ಸೋಮವಾರ, ಸೆಪ್ಟೆಂಬರ್ 13

ಮಳೆ, ಆಷಾಢ, ಅಳಿಯ, ಎಮ್ಮೆ ಇತ್ಯಾದಿ...

"ಬರಗಾಲಕ್ಕೆ ಬಿದ್ದಂತೆ ಮಳೆಗಾಗಿ ಚಾತಕ ಪಕ್ಷಿಯಾಗಿದ್ದ ನಿನಗೇ ಎಂಬಂತೆ ಇಷ್ಟೊಂದು ಮಳೆ ಸುರಿಸಿದರೂ ಇನ್ನೂ ಬರೆಯದೇ ಬಿದ್ದಿದ್ಯಲ್ಲ, ನಿನ್ನ ಮುಖಕ್ಕಿಷ್ಟು..." ಎಂದು ಬಯ್ದಂತಾಯಿತು. ಮಳೆಯನ್ನು, ನೀರನ್ನು ಬ್ಲಾಗಿನಲ್ಲಿ ಸುರಿಸಬೇಕೆಂಬ ಯೋಜನೆಯನ್ನು ಮುಂದೂಡುತ್ತಲೇ ಇರುವಾಗ, ಮಧ್ಯೆ ಒಂದಿಷ್ಟು ಬಿಸಿಲ ಗ್ಯಾಪ್ ನೀಡಿ, ಮತ್ತೆ ಮತ್ತೆ ದಿನಪೂರ್ತಿ ಸುರಿದ ಧೋ ಮಳೆ ನನ್ನ ಮುಖಕ್ಕೆ ರಾಚುತ್ತಿರಬೇಕಿದ್ದರೆ ಮೇಲಿನಂತೆ ಧ್ವನಿಸಿತ್ತು ನನಗೆ. ಹಾಗಾಗಿ ಈ ಅಪ್‌ಡೇಟ್.

ಬೇಸಗೆಯಲ್ಲಿ ಬಿರುಬಿಸಿಲಿನ ಮೂಲಕ ಬೆವರಿಳಿಸಿದ ಸೂರ್ಯನ ಮುಖದಲ್ಲಿ ನೀರಿಳಿಸುವಂತೆ ಮಳೆ ಸುರಿದಾಗ, ಇಂತಹ ಮಳೆಗಾಗಿ ಮೂರೂವರೆ ವರ್ಷದಿಂದ ಕಾದು ಮರಳಿ ಮಳೆಯೂರ ವಾಸಿಯಾಗಿರುವ ನನಗೆ ಇದೇ ಮಳೆಯನ್ನು ಬ್ಲಾಗಿನಲ್ಲಿ ಸುರಿಸಬೇಕೆಂದೆನಿಸಿತ್ತು. ದಿವ್ಯ ಸೋಂಬೇರಿಯಾಗಿರುವ ನಾನು ಇಂದು ನಾಳೆ ಎನ್ನುತ್ತಿರುವಾಗಲೇ ಮಳೆಯ ಬಿರುಸು ಕಡಿಮೆಯಾದಂತಾಗಿ, ಸಾಯ್ಲಿ ಬೇಡ ಎಂದು ತೀರ್ಮಾನಿಸಿದ್ದೆ.

ಅದಕ್ಕೆ ಸರಿ ಎಂಬಂತೆ, ನನ್ನಣ್ಣ ಫೋನಿಸಿ ಆಷಾಢಕ್ಕೆ ಕರೆದೊಯ್ಯಲು ಬರುತ್ತೇನೆ ಅಂದಿದ್ದ. ಈ ವಾರ, ಮುಂದಿನ ವಾರ ಎಂದು ಅವನನ್ನು ಸತಾಯಿಸಿ ಆಷಾಢ ಇನ್ನೆರಡು ದಿನ ಇದೆ ಎಂದಾಗ ಹೊರಟೆ. ಆದರೆ ಅದಕ್ಕೂ ವಿಘ್ನ. ಅದೇ ದಿನ ಆತ್ಮೀಯರೊಬ್ಬರು ನಮಗಾಗಿ ಔತಣ ಏರ್ಪಡಿಸಿದ್ದಾಗ ಅಲ್ಲೂ ಇಲ್ಲವೆನ್ನಲಾಗದೆ - ಇಲ್ಲೂ ಇಲ್ಲವೆನ್ನಲಾಗದೆ, ಇಕ್ಕಡೆಯಲ್ಲೂ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರೆಯ ಬಂದ ಅಣ್ಣನಿಗೆ ಅನಾರೋಗ್ಯದ ನೆಪ ಮುಂದಿಟ್ಟು, ಇಂದು ಬರಲಾಗುವುದಿಲ್ಲ ನಾಳೆ ಎಂದು, ಕೊನೆಗೆ ನನ್ನ ಮಗ(ಅಕ್ಕನ) ಶರತ್ ಹೇಳಿದಂತೆ ಒಬ್ಬಳೇ ತವರಿಗೆ ತೆರಳಿದೆ. (ತಂಗಿಯನ್ನು ಕರೆಯ ಬರುವ ಅಣ್ಣನಿಗೆ ಜತೆಯಾಗುವಂತೆ ಪಿಯು ಕಲಿಯುತ್ತಿರುವ ಶರತ್‌ಗೆ ಹೇಳಲಾಗಿತ್ತು. ಅವನಿಗೆ ನಗುವೋ ನಗು. ಒಂಟಿ ಸಲಗಿಯಂತೆ ಊರೂರು ಅಲೆದಿರುವ ಚಿಕ್ಕಮ್ಮನನ್ನು ಕರೆತರುವುದು ಅವನಿಗೆ ದೊಡ್ಡ ಸೋಜಿಗವಾಗಿ ಕಂಡಿತ್ತು!!)

ಕೊನೆಗೂ ಆಷಾಢಕ್ಕೆ ಹೋದೆ. ಅತ್ತೆ ಬರ್ತಾರೇ ಅಂತ ತಿಂಗಳಿನಿಂದ ಕಾದಿದ್ದ ನಾಲ್ಕರ ಹರೆಯದ ನನ್ನಳಿಯಗೆ ಸಂಭ್ರಮವೋ ಸಂಭ್ರಮ. ಶಾಲೆಯಿಂದ (ಹಳ್ಳಿಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಆತನಿಗೆ ‘ಸ್ಕೂಲ್’ ಗೊತ್ತಿಲ್ಲ) ಬಂದವನೇ ಡಬ್ಲ್ಯುಡಬ್ಲ್ಯುಎಫ್ ಪ್ರೇರಣೆಯಂತೆ ನನ್ನಮೇಲೆ ಹಾರಿದ, ಒದ್ದ - ಗುದ್ದಿದ. ನಂಗೆ ಅಂಟಿಯೇ ಇದ್ದ ಅವನೊಂದಿಗೆ ಜೆಸಿಬಿ ಓಡಿಸಿ, ಕಾರ್ ಕೆಡವಿ, ಕ್ರಿಕೆಟ್ ಆಡಿ, ಬೊಂಬೆ ದೂಡಿ ಬೋರಾದಾಗ ತೋಟಕ್ಕೆ ಹೊರಟೆವು.

ಮೇಲೆ ತೋಟದ ಮೂಲೆಯಲ್ಲಿರುವ ಅವ್ವನ ಹೊಸ ಜಾಗಕ್ಕೆ ತೆರಳಿ ನಮಿಸಿ ಹಿಂತಿರುಗುವಾಗ ಕೈಯನ್ನು ಎಳೆಯಲಾರಂಭಿಸಿದ ವಿ(ಘ್ನೇ)ಶು ಕೆಳ ತೋಟಕ್ಕೆ ಹೋಗ್ವಾ ಅಂತಾ ಒತ್ತಾಯಿಸಿದ. ಸಿಂಗಮಾಮನ ತೋಟಕ್ಕೆ ಅಂಟಿಕೊಂಡಿರುವ ನಮ್ಮ ತೋಟದ ಅಂಚಿನ ತನಕ ಹೋದೆವು. ಚಚಿಪಿಚಿ ಕೆಸರಿನಲ್ಲಿ ಕಾಲಿಟ್ಟೆವು. ಕಂಠಮಟ್ಟ ನೀರಿನಿಂದ ತುಳುಕುತ್ತಿದ್ದ ಕೆರೆಬಳಿ ತೆರಳಿ ನೀರೊಳಗೆ ಪುಳುಪುಳುಕ್ಕೆಂದು ಸೊಂಟ ಬಳುಕಿಸಿ ಓಡುವ ಮೀನುಗಳನ್ನು ನೋಡಿದೆವು. ಕಂಗು-ಬಾಳೆಯ ಪ್ರತಿಬಿಂಬವನ್ನು ನುಂಗಿ ಗಾಂಭಿರ್ಯವೇ ಮೈವೆತ್ತಂತೆ ನಿಂತಿದ್ದ ಸ್ಪಟಿಕಶುದ್ಧಿಯ ನೀರಿಗೆ ಪುಟ್ಟಪುಟ್ಟ ಕಲ್ಲುಗಳನ್ನು ಎಸೆದ ಅಳಿಯನಿಗೆ ಅದರಿಂದೇಳುವ ತರಂಗಗಳಲ್ಲಿ ಕಂಗಿನ ಮರದ ಬಿಂಬ ಮುರಿದಂತಾಯಿತೇಕೆ ಎಂಬ ಕೌತುಕ.

ಕತ್ತಲಾಯಿತು ಹೋಗೋಣ ಪುಟ್ಟಾ ಅನ್ನುತ್ತಾ ಹೊರಟೆ ಮನೆಗೆ. ತೋಡಿನ (ತೊರೆ) ಬಳಿ ಬಂದಾಗ ಓಡಿ ನೀರಿಗಿಳಿದು ಬಿದ್ದುಗಿದ್ದಾನೆಂಬ ಭಯಕ್ಕೆ ಅವನ ಕೈ ಗಟ್ಟಿ ಹಿಡಿದಿದ್ದೆ. ಅತ್ತೇ ನೀರಿಗಿಳಿಯುವಾ ಎಂದ. ಬೇಡ ಅಮ್ಮ ಬಯ್ತಾರೆಂದು ಗದರಿ ಮುಂದೆ ಸಾಗಿದೆ. ಮಗು ಮತ್ತೆಮತ್ತೆ ಹಿಂತಿರುಗಿ ಹರಿವ ನೀರನ್ನು ತನ್ನ ಹೊಳೆವ ಕಂಗಳಲ್ಲಿ ಆಸೆಯಿಂದ ನೋಡುತ್ತಾ ನೋಡುತ್ತಾ ನನ್ನ ಕೈಯನ್ನು ಹಿಂದಿಂದೆಗೇ ಜಗ್ಗುತ್ತಿದ್ದ. ಮಗುವಿನ ಆಸೆ ಪೂರೈಸುವಾ ಎಂದು ಹಿಂತಿರುಗಿದೆ. ರಾಮರಾಮಾ... ಅವನ ಖುಷಿಯೋ... ತನ್ನ ಚೋಟುದ್ದ ಚಡ್ಡಿ ಮಡಚುತ್ತಾ, ಅತ್ತೇ ನಿನ್ನ ಪ್ಯಾಂಟು ಮಡಚು, ಚಂಡಿ ಆದರೆ ಅಮ್ಮ ಬಯ್ತಾರೆಂದು ನನ್ನನ್ನು ಎಚ್ಚರಿಸಿದ. ಮುದ್ದುಮುದ್ದು ಕಾಲನ್ನು ಅವಚಿದ್ದ ಪುಟ್ಟ ಚಪ್ಪಲನ್ನು ಅವಸರವಸರದಲ್ಲಿ ಕಳಚಿ, ಥಳುಕು ಬಳುಕಿನೊಂದಿಗೆ ರಭಸದಿಂದ ಹರಿಯುತ್ತಿದ್ದ ನೀರಿಗೆ ಇಳಿದೆವು. ಏನು ಖುಷಿ ಹುಡುಗನಿಗೆ. ನೀರೇ ಕಾಣದವರಂತೆ ಕುಣಿತ, ನಗು, ಕೇಕೆ. ಅಷ್ಟೂ ನೀರನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬುವ ಯತ್ನ. ಪುಟ್ಟಪುಟ್ಟ ಕಲ್ಲುಗಳನ್ನು ಅಮೂಲ್ಯ ಹರಳುಗಳಂತೆ ಹೆಕ್ಕುವುದೇನು, ಅವುಗಳನ್ನು ಬೀಸಿಬೀಸಿ ಒಗೆಯುವುದೇನು. ಆ ಸದ್ದಿಗೆ ಪುಳಕಗೊಳ್ಳುವುದೇನು. ನೀರೊಳಗೆ ಮಿನುಗುತ್ತಿದ್ದ ನನ್ನ ಕಾಲ್ಬೆರಳ ಬಣ್ಣ ಅವನಿಗೆ ಬಂಗಾದಂತೆ ಕಂಡಿತೋ, ಮುಟ್ಟಿಮುಟ್ಟಿ ಸವರಿದ. ಪಾಚಿಬಂಡೆ ಮೇಲೆ ಕಾಲಿರಿಸಿ ಜಾರಿದ, ಸುಳ್ಳುಸುಳ್ಳೇ ಬಿದ್ದ, ಮೈಯೀಡೀ ಒದ್ದೆಯಾಗುವಂತೆ ಮಲಗಿದ, ಎದ್ದ. ಅತ್ತೇ ನಾವಿಂದು ಇಲ್ಲೇ ಇರುವಾ ಎಂಬ ಬೇಡಿಕೆ ಇಟ್ಟ.

ಆಕಾಶಕ್ಕೆ ತೂತುಬಿದ್ದಂತೆ ಮೂರ್ನಾಲ್ಕು ದಿನ ನಿರಂತರವಾಗಿ ಮಳೆ ಹುಯ್ಯುತ್ತಿದ್ದ ಅಂದಿನ ದಿನಗಳಲ್ಲಿ ನಾನು ಮತ್ತು ಅಣ್ಣ ಇದೇ ತೋಡಿಗೆ ಪ್ರವಾಹದ ನೀರು ನೋಡಲು ಹೋಗುತ್ತಿದ್ದೆವು. ಮಳೆ ನೀರೆಲ್ಲ ಕೊಚ್ಚಿ ಮಣ್ಣಿನೊಂದಿಗೆ ಬೆರೆತು ಕೆಂಬಣ್ಣವಾಗಿ ತೋಡಿಗಿಳಿದು, ಸುಮಾರು ಒಂದೂವರೆ ಆಳೆತ್ತರದಲ್ಲಿ ರಭಸದಿಂದ ಸಶಬ್ದವಾಗಿ ಹರಿಯುವ ವೇಳೆ ಅದರ ರುದ್ರ ಸೌಂದರ್ಯ ಭಯ ಮಿಶ್ರಿತ ಆನಂದ ನೀಡುತ್ತಿತ್ತು. ಕತೆಗಳಲ್ಲಿ ಕೇಳಿದಂತೆ ಚಿನ್ನದ ನಾಣ್ಯಗಳಿಂದ ತುಂಬಿದ ಕೊಪ್ಪರಿಗೆಯೇನಾದರೂ ನೀರಿನಲ್ಲಿ ತೇಲಿಬಂದು ನನ್ನ ಬಳಿ ನಿಂತು ಬಾಗಿಲು ತೆರೆದರೆ ಯಾವುದರಲ್ಲಿ ಮೊಗೆದುಕೊಳ್ಳಲೀ ಎಂಬ ದುರಾಸೆ ನನ್ನದಾದರೆ, ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ ಸಾಹಸ ಅಣ್ಣನಿಗೆ.

ಹೀಗೆ ಅದೊಮ್ಮೆ ನಾವಿಬ್ಬರು ತೊರೆ ಬದಿ ನಿಂತಿದ್ದಾಗ ಇಂದಿರಾ ಟೀಚರ ಎಮ್ಮೆ ನೀರಿನಲ್ಲಿ ತೇಲಿ ಹೋಯಿತು. 'ಅಯ್ಯೋ ಎಮ್ಮೆ' ಅಂದ ಅಣ್ಣ, ಕೈಯಲ್ಲಿ ಹಿಡಿ ಹುಲ್ಲುಕಿತ್ತು ಎಮ್ಮೆಗೆ ತೋರಿದ. ಹುಲ್ಲಿನಾಸೆಗೆ ತಿರುಗಿ ಬರಲೀ ಎಂದು. ಆದರೆ ಪಾಪದ ಎಮ್ಮೆಗೆ ಸ್ವಯಂ ಆಧರಿಸಿಕೊಳ್ಳಲಾಗದ ವೇಗದಲ್ಲಿ ನೀರು ಹರಿಯುತ್ತಿತ್ತು. ಆಸೆಯ ಕಂಗಳಿಂದ ನಮ್ಮತ್ತ ದಯನೀಯವಾಗಿ ತಿರುತಿರುಗಿ ನೋಡಿದ ನೋಟ ಕರುಳು ಕಿವುಚಿತ್ತು. ಅಣ್ಣ ನನ್ನನ್ನು ಒಂದು ಸುರಕ್ಷಿತವಾದ ಜಾಗದಲ್ಲಿ ನಿಲ್ಲಿಸಿ, ಮತ್ತೊಂದೆಡೆ ತೋಡಿಗೆ ಸಮವಿರುವ ರಸ್ತೆಯಿಂದ ಓಡಿದ. ಸುಮಾರು ಒಂದೂವರೆ ಕಿಲೋ‌ಮೀಟರ್ ದೂರದಲ್ಲಿ ತೋಡು ರಸ್ತೆಯನ್ನು ಕ್ರಾಸ್ ಮಾಡುವ ಜಾಗಕ್ಕೆ ಬರಿಗಾಲಲ್ಲಿ ಓಡಿದ. ಪುಣ್ಯಕ್ಕೆ ನೀರಲ್ಲಿ ಕೊಚ್ಚಿದ್ದ ಎಮ್ಮೆ ಅಲ್ಲಿ ತಲುಪುವಷ್ಟರಲ್ಲಿ ಇವನೂ ಅಲ್ಲಿ ತಲುಪಿ, ನೀರಿನೊಂದಿಗೆ ಸೆಣಸಾಡಿ ಎಮ್ಮೆಯನ್ನು ಬಚಾವ್ ಮಾಡಿ ಇಂದಿರ ಟೀಚರ ಮನೆಯತ್ತ ಅಟ್ಟಿದ್ದ.

ಅಷ್ಟೊತ್ತು "ಸ್ವಾಮೀ ದೇವಾ ಎಮ್ಮೆ ಸಿಗಲೀ" ಎಂದು ಪ್ರಾರ್ಥಿಸುತ್ತಾ ನಿಂತಿದ್ದ ನನಗೆ ಅಣ್ಣ ಬಂದು ಎಮ್ಮೆಯನ್ನು ರಕ್ಷಿಸಿದ ಸಾಹಸಗಾಥೆ ಹೇಳುತ್ತಿದ್ದರೆ, ಸಡನ್ ದುಃಖವಾಗತೊಡಗಿತು. ಛೇ, ಎಮ್ಮೆಯ ಬದಲು ಸಾಕ್ಷಾತ್ ಇಂದಿರಾ ಟೀಚರೇ ಬೊಳ್ಳದಲ್ಲಿ (ನೀರಿನಲ್ಲಿ) ಕೊಚ್ಚಿ ಹೋಗಿಲ್ಲವಲ್ಲಾ ಎಂಬ ಬೇಸರ ಕಾಡಿತು. ಸದಾ ಮಗ್ಗಿ ಕಲಿಯಿರಿ, ಲೆಕ್ಕ ಮಾಡಿ ಎಂದೆಲ್ಲ ಹಿಂಸಿಸಿ, ಒಮ್ಮೊಮ್ಮೆ ಕಿವಿ ಹಿಂಡಿ - ತಲೆಗೆ ಕುಟ್ಟಿ ಹಾಕುತ್ತಾ ನಮ್ಮ ಆಟ, ಮತ್ತಿನ್ನಿತರ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದ ಅವರನ್ನು ನಾವು ವಿಲನ್ ಎಂದೇ ಪರಿಗಣಿಸಿದ್ದೆವು. (ನಾಟಕದಲ್ಲಿ ಪಾರ್ಟು ಕೊಟ್ಟು ನನ್ನನ್ನು ಆ ಊರಿನ 'ಮಹಾನ್ ಕಲಾವಿದೆ'ಯಾಗಿಸಿದ್ದು ಅದೇ ಇಂದಿರಾ ಟೀಚರ್ ಎಂಬುದು ನಂತರದ ವಿಚಾರ)

ಈ ಎಲ್ಲ ಸಂಗತಿ ನೆನಪಾಗಿ ವಿಘ್ನೇಶನ ಕೈಯ ಬಿಗಿತ ಒಂಚೂರು ಸಡಿಲವಾಯಿತು. ನನ್ನ ಕೈ ಜಾರಿಸಿ ಭುಳುಂಕೆಂದು ನೀರಿಗೆ ಬಿದ್ದ ಅವನಿಗೆ ಹೆದರಿಕೆ ಹೋಗಲು ಒಂದು ಪ್ರೀತಿಯ ಏಟು ಬಿಗಿದು, ನೀರಿಂದ ಮೇಲೆ ಬಂದೆವು. ಒದ್ದೆಯಾದ ಚಡ್ಡಿಹಾಕಿ ನಡೆಯಲು ಅವಸ್ಥೆ ಪಡುತ್ತಿದ್ದ ಅವನ ಚಡ್ಡಿ ಕಳಚಿದೆ. ತನ್ನ ಗೇಣುದ್ದದ ಬನಿಯನ್ ಎಳೆದೂ ಎಳೆದೂ ಮಾನ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವನೊಂದಿಗೆ ನಸುನಗುತ್ತಾ ಮನೆಯತ್ತ ಹೆಜ್ಜೆ ಹಾಕಿದೆ.

(ವಿ.ಸೂ: ಮಳೆಯ ಬಗ್ಗೆ ಎನ್ನುತ್ತಾ, ಆಷಾಢದ ಬಗ್ಗೆ, ಅದು ಸಹ ಶ್ರಾವಣ ಕಳೆದು ಭಾದ್ರಪದದಲ್ಲಿ ಬರೆದು... ಇದೆಂತಾ ಅನ್ನಬೇಡಿ., ತೆಂಗಿನ ಮರದ ಬಗ್ಗೆ ತಯ್ಯಾರಾಗಿ ಕ್ಲಾಸಿಗೆ ಹೋಗಿದ್ದ ವಿದ್ಯಾರ್ಥಿಗೆ ಮಾಸ್ಟ್ರು ಹಸುವಿನ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದು , ಕೊನೆಗೆ ತೆಂಗಿನ ಮರವನ್ನೆಲ್ಲಾ ವರ್ಣಿಸಿ, ಇಂತಹ ತೆಂಗಿನ ಮರಕ್ಕೆ ಹಸುವನ್ನು ಎಳೆದು ಕಟ್ಟಲಾಯಿತು ಎಂದು ವಿದ್ಯಾರ್ಥಿ ಪ್ರಂಬಂಧ ಮುಗಿಸಿದ್ದು ನಿಮಗೆ ಗೊತ್ತಿರಬಹುದು!!)

6 ಕಾಮೆಂಟ್‌ಗಳು:

  1. ನಿಮ್ಮ ಬಾಲ್ಯದ ಸಾಹಸಗಳು ಭಯಂಕರವಾಗಿವೆ, ಶಾನಿ ಮೇಡಮ್! ಓದುತ್ತಿದ್ದಂತೆ ಮೈ ನವಿರೇಳುತ್ತಿತ್ತು.

    ಪ್ರತ್ಯುತ್ತರಅಳಿಸಿ
  2. ಕಾಕ,
    ಅದನ್ನೆಲ್ಲಾ ನೆನಪಿಸಿಕೊಂಡರೆ ನನಗೇ ಅಚ್ಚರಿಯಾಗುತ್ತದೆ!

    ಪ್ರತ್ಯುತ್ತರಅಳಿಸಿ
  3. ಇಂದಿರಾ ಟೀಚರ್ ಹತ್ಯೆಗೆ ಸಂಚು ರೂಪಿಸಿದ್ದಿರಿ ಅಂತಾಯ್ತು!

    ಪ್ರತ್ಯುತ್ತರಅಳಿಸಿ
  4. ಅನಾಮಧೇಯರೇ,
    ಕೇಸುಗೀಸೇನಾದರೂ ಹಾಕುತ್ತೀರೋ ಹೇಗೆ?
    ದಮ್ಮಯ್ಯ ಬೇಡ

    ಪ್ರತ್ಯುತ್ತರಅಳಿಸಿ