ಮಂಗಳವಾರ, ಫೆಬ್ರವರಿ 9

ಟೆನ್ಷನ್ ಗಂಡನ ರಸ್ತೆ ಸುರಕ್ಷೆ!

ತುಂಬ ದಿನವಾಯ್ತು ಬ್ಲಾಗಿಸಿ. ಹಂದಿ ಜ್ವರದ ಬಗ್ಗೆ ಬರೆದ ಮೇಲೆ ಮತ್ತೇನು ಬರ್ದಿಲ್ಲ. ಇವ್ಳು ಹಂದಿ ಜ್ವರ ಹಿಡಿದು ಹೋಗೇ ಬಿಟ್ಲಾ ಅಂತ ತಿಳ್ಕೊಂಡ್ರೇನೋ. ಕೆಮ್ಮು-ದಮ್ಮು- ಜ್ವರ ಸೇರಿದಂತೆ ಎಚ್1ಎನ್1ನ ಎಲ್ಲಾ ಲಕ್ಷಣಗಳು ಕಾಡಿದ್ದರೂ ದುರಾದೃಷ್ಟವಶಾತ್ ಹಾಗಾಗಲಿಲ್ಲ. ಬದಲಿಗೆ ನಂಗೆ ಮದ್ವೆ ಆಯ್ತು!

ನಾನು ಪರರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಗೆ ರಾಜೀನಾಮೆ ನೀಡಿ, ಪ್ರೀತಿಯ ಸಹೋದ್ಯೋಗಿಗಳು "ಪಾಪ, ಮದ್ವೆ ಆಗ್ತಿದ್ದಾರೆ" ಎನ್ನುತ್ತಾ ಬೀಳ್ಕೊಟ್ಟ ಬಳಿಕ, ಸ್ನೇಹಿತೆ ಶಾಂಭವಿ ತೋರಿಸಿದ ವರನನ್ನು ಆರ್ಯಸಮಾಜದಲ್ಲಿ ಗುರುಹಿರಿಯರಾದಿ, ಕೈಬೆರಳೆಣಿಕೆಯ ಸ್ನೇಹಿತರು - ಬಂಧುಗಳ ಸಮಕ್ಷಮದಲ್ಲಿ ಅಗ್ನಿಸಾಕ್ಷಿಯಾಗಿ ವರಿಸಿ, ಸಂಸಾರ ಸಾಗರಕ್ಕೆ ಧುಮುಕಿದೆ (ಅಥವಾ ಉಳಿದವರು ತಳ್ಳಿ ಬಿಟ್ಟರು).

ಅಗತ್ಯಕ್ಕಿಂತ ಹೆಚ್ಚು ಸಜ್ಜನ ನನಗಂಡ. ಜತೆಗೆ ಒಂದಿಷ್ಟು ಮೊಂಡ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಂಬ ಭಜನೆ ಮಾಡುತ್ತಾ, ಎಲ್ಲರಿಂದಲೂ ಅದನ್ನೇ ಬಯಸುವ ಈಡಿಯೆಟ್(Idiot in capital letters ಎಂಬುದು ಅವರ ಡಯಲಾಗ್. ಆದರೆ ನಾನು ಒಂದಿಷ್ಟು ಕರುಣೆಯೊಂದಿಗೆ sweet idiot ಅಂತೇನೆ). ಕಪಾಟುಗಟ್ಟಲೆ ಪುಸ್ತಕಗಳನ್ನು(ಆಂಗ್ಲ ಸಾಹಿತ್ಯ) ಓದಿ ಅದುವೇ ಜೀವನ ಎಂಬ ಭ್ರಾಮಕ ಲೋಕದಲ್ಲಿ ತೇಲುತ್ತಿರುವ ಈ ನನ್ನ ಗಂಡನನ್ನು ವಾಸ್ತವ ಲೋಕಕ್ಕೆ ತರುವುದು ಹೇಗಪ್ಪಾ ಎಂಬ ಚಿಂತೆಯಿಂದಲೇ ಸಪ್ತಪದಿ ತುಳಿದಿದ್ದೆ.
ಮದುವೆಯಾಗಿ ಹದಿನೈದು ದಿನವಾಗುತ್ತಲೇ ನವದಂಪತಿಗಳೆಂಬ ಹಂತ ದಾಟಿ, ನುರಿತ ಗಂಡಹೆಂಡಿರಂತೆ ಜಗಳವಾಡುವ ಹಂತಕ್ಕೆ ತಲುಪಿದ್ದೆವು. ಈಗ ಸುಮಾರು ಒಂದೂವರೆ ತಿಂಗಳಾಯಿತು ಬಿಡಿ. ಪ್ರೀತಿಯಷ್ಟೆ ಸರಾಗವಾಗಿ ಕೋಪವನ್ನು ತೋರಿಸಿಕೊಳ್ಳುವ ಮಟ್ಟಕ್ಕೆ ಬಂದಿದ್ದೇವೆ.

ನಮ್ಮೊಳಗೆ ಜಗಳ ಹುಟ್ಟಲು ಮುಖ್ಯ ಕಾರಣ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು, ದೇಶದಲ್ಲಿನ ಭ್ರಷ್ಟಾಚಾರ, ಸಮಾಜದಲ್ಲಿನ ಅನೀತಿ, ಜನರ ನಿಷ್ಕಾಳಜಿ ಇತ್ಯಾದಿ! ಅದೊಂದು ದಿನ ಬೆಳ್ಳಂಬೆಳಗ್ಗೆ ಎದ್ದು, ದಿನಪತ್ರಿಕೆ ಕೈಲಿ ಹಿಡಿದು ಸರ್ವಚಿಂತೆಯನ್ನು ಮುಖದ ಮೇಲಿಟ್ಟು ಕುಳಿತಿದ್ದರು. ಏನಾಯ್ತು ಅಂದೆ. ಇನ್ನು ಐವತ್ತು ವರ್ಷ ಕಳೆದರೆ ಭಾರತ ಇರುವುದಿಲ್ಲ ಅಂದರು. ಹೊಸದಾಗಿ ಮದುವೆಯಾದವರು ನಾವು. ಅದರಲ್ಲೂ ನಮ್ಮದು ವಿಪರೀತ ಲೇಟ್ ಮದುವೆ. ಹೀಗಿರುವಾಗ ಈ ಮನುಷ್ಯ, ನಮ್ಮ ಉಳಿದ ಆಯುಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು ಇದೇನಿದು, ಎಂಬುದಾಗಿ ಪಿಚ್ಚೆನಿಸಿದ ನಾನು, "ಭಾರತವನ್ನು ನಿಮ್ಮ ತಲೆ ಮೇಲೆ ಹೊತ್ತುಕೊಂಡಿದ್ದೀರಾ? ಇನ್ನು 50 ವರ್ಷದಲ್ಲಿ ನಾವೂ ಇರಲಾರೆವು, ಅದರೊಳಗೆ ಇರುವ ಅಲ್ಪ ಕಾಲವನ್ನು ನೆಮ್ಮದಿಯಿಂದ ಬದುಕುವ ಬಗ್ಗೆ ಚಿಂತಿಸಿ" ಎಂದೆ. ಇದರಿಂದ ಕಿರಿಕಿರಿಗೊಂಡಿದ್ದು ಅವರ ಬಿಳಿಯ ಮುಖ ಕೆಂಪುಬಣ್ಣಕ್ಕೆ ತಿರುಗಿದ್ದರಿಂದಲೇ ತಿಳಿಯುತ್ತಿತ್ತು. ಬಳಿಕ "ಮೈ ವೈಫ್ ಈಸ್ ಆಲ್ಸೋ ನಾಟ್ ಸಫೋರ್ಟಿಂಗ್ ಮೀ" ಅಂತ ಅವರ ಗೆಳೆಯರಿಗೆ ದೂರವಾಣಿ ಮೂಲಕ ದೂರುತ್ತಿದ್ದರು. ನಾವು ಚಿಂತೆ ಮಾಡದಿದ್ದರೆ ಇನ್ಯಾರು ಎಂಬುದು ಅವರ ಕಳಕಳಿ.

ಒತ್ತಡ ಮತ್ತು ಆತಂಕ (Stress and anxiety) ಸಮಸ್ಯೆಯಿಂದ ಬಳಲುತ್ತಿರುವ ನನ್ನ ಪತಿರಾಯ ಯಾರೋ ಮಾಡುವ ತಪ್ಪಿಗಾಗಿ ಆತಂಕ ಪಡುವುದು ನನ್ನನ್ನು ಆತಂಕಕ್ಕೀಡು ಮಾಡುತ್ತದೆ. ಅವರ ಕಾಳಜಿ ಟೂ ಹಂಡ್ರೆಡ್ ಪರ್ಸೆಂಟ್ ಸರಿ. ಇದರಲ್ಲಿ ದೂಸ್ರಾ ಮಾತಿಲ್ಲ. ಆದರೆ, ಸುಧಾರಣಾವಾದಿಯಂತೆ ವರ್ತಿಸುವ ಇವರ ದೊಡ್ಡ ಧ್ವನಿಯ ಆಕ್ಷೇಪದಿಂದ ಕೆರಳಿದವರು ಬಂದು ನಾಲ್ಕು ತದುಕಿದರೆ ಧರ್ಮಕ್ಕೆ ತಿನ್ನಬೇಕಲ್ಲವೇ ಎಂಬುದು ನನ್ನ ಚಿಂತೆ. ಜೀವನದ ವಿವಿಧ ಮಜಲುಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡಿ ಅನ್ಯಾಯ ಮಾಡಿಸಿಕೊಂಡು, ಹೊಡೆತದ ಮೇಲೆ ಹೊಡೆತ ತಿಂದ ಅನುಭವದ ಬಳಿಕ ವಾಸ್ತವವಾದಿಯಾಗಿರುವವಳು ನಾನು. ಇಂತಹ ನನಗೆ, 'ನಮಗ್ಯಾಕೆ ಇದೆಲ್ಲ; ಬಡವಾ ನೀ ಮಡಗಿದಂತಿರು ಎಂಬಂತೆ ಇರುವಾ' ಎಂಬ ಧೋರಣೆ. ನಿಮಗೆ ಗೊತ್ತಿದ್ದಂತೆ ರಸ್ತೆ ನಿಯಮಗಳನ್ನು ಮುರಿಯುವುದು, ರಾಂಗ್ ಸೈಡಿನಲ್ಲಿ ಬರುವುದು, ಕಿವಿಹರಿದು ಹೋಗುವಂತೆ ಹಾರ್ನ್ ಮಾಡುವುದು ಹೆಚ್ಚಾಗಿ ಬಿಸಿ ರಕ್ತದ ಯುವಕರು. ಯಾರ ಹಿನ್ನೆಲೆ ಹೇಗುಂಟು ಯಾರಿಗೆ ಗೊತ್ತು? ಷರ್ಟಿನೊಳಗಿಂದ ಚೂರಿಯೋ ಪಿಸ್ತೂಲೋ ತೆಗೆದು 'ಡಿಮ್ಮ' ಮಾಡಿ 'ಮುಗಿಸುವ' ಕಾಲವಿದು. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಸ್ಪರ ಸ್ಫರ್ಧೆಗೊಡ್ಡಿಕೊಳ್ಳುವ ಬಸ್ಸುಗಳವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಾ ಚೂರಿಹಾಕಿ ಕೊಂದ ಉದಾಹರಣೆಯೂ ಇರುವ ಊರು ನಮ್ಮದು. ಹೀಗಾಗಿ, “ನಿಮಗೇಕೆ ಊರ ಉಸಾಬರಿ? ನೀವು ನಿಮ್ಮಪಾಡಿಗೆ ಇರುವುದನ್ನು ಕಲಿಯಿರಿ” ಎಂಬುದು ನನ್ನ ವಾದ.

ಈ ಮಧ್ಯೆ ಅವರ ಸುರಕ್ಷತಾ ಕ್ರಮಗಳ ಬಗ್ಗೆ ಒಂದಿಷ್ಟು ಹೇಳಿ ಬಿಡುತ್ತೇನೆ. ನಾನು ಮತ್ತು ಶಾಂಭವಿ ಗಾಡಿಯಲ್ಲಿ ಹೋಗುವಾಗೆಲ್ಲ, ಒಂದು ಹತ್ತು ಮೀಟರ್ ದೂರ ಸಾಗುವುದಿದ್ದರೆ, ಮೆಲ್ಲ ರಸ್ತೆಬದಿಯಲ್ಲಿ ರಾಂಗ್ ಸೈಡಿನಲ್ಲಿ ಹೋಗುತ್ತೇವೆ. ಟ್ರಾಫಿಕ್ ಪೊಲೀಸ್ ಸಿಕ್ಕರೆ ಒಂದು ಕಿರುನಗೆ ಬೀರಿ ಮುಂದೆ ಸಾಗುತ್ತಿದ್ದೆವು. ಆದರೆ ಈ ನನ್ನ ಗಂಡ ಮಹಾಶಯ ಮಾತ್ರ ಅದು ಒಂದೇ ಮೀಟರ್ ದೂರವಾಗಿದ್ದರೂ ಸಹ, ಇನ್ನೊಂದು ಸೈಡಿಗೆ ಕಟ್ ಮಾಡಲು ಒಂದು ಫರ್ಲಾಂಗ್ ದೂರ ಹೋಗಿ ರಿಸ್ತೆ ವಿಭಜಕದ ಅಂತ್ಯದಲ್ಲೇ ಗಾಡಿ ತಿರುಗಿಸಿ ಮರಳಿ ಬರುತ್ತಾರೆ. ಅರ್ಧ ಲೀಟರ್ ಪೆಟ್ರೋಲ್ ಮುಗಿಯುತ್ತದೆ ಎಂಬುದು ನನ್ನ ಹಳಹಳಿ. "ನಾನು ಹೀಗೇ ಬದುಕಿದ್ದು, ಇನ್ನೂ ಹೀಗೆ ಬದುಕುವುದು" ಎಂಬುದು ಅವರ ಸಮಜಾಯಿಷಿ.

ಎಡಬದಿಯಲ್ಲೇ ಸಾಗುವ, ಕೆಲವೊಮ್ಮೆ ಪಾದಚಾರಿಗಳನ್ನು ಸವರಿಯೇ ಬಿಡುತ್ತಾರೆ ಎಂಬ ಭಯ ಹುಟ್ಟಿಸುವಂತೆ ಹೋಗುತ್ತಾ, ಏನೇ ಆದರೂ ಯಾರನ್ನೂ ಓವರ್‌ಟೇಕ್ ಮಾಡಲಾರೆ ಎಂಬ ಶಪಥಕ್ಕೆ ಬಿದ್ದವರಂತೆ, ಸಿಟಿಬಸ್ಸುಗಳ, ರಿಕ್ಷಾಗಳ ಹಿಂದೆಯೇ ಹೋಗುತ್ತಾ ಅಸಹನೆ ಹುಟ್ಟಿಸುತ್ತಾರೆ. ಅಡ್ಡ ರಸ್ತೆಗಳಿಂದ ಬಂದು ಸೇರುವವರಿಗೂ ಗಾಡಿನಿಲ್ಲಿಸಿ ಮುಂದೆ ಹೋಗಿ ಅನ್ನುತ್ತಾ ಬ್ಯಾಲೆನ್ಸ್ ಮಾಡಲು ಸರ್ಕಸ್ ಮಾಡುತ್ತಾರೆ. ಹಿಂದಿನವರು ಹಾರ್ನ್ ಹಾಕಿದರೆ ಅದಕ್ಕೂ ಕಿರಿಕಿರಿ. ಅದೊಂದು ಸರ್ತಿ ನಗರ ಪಾಲಿಕೆಯವರು ರಸ್ತೆ ಅಗೆದಿದ್ದರು. ರಸ್ತೆ ಬ್ಲಾಕ್ ಆಗಿದ್ದ ಕಾರಣ ತಿರುಗಿ ಬರುವ ವೇಳೆಗೆ ಬದಿಯಲ್ಲಿದ್ದ ಬೋರ್ಡ್ ಗಮನಕ್ಕೆ ಬಂದಿತ್ತು. ತಪ್ಪು ಬೋರ್ಡ್ ಹಾಕಿ ದಿಕ್ಕು ತಪ್ಪಿಸಿದ್ದ ಆವರಿಗೆ ಬಯ್ಯುವ ರಭಸದಲ್ಲಿದ್ದಾಗ ರಣಗಾತ್ರದ ಬಸ್ಸೊಂದನ್ನು ಕಂಡು ಬೆದರಿ ಗಾಡಿ ನಿಲ್ಲಿಸಿ ಸೈಡ್ ಕೊಡಲು ಅನುವಾದರು. ಆದರೆ ಬಸ್ಸು ಚಲಿಸುತ್ತಲೇ ಇರಲಿಲ್ಲ. ಯಾಕೆಂದು ನೋಡಿದರೆ, ಅದು ನಿಂತಿದ್ದ ಬಸ್ಸು! ಮತ್ತೊಂದು ಸರ್ತಿ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅವರ ಅಂಗಳದಲ್ಲಿ, ಗಾಡಿ ನಿಲ್ಲಿಸಿದ ಬಳಿಕ ಮಲಗಿದ್ದ ನಾಯಿಗೆ ಹಾರ್ನ್ ಹಾಕುತ್ತಿದ್ದರು. ಯಾಕೆ ಹಾರ್ನ್ ಮಾಡುತ್ತೀರಾ ಅಂದರೆ, ಯೂರೋಪಿನ ತುಂಡಿನಂತೆ ಮಾತನಾಡುವ ಅವರು 'ಡಾಗ್ ಡಾಗ್' ಅನ್ನುತ್ತಾ ಮುಖ ನೋಡುತ್ತಾರೆ. ನಗಬೇಕೋ ಅಳಬೇಕೋ?

8 ಕಾಮೆಂಟ್‌ಗಳು:

 1. Congratulations, ಶಾನಿ!
  ಸುಖಮಯವಾದ ವೈವಾಹಿಕ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
  ಇನ್ನು ನಿಮ್ಮ ಹಾಗೂ ನಿಮ್ಮ ಪತಿರಾಯರ ವಿವಾದದ ಬಗೆಗೆ ಹೇಳುವದಾದರೆ, ಅವರದೇ ಸರಿಯಾದ ಮಾರ್ಗ ಎಂದು ಹೇಳಬಯಸುತ್ತೇನೆ. I am sorry I am not on your side.
  ಹಾಂ, ಇನ್ನು ಮುಂದಿನ blog ಯಾವಾಗ? ಹನಿಮೂನ್ ನಂತರವೆ?

  ಪ್ರತ್ಯುತ್ತರಅಳಿಸಿ
 2. ಮದುವೆಗೆ ಶುಭಾಶಯಗಳು!

  ಡಾಗಿಗೆ ಹಾರ್ನ್ ಮಾಡಿದ್ದಕ್ಕೆ ಯಾರಿಗೆ ಅಳು ಬಂತೋ, ನಗು ಬಂತೋ ಗೊತ್ತಿಲ್ಲ...ಡಾಗಿಗಂತೂ ಇದ್ಯಾರಪ್ಪಾ ನಿದ್ದೆ ಹಾಳು ಮಾಡ್ತಾ ಇರೋರು ಅಂತಾ ಸಿಕ್ಕಾಪಟ್ಟೆ ಸಿಟ್ಟು ಬಂದಿರುತ್ತೆ :D
  ಪತಿದೇವರನ್ನು ಸ್ವಲ್ಪ ದಿನ ಅವರ ಪಾಡಿಗೆ ಇರಲು ಬಿಡಿ, ಆಮೇಲೆ ನಿಧಾನಕ್ಕೆ ದಾರಿಗೆ ತನ್ನಿ!

  ಪ್ರತ್ಯುತ್ತರಅಳಿಸಿ
 3. ಬಹಳಾ perfectionist ಆದ್ರೂ ಕಷ್ಟ ಇಲ್ಲಿ. theoritically ನಾನೂ ಕೂಡ ನಿಮ್ಮ ಪತಿಯನ್ನೇ ಬೆಂಬಲಿಸ್ತೇನೆ. ಅದೇ ಸರಿ. ಆದ್ರೆ practically ಇದರಿಂದ ತೊಂದರೆಗಳೇ ಜಾಸ್ತಿ ನಮ್ಮ ದೇಶದಲ್ಲಿ.

  ಪ್ರತ್ಯುತ್ತರಅಳಿಸಿ
 4. ನಾನು ಕೂಡ ನಿಮ್ಮ ಗಂಡನನ್ನೇ ಬೆಂಬಲಿಸುತ್ತೇನೆ.

  ಪ್ರತ್ಯುತ್ತರಅಳಿಸಿ
 5. ಸುನಾಥ್ ಕಾಕ, ಗೆಳತಿ ಗಿರಿಜಾ, ಮಿತ್ರ ವಿಕಾಸ್ ಹಾಗೂ ಭುವನ್...

  ಕ್ಷಮಿಸಿ, ತವರಿಗೆ ಹೋಗಿದ್ದ ಕಾರಣ ನಿಮ್ಮ ಪ್ರತಿಕ್ರಿಯೆಗಳಿಗೆ ತಕ್ಷಣ ಮರುಪ್ರತಿಕ್ರಿಯೆ ನೀಡಲಾಗಿಲ್ಲ.
  ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಹಾಗೂ ಸಲಹೆಗಳಿಗೆ ತುಂಬ, ತುಂಬ ಥ್ಯಾಂಕ್ಸ್.... ಕಮೆಂಟುಗಳನ್ನು ಓದಿದ ನನ್ನ ಪತಿರಾಯಗೆ ಗೆದ್ದೆನೆಂಬ ಖುಷಿ. ಅದೇ ಖುಷಿಯಲ್ಲಿ ಮೀಸೆಯಡಿ ನಗುವೊಂದನ್ನು ಹೊರಸೂಸಿ ಎಲ್ಲರಿಗೂ ತನ್ನ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ದಯವಿಟ್ಟು ಒಪ್ಪಿಸಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 6. ಹೇ ಬೊಡ್ಡಿ ಮದ್ವೆ ಆಯ್ತಾ ನಿಂಗೆ. ಕಂಗ್ರಾಟ್ಸ್!
  -ಶಾಂತಿ

  ಪ್ರತ್ಯುತ್ತರಅಳಿಸಿ
 7. ನಮಸ್ಕಾರ ಅಕ್ಕ. ನನ್ನ ನೆನಪಿದೆಯಾ ಅಂತ ನಾನು ಕೇಳೋದಿಲ್ಲ. ನನಗೆ ಗೊತ್ತು. ಒಂದು ಮೇಲ್ ಮಾಡಿಲ್ಲ ಅಂತ ನೀನು ಬೈದಿರ್ತಿಯ. ಹೊಸದಾಗಿ ಮದುವೆ ಬೇರೆ ಆಗಿದಿಯ. ಸುಮ್ನೆ ಯಾಕೆ ತೊಂದ್ರೆ ಕೊಡೋದು ಅಂತ ಇಷ್ಟು ದಿನ ಸುಮ್ನೆ ಇದ್ದೆ. ಅದ್ರು ನಿನ್ನ ಬ್ಲಾಗ್ ಬುದ್ದಿ ಹೇಗೆ ಬಿಡ್ತಿಯ ಹೇಳು. ಬೈಯೋದಿದ್ರೆ ಫೋನ್ ಮಾಡಿ (ನನ್ನ ನಂ.9964024237) ಬೈಯಿ. ಪಬ್ಲಿಕ್ ನಲ್ಲಿ ಬೇಡ.
  ಇಂತಿ ನಿನ್ನ ಉಡಾಳ ತಮ್ಮ,
  -ಮಂಜು

  ಪ್ರತ್ಯುತ್ತರಅಳಿಸಿ
 8. ಅಲ್ಲಾ ಕಣೋ ಮಂಜಾ,
  ಹೊಸ್ದಾಗಿ ಮದ್ವೆ ಆದಾಗ ಫೋನ್ ಮಾಡಿದ್ರೆ ಅಲ್ಲ, ಮಾಡದೇ ಇದ್ರೆನೇ ತೊಂದ್ರೆ ಆಗೋದು ತಿಳ್ಕಾ. ಬ್ಲಾಗ್ ಬುದ್ಧಿ ಬ್ಲಾಗ್‌ಗತ, ಏನ್ಮಾಡೋದು. ಆಷಾಡಕ್ಕೆ ತವರೀಗೆ ಹೊಂಟೀನಿ, ಬಂದ್ಮೇಲೆ ನೋಡ್ಕೋತೀನಿ ನಿನ್ನ

  ಪ್ರತ್ಯುತ್ತರಅಳಿಸಿ