ಮಂಗಳವಾರ, ಮಾರ್ಚ್ 14

ಎತ್ತಣ ನಾಯ್ಮರಿ....... ಎತ್ತಣ ಬಿಸ್ಕೇಟೂ.....

(ಚಿತ್ರ ಯಾರದ್ದು ಗೊತ್ತಿಲ್ಲ)
ನಾನು ಮತ್ತು ಗೆಳತಿ ಮಡಿಕೇರಿಯಿಂದ ಸುಳ್ಯಕ್ಕೆ ಹೊರಟಿದ್ದೆವು. ನಮ್ಮನ್ನು ಬಸ್‌ಸ್ಟಾಂಡಿಗೆ ಡ್ರಾಪ್ ಮಾಡಲು ಹೊರಟಿದ್ದ ಆಕೆಯ ಸಹೋದ್ಯೋಗಿ ಮಿತ್ರ ಬಸ್ ಅದಾಗಲೇ ಹೊರಟು ಬರುತ್ತಿರುವುದನ್ನು ಕಂಡು ಕೈ ತೋರಿಸಿ ನಿಲ್ಲಿಸಿದರು. ಮಾರ್ಗಮಧ್ಯೆ ಇದ್ದ ನಾವು ದಡಬಡಾಯಿಸಿ ಕಾರಿನಿಂದ ಇಳಿದು ಎದುರಿನಿಂದ ಯಾವುದಾದರೂ ವಾಹನ ಬರುತ್ತಿದೆಯೇ ಎಂಬುದನ್ನೂ ಲೆಕ್ಕಿಸದೆ ಹಾರಿಬಿದ್ದು ಧಾವಂತದಲ್ಲಿ ಬಸ್ ಏರಲು ಓಡಿದೆವು. ಒಂದು ವೇಳೆ ಎದುರಿಂದ ಯಾವುದಾದರೂ ವಾಹನ ಬಂದಿದ್ದರೆ ಇದು ಅಪ್‌ಡೇಟ್ ಆಗುತ್ತಿರಲಿಲ್ಲ! ವಾಹನಗಳ ಪುಣ್ಯ; ಯಾವುದೂ ಬಂದಿರಲಿಲ್ಲ.

ಹೀಗೆ ಅವಸರದಲ್ಲಿ ಬಸ್ ಏರಿ ಸೀಟ್ ಇದೆಯೋ ಎಂದು ಕಣ್ಣಾಡಿಸಿ ಸಿಕ್ಕ ಸೀಟಲ್ಲಿ ಹೋಗಿ ಸೆಟ್ಲ್ ಆಗುತ್ತಿರಬೇಕಾದರೆ ನಾಯಿಮರಿಯೊಂದರ ಆರ್ತನಾದ ಕೇಳುತ್ತಿತ್ತು. ಹ್ಹೇ... ಬಸ್ಸಲ್ಲಿ ನಾಯಿಮರಿ ಇರಬೇಕು ಎಂದೆ ನಾನು. ಗೆಳತಿ ಎದ್ದು ನಿಂತು ಸರ್ವೇ ಮಾಡಿ ಡ್ರೈವರ್ ಸೀಟಿನ ಹಿಂಭಾಗದಲ್ಲಿ ನಾಯಿ ಇರುವುದಾಗಿಯೂ, ಅದು ರಟ್ಟಿನ ಪೆಟ್ಟಿಗೆಯಲ್ಲಿ ಬಂದಿ ಆಗಿರುವುದಾಗಿಯೂ ಪತ್ತೆ ಹಚ್ಚಿದರು. ಅದರ ಪಕ್ಕದ ಸೀಟಿನಲ್ಲಿ ಕುಳಿತಿರುವವರು ನಾಯಿಮರಿ ಬಗ್ಗೆ ಸಾಕಷ್ಟು ಕಾಳಜಿ ವಹಿಸದೇ ಇರುವುದಕ್ಕೆ ಅಸಮಾಧಾನಗೊಂಡು ಗೊಣಗುಟ್ಟಲಾರಂಭಿಸಿರು. ಅದ್ಕೆ ಏನಾರು ಹಾಕ್ಬಾರ್ದಾ ಎಂದು ಎದುರಿಗಿದ್ದ ಇಬ್ಬರು ಯುವಕನ್ನು ಸ್ವಲ್ಪ ಜೋರಾಗಿಯೇ ಕೇಳಿದಳು. ಏ್ಹ..... ಅದು ನಮ್ದಲ್ಲಾ ಮೇಡಾಂ.... ಯಾರೋ ಬಿಟ್ಟ್ಹೋಗಿದ್ದಾರೆ ಎಂದು ಅವರೂ ಅಷ್ಟೇ ಜೋರಾಗಿಯೇ ಹೇಳಿದರು. ಛೇ ಹೀಗಾ ಮಾಡೋದು.... ಪಾಪಾ.... ಅಷ್ಟು ಚಿಕ್ಕ ನಾಯ್ಮರಿ.... ಎಂದು ಮರುಗಿದ ನನ್ನ ಗೆಳತಿಗೆ ಈಗ ಲೇಟಾಯಿತೆಂಬ ಧಾವಂತ ಹೋಗಿ ನಾಯ್ಮರಿಯ ಯೋಗಕ್ಷೇಮ ಆವರಿಸಿಕೊಂಡಿತು. 

ಪಾಪ ನಾಯ್ಮರಿಗೆ ಏನಾದರೂ ಕೊಡ್ಬೇಕಲ್ಲಪ್ಪಾ ಎನ್ನುತ್ತಾ ಬಗಲಿನ ಬ್ಯಾಗನ್ನು ತಡಕಾಡಲು ಆರಂಭಿಸಿದರು. ಸಮ್ಮೋಹಿನಿಗೆ ಒಳಗಾದಂತೆ ನಾನೂ ನನ್ನ ಭುಜದ ಬ್ಯಾಗನ್ನು ಮಡಿಲಿಗೆ ತಂದು ಏನಾದರೂ ಸಿಗುತ್ತದೆಯೇ ಎಂದು ಹುಡುಕಿದೆ. ಹೇ ಸಿಗ್ತಪ್ಪಾ ಎನ್ನುತ್ತಾ ಹಸಿರು ಕವರ್‌ರಿನ ಗುಡ್ ಡೇ ಬಿಸ್ಕತ್ತು ಪ್ಯಾಕೇಟನ್ನು ಎದುರಿನ ಸೀಟಲ್ಲಿದ್ದ ಯುವಕರಿಗೆ ಹಸ್ತಾಂತರಿಸಿ, ತಗೊಳ್ರಪ್ಪ ನಾಯ್ಮರಿಗೆ ಹಾಕಿ ಎಂದು ಉಸ್ಸಪ್ಪಾ ಅನ್ನುತ್ತಾ ಕುಳಿತರು. ಗೆದ್ದೆನೆಂದ ಸಂತಸದಲ್ಲಿದ್ದ ಅವರು, ಅದು ನೀವು ಕೊಟ್ಟ ಬಿಸ್ಕತ್ತು ಅಂದರು. ಆ್ಯಕ್ಚುವಲೀ ಅದು ನನ್ನಕ್ಕ ನನ್ನಲ್ಲಿಗೆ ಬಂದಾಗ ತಂದಿದ್ದಳು. ಅಕ್ಕನ ಮನೆಗೆ ಯಾರೋ ತಂದಿದ್ದ ಅದನ್ನು ಆಕೆ ಎಮರ್ಜೆನ್ಸಿಗೆ ಇರಲಿ ಎಂದು ಬ್ಯಾಗಲ್ಲಿ ಹಾಕ್ಕೊಂಡಿದ್ದಳು. ನನ್ನಲ್ಲಿಗೆ ಬಂದಾಗ ತಂಗಿಗೆಂದು ಬಿಟ್ಟು ಹೋಗಿದ್ದಳು. ನಾನು ಅದನ್ನು ನನ್ನ ಆಪತ್‌ಬಾಂಧವಿ ಗೆಳತಿಯೊಂದಿಗೆ ಗ್ರೀನ್ ಟೀ ಜೊತೆಗೆ ತಿನ್ನುವಾ ಎಂದು ಹಿಂದಿನ ದಿನ ಅವರ ಟೀಪಾಯಿ ಮೇಲೆ ಇರಿಸಿದ್ದೆ. ಎಲ್ಲಿಂದೆಲ್ಲಿಗೆ ಕನೆಕ್ಷನ್ ಅನ್ನಿಸಿ ಎತ್ತಣ ನಾಯ್ಮರಿ ಎತ್ತಣ ಬಿಸ್ಕೆಟ್ ಅಲ್ಲವೇ ಎಂದೆ ಗೆಳತಿಗೆ.

