ಬುಧವಾರ, ಸೆಪ್ಟೆಂಬರ್ 29

ಯಾರಿಗೆ ಮಂದಿರ... ಯಾರಿಗೆ ಮಸೀದೀ....

ಬಲ್ಲಿರೇನಯ್ಯಾ.......

ಭಳಿರೇ ಪರಾಕ್ರಮ ಕಂಠೀರವಾ.....

ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?

ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....

ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ....

ಸರಯೂ ನದಿಯ ತಟದಲ್ಲಿ ತರುಲತೆಗಳ ಬಳುಕು, ಪುಷ್ಪ ವನಗಳ ಥಳುಕಿನಿಂದ ಕಂಗೊಳಿಸುತ್ತಿದ್ದ ಅಯೋಧ್ಯೆಯಲ್ಲೇನೋ ಧಾವಂತದ ಮೌನ. ದೇಶಾದ್ಯಂತ ಎಲ್ಲರಲ್ಲೂ ಏನಾಗುತ್ತದೆಯೇನೋ ಎಂಬ ಆತಂಕ, ಎಲ್ಲೆಲ್ಲೂ ತಳಮಳ, ಕಳವಳ, ಆತಂಕ, ತಲ್ಲಣ, ವ್ಯಾಕುಲತೇ... ಎಲ್ಲೆಲ್ಲೂ ಖಾಖಿಗಳು. ವಾತಾವರಣವೆಲ್ಲ ಖಾಖಿಮಯಾ...

ಇಂತಹ ಸಮಯದಲ್ಲಿ ನಮ್ಮ ಒಡ್ಡೋಲಗ ಉಚಿತವೆಂದು ನಾವೀ ಒಡ್ಡೋಲಗಕ್ಕೆ ಬಂದಿದ್ದೇವೇ.... ಯಾರಲ್ಲೀ...

ಅಯ್ಯಾ ಶ್ರೀ ರಾಮಚಂದ್ರ ಪ್ರಭುವೇ.....

ನೀವು ಹುಟ್ಟಿದ ಜಾಗಕ್ಕಾಗಿ ಶತಮಾನಗಳಿಂದಲೇ ವಿವಾದ ನಡೆಯುತ್ತಿದೆ. ಹೋರಾಟಗಳು, ಹಾರಟಗಳು, ರಕ್ತಪಾತಗಳು ಆಗಿವೆ. ಇದೀಗ ಮತ್ತೆ ನಿಮ್ಮ ಜನ್ಮಸ್ಥಾನವೆಂದು ಹೇಳುತ್ತಿರುವ ಆ ನಿರ್ದಿಷ್ಟ ಸ್ಥಳವು ನಿಮ್ಮದ್ದೋ, ಅಥವಾ ಒಂದಾನೊಂದು ಕಾಲದಲ್ಲಿ ದೇಶವನ್ನು ಆಳಿದ್ದ ಬಾಬರ ಕಟ್ಟಿಸಿದ ಮಸೀದಿಯದ್ದಾ ಎಂಬುದನ್ನು ನ್ಯಾಯಾಲಯ ಹೇಳುವ ವೇಳಗೇ.....

ಭಾಗವತರೇ..... ನಾವು ಜೀವಿಸಿದ್ದೆವು ಎಂದು ಹೇಳಲಾಗುತ್ತಿರುವ ದಿನಗಳಿಂದಲೇ ವಿವಾದ ನಮಗೆ ತಪ್ಪಿದ್ದಲ್ಲ. ಹೋರಾಟದಲ್ಲೇ ಬೆಳೆದವರು ನಾವು. ಬಾಲ್ಯದ ಕೆಲವು ಸಮಯ ತಮ್ಮಂದಿರಾದ ಲಕ್ಷ್ಮಣ, ಭರತ-ಶತ್ರುಘ್ನರೊಂದಿಗೆ ಆಡಿ-ಪಾಡಿದ್ದಷ್ಟೆ ವಿವಾದಾದೀತ ಸಮಯ ಎನ್ನಬಹುದೂ.... ನಮ್ಮ ಚಿಕ್ಕಮ್ಮಳಿಗೆ ಮಂಥರೆ ಮಾಡಿದ ದುರ್ಭೋದನೆಯ ಪ್ರಚೋದನೆಯಿಂದಾಗಿ ನಾವು ಪಟ್ಟಾಭಿಷೇಕವನ್ನು ತ್ಯಜಿಸಿ ವನವಾಸಕ್ಕೆ ಹೋದಲ್ಲಿಂದ ನಾವು ಎಷ್ಟೊಂದು ಕಾರ್ಪಣ್ಯಗಳನ್ನು ಎದುರಿಸಿಲ್ಲಾ...

ಸ್ವಾಮೀ ದಶರಥ ಪುತ್ರರೇ... ವಿವಾದ ಎದ್ದಿರುವ ಸ್ಥಳದಲ್ಲೇ ನೀವು ಹುಟ್ಟಿದ್ದು ಎನ್ನುತ್ತಿರುವ ವರ್ಗ ಒಂದು ಅಲ್ಲೇ ನಿಮಗೆ ದೇಗುಲ ಕಟ್ಟಬೇಕೆಂದು ಟೊಂಕ ಕಟ್ಟಿದೆ. ಆದರೆ ಇನ್ನೊಂದು ವರ್ಗ ನಾವು ಹಲವು ಕಾಲದಿಂದ ನಮ್ಮ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಿಕೊಂಡ ಸ್ಥಳ ಅದಾಗಿದ್ದು, ಅದು ನಮ್ಮದೆಂದು ಹಠ ಹಿಡಿಯುತ್ತಿದೆ. ಪರಮಾತ್ಮಾ.... ಆ ಜಾಗ ಯಾರದ್ದು....? ನೀನು ಅಲ್ಲಿಯೇ......

ಭಾಗವತರೇ ಸ್ವಲ್ಪ ಬಾಯಿ ಮುಚ್ಚುತ್ತೀರಾ......ಯಾವ ಧರ್ಮ, ಯಾವ ಪೂಜೆ, ಯಾವ ಆರಾಧನೆ? ಎಲ್ಲಾ ಧರ್ಮಕ್ಕಿಂತಲೂ ರಾಜಕೀಯದ ಕೊಳಕು ಧರ್ಮವಿದೆ ನೋಡಿ.... ಅದು ಅತ್ಯಂತ ಅಪಾಯಕಾರಿ..... ವಿವಿಧ ಪಕ್ಷಗಳ ಈ ರಾಜಕೀಯ ಮಂಥರೆಯರು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನನ್ನ ಹೆಸರು ಹೇಳುತ್ತಾ, ಗಲಾಟೆ ಎಬ್ಬಿಸಿ, ಬೆಂಕಿ ಹೊತ್ತಿಸಿ, ರಕ್ತ ಹರಿಸಿ, ಹೆಣ ಉದುರಿಸಲು ಪ್ರೇರಣೆ ನೀಡುತ್ತಾರೆ ನೋಡಿ... ಅಮಾಯಕರು ದೊಂಬಿಯಲ್ಲಿ ಮುಳುಗಿದ್ದಾಗ, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು, ಕೈಯಲ್ಲಿ ದೂರ ಸಂವೇದಿ ಗುಂಡಿ ಅದುಮುತ್ತಾ ತುಟಿಯಂಚಿನಲ್ಲಿ ವಕ್ರನಗೆ ಬೀರುತ್ತಾ, ಹರಿದ ರಕ್ತ, ಉದುರಿದ ಹೆಣಗಳು ಎಷ್ಟು ಮತಗಳಾಗಿ ಪರಿವರ್ತಿತವಾಗಬಹುದು ಎಂಬುದಾಗಿ ಲೆಕ್ಕ ಹಾಕುತ್ತಾರಲ್ಲಾ.... ಇದು ಯಾರ ಧರ್ಮವೂ ಅಲ್ಲಾ.... ಇದು ಯಾರ ಸಂಸ್ಕೃತಿಯೂ ಅಲ್ಲಾ....

ಇತ್ತೀಚೆಗೆ ನಾವೊಂದು ಸರ್ವಧರ್ಮ ಸಮ್ಮೇಳನವನ್ನು ಅಂತರಿಕ್ಷದಿಂದ ಗಮನಿಸುತ್ತಿದ್ದೆವು. ಅತ್ತ ತಿರುಗಿದರೆ, ಇಸ್ಲಾಮಿನ ಅಲ್ಲಾಹುವೂ, ಇತ್ತ ತಿರುಗಿದರೆ ಇತರ ಧರ್ಮದ ದೇವಾದಿಗಳೂ ಇದೇ ಸಮ್ಮೇಳನವನ್ನು ವೀಕ್ಷಿಸುತ್ತಿರುವುದು ಕಂಡು ಬಂತು. ಉಭಯ ಕುಶಲೋಪರಿಯ ಬಳಿಕ, ನಾವು ಈ ಜನರ ಹೇಸಿಗೆ ಹೋರಾಟದ ಕುರಿತು ಪರಸ್ಪರ ಮಾತಾಡಿಕೊಂಡೆವು. ಎಲ್ಲರಿಂದಲೂ ಹೊರಟದ್ದು ಖೇದಕರವಾದ ನಿಟ್ಟಿಸಿರು.

ಮರ್ಯಾದಾ ಪುರುಶೋತ್ತಮನೇ.... ನಿಮ್ಮ ಆರಾಧನೆಗೆ....

ಭಾವತರೇ...... ಯಾರಿಗೆ ಬೇಕಿದೆ ಮಂದಿರ- ಮಸೀದಿ...? ವೋಟಿನ ಮೇಲೆ ಕಣ್ಣಿಟ್ಟವರಿಗಿರುವ ಆಸಕ್ತಿ ನಮಗಿಲ್ಲ. ತಮ್ಮತಮ್ಮ ಟಿಆರ್‌ಪಿ ಏರಿಸಿಕೊಳ್ಳಲು ತುತ್ತೂರಿವರು ನೀಡುತ್ತಿರುವ ಕೊಡುಗೆಯೇನೂ ಕಮ್ಮಿ ಇಲ್ಲಾ.....ನಮ್ಮನ್ನು ಆರಾಧಿಸಲು ಆಡಂಬರವೇನೂ ಬೇಕಿಲ್ಲ. ಹೃದಯ ಮಂದಿರಕ್ಕಿಂತ ಪ್ರಶಸ್ತ ಸ್ಥಳ ಇನ್ಯಾವುದಿದೆ......? ಅಲ್ಲಾಹುವೇ ಹೇಳಿರುವುದನ್ನು ಪವಿತ್ರ ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ನಮಗೆ ಮಸೀದಿಯೇ ಬೇಕಿಲ್ಲ.... ಶುಚಿರ್ಭೂತರಾಗಿ ಮೆಕ್ಕಾದ ದಿಕ್ಕಿಗೆ ಮುಖಮಾಡಿ ಎಲ್ಲಿಯೂ ನಮಿಸಬಹುದಾಗಿದೆ..... ಎಲ್ಲಾ ಧರ್ಮಗಳೂ ಹೆಚ್ಚೂ ಕಮ್ಮಿ ಇದನ್ನೇ ಹೇಳಿರುವುದೆಂಬುದನ್ನು ಮೊದಲು ಅರ್ಥಮಾಡಿಕೊಳ್ಳೀ...
ಯಾವ ಧರ್ಮದ ದೇವರಿಗೂ ಮಂದಿರ-ಮಸೀದಿ ಬೇಕಾಗಿಲ್ಲ. ಭಾವನೆಗಳನ್ನು ಕೆರಳಿಸುವವರನ್ನು ಮೊದಲು ಸದೆ ಬಡಿಯಬೇಕಾಗಿದೆ. ಇತಿಹಾಸಿದಿಂದ ಪಾಠ ಕಲಿಯದ ಮೂಢರುಗಳಿರಾ.... ಅವನು ಒಡೆದನೆಂದು ಇವನು, ಇವನು ಒಡೆದನೆಂದು ಅವನು ಒಡೆಯುತ್ತಾ ಹೋದರೇ..... ಒಡಕುಗಳೇ ತುಂಬಿಕೊಳ್ಳುತ್ತವೆ. ನೀವು ಧರ್ಮವನ್ನೇ ನಂಬುವರಾದರೇ... ಅದಕ್ಕೇ ಅಂಟಿಕೊಳ್ಳುವರಾದರೆ ಆಯಾ ಧರ್ಮಗಳಲ್ಲಿ ಹೇಳಿರುವ ಉದಾತ್ತ ಗುಣಗಳನ್ನು ಅನುಸರಿಸೀ... ನೆಮ್ಮದಿಯಿಂದ ಬದುಕುವುದ ಕಲಿಯಿರೀ.... ಎಲ್ಲರಿಗೂ ಒಳಿತಾಗಲೀ... ಸರ್ವೇಜನ ಸುಖಿನೋಭವಂತೂ.....
ಮಂಗಳಂ!

ಬುಧವಾರ, ಸೆಪ್ಟೆಂಬರ್ 22

ಚುನಾವಣೆ ಗೆಲ್ಲೋದು ಮಾತ್ರ ಅರ್ಹತೆಯಲ್ಲಾ...

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....

ಭಾಶೋ ರಕಂದ್ಲಾಜೆ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಬೆಂದಕಾಳೂರು ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಗ್ರಾಮೀಣ ಪರಿಸ್ಥಿತಿಯ ಸ್ಥಿತಿಗತಿಗಳು ಸುಧಾರಣೆಗೊಳ್ಳಬೇಕು, ಮಹಿಳಾ ಸಮುದಾಯ ಮುಂದೆ ಬರಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ಕರ್ನಾಟಕ ಸಾಮ್ರಾಟರ ಕೈ ಬಲಪಡಿಸಬೇಕು, .... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಅದೆಷ್ಟು ಸುಂದರಮಯ ವಾತಾವರಣ. ಕನ್ನಡಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ಉದ್ಯಾನನಗರಿಯ ಚುಮುಚುಮು ಚಳಿಗೆ ಹಿತವೆನ್ನಿಸುವ ಎಳೆಬಿಸಿಲು. ಅದ್ಭುತ ಕಾವ್ಯದಂತಾಗಿರುವ ಈ ನಮ್ಮ ಸಿಲಿಕಾನ್ ಕಣಿವೆ. ಮೈತುಂಬ ಉಲ್ಲಾಸ, ಸಂತೋಷ ಪುಟಿಯುತ್ತಿದ್ದು; ಹುಮ್ಮಸ್ಸಿನಿಂದ ಕುಣಿಯುತ್ತಿರುವ ಮನಸ್ಸು.... ಆದಿತ್ಯ ದೇವನ ಬಂಗಾರ ಕಿರಣಗಳು ಇಳೆಯನ್ನು ಮುತ್ತಿಕ್ಕಲು ಧಾವಂತದಿಂದಲೋ ಎಂಬಂತೆ ಧಾವಿಸುವ ನೋಟ. ಆಹಾ ಪ್ರಪಂಚವೀಗ ಹಿಂದೆಂದೂ ಇಲ್ಲದಷ್ಟು ಸುಂದರವಾಗಿ ಕಂಗೊಳಿಸುತ್ತಿದೆ.. ನಿದಿರಾ ದೇವಿಯ ಮಡಿಲಿನಿಂದ ಎದ್ದ ನಮ್ಮನ್ನು ಈ ಪರಿಯ ಸೊಬಗಿಂದ ಸ್ವಾಗತಿಸಿದೆ.

ನಮ್ಮ ಅಭ್ಯಾಸದಂತೆ ನಸುಕಿನಲ್ಲೇ ಎದ್ದು, ಸ್ನಾನ ಶೌಚಾದಿ ಪ್ರಾಥವಿಧಿಗಳನ್ನು ತೀರಿಸಿಕೊಂಡೆವು. ಮಂತ್ರವನ್ನು ಜಪಿಸಿ, ಪೂಜೆಯನ್ನು ಮಾಡುತ್ತಾ ಇಷ್ಟದೈವ ಪುತ್ತೂರಿನ ಮಾಲಿಂಗೇಶ್ವರನಿಗೆ ವಿಶೇಷವಾಗಿ ಮತ್ತು ಹೆಚ್ಚೂಕಮ್ಮಿ ದೇಶಾದ್ಯಂತವಿರುವ ಎಲ್ಲಾ ಕಾರ್ಣೀಕದ ದೇವರಿಗೆ ವಂದಿಸಿಕೊಂಡದ್ದಾಯ್ತು. ಬಳಿಕ ನಮ್ಮೂರ ಗ್ಲೋಬಲ್ ತಿಂಡಿಯಾಗಿರುವ ಪುಂಡಿಯೆಂಬ ಉಪಾಹಾರವನ್ನು ಸೇವಿಸಿ, ಎಂದಿನಂತೆ ಸರಳವಾಗಿ ಸಿಂಗರಿಸಿಕೊಂಡು, ಮಿಣಮಿಣ ಸೀರೆಯೊಂದನ್ನು ಒಪ್ಪವಾಗಿ ಉಟ್ಟು, ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೂ ಸಭೆಗೂ ವಂದಿಸಿ ಆಸೀನಾಳಾಗಿ ಸಭೆಯತ್ತ ನೋಟ ಹರಿಸುತ್ತೇವೇ..... ಆಶ್ಚರ್ಯ.... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಿಕ್ಕಸಿಕ್ಕಲ್ಲಿ ತಲೆತೂರುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರಿದ್ದಾರೆ. ವಂದಿ ಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ತಮ್ಮ ಆಯುಧಗಳನ್ನು ಸಿದ್ಧಪಡಿಸಿ ಕಾದಿದ್ದಾರೆ..... ಒಡ್ಡೋಲಗವನ್ನು ಆರಂಭಿಸಿಯೇ ಬಿಡೋಣವಂತೇ..... ಯಾರಲ್ಲೀ...

ಅಮ್ಮಾ.... ರಕಂದ್ಲಾಜೆಯವರೇ.... ಅಂತೂ ಗೊಂದಲ, ಬೆದರಿಕೆ, ವಿರೋಧ ಅಸಮಾಧಾನಗಳ ನಡುವೆ ನಿರೀಕ್ಷೆಯಂತೆಯೇ ತಾವು ಸಚಿವೆ ಪಟ್ಟವನ್ನು ಮರಳಿ ಪಡೆದಿದ್ದೀರಿ. ಮತ್ತೆ ಮಂತ್ರಿ ಕುರ್ಚಿ ಏರಿರುವ ತಮಗೆ ಅಭಿನಂದನೆಗಳು...... ತಾವೂ..

ನಿಮ್ಮ ಅಭಿವಂದನೆಗಳಿಗೆ ಧನ್ಯವಾದಗಳು. ನೋಡಿ ಭಾಗವತರೇ, ನಮಗೆ ಸಿಕ್ಕಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ನಾವು ಮಾಡಿರುವ ಉತ್ತಮ ಕಾರ್ಯಗಳೇ ನಮ್ಮನ್ನು ಮತ್ತೆ ಮಂತ್ರಿ ಕುರ್ಚಿಗೆ ತಂದು ಕುಳ್ಳಿರಿಸಿದೆ. ನಮ್ಮದಲ್ಲದ ತಪ್ಪಿಗೆ ನಾವು ಈ ಹಿಂದೆ ರಾಜೀನಾಮೆ ನೀಡಬೇಕಾಯಿತು. ನಮ್ಮ ರಾಜೀನಾಮೆಗೆ ಗುಂಪೊಂದು ಒತ್ತಾಯಿಸಿದ್ದಾದರೂ ಯಾಕೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಮಂತ್ರಿಣಿಯವರೇ, ತಾವು ಈ ಸಂಸ್ಥಾನದ ಮಹಾರಾಜರಿಗೆ ನಿಕಟವೆಂಬೋ ಕಾರಣಕ್ಕೇ ಮಂತ್ರಿಗಿರಿ ಪಡೆದೀರೆಂದು ಜನತೆ ಹೇಳುತ್ತಾರೆಂದರೆ ಅದು ಕ್ಲೀಷೆಯ ಮಾತಾಗುತ್ತದೆ. ಮಂತ್ರಿ ಮಂಡಲದಲ್ಲಿ ಏಕೈಕ ಮಹಿಳೆಯಾಗಿದ್ದ ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಅರ್ಹರಾದ ನಾಯಕಿಯರು ತಮ್ಮ ಪಕ್ಷದಲ್ಲಿ ಇದ್ದರೂ, ಅದು ಖಾಲಿಯಾಗೇ ಇತ್ತು. ನೀವಂದು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಈ ನಾಡಿನ ಮಹಾರಾಜರು ಪ್ರಜೆಗಳ ಮುಂದೆ ಕಣ್ಣೀರುಗರೆದದ್ದೂ ಇದೆ. ಆದರೆ ಮಂತ್ರಿ ಸ್ಥಾನ ಹೋದರೂ ವಿಚಲಿತರಾದ ತಾವು ಮಾತ್ರ, ನನ್ನ ರಾಜೀನಾಮೆ ಕೇಳಲು ಕಾರಣವೇನೂ ಎಂದು ಗಟ್ಟಿಸಿ ಕೇಳಿ ಉತ್ತರ ಸಿಗದೆ ಸುಮ್ಮನಾದಿರಿ. ಘಟಾನುಘಟಿಗಳನ್ನೆಲ್ಲ ಬದಿಗೆ ಸರಿಸಿ ಅಧಿಕಾರ ಪಡೆದಿರುವವರು ತಾವು. ಇದೆಲ್ಲದರ ಒಳಗುಟ್ಟೇನೂ.....

ಭಾಗವತರೇ ನಿಮ್ಮ ರಂಪಿಗೆ ನಾಲಗೆಯನ್ನು ಹೇಗೆಬೇಕೂ ಹಾಗೆ ಹರಿಯಬಿಡಬೇಡಿ. ನಾವೇನೂ ಅಧಿಕಾರಕ್ಕಾಗಿ ಎಲ್ಲಿಯೂ ಗುಂಪುಗಾರಿಕೆ ನಡೆಸಿಲ್ಲ. ಪಕ್ಷಕ್ಕೆ ಕಾಲಿಟ್ಟಲ್ಲಿಂದ ಒಪ್ಪಿಸಿದ ಅಧಿಕಾರವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಿಕೊಂಡು ಬಂದು ಪಕ್ಷದ ಹಿರಿಯರ ಮೆಚ್ಚುಗೆ ಗಳಿಸಿದವರು ನಾವು. ನಮ್ಮ ಕಾರ್ಯವೈಖರಿಯನ್ನು ಕಂಡಿರುವ ಮಹಾರಾಜರು ನಮ್ಮನ್ನು ಪುತ್ರಿಯಂತೆ ಪೋಷಿಸುತ್ತಿದ್ದಾರೆ. ಇದನ್ನು ಕಂಡರಾಗದವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ಕಣ್ಣಿಗೆ ಮುಳ್ಳಾಣಿ ಬಡಿಯಲಿ. ಮಂತ್ರಿಯಾಗಲು ಚುನಾವಣೆಯಲ್ಲಿ ಗೆಲ್ಲುವುದೇ ಅರ್ಹತೆ ಅಂದುಕೊಳ್ಳಲಾಗುತ್ತದಾ? ಅದೃಷ್ಟವಿರಬೇಕು, ಜನಸೇವೆ ಮಾಡಲು ತಿಳಿದಿರಬೇಕು. ರಾಜಕೀಯವನ್ನೂ ಮಾಡಬೇಕು ಗೊತ್ತಾಯಿತೇ.... ಈಗ ನೋಡಿ ನಾವು ಅಧಿಕಾರದಲ್ಲಿಲ್ಲದಾಗಲೂ ಜನಸೇವೆ ನಿಲ್ಲಿಸಿದ್ದೇವಾ? ಉತ್ತರ ಕರ್ನಾಟಕದ ಪ್ರವಾಹ ಪೀಡಿತರನ್ನು ಸಂತೈಸಲು ನಾವು ತೆರಳಿದ್ದೆವು. ಎಂಡೋಸಲ್ಫಾನ್ ಪೀಡಿತರ ಕಷ್ಟಕ್ಕೆ ಸ್ಪಂದಿಸಿದೆವು. ಹೀಗೆ ಪಟ್ಟಿಮಾಡಿದರೆ ಹಲವುಂಟು. ಗೆದ್ದು ಸಮ್ಮನೆ ಕುದ್ದರೆ ಸಾಕಾಗುವುದಿಲ್ಲ. ಉದಾಹರಣೆಗೆ ನೋಡಿ. ನಮ್ಮೂರಿನಿಂದ ಅತ್ತ ತಿರುಗಿದರೆ ಇರುವ ಸುಳ್ಯದ ಶಾಸಕ ರಂಗಾರ, ಇತ್ತತಿರುಗಿದರೆ ಕಾಣುವ ಮಂಗ್ಳೂರಿನ ಶೋಯೋಗಿ ಭಟ್ಟರು, ಕುಂದಾಪುರದ ಲಹಾಡಿ ನೀಶ್ರಿವಾಸ ಶೆಟ್ಟರು- ಇವರೆಲ್ಲ ನಾಲ್ಕುನಾಲ್ಕು ಬಾರಿ ಗೆದ್ದು, ಮಂತ್ರಿ ಸ್ಥಾನ ಸಿಗದೆ ಬಿದ್ದವರು. ಸುಳ್ಯವೆಂಬೋ ಕ್ಷೇತ್ರಕ್ಕೂ ಒಬ್ಬ ಶಾಸಕರಿದ್ದಾರೆಯೇ ಎಂದು ಜನರು ಕೇಳುವಷ್ಟು ಮಟ್ಟಿಗೆ ತಣ್ಣಗಿದ್ದಾರೆ ರಂಗಾರ. ಇವರೆಲ್ಲ ಪಕ್ಷದ ತೀರ್ಮಾನಕ್ಕೆ ಸದ್ದುಸುದ್ದಿಯಿಲ್ಲದೇ ಬದ್ಧರಾಗಿರುವಾಗ ಕೆಲಕೆಲವರು ಕೆರಳಿದರೆ ನಮಗೇನಂತೇ? ಈಗ ನೋಡಿ ಮಂಗಳೂರನ್ನೇ ತೆಗೆದುಕೊಳ್ಳಿ. ಹಲವು ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ಭಟ್ಟರನ್ನು ಪಕ್ಕದ ಸುರತ್ಕಲ್ ಶಾಸಕ ಲೇಪಮಾರರು ಬದಿಗೆ ಸರಿಸಿ ಮಂತ್ರಿಯಾಗಿಲ್ಲವೇ... ಪ್ರತಿಯೊಂದಕ್ಕೂ ಅದರದ್ದೇ ಕಾರಣಗಳಿರುತ್ತವೆ. ರಾಜನೀತಿಯಲ್ಲಿ ಅವುಗಳನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲಾ...

ತಮ್ಮ ಮುಂದಿನ ಯೋಜನೆಗಳೇನೂ ತಾಯೀ...
ನಮಗೆ ಒಪ್ಪಿಸಿದ ಕಾರ್ಯವನ್ನು ಮುತುವರ್ಜಿಯಿಂದ ವಹಿಸಿಕೊಳ್ಳುತ್ತೇವೆ. ಯಾವುದೇ ಜವಾಬ್ದಾರಿಗೂ ಸಿದ್ಧ. ಜನತೆಯ ಅದರಲ್ಲೂ ಗ್ರಾಮೀಣ ಜನತೆಯ ಉದ್ಧಾರವೇ ನಮ್ಮ ಗುರಿ. ಅದರಲ್ಲೂ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಕಷ್ಟಕೋಟಲೆಯಿಂದ ಹೊರಬರಬೇಕೆಂಬುದೇ ನಮ್ಮ ಹೋರಾಟ. ಭಾಗವತರೇ ಕಾದು ನೋಡುವಿರಂತೇ.... ಎಲ್ಲವೂ ಪುತ್ತೂರಿನ ಮಹಾಲಿಂಗೇಶ್ವರನ ಇಚ್ಛೆ.

ಸರಿ ರಕಂದ್ಲಾಜೆಯವರೇ.... ಇಂದಷ್ಟೆ ಅಧಿಕಾರ ಸ್ವೀಕರಿಸಿರುವ ತಾವು ಅವಸರದಲ್ಲಿದ್ದಂತೆ ತೋರುತ್ತದೆ. ಮತ್ತೊಮ್ಮೆ ಸಾವಕಾಶವಾಗಿ ಭೇಟಿಯಾಗೊಣ ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ. ಎಲ್ಲರಿಗೂ ಒಳಿತಾಗಲೀ.. ಸರ್ವೇಜನ ಸುಖಿನೋಭವಂತು...!

ಮಂಗಳಂ......

ಸೋಮವಾರ, ಸೆಪ್ಟೆಂಬರ್ 13

ಮಳೆ, ಆಷಾಢ, ಅಳಿಯ, ಎಮ್ಮೆ ಇತ್ಯಾದಿ...

"ಬರಗಾಲಕ್ಕೆ ಬಿದ್ದಂತೆ ಮಳೆಗಾಗಿ ಚಾತಕ ಪಕ್ಷಿಯಾಗಿದ್ದ ನಿನಗೇ ಎಂಬಂತೆ ಇಷ್ಟೊಂದು ಮಳೆ ಸುರಿಸಿದರೂ ಇನ್ನೂ ಬರೆಯದೇ ಬಿದ್ದಿದ್ಯಲ್ಲ, ನಿನ್ನ ಮುಖಕ್ಕಿಷ್ಟು..." ಎಂದು ಬಯ್ದಂತಾಯಿತು. ಮಳೆಯನ್ನು, ನೀರನ್ನು ಬ್ಲಾಗಿನಲ್ಲಿ ಸುರಿಸಬೇಕೆಂಬ ಯೋಜನೆಯನ್ನು ಮುಂದೂಡುತ್ತಲೇ ಇರುವಾಗ, ಮಧ್ಯೆ ಒಂದಿಷ್ಟು ಬಿಸಿಲ ಗ್ಯಾಪ್ ನೀಡಿ, ಮತ್ತೆ ಮತ್ತೆ ದಿನಪೂರ್ತಿ ಸುರಿದ ಧೋ ಮಳೆ ನನ್ನ ಮುಖಕ್ಕೆ ರಾಚುತ್ತಿರಬೇಕಿದ್ದರೆ ಮೇಲಿನಂತೆ ಧ್ವನಿಸಿತ್ತು ನನಗೆ. ಹಾಗಾಗಿ ಈ ಅಪ್‌ಡೇಟ್.

ಬೇಸಗೆಯಲ್ಲಿ ಬಿರುಬಿಸಿಲಿನ ಮೂಲಕ ಬೆವರಿಳಿಸಿದ ಸೂರ್ಯನ ಮುಖದಲ್ಲಿ ನೀರಿಳಿಸುವಂತೆ ಮಳೆ ಸುರಿದಾಗ, ಇಂತಹ ಮಳೆಗಾಗಿ ಮೂರೂವರೆ ವರ್ಷದಿಂದ ಕಾದು ಮರಳಿ ಮಳೆಯೂರ ವಾಸಿಯಾಗಿರುವ ನನಗೆ ಇದೇ ಮಳೆಯನ್ನು ಬ್ಲಾಗಿನಲ್ಲಿ ಸುರಿಸಬೇಕೆಂದೆನಿಸಿತ್ತು. ದಿವ್ಯ ಸೋಂಬೇರಿಯಾಗಿರುವ ನಾನು ಇಂದು ನಾಳೆ ಎನ್ನುತ್ತಿರುವಾಗಲೇ ಮಳೆಯ ಬಿರುಸು ಕಡಿಮೆಯಾದಂತಾಗಿ, ಸಾಯ್ಲಿ ಬೇಡ ಎಂದು ತೀರ್ಮಾನಿಸಿದ್ದೆ.

ಅದಕ್ಕೆ ಸರಿ ಎಂಬಂತೆ, ನನ್ನಣ್ಣ ಫೋನಿಸಿ ಆಷಾಢಕ್ಕೆ ಕರೆದೊಯ್ಯಲು ಬರುತ್ತೇನೆ ಅಂದಿದ್ದ. ಈ ವಾರ, ಮುಂದಿನ ವಾರ ಎಂದು ಅವನನ್ನು ಸತಾಯಿಸಿ ಆಷಾಢ ಇನ್ನೆರಡು ದಿನ ಇದೆ ಎಂದಾಗ ಹೊರಟೆ. ಆದರೆ ಅದಕ್ಕೂ ವಿಘ್ನ. ಅದೇ ದಿನ ಆತ್ಮೀಯರೊಬ್ಬರು ನಮಗಾಗಿ ಔತಣ ಏರ್ಪಡಿಸಿದ್ದಾಗ ಅಲ್ಲೂ ಇಲ್ಲವೆನ್ನಲಾಗದೆ - ಇಲ್ಲೂ ಇಲ್ಲವೆನ್ನಲಾಗದೆ, ಇಕ್ಕಡೆಯಲ್ಲೂ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರೆಯ ಬಂದ ಅಣ್ಣನಿಗೆ ಅನಾರೋಗ್ಯದ ನೆಪ ಮುಂದಿಟ್ಟು, ಇಂದು ಬರಲಾಗುವುದಿಲ್ಲ ನಾಳೆ ಎಂದು, ಕೊನೆಗೆ ನನ್ನ ಮಗ(ಅಕ್ಕನ) ಶರತ್ ಹೇಳಿದಂತೆ ಒಬ್ಬಳೇ ತವರಿಗೆ ತೆರಳಿದೆ. (ತಂಗಿಯನ್ನು ಕರೆಯ ಬರುವ ಅಣ್ಣನಿಗೆ ಜತೆಯಾಗುವಂತೆ ಪಿಯು ಕಲಿಯುತ್ತಿರುವ ಶರತ್‌ಗೆ ಹೇಳಲಾಗಿತ್ತು. ಅವನಿಗೆ ನಗುವೋ ನಗು. ಒಂಟಿ ಸಲಗಿಯಂತೆ ಊರೂರು ಅಲೆದಿರುವ ಚಿಕ್ಕಮ್ಮನನ್ನು ಕರೆತರುವುದು ಅವನಿಗೆ ದೊಡ್ಡ ಸೋಜಿಗವಾಗಿ ಕಂಡಿತ್ತು!!)

ಕೊನೆಗೂ ಆಷಾಢಕ್ಕೆ ಹೋದೆ. ಅತ್ತೆ ಬರ್ತಾರೇ ಅಂತ ತಿಂಗಳಿನಿಂದ ಕಾದಿದ್ದ ನಾಲ್ಕರ ಹರೆಯದ ನನ್ನಳಿಯಗೆ ಸಂಭ್ರಮವೋ ಸಂಭ್ರಮ. ಶಾಲೆಯಿಂದ (ಹಳ್ಳಿಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಆತನಿಗೆ ‘ಸ್ಕೂಲ್’ ಗೊತ್ತಿಲ್ಲ) ಬಂದವನೇ ಡಬ್ಲ್ಯುಡಬ್ಲ್ಯುಎಫ್ ಪ್ರೇರಣೆಯಂತೆ ನನ್ನಮೇಲೆ ಹಾರಿದ, ಒದ್ದ - ಗುದ್ದಿದ. ನಂಗೆ ಅಂಟಿಯೇ ಇದ್ದ ಅವನೊಂದಿಗೆ ಜೆಸಿಬಿ ಓಡಿಸಿ, ಕಾರ್ ಕೆಡವಿ, ಕ್ರಿಕೆಟ್ ಆಡಿ, ಬೊಂಬೆ ದೂಡಿ ಬೋರಾದಾಗ ತೋಟಕ್ಕೆ ಹೊರಟೆವು.

ಮೇಲೆ ತೋಟದ ಮೂಲೆಯಲ್ಲಿರುವ ಅವ್ವನ ಹೊಸ ಜಾಗಕ್ಕೆ ತೆರಳಿ ನಮಿಸಿ ಹಿಂತಿರುಗುವಾಗ ಕೈಯನ್ನು ಎಳೆಯಲಾರಂಭಿಸಿದ ವಿ(ಘ್ನೇ)ಶು ಕೆಳ ತೋಟಕ್ಕೆ ಹೋಗ್ವಾ ಅಂತಾ ಒತ್ತಾಯಿಸಿದ. ಸಿಂಗಮಾಮನ ತೋಟಕ್ಕೆ ಅಂಟಿಕೊಂಡಿರುವ ನಮ್ಮ ತೋಟದ ಅಂಚಿನ ತನಕ ಹೋದೆವು. ಚಚಿಪಿಚಿ ಕೆಸರಿನಲ್ಲಿ ಕಾಲಿಟ್ಟೆವು. ಕಂಠಮಟ್ಟ ನೀರಿನಿಂದ ತುಳುಕುತ್ತಿದ್ದ ಕೆರೆಬಳಿ ತೆರಳಿ ನೀರೊಳಗೆ ಪುಳುಪುಳುಕ್ಕೆಂದು ಸೊಂಟ ಬಳುಕಿಸಿ ಓಡುವ ಮೀನುಗಳನ್ನು ನೋಡಿದೆವು. ಕಂಗು-ಬಾಳೆಯ ಪ್ರತಿಬಿಂಬವನ್ನು ನುಂಗಿ ಗಾಂಭಿರ್ಯವೇ ಮೈವೆತ್ತಂತೆ ನಿಂತಿದ್ದ ಸ್ಪಟಿಕಶುದ್ಧಿಯ ನೀರಿಗೆ ಪುಟ್ಟಪುಟ್ಟ ಕಲ್ಲುಗಳನ್ನು ಎಸೆದ ಅಳಿಯನಿಗೆ ಅದರಿಂದೇಳುವ ತರಂಗಗಳಲ್ಲಿ ಕಂಗಿನ ಮರದ ಬಿಂಬ ಮುರಿದಂತಾಯಿತೇಕೆ ಎಂಬ ಕೌತುಕ.

