ಮಂಗಳವಾರ, ಏಪ್ರಿಲ್ 26

ಅಂಗಿಯೊಳಗಿಂದ ಇಣುಕಿದ ಲುಂಗಿ

ನಾನೊಬ್ಬಳು ಪ್ರೊಫೆಸರ್! ಛೇ,ಛೇ, ವಿದ್ವತ್ತು ಪಾಂಡಿತ್ಯ ಈ ಎಲ್ಲ ವಿಚಾರದಲ್ಲಲ್ಲ. ಮರೆವಿನ ವಿಚಾರದಲ್ಲಿ ಮಾತ್ರ. ಮೊಬೈಲ್ ಕೈಲೇ ಹಿಡಿದುಕೊಂಡು ಊರೆಲ್ಲ ಮುಗುಚಿ ಕೊನೆಗೆ ಸ್ಥಿರವಾಣಿಯಿಂದ ರಿಂಗ್ ಮಾಡಿದರೆ, ನಿನ್ನ ಕೈಯೊಳಗೇ ಇದ್ದೇನೆ ಪೆದ್ದಿ ಎಂಬಂತೆ ಕುಂಯ್ ಗುಟ್ಟುತ್ತಾ ಅದು ನನ್ನ ಅಣಕಿಸುತ್ತದೆ. ಹೀಗೆ, ಪೆನ್ನು, ಬ್ಯಾಗು ಫೈಲು ಅಂತ ಹುಡುಕಾಡುತ್ತಾ, ನಮ್ಮಾಫಿಸಿನ ಹುಡುಗನ ಕೈಯಲ್ಲೂ ಹುಡುಕಾಡಿಸಿ, ಇಲ್ಲೇ ಇದೆ ನೋಡಿ ಅನ್ನುತ್ತಾ ಆತ ಹುಡುಕಿ ಕೊಟ್ಟಾಗ, ಹೌದಲ್ಲಾ ಅನ್ನುತ್ತಾ ಹಲ್ಲು ಕಿರಿಯಬೇಕಾಗುತ್ತದೆ.


ಈ ಹಿಂದೆ ಒಬ್ಬಳೇ ಮನೆ ಮಾಡಿದ್ದಾಗ, ಹೋಟೇಲು ತಿಂಡಿ ತಪ್ಪಿಸಬೇಕೆಂದು ಬಹಳ ಕಷ್ಟದಲ್ಲಿ ನನ್ನ ಸಕ್ಕರೆ ಸವಿ ನಿದ್ದೆಯನ್ನೆಲ್ಲ ಬಿಟ್ಟು ಬೇಗನೆದ್ದು, ತಿಂಡಿ ತಯಾರಿಸುತ್ತಿದ್ದೆ. ಸ್ನಾನ ಮಾಡಿ ರೆಡಿಯಾಗಿ ಆಫೀಸಿಗೆ ಹೊರಟು, ಕೊನೆಗೆ ಏನೋ ಮರೆತೆ.... ಮರೆತೆ.... ಅನ್ನುತ್ತಾ ಗಡಿಯಾರ ನೋಡಿ ಚಪ್ಪಲಿ ಮೆಟ್ಟುತ್ತೇನೆ. ಅಫೀಸಿನಲ್ಲಿ ನನ್ನ ಕುರ್ಚಿಯಲ್ಲಿ ಕುಳಿತಾಗ ಅಲಾರಾಂ ಬಾರಿಸಿದಂತೆ ನಿಗದಿತ ಸಮಯಕ್ಕೆ ಸರಿಯಾಗಿ ಹೊಟ್ಟೆ ತಾಳ ಹಾಕುವಾಗಲೇ ನೆನಪು, ಮಾಡಿದ ತಿಂಡಿಯನ್ನು ತಿಂದೇ ಇಲ್ಲ. ಹಿಂದೊಮ್ಮೆ ಹಾಸ್ಟೇಲಿನಲ್ಲಿದ್ದಾಗ ಆಫೀಸಿಂದ ಬಂದು ಕೆಲಸವೆಲ್ಲ ಮುಗಿಸಿ ಸಾಯಂಕಾಲದ ಹೊತ್ತು ವಿರಮಿಸುತ್ತಾ ಇತರರೊಂದಿಗೆ ಕುಳಿತಿದ್ದಾಗ ಗೆಳತಿಯೊಬ್ಬಳು ಶಾನಿ ಶಾನಿ ಅನ್ನುತ್ತಾ ಪ್ರೀತಿ ತೋರಿ, ನೀಟಾಗಿ ಫ್ರೆಂಚ್ ಜಡೆ ಹಾಕಿ ಬಿಟ್ಟಿದ್ದಳು. ಮರು ದಿನ ಎದ್ದು ಕ್ಲಾಸಿಗೂ ಆಫೀಸಿಗೂ ಹೋಗಿದ್ದೆ. ಏನು ಒಂಥರಾ ಇದ್ದೀರಿ, ಹುಶಾರಿಲ್ವಾ...? ಎಂಬ ಸಹೋದ್ಯೋಗಿಗಳ ಪ್ರಶ್ನೆಗೆ, ಇವರಿಗೆಲ್ಲಾ ಏನಾಗಿದೆ ಇವತ್ತು ಅಂತ ಯೋಚಿಸಿದ್ದೆ. ಆಫೀಸಿಂದ ಬಂದು ಸ್ನಾನಕ್ಕೆ ಹೊಡುವ ವೇಳೆ ಜಡೆಗೆ ಕೈಯಿಕ್ಕುವಾಗಲೇ ತಿಳಿದ್ದು, ಈ ದಿನ ತಲೆಗೆ ಬಾಚಣಿಗೆ ಹಾಕಲೇ ಇಲ್ಲ ಎಂಬುದು.


ನಾನು ತುಂಬ ಚಿಕ್ಕವಳಿದ್ದಾಗ, ಅಂದರೆ ನಾಲ್ಕೈದು ವರ್ಷ ಇರಬಹುದು. ಆಗೆಲ್ಲ ನಂಗೂ ಮನೆಯಲ್ಲಿ ಉಡಲು ಅಣ್ಣನಂತೆ ಲುಂಗಿಯೇ ಬೇಕೆಂದು ಹಠ ಹಿಡಿದಿದ್ದೆ. ನನ್ನ ಹಠಕ್ಕೆ ಯಾರು ಮಣಿಯುತ್ತಾರೆ. ಒಂದೆರಡು ದಿನ ಅಣ್ಣನ ಲುಂಗಿ ಟ್ರೈ ಮಾಡಿದೆ. (ಅವನು ತಲೆಗೆ ಹಾಕುವ ಕುಟ್ಟಿಯನ್ನೂ ಲೆಕ್ಕಿಸದೆ). ತೀರಾ ದೊಡ್ಡ ಅಳತೆಯದ್ದಾಗಿದ್ದ ಅದು ಸರಿ ಹೊಂದುತ್ತಿರಲಿಲ್ಲ. ಬದಲಿಗೆ ಎಡವಿ, ತೊಡರಿ ಮನೆಯ ಮೆಟ್ಟಿಲಲ್ಲಿ ತಲೆಕೆಳಗಾಗಿ ಬಿದ್ದು ಗಾಯ ಆಯಿತು ಅಷ್ಟೆ. ಗಾಯ ಆದರೇನು, ಹಠ ಬಿಡಲಾಗುತ್ತದಾ? ಬೇಕಂದರೆ ಬೇಕೆ.


ಕೊನೆಗೊಂದು ದಿನ ಅಮ್ಮ ತೋಟಕ್ಕೆ ಹೋಗಿದ್ದ ವೇಳೆ ಅವರ ಚೆಂದದ ಮಗ್ಗದ ಸೀರೆಯನ್ನೆ ಕತ್ತಿ(ಕುಡುಗೋಲು)ಯೊಂದರ ಸಹಾಯದಿಂದ ಹರಿದು ನನ್ನಳತೆಗೆ ಆಗುವ ನಾಲ್ಕೈದು ಲುಂಗಿ ಮಾಡಿ ಜೋಡಿಸಿ, ಅಮ್ಮ ಬರುತ್ತಲೇ ಅರ್ಧ ದಾರಿಗೆ ಓಡಿ ಹೋಗಿ ನನ್ನ ಸಾಹಸ ಪ್ರದರ್ಶಿಸಿದ್ದೆ. ತೋಟದ ಕೆಲಸದಿಂದ ಸುಸ್ತಾಗಿ ಬರುತ್ತಲೇ, ಅವರ ಒಂದು ಒಳ್ಳೆಯ ಸೀರೆಗೆ ಒದಗಿದ ದುರ್ಗತಿಯನ್ನು ಕಂಡು ನಿತ್ತರಿಸಲಾಗದ ದುಃಖ, ಕೋಪ, ಬಳಲಿಕೆ ಎಲ್ಲ ಏಕ ಕಾಲಕ್ಕೆ ಉಮ್ಮಳಿಸಿ ಅಮ್ಮ ನನ್ನ ಬೆನ್ನಿಗೆರಡು ಗುಡ್ಮಕಾಯಿ (ಗುದ್ದು) ನೀಡಿ ನನ್ನ ಸಾಹಸಕ್ಕೆ ಸನ್ಮಾನವಿತ್ತಿದ್ದರು.  ಲಂಗ ಇಲ್ಲವೇ ಅಂಗಿ ಹಾಕ ಬೇಕಾದ ಪೋರಿಯ ಲುಂಗಿಯ ವರಸೆ ಅವರಿಗೆ ಇರಿಸುಮುರಿಸುಂಟು ಮಾಡಿದ್ದಲ್ಲದೆ, ವರ್ಷಕ್ಕಿಡೀ ಒಂದೇ ಸೀರೆ ಧಕ್ಕುತ್ತಿದ್ದ ಆ ಕಂಟ್ರೋಲ್ ಕಾಲದಲ್ಲಿ ಇದ್ದ ಒಂದು ಒಳ್ಳೆಯ ಸೀರೆಗೆ ಉಂಟಾದ ದುರವಸ್ಥೆ ಅವರನ್ನು ಕಂಗೆಂಡಿಸಿತ್ತು.


ಆದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳವ ತಲೆ ಇಲ್ಲದಿದ್ದ ನಾನು ಮಾತ್ರ, ಅದೇ ಸೀರೆಯ ತುಂಡುಗಳನ್ನೇ ಲುಂಗಿಯಂದದಿ ಉಟ್ಟು ಥೇಟ್ ಅಣ್ಣನಂತೆಯೇ ಅದನ್ನು ಎತ್ತಿ ಕಟ್ಟಿ,  ಕೊಂಬ ಚೇಳಿನಂತಹ ಮೋಟು ಜಡೆಯನ್ನು ಕುಣಿಸುತ್ತಾ ಓಡಾಡಿ ಖುಷಿ ಪಡುತ್ತಿದ್ದೆ. ಅಪರೂಪಕ್ಕೆ ನೆಂಟರ ಮನೆ ಹೋಗುವಾದಲೂ ನನಗೆ ಅದೇ ನೈಟ್ ಡ್ರಸ್. ಹೀಗೆ ಅದೊಂದು ದಿನ ನಮ್ಮ ಕುಟುಂಬದ ಹಿರಿಮನೆಯಲ್ಲಿ ಹರಿಸೇವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಗೆ ನನ್ನ ಅಮ್ಮ ಯಾ ಅಕ್ಕಗಳು ಬಂದಿರಲಿಲ್ಲ. ನಾನು - ಅಪ್ಪ ಮಾತ್ರ ಹೋಗಿದ್ದೆವು. ಅತ್ತಕಡೆ ಅಪ್ಪ ಹರಿಸೇವೆಯಲ್ಲಿ ಮಗ್ನರಾಗಿದ್ದರೆ, ನಾನಿತ್ತ ಇತರ ಮಕ್ಕಳೊಂದಿಗೆ ಆಟಕ್ಕಿಳಿದಿದ್ದೆ. ಅರ್ಜೆಂಟ್ ಸುಸು ಆಗಿ ಏನು ಮಾಡಬೇಕೆಂದು ತೋರದೆ ಅಳಲಾರಂಭಿಸಿದ್ದೆ. ನನ್ನ ಕಷ್ಟ ಕಂಡ ದೊಡ್ಡಪ್ಪನ ಮಗಳೊಬ್ಭಳು ನನ್ನನ್ನು ಅಕ್ಕರೆಯಿಂದ ಕರೆದೊಯ್ದು, ನನಗೆ ಅನುಕೂಲವಾಗಲೆಂದು ನಾನು ತೊಟ್ಟಿದ್ದ ಪೆಟ್ಟಿಗೆಯಲ್ಲಿಡುತ್ತಿದ್ದ, ಕರ್ಪೂರದ ಘಮ ಸೂಸುತ್ತಿದ್ದ ವಿಶೇಷ ಸಂದರ್ಭದಲ್ಲಿ ಮಾತ್ರ ಧರಿಸುತ್ತಿದ್ದ ಅಂಗಿಯನ್ನು ಎತ್ತಿದ್ದೇ, ಅದುವರೆಗೆ ಅಂಗಿಯೊಳಗೆ ಅವಿತಿದ್ದ ನನ್ನ ಲುಂಗಿ ಇಣುಕಿತು. ಹೊರಡುವ ಆತುರದಲ್ಲಿ ಲುಂಗಿ ಬಿಚ್ಚಿಡಲು ಮರೆತೇ ಹೋಗಿತ್ತು! ಅದು ವರೆಗೆ ಅಂಗಿಯೊಳಗೆ ಲುಂಗಿ ಕಾಣುತ್ತಿದ್ದರೂ ನನಗದರ ಪರಿವೆಯೇ ಇರಲಿಲ್ಲ. ದೊಡ್ಡಪ್ಪನ ಮಗಳು ಇದೆಂತ ಅಪ್ಪೀ... ಅಂತ ಪ್ರಶ್ನಿಸಿದಾಗಲೇ ಗೊತ್ತಾದದ್ದು ಸಂಗತಿ. ಅಯ್ಯೋ ಶಿವನೇ.... ನಾಚಿಕೆಯಾಗಿ ಲೋಕವಿಲ್ಲ... ಕೊನೆಗೆ ಆಕೆಯೇ ಅದನ್ನು ಬಿಚ್ಚಿ ಮಡಚಿ ಅಪ್ಪನ ಬ್ಯಾಗಿನಲ್ಲಿ ಹಾಕಿಟ್ಟಿದ್ದಳು. ಆಕೆ ಈಗಲೂ ನನ್ನ ಕಂಡಾಗೆಲ್ಲ ಲುಂಗಿಯ ವಿಚಾರ ಎತ್ತದೆ ಇರುವುದಿಲ್ಲ.


ಒಂದಾನೊಂದು ಕಾಲದಲ್ಲಿ ನಾನು ಓದು ಮತ್ತು ಕೆಲಸ ಜತೆಜತೆಯಾಗಿ ಮಾಡುತ್ತಿದ್ದೆ. ಆಗೆಲ್ಲ ನನ್ನ ಜೀವನವೇ ಗಡಿಬಿಡಿಯಾಗಿತ್ತು. ಅದೊಂದು ದಿನ ಬೆಳ್ಳಂಬೆಳಗ್ಗೆ ಏದುಸಿರು ಬಿಡುತ್ತಾ ಓಡಿ ಹೋಗಿ ಕ್ಲಾಸಿನಲ್ಲಿ ಕುಳಿತರೆ ಲೆಕ್ಚರರ್ ಬಂದಿರಲಿಲ್ಲ. ನಾನೂ ಗೆಳತಿ ಲಲಿತೆಯೂ ಪಟ್ಟಾಂಗ ಹೊಡೆಯುತ್ತಿದ್ದೆವು. ಒಮ್ಮೆಗೆ ಮಾತು ನಿಲ್ಲಿಸಿದ ಆಕೆ, ಏನೋ ಸೋಜಿಗ ಕಂಡವಳಂತೆ ಯ್ಹೇ... ಅಂದು ನಗಲಾರಂಭಿಸಿದಳು. ವಿಷಯವೇನೆಂದು ತಿಳಿಯದ ನಾನು ಕೆಕರುಮಕರಾಗಿ ಆಕೆಯ ಮುಖವನ್ನೇ ನೋಡುತ್ತಾ ಕುಳಿತೆ. ನಕ್ಕು ಮುಗಿಸಿದ ಆಕೆ ನನ್ನ ಸೆಲ್ವಾರ್ ಕಮೀಜ್‌ನತ್ತ ಕೈ ತೋರಿ ಮತ್ತೆ ನಕ್ಕಳು. ನಸುಗತ್ತಲಲ್ಲಿ ಸರಿಯಾಗಿ ಕಂಡಿರಲಿಲ್ಲವೋ, ಗಡಿಬಿಡಿಯೋ, ತಿರುವು ಮುರುವಾಗಿ ಹಾಕ್ಕೊಂಡಿದ್ದೆ.


ಇಂತಹ ವಿಚಾರಗಳಲ್ಲಿ ನನ್ನ ಒಬ್ಬಳು ಸ್ನೇಹಿತೆಗೆ ಹೋಲಿಸಿದರೆ ನಾನು ಬೆಟರ್. ಆಗ ಕಾಯಿನ್ ಬಾಕ್ಸ್ ಫೋನ್ ಜಮಾನ. ಈಕೆ ಯಾರಿಗೋ ಫೋನ್ ಮಾಡಲು ಹೋದವಳು ಕಾಯಿನ್ ಹಾಕಿ ಎಷ್ಟೇ ಪ್ರಯತ್ನಿಸಿದರೂ ಫೋನ್ ಸಿಗುತ್ತಲೇ ಇರಲಿಲ್ಲ, ಜತೆಗೆ ಯಾವುದೇ ಸದ್ದೂ ಬರುತ್ತಿರಲಿಲ್ಲವಂತೆ. ಕಡೆಗೆ ಈಕೆಯ ಪರಿಪಾಟಲು ಕಂಡ ಬೂತಿನಲ್ಲಿದ್ದ ಹುಡುಗ ಈಕೆಯ ಸಹಾಯಕ್ಕೆ ಬಂದು ಪ್ರಯತ್ನಿಸಿದ. ಇದೇನಾಗಿದೆ ಫೋನ್‌ಗೆ ಅಂತ ಪರಿಶೀಲಿಸಿದರೆ, ಈಕೆ 50 ಪೈಸೆ ನಾಣ್ಯ ಹಾಕ್ಕೊಂಡು ಫೋನ್ ಮಾಡಲು ಪ್ರಯತ್ನಿಸಿದ್ದಳು. ಇದೇ ಗೆಳತಿ ಮತ್ತು ನಮ್ಮ ಇನ್ನೊಬ್ಬಳು ಡುಮ್ಮಿ ