸುದ್ದಿಯೂ ತನ್ನದೇ ಆದ ತೂಕ ಗಳಿಸಿಕೊಂಡಿತು.

ಈ ಮಧ್ಯೆ, ಮಾಧ್ಯಮಗಳ ಇಂತಹ ಸುದ್ದಿ ದಾಹದಿಂದ ರೇಜಿಗೆ ಹುಟ್ಟಿರುವ ಬಚ್ಚನ್ ಕುಟುಂಬವು ಐಶ್ ಪ್ರಸವವಾಗಿದ್ದರೂ ಸುದ್ದಿ ಮಾಡದೇ ತಮ್ಮ ಗೌಪ್ಯತೆ ಕಾಪಾಡಿಕೊಂಡಿದೆ ಎಂಬ ಊಹಾಪೋಹಗಳೂ ಹರಡಿವೆ ಎಂದು ಬಲ್ಲದ ಮೂಲಗಳು ಹೇಳಿವೆ.

ಇವುಗಳನ್ನೆಲ್ಲ ಓದಿಓದಿ ಐಶ್ ಭಾವಚಿತ್ರವನ್ನು ಹಾಕಿಕೊಂಡಿರುವ ಶಾನಿಯ ಡೆಸ್ಕ್ ತಾನೊಂದು ಸುದ್ದಿಮಾಡದಿದ್ದರೆ, ಚೆನ್ನಾಗಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು, ಸುದ್ದಿಗಳನ್ನು ಬಗೆಯುತ್ತಿರುವಾಗ ಐಶ್ ಹೆರಿಗೆಯ ನೇರ ಪ್ರಸಾರ ಕುರಿತ ಮಾಹಿತಿ ಲಭಿಸಿದ್ದು, ಆ ಖೊಟ್ಟಿ ಸುದ್ದಿಯನ್ನು ಕದ್ದು ಇಲ್ಲಿ ಸೇರಿಸಿಕೊಳ್ಳಲಾಗಿದೆ.

ಐಶ್ವರ್ಯಾ ರೈ ಬಚ್ಚನ್ ಹೆರಿಗೆ ನೇರಪ್ರಸಾರ
ಐಶ್ವರ್ಯಾ ರೈ ಬಚ್ಚನ್ ಹೆರಿಗೆ ನೇರಪ್ರಸಾರವಾಗಲಿದ್ದು ಇದರ ಹಕ್ಕನ್ನು ಹೊಸದಾಗಿ ಆರಂಭವಾಗಿರುವ ನ್ಯೂಸ್ ಒನ್ ಎಂಬ ದೂರದರ್ಶನ ವಾಹಿನಿಯು 200 ಕೋಟಿ ರೂಪಾಯಿ ತೆತ್ತು ಪಡೆದಿರುವುದಾಗಿ ವರದಿಯೊಂದರಲ್ಲಿ ಹೇಳಲಾಗಿದೆ. ಮುಂಬೈಯಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಹೆರಿಗೆಯ ನೇರಪ್ರಸಾರವಾಗಲಿದೆ ಎಂಬುದಾಗಿ ಫೇಕಿಂಗ್ ನ್ಯೂಸ್ ಎಂಬ ಅಂತರ್ಜಾಲ ಖೋಟಾ ಸುದ್ದಿ ಪತ್ರಿಕೆ ವರದಿ ಮಾಡಿದೆ. ಪ್ರಮುಖ ಟಿವಿ ವಾಹಿನಿಗಳ ಸಂಪಾದಕರುಗಳು ಕೆಲದಿನಗಳ ಹಿಂದೆ ಐಶ್ವರ್ಯಾಳ ಹೆರಿಗೆ ಕುರಿತ ಸುದ್ದಿಪ್ರಸಾರಕ್ಕೆ ಸಂಬಂಧಿಸಿದಂತೆ ಸಂಯಮ ವಹಿಸ ಬೇಕಾದ ಕುರಿತು ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಮುರಿದು ಹೊಸ ವಾಹಿನಿಯೊಂದು ನೇರ ಪ್ರಸಾರಕ್ಕೆ ಹೊರಟಿರುವುದು ಇತರೇ ವಾಹಿನಿಗಳು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಪ್ರಪ್ರಥಮವಾಗಿ ತಮ್ಮ ವಾಹಿನಿಯಲ್ಲೇ ಐಶ್ ಪ್ರಸವದ ಬ್ರೇಕಿಂಗ್ ನ್ಯೂಸ್ ಪ್ರಕಟವಾಗಬೇಕೆಂಬ ಇರಾದೆ ಹೊಂದಿದ್ದ ಟೈಮ್ಸ್ ನೌ "ಮಗು ಜನನದ ಪ್ರಸಾರ ಹಕ್ಕುಗಳ ಬೆಲೆ ಅಧಿಕವಾಯಿತೇ" ಎಂಬ ಕುರಿತು ನ್ಯೂಸ್ ಆ....ರ್(News hour) ಡಿಬೇಟ್ ಕೈಗೊಂಡಿತು. ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಚರ್ಚಾ ವೇದಿಕೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 11ಕ್ಕೇರಿಸಿದ್ದರು ಮತ್ತು ಐಶ್ವರ್ಯಾಳ ಹೆರಿಗೆ ಹಕ್ಕುಗಳ ಮೇಲಿನ ಬೆಲೆ ನಿಜವಾಗಿಯೂ ದುಬಾರಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಈ ಅಭಿಪ್ರಾಯವನ್ನು ಡಿಬೇಟ್‌ನಲ್ಲಿ ಮಾತನಾಡಲು ಅವಕಾಶ ಸಿಕ್ಕಿದ ಮೂವರಲ್ಲಿ ಇಬ್ಬರು ಬೆಂಬಲಿಸಿದ್ದು, ಇದನ್ನು ಬಹುಸಂಖ್ಯಾತ ಆಭಿಪ್ರಾಯವೆಂದು ರೂಪಿಸಲಾಗಿದೆ.

ಎನ್‌ಡಿಟಿವಿಯು ತನ್ನ ಸಮೂಹ ಸಂಪಾದಕಿ ಬರ್ಖಾ ದತ್ ನೇತೃತ್ವದಲ್ಲಿ ನೈತಿಕ ಸಮಿತಿಯನ್ನು ರಚಿಸುವುದಾಗಿ ಮತ್ತು ಸದರೀ ಸಮಿತಿಯು ನ್ಯೂಸ್ ಒನ್ ವಾಹಿನಿಯ ನೇರಪ್ರಸಾರವು ಅನೈತಿಕವೇ ಹಾಗೂ ಈ ಹೊಸ ವಾಹಿನಿಯನ್ನು ಬಾನುಲಿ ಸಂಪಾದಕರ ಸಂಘಟನೆ (ಬಿಇಎ) ಯಿಂದ  ಅಮಾನತುಗೊಳಿಸಬೇಕೇ ಎಂಬ ಕುರಿತು ವರದಿ ಸಲ್ಲಿಸಲಿದೆ.


ಈ ಮಧ್ಯೆ ಸಿಎನ್ಎನ್-ಐಬಿಎನ್ ಪ್ರತಿಕ್ರಿಯೆ ಕುತೂಹಲಕಾರಿಯಾಗಿದೆ. ಸಾಗರಿಕಾ ಘೋಸ್ ಅವರು ತಮ್ಮ ವಾಹಿನಿಯೂ ಸಹ ಮುಂದಿನ ವರ್ಷದಲ್ಲಾದರೂ ಸಹ ಜಗದೇಕ ಸುಂದರಿ ತಾರೆಯ ಹೆರಿಗೆಯ ನೇರ ಪ್ರಸಾರ ಮಾಡಲಿದೆ ಎಂದು ಹೇಳಿದ್ದರೆ, ವಾಹಿನಿಯ ಮುಖ್ಯ ಸಂಪಾದಕ ರಾಜದೀಪ್ ಸರ್ದೇಸಾಯ್ ಅವರು ಈ ನಡೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ.

"ಸಾವಿರಾರು ಮಕ್ಕಳು ದಿನನಿತ್ಯವೆಂಬಂತೆ ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿದ್ದಾರೆ. ಈ ಕುರಿತು ಯಾವುದೇ ವರದಿ ಇಲ್ಲ. ಒಂದು ಸೆಲೆಬ್ರಿಟಿ ಮಗುವಿನ ಜನನದ ನೇರಪ್ರಸಾರ! ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ, ಶುಭರಾತ್ರಿ" ಎಂಬುದಾಗಿ ತಮ್ಮ ಐದು ಶುಭರಾತ್ರಿ ಟ್ವೀಟ್‌ಗಳಲ್ಲೊಂದರಲ್ಲಿ ಹೇಳಿರುವುದಾಗಿಯೂ ಸಹ ಫೇಕಿಂಗ್ ನ್ಯೂಸ್ ಹೇಳಿದೆ.

ಪ್ರಸಾರ ಹಕ್ಕಿನ ಕುರಿತ ಬಚ್ಚನ್ ಕುಟುಂಬದ ಈ ನಿರ್ಧಾರವು  ಇತರೇ ವಾಹಿನಿಗಳಲ್ಲಿ ಅಸಮಾಧಾನ ಹುಟ್ಟಿಸಿರುವಂತೆಯೇ ಬ್ರೀಚ್ ಕ್ಯಾಂಡಿ ಆಸ್ಪತ್ರೆಯೂ ಸಹ ಮುನಿಸಿಕೊಂಡಿದ್ದು, ಪ್ರಸಾರ ಹಕ್ಕಿನ ಸ್ವಲ್ಪ ಮೊತ್ತವು ಆಸ್ಪತ್ರೆಯ ಟ್ರಸ್ಟ್‌ಗೆ ಹೋಗಬೇಕಿತ್ತು ಮತ್ತು ಈ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಬೇಕಿತ್ತೆಂಬುದು ಆಸ್ಪತ್ರೆ ಬಯಕೆಯಾಗಿತ್ತು ಎಂಬುದಾಗಿ ವರದಿ ತಿಳಿಸಿದೆ.

"ಕಾರ್ಯಕ್ರಮದಲ್ಲಿ ಇತರೇ ಸೆಲೆಬ್ರಿಟಿಗಳನ್ನು ಸೇರಿಸಿಕೊಳ್ಳಬಹುದಿತ್ತು, ಇವರು ಆಸ್ಪತ್ರೆಗೆ ಭೇಟಿ ನೀಡುವ ವೇಳೆ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಳ್ಳಬಹುದಿತ್ತು. ಇದು ಪ್ರಸಾರ ಹಕ್ಕಿನ ಮೌಲ್ಯವನ್ನು ವರ್ಧಿಸುತ್ತಿತ್ತು ಮತ್ತು ಇಂಡಸ್ಟ್ರಿಗೆ ಉತ್ತಮವಾದ ಬಿಸ್ನೆನ್ ಒದಗಿಸುತ್ತಿತ್ತು ಎಂಬದಾಗಿ ಬಾಲಿವುಡ್ ವಿಶ್ಲೇಷಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ" "ಇಷ್ಚಕ್ಕೂ ಈ ಪರಿಕಲ್ಪನೆ ಹೊಸದೇನೂ ಅಲ್ಲ" ಅಂದಿರುವ ಅವರು "ಅಮೀರ್ ಖಾನ್ ತನ್ನ ತ್ರೀ ಈಡಿಯೇಟ್ಸ್ ಚಿತ್ರದಲ್ಲಿ ಶಿಶು ಜನನದ ಕುರಿತು ವೆಬ್ ಕ್ಯಾಮ್ ಮೂಲಕ ನೇರ ಪ್ರಸಾರ ತೋರಿದ್ದರು" ಎಂಬುದಾಗಿಯೂ ಹೇಳಿದ್ದಾರೆಂದು ವರದಿ ತಿಳಿಸಿದೆ.

3 ಕಾಮೆಂಟ್‌ಗಳು:

  1. ಶಾನಿಯವರಿಂದ ಸುಳ್ಳು ಸುದ್ದಿ ಕೇಳದೇ ಬಹಳ ದಿನಗಳಾದವಲ್ಲ ಎಂದು ಈ ಓದುಗನು ಚಡಪಡಿಸುತ್ತಿರುವಾಗಲೇ,.....ತಗೋ!.....ಭಯಂಕರ ಬ್ರೆಕಿಂಗ್ ನ್ಯೂಜ್ ಕೊಟ್ಟೇಬಿಟ್ಟಿರಿ! ಓದುಗರ ಪರವಾಗಿ ನಿಮಗೆ ವರ್ಷದ ಅತ್ಯುತ್ತಮ ಫೇಕ್ ನ್ಯೂಜ್ ಪತ್ರಿಕಾಕರ್ತೆ ಎನ್ನುವ ಬಿರುದನ್ನು ಕೊಡಮಾಡುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ.

    ಪ್ರತ್ಯುತ್ತರಅಳಿಸಿ
  2. @ಸುನಾಥ್ ಕಾಕಾ,
    ತಾವು ದಯಪಾಲಿಸಿರುವ 'ಬಿದಿರು' ತಲೆಭಾರ ಉಂಟು ಮಾಡಿದೆ!

    @ಸುಬ್ರಮಣ್ಯ ಸರ್,
    :-) :-)

    ಪ್ರತ್ಯುತ್ತರಅಳಿಸಿ