ಬುಧವಾರ, ಡಿಸೆಂಬರ್ 31

ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು

ಬಲ್ಲಿರೇನಯ್ಯಾ............?

ಭಳಿರೇ ಪರಾಕ್ರಮ ಕಂಠೀರವಾ....

ಈ ಅಖಂಡ ನರ್ಕಾಟಕ್ಕೆ ಯಾರೆಂದು ಕೇಳಿ ಬಲ್ಲಿರೀ.....?

ಶ್ರೀ.....ಶ್ರೀ.......ಶ್ರೀ.....ಶ್ರೀ....... ರಾಡಿಯೂರಪ್ಪ ಎಂದು ಕೇಳಿಬಲ್ಲೆವೂ.....

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು........

ಆಹಾ.... ಜಗತ್ತು ಅದೆಷ್ಟು ಸುಂದರವಾಗಿದೆ। ಚುಮುಚುಮು ಚಳಿಯ, ಇಬ್ಬನಿ ಚೆಲ್ಲುವ, ತಂಪುಗಾಳಿಯ ಈ ಉದ್ಯಾನ ನಗರಿಯ ವಾತಾವರಣವಿಂದು ಅತ್ಯಾಹ್ಲಾದಕರವಾಗಿದೆ. ಸೂರ್ಯನ ಹೊಂಗಿರಣಗಳು ಚಿತ್ತಾರಬರೆಯುತ್ತಾ ಭುವಿಯನ್ನು ಚುಂಬಿಸುತ್ತಿರುವಂತೆ, ನಿದಿರಾ ದೇವಿಯ ಮಡಿಲಲ್ಲಿ ಬೆಚ್ಚನೆಯ ಕನಸಿನಲ್ಲಿ ಓಲಾಡುತ್ತಿದ್ದ ನಾವು ಹಂಸತೂಲಿಕಾ ತಲ್ಪದಿಂದ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಇಷ್ಟದೈವಗಳನ್ನು ಪ್ರಾರ್ಥಿಸಿ, ಉಪಾಹಾರವನ್ನು ಸೇವಿಸಿಕೊಂಡದ್ದಾಯ್ತು. ಶ್ವೇತ ಉಡುಪನ್ನು ಧರಿಸಿ, ಹಣೆಗೆ ತಿಲಕವನ್ನಿರಿಸಿಕೊಂಡು ಒಡ್ಡೋಲಗಕ್ಕೆ ಅಣಿಯಾಗಿದ್ದೇವೆ. ಸಭೆಗೆ ಬಂದು ಸಿಂಹಾಸನವನ್ನು ವಂದಿಸಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ, ಇದೇನಾಶ್ಚರ್ಯ......? ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಕಿಟಿಕಿ ಬಾಗಿಲುಗಳಲ್ಲಿ ಒಬ್ಬರಮೇಲೊಬ್ಬರು ಬಿದ್ದು ಇಣುಕುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಆಹಾ... ಸಭೆಗೆ ಏನು ಕಳೆ, ಅದೇನು ಶೋಭೆ.... ಇಂದು ನಮ್ಮ ಜನ್ಮ ಸಾರ್ಥಕವಾದಂತೆ. ಸಂತೋಷದಿಂದ ನಮಗೆ ಮಾತೇ ಹೊರಡುತ್ತಿಲ್ಲ. ಆದರೂ ನಾವು ಮಾತಾಡಬೇಕಿದೆ. ಯಾರಲ್ಲೀ.......?

ಸ್ವಾಮಿ ರಾಡಿಯೂರಪ್ಪನವರೇ, ನಿಮಗೆ ನೆನಪಿದೆಯೋ ಗೊತ್ತಿಲ್ಲ। ಈ ಹಿಂದೆ ನಾವೊಮ್ಮೆ ಒಡ್ಡೋಲಗದಲ್ಲಿ ಭೇಟಿಯಾಗಿದ್ದೆವು. ಆಗ ತಾವು ಮಿತ್ರ ದ್ರೋಹದ ವ್ಯಾಧಿಯ ವ್ಯಸನದಿಂದ ಬಳಲಿ ಬೆಂಡಾಗಿದ್ದೀರಿ. ದೈವಾನುಗ್ರಹವಿದ್ದರೆ ಇದೇ ವೇದಿಕೆಯಲ್ಲಿ ಇನ್ನೊಮ್ಮೆ ಭೇಟಿಯಾಗೋಣ ಅಂದಿದ್ದೆವು. ಬಹುಶಃ ದೈವಾನುಗ್ರಹ ನಿಮಗೊಲಿದಿದ್ದು ಇಂದು ಕಾಲಕೂಡಿ ಬಂದಿದೆ ಎನ್ನಬಹುದೂ.... ಇದೀಗ ನಿಮ್ಮ ಸಾಮ್ರಾಜ್ಯ ಅಲ್ಲಾಡದಂತೆ ಅಡಿಗಟ್ಟಿಮಾಡಿಕೊಂಡಿದ್ದೀರಿ.....

ಭಾಗವತರೇ....... ನಾವು ತುಂಬಾ ಸಂತಸಗೊಂಡಿದ್ದೇವೆ। ನಮಗೆ ಈ ಸಂತೋಷ ನೀಡಿದ ಪ್ರಜೆಗಳಿಗೆ ನಾವು ಆಭಾರಿಗಳಾಗಿದ್ದೇವೆ. ಅವರಿಗೆ ನಾವು ಅಡ್ಡಡ್ಡ ಬಿದ್ದು ವಂದಿಸುತ್ತಿದ್ದೇವೆ. ನಮ್ಮ ವೈರಿಗಳ ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ನಾವೂ ವ್ಯೂಹ ರಚಿಸಿದೆವು. ಈ ವ್ಯೂಹದಲ್ಲೀ......, ವಿಜಯಲಕ್ಷ್ಮಿಯನ್ನು ನಾವು ಲಕ್ಷ್ಮಿಯ ದಯೆಯಿಂದ, ಮದಿರೆಯ ಕರುಣೆಯಿಂದ, ವಸ್ತ್ರದ ಸಹಾಯದಿಂದ ವಶಪಡಿಸಿಕೊಂಡಿದ್ದೇವೆ. ರಾಡಿಕೀಯದಲ್ಲಿ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಯಶಸ್ವಿಯಾಗಿ ಮಾಡಿದ್ದೇವೆ. ಆದರೂ ಎಂಟು ಸಂಸ್ಥಾನಗಳಲ್ಲಿ ಮೂರು ನಮಗೆ ಧಕ್ಕಲಿಲ್ಲ. ಇರಲಿ ಬಿಡಿ. ನಮ್ಮ ಬಗ್ಗೆ ತುಂಬ ಹಗುರವಾಗಿ ಮಾತನಾಡಿ ಸೊನ್ನೆಸುತ್ತಿರುವ ನಮ್ಮ ವಿರೋಧಿಗಳೀಗ ಸಿಕ್ಕಸಿಕ್ಕ ವಸ್ತ್ರದಿಂದ ಮುಖಮುಚ್ಚಿಕೊಳ್ಳುತ್ತಿದ್ದಾರೆ. ಒಂದೂ ಸ್ಥಾನ ಧಕ್ಕದಿದ್ದಲ್ಲಿ ಕೆಲವರು ದಂಡ ಹಿಡಿದು ಹೊರಡುತ್ತೇವೆ ಅಂದಿದ್ದರು.... ಏನು ಮಾಡುತ್ತಾರೋ ಕಾದು ನೋಡೋಣ....

ಅದರೆ, ರಾಡಿಯೂರರೇ....., ಆರು ತಿಂಗಳ ನಿಮ್ಮ ಈ ಹಸುಗೂಸು ಸರ್ಕಾರ ಹೆಜ್ಜೆ ಇಡುವ ದಿಸೆಯೇ ಸರಿಇಲ್ಲ ಎಂಬ ಆರೋಪಗಳಿವೆ. ರೈತರಮೇಲೆ ಗುಂಡುಹೊಡೆದಿರೆಂಬ ದೂರಿದೆ. ಈ ಉಪ್ಪುಚುನಾವಣೆಯನ್ನು ಹೇರಿ ರಾಜ್ಯದ ಬೊಕ್ಕಸಕ್ಕೆ ಭಾರವಾದಿರೆಂಬ ತಕರಾರಿದೆ.

ಸ್ವಾಮೀ ಭಾಗವತರೇ... ದೂರು, ತಕರಾರು, ಆರೋಪಗಳು ಯಾರಿಗಿಲ್ಲ? ನಮ್ಮ ಆ ಭಗವಾನ್ ಶ್ರೀರಾಮಚಂದ್ರನೂ ಇದಕ್ಕೆ ಹೊರತಾಗಿಲ್ಲ. ನಾವೇನು ಕೋವಿ ಹಿಡಿದು ರೈತರ ಮೇಲೆ ಗುಂಡು ಹಾರಿಸಿದ್ದೇವಾ...? ಇದುವರೆಗೆ ಯಾರೂ ಮಾಡದ ರೀತಿಯಲ್ಲಿ ನಾವು ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣಮಾಡಿದೆವು. ಇದನ್ನು ನೋಡಿ ನಮ್ಮ ವೈರಿಗಳ ಕಣ್ಣಿಗೆ ಮುಳ್ಳಾಣಿ ಬಡಿದಂತಾಯಿತು. ಅವರಿದನ್ನು ಸಹಿಸಿಕೊಂಡಾರಾದರೂ ಹೇಗೆ....? ಅದಕ್ಕಾಗೇ ನಮ್ಮ ಹೆಸರಿಗೆ ಮಸಿಬಳಿಯಲು ಇದು ವಿರೋಧಿಗಳು ಹೂಡಿರುವ ಷಡ್ಯಂತ್ರ. ನಮ್ಮ ರೈತರು ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸಿಯಾರೇ....? ರಸಗೊಬ್ಬರ ಸಮಸ್ಯೆಗೆ ನಿನ್ನೆಮೊನ್ನೆ ಅಧಿಕಾರಕ್ಕೇರಿದ ಈ ಸರ್ಕಾರ ಕಾರಣವಲ್ಲ ಎಂಬುದು ಅವರಿಗೆ ಗೊತ್ತಿಲ್ಲವೇ...? ರೈತರ ಹೆಸರಿನಲ್ಲಿ ಗೂಂಡಾಗಳು, ಪೋಲಿಗಳು ಪೊಲೀಸರನ್ನು ರೊಚ್ಚಿಗೆಬ್ಬಿಸಿ ಅವರು ಗುಂಡು ಹಾರಿಸುವಂತೆ ಮಾಡಿದ್ದಾರೆಯೇ ವಿನಹ, ಸರ್ಕಾರವೇನೂ ರೈತರನ್ನು ಕೊಂದಿಲ್ಲಾ...... ಕೊಂದಿಲ್ಲಾ.... ಕೊಂದಿಲ್ಲಾ...

ಇನ್ನುಳಿದಂತೆ ಉಪ್ಪುಚುನಾವಣೆಯನ್ನು ಪ್ರಸ್ತಾಪಿಸಿದ್ದೀರಿ ನೀವು. ಬೆಳಗಾತ ಎದ್ದರೆ, ನಮ್ಮ ವಿರೋಧಿಗಳು ಉತ್ತಮ ಆಡಳಿತ ನೀಡಲು ನಮಗೆ ಸಹಕಾರ ನೀಡುವುದರ ಬದಲಿಗೆ ನಮ್ಮನ್ನು ದುರ್ಬಲಗೊಳಿಸುವತ್ತಲೇ ಆಲೋಚಿಸಿದ್ದರು. ಹಾಗಾಗಿ ನಮ್ಮ ಯಾವ ಅಭಿವೃದ್ಧಿಯತ್ತಲೂ ಗಮನ ಹರಿಸಲಾಗುತ್ತಿರಲಿಲ್ಲ. ಪುಣ್ಯ. ಆ ಶ್ರೀಲಕ್ಷ್ಮಿಯ ದಯೆಯಲ್ಲಿ ನಮ್ಮ ಮಂತ್ರಿಮಂಡಲದಲ್ಲಿ ಗಟ್ಟಿಮುಟ್ಟಾದ ಮಂತ್ರಿಗಳಿದ್ದಾರೆ. ಐದು ವರ್ಷದಲ್ಲಿ ಇನ್ನಷ್ಟು ಉತ್ತಮ ಅಭಿವೃದ್ಧಿ ಸಾಧಿಸಿಕೊಳ್ಳಬೇಕೆಂಬ ಹುರುಪು-ಹುಮ್ಮಸ್ಸಿದೆ ಅವರಲ್ಲಿ. ಅವರ ಯೋಜನೆಯ ಪ್ರಕಾರ ನಾವು ಆಪರೇಶನ್ ಮಾಡಿದೆವು. ನಮ್ಮ ರಕುಣಾರಕ ರೆಡ್ಡಿಯಂತಹ ಯುವನಾಯಕರು ಅದಿರು ಸಾಗಿಸುವಂದದಿ ನಾಯಕರನ್ನು ಲೋಡುಗಟ್ಟಲೆ ತಂದು ನಮ್ಮ ಪಕ್ಷದಲ್ಲಿ ಸುರಿದರು. ಅವರು ನಮ್ಮ ನೀತಿ-ನಿಯಮ, ಸಿದ್ಧಾಂತಗಳನ್ನು ಒಪ್ಪಿಕೊಂಡರು. ತತ್ಪರಿಣಾಮ ಅವರಿದ್ದ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ನಮ್ಮ ಪಕ್ಷದಿಂದ ಮತ್ತೆ ಚುನಾವಣೆಗೆ ಇಳಿಸಿದೆವು. ಮತದಾರ ಕೈ ಬಿಡಲಿಲ್ಲ. ಮತದಾರರಿಗೂ ಸ್ಥಿರಸರ್ಕಾರ ಬೇಡವೇ...? ಅಲ್ಪಮತೀಯರಾಗಿದ್ದ ನಮ್ಮನ್ನು ಬಹು ಮತೀಯರಾಗಿಸಿದ್ದಾನೆ. ಮತ್ತೆ ಬೊಕ್ಕಸಕ್ಕೆ ಭಾರ ಅನ್ನುತೀರೀ!! ರಾಡಿಕೀಯ ಅಂದಾಗ ಇದೆಲ್ಲ ಸಹಜವಲ್ಲವೇ...? ಕಾದು ನೋಡುತ್ತಿರಿ. ನಾವು ಬೊಕ್ಕಸವನ್ನು ಎಕ್ಕಸಕ್ಕ ತುಂಬಿಸುತ್ತೇವೆ....

ಅಂದಹಾಗೆ ಡಾಕ್ಟರ್ ರಾಡಿಯೂರರೇ..... ನೀವು ಡಾಕ್ಟರರಾದಾಗ ಅದಕ್ಕೂ ಸಾಕಷ್ಟು ಟೀಕೆಗಳು ವ್ಯಕ್ತವಾದವು। ಇದಕ್ಕೆ ಪ್ರತಿಯೆಂಬಂತೆ ತಮ್ಮ ಸಚಿವ ಮಾರಚಂದ್ರ ಎಂಬವರೊಬ್ಬರು ಅಪೂರ್ವವಾದ ಆರ್ಥಿಕ ವಿಶ್ಲೇಷಣೆಯನ್ನೂ ಮಾಡಿದರು. ಅದು ಒತ್ತಟ್ಟಿಗಿರಲಿ. ಆದರೆ ನೀವು ಆಪರೇಶನ್ ಮಾಡಿದ ಬಳಿಕ ಡಾಕ್ಟರರಾದಿರಿ... ಅಂದರೆ, ನಿಮ್ಮ ಆಪರೇಶನ್ ನೈಪುಣ್ಯದಿಂದಾಗಿ ಡಾಕ್ಟರ್ ಪದವಿ ಗಿಟ್ಟಿಸಿಕೊಂಡಿರೋ....?

ವೋಯ್ ಭಾಗವತರೇ....., ಅರಶಿನ ಖಾಯಿಲೆ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ ಎಂಬ ಗಾದೆ ಮಾತೊಂದಿದೆ. ಹಾಗೆಯೇ ಟೀಕೆಯೇ ನಮ್ಮಗುರಿ ಎಂದಿರುವವರು ಇನ್ನೇನು ಹೇಳಲು ಸಾಧ್ಯ? ಅವರವರ ಸಂಸ್ಕೃತಿಗೆ ತಕ್ಕಂತೆ ಮಾತಾಡಿಕೊಂಡು ಚಪಲ ತೀರಿಸಿಕೊಂಡರು. ಸಮಾಧಾನ ಪಟ್ಟುಕೊಳ್ಳಲಿ ಬಿಡಿ. ಆದರೆ ನಿಜವನ್ನು ಅರಿತುಕೊಂಡದ್ದು ನಮ್ಮೋರ್ವ ಸಚಿವರು! ನಾವ್ಯಾಕೆ ಡಾಕ್ಟರಾಗಲು ಸೂಕ್ತ ಎಂದು ಅವರು ವಿವರಿಸಿದ್ದಾರೆ. ನಮ್ಮ ನೀತಿ ಸಿದ್ಧಾಂತವೇ ಹಾಗೇ. ಪಾಸಾದ ಮೇಲೆ ಪರೀಕ್ಷೆ ಬರೆಯುವುದು. ಈಗ ನೋಡಿ, ನಾವೀಗ ಅಧಿಕಾರ ಪಡೆದಬಳಿಕ ಬಹುಮತಕ್ಕಾಗಿ ಚುನಾವಣೆ ಎದುರಿಸಲಿಲ್ಲವೇ? ಅಂತೆಯೇ ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು. ಸರ್ಕಾರಕ್ಕಾರು ತಿಂಗಳಾದಮೇಲೆ ನಮ್ಮ ಪಕ್ಷದ್ದೇ ಬಹುಮತ ಮಾಡಿಕೊಂಡಿದ್ದೇವೆ. ಹಾಗಂತ ಕಷ್ಟಕಾಲದಲ್ಲಿ ಸಹಾಯ ಮಾಡಿದ ಆಪತ್ಭಾಂದವರನ್ನೇನೂ ನಾವು ಕೈಬಿಡಲಾರೆವು... ಇನ್ನು ನಮ್ಮದೇನಿದ್ದರೂ ಒಂದೇ ಮಂತ್ರ; ಒಂದೇ ಗುರಿ ಅದು ಅಭಿವೃದ್ಧಿ.... ಅಭಿವೃದ್ಧಿ.... ಅಭಿವೃದ್ಧಿ....

ಹಾಗೇ ಆಗಲಿ ಸಾಮ್ರಾಟರೇ..... ಯಾರ ಅಭಿವೃದ್ಧಿಯಾಗುತ್ತದೆ ಎಂದು ಕಾದು ನೋಡೋಣವಂತೆ।

ನಿಮ್ಮ ಸುಭದ್ರ(?!) ಸರ್ಕಾರಕ್ಕೆ ಶುಭವನ್ನು ಕೋರುತ್ತಾ, ನಾಡಿನೆಲ್ಲ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಹೇಳುತ್ತಾ.... ಮುಂದಿನ ವರ್ಷದಲ್ಲಿ ಸರ್ವರಿಗೂ ಶಾಂತಿ, ನೆಮ್ಮದಿ ಆರೋಗ್ಯವನ್ನು ಬಯಸುತ್ತಾ ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಸರ್ವೇಜನ ಸುಖಿನೋಭವಂತು.... ಮಂಗಳಂ!

ಗುರುವಾರ, ಡಿಸೆಂಬರ್ 11

ಕಾಲ ಕೃಷ್ಣ ಅಡ್ಡವಾಣಿಯ ಒಡ್ಡೊಡ್ಡೋಲಗ

ಬಲ್ಲಿರೇನಯ್ಯಾ......

ಭಳಿರೇ ಪರಾಕ್ರಮ ಕಂಠೀರವಾ.......

ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಈ......ಅಖ್ಹಂಡ್ಹ ಭರತಖಂಡದ ಭಾವೀ ಸಾಮ್ರಾಟರಾರೆಂದು ಕೇಳಿ ಬಲ್ಲಿರೀ....

ಕಾಲ ಕೃಷ್ಣ ಅಡ್ಡವಾಣಿ ಎಂದು ಬಾ ರತಿಯ ಜನ ತಾ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ....

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ನವದೆಹಲಿ ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಮೊನ್ನೆ ನಡೆದ ಚ್ಹುನ್ಹಾವಣಾ.....ಯುದ್ಧದಲ್ಲಿ ಬಾ ರತಿಯ ಪಕ್ಷಕ್ಕೆ ಮತದ್ಹಾ....ರ ಮಹಾಪ್ರಭು ನೀಡಿರುವ ಟಾಂಗಿನ ವಿಮರ್ಷೆ.... ಎಲ್ಲಿತಪ್ಪಿದ್ದೇವೆಂಬ ಆತ್ಮ ನಿವೇದನೆ, ಮುಂದಿನ ಮಹಾಕದನದ ರಣತಂತ್ರ.... ಒಂದೇ....? ಎರಡೇ.....? ಅನ್ಹೇಕವಿದೆ..... ಅನ್ಹೇಕವಿದೆ..... ಅನ್ಹೇಕವಿದೆ.....

ಹಯ್ಯೋ ಶ್ರೀ ರಾಮಚಂದ್ರಾ.... ಇದೇನಾಗಿ ಹೋಯಿತು ತಂದೇ..... ನಿನ್ನ ಹೆಸರನ್ನು ಮುಂದಿಟ್ಟು ನಾವು ಅದೆಷ್ಟೇ ಕಾರ್ಯತಂತ್ರಗಳನ್ನು ಹಣೆದರೂ, ಸಾಧ್ಯವಿರುವಲ್ಲೆಲ್ಲ ಬೆಂಕಿಯನ್ನೇ ಹಚ್ಟಿದರೂ ನಮ್ಮ ಕಾರ್ಯವೇಕೆ ಸಫಲವಾಗಲಿಲ್ಲ. ನಮಗ್ಯಾಕೆ ನಿನ್ನ ಸಂಪೂರ್ಣ ಯಶಸ್ಸಿಲ್ಲಾ....? ಹೀಗಾದರೇ ನಾವು ಹೇಗೆ ಸುಲಭವಾಗಿ ಭರತಖಂಡದ ಸಾಮ್ರಾಟರಾಗುವುದೂ....? ಆ ಗದ್ದುಗೆಯನ್ನು ಏರುವುದಾದರೂ ಹೇಗೆ...? ಇದೇ ಚಿಂತೆ ನಮ್ಮನ್ನು ಹಗಲಿರುಳೂ ಕಾಡುತ್ತಿದೆ. ಈ ನಮ್ಮ ದೆಹಲಿಯ ಕೊರೆಯುವ ಚಳಿಯಲ್ಲೂ ಮೈಯೊಳು ಬೆವರೊಡೆವಂತೆ ಮಾಡಿದ್ದಾರೆ ನಮ್ಮ ಪ್ರಜೆ ಎಂಬ ಪ್ರಭುಗಳು. ಚಳಿಯನ್ನು ಹೊಡೆದೊಡಿಸಿ ಮೈಗೆ ಮುದನೀಡುವ ದಪ್ಪದಪ್ಪದ ಕಂಬಳಿಗಳನ್ನು ಹೊದ್ದು ಸುರುಟಿ ಮುರುಟಿ ಮಲಗಿದರೂ ನಿದಿರಾ ದೇವಿ ನಮ್ಮತ್ತ ಸುಳಿಯುತ್ತಲೇ ಇಲ್ಲವಲ್ಲಾ.....? ಆ ಅಸತ್ಯ ಅನ್ವೇಷಿಗಳು ಹೇಳುವಂತೆ ತಲೆಯನ್ನು ಪರಪರನೆಯೂ, ಬಳಿಕ ರಪರಪನೆಯೂ ಕೆರೆದುಕೊಂಡರೂ ಪ್ರಯೋಜನವಾಗುತ್ತಿಲ್ಲವಲ್ಲಾ..... ರಾಮಾ.... ಕೃಷ್ಣಾ..... ಡಂಗೂರದವರಿಗೆ ಯಾವ ಮುಖವನ್ನು ತೋರಿಸಲೀ...... ಅವರ ಬಾಯಿಬೇಧಿಗೆ ಯಾವ ಮದ್ದನ್ನು ಬಳಸಲೀ....ಒಡ್ಡೋಲಗವನ್ನೇ ಮಾಡದೆ ಕೆಲವು ದಿವಸಗಳಾದವ್ಹೂ..... ಎಷ್ಟುದಿನ ತಲೆಮರೆಸಿಕೊಳ್ಳಬಹುದೂ.... ಇನ್ನಿನ್ನೂ ಹೀಗೆ ಇರಲಾಗುವುದಿಲ್ಲ. ಅದೇನಾಗುತ್ತದೆಯೋ ನೋಡೇ ಬಿಡೋಣಾ.....

ಯಾರಲ್ಲೀ......?

ಸ್ವಾಮೀ ಕಾಲ ಕೃಷ್ಣರೇ........ ನಮನಗಳು.... ಕುಶಲವೇ....ಕ್ಷೇಮವೇ...

ಪ್ರತಿ ನಮನಗಳು.... ನಮ್ಮಪರಿಸ್ಥಿತಿಯನ್ನು ತಿಳಿದೂತಿಳಿದೂ ಕುಶಲವೇ... ಕ್ಷೇಮವೇ ಎಂದೆನ್ನುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯದಿರೀ ಭಾಗವತರೇ.... ಅದೇನು ಪ್ರಶ್ನೆಗಳನ್ನು ಹೊತ್ತು ತಂದಿರುವಿರೋ ನೇರವಾಗಿ ಕೇಳುವಂತವರಾಗಿ......

ಕಾಲ ಕೃಷ್ಣರೇ..... ಮೊನ್ನೆ ನಡೆದ ಕದನದಲ್ಲಿ ನಿಮ್ಮ ಎದುರಾಳಿಗಳು ನಿಮ್ಮ ಮೇಲೆ ಸವಾರಿ ಮಾಡಿದ್ದಾರೆ ಎಂದೆನ್ನಬಹುದು. ನಿಮ್ಮ ಕೈಯೊಳಗಿದ್ದ 'ರಾಜೇ' ಸ್ಥಾನ ಮತ್ತು ಬಹಳ ನಿರೀಕ್ಷೆ ಇಟ್ಟಿದ್ದ ದೆಹಲಿ ಪ್ರಾಂತ್ಯಗಳು ನಿಮ್ಮ ಎದುರಾಳಿಗಳ ಸುಪರ್ದಿಗೆ ಬಂದಿದೆ. ಮಧ್ಯಪ್ರದೇಶವೆಂಬ ಪ್ರಾಂತ್ಯ ನಿಮ್ಮ್ ಕೈಜಾರದಿದ್ದರೂ, ಹಿಡಿತದ ಬಿಗಿ ಸಡಿಲಗೊಂಡಿದೆಯಲ್ಲಾ ಪ್ರಭುಗಳೇ....? ಛತ್ತೀಸ್‌ಗಢವೆಂಬ ಪ್ರಾಂತ್ಯದಲ್ಲೂ ಹೀಗೇ ಆಗಿದೆ..... ಯಾಕೇ...? ಏನಾಯಿತೂ....? ಎಲ್ಲಿ ತಪ್ಪೀದ್ದೀರೀ.....?

ಆಹಾ... ಭಾಗವತರೇ...... ಏನಾಗಿ ಹೋಯಿತೆಂಬುದೂ ನಮಗೂ ಸರಿಯಾಗಿ ಗೊತ್ತಿಲ್ಲ. ಕೈ ತಪ್ಪಿದ 'ರಾಜೇ' ಸ್ಥಾನದಲ್ಲಿ ರಾಣಿಯವರ ದರ್ಬಾರಿನ ಅಬ್ಬರ ನಮ್ಮ ಸಾಮಂತರುಗಳಿಗೇ ಸಹಿಸಲು ಒಂದಿಷ್ಟು ಕಷ್ಟಕರವಾಗಿತ್ತಂತೆ. ಅದೂ ಅಲ್ಲದೇ.... ಅಲ್ಲಿನ ಆಂತರಿಕ ವಿಚಾರಗಳು, ಜಾತೀ ರಾಜಕೀಯಗಳು, ರಾಣಿಯರ ದುರಹಂಕಾರಗಳು...... ಕಾರಣವಿರಬಹುದು. ಆದರೇ..... ಇಲ್ಲಿ ಕೇಳಿ ಭಾಗವತರೆ, ಆ ಸೀತಾಮಾತೆ ನಮ್ಮ ಕೈಬಿಡಲಿಲ್ಲ. ಛತ್ತೀಸ್‌ಗಡ ಶ್ರೀರಾಮಚಂದ್ರನ ಸತಿ ಸೀತಾಮಾತೆ ಮೆಟ್ಟಿದ, ಓಡಾಡಿದ ನೆಲ. ರಾಮಭಕ್ತರಾದ ನಮ್ಮನ್ನು ಆ ತಾಯಿಯೇ ಕಾಪಾಡಿ ಮರಳಿ ಅಧಿಕಾರ ಧಕ್ಕುವಂತೆ ಮಾಡಿದ್ದಾಳೆ.

ಅರ್ಥವಾಯಿತು, ಅರ್ಥವಾಯಿತು ಅಡ್ಡವಾಣಿಯವರೇ......, ಮಧ್ಯಪ್ರದೇಶಕ್ಕೆ ಬರೋಣವಂತೆ. ನಿಮ್ಮ ಶಿಷ್ಯೆ ಆಗಿದ್ದು ನಿಮ್ಮ ಮೇಲೆ ಮುನಿಸಿಕೊಂಡು ಎದ್ದು ನಡೆದು, ತನ್ನದೆ ಸಂಸ್ಥಾನ ಕಟ್ಟುವ ದಿಸೆಯತ್ತ ಹೆಜ್ಜೆ ಹಾಕಿ, ನಿಮಗೆ ಮಗ್ಗುಲ ಮುಳ್ಳಾಗಿದ್ದ ಉರಿಭಾರತಿಯವರು ತಮ್ಮ ತವರೂರಿನಲ್ಲೇ ನೆಗೆದು ಬೀಳುವಂತೆ ಮತದಾರ ಪ್ರಭು ತೀರ್ಪು ನೀಡಿದ್ದಾನೆ. ತಾಕತ್ತಿದ್ದರೆ ನನ್ನೆದುರು ಕಾಲ ಕೃಷ್ಣ ಸ್ಫರ್ಧಿಸಲಿ ಎಂದು ತೋಳೇರಿಸಿದ್ದ ಉರಿಭಾರತಿಯವರನ್ನು ಸೂಟೆಕಟ್ಟಿ(ದೊಂದಿ) ಹುಡುಕಿದರೂ ಅವರೀಗ ಸಿಕ್ಕುತ್ತಿಲ್ಲ. ಇದಕ್ಕೇನನ್ನುತ್ತೀರೀ ಸ್ವಾಮ್ಹೀ.....?

ಭಾಗವತರೇ......, ತುಳುವಿನಲ್ಲೊಂದು ಗಾದೆ ಮಾತಿದೆ. 'ಮಗಳ್ ಮುಂಡೆ ಮುಚ್ಚ್‌ಂಡಲಾ ಮಲ್ಲೆಜ್ಜಿ, ಮರ್ಮಯೆ ಸಯ್ಯೋಡು', ಅಂದರೇ...... ಮಗಳು ವಿಧವೆಯಾದರೂ ಪರ್ವಾಗಿಲ್ಲ, ಅಳಿಯ ಸಾಯಬೇಕು ಎಂಬುದು ಇದರರ್ಥ. ಹಾಗೆಯೇ ಆ ಉರಿಭಾರತಿ "ನನ್ನ ಗೆಲುವಿಗಿಂತಲೂ ಬಾ ರತಿಯ ಜನ ತಾ ಪಕ್ಷದ ಸೋಲೇ ನನ್ನ ಗುರಿ" ಎಂದು ದಿಗಿಣ ಹೊಡೆದಿದ್ದರು. ಆದರೆ ಭಾಗವತರೇ......., ವ್ಯಕ್ತಿಗಿಂತಲೂ ಪಕ್ಷದೊಡ್ಡದು..... ಪಕ್ಷದೊಡ್ಡದೂ.... ಇದು ಈಗ ಆ ಮಹಾತಾಯಿಗೆ ಅರ್ಥವಾಗಿರಬಹುದು.

ಅಯ್ಯಾ ಕೃಷ್ಣರೇ......, ಪಕ್ಷದೊಡ್ಡದು ಅನ್ನುತ್ತೀರೀ....., ಆದರೆ ಜನರ ಭಾವನೆಗಳ ಮೇಲೆ ಸುಲಭವಾಗಿ ಸವಾರಿ ಮಾಡಬಹುದು ಎಂಬುದಾಗಿ ನಿಮ್ಮ ಪಕ್ಷ ಭಾವಿಸಿಕೊಂಡಿತ್ತು ಎಂಬುದು ಸಾರ್ವತ್ರಿಕ ಭಾವನೆ. ಭಗವಾನ್ ಶ್ರೀರಾಮಚಂದ್ರನನ್ನು ಜಗ್ಗಾಡಿ ಹಿಂದೆ ಪಟ್ಟಕ್ಕೇರಿದ್ದೀರಿ ಎಂಬ ಮಾತಿದೆ; ಮತ್ತೆ ಆತನನ್ನು ಮರೆತಿರುವಿರೀ ಎಂಬ ದೂರೂ ಇದೆ. ಮುಂಬೈ ಎಂಬ ಮಾಯಾ ನಗರಿಯಲ್ಲಿ ದುರುಳರು ನಡೆಸಿದ ಅಟ್ಟಹಾಸ ನಿಮ್ಮ ಯುದ್ಧತಂತ್ರಕ್ಕೆ ಸಹಾಯವಾಗಲೇ ಇಲ್ಲವಲ್ಲಾ...? ಯಾಕೇ.... ಪ್ರಜೆಗಳಲ್ಲಿ ನಿಮ್ಮ ಪಕ್ಷದ ಕುರಿತೇ ಭಯದ ಉತ್ಪಾದನೆಯಾಗುತ್ತಿದೆಯೇ.....?

ಬಾಯಿಮುಚ್ಚಿ ಭಾಗವತರೇ..... ನಮ್ಮ ಪಕ್ಷದ ಮೇಲೆ ಬಹು ಸಂಖ್ಯಾತರಿಗೆ ಪ್ರೀತಿ ಇದ್ದೇ ಇರುತ್ತದೆ. ಸಣ್ಣಸಣ್ಣ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮೊನ್ನೆ ನಡೆದ ಸಣ್ಣಪುಟ್ಟ ಕದನಗಳ ಸೋಲಿಗೆ ಪ್ರಾಂತೀಯ ಸಮಸ್ಯೆಗಳು ಕಾರಣವಾಗಿಬಹುದು. ಆದರೆ ನಿಮ್ಮಂತಹ ತುತ್ತೂರಿಯವರು ಇದನ್ನೇ ವೈಭವೀಕರಿಸಬೇಕಾದ ಅಗತ್ಯವಿಲ್ಲ......... ಮಹಾಯುದ್ಧಕ್ಕೆ ಸಾಕಷ್ಟು ಸಮಯವಿದೆ. ಶ್ರೀ ರಾಮಚಂದ್ರನಿದ್ದಾನೆ. ಎಲ್ಲಿಬೇಕೋ ಅಲ್ಲೆಲ್ಲ ಬೆಂಕಿ ಇಕ್ಕಲು ನಮ್ಮ ಸೇನಾನಿಗಳು ಸೊಂಟ ಕಟ್ಟಿದ್ದಾರೆ. ಏನಾಗುವುದೋ ಎಂಬುದನ್ನು ಕಾದು ನೋಡಿ. ಏಳು ತಿಂಗಳಿಗೇ ಜನಿಸಿದಂತೆ ಅವಸರದ ತೀರ್ಮಾನಕ್ಕೆ ಬರಬೇಡಿ..... ಎಚ್ಚರಿಕೆ...!

ಸರಿ, ಕಾಲ್ ಕೃಷ್ಣರೆ ನಿಮ್ಮ ಕೋಪ ಅರ್ಥವಾಗುವಂತಾದ್ದು. ಆದರೂ ಬರಿಯ ರಾಜಕೀಯವನ್ನೇ ಮಾಡಿದರೆ, ಅದನ್ನು ಅರಿತುಕೊಳ್ಳುವಷ್ಚು ಪ್ರಜೆಗಳೂ ಬುದ್ದಿವಂತರಾಗುತ್ತಿದ್ದಾರೆ ಎಂಬುದಕ್ಕೆ ಇದೀಗ ಅಂತ್ಯಗೊಂಡ ಕಾಳಗವೇ ಸಾಕ್ಷಿ! ಪ್ರಜೆಗಳಿಗೆ ಒಳಿತಾಗುವ ಕಾರ್ಯವನ್ನು ಮಾಡುವಂತೆ ಶ್ರೀರಾಮಚಂದ್ರ ನಿಮಗೆ ಮನಸ್ಸು ಕೊಡಲೀ.... ಹಾಗಾದಾಗಾ... ಖಂಡಿತಕ್ಕೂ ಪ್ರಜೆ ಎಂಬ ಪ್ರಭು ನಿಮ್ಮನ್ನು ಮರೆಯಲಾರ; ಮತ್ತು ಶ್ರೀರಾಮನ ಆಶೀರ್ವಾದ ಇಲ್ಲದೆಯೇ ಗದ್ದುಗೆ ಏರಬಲ್ಲಿರೀ ಎಂಬುದು ಸತ್ಯಸ್ಯ ಸತ್ಯ ಅಧ್ವಾನರೇ.... ಮಾತು ಮುಂದುವರಿಸುವ ಇಚ್ಚೆ ನಿಮಗಿದ್ದಂತಿಲ್ಲ. ಇನ್ಯಾವಾಗಲಾದರೂ ಒಡ್ಡೋಲಗದಲ್ಲಿ ಭೇಟಿಯಾಗೋಣವಂತೆ...

ಇಂದಿಗೆ ಮಂಗಳ ಹಾಡೋಣ.... ಸರ್ವರಿಗೂ ಒಳಿತಾಗಲೀ....
||ಮಂಗಳಂ||

ಮಂಗಳವಾರ, ಡಿಸೆಂಬರ್ 2

ಸೂಟುಗಳಿಗೆಲ್ಲ ಇಸ್ತ್ರಿ ಹಾಕುತ್ತೇವೆ...

ಭಳಿರೇ ಪರಾಕ್ರಮ ಕಂಠೀರವಾ..........!

ಬಲ್ಲಿರೇನಯ್ಯಾ.........?

ಅಖಂಡಭರತ ಖಂಡದ ಗೃಹಖಾತೆಗೆ ಸಾಮಂತರು ಯಾರೆಂದು ಕೇಳಿಬಲ್ಲಿರೀ.....?

ಶ್ರೀ.... ಶ್ರೀ......ಶ್ರೀ..... ವಶೀಲಿರಾಜ್ ಟಪೇಲ್ ಅಲ್ಲವೆಂದು ಹೇಳಬಲ್ಲೆವೂ....

ಹಾಂ.. ಇದೇನು, ನಾವೀಗ ಮಂತ್ರಿಯಲ್ಲವೇ...? ಓಹ್.....!!! ಹೌದು ಖಾಲಿ ಸಚಿವರೂ ಅಲ್ಲಾ... ಅಮ್ಮಾ... ತಾಯಿ..... ಏನು ನಿನ್ನ ಲೀಲೆ?
ಬಂದಂತಹ ಕಾರ್ಯ......?

ಎಂತಹ ಕಾರ್ಯ.....? ಕಾರ್ಯವಿಲ್ಲದ ನಾವೀಗ ಖಾಲಿಖಾಲಿ...... ! ಕಾರ್ಯವಿದ್ದಾಗಲೂ ನಾವು ಖಾಲಿಯಾಗೇ ಇದ್ದೆವೆಂಬುದು ಬೇರೆವಿಚಾರ. ಇರಲಿ ನೋಡೋಣ....

ಮುಂಜಾನೆ ಎದ್ದು ಲಘುಪಹಾರ (ಫಿಗರ್ ಮೆಂಟೇನ್ ಮಾಡಬೇಕಲ್ಲವೇ....?) ಸೇವಿಸಿ, ಸಹಾಯಕರು ನೀಟಾಗಿ ಇಸ್ತ್ರಿ ಮಾಡಿರುವ ಸೂಟು, ಅದಕ್ಕೊಪ್ಪುವ ಬೂಟು ತೊಟ್ಟು, ಬೆಳ್ಳಿಮಿಶ್ರಿತ ತಲೆಗೂದಲಿಗೆ ಜೆಲ್ಲಿ ಬಳಿದು, ನಮ್ಮ ದುಬಾರಿ ವಿದೇಶಿ ಬಾಚಣಿಗೆಯಿಂದ ಒತ್ತಿಒತ್ತಿಒತ್ತಿ ಬಾಚಿ, ಕೂದಲೊಂದೂ ಕೊಂಕದಂತೆ ಒಪ್ಪವಾಗಿಸಿ, ಮುಖಕ್ಕೆ ತೆಳುವಾದ ಪೌಡರ್ ಲೇಪನವನ್ನು ಬಳಿದು, ಸುಗಂಧ ದ್ರವ್ಯವನ್ನು ಪೂಸಿ ತಯ್ಯಾರಿ ಆಗಿಯೇನೋ ಆಯಿತು. ಆದರೆ ಈಗ ಮಾಡುವುದಾದರೂ ಏನನ್ನು....?

ಅಭ್ಯಾಸ ಬಲದಂತೆ ಒಡ್ಡೋಲಕ್ಕೆ ಬಂದಿದ್ದೂ ಆಯಿತು. ಆದರೆ ಏನಾಶ್ಚರ್ಯ.....? ಇದೇನಾಶ್ಚರ್ಯ....? ಸಭಾಂಗಣದಲ್ಲಿ ಒಂದು ನರಹುಳು ಬಿಡಿ; ನಿಜಹುಳುವು ಕಾಣುತ್ತಿಲ್ಲವಲ್ಲಾ...? ಅಮ್ಮಾ ನಿನ್ನ ಲೀಲೆಯೇ....? ಎಲ್ಲಿ...? ಎಲ್ಲಿದ್ದಾರೆ...? ವಂಧಿಮಾಗಧರೆಲ್ಲಿ...? ಭಟ್ಟಂಗಿಗಳೆಲ್ಲಿ....? ಹಾರಗಳೆಲ್ಲಿ....? ತುರಾಯಿಗಳೆಲ್ಲಿ.....?

ಆಡಳಿತದುದ್ದಕ್ಕೂ ಅಸಾಮರ್ಥ್ಯ ತೋರಿರುವುದನ್ನು ಮೆಲುಕು ಹಾಕಲೇ, ನಮ್ಮ ದುರ್ಬಲತೆಯಿಂದ ಅಮಾಯಕರು ಉಗ್ರರ ಆರ್ಭಟಕ್ಕೆ ಬಲಿಯಾಗಿರುವ ಸಂಖ್ಯೆಯನ್ನು ಲೆಕ್ಕಹಾಕಲೇ, ಏನು ಮಾಡಲೀ....?

ಓಹ್ ಅದ್ಯಾರಲ್ಲೀ.....? ಯಾರೂ ಇಲ್ಲದಿದ್ದರೂ ಭಾಗವತರು ಮಾತ್ರ ತಪ್ಪುವುದಿಲ್ಲವಲ್ಲಾ.....ನಿಮಗಿನ್ನೂ ಇಲ್ಲಿ ಕೆಲಸವೇನು....? ನಿಮ್ಮ ಬಳಿ ಮಾತನಾಡಲು ನಮಗಿಚ್ಚೆಯಿಲ್ಲ.

ಅದು ಸರಿ, ವಶೀಲಿಬಾಜಿ ಟಪೇಲರೇ ಒಬ್ಬರೇ ಗೊಣಗುಟ್ಟುವ ಬದಲು ನಮ್ಮಬಳಿ ಮಾತನಾಡಬಹುದಲ್ಲವೇ....?

ಅದೂ ಸರಿ ಎನ್ನಿ ಭಾಗವತರೇ..... ಅದೇನು ನಿಮ್ಮ ವರಾತ? ಕೇಳುವಂತವರಾಗಿ...?

ಟಪೇಲರೇ.... ಈ ಹಿಂದೆ ಆತಂಕವಾದಿಗಳು ಭಯವನ್ನು ಉತ್ಪಾದಿಸಿದ್ದ ವೇಳೆಗೆ ನೀವು ಸ್ಥಾನ ಕಳಕೊಳ್ಳುವ ಆತಂಕವೆದುರಿಸಿದ್ದೀರಿ. ಭಯದ ಉತ್ಪಾದನೆಯನ್ನು ನಿಗ್ರಹಿಸುವುದು ನಿಮ್ಮಿಂದಾಗದ ಮಾತೆಂದು ಈ ನೆಲದ ಚಳ್ಳೆಪಿಳ್ಳೆಗಳೂ ಮಾತಾಡಲಾರಂಭಿಸಿವೆ. ನಿಗ್ರಹ ದೂರದ ಮಾತು; ಅದನ್ನು ಖಂಡಿಸಲೂ ನೀವು ಮೀನಮೇಷ ಎಣಿಸಿದ್ದವರು. ಬಾಯಿಗೆ ಬಂತಂತೆ ಹೇಳಿಕೆ ನೀಡಿ ಛೀ.. ಥೂ ಎಂದು ಉಗಿಸಿಕೊಂಡವರು... ಇದಾದ ಬಳಿಕ ನಿಮ್ಮ ಸ್ಥಾನಕ್ಕೆ ಕುತ್ತಿದೆಯಾ ಎಂಬುದಾಗಿ ಡಂಗೂರದವರು ಕೇಳಿರುವ ಪ್ರಶ್ನೆಗೆ, "ನಮ್ಮ ಆಶ್ರಯದಾತೆ ಅಮ್ಮನ ಆಶೀರ್ವಾದ ಇರುವ ತನಕ ನಮಗೇನೂ ಭಯವಿಲ್ಲ" ಎಂದಿದ್ದೀರಿ. ಆಗ ಕೂದಲೆಳೆಯಲ್ಲಿ ಬಚಾವಾದ ನೀವು ಗಡದ್ದು ನಿದ್ದೆಗೆ ಜಾರಿದವರು, ಮತ್ತೆ ಎಚ್ಚರವಾದದ್ದು ಮೊನ್ನೆ ಹಂತಕರು ಎಕೆ47 ರೈಫಲಿನಲ್ಲಿ ಹಾರಿಸಿದ ಗುಂಡಿನ ಸದ್ದು ಕೇಳಿದ ಯಾರೋ ನಿಮ್ಮನ್ನು ಅಲ್ಲಾಡಿಸಿ ಅಲ್ಲಾಡಿಸಿ ಎಬ್ಬಿಸಿದಾಗಲಂತೆ ಹೌದಾ....?

ಇದೇನು ಭಾಗವತರೇ....? ನಿಮಗೆ ಬಾಯಿತೆರೆಯಲು ಬಿಟ್ಟಿದ್ದೇ, ಎತ್ತು ಮೂತ್ರಮಾಡಿದಂತೆ ಊದ್ದಕ್ಕೆ ವಟಗುಟ್ಟುತ್ತಿದ್ದೀರೀ.....? ಹೇಳುವವರ ನಾಲಿಗೆ ಇಳಿದು ಹೋಗಲಿ... ನೋಡಿದವರ ಕಣ್ಣು ಕುರುಡಾಗಲಿ. ನಾವು ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ಕರ್ತವ್ಯವನ್ನು ಸೂಕ್ತವಾಗಿಯೇ ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಪ್ಯಾಂಟು, ಇಲ್ಲವೇ ಕೋಟಿನ ಇಸ್ತ್ರಿಯ ಒಂದು ಗೀರೂ ಈ ನಮ್ಮ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೊಂಕಿದ್ದು ಏನಾದರೂ ಕಂಡಿದ್ದರೆ ಹೇಳಿ.....! ಯಾರು ಹೇಳಿದ್ದು ಕಳೆದ ಸಾರಿಯ ಭಯದ ಉತ್ಪಾದನೆಯ ವೇಳೆಗೆ ನಾವೇನು ಮಾಡಿಲ್ಲವೆಂದು? ನಾವು ಒಂದೇ ದಿನದಲ್ಲಿ ನಾಲ್ಕು ಬಾರಿ ಉಡುಪು ಬದಲಿಸಿ ಪ್ರಜೆಗಳ ಮುಂದೆ ಕಾಣಿಸಿಕೊಂಡಿಲ್ಲವೇ?

ಇರಲಿ ವಶೀಲಿಬಾಜಿಯವರೇ..... ನೀವಾಗೆ ಪಡೆದಿರುವ ವಿಶ್ರಾಂತಿ ಕಾಲದಲ್ಲಿ ಏನು ಮಾಡಬೇಕೆಂದಿರುವಿರಿ.....?

ನಿಮ್ಮ ಅಧಿಕಪ್ರಸಂಗಕ್ಕೆ ಒಂದಿಷ್ಟು ವಿಶ್ರಾಂತಿ ಇರಬೇಕಿತ್ತು ಭಾಗವತರೇ....? ಮಾಡುವುದೇನು ನಿಮ್ಮ ಕರ್ಮ...? ನಾವು ನಮ್ಮ ಹಳೆಯ ಕೋಟು ಸೂಟುಗಳನ್ನೆಲ್ಲ ಕಪಾಟಿನಿಂದ ಈಚೆ ತೆಗೆದು - ಚೆನ್ನಾಗಿ ಒಗೆದು, ಬಿಸಿಲಲ್ಲಿ ಒಣಗಿಸಿ ಬಳಿಕ ಇಸ್ತ್ರಿ ಮಾಡುತ್ತೇವೆ. ನಮ್ಮ ಅಷ್ಟೂ ಕೋಟು ಸೂಟುಗಳನ್ನು ಒಗೆದು, ಒಣಗಿಸುವ ವೇಳೆಗೆ ಮುಂದಿನ ಚುನಾವಣೆ ಬರುತ್ತದೆ. ಮತ್ತೆ ಚುನಾವಣೆಯಲ್ಲಿ ಗೆದ್ದೋ, ಇಲ್ಲವೇ ಸೋತೋ, ಅಧಿಕಾರ ಸಿಕ್ಕರೆ ಮೆದ್ದು, ಮತ್ತೆ ಎಂದಿನಂತೆ ಮುಂದುವರಿಯುತ್ತೇವೆ....

ಸರಿ ಟಪೇಲರೇ... ನಿಮ್ಮ ಈ ಆಪರೇಶನ್‌ಗೆ ಯಾರನ್ನಾದರೂ ಸೇರಿಸಿಕೊಳ್ಳುವಿರೋ...?

ಯಾರು ಸಿಗುತ್ತಾರೆ ಇಂಥಾ ಅಧಿಕಾರವಿಲ್ಲದ ಸಮಯದಲ್ಲೀ... ಪೆದ್ದರಂತೆ ಪ್ರಶ್ನೆ ಕೇಳುತ್ತೀರಲ್ಲ ನೀವು...? ಆದರೂ ರಾರಾ ಟಪೇಲರು ಮತ್ತು ಲವೀಸ್‌ರಾವ್ ಮುಖ್‌ದೇಶರವರು ಮತ್ತು ಇನ್ನೂ ನಮ್ಮ ಸಾಲಿಗೆ ಸೇರಲಿರುವ ಇತರ ಸಾಮಂತರು ಬರುತ್ತಾರೋ ಕೇಳಿನೋಡಬೇಕು!

ಆಗಲಿ ಟಪೇಲರೇ... ಆ 'ತಾಯಿ' ನಿಮ್ಮನ್ನು ಮತ್ತೆ ಹರಸುತ್ತಾರೋ ಕಾದು ನೋಡೋಣವಂತೆ... ಈಗ ಈ ಒಡ್ಡೋಲಗಗಕ್ಕೆ ಮಂಗಳ ಹಾಡೋಣ.

ಸರ್ವೇಜನ ಸುಖಿನೋಭವಂತು...... ಮಂಗಳಂ