ಸೋಮವಾರ, ಮಾರ್ಚ್ 9

ಅವ್ವಾ..... ಸ್ವರ್ಗಕ್ಕೇ ಹೋಗಿ

ನನಗೆ ಬುದ್ಧಿ ತಿಳಿದಂದಿನಿಂದ (ಅಥವಾ ಅವನಿಗೆ ಗಡ್ಡಮೀಸೆ ಮೂಡಿದಂದಿನಿಂದ) ಅವನ ಗಡ್ಡವಿಲ್ಲದ ಮುಖವನ್ನು ನೋಡಿರಲಿಲ್ಲ. ಆತನ ವಿವಾಹದ ದಿನ, ಹೇಮಣ್ಣ ಮದುವೆಗೆ ಗಡ್ಡ ತೆಗೆಯಲಿಲ್ಲ ಎಂಬುದು ಊರಿನಲ್ಲಿಡೀ ಬಿಸಿಬಿಸಿ ಚರ್ಚೆಯ ವಸ್ತುವಾಗಿತ್ತು. ಅಂಥ ಅಣ್ಣ ತಲೆ, ಗಡ್ಡ ಬೋಳಿಸಿಕೊಂಡು, ಒದ್ದೆ ಬಟ್ಟೆಯಲ್ಲಿ ಕಣ್ಣಲ್ಲಿ ನೀರಿಳಿಸಿಕೊಂಡು ನಿಂತಿದ್ದ. ಅವನನ್ನು ಈ ರೂಪದಲ್ಲಿ ಕಂಡ ಅವನ ಮೂರರ ಹರೆಯದ ಮಗ ಕಿಟಾರನೆ ಕಿರುಚಿಕಿರುಚಿ ಅತ್ತ. ನಾವೂ ಅಳುತ್ತಿದ್ದೆವು. ನಮಗಾರಿಗೂ ಪರಸ್ಪರರ ಮುಖ ನೋಡುವುದು ಬೇಡ ಎಂಬಂತಾಗುತ್ತಿತ್ತು. ಇಲ್ಲವೆಂದರೆ, ನಾವೆಲ್ಲ ಒಡಹುಟ್ಟಿದವರು ಒಟ್ಟು ಸೇರಿದೆವೆಂದಾದಾಗ, ಅಲ್ಲಿ ನಗು, ಹರ್ಷ ಆನಂದ ಸಂಭ್ರಮ, ಮಕ್ಕಳ ಆಟ....
****

ನಾವೆಲ್ಲ ಯಾವ ಅವ್ವನ ಸುತ್ತಮುತ್ತ ಕುಳಿತು ಈ ಸಂಭ್ರಮ ಪಡುತ್ತಿದ್ದೆವೋ ಆ ಅವ್ವನೇ ಇಲ್ಲ. ಅವ್ವನ ಕೋಣೆ ಖಾಲಿ. 19 ಗಂಟೆಗಳ ಪ್ರಯಾಣ ಮಾಡಿ ಫೆಬ್ರವರಿ ಒಂದರಂದು ಮನೆ ತಲುಪಿದಾಗ ನಂಗೆ ನೋಡಲು ಉಳಿದಿದ್ದದ್ದು ಅವರು ಮಲಗುತ್ತಿದ್ದ ಮಂಚದ ಮೇಲಿದ್ದ ಸುರಳಿ ಸುತ್ತಿದ್ದ ಹಾಸಿಗೆ ಮಾತ್ರ.

ದೂರದೂರದಿಂದ ನಾವೆಲ್ಲ ಮನೆಗೆ ಬಂದು ಮೆಟ್ಟಿಲೇರುತ್ತಲೇ ಅವ್ವಾ ಅಂದಾಗ, ಎಲ್ಲಿದ್ದರೂ ಓಡೋಡಿ ಬರುತ್ತಿದ್ದ ಅವ್ವ ಎಲ್ಲಿ...? ಇಲ್ಲ. ಅಂಗಳದಲ್ಲಿ ಜೀಪು ಸದ್ದು ಕೇಳುತ್ತಿರುವಂತೆ, 'ಬಂದ್ಲು, ಬಂದ್ಲು' ಅನ್ನುತ್ತಾ ಅಕ್ಕ, ಅತ್ತಿಗೆ, ಅಕ್ಕಂದಿರ ಮಕ್ಕಳು ಎಲ್ಲರೂ ಓಡಿಬಂದರು. ಯಾರು ಬಂದು ಎದುರುಗೊಂಡರೂ ಅವ್ವ ಬಂದಂತಾಗುತ್ತದಾ? ನಾಲ್ಕು ತಿಂಗಳ ಹಿಂದೆ ಮನೆಗೆ ಹೋದಾಗಲೂ ಅಮಾಯಕ ನಗು ಚೆಲ್ಲುತ್ತಾ ನೆಟ್ಟಗೆ ನಡೆಯಲಾಗದಿದ್ದರೂ ಓಡಿ ಬಂದು ನನ್ನ ಕೈಲಿದ್ದ ಬ್ಯಾಗು ಇಸಿದುಕೊಂಡಿದ್ದ ಅವ್ವ, ಇನ್ನೆಂದು ಹಾಗೆ ಮಾಡಲಾರರು ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳುವುದು ಹೇಗೆ?

ಒಂದು ಕಾಲದಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ಅಪ್ಪ ಇಲಿಯಂತಾಗಿದ್ದರು. ಪೋರ್ಟಿಕೋದ ಮೂಲೆಯಲ್ಲಿ ಕುಳಿತಿದ್ದ ಅವರು ನನ್ನ ನೋಡುತ್ತಲೇ ಎದ್ದು ಬಂದರು. ನನ್ನ ಕೈ ಹಿಡಿಯಬೇಕೋ, ತಬ್ಬಿಕೊಳ್ಳಬೇಕೋ ಏನು ಮಾಡಬೇಕೆಂದು ಗೊತ್ತಾಗದ ಗೊಂದಲಕ್ಕೆ ಬಿದ್ದಿದ್ದರೆನ್ನಿಸುತ್ತದೆ, ಈಗ ಬಂದ್ಯಾ ಚಾಮೀ.... ನಿನ್ನವ್ವ..... ಅಷ್ಟೆ ಅವರಿಗೆ ಹೇಳಲಾಗುತ್ತಿದ್ದುದು. ಬಾಯಿಗೆ ಅಂಗವಸ್ತ್ರ ಅಡ್ಡಹಿಡಿದ ಅಪ್ಪ ಪುಟ್ಟ ಮಕ್ಕಳಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅಪ್ಪನೂ ಅಳುತ್ತಾರೆ ಎಂಬುದು ನಂಗಾಗಲೇ ಗೊತ್ತು. ಅಷ್ಟರಲ್ಲಿ ಅಕ್ಕ ತಬ್ಬಿ ಒಳಕರೆದುಕೊಂಡು ಹೋದರೆ, ಅತ್ತಿಗೆ ನೀರು ತಂದು ಕೊಟ್ಟರು.

ಅಭ್ಯಾಸ ಬಲದಂತೆ ಅವ್ವನ ಕೋಣೆಗೆ ಹೋದೆ. ನಡು ಮನೆಯಲ್ಲಿ ಅವ್ವನ ಸಂಕೇತವೆಂಬಂತೆ ಕಾಲುದೀಪ ಉರಿಯುತ್ತಿತ್ತು, ಇಲ್ಲೇ ಅವ್ವ ಮಲಗಿದ್ದರು, ಅಕ್ಕ ಹೇಳಿದಳು. ಏನು ಮಾಡಲೀ... ಕುಳಿತುಕೊಳ್ಳಲೇ, ಏಳಲೇ, ಮಲಗಲೇ.... ಒಂದು ಗೊತ್ತಾಗುತ್ತಿಲ್ಲ. ಮಾಮೂಲಿಯಾದರೆ ಮನೆ ತಲುಪುತ್ತಲೇ ಪ್ರಯಾಣದ ಸುಸ್ತು, ಬಳಲಿಕೆಗಳೆಲ್ಲ ಮಾಯವಾಗುತ್ತಿತ್ತು. ಬ್ಯಾಗುಗಳನ್ನೆಲ್ಲ ಅವ್ವನ ಕೋಣೆಯಲ್ಲಿ ಎಸೆದು, ಮನೆಯಿಡೀ ಸುತ್ತು ಹಾಕಿ ಬಚ್ಚಲಿಗೆ ಹೋಗಿ ಮುಖ ತೊಳೆದು ಬರುತ್ತಲೇ 'ಕೂಸು ಬರುತ್ತಾಳೆ'(ನಾನು ಎಷ್ಟುದೊಡ್ಡ ಎಮ್ಮೆಯಾಗಿದ್ದರೂ) ಎಂದು ವಿಶೇಷವಾಗಿ ಮಾಡಿಟ್ಟಿರುತ್ತಿದ್ದ ತಿಂಡಿ ತಿನಿಸುಗಳನ್ನು ತಟ್ಟೆಯಲ್ಲಿ ಹಾಕಿ ಅವರು ರೆಡಿ ಮಾಡಿಟ್ಟಿರುತ್ತಿದ್ದರು. ಇವುಗಳಿಗಾಗೇ ಕಾದಿರುವಂತಿರುತ್ತಿದ್ದ ನಾನು ತಿನ್ನಲೇ ಬಂದವಳಂತೆ ಕಬಳಿಸಲಾರಂಭಿಸುತ್ತಿದ್ದೆ. ಆದರೆ ಈ ಸರ್ತಿ ಹಾಗನ್ನಿಸುವುದಾದರೂ ಹೇಗೆ. ನನ್ನನ್ನು ಕಳುಹಿಸಲು ರೈಲುನಿಲ್ದಾಣಕ್ಕೆ ಬಂದಿದ್ದ ತ್ರಾಸಿ ಮತ್ತು ಪಾಟೀಲ್ ತೆಗೆಸಿಕೊಟ್ಟಿದ್ದ ಒಂದು ಲೀಟರ್ ನೀರು ಬಿಟ್ಟರೆ, ಮರುದಿನ ಬೆಳಿಗ್ಗೆ ರೈಲಿನಲ್ಲಿ ಒಂದು ಲೋಟ ಕಾಫಿ ಖರೀದಿಸಿ ಕುಡಿದಿದ್ದೆ, ಅಷ್ಟೆ. ಆದರೂ ಹಸಿವಾಗುತ್ತಿರಲಿಲ್ಲ. ಏನೂ ತಿನ್ನೋದೆ ಬೇಡ ಅನ್ನಿಸುತ್ತಿತ್ತು. ನನ್ನನ್ನು ಸಾಧ್ಯವಿರುವಷ್ಟು ನೋವಾಗದಂತೆ ನಡೆಸಿಕೊಳ್ಳಬೇಕೆಂದು ಅಣ್ಣ-ಅತ್ತಿಗೆ, ಅಕ್ಕನವರು ಶತಾಯ-ಗತಾಯ ಪ್ರಯತ್ನಿಸುತ್ತಿದ್ದರು. ನಾನೇನು ಚಿಕ್ಕಹುಡುಗಿಯಲ್ಲ. ಆದರೂ, ನಮ್ಮ ಮನೆಯಲ್ಲಿ ಕೊನೆಯವಳು ಮತ್ತು 'ನೆಲೆ' ಇಲ್ಲದವಳು. ಉಳಿದವರೆಲ್ಲ ಜೀವನದಲ್ಲಿ ನೆಲೆಕಂಡವರು.

****
ನಾನು ಮನೆತಲುಪಿದ ಮರುದಿನ ಮೂರನೆಯ ಶುದ್ಧ. ಬೂದಿ ಒಪ್ಪ ಮಾಡಲು ನಮ್ಮ (ಅಪ್ಪನ)ಕುಟುಂಬಿಕರು ಸೋದರ ಮಾವಂದಿರು, ಚಿಕ್ಕಮ್ಮ, ದೊಡ್ಡಮ್ಮಂದಿರ ಪೈಕಿ ಎಲ್ಲರೂ ಸೇರಿದ್ದರು. ಎಲ್ಲರೊಂದಿಗೆ ನಾನೂ ಅವ್ವನ ಹೊಸ ಜಾಗಕ್ಕೆ ತೆರಳಿದೆ. ಅಷ್ಟೆಲ್ಲ ಕಷ್ಟ, ಕಾರ್ಪಣ್ಯಗಳೊಂದಿಗೆ ಜೀವನ ನಡೆಸಿದ್ದ, ಮನೆಯ ಯಜಮಾನಿಯಾಗಿದ್ದ, ಅಪ್ಪನ ರೌದ್ರಾವತಾರದ ಸಿಟ್ಟನ್ನು ಅರಗಿಸಿಕೊಂಡಿದ್ದ, ಮಕ್ಕಳು, ಮೊಮ್ಮಕ್ಕಳನ್ನು ಜೋಪಾನ ಮಾಡಿ, ಊರಿಗೇ ಅವ್ವನಾಗಿ ಮೆರೆದು, ಹತ್ತಿರಹತ್ತಿರ ಎಂಟು ದಶಕಗಳ ತುಂಬು ಜೀವನ ಕಂಡ ಅವ್ವ, ಇಷ್ಟಗಲದಲ್ಲಿ ಬೂದಿಯಾಗಿದ್ದರು. ಅವ್ವನಿಗೆ ಕೊನೆಯದಾಗಿ ತೊಟ್ಟು ನೀರುಕೊಡುವ ಅದೃಷ್ಟ ನಂಗಿರಲಿಲ್ಲ. 'ಪರಿಹಾರ' ಎಂಬಂತೆ ಆ ಜಾಗಕ್ಕೆ ನನ್ನ ಕೈಯಲ್ಲಿ ಹಾಲು-ತುಪ್ಪ ಹಾಕಿಸಿದರು. ಹಾಲುಣಿಸಿದ ಅವ್ವನಿಗೆ ಅಷ್ಟೆ ಮಾಡಲು ನಂಗೆ ಧಕ್ಕಿದ್ದು! "ನಾರಾಯಣ ಅನ್ನು, ಸ್ವರ್ಗಕ್ಕೇ ಹೋಗಿ ಅನ್ನು..." ಯಾರೋ ಹೇಳುತ್ತಿದ್ದರು. (ಉಳಿದಂತೆ ಆದರೆ, ಸ್ವರ್ಗ ನರಕವನ್ನು ಯಾರು ಕಂಡಿದ್ದೀರಿ ಎಂಬ ವಾದಕ್ಕೆ ನಿಲ್ಲುತ್ತಿದ್ದೆನೋ ಏನೋ) ನಾನೆಲ್ಲಿ ಕುಸಿಯುತ್ತೇನೋ ಎಂದು ನನ್ನನ್ನೇ ಗಮನಿಸುತ್ತಾ ನನ್ನಿಬ್ಬರು ಅಕ್ಕಂದಿರು ಕಾವಲು ಕಾಯುವಂತೆ ನಿಂತಿದ್ದರು. (ಧೈರ್ಯವಾಗಿರು... ಅಳಬೇಡ, ಅಳಬಾರದು. ನೀನು ಅತ್ತರೆ ಅಮ್ಮನ ಆತ್ಮ ಕಷ್ಟಪಡುತ್ತದೆ. ಧೈರ್ಯವಾಗಿ ಹೋಗಿ ಬಾ...) ಗೆಳತಿ ನಯನ ಹೇಳಿದ ಸಮಾಧಾನದ ಮಾತುಗಳು ಕಿವಿಯಲ್ಲಿ ಮೊರೆಯುತ್ತಿತ್ತು. ಅಳಬಾರದು, ಕಣ್ಣೀರು ನೆಲಕ್ಕೆ ಉರುಳಬಾರದು ಅನ್ನುತ್ತಿದ್ದರು ಒಬ್ಬ ಚಿಕ್ಕಪ್ಪ. ಕಣ್ಣಿಂದ ನಿಯಂತ್ರಣವಿಲ್ಲದಂತೆ ಸುರಿಯುತ್ತದ್ದ ಹನಿಗಳು ನೆಲಕ್ಕೆ ಬಿದ್ದವೋ, ತೋಟದಲ್ಲಿ ಬೆಳೆದಿದ್ದ ಹುಲ್ಲಿನ ಮೇಲೆ ಜಾರಿದವೋ, ಇಲ್ಲ ತೊಟ್ಟಿದ್ದ ಉಡುಪಿನಲ್ಲಿ ಲೀನವಾದವೋ ಗಮನಿಸುವ ವ್ಯವಧಾನ ಯಾರಿಗಿತ್ತು?

ಎಲ್ಲ ಶುದ್ಧವಾಗಬೇಕು. ಯಾರು ಮನೆಗೆ ಹತ್ತಬೇಡಿ. ಪುಣ್ಯಾರ್ಚನೆಯಾಗಬೇಕು. 'ತಿಳಿದವರು' ಆದೇಶಿಸುತ್ತಿದ್ದರು. ಛೇ, ಇಷ್ಟು ದಿನಒಟ್ಟಿಗೆ ಇದ್ದ ಅಮ್ಮನ ಕೆಲಸವೂ ಅಶುದ್ಧವೇ? ಮನದೊಳಗೆ ಹೇಳಲಾಗದ, ಕೇಳಲಾಗದ, ಗೊಂದಲ, ತಳಮಳ. ಸ್ಪ್ರಿಂಕ್ಲರ್ ಜೆಟ್ಟಿಗೆ ಅಣ್ಣ ಪೈಪ್ ಸಿಕ್ಕಿಸಿದ್ದ. ಎಲ್ಲರಂತೆ ನಾನು ಪೈಪಿನಲ್ಲಿ ಸುರಿಯುತ್ತಿದ್ದ ತಣ್ಣೀರಿಗೆ ತಲೆ ಒಡ್ಡಿದೆ. ನೀವು ಮಕ್ಕಳೆಲ್ಲ ಈ ಸೊಪ್ಪು ಹಾಕಿ ಸ್ನಾನ ಮಾಡಬೇಕು. ಅತ್ತೆಯೊಬ್ಬರು ಸೂಚಿಸಿದರು. ಯಾರು ಏನೇ ಹೇಳಿದರೂ ಯಂತ್ರದಂತೆ ಮಾಡುತ್ತಿದ್ದೆ. ಅವ್ವ ಇದ್ದಿದ್ದರೆ ತಣ್ಣೀರು ಮೀಯಬೇಡ, ಶೀತವಾಗುತ್ತದೆ ಅನ್ನತ್ತಿದ್ದರು. ಅವ್ವನಿಗಾಗಿ ತಣ್ಣೀರು ಮೀಯಲೇ ಬೇಕು, ಇದು ನನ್ನ ಹಠ. ಗೊತ್ತಿಲ್ಲದಂತೆ 'ನಾರಾಯಣ, ಸ್ವರ್ಗಕ್ಕೇ ಹೋಗಿ' ಶಬ್ದಗಳು ಮನದೊಳಗೆ ರಿಪೀಟ್ ಆಗುತ್ತಿದ್ದವು.
******
ಅಂಗಳದ ತುಂಬ ಶಾಮಿಯಾನ. ಮನೆಯೊಳಗೆ, ಜಗಲಿಯಲ್ಲಿ ಕೊಟ್ಟಿಗೆಯಲ್ಲಿ ಮನೆಯಿಂದ ಮಾರ್ಗದ ತನಕ ಎಲ್ಲೆಲ್ಲೂ ನೆಂಟರಿಷ್ಟರು, ನೆರೆಹೊರೆಯವರು, ಗೊತ್ತಿದ್ದವರು, ಇಲ್ಲದವರು ಜನವೋಜನ. ಭಾವಂದಿರು, ಮಾವಂದಿರು, ಇತರರು ಸುಧಾರಣೆಯ ಜವಾಬ್ದಾರಿಯಿಂದ ಅತ್ತಿತ್ತ ಓಡಾಡುತ್ತಿದ್ದಾರೆ. ಅಂಗಳದ ತುದಿಯಲ್ಲಿ ಅಡುಗೆ ಸಿದ್ಧವಾಗುತ್ತಿದೆ. ಬಂದವರೆಲ್ಲ, ಅವಳೆಲ್ಲಿ, ಕೊನೆಯವಳು ಎನ್ನುತ್ತಾ ನನ್ನನ್ನು ಸಂತೈಸಲು ಹುಡುಕುತ್ತಿದ್ದರು.

ಅಂದು ಹನ್ನೊಂದು. ದುಖದ ಜತೆಗೆ ಜ್ವರ, ಕೆಮ್ಮು ನೆಗಡಿ, ತಲೆನೋವು ಸೇರಿತ್ತು. ತಲೆಎತ್ತಲಾಗುತ್ತಿಲ್ಲ. ಯಾರನ್ನೂ ನೋಡೋದು ಬೇಡ, ಮಾತಾಡೋದು ಬೇಡ ಅನ್ನಿಸುತ್ತಿತ್ತು. ಹಾಗೆ ಮಾಡಲಾಗುತ್ತಾ? ಮಾತಿಗಿಂತ ಮೊದಲೇ ದುಃಖ ಉಮ್ಮಳಿಸುತ್ತಿತ್ತು. ಅಕ್ಕನ ಮಕ್ಕಳೆಲ್ಲ ಅನಾರೋಗ್ಯ ಪೀಡಿತ ಚಿಕ್ಕಮ್ಮನ ಸೇವೆಗೆ ಟೊಂಕ ಕಟ್ಟಿ ಸುತ್ತುವರಿದಿದ್ದರು. ಎಲ್ಲೆಲ್ಲೂ ಜನ ಗಿಜಿಗಿಜಿ, ಓಡಾಟ, ಕಾರ್ಯಕ್ರಮಗಳು, ಹಾಗಲ್ಲ ಹೀಗೆ ಎಂಬ ಚರ್ಚೆ, ಇದಾದ ಮೇಲೆ ಅದು, ಅದಾದಮೇಲೆ ಇದು ಎಂಬ ಸಮಜಾಯಿಷಿ, ವಾದ್ಯ-ಬ್ಯಾಂಡು.... ಇವೆಲ್ಲ ಇದ್ದರೂ ನಂಗ್ಯಾಕೋ ಅವ್ವನಿಲ್ಲದ ನಮ್ಮ ಮನೆಯ ಮೊದಲ (ಅವರದ್ದೇ)ಕಾರ್ಯಕ್ರಮ ಖಾಲಿಖಾಲಿ... ಈ ಹಿಂದೆ ನಡೆದ ನಾಲ್ಕು ಮದುವೆಗಳು, ಗೃಹ ಪ್ರವೇಶ, ಸೀಮಂತಗಳು, ಪೂಜೆ. ಭೂತದ ಹರಿಕೆ, ಕೋಲ, ಮಗುವಿನ ನಾಮಕರಣ ಎಲ್ಲ ಕಾರ್ಯಕ್ಕೂ ಅವ್ವನ ನೇತೃತ್ವ. ಎಲ್ಲೆಲ್ಲೂ ಅವ್ವ.

ನಾವು ನಾಲ್ಕು ಹೆಣ್ಣು ಮತ್ತು ಒಂದು ಗಂಡು- ಹೀಗೆ ಐದುಮಕ್ಕಳು. ಏಕೈಕ ಪುತ್ರನೆಂಬ ಕಾರಣಕ್ಕೆ ಅಣ್ಣನ ಮೇಲೆ ಅವರಿಗೆ ಅದೆಂಥಾ ಪ್ರೀತಿ- ಅಕ್ಕರೆ ಅಂದರೆ, ಅದಕ್ಕೆ ನಾನಿಲ್ಲಿ ಯಾವಪದ ಬಳಸಿದರೂ ಸಮವಾಗದು. ಅವನಿಗೆ ಕುಂಬಳಕಾಯಿ ಕಡಿಯೋ ಮಗನೆಂದು ನಾವು ಛೇಡಿಸುತ್ತಿದ್ದೆವು. ಆದರೆ, ಆ ಕುಂಬಳ ಕಾಯಿ ಕಡಿವ, ಮನೆಯೆ ಮೆಟ್ಟಿಲಿನೆದುರು ಮೊಣಕಾಲೂರಿ ಕೂದಲು ತೆಗೆಸುವ, ಒಂಟಿಕಾಲಲ್ಲಿ ನಿಂತು ಪ್ರಾರ್ಥಿಸುವ ಶಾಸ್ತ್ರದ ಘಳಿಗೆಗಳು..... ಅಬ್ಬಾ ಅದೆಷ್ಟು ಕ್ರೂರ!

ಅವ್ವನ ಹೆಸರಲ್ಲೇ ಅವರಿಗಿಷ್ಟದ ಅಡುಗೆ ಸುಮಾರು ಸಾವಿರ ಮಂದಿಗೆ ಸಿದ್ದವಾಗಿತ್ತು. ಇವುಗಳನ್ನೆಲ್ಲ ಅವರ ಸಮಾಧಿಯ ಬಳಿಗೊಯ್ದು ಬಡಿಸಿದೆವು. ಈ ತಿಂಡಿ ಪದಾರ್ಥಗಳನ್ನೆಲ್ಲ ಗೆರಟೆ(ತೆಂಗಿನಕಾಯಿ ಚಿಪ್ಪು)ಯಲ್ಲಿಡಬೇಕಂತೆ. ಅಪ್ಪನಿಗೆ ಗೊತ್ತಿಲ್ಲದೆ(ಬಯ್ಗುಳಕ್ಕೆ ಹೆದರಿ), ಕದ್ದು ಮುಚ್ಚಿ, ಹೊಟ್ಟೆಬಾಯಿ ಕಟ್ಟಿ ಮನೆತುಂಬ ಪಾತ್ರೆ ಪಗಡಿಗಳನ್ನು ತುಂಬಿಸಿದ್ದ ಅವ್ವನಿಗೆ ಗೆರಟೆಯಲ್ಲಿ ಬಡಿಸುವುದನ್ನು ಹೇಗೆ ಸಹಿಸಿಕೊಳ್ಳಬೇಕು? ಇದನ್ನೆಲ್ಲ ಕಂಡಾಗ, ಆ ಪರಿಸ್ಥಿತಿಯಲ್ಲೂ ಈ ಪದ್ದತಿಗಳಿಗೆಲ್ಲ ತಿದ್ದುಪಡಿ ಮಾಡಬೇಕನ್ನಿಸುತ್ತಿತ್ತು.

ಎಲ್ಲಾ ಶಾಸ್ತ್ರವನ್ನೂ ಪಾಸಕ್ಕೆ ನಿಂತಿದ್ದ ಅಣ್ಣನ ಕೈಯಲ್ಲೇ ಮಾಡಿಸುತ್ತಿದ್ದರು, ಕೊನೆಗೆ ಸ್ವರ್ಗಕ್ಕೆ ಸಂದಿಸುವಾಗ ತಂಗಿಯನ್ನೂ ಸೇರಿಸಿಕೊ ಎಂಬ ಸಲಹೆ ಬಂತು. ತಲೆಮೇಲೆ ಕೈ ಇರಿಸಿ, ಮೊಣಕಾಲೂರಿ, ಅವ್ವಾ..... ಸ್ವರ್ಗಕ್ಕೇ ಹೋಗಿರೆಂಬ ಮೊರೆ ಇರಿಸಿದೆ. ಅಲ್ಲೇ ಕುಳಿತಿರೋಣ ಏಳುವುದೇ ಬೇಡ ಎಂಬ ಮನಸ್ಥಿತಿ. ಯಾರೋ ರಟ್ಟೆಹಿಡಿದು ಎತ್ತಿದರು. ಸ್ವರ್ಗ ನರಕ ಇದೆಯೋ ಇಲ್ಲವೋ ನಂಗೊತ್ತಿಲ್ಲ. ಉಸಿರು ನಿಂತಮೇಲೆ ಎಲ್ಲಿ ಹೋಗಿದ್ದೀರೆಂದು ತಿಳಿದೂ ಇಲ್ಲ. ಅವ್ವಾ... ನೀವೆಲ್ಲೇ ಹೋಗಿ, ಎಲ್ಲೇ ಇರಿ, ನೆಮ್ಮದಿಯಿಂದ, ಶಾಂತಿಯಿಂದ ಇರಿ ಎಂದು ಮಾತ್ರ ನಾನು ಪ್ರಾರ್ಥಿಸಬಲ್ಲೆ. ಮತ್ತು ಅನುದಿನವೂ ನಾನೀಗ ಅದನ್ನೇ ಮಾಡುತ್ತಿದ್ದೇನೆ.

****

ಮರೆಯಲಾಗದ್ದು: 2007ರ ಜುಲೈ 30ರಂದು ಅಮ್ಮನಿಗೆ ಹೃದಯಾಘಾತವಾಗಿತ್ತು. 'ಸೀರಿಯಸ್' ಎಂಬುದಾಗಿ ಅಣ್ಣನ ಫೋನ್ ಬಂದಾಗ ಏನುಮಾಡಬೇಕೆಂದು ತಿಳಿಯದೆ ಕುಸಿದಿದ್ದೆ. ಕಚೇರಿಯಲ್ಲಿದ್ದ ನನ್ನೆಲ್ಲಾ ಸಹೋದ್ಯೋಗಿಗಳು ನಂಗೆ ಸಹಾಯ ಹಸ್ತ ಚಾಚಿದ್ದರು. ಬಳಿಕ ಪರ್ವಾಗಿಲ್ಲ ಚೇತರಿಸಿಕೊಂಡರು ಎಂಬ ಸುದ್ದಿ ತಿಳಿದ ಮೇಲೆ ನಾನೂ ಇಲ್ಲಿ ಚೇತರಿಸಿಕೊಂಡಿದ್ದೆನಾದರೂ ತಕ್ಷಣ ಊರಿಗೆ ತೆರಳಿದ್ದೆ. ಆಸ್ಪತ್ರೆವಾಸಿಯಾಗಿದ್ದ ಅವರ ಬೇಕುಬೇಡಗಳನ್ನು ಗಮನಿಸಿಕೊಳ್ಳುತ್ತಾ ಸುಮಾರು 14 ದಿನಗಳಕಾಲ ಅವರೊಂದಿಗಿದ್ದೆ. ರಜೆಯ ಬರಗಾಲದ ಕಚೇರಿ ನಮ್ಮದು. ಅಂತಹ ಕೆಲಸದೊತ್ತಡದ ಸಂದರ್ಭದಲ್ಲೂ, ಪರಿಸ್ಥಿತಿ ಅರ್ಥಮಾಡಿಕೊಂಡ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಸೌಮ್ಯ ಮತ್ತು ನನ್ನ ಐಆರ್‌ಎ ಬೆನ್ನಿ ನಂಗೆ ಅಮ್ಮನೊಡನಿರಲು ಅವಕಾಶ ಕಲ್ಪಿಸಿದ್ದರು. ಆ ಹದಿನೆಂಟು ದಿನಗಳು ಮಾತ್ರ ನಾನು ಕೊನೆಯದಾಗಿ ಅಮ್ಮನೊಂದಿಗೆ ಹೆಚ್ಚುಕಾಲವಿದ್ದದ್ದು.

ಆ ಸಂದರ್ಭದಲ್ಲಿ ಹೆಚ್ಚೆಂದರೆ 15ದಿನವೆಂದು ವೈದ್ಯರು ಗಡುವು ನೀಡಿದ್ದರು. ಆ ಗಡು ದಾಟಿತು. ಅವರು ಬದುಕುಳಿದರೂ ನೀವು ಅವರ ಸರಾಗ ಉಸಿರಾಟಕ್ಕೆ ದಿನನಿತ್ಯ ಆಕ್ಸಿಜನ್ ನೀಡಬೇಕು, ಆಕ್ಸಿಜನ್ ಡಬ್ಬ ಖರೀದಿಸಿ ಎಂದಿದ್ದರು ವೈದ್ಯರು. ಆದರೆ ವೈದ್ಯರಿಗೆ ಸಡ್ಡು ಹೊಡೆಯುವಂತೆ ಅಮ್ಮ ಚೇತರಿಸಿಕೊಂಡದ್ದೊಂದು ಪವಾಡ. (ಸಹೋದ್ಯೋಗಿಗಳು, ಹಿತೈಷಿಗಳ ಹಾರೈಕೆ, ಪ್ರಾರ್ಥನೆಯ ಫಲವಿರಬುಹುದು) ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಷ್ಟು ಆರೋಗ್ಯವಂತರಾಗಿದ್ದ ಅವ್ವ, ಮತ್ತೆ ಕಾರುಬಾರಕ್ಕಿಳಿಯುವ ಉತ್ಸಾಹಕ್ಕೆ ಮರಳಿದ್ದರು. ಅಡಿಕೆ ಸುಲಿಯಲು ಹೋಗಿ ಅಣ್ಣನ ಕೈಯಲ್ಲಿ ಬಯ್ಗಳು ತಿಂದದ್ದೂ ಉಂಟು.

ಇದಾದ ಬಳಿಕ ಎರಡು ಮೂರು ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮತ್ತೆ ಆಸ್ಪತ್ರೆ-ಮನೆ ಹೀಗೆ.... ಸಾಗಿತ್ತು. ಇಂತಹ ಕಣ್ಣುಮುಚ್ಚಾಲೆಯಾಟ ಬಹುಶಃ ಮಾನಸಿಕ ಸಿದ್ಧತೆಗೆ ಅಮ್ಮ ನಮಗೆ ನೀಡಿದ ಸೂಚನೆ ಇರಬೇಕು. ದೇವ್ರೇ... ಆಟಿ(ಮಳೆಗಾಲ)ತಿಂಗಳಲ್ಲಿ ಏನಾದರೂ ಆದರೆ ಏನು ಗತಿ ಎಂಬುದು ನಮ್ಮೆಲ್ಲರ ಚಿಂತೆಯಾಗಿತ್ತು. ಆದರೆ ಇದಕ್ಕೆಲ್ಲ ವ್ಯತಿರಿಕ್ತ ಎಂಬಂತೆ ಮೊನ್ನೆ ಜನವರಿ 31ರಂದು ಇದ್ದಕ್ಕಿದ್ದಂತೆ ಎದ್ದು ಹೋದಂತೆ ನಮ್ಮೆಲ್ಲರನ್ನೂ ಅಗಲಿ ಹೋಗೇ ಬಿಟ್ಟರು. ಅದೂ ಶನಿವಾರ ಅಪರಾಹ್ನ. ಯಾರಿಗೂ ರಜೆಗೆ ತೊಂದರೆಯಾಗಬಾರದು ಎಂದು ಗ್ರಹಿಸಿದ್ದರೋ....