ಕತ್ತಲಾಯಿತು ಹೋಗೋಣ ಪುಟ್ಟಾ ಅನ್ನುತ್ತಾ ಹೊರಟೆ ಮನೆಗೆ. ತೋಡಿನ (ತೊರೆ) ಬಳಿ ಬಂದಾಗ ಓಡಿ ನೀರಿಗಿಳಿದು ಬಿದ್ದುಗಿದ್ದಾನೆಂಬ ಭಯಕ್ಕೆ ಅವನ ಕೈ ಗಟ್ಟಿ ಹಿಡಿದಿದ್ದೆ. ಅತ್ತೇ ನೀರಿಗಿಳಿಯುವಾ ಎಂದ. ಬೇಡ ಅಮ್ಮ ಬಯ್ತಾರೆಂದು ಗದರಿ ಮುಂದೆ ಸಾಗಿದೆ. ಮಗು ಮತ್ತೆಮತ್ತೆ ಹಿಂತಿರುಗಿ ಹರಿವ ನೀರನ್ನು ತನ್ನ ಹೊಳೆವ ಕಂಗಳಲ್ಲಿ ಆಸೆಯಿಂದ ನೋಡುತ್ತಾ ನೋಡುತ್ತಾ ನನ್ನ ಕೈಯನ್ನು ಹಿಂದಿಂದೆಗೇ ಜಗ್ಗುತ್ತಿದ್ದ. ಮಗುವಿನ ಆಸೆ ಪೂರೈಸುವಾ ಎಂದು ಹಿಂತಿರುಗಿದೆ. ರಾಮರಾಮಾ... ಅವನ ಖುಷಿಯೋ... ತನ್ನ ಚೋಟುದ್ದ ಚಡ್ಡಿ ಮಡಚುತ್ತಾ, ಅತ್ತೇ ನಿನ್ನ ಪ್ಯಾಂಟು ಮಡಚು, ಚಂಡಿ ಆದರೆ ಅಮ್ಮ ಬಯ್ತಾರೆಂದು ನನ್ನನ್ನು ಎಚ್ಚರಿಸಿದ. ಮುದ್ದುಮುದ್ದು ಕಾಲನ್ನು ಅವಚಿದ್ದ ಪುಟ್ಟ ಚಪ್ಪಲನ್ನು ಅವಸರವಸರದಲ್ಲಿ ಕಳಚಿ, ಥಳುಕು ಬಳುಕಿನೊಂದಿಗೆ ರಭಸದಿಂದ ಹರಿಯುತ್ತಿದ್ದ ನೀರಿಗೆ ಇಳಿದೆವು. ಏನು ಖುಷಿ ಹುಡುಗನಿಗೆ. ನೀರೇ ಕಾಣದವರಂತೆ ಕುಣಿತ, ನಗು, ಕೇಕೆ. ಅಷ್ಟೂ ನೀರನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬುವ ಯತ್ನ. ಪುಟ್ಟಪುಟ್ಟ ಕಲ್ಲುಗಳನ್ನು ಅಮೂಲ್ಯ ಹರಳುಗಳಂತೆ ಹೆಕ್ಕುವುದೇನು, ಅವುಗಳನ್ನು ಬೀಸಿಬೀಸಿ ಒಗೆಯುವುದೇನು. ಆ ಸದ್ದಿಗೆ ಪುಳಕಗೊಳ್ಳುವುದೇನು. ನೀರೊಳಗೆ ಮಿನುಗುತ್ತಿದ್ದ ನನ್ನ ಕಾಲ್ಬೆರಳ ಬಣ್ಣ ಅವನಿಗೆ ಬಂಗಾದಂತೆ ಕಂಡಿತೋ, ಮುಟ್ಟಿಮುಟ್ಟಿ ಸವರಿದ. ಪಾಚಿಬಂಡೆ ಮೇಲೆ ಕಾಲಿರಿಸಿ ಜಾರಿದ, ಸುಳ್ಳುಸುಳ್ಳೇ ಬಿದ್ದ, ಮೈಯೀಡೀ ಒದ್ದೆಯಾಗುವಂತೆ ಮಲಗಿದ, ಎದ್ದ. ಅತ್ತೇ ನಾವಿಂದು ಇಲ್ಲೇ ಇರುವಾ ಎಂಬ ಬೇಡಿಕೆ ಇಟ್ಟ.

ಆಕಾಶಕ್ಕೆ ತೂತುಬಿದ್ದಂತೆ ಮೂರ್ನಾಲ್ಕು ದಿನ ನಿರಂತರವಾಗಿ ಮಳೆ ಹುಯ್ಯುತ್ತಿದ್ದ ಅಂದಿನ ದಿನಗಳಲ್ಲಿ ನಾನು ಮತ್ತು ಅಣ್ಣ ಇದೇ ತೋಡಿಗೆ ಪ್ರವಾಹದ ನೀರು ನೋಡಲು ಹೋಗುತ್ತಿದ್ದೆವು. ಮಳೆ ನೀರೆಲ್ಲ ಕೊಚ್ಚಿ ಮಣ್ಣಿನೊಂದಿಗೆ ಬೆರೆತು ಕೆಂಬಣ್ಣವಾಗಿ ತೋಡಿಗಿಳಿದು, ಸುಮಾರು ಒಂದೂವರೆ ಆಳೆತ್ತರದಲ್ಲಿ ರಭಸದಿಂದ ಸಶಬ್ದವಾಗಿ ಹರಿಯುವ ವೇಳೆ ಅದರ ರುದ್ರ ಸೌಂದರ್ಯ ಭಯ ಮಿಶ್ರಿತ ಆನಂದ ನೀಡುತ್ತಿತ್ತು. ಕತೆಗಳಲ್ಲಿ ಕೇಳಿದಂತೆ ಚಿನ್ನದ ನಾಣ್ಯಗಳಿಂದ ತುಂಬಿದ ಕೊಪ್ಪರಿಗೆಯೇನಾದರೂ ನೀರಿನಲ್ಲಿ ತೇಲಿಬಂದು ನನ್ನ ಬಳಿ ನಿಂತು ಬಾಗಿಲು ತೆರೆದರೆ ಯಾವುದರಲ್ಲಿ ಮೊಗೆದುಕೊಳ್ಳಲೀ ಎಂಬ ದುರಾಸೆ ನನ್ನದಾದರೆ, ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ ಸಾಹಸ ಅಣ್ಣನಿಗೆ.

ಹೀಗೆ ಅದೊಮ್ಮೆ ನಾವಿಬ್ಬರು ತೊರೆ ಬದಿ ನಿಂತಿದ್ದಾಗ ಇಂದಿರಾ ಟೀಚರ ಎಮ್ಮೆ ನೀರಿನಲ್ಲಿ ತೇಲಿ ಹೋಯಿತು. 'ಅಯ್ಯೋ ಎಮ್ಮೆ' ಅಂದ ಅಣ್ಣ, ಕೈಯಲ್ಲಿ ಹಿಡಿ ಹುಲ್ಲುಕಿತ್ತು ಎಮ್ಮೆಗೆ ತೋರಿದ. ಹುಲ್ಲಿನಾಸೆಗೆ ತಿರುಗಿ ಬರಲೀ ಎಂದು. ಆದರೆ ಪಾಪದ ಎಮ್ಮೆಗೆ ಸ್ವಯಂ ಆಧರಿಸಿಕೊಳ್ಳಲಾಗದ ವೇಗದಲ್ಲಿ ನೀರು ಹರಿಯುತ್ತಿತ್ತು. ಆಸೆಯ ಕಂಗಳಿಂದ ನಮ್ಮತ್ತ ದಯನೀಯವಾಗಿ ತಿರುತಿರುಗಿ ನೋಡಿದ ನೋಟ ಕರುಳು ಕಿವುಚಿತ್ತು. ಅಣ್ಣ ನನ್ನನ್ನು ಒಂದು ಸುರಕ್ಷಿತವಾದ ಜಾಗದಲ್ಲಿ ನಿಲ್ಲಿಸಿ, ಮತ್ತೊಂದೆಡೆ ತೋಡಿಗೆ ಸಮವಿರುವ ರಸ್ತೆಯಿಂದ ಓಡಿದ. ಸುಮಾರು ಒಂದೂವರೆ ಕಿಲೋ‌ಮೀಟರ್ ದೂರದಲ್ಲಿ ತೋಡು ರಸ್ತೆಯನ್ನು ಕ್ರಾಸ್ ಮಾಡುವ ಜಾಗಕ್ಕೆ ಬರಿಗಾಲಲ್ಲಿ ಓಡಿದ. ಪುಣ್ಯಕ್ಕೆ ನೀರಲ್ಲಿ ಕೊಚ್ಚಿದ್ದ ಎಮ್ಮೆ ಅಲ್ಲಿ ತಲುಪುವಷ್ಟರಲ್ಲಿ ಇವನೂ ಅಲ್ಲಿ ತಲುಪಿ, ನೀರಿನೊಂದಿಗೆ ಸೆಣಸಾಡಿ ಎಮ್ಮೆಯನ್ನು ಬಚಾವ್ ಮಾಡಿ ಇಂದಿರ ಟೀಚರ ಮನೆಯತ್ತ ಅಟ್ಟಿದ್ದ.

ಅಷ್ಟೊತ್ತು "ಸ್ವಾಮೀ ದೇವಾ ಎಮ್ಮೆ ಸಿಗಲೀ" ಎಂದು ಪ್ರಾರ್ಥಿಸುತ್ತಾ ನಿಂತಿದ್ದ ನನಗೆ ಅಣ್ಣ ಬಂದು ಎಮ್ಮೆಯನ್ನು ರಕ್ಷಿಸಿದ ಸಾಹಸಗಾಥೆ ಹೇಳುತ್ತಿದ್ದರೆ, ಸಡನ್ ದುಃಖವಾಗತೊಡಗಿತು. ಛೇ, ಎಮ್ಮೆಯ ಬದಲು ಸಾಕ್ಷಾತ್ ಇಂದಿರಾ ಟೀಚರೇ ಬೊಳ್ಳದಲ್ಲಿ (ನೀರಿನಲ್ಲಿ) ಕೊಚ್ಚಿ ಹೋಗಿಲ್ಲವಲ್ಲಾ ಎಂಬ ಬೇಸರ ಕಾಡಿತು. ಸದಾ ಮಗ್ಗಿ ಕಲಿಯಿರಿ, ಲೆಕ್ಕ ಮಾಡಿ ಎಂದೆಲ್ಲ ಹಿಂಸಿಸಿ, ಒಮ್ಮೊಮ್ಮೆ ಕಿವಿ ಹಿಂಡಿ - ತಲೆಗೆ ಕುಟ್ಟಿ ಹಾಕುತ್ತಾ ನಮ್ಮ ಆಟ, ಮತ್ತಿನ್ನಿತರ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದ ಅವರನ್ನು ನಾವು ವಿಲನ್ ಎಂದೇ ಪರಿಗಣಿಸಿದ್ದೆವು. (ನಾಟಕದಲ್ಲಿ ಪಾರ್ಟು ಕೊಟ್ಟು ನನ್ನನ್ನು ಆ ಊರಿನ 'ಮಹಾನ್ ಕಲಾವಿದೆ'ಯಾಗಿಸಿದ್ದು ಅದೇ ಇಂದಿರಾ ಟೀಚರ್ ಎಂಬುದು ನಂತರದ ವಿಚಾರ)

ಈ ಎಲ್ಲ ಸಂಗತಿ ನೆನಪಾಗಿ ವಿಘ್ನೇಶನ ಕೈಯ ಬಿಗಿತ ಒಂಚೂರು ಸಡಿಲವಾಯಿತು. ನನ್ನ ಕೈ ಜಾರಿಸಿ ಭುಳುಂಕೆಂದು ನೀರಿಗೆ ಬಿದ್ದ ಅವನಿಗೆ ಹೆದರಿಕೆ ಹೋಗಲು ಒಂದು ಪ್ರೀತಿಯ ಏಟು ಬಿಗಿದು, ನೀರಿಂದ ಮೇಲೆ ಬಂದೆವು. ಒದ್ದೆಯಾದ ಚಡ್ಡಿಹಾಕಿ ನಡೆಯಲು ಅವಸ್ಥೆ ಪಡುತ್ತಿದ್ದ ಅವನ ಚಡ್ಡಿ ಕಳಚಿದೆ. ತನ್ನ ಗೇಣುದ್ದದ ಬನಿಯನ್ ಎಳೆದೂ ಎಳೆದೂ ಮಾನ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವನೊಂದಿಗೆ ನಸುನಗುತ್ತಾ ಮನೆಯತ್ತ ಹೆಜ್ಜೆ ಹಾಕಿದೆ.

(ವಿ.ಸೂ: ಮಳೆಯ ಬಗ್ಗೆ ಎನ್ನುತ್ತಾ, ಆಷಾಢದ ಬಗ್ಗೆ, ಅದು ಸಹ ಶ್ರಾವಣ ಕಳೆದು ಭಾದ್ರಪದದಲ್ಲಿ ಬರೆದು... ಇದೆಂತಾ ಅನ್ನಬೇಡಿ., ತೆಂಗಿನ ಮರದ ಬಗ್ಗೆ ತಯ್ಯಾರಾಗಿ ಕ್ಲಾಸಿಗೆ ಹೋಗಿದ್ದ ವಿದ್ಯಾರ್ಥಿಗೆ ಮಾಸ್ಟ್ರು ಹಸುವಿನ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದು , ಕೊನೆಗೆ ತೆಂಗಿನ ಮರವನ್ನೆಲ್ಲಾ ವರ್ಣಿಸಿ, ಇಂತಹ ತೆಂಗಿನ ಮರಕ್ಕೆ ಹಸುವನ್ನು ಎಳೆದು ಕಟ್ಟಲಾಯಿತು ಎಂದು ವಿದ್ಯಾರ್ಥಿ ಪ್ರಂಬಂಧ ಮುಗಿಸಿದ್ದು ನಿಮಗೆ ಗೊತ್ತಿರಬಹುದು!!)