ಬುಧವಾರ, ಸೆಪ್ಟೆಂಬರ್ 3

ಹೇಗೆ ತಲೆ ಅಲ್ಲಾಡಿಸಬೇಕೆಂಬುದೂ ಗೊತ್ತಿಲ್ಲದ....

ವೇದಿಕೆಯ ಮೇಲೆ ಅವರು "ಭವ, ಭಯ, ದುಃಖವ ಬಿಡಿಸೋ....." ಎಂದು ತನ್ಮಯತೆಯಿಂದ ಹಾಡುತ್ತಲೇ ಇದ್ದರು. ಆದರೆ ನಾನು ಮಧ್ಯದಲ್ಲಿ ಎದ್ದು ಹೋಗಬೇಕಲ್ಲವೇ ಎಂಬ ದುಃಖದಿಂದ, ರಾತ್ರಿ ಲೇಟಾಗಿ ಹೋದರೆ ಅಪಾಯಕ್ಕೊಡ್ಡಿಕ್ಕೊಳ್ಳಬೇಕಾದೀತು ಎಂಬ ಭಯದಿಂದ, ಮನಸ್ಸಿಲ್ಲದ ಮನಸ್ಸಿನಿಂದ ಸಂಗೀತ ಕಛೇರಿ ಎಂಬ ಭವಬಂಧನದಿಂದ ಮುಕ್ತಿಹೊಂದಲೇಬೇಕಾಗಿತ್ತು.

ಮೊನ್ನೆ ಭಾನುವಾರ ಶ್ರೀ ವಿದ್ಯಾಭೂಷಣ ಸ್ವಾಮೀಜಿ(ಮಾಜಿ)ಯವರ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅನುಭವಿಸಿದ್ದ ಸಂಕಟಗಳಿವು. ನಿಮ್ಮ ಬಳಿ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಇಲ್ಲೀಗ ನಾನು ಹೇಳುತ್ತಿರುವುದೆಲ್ಲ ಸತ್ಯ. ನನಗೆ ಮಧುರವಾದ ಸಂಗೀತವನ್ನು ಕೇಳಲಷ್ಟೆ ಗೊತ್ತು. ಮಿಕ್ಕಂತೆ ಅದರ ಆಳ, ತಾಳ ಒಂದೂ ಗೊತ್ತಿಲ್ಲ. ಆದರೆ ಇಂಪಾದ ಸಂಗೀತ ಕೇಳಿ ಮನಸ್ಸು ಹಗುರ ಮಾಡಿಕೊಳ್ಳುವುದು, ಆಗೀಗ ಯಾವಾಗಲಾದರೂ ಅವಕಾಶ, ಸಂದರ್ಭ ಒದಗಿದಾಗ ಸಂಗೀತ ಕಾರ್ಯಕ್ರಮಗಳಿಗೆ ಹೋಗುವ ಖಯಾಲಿ ಇತ್ತಾದರೂ, ಈಚಿನ ಎರಡು ವರ್ಷಗಳಿಂದ ಅದೂ ಕಮ್ಮಿಯಾಗಿದೆ.

ನಂಗೆ ವಿದ್ಯಾ(ಸಂಗೀತ)ಭೂಷಣರ ಹಾಡು ಕೇಳುವುದೆಂದರೆ ಆವರ್ಚನೀಯ ಆನಂದ. ಒಂಟಿ ಭೂತದಂತೆ ಜೀವಿಸುತ್ತಿರುವ ನಾನು ಅವರ ಹಾಡುಗಳನ್ನು ಕೇಳುತ್ತಿರುತ್ತೇನೆ. ಇಂತಿಪ್ಪ ನನಗೆ ಮೊನ್ನೆ ಅವರ ಕಾರ್ಯಕ್ರಮ ಇದೆ ಎಂದಾಗ ಹೋಗಲೇಬೇಕೆಂಬ ತುಡಿತ ಉಂಟಾಗಿತ್ತು. ನಾವೆಲ್ಲ ಸಹೋದ್ಯೋಗಿಗಳು ಗಂಟೆ ಮುಂಚಿತವಾಗೇ ಹೋಗಿ, ಕಾರ್ಯಕ್ರಮ ಆಯೋಜಕರು ಒದಗಿಸಿದ್ದ ಲಘುಉಪಹಾರ ಮೆದ್ದು, ಆಯಕಟ್ಟಿನ ಜಾಗವನ್ನು ಗಟ್ಟಿಮಾಡಿ ಕುಳಿತಿದ್ದೆವು. ಆದರೆ ನಿಗದಿತ ಸಮಯಕ್ಕಿಂತ ಸಾಯಂಕಾಲ ಕೊಂಚ ಲೇಟಾಗೇ ಕಾರ್ಯಕ್ರಮ ಆರಂಭವಾಯಿತು. ಛೇ ಅರ್ಧದಿಂದಲೇ ಎದ್ದು ಹೋಗಬೇಕು ಎಂಬ ಚಡಪಡಿಕೆಗೆ ಬಿದ್ದಿದ್ದೆ. ಕಾರ್ಯಕ್ರಮ ರಂಗೇರುತ್ತಿರುವಂತೆ ಇದು ಮುಗಿಯುತ್ತದಲ್ವೇ ಎಂಬ ಉದ್ವೇಗ. ಸ್ವಾಮೀಜಿ, ಸಾನು ರಾಗದಿಂದ ಹರಿಯಾ... ಎಂದು ಏರುದನಿಯಲ್ಲೇ ಆರಂಭಿಸಿದಾಗ, ಡಂಗೂರಾವಾ ಸಾರಿರಯ್ಯಾ ಹಾಡುವಾಗ ಮನಸ್ಸಿಗೆ ಕುಣಿಯುವ ತುಡಿತ. ದಾಸನಾಗುವುದಕ್ಕೆ ಏಸು ಜನ್ಮದ ಸುಕೃತ...., ದಾಸನ ಮಾಡಿಕೋ ನನ್ನಾ...., ಹಕ್ಕಿಯ ಹೆಗಲೇರಿ ಬಂದಾವಗೆ...., ಎಲ್ಯಾಡಿ ಬಂದ್ಯೂ ರಂಗಯ್ಯ...., ಯಾರೇ ರಂಗನ ಕರೆಯ ಬಂದವರೂ... ಎಂದು ಅವರು ಮೈಮರೆತು ಹಾಡುತ್ತಿದ್ದಾಗ ಮಂತ್ರಮುಗ್ಧಳಂತೆ ಕೇಳುತ್ತಿದ್ದ ನನ್ನ ಕಣ್ಣಂಚಿನಲ್ಲಿ ನೀರು ಬಿಂದುಗಟ್ಟಿತ್ತು.

ಸಭಾಂಗಣ ತುಂಬಿತ್ತು. ಪ್ರತಿಯೊಬ್ಬರು ಹರಿದು ಬರುತ್ತಿದ್ದ ಗಾನುಸುಧೆಯನ್ನು ಕಿವಿಯೊಳಗೆ ತುಂಬಿ ಮನದೊಳಗೆ ಇಳಿಸುತ್ತಾ ರಸಸ್ವಾದ ಮಾಡುತ್ತಿದ್ದರು. ಮೃದಂಗ ಮತ್ತು ಘಟಂ ವಾದಕರು ಪರಸ್ಪರ ಸವಾಲೊಡ್ಡಿಕೊಂಡು ಸಂಗೀತ ರಸಿಕರಿಗೆ ಔತಣ ನೀಡುತ್ತಿದ್ದರೆ, 76ರ ಹರೆಯದ ಮೃದಂಗ ವಿದ್ವಾನ್ ಶ್ರೀಮಾನ್ ಗೋಪಾಲಕೃಷ್ಣ ಅವರ ಚಾತುರ್ಯ ಕಂಡು ಬೆರಗಾದ ನನಗೆ, ಸಿಟ್ಟಿನಿಂದ ಕಂಪೋಸ್ ಮಾಡುವಾಗ ನನ್ನ ಬೆರಳುಗಳು ಕೀಬೋರ್ಡ್ ಮೇಲೆ ಮಾತ್ರ ಈ ವೇಗದಲ್ಲಿ ಚಲಿಸಲು ಸಾಧ್ಯ ಎಂಬ ಯೋಚನೆ ಸುಳಿಯದಿರಲಿಲ್ಲ. ಇದಲ್ಲದೆ, ಮೃದಂಗ, ಘಟಂ, ವಯೋಲಿನ್‌ಗಳ ಪರಸ್ಪರ ಸವಾಲು ಚಿಕ್ಕಂದಿನಲ್ಲಿ ಅಕ್ಕಗಳೊಂದಿಗೆ ಜಗಳ ಗೆಲ್ಲುವ ರೀತಿಯನ್ನು ನೆನಪಿಸುತ್ತಿತ್ತು. ಯಾಕೆಂದರೆ ಎದುರಾಳಿಯನ್ನು ಗೆಲ್ಲಲು ಅವರಿಗಿಂತ ನಮ್ಮದೇ (ಮಾತಿರಲಿ, ಹೊಡೆದಾಟವಿರಲಿ) ನಮ್ಮದೇ ಒಂದು ಕೈ ಮೇಲಾಗಬೇಕಿತ್ತಲ್ಲವೇ?

ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ, ತ್ರಾಸಿ, ಘಟಂ ವಾದಕರ ಆವೇಶ ಕಂಡು, "ಅಯ್ಯೋ ಮಡಿಕೆ ಒಡೆದೇ ಹೋದರೆ ಏನು ಮಾಡೋದು; ಮತ್ತೆ ಚೆಂಬೇ ಗತಿ..." ಎಂಬ ಅವರ ಹಾಸ್ಯಪ್ರಜ್ಞೆ ಮೆರೆಯುತ್ತಿದ್ದರು. ಹಾಗೆ ನಾನು ಹಿಂದೆ ತಿರುಗಿ ನೋಡಿದಾಗ ಅವರ ಪಕ್ಕದ ಆಸನದಲ್ಲಿ ಕುಳಿತಿದ್ದವರು ನನ್ನನ್ನು ನೋಡಿ ನಕ್ಕಂತಾಯಿತು. ಅರೆ, ಇವರನ್ನು ನಾನೆಲ್ಲಿ ನೋಡಿದ್ದು ಎಂದು ಚಿಂತೆಗೆ ಬಿದ್ದಾಗ, ಶಾಭಾಸ್.... ಎಂಬ ಉದ್ಗಾರ ಅವರ ಬಾಯಿಂದ! ನಿಜವಿಚಾರ ಏನೆಂದರೆ, ವಿದ್ಯಾಭೂಷಣರ ಸಂಗೀತದಿಂದ ಭಾವಪರವಶರಾಗಿದ್ದ ಅವರ ಮುಖ ಸಂತಸದಿಂದ ಆ ಭಾವ ವ್ಯಕ್ತ ಪಡಿಸುತ್ತಿತ್ತು. ಆದರೆ, ಅವರು ನನ್ನ ಕಂಡು ಪರಿಚಿತ ನಗುಬೀರುತ್ತಿದ್ದಾರೆ ಎಂಬ ಭ್ರಮೆಗೆ ಬಿದ್ದ ನಾನು, ಅವರಿಗೆ ನನ್ನ ಪ್ರತಿಮುಗುಳ್ನಗು ಹಾಯಿಸಿದ್ದೆ! ಅವರ ವೇಷಭೂಷಣ-ಹಾವಭಾವಗಳು, ತಾಳಹಾಕುವ ಪರಿ, ಇನ್ವಾಲ್ವ್‌ಮೆಂಟ್ ಎಲ್ಲವೂ ಅವರೂ ಸಂಗೀತ ಪಂಡಿತರೆಂದೇ ಹೇಳುತ್ತಿದ್ದರೂ, ಆಮೇಲೆ ತ್ರಾಸಿ ಸಂಗ್ರಹಿಸಿದ್ದ ಮಾಹಿತಿ ಪ್ರಕಾರ ಅವರು ದೂರದರ್ಶನದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವ ಬಹು ದೊಡ್ಡ ಕಲಾವಿರು ಎಂಬ ವಿಚಾರ ಗೊತ್ತಾಗಿತ್ತು.

ಈ ಹಿಂದೊಮ್ಮೆ ಮೂಡಬಿದ್ರೆಯಲ್ಲಿ ಆಳ್ವಾಸ್ ವಿರಾಸತ್‌ ವೇಳೆ ಪರ್ವೀನ್ ಸುಲ್ತಾನ್ ಅವರ ಗಾಯನ ಕಾರ್ಯಕ್ರಮಕ್ಕೆ ಹೋಗಿದ್ದೆವು. ಹೋಗಿದ್ದೆವು ಅಂದರೆ ಜತೆಯಲ್ಲಿ ಶಿಮ್ಲಡ್ಕ ಸಹೋದರಿಯರಾದ ಪುಷ್ಪ ಮತ್ತು ಆಕೆಯ ತಂಗಿ ನೃತ್ಯಗಾತಿ ವಿದ್ಯಾ ಇದ್ದರು. ನಂಗೆ ಸಂಗೀತದ ಗಂಧ ಗಾಳಿ ಒಂದೂ ಇಲ್ಲದಿದ್ದರೂ, ಲಘು ಸಂಗೀತ ಕಲಿತಿರುವ, ಕಲಿಯುತ್ತಲೇ ಇರುವ ಪುಷ್ಪಳಿಗೆ ಒಂಚೂರು ಗಾಳಿ ಇದೆ. ಅವಳ ತಂಗಿಗೆ ಗಾಳಿಯೊಂದಿಗೆ ಸೊಲೂಪ ಗಂಧವೂ ಇದೆ. ಎಲ್ಲಿ ಚಪ್ಪಾಳೆ ಹೊಡೆಯಬೇಕು ಎಂಬುದಕ್ಕಾಗದರೂ ಕನಿಷ್ಠ ಸಂಗೀತ ಜ್ಞಾನವಿರಬೇಕು ಎಂದು ನನ್ನನ್ನೇ ಬಯ್ದುಕೊಂಡ (ಆದರೂ, ಒಂದಾನೊಂದು ಕಾಲದಲ್ಲಿ ಯಕ್ಷಗಾನದಲ್ಲಿ ಒಂದಿಷ್ಟು ಕಾಲಾಡಿಸಿರುವ ನನಗೆ 'ಧದೀಂ ಗಿಣತೋಂ....' ಸ್ವಲ್ಪ ಗೊತ್ತಾಗುತ್ತದೆ) ನಾನು, ಈ ಸಹೋದರಿಯರ ಎದುರು ನನ್ನ ಸಮಸ್ಯೆ ತೆರೆದಿಟ್ಟಿದ್ದೆ. ಅಲ್ಲ ಕಣೇ, ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ತಲೆ ಅಲ್ಲಾಡಿಸುತ್ತಾ ಇರುತ್ತಾರೆ. ನಂಗೆ ಹೇಗೆ ತಲೆ ಅಲ್ಲಾಡಿಸಬೇಕು ಎಂಬುದೂ ಗೊತ್ತಿಲ್ಲ ಎಂದು ನನ್ನ ಅಜ್ಞಾನವನ್ನು ಮುಲಾಜಿಲ್ಲದೆ ತೋಡಿಕೊಂಡೆ. ನಿನ್ನ ತಲೆ ಹೇಗೆ ಅಲ್ಲಾಡುತ್ತದೆಯೋ, ಹಾಗೇ ಅಲ್ಲಾಡಿಸು ಅದಕ್ಕೆ ವಿಶೇಷ ಜ್ಞಾನ ಬೇಕಿಲ್ಲ ಎಂದಿದ್ದಳು ವಿದ್ಯ. ಇಂಪಾದ ಸಂಗೀತ ಕಿವಿಗೆ ಬೀಳುತ್ತಲೆ, ತಲೆ (ಒಳಗೆ ಖಾಲಿ ಇದ್ದರೂ) ಸ್ವಯಂಚಾಲಿತವಾಗಿ ಚಲಿಸುವ ಕಾರಣ ಅದನ್ನು ಸುಮ್ಮಿನಿರಿಸಲು ಆಗುವುದೇ ಇಲ್ಲ. ಕೈಯಿಯೂ ತಾನೇನು ಕಮ್ಮಿ ಇಲ್ಲ ಎಂದು ತಾಳ ಹಾಕುತ್ತದೆ.

ಮೊನ್ನೆ ಹೀಗೆ ಕಾರ್ಯಕ್ರಮ ಪೂರ್ತಿ ಕೂರಲಾಗಲಿಲ್ಲ ಎಂಬ ಅತೃಪ್ತಿಯಿಂದಲೂ, ಸುಮಾರು ಎರಡು ಗಂಟೆ ಸಂಗೀತ ಕೇಳಿದ ಸಂತೃಪ್ತಿಯಿಂದಲೂ ಎದ್ದು ಬರುವಾಗ ಲಘು ಸಂಗೀತ ಕ್ಲಾಸಿಗೆ ಸೇರಬೇಕು ಎಂದು ನೂರಾ ಐವತ್ತಮೂರನೆ ಬಾರಿಗೆ ಯೋಚಿಸಿದೆ. ಈ ಹಿಂದೆ ಸಂಗೀತ ಕ್ಲಾಸಿಗೆ ಸೇರಲು ಒಂದೆರಡು ಬಾರಿ ಯತ್ನಿಸಿ, ಅದೇನೋ ವಿಘ್ನಗಳು ಬಂದು ಸೋತಿದ್ದೇನೆ. ಬಾಯ್ಬಿಟ್ಟರೆ ನನ್ನದು ಗಾರ್ದಭ ಗಾಯನ. ಹೇಗಾದರೂ, ಗೀತೆಗಳನ್ನು ಹಾಡುವಷ್ಟಾದರೂ ಕಲಿತುಕೊಳ್ಳಬೇಕು ಎಂಬ ನನ್ನ ಆಸೆ, ಜಾರಿಯಾಗದೆ ನನೆಗುದಿಗೆ ಬಿದ್ದಿರುವ ಇತರ ಎಷ್ಟೋ ಇಂತಹ ಯೋಜನೆಗಳ ಪಟ್ಟಿಗೆ ಸೇರಿದೆ.