ಶನಿವಾರ, ಅಕ್ಟೋಬರ್ 16

ಗೋಲಿಗಳಿಗೀಗ ಭಾರೀ ಡಿಮಾಂಡ್!

ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ.

ಮೊದಲಿಗೆ ಬಾಲ್ಯದಲ್ಲಿ ನಮ್ಮ ಬಳಿ ಒಂದೂ ಗೋಲಿ ಇರಲಿಲ್ಲ. ಸ್ನೇಹಿತರಿಂದ ಹೇಗೋ ಸಂಪಾದಿಸಿದ್ದ ಒಂದು ಗೋಲಿಯನ್ನೇ ಆಧಾರವಾಗಿಟ್ಟುಕೊಂಡು ಆಟ ಆರಂಭಿಸಿದ ನಾವು ಇದೀಗ ಇಡೀ ರಾಜ್ಯಕ್ಕೇ ಬೇಕಿದ್ದರೂ ಗೋಲಿ ಹಂಚುವಷ್ಟು ಶಕ್ತರಾಗಿದ್ದೇವೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಗೋಲಿ ಆಟದಿಂದಲೇ ಪ್ರಖ್ಯಾತಿಗೆ ಬಂದಿರುವ ಕಾರಣ ನಮ್ಮ ಹೆಸರಿನ ಮುಂದೆ ಗೋಲಿ ಎಂಬುದು ಸೇರಿಕೊಂಡಿತ್ತು. ಆದರೆ ಹೆಸರು ನೋಂದಣಿಯಾಗುವಾಗ ಕಾರಕೂನ ತಪ್ಪಿನಿಂದಾಗಿ ನಮ್ಮ ಹೆಸರು ಗೋಲಿಯ ಬದಲಿಗೆ ಗಾಲಿಯಾಗಿ ಜಗಜ್ಜಾಹೀರಾಗಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ನಾವು ಗೋಲಿಯಾಡುವಾಗ ಹಾಕಿರುವ ಪಟ್ಟುಗಳು ಮತ್ತು ಕಲಿತಿರುವ ತಂತ್ರಗಳಿಂದಾಗಿ ಎಂದಿಗೂ, ಎಲ್ಲಿಯೂ ನಾವು ಸೋಲನ್ನು ಕಂಡವರೇ ಅಲ್ಲ; ಹಾಗಾಗಿ ನಾವು ಇದೇ ತಂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಇದೇ ನಮ್ಮ ಈ ಪರಿಯ ಬೆಳವಣಿಗೆಗೆ ಕಾರಣ ಎಂಬುದಾಗಿ ಅವರು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದಿದ್ದರು.

ಬಾಲ್ಯದಲ್ಲಿ ಗೋಲಿ ಆಡುವಾಗ ಸಾಕಷ್ಟು ಪ್ರಮಾಣದಲ್ಲಿ ನಮಗೆ ಗೋಲಿ ಸಿಗದೇ ಇದ್ದುದೇ ನಾವು ಗೋಲಿ ಆಟವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾಗಿದ್ದು, ಇದಕ್ಕೆ ನಮ್ಮ ಸಹೋದದರು, ಸ್ನೇಹಿತರ ಬೆಂಬಲವೂ ಅಷ್ಟೇ ಗಣನೀಯ ಮತ್ತು ಸ್ಮರಣೀಯ ಎಂಬುದಾಗಿ ಅವರು ಮನದುಂಬಿ ನೆನಪಿಸಿಕೊಂಡರು.

ನಮಗೀಗ ರಾಜಕೀಯವಿರಲಿ, ಉದ್ಯಮವಿರಲೀ ಯಾವುದೇ ವ್ಯವಹಾರಗಳನ್ನು ನಿರ್ವಹಿಸುವುದು ಗೋಲಿ ಆಟದಷ್ಟೇ ಸುಲಭ. ಎದುರಾಳಿಯ ಗುಳಿಯಲ್ಲಿರುವ ಗೋಲಿಗೆ ಗುರಿ ಇರಿಸಿ ಅದನ್ನು ಕೈ ವಶ ಮಾಡಿಕೊಳ್ಳುವ ವಿದ್ಯೆ ಕರತಲಾಮಲಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಸನ್ಮುಖಿಯಾಗಿಯೇ ಸುದ್ದಿಗೋಷ್ಠಿ ಆರಂಭಸಿದ ಅವರು ಸುದ್ದಿಗಾರರ ಪ್ರಶ್ನೆಗೆ ತೀವ್ರ ಸಮಾಧಾನ, ಸಂತೋಷ ಹಾಗೂ ತಾಳ್ಮೆಯಿಂದಲೇ ಉತ್ತರಿಸಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಹೆಚ್ಚಿನ ಸ್ಪಷ್ಟತೆಗಾಗಿ ಕಮಲಳ ಆಪರೇಷನ್ ಮತ್ತು ವಿಶ್ವಾಸದ ವೋಟು, ಪ್ರಕಾಶದ ವರ್ತೂರು ಮುಂತಾದ ಉದಾಹರಣೆಗಳನ್ನು ನೀಡಿದರು. ಈ ಹಿಂದೆ ಕಮಲಳು ಆಪರೇಷನ್ ಮಾಡಿದ್ದ ಕಾಲದಲ್ಲಿ ಲಾರಿಯಲ್ಲಿ ಲೋಡುಗಟ್ಟಲೆ ಶಾಸಕರನ್ನು ಅದಿರು ಮುಂತಾದುವುಗಳನ್ನು ಲಾರಿಯಲ್ಲಿ ತುಂಬಿಸಿ ಸಾಗಿಸುವಂತೆ, ಲೋಡುಗಟ್ಟಲೆ ತಂದು ಸುರಿದಿದ್ದನ್ನೂ ಸಹ ಉದಾಹರಣೆಯಾಗಿ ನೆನಪಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಬಿತ್ತರವಾಗಿರುವ ಸುದ್ದಿಯನ್ನು ವಿಶ್ಲೇಷಿಸಿರುವ ವಿಶ್ಲೇಷಕರು ಸರ್ಕಾರದ ಸ್ಥಿರತೆ-ಅಸ್ಥಿರತೆ ಮತ್ತು ಸ್ಥಿರಅಸ್ಥಿರತೆಗೆ ಗೋಲಿಯೇ ಕಾರಣ ಎಂದು ಹೇಳಿದ್ದಾರೆ.

ಸಚಿವರ ಈ ಅನುಭವದಿಂದ ಪ್ರೇರಿತರಾಗಿರುವವರು ಇದೀಗ ಗೋಲಿ ಆಟವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ದಿನಬೆಳಗಾಗುವುದರೊಳಗೆ, ಗೋಲಿಗಳಿಗೆ ಮತ್ತು ಗೋಲಿ ಆಟದ ತರಬೇತುದಾರರಿಗೆ ಇನ್ನಿಲ್ಲದ ಡಿಮಾಂಡ್ ಸೃಷ್ಟಿಯಾಗಿದೆ. ಅಲ್ಲದೆ, ಜನಸಾಮಾನ್ಯರು ಇದೀಗ ಈ ಉದ್ಯಮದತ್ತ ಆಕರ್ಷಿತರಾಗಿದ್ದಾರೆ ಎಂದು ವರದಿಗಳು ಹೇಳಿವೆ.