ಬಿಸ್ಕತ್ತು ಹಾಕಿದ ಬಳಿಕ ಎರಡು ನಿಮಿಷ ಮರಿನಾಯಿ ಕುಂಯಿಗುಟ್ಟುವಿಕೆ ನಿಂತಿತಾದರೂ ಮತ್ತೆ ಪುನಃ ಕೂಗು ಆರಂಭ. ಬಿಸ್ಕೇಟು ಪಸಂದಾಗಿಲ್ವೋ, ಅದರ ಬ್ರಾಂಡು ಗುಡ್ ಡೇ ಅಲ್ವೇನೋ ಅಂತ ನಾನು ಯೋಚಿಸುತ್ತಿರಬೇಕಾದರೆ, ಈಕೆ ಛೈ....... ಪಾಪ ನಾಯಿಗೆ ಬೋರಾಗ್ತಿದೆ ಎಂದು ನಾಯಿ ಸೈಕಾಲಜಿ ತಿಳಿದವರಂತೆ ತೀರ್ಮಾನಕ್ಕೆ ಬಂದರು. ನಾಯಿಗೆ ಹಾಡು ಹಾಕ್ಬೇಕಿತ್ತು ಅಂತ ಎದುರಿನ ಹುಡುಗರಿಗೆ ಹೇಳಲನುವಾದರು. ಪಾಪ ಮೊಬೈಲಲ್ಲಿ ಹಾಡು ಹಾಕೋಣ್ವಾ ಅಂತ ಚಡಪಡಿಸಲು ಆರಂಭಿಸಿದರು. ಎಂದಿನಂತೆ ಅವರ ಮೊಬೈಲ್ ಚಾರ್ಜಿಲ್ಲದೆ ನಿಸ್ತೇಜವಾಗಿತ್ತು. ರಟ್ಟಿನ ಪೆಟ್ಟಿಗೆಯೊಳಗಿದ್ದ ನಾಯ್ಮರಿ ಕಿವಿಗೆ ಜಾಕ್ ಹೇಗೆ ಸೆಟ್ ಮಾಡ್ತಿತ್ತಿದ್ರೋ......? ಮೊಬೈಲ್ ಹಾಡ್ಯಾಕೆ, ನೀವೆ ಹೋಗಿ ಅದರ ಪಕ್ಕದಲ್ಲಿ ಕುಳಿತು ಹಾಡಿ ನಾನು ಕಿವಿ ಮಚ್ಚಿಕೊಳ್ಳುತ್ತೇನೆ ಎಂಬ ಬಿಟ್ಟಿ ಸಲಹೆ ನೀಡಿದೆ. ನಾಯಿಮರಿ ಬಳಿ ಕುಳಿತು ಅವರು ಹಾಡುವ ದೃಶ್ಯ ನನ್ನ ಕಣ್ಣೆದುರು ಮೂಡಿದಂತಾಗಿ ನನ್ನ ಮುಖದಲ್ಲಿ ನಗುವೊಂದು ಹಾದುಹೋಯಿತು. ಅವರಿಗೆ ಏನನ್ನಿಸಿತೋ ಸುಮ್ಮನಾದರು. ಆದರೂ..... ನಾಯಿಮರಿ ನಾಯಿಮರಿ ತಿಂಡಿಬೇಕೇ ಎಂಬಲ್ಲಿಂದ ಹಿಡಿದು ನಾಯಿಗೆ ಸಂಬಂಧಿಸಿದ ಹಾಡುಗಳನ್ನು ನೆನಪಿಸಿಕೊಳ್ಳುತ್ತಿದ್ದರು. ತಿರುವು ಮುರುವು ರಸ್ತೆಯಲ್ಲಿ ಬಸ್ಸು ವೇಗದಿಂದ ಇಳಿಯುವಾಗ ಹೊಟ್ಟೆತೊಳಸಿಂತಾಗುವುದು ಸಾಮಾನ್ಯ. ಪಾಪ ನಾಯಿಗೆ ವಾಂತಿ ಬರುತ್ತದೇನೋ ಅಂತ ನಾನು ಸ್ವಯಂ ಆಗಿ ಅಬ್ಬೇಪಾರಿ ನಾಯಿಮರಿಯ ಯೋಗಕ್ಷೇಮ ವಹಿಸಿಕೊಂಡ ಗೆಳತಿಯನ್ನು ಕಿಚಾಯಿಸಿದೆ. ಛೀ.... ಎಂಬಂತೆ, ನಾನೇ ವಾಂತಿ ಮಾಡಿದಂತೆ ನನ್ನ ಮೇಲೆ ಒಂದು ಹೇಸಿಗೆ ನೋಟ ಹರಿಸಿ ಬಿಟ್ಟರು. ಇಷ್ಟೇನಾ ನಾಯಿ ಪ್ರೀತಿ ಅಂತ ನಂಗೆ ನಗು ಬಂತು. 

ನನ್ನ ಗೆಳತಿಯ ನಾಯಿಸತ್ಕಾರದಿಂದಾಗಿ ದಾರಿಸಾಗಿದ್ದು ತಿಳಿಯಲಿಲ್ಲ. ನಮ್ಮ ಗಮ್ಯ ಹತ್ತಿರವಾಗುತ್ತಲೇ ಕೇಳಿದೆ; ನಾಯ್ಮರಿ ಜತೆ ಸೆಲ್ಫೀ ಬೇಡ್ವೇ ಅಂತ! ಅದು ಬಾಕ್ಸಿನೊಳಗಿದೆ ಅಂದ್ರು. ಬಾಕ್ಸ್ ಸಮೇತ ಬೊಂಬಾಟ್ ಫೋಟೋ ತೆಗೆದುಕೊಡುತ್ತೇನೆಂದೆ. ಖಿಲ್ಲನೆ ನಗುತ್ತಾ ಇಳಿಯಲಣಿಯಾದರು....!