ಪ್ರಜಾವಾಣಿ ಬ್ಲಾಗಿಲನು ತೆರೆದಾಗ........
ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ
ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು!
ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ
ಬ್ಲಾಗಿಲನು ತೆರೆದು...
ಶಾನಿಯ ರೈಲು!
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು!
ಹೀಗೆ ತಮಾಷೆಯಾಗಿ ಬರೆಯುವ, ತನ್ನನ್ನೇ ತಮಾಷೆ ಮಾಡಿಕೊಳ್ಳುವ `ಶಾನಿ' ಅವರ ಬ್ಲಾಗು `ಶಾನಿಯ ಡೆಸ್ಕಿನಿಂದ' (shaanidesk.blogspot.in). ಯಾರೀ ಶಾನಿ- ಎನ್ನುವ ಕುತೂಹಲದಿಂದ ಇಣುಕಿ ನೋಡಿದರೆ ಹೆಚ್ಚಿನ ಮಾಹಿತಿಯೇನೂ ಸಿಗುವುದಿಲ್ಲ. `ಹೋಗಿದ್ದೇ ಊರು, ಸಾಗಿದ್ದೇ ದಾರಿ' ಎನ್ನುವ ಮನೋಭಾವದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- ಕಂಡಾಪಟ್ಟೆ ಮೂರ್ಖತನ.
ಹುಟ್ಟಾ ಪೆದ್ದು. ಎರಡು ಬಾರಿ `ಅಂತಾರಾಷ್ಟ್ರೀಯ ಮೂರ್ಖ' ಪ್ರಶಸ್ತಿ ಲಭಿಸಿದೆ. ಇಂಥ ಶಾನಿ, ವಿಮಾನ ಬಿಡಬೇಕು ಎಂದುಕೊಂಡಿದ್ದರಂತೆ. ಅದು ಒಗ್ಗದೆ ಹೋದ ಕಾರಣ ರೈಲು ಬಿಡಲು ಹೊರಟಿದ್ದಾರೆ, ಬ್ಲಾಗಿನ ಮೂಲಕ.
ಈಗ ಡೆಸ್ಕ್‌ನಲ್ಲಿ ಇಣುಕೋಣ. ಇಲ್ಲಿರುವುದೆಲ್ಲ ಹೆಚ್ಚೂಕಡಿಮೆ ರೈಲು ಬಿಡುವ ಬರಹಗಳೇ. `ಕ್ರಿಕೆಟ್ ತಂಡಗಳೂ ನಮ್ಮ ಹೀರೋಗಳೂ...' ಎನ್ನುವ ಬರಹ ನೋಡಿ:
ಇವತ್ತು ಬೆಳ್ಳಂಬೆಳಿಗ್ಗೆ ನನ್ನ ಇಮೇಲ್ ಖಾತೆ ತೆರೆದು ನೋಡಿದಾಗ ಮಹೇಶ್ ಭಟ್ರ ಸಂದೇಶವಿತ್ತು. `ನಿಮ್ಮ ಇತ್ತೀಚಿನ ಬರಹಗಳಲ್ಲಿ ಗಂಡನ ಮನೆಯ ವ್ಯವಹಾರಗಳನ್ನು ಗುರಿಯಾಗಿಸಿದ್ದೀರಿ. ಯಾಕೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ `ಬೇರೆಯವರ ಗಂಡನ ಮನೆಯ ಬಗ್ಗೆ ಬರೆಯೋದಕ್ಕಿಂತ ನನ್ನ ಗಂಡನ ಮನೆಯ ವ್ಯವಹಾರಗಳನ್ನು ಬರೆಯುವುದೇ ಸೇಫ್ ತಾನೆ. ಹುಟ್ಟಾ ಸೋಂಬೇರಿಯಾಗಿರುವ ಮತ್ತು ತಲೆ ಇಲ್ಲದ ನನಗೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ' ಎಂದು ಉತ್ತರಿಸಿ ಬಚಾವಾಗಲು ಪ್ರಯತ್ನಿಸಿದ್ದೆ (ಈ ಹೇಳಿಕೆಯ ಮೇರೆಗೆ ಶಾನಿ ಅವರನ್ನು ಸ್ತ್ರೀಲಿಂಗಕ್ಕೆ ಸೇರಿಸಬಹುದು -ಸಾಕ್ಷಿ).
ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಟಿಕರ್ತ. ಇದನ್ನು ನಿಮಗೂ ಯಾರಾದರೂ ಕಳುಹಿಸಿರಲೂಬಹುದು. ಇಲ್ಲವಾದರೆ ಸುಮ್ಮನೆ ನಕ್ಕುಬಿಡಿ.
ಆಸ್ಟ್ರೇಲಿಯಾ ತಂಡ = ರಾಜ್‌ಕುಮಾರ್ (ಯಾವಾಗಲೂ ಹಿಟ್!). ದಕ್ಷಿಣ ಆಫ್ರಿಕಾ = ಶಂಕರ್ ನಾಗ್ (ಪ್ರತಿಭಾವಂತ, ಆದರೆ ದುರದೃಷ್ಟವಂತ). ಶ್ರೀಲಂಕಾ = ಸುದೀಪ್ (ಪ್ರತಿಭಾವಂತ, ಆದರೆ ನೋ ಹಿಟ್!). ಬಾಂಗ್ಲಾದೇಶ = ಪ್ರೇಮ್ (ಅದೃಷ್ಟವಂತ). ನ್ಯೂಜಿಲೆಂಡ್ = ರಮೇಶ್ (ಸದ್ದಿಲ್ಲದಂತೆ ಉನ್ನತಿ). ಇಂಗ್ಲೆಂಡ್ = ಶಿವರಾಜ್‌ಕುಮಾರ್ (ಹಿಟ್ಟಾ ಫ್ಲಾಪಾ ಗೊತ್ತಿಲ್ಲ!). ಐರ್ಲೆಂಡ್ = ಗಣೇಶ್ (ಮೆಗಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ). ವೆಸ್ಟಿಂಡೀಸ್ = ವಿಜಯ್ (ಸದ್ದು ಮಾತ್ರ, ಪರ್ಫಾಮೆನ್ಸ್ ಸುದ್ದಿ ಇಲ್ಲ). ಪಾಕಿಸ್ತಾನ = ವಜ್ರಮುನಿ (ಯಾವಾಗಲೂ ಖಳನಾಯಕನೇ). ಭಾರತ = ಜಗ್ಗೇಶ್ (ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!).
ಕ್ರಿಕೆಟ್ ಬಗೆಗಿನ ಮೇಲಿನ ಬರಹದಲ್ಲಿನ ಹೋಲಿಕೆಗಳು ಈಗ ಕೊಂಚ ಹಳತು ಎನ್ನಿಸುವಂತಿವೆ. ಹಾಗೆಂದು, ಶಾನಿಯವರ ಹಾಸ್ಯಪ್ರಜ್ಞೆಗೆ ಸಮಕಾಲೀನ ಸ್ಪರ್ಶವಿಲ್ಲ ಎನ್ನುವಂತಿಲ್ಲ. ಇದಕ್ಕೆ ಉದಾಹರಣೆ, `ನಮ್ಮನೆಯಲ್ಲೂ ಪಟ್ಟಿ ಬಿಡುಗಡೆಯಾಯ್ತು!' ಎನ್ನುವ ಟಿಪ್ಪಣಿ. ಪ್ರಸ್ತುತ ನಾಡನ್ನೆಲ್ಲ ವ್ಯಾಪಿಸಿರುವ ಚುನಾವಣಾ ಜ್ವರದ ಕಾವು ಈ ಬರಹಕ್ಕೆ ಪ್ರೇರಣೆಯಾಗಿದೆ. ವಿವಿಧ ಪಕ್ಷಗಳ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಶಾನಿ, ತಮ್ಮ ಮನೆಯ ದಿನಸಿ ಪಟ್ಟಿಗೆ ಹೋಲಿಸುತ್ತಾರೆ. ಮನೆಯ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿ ಸ್ವಾರಸ್ಯಕರವಾಗಿದೆ. ಅದನ್ನು ಬ್ಲಾಗಿನಲ್ಲೇ ಓದಿ.
ಶಾನಿ ಅವರ ಡೆಸ್ಕ್‌ನ ವಸ್ತು ವೈವಿಧ್ಯ ಗಮನಸೆಳೆಯುವಂತಿದೆ. ತಮ್ಮ ಹುಟ್ಟಿದ ದಿನ ಗೊತ್ತಿಲ್ಲದೇ ಇರುವುದರಿಂದ ಸಾಕಷ್ಟು ಲಾಭವಾಗಿದೆ ಎನ್ನುತ್ತ, `ಹನ್ನೆರಡು ರಾಶಿಯೊಳಗೊಂದು ರಾಶಿ' ಬರಹದಲ್ಲಿ ಹದಿಮೂರನೇ ರಾಶಿಯನ್ನು ಬ್ಲಾಗಿಗರು ಸೃಷ್ಟಿಸುತ್ತಾರೆ. ಮರೆಗುಳಿ ಪ್ರೊಫೆಸರರೊಬ್ಬರ ಬಗ್ಗೆ ಸೊಗಸಾದ ಬರಹವಿದೆ. `ಮಳೆ, ಆಷಾಢ, ಅಳಿಯ, ಎಮ್ಮೆ, ಇತ್ಯಾದಿ...' ಬರಹ ಲಲಿತ ಪ್ರಬಂಧದ ಗುಣಗಳನ್ನು ಹೊಂದಿದೆ.
ಗದ್ಯದಿಂದ ಮತ್ತೆ ಪದ್ಯಕ್ಕೆ ಬರೋಣ. `ಏಡ್ಸ್' ಎನ್ನುವುದೊಂದು ಚುಟುಕು. ಅದು ಹೇಳುತ್ತದೆ- `ಏಡ್ಸ್ ಬಾರದಿರಲು / ಏನು ಮಾಡಬೇಕು? / ಏನೂ / ಮಾಡದಿರಬೇಕು!'. ಈ ಹನಿಗೆ ಓದುಗರ ಒಂದು ಪ್ರತಿಕ್ರಿಯೆ- `ಏನೂ ಬರೀಬೇಡಿ ಮತ್ತೆ. ರಾಜ್ಯಪಾಲರು ಡಾಕ್ಟರೇಟ್ ಕೊಡಲ್ಲ!'.
ನಗಿಸುವುದರಲ್ಲಿ ಶಾನಿ ಅವರು ತಮ್ಮ ಬರಹಗಳಲ್ಲಿ ಯಶಸ್ವಿ ಆಗಿರುವಂತೆಯೇ ವಿಫಲವಾಗಿರುವುದೂ ಇದೆ. ಆದರೆ, ನಗಿಸಲಿಕ್ಕಾಗಿ ಅವರು ಅಡ್ಡಮಾರ್ಗ ಹಿಡಿದಿಲ್ಲ ಎನ್ನುವುದನ್ನು ಮೆಚ್ಚಿಕೊಳ್ಳಬೇಕು.
-ಸಾಕ್ಷಿ.
-ಸಾಕ್ಷಿ.
ಶಾನಿ,
ಪ್ರತ್ಯುತ್ತರಅಳಿಸಿಪ್ರಜಾವಾಣಿಯ ಈ ಕಿರುಪರಿಚಯವು ಗುಣಗ್ರಾಹಿಯಾಗಿದೆ ಎನ್ನಬಹುದು. ಅಭಿನಂದನೆಗಳು.
:-)
ಪ್ರತ್ಯುತ್ತರಅಳಿಸಿ