ಭಾನುವಾರ, ಜುಲೈ 13

ಕಪಾಳಕ್ಕೆ ಬಿಗಿಸ್ಕೊಂಡು ಹಲ್ಲುದುರಿಸ್ಕೋ

ಡೆಂಟಿಸ್ಟ್ ಬಳಿ ಹೋಗಬೇಕು ಎನ್ನುತ್ತಾ ಒಂದು ಗಂಟೆ ಪರ್ಮಿಷನ್ ಕೇಳ್ತಿದ್ದೆ. ಅದಕ್ಯಾಕೆ ಡೆಂಟಿಸ್ಟ್ ಬಳಿ ಹೋಗ್ತಿಯಾ, ಹೇಗಿದ್ದ್ರೂ ಜಗಳಗಂಟಿ, ಯಾರ ಬಳಿಯಾದರೂ ಚೆನ್ನಾಗಿ ಜಗಳಮಾಡಿ ಕಪಾಳಕ್ಕೆ ಬಿಗಿಸ್ಕೊಂಡು ಹಲ್ಲುದುರಿಸ್ಕೋ ಅಂತ ಸಲಹೆ ಕೊಟ್ಟರು ನನ್ನ ಸಹೋದ್ಯೋಗಿ ಮಿತ್ರ. ಅವರ ಸಲಹೆ ಚೆನ್ನಾಗೇ ಇತ್ತಾದರೂ, ಹಲ್ಲೂ, ದವಡೆಯೂ ನನ್ನದಾದ ಕಾರಣ ನೋವನ್ನು(ಹಲ್ಲು) ಒಳಗಿರಿಸಿಕೊಂಡು, ನಗುವನ್ನು ಮಾತ್ರ ಹೊರಸೂಸಿದೆ.


ಎತ್ತ ಕಡೆಯಿಂದ ಎಣಿಸಿದರೂ ನನ್ನ ಬಾಯೊಳಗೆ 32 ಹಲ್ಲುಗಳು ಲೆಕ್ಕಕ್ಕೇ ಸಿಗುವುದಿಲ್ಲ. ಹೀಗಿರುವಾಗ ಇರೋ ಹಲ್ಲುಗಳನ್ನು ಉದುರಿಸಿಕೊಳ್ಳೋ ಬದಲಿಗೆ, ಹೇಗಾದರೂ ಮಾಡಿ ಉಳಿಸಿಕೊಳ್ಳೋ ಅನಿವಾರ್ಯತೆಗೆ ಬಿದ್ದಿದ್ದೇನೆ. ಇಷ್ಟಕ್ಕೂ, ನಾನೊಮ್ಮೆ ಬಾಯ್ಬಿಟ್ಟರೆ ಸಾಕು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಲವು ಮಾಹಿತಿ ಸಿಕ್ಕೀತು. ಒಂಥರಾ ಡೆಂಟಲ್ ಎಕ್ಸಿಬಿಷನ್ ಇದ್ದಂತೆ. ಸಿಮೆಂಟ್ ಫಿಲ್ಲಿಂಗು, ಸಿಲ್ವರ್ ಫಿಲ್ಲಿಂಗು, ಕಾಂಪೊಸಿಟ್ ಫಿಲ್ಲಿಂಗ್, ರೂಟ್ ಕೆನಾಲ್, ಬ್ರಿಜ್ಜು, ಕ್ರೌನ್, ಕ್ಯಾಪ್ ಮುಂತಾದ ವೈವಿಧ್ಯತೆಯಿಂದ ಕೂಡಿದ್ದು ಏಕ ಬಾಯೊಳಗೆ ಅನೇಕ ವಿಷಯಗಳು ಪ್ರತಿಷ್ಠಾಪಿಸಲ್ಪಟ್ಟಿವೆ.


ಇಷ್ಟೆಲ್ಲ ಇದ್ದರೂ, ದಿನಕ್ಕೊಂದು ಕ್ಲೋವು ಜಗಿಯುತ್ತಿದ್ದರೂ, ನಿರಂತರ ಇಪ್ಪತ್ತನಾಲ್ಕುಗಂಟೆ ಕೀಟಾಣುಗಳ ಜತೆಗೆ ಹೋರಾಡುವ ಟೂಥ್ ಪೇಸ್ಟ್ ಬಳಸುತ್ತಿದ್ದರೂ ನಾನು ದಂತಕ್ಷಯದಿಂದ ಸಂಪೂರ್ಣ ಮುಕ್ತಳಾಗಲಿಲ್ಲ!


ನನಗೆ ತಿಳುವಳಿಕೆ ಮೂಡಿದಂದಿನಿಂದ ಈ ಹಲ್ಲುಗಳು ನೀಡಿದಷ್ಟು ತೊಂದರೆ ಇನ್ಯಾರೂ ಕೊಟ್ಟಿರಲಿಕ್ಕಿಲ್ಲ. ತುಂಬ ಚಿಕ್ಕವಳಿದ್ದಾಗ, ಅಂಗಿಯ ಕಿಸೆಯಲ್ಲಿದ್ದ ಪುಳಿಂಕಟೆ(ಹುರಿದ ಹುಣಸೆ ಬೀಜ)ಯನ್ನು ಬಲಹಾಕಿ ಜಗಿದು ಇಬ್ಭಾಗವಾಗಿಸಲು ಯತ್ನಿಸಿದ್ದೆ. ಪುಳಿಂಕಟೆ ಹುಡಿಯಾಗಲಿಲ್ಲ, ಬದಲಿಗೆ ಅಲ್ಲಾಡುತ್ತಿದ್ದ ಹಲ್ಲು ಕಿತ್ತು ಕೈಗೆ ಬಂದಿತ್ತು. ಹಾಲುಹಲ್ಲುಗಳೆಲ್ಲ ಉದುರಿದಾಗ ನಾವೆಲ್ಲ ನಮ್ಮಮ್ಮನ ಡೈರೆಕ್ಷನ್‌ನಂತೆ, ಉದುರಿದ ಹಲ್ಲಿಗೆ ಸೆಗಣಿ ಮೆತ್ತಿ, 'ಅಜ್ಜಿಜ್ಜ್ಯೇ.... ನನ್ನ ಹಳೆ ಹಲ್ಲು ತಕೋ; ನಿನ್ನ ಹೊಸ ಹಲ್ಲುಕೊಡು' ಎಂದು ಕಾಣದ ಅಜ್ಜಿಯನ್ನು ರಿಕ್ವೆಸ್ಟ್ ಮಾಡುತ್ತಾ, ಕಿತ್ತ ಹಲ್ಲುಗಳನ್ನು ಕಲ್ಲಿನಡಿಗೋ ಅಥವಾ ಮನೆಯ ಮಾಡಿಗೋ ಎಸೆಯುತ್ತಿದ್ದೆವು. ನಮ್ಮ ಈ ವಿನಂತಿಯನ್ನು ಮನ್ನಿಸಿದ ಮಾಯಗಾತಿ ಅಜ್ಜಿಯೇ ನಮಗೆ ಹೊಸ ಹಲ್ಲುಗಳನ್ನು ದಯಪಾಲಿಸುತ್ತಾಳೆ ಎಂದು ನಂಬಿದ್ದೆವು ಕೂಡಾ.


ಆಮೇಲೆ ನಾನು ದುಡಿಯಲು ಆರಂಭಿಸಿದ ಬಳಿಕ ನನ್ನ ದುಡಿಮೆಯಲ್ಲಿ ಬಾಯಿಗೆ(ಹಲ್ಲಿಗೆ) ದೊಡ್ಡ ಮೊತ್ತವನ್ನೇ ಹಾಕಿದ್ದೇನೆ. ಡೆಂಟಿಸ್ಟ್‌ ಬಳಿಗೆ ತೆರಳಿ ಆ..... ಎಂಬುದಾಗಿ ಬಾಯ್ದೆರೆದು ಗಂಟೆಗಟ್ಟಲೆ ಕುಳಿತು, ಮರುದಿನ ಈ... ಎನ್ನಾಲಾಗದೆ ಒದ್ದಾಡಿದ್ದು ಉಂಟು. ಕಿರುಕುಳ ಕೊಡುವ ಒಂದು ಹಲ್ಲಿಗೆ ಸೇವೆ ನೀಡಿ ನೆಮ್ಮದಿಯ ಉಸಿರು ಬಿಡಬೇಕೆನ್ನುವಾಗಲೇ ಇನ್ನೊಂದು ಹಲ್ಲು ತನ್ನ ಇರವನ್ನು ಹೇಳಲಾರಂಭಿಸುತ್ತದೆ.


ಸುಮಾರು ಐದಾರು ವರ್ಷದ ಹಿಂದಿನ ಮಾತು. ಒಂದು ಹಲ್ಲಂತೂ ಭಾರೀ ತೊಂದರೆ ನೀಡುತ್ತಿತ್ತು. ಪದೇಪದೇ ಫಿಲ್ ಮಾಡ್ಸಿದ್ದರೂ, ಹೊರಟುಹೋಗುತ್ತಿತ್ತು. ಲಾಸ್ಟ್ ಹಲ್ಲಿಗೆ ಫಿಲ್ಲಿಂಗ್ ನಿಲ್ಲುವುದಿಲ್ಲ ಎಂದು ವೈದ್ಯರು ಹೇಳಿದಂತೆ ಮತ್ತೆಮತ್ತೆ ಎದ್ದು ಬರುತ್ತಿರುವ ಫಿಲ್ಲಿಂಗ್‌ನಿಂದ ಶಾಶ್ವತ ಮುಕ್ತಿಹೊಂದಲೆಂಬಂತೆ ಆ ಹಲ್ಲನ್ನು ಮುಗಿಸಿಯೇ ಬಿಡೋಣವೆಂದು ನಿರ್ಧರಿಸಿ ಕಣ್ಣಿಗೆ ಕಂಡ ಡೆಂಟಲ್ ಕ್ಲಿನಿಕ್ ಒಂದರೊಳಗೆ ನುಗ್ಗಿದೆ. ಕ್ಲಿನಿಕ್ ಹೆಸರು, ನನ್ನ ಫೇವರಿಟ್ ದೇವರಾದ ತಿರುಪತಿ ತಿಮ್ಮಪ್ಪನ ಇನ್ನೊಂದು ಹೆಸರು.


ವೈದ್ಯ ಮಹಾಶಯರು ಖಾಲಿ ಕುಳಿತಿದ್ದರು. ನನ್ನನ್ನು ಕಂಡವರೇ ದಡಬಡಿಸಿ ಎದ್ದು ಬಂದು ದಂತ ಛೇರೊಳಗೆ ಹುದುಗಿಸಿ, ಬಿಬ್ ಕಟ್ಟಿ ಬಾಯೊಳಗೆ ಲೈಟ್ ಬೀರುವಂತೆ ಅಡ್ಜಸ್ಟ್ ಮಾಡಿ ಆ... ಅನ್ನಲು ಹೇಳಿದರು, ನಾನು ಆ ಅಂದಿದ್ದೇ, ಅವರ ಬಳಿಯಿರುವ ಸಣ್ಣಸಣ್ಣ ಚಿಮುಟಗಳಂತಹ ಉಪಕರಣಗಳಿಂದ ಎಲ್ಲ ಹಲ್ಲುಗಳನ್ನು ಕುಟ್ಟಿ, ಒಕ್ಕಿ ನೋಡಿ ಎಕ್ಸೈಟ್ ಆದವರಂತೆ ಕ್ಯಾವಿಟಿ ಅಂದರು. ಅದಿರಲಿ, ನಂಗೆ ಕಡೆ ಹಲ್ಲು ತೆಗಿಸಬೇಕಿದೆ ಎಂದೆ. ಆದರೆ, ವೈದ್ಯರು ನನ್ನ ಕಡೆ ಹಲ್ಲಿನ ಮಾತನ್ನು ಕಡೆಗಣಿಸಿ, ನಂಗೆ ಅದುವರೆಗೆ ತಿಳಿದಿರದಿದ್ದ ಕಾಂಪೋಸಿಟ್ ಫಿಲ್ಲಿಂಗನ್ನು ವರ್ಣಿಸಿಯೇ ವರ್ಣಿಸಿದರು. ನಾಲ್ಕೈದು ಸಂದುಗೊಂದುಗಳಲ್ಲಿ ಕ್ಯಾವಿಟಿ ಇದ್ದುದರಿಂದ ಇದನ್ನೆಲ್ಲ ಫಿಲ್ ಮಾಡೋಣ. ಫಿಲ್ಲಿಂಗ್ ಗೊತ್ತೇ ಆಗೋದಿಲ್ಲ ಅಂತ ಬ್ರೇನ್‌ವಾಷ್ ಮಾಡಿದರು. ಒಂದು ಹಲ್ಲಿಗೆ ರೂ.350/- ದರ ನಿಗದಿಯೂ ಆಯಿತು.


ಸರಿ. ಆದ್ರೆ ಫಸ್ಟ್ ಕಡೇ ಹಲ್ಲು ತೆಗೀರಿ ಅಂತ ನಾನು; ಅದು ಕೊನೆಗೆ ತೆಗೆಯೋಣ, ಫಸ್ಟ್ ಫಿಲ್ಲಿಂಗ್ ಮಾಡೋಣ ಅಂತ ಅವರು. ಹಲ್ಲಿನದ್ದೇ ಬಣ್ಣದ ಕಾಂಪೋಸಿಟ್ಟನ್ನು ಹಲ್ಲುಗಳಿಗೆಲ್ಲ ಮೆತ್ತಿ ನನ್ನ ದವಡೆ ಹಲ್ಲುಗಳು ಕೊಂಚ ಉಬ್ಬಿ ಬಸಿರು ಹೊತ್ತು ನಿಂತಂತೆ ಕಾಣಲಾರಂಭಿಸಿತು. ಪ್ರತೀ ಸಿಟ್ಟಿಂಗಲ್ಲೂ ನಾನು ಕಡೇ ಹಲ್ಲೂ... ಅಂತ ರಾಗ ತೆಗೆದರೆ, ಆಯ್ತು ಮೇಡಂ, ಎಲ್ಲ ಫಿಲ್ಲಿಂಗ್ ಆಗಲಿ, ಕೊನೆಗೆ ತೆಗೆಯೋಣ, ನಿಮ್ಗೆ ಪೇಯ್ನ್ ಇದ್ದರೆ ಕಷ್ಟ ಅಂತ ಸಮಜಾಯಿಷಿ ನೀಡಿದರು. ಕೊನೆಗೂ ಇಷ್ಟು ಹಲ್ಲುಗಳಿಗೆ ಕಾಂಪೊಸಿಟ್ ಮೆತ್ತಿಸಿಕೊಂಡಿದ್ದಕ್ಕೆ, ಅದೊಂದು ಹಲ್ಲನ್ನು ಫ್ರೀಯಾಗೆ ಕಿತ್ತರು. (ಫೀಸ್ ಚುಕ್ತಾ ಮಾಡಿದಾಗ ತಿರುಪತಿಗೆ ಹೋಗಿ ಬಂದ ಅನುಭವವಾಯ್ತು) ಇದು ಲೈಫ್ ಟೈಮ್ ಗ್ಯಾರಂಟಿ. ಇನ್ನು ನೀವಿರುವ ತನಕ ಹಲ್ಲಿನ ಸಮಸ್ಯೆ ಇರದು ಎಂಬ ಭರವಸೆಯೊಂದಿಗೆ ಬೀಳ್ಕೋಟ್ಟರು.


ನನಗಿನ್ನು ಹಲ್ಲು ನೋವಿನ ಬಾಧೆ ಇಲ್ಲವೆಂದು ಹಲ್ಲುಕಿತ್ತ ನೋವನ್ನೂ ಮರೆತು ಮನೆಗೆ ತೆರಳಿದೆ. ಆದರೆ ಎರಡ್ಮೂರು ದಿನ ಕಳೆದರೂ ಹಲ್ಲು ಕಿತ್ತ ನೋವು ಮುಗಿಯಲೇ ಇಲ್ಲ. ಪುನಃ ವೈದ್ಯರನ್ನು ಕಂಡರೂ, "ಒಂದೆರಡು ದಿನ ಪೇಯ್ನ್ ಇರುತ್ತೆ. ಫಸ್ ಆಗೋದು ಕಾಮನ್" ಅಂದು ಸಾಗಹಾಕಿದರು. ನಾಲ್ಕೈದು ದಿನದ ಬಳಿಕ ನಾನೇ ಮಾಡಿದ ಕ್ಯಾಬೇಜ್ ಪಲ್ಯದೊಂದಿಗೆ ಊಟಮಾಡುತ್ತಿದ್ದೆ. ಎಲುಬಿನ ತುಣುಕೊಂದು ಸಿಕ್ಕಂತಾಯಿತು. ಅರೆ, ಕ್ಯಾಬೇಜಿನಲ್ಲಿ ಎಲುಬಾಂತ ಪರೀಕ್ಷಿಸಿದರೆ, ಹಲ್ಲಿನ ತುಂಡು! ಕಿತ್ತ ಹಲ್ಲಿನ ಪಳಿಯುಳಿಕೆಯದು.


ಅದು ಹ್ಯಾಗೆ ಫಿಲ್ಲಿಂಗ್ ಮಾಡಿದ್ದರೋ, ಒಂದೇ ವರ್ಷಕ್ಕೆ ಅಷ್ಟೂ ಹಲ್ಲುಗಳಲ್ಲಿ ಯಾವುದೋ ಒಂದು ನೋಯಲಾರಂಭಿಸಿತು. ಮುಖವಿಡೀ ಸಿಡಿಯುತ್ತದೆಯೇ ವಿನಹ ಯಾವ ಹಲ್ಲೆಂದು ಗೊತ್ತಾಗುತ್ತಿಲ್ಲ. ಇನ್ನೊಂದು ದಂತವೈದ್ಯರ ಬಳಿ ಹೋಗಿ ಆಂ....... ಅಂದೆ. ಎಕ್ಸರೇ ಮಾಡಿದ ಬಳಿಕ ಕಾಂಪೊಸಿಟ್ ಫಿಲ್ಲಿಂಗ್ ಒಳಗೆ ಫಸ್ ಆಗಿದೆ, 'ಅವನೆಂಥಾ ವೈದ್ಯ' ಅಂತ ಮೊದಲಿನ ವೈದ್ಯರಿಗೆ ಬೈಯ್ದರು. ಆಂ... ಎಂದು ಬಿಟ್ಟಿದ್ದ ಬಾಯಿ ಅಲ್ಲಾಡಿಸಲಾಗದ ಪರಿಸ್ಥಿತಿಯದ್ದ ಕಾರಣ ಪ್ರತಿಕ್ರಿಯಿಸಲು ನನಗಾಗಲಿಲ್ಲ. ಅದೇ ಹಲ್ಲನ್ನು ಓಪನ್ ಮಾಡಿ, ರೂಟ್ ಕೆನಾಲ್ ಮಾಡಿ ಕ್ರೌನ್ ತೊಡಿಸಿ ಚಂದ ಮಾಡಿ ಕಳುಹಿಸಿದರು.

ಈಗ ಇನ್ಯಾವುದೊ ಒಂದು ಕಾಂಪೊಸಿಟ್ ನೋಯಲಾರಂಭಿಸಿದೆ. ಅಂತೂ ಈ 'ಹುಳುಕಿ'ನಿಂದ ಸಂಪೂರ್ಣ ಮುಕ್ತಿ ಎಂಬುದು ಇಲ್ಲ ಅನಿಸುತ್ತೆ!!!

ಶುಕ್ರವಾರ, ಜುಲೈ 11

ನಾನು ಕಿಡ್ನಾಪ್ ಆಗಿಲ್ವಂತೆ

ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ......... ನಾನು ಅಪಹರಣಕ್ಕೀಡಾಗಿದ್ದೇನೆ ಎಂದು ತಿಳ್ಕೊಂಡಿದ್ದ. ಹಾಗಾಗಿ ಬ್ಲಾಗ್ಲೋಕಕ್ಕೆ ಭೇಟಿ ನೀಡಲು ಆಗಲೇಇಲ್ಲ. ನಿನ್ನೆ ನನ್ನ ಸ್ನೇಹಿತೆ, ಅಪಹರಣವೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ, ಗುಂಡುಕಲ್ಲಿನ ಹಾಗಿದ್ದೀಯಾ ಸೋಂಬೇರಿ ಎಂದೊಂದು ಒದ್ದಾಗ ಭ್ರಮೆಯಿಂದ ಹೊರಬಿದ್ದೆ. ನನ್ನ ಈ ಹಿಂದಿನ ಪೋಸ್ಟ್‌ಗೆ ನಿಮ್ಮೆಲ್ಲರ ಪ್ರೀತಿಯ ಕಮೆಂಟಿಗೆ ಪ್ರತಿಕ್ರಿಯಿಸದಷ್ಟು ಸೂಕ್ಕು ಅಂತ ಮಾತ್ರ ತಿಳ್ಕೋಬೇಡಿ. ಪ್ಲೀಸ್.

ಸಹ ಬ್ಲಾಗಿಗರಾಗಿರುವ ಸುನಾಥ ಅವರು ಹೀಗೆ ಕಮೆಂಟಿದ್ದರು. "ಹೋಗೀ ಹೋಗೀ ಆ ಅನ್ವೇಷಿಗಳ ಕಡೆಯಿಂದ ಕಲ್ತುಕೊಂಡಿರೇನ್ರಿ?ಅಂದ ಮ್ಯಾಲ, ನೀವು ಎಷ್ಟು ಖರೇ ಬರೀತೀರಿ ತಿಳಧಂಗಾತು. (ನನಗೂ ಅವರೇ ಗುರುಗಳು)"

ಯಾಕ್ರೀ ಸುನಾಥರೇ, ಹೋಗೀ ಹೋಗಿ ಆ ಆನ್ವೇಷಿಗಳ ಕಡೆಯಿಂದ ಕಲ್ತುಕೊಂಡ್ರಾ ಅಂತ ಕೇಳ್ತೀರಾ? ಅವರು ಎಷ್ಟು ದೋಡ್ಡ ಅಜ್ಞಾನಿಗಳು ಅಂತ ಗೊತ್ತೇನ್ರಿ? 'ಬೋರು ಹೊಡೆಸದ ಬೋರ' ಎಂಬ ಬಿದಿರನ್ನು ಅವರಿಗೆ ನೀಡಬೇಕು ಎಂಬುಗಾಗಿ ಅವರ ಅಭಿನಾಮಿಗಳ ಏಕ ಸದಸ್ಯಾ ಸಂಘದ ಸರ್ವ ಸದಸ್ಯರೂ ನಿರ್ನಾಮ ಮಾಡಿದ್ದೇವೆ. ನಿಮಗೂ ಅವರೇ ಗುರುಗಳು ಅಂದ ಮೇಲೆ ನೀವೂ ಬುರುಡೆ ಮಾಸ್ಟ್ರೇ ಇರಬೇಕು. ಏನಂತೀರಿ?

ಆಮೆಲೆ ನನ್ನ ಪ್ರಥಮ ಬ್ಲಾಗೆಳತಿ ನೀಲಗಿರಿಯವರು, ಹೀಗಂದಿದ್ದರು. "1000 ಹಿಟ್ಟು ತಿಂದಿದ್ದಕ್ಕೆ ಅಭಿನಂದನೆಗಳು ಶಾನಿಯವರೇ. ನಾನೂ ದಟ್ಸ್ ಕನ್ನಡದಿಂದ ನಿಮ್ಮ ಬ್ಲಾಗು ಹುಡುಕಿದವಳೇ! ಆದರೆ ನಿಮ್ಮ ಗುರುಗಳು ಅನ್ವೇಷಿಗಳು ಅಂತ ಇವತ್ತೇ ಗೊತ್ತಾಗಿದ್ದು. ನನಗೂ ಬ್ಲಾಗಿಗರ ಪರಿಚಯವಾದದ್ದು ಬೊ-ರ ದಿಂದಲೇ. ಆದರೆ ಗುರುಗಳು ಮಾತ್ರ 3ಶ್ರೀಗಳು :)"

ನೀಲಗಿರಿಯವರೇ ನಿಮಗೊಂದು ಗುಟ್ಟು ಗೊತ್ತಾ? ನೀವೇ ನನ್ನ ಮೊದಲ ಬ್ಲಾಗೆಳತಿ! ನನ್ನ ಗುರುಗಳು ಅನ್ವೇಷಿಗಳು ಅಂತ ಹೇಳಿಕೊಳ್ಳಲು ನಂಗಂತೂ ಹೆಮ್ಮೆ. ಆದರೆ ನಾನವರಿಗೆ ಎಮ್ಮೆಯೋ ಗೊತ್ತಿಲ್ಲ :)

ಇನ್ನು ನನ್ನ ಮೇಸ್ಟ್ರು ಅಸತ್ಯ ಅನ್ವೇಷಿಯವರ ಪ್ರತಿಕ್ರಿಯೆ ಈ ಕೆಳಗಿನಂತಿತ್ತು.(ಅವಮಾನ ನಷ್ಟ ಕ್ಲೇಮು ಮಾಡಲು ಎಲ್ಲಿ ಅವಕಾಶ ಸಿಗುತ್ತೆ ಅಂತ ಕಾಯ್ತಾ ಕೂತಿರೋವಾಗ ನಿಮ್ಮ ಈ ಪೋಸ್ಟ್ ಸಿಕ್ಕಿತು.

ನೀವು ಹೀಗೆಲ್ಲಾ ಸುಖಾಸುಮ್ಮನೆ ನಮಗೆ ಕ್ರೆಡಿಟ್ಟು ಕಾರ್ಡು ಕೊಟ್ಟು ಕಳುಹಿಸುವುದು ನೋಡುತ್ತಿದ್ದರೆ, ಚೆನ್ನಾಗಿಯೇ ನಿದ್ದೆ ಮಾಡುತ್ತಿರುವ ನಮ್ಮ ನಿದ್ದೆಗೆಡಿಸಲು ಈ ಕ್ರೆಡಿಟ್ಟುಕಾರ್ಡಿನ ಸಾಲವನ್ನೇ ಬಳಸುತ್ತೀರೆಂಬುದು ಪತ್ತೆಯಾಗಿದೆ.

ಹೀಗಾಗಿ ಖಂಡಿತಾ ನಮ್ಮ ಕ್ರೆಡಿಟ್ಟುಕಾರ್ಡು ಸಾಲ ತೀರಿಸುವ ನಿಟ್ಟಿನಲ್ಲಿ ನಮಗೆ ಈ ಅವಮಾನ ನಷ್ಟ ಮೊಕದ್ದಮೆ ಪೂರಕವಾಗುತ್ತದೆ. ಎಷ್ಟು ಬೇಕಾದರೂ ಅವಮಾನ ನಷ್ಟ ಮಾಡಿಕೊಳ್ಳಲು ಸಿದ್ಧ. ಆದರೆ ಕ್ರೆಡಿಟ್ ಕಾರ್ಡು ಸಾಲ ಮಾತ್ರ ತೀರಲೇ ಬೇಕು...)

ಅಲ್ಲ ಗುರುಗಳೇ,ನಾವೆಲ್ಲ ನಿದ್ದೆ ಬರದೇ ಹೊರಳಾಡುತ್ತಾ, ಮಂಚದಿಂದ ಉರುಳುರುಳಿ ಬೀಳುತ್ತಿರುವಾಗ, ನೀವು ಗಡದ್ದಾಗಿ ನಿದ್ದೆ ಹೊಡೆದರೆ ನಮ್ಮ ಹೊಟ್ಟೆ ಉರಿಯದಿರುತ್ತಾ? ಅದಕ್ಕೆ ಕ್ರೆಡಿಟ್ಟು ಕಾರ್ಡು ಸಾಲ. ನಿಮ್ಮ ಅವಮಾನ ನಷ್ಟಭರ್ತಿ ಮಾಡಲೂ ನೀವು ನಿಮ್ಮ ಕ್ರೆಡಿಟ್ ಕಾರ್ಡನ್ನೇ ನಮಗೆ ಧಾರೆ ಎರೆಯುತ್ತೀರೆಂದು ತಿಳಿದು ಸಂತೋಷಗೊಂಡಿದ್ದೇವೆ.

ಯಾವಾಗಲೂ ಪ್ರೋತ್ಸಾಹ ನೀಡುವ ಪ್ರಶಾಂತ್ ಏನಾದರೂ ಕಾರಣ ಹುಡುಕಿ ನಿಮ್ಮ ಬ್ಲಾಗ್ಮನೆಗೆ ಬರುವಂತೆ ಮಾಡ್ತೀರಾ ಅಂದಿದ್ರು. ಏನ್ಮಾಡ್ಲೀರೀ... ಏನಾದರೂ ಮಾಡುತಿರು ತ(ತಿ)ಮ್ಮಾ ಅಂತ ತಿಳಿದೋರು ಹೇಳಿದ್ದಾರಂತೆ. ಹಾಗಾಗಿ ಬರೆಯುತ್ತಾ ಇರಬೇಕು ಎಂಬ ತುಡಿತ. ಆದರೆ, ನಾವು ಬಯಸಿದಂಗೆ ಸಮಯ ಸಂದರ್ಭಗಳು ಒದಗಿ ಬರುತ್ತಿಲ್ಲ. ಮಧ್ಯೆ ಒಂದಿಷ್ಟು ಉದಾಶೀನದ ಮಿಳಿತ. ಹೀಗೆ ನಿಮ್ಗೆಲ್ಲಾ ಮತ್ತೆ ಮಿಕ್ಕೆಲ್ಲ ಭೇಟಿಗರಿಗೆ ಥ್ಯಾಂಕ್ಸ್ ಹೇಳಿ ಹೋಗೋಣ ಅಂತ ಬಂದೆ. ಹಲ್ಲುನೋವಿನ ಕಥೆ ಹೇಳ್ಕೋಬೇಕು. ಸದ್ಯವೇ ಸಿಗೋಣ.

ಇನ್ನೊಂದು ವಿಷ್ಯಾ, ಮತ್ತೊಮ್ಮೆ ಇಲ್ಲಿ ದಟ್ಸ್ ಕನ್ನಡ ಪ್ರಸ್ತಾಪಿಸಬೇಕು. ದಟ್ಸ್ ಕನ್ನಡದವರು ನನ್ನ ಬ್ಲಾಗಿನ ಕೊಂಡಿಯನ್ನು ವನ್ ಇಂಡಿಯಾ ಬ್ಲಾಗುಗಳ ಪಟ್ಟಿಗೆ ಸೇರಿಸಿದ್ದಾರೆ. ಹಾಗಾಗಿ ಈಗ ಅಲ್ಲಿಂದಲೂ ವಿಸಿಟಿಗರು ಬರುತ್ತಿದ್ದಾರೆ. ಅವ್ರಿಗೂ ನಾನು ಆಭಾರಿ.