ಶುಕ್ರವಾರ, ಮೇ 2

ಪತ್ರಬರಿ, ಪ್ಲೀಸ್

ಆಗಷ್ಟೆ ಸೈನ್‌ಇನ್‌ಆಗಿ ಗಡಿಬಿಡಿಯಲ್ಲಿ ಅದೇನೋ ಮಾಡುತ್ತಿದ್ದೆ. ನನ್ನ ಬಾಸ್, ಮಿತ್ರ, ಭ್ರಾತೃ, ಕೆಲವೊಮ್ಮೆ ಅಮ್ಮ, ಎಲ್ಲವೂ ಆಗಿರುವ ನನ್ನ ಊರಿಯನ್ ಸಹೋದ್ಯೋಗಿ, ವಿಜಯ ಕರ್ನಾಟಕದ ಪ್ರತಿಯೊಂದನ್ನು ತಂದು ನನ್ನ ಕೈಲಿಟ್ಟು, "ನೋಡಿ ನಿಮ್ಮ ಗೆಳತಿ ನಿಮ್ಮ ಬಗ್ಗೆ ಬರೆದಿದ್ದಾರೆ" ಎಂದರು. ದಿನದ ಹಿಂದೆ ಫೋನ್ ಮಾಡಿದ್ದಾಗ ಅವಳೂ ಸೂಚ್ಯವಾಗಿ ಇದನ್ನು ಹೇಳಿದ್ದಳು.

ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೆ ಬಿಟ್ಟು, ಏನು ಬರೆದಿದ್ದಾಳೆಂಬ ಕುತೂಹಲದಿಂದ, ಗಬಕ್ಕನೆ ಪತ್ರಿಕೆಯನ್ನು ಬಿಡಿಸಿ ಅವಸರವಸರದಲ್ಲಿ ಎಲ್ಲಾ ಪುಟಗಳನ್ನು ಕೆದಕಿ, ಕೊನೆಗೂ ಆ ಬರಹದ ಮೇಲೆ ನನ್ನ ಕಣ್ಣು ಲ್ಯಾಂಡ್ ಆಯಿತು. ಹೀಗೆ ಬರೆದಿದ್ದಾಳೆ. ಪತ್ರಬರಿ, ಪ್ಲೀಸ್.... ಎಂಬುದು ತಲೆಬರಹ.

"ದೂರದಲ್ಲಿರುವ ಗೆಳತಿ ಇತ್ತೀಚೆಗೆ ಇದೊಂದು ವರಾತ ತೆಗೀತಾ ಇದ್ದಾಳೆ. ಮೊಬೈಲ್ ಮಾಡಿದಾಗೆಲ್ಲ, ಪತ್ರಬರೀ, ಪತ್ರಬರೀ ಅಂತ ಪ್ರಾಣ ತಿನ್ನುತ್ತಿರುತ್ತಾಳೆ. ಇ-ಮೇಲಾದರೂ ಮಾಡೋಣ ಎಂದರೆ, ಇ-ಮೇಲ್ ಬೇಡ. ಕಂಪ್ಯೂಟರ್ ನೋಡಿ ಸಾಕಾಗಿದೆ. ಪತ್ರ..... ಬಿಳಿಯ ಹಾಳೆಯಲ್ಲಿ ನಿನ್ನ ಉರುಟುರುಟು ಅಕ್ಷರ ನೋಡಬೇಕು ಅನ್ನಿಸುತ್ತಿದೆ ಅನ್ನುತ್ತಾಳೆ! ಈ ಬಾರಿ ಖಂಡಿತ ಬರಿತೇನೆ ಕಣೇ ಅನ್ನುತ್ತೇನೆ ನಾನು. ಎರಡು ವರ್ಷ ಆಯಿತು ಉದ್ಯೋಗಕ್ಕಾಗಿ ಅವಳು ಊರು ಬಿಟ್ಟು. ಅಲ್ಲಿಂದ ನಂತರ ಅವಳದ್ದು ಪ್ರತೀಬಾರಿ ಇದೇ ವರಾತ. ನನ್ನದು ಎಂದಿನ ಉತ್ತರ...." ಅಂತ ಶುರುವಿಕ್ಕಿಕೊಂಡ ಅವಳ ಬರಹ, ಪತ್ರ ಬರೆಯುವಾಗಿನ ಖುಷಿ, ಪತ್ರಕ್ಕಾಗಿ ಕಾತರ, ಕೈಸೇರುವಾಗಿನ ಬಿಸುಪು ಎಲ್ಲವನ್ನು ವಿವರಿಸಿ, ಪತ್ರಗಳ ಹಾರಾಟವನ್ನು ಮೊಬೈಲು, ಇ-ಮೇಲುಗಳು ತಿಂದು ಹಾಕಿವೆ ಎಂದು ಸಾಗಿತ್ತು.

ಅವಳು ಬರೆದದ್ದು ಸರಿ. ಪತ್ರಬರಿ ಎಂಬುದಾಗಿ ನಾನು ಹೇಳಿದ್ದು ಹೌದು. ನಾನು ಊರು ಬಿಡುವ ಮುನ್ನ ಅವಳು ಬೇಸರದಂತ ಮುಖ ಮಾಡಿದಾಗ, ಖಂಡಿತ ಪತ್ರ ಬರೀತೆನೆ; ನೀನೂ ಬರಿ ಅಂದಿದ್ದೆ. ನಾವೂ ಪತ್ರ ಸಂಕಲನವನ್ನು ಹೊರತರೋಣ ಎಂದು ಹೇಳಿ, ಕೃಷ್ಣಾನಂದ ಕಾಮತ್ ಹಾಗೂ ಜ್ಯೋತ್ಸ್ನಾ ಕಾಮತರ ನಡುವಿನ ಪತ್ರ ಸಂಕಲನವನ್ನು ನೆನಪಿಸಿಕೊಂಡೆವು. ಇಬ್ಬರೂ ಈ ಬಗ್ಗೆ ಒಪ್ಪಂದ ಮಾಡಿಕೊಂಡು, ಸಂಕಲನ ಬಿಡುಗಡೆಯಾದಂತೆ ಖುಷಿಯನ್ನೂ ಸಂಭ್ರಮಿಸಿದ್ದೆವು. ಇದಕ್ಕೆ ಜನತಾ ಡಿಲಕ್ಸ್ ಹೋಟೇಲಿನ ಗ್ಲಾಸು, ಪ್ಲೇಟುಗಳೇ ಸಾಕ್ಷಿ! ಏನೇ ಆದರೂ ಕೊಟ್ಟ ಮಾತಿಗೆ ತಪ್ಪಬಾರದು ಎಂಬ ದುರಭ್ಯಾ,ಸ ಇರುವ ನಾನು ಹೊಸ ಜಾಗ, ಹೊಸ ಪರಿಸರದಲ್ಲಿ ಕಾಡುವ ಹೋಮ್ ಸಿಕ್ಕನ್ನು ಸೇರಿಸಿ ತುಂಬ ರಸವತ್ತಾದ ಪತ್ರವನ್ನೇ ಅವಳು, ಸೀತಾ ಹಾಗೂ ಭಾರತಿ ಮೂವರಿಗೆ ಸೇರಿಸಿ ಬರೆದು ನನ್ನ ಹೊಸ ವಿಳಾಸವನ್ನೂ ನಮೂದಿಸಿ ಪೋಸ್ಟ್ ಮಾಡಿದ್ದೆ. ಇದಾಗಿ ಸರಿಸುಮಾರು ಎರಡು ವರ್ಷಗಳು ಆಗುತ್ತಾ ಬಂದರೂ, ಎಂದಿನ ದಿವ್ಯನಿರ್ಲಕ್ಷ್ಯದ ಸ್ವಭಾವದ ಅವಳಿಂದ, ಇಂದಿಗೂ ಇದಕ್ಕೆ ಉತ್ತರ ಬರಲಿಲ್ಲ.

ಮೊನ್ನೆ ಇವಳ ಬರಹ ನೋಡಿದಾಗ ನಂಗೇ ಸಿಟ್ಟೇ ಬಂದಿತ್ತು। ಮೊಬೈಲು ಮಾಡಿದಾಗೆಲ್ಲ...... ಎಂಬುದಾಗಿ ರಾಗಎಳೆದಿರುವ ಅವಳು, ಇದುವರೆಗೆ ಅವಳಾಗಿ ನಂಗೆ ಒಂದೇ ಒಂದು ಬಾರಿಯೂ ಫೋನ್ ಮಾಡಿದ ಉದಾಹರಣೆ ಮದ್ದಿಗೂ ಇಲ್ಲ। ಹೋಗಲಿ ನಾನು ಮಾಡಿದರೂ, ನನ್ನ ಕರೆನ್ಸಿ ಮುಗಿಯುತ್ತೆ ಎಂಬ ದಾವಂತ ಅವಳಿಗೆ। ಪೀನಾರಿ ಪಿಟ್ಟಾಸಿ ಎಂದು ಎಷ್ಟೋ ಬಾರಿ ಬಯ್ದಿದ್ದೆ. ನಾನು ಈಚಿನಿಂದ ಫೋನು ಮಾಡಿದಾಗೆಲ್ಲ (ಎಸ್ಟಿಡಿ) ಥೇಟ್ ಎದುರು ಸಿಗುವಾಗ ನಗುವಂತೆ, ಅದೇ ಟೋನಿನಲ್ಲಿ ಅಷ್ಟೇ ಹೊತ್ತು ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ........ ಎಂದು ಕತ್ತು ಮುರಕೊಂಡಂತೆ ನಗುವ ಅವಳ ಮಾತಿಗಿಂತ ಹೆಚ್ಚು ನಗುವಿಗೇ ನನ್ನ ಕರೆನ್ಸಿ ಖರ್ಚಾಗಿದೆ. ಅವಳೊಡನೆ ಮಾತಾಡಬೇಕೆಂದು ನಾನೀಚಿಂದ ಪೋನು ಮಾಡಿದ್ದರೂ, ನಂಗೆ ಮಾತಿಗೆ ಎಡೆಗೊಡದಂತೆ, ಮತ್ತೇನು ಎನ್ನತ್ತಲೇ ವಟಗುಟ್ಟುವ ಅವಳೊಂದಿಗೆ ಮಾತೆಂದರೆ ಕಡ್ಲೆಕಾಯಿ ತಿಂದಂತೆ. ಕೆಲವೊಮ್ಮೆ ತಲೆ ಚಿಟ್ಟು ಹಿಡಿವಾಗ, ಸಮಸ್ಯೆಗೆ ಬಿದ್ದಾಗ, ಸಂದಿಗ್ಧತೆಗೆ ಸಿಲುಕಿದಾಗ, ನನ್ನ ಲೀಗಲ್ ಅಡ್ವೈಸರೂ ಆಗಿರುವ ಅವಳಿಗೆ ಫೋನ್ ಮಾಡೋದು ನಂಗೆ ನಿಜಕ್ಕೂ ಖುಷಿ. ಹಾಗೆಯೇ,ಅವಳಂತೆ ಉರುಟುರುಟಾಗಿರುವ ಅಕ್ಷರಗಳನ್ನು ಅವಳು ಬಿಳಿಯ ಹಾಳೆಯಲ್ಲಿ ಪೋಣಿಸಿದ ಪತ್ರವೂ ಖುಷಿಯೇ.

ಆದರೆ, ಫೋನ್ ರಿಂಗಾದಾಗ ಸ್ವೀಕರಿಸಲಾಗದಿದ್ದರೆ, ಬಳಿಕ ಕನಿಷ್ಠ ಒಂದು ಮಿಸ್ ಕಾಲ್ ಕೊಡೋ ಜಾಯಮಾನದವಳೂ ಅಲ್ಲ ಅವಳು. ಅಂತ ಸಂದರ್ಭದಲ್ಲೆಲ್ಲ ಇದಕ್ಕಾಗೆ ಅವಳನ್ನು ಬಯ್ಯಲು ನನ್ನ ಇನ್ನಷ್ಟು ಕರೆನ್ಸಿ ಮುಗಿಸಿಕೊಂಡಿದ್ದೇನೆ.

ಇಂಥಾ ಅವಳು, ಮೊಬೈಲು ಮಾಡಿದಾಗೆಲ್ಲ...... ಎಂದು ಕೊಚ್ಚಿಕೊಂಡಿರುವುದನ್ನು ಕಂಡು ಮೈಯೆಲ್ಲ ಉರಿದು ಹೋಗಿತ್ತು. ಖರ್ಚಾದರೆ ಅಷ್ಟೇ ಹೋಯ್ತು. ಈಗಿಂದೀಗಲೇ ಫ್ಲೈಟಲ್ಲೇ ಹೋಗಿ, ಅವಳ ಮುಸುಡಿಗೆರಡು ಗುದ್ದಿ ಬರಬೇಕು ಅನ್ನಿಸಿತ್ತು, ಆ ಕ್ಷಣಕ್ಕೆ. ಸಾಯಂಕಾಲವಾಗಲು ಕಾದು ಆಫೀಸಿಂದ ಹೊರಬರುತ್ತಲೇ ಅವಳಿಗೆ ಫೋನ್ ಮಾಡಿದೆ. ಜಡಭರತಿಯಾಗಿರುವ ಅವಳು ಬಡಪೆಟ್ಟಿಗೆ(ರಿಂಗಿಗೆ) ಪೋನ್ ತೆಗೆಯಲಿಲ್ಲ. ಅಡುಗೆ ಮನೆಯಲ್ಲಿದ್ದಳಂತೆ. ಸಿಟ್ಟನ್ನು ಕಕ್ಕದಿರಲಾಗುತ್ತದಾ? ಮರಳಿ ಯತ್ನವ ಮಾಡಿದೆ. ಏನೇ... ಎಂಬ ಮಾಮೂಲಿ ರಾಗದೊಡನೆ ಮಾತು ಆರಂಭಿಸಿದಳು. ನಿನ್ನ ಆರ್ಟಿಕಲ್ ನೋಡ್ದೆ ಅಂದೆ. ಹೇ.... ಅಲ್ಲಿ ನಿಂಗೆ ಹೇಗೆ ಸಿಗ್ತು ಎಂಬ ಕೌತುಕ ತೋರಿದಳು. ಅಲ್ವೇ, ಈ ಎರಡು ವರ್ಷದಲ್ಲಿ ನೀನೆಷ್ಟು ಬಾರಿ ನಂಗೆ ಮೊಬೈಲು ಮಾಡಿದ್ದೀ ಅನ್ನುತ್ತಾ ತಾರಾಮಾರ ಉಗ್ದೆ. ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ........ ಎಂದು ಮತ್ತೆ ನಕ್ಕಳು. ಅಷ್ಟರಲ್ಲಿ ನನ್ನ ಕೋಪ ಏರಿದ್ದ ರಭಸದಲ್ಲೇ ಇಳಿಯಲಾರಂಭಿಸಿತ್ತು.

ಊರಿನಬಗ್ಗೆ, ಅಕಾಲಿಕವಾಗಿ ಸುರಿದ ಮಳೆಯ ಬಗ್ಗೆ ಮಾತಾಡಲಾರಂಭಿಸಿದೆವು. ಮಧ್ಯೆ ಎಚ್ಚೆತ್ತವಳಂತೆ ನಿನ್ನ ಕರೆನ್ಸಿ ಅಂತ ಜ್ಞಾಪಿಸಿದಳು. ಹೋಗ್ಲಿ ಬಿಡೆ, ದುಡಿಯೋದು ಯಾಕೆ? ನಿಂಗಿಂತಾ ಕರೆನ್ಸಿ ಹೆಚ್ಚಾ ಎಂಬ ಸೆಂಟಿಮೆಂಟಲ್ ಡಯಲಾಗ್ ಹೊಡ್ದೆ. ನಡುವೆಯೇ, ಈ ಜಗಳವನ್ನೂ ಬರೀ... ಎಂದಳು. ಒಪ್ಪಿಕೊಂಡೆ.

ಕೊನೆಯಲ್ಲಿ, ಹೋಗ್ಲಿ ನನ್ನ ಪತ್ರಕ್ಕೆ ಈಗಲಾದರೂ ಉತ್ತರ ಬರೆ- ಭಿನ್ನೈಸಿದೆ. ಯಾವ್ದು? ನೀನು ಪತ್ರ ಬರೆದಿದ್ದೆಯಾ ಅಂತ ಕೇಳಿದಳು. ಭೂಮಿಯೇ ಬಾಯ್ಬಿರಿಯಬಾರದಾ ಅನ್ನಿಸಿತು. ಅದಕ್ಕೆ ತಕ್ಕಂತೆ ಎದುರಲ್ಲಿ ಓಪನ್ ಮ್ಯಾನ್‌ಹೋಲ್ ಇತ್ತು. ಆದರೆ, ಅವಳಿಗೆ ಬಯ್ದು ಮುಗಿಸದೆ ಹಾರುವುದಾದರೂ ಹೇಗೆ? ಪುಣ್ಯಾತಿಗೆತ್ತಿಗೆ ನಾನು ಬರೆದ ಪತ್ರ ಮರೆತೇ ಹೋಗಿತ್ತು. ನೆನಪು ಮಾಡಿಕೊಂಡವಳು ಮತ್ತೆ ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ.......
ಇಷ್ಟೆಲ್ಲಾ ಬರ್ದಿದ್ದಿಯಾ, ಸ್ವಾಭಿಮಾನ ಅಂತೇನಾದರೂ ನಿನ್ನಬಳಿ ಇದ್ದಲ್ಲಿ ಪತ್ರ ಬರೀ ಎಂದೆ. ಖಂಡಿತ ಕಣೆ ಅಂದಳು. ಬಹುಶಃ ಸ್ವಾಭಿಮಾನವನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದಾಳೆ ಕಾಣಿಸುತ್ತೆ. ತಿಂಗಳಾಯಿತು. ಇನ್ನೂ ಪತ್ರವಿಲ್ಲ.

ಪತ್ರ ಸುಖದ ಆ ದಿನಗಳ ಬಗ್ಗೆ ಹೇಳಿಕೊಳ್ಳಲು ಬಹಳವಿದೆ. ಇನ್ನೆಂದಾದರೂ ಹೇಳಿಯೇನು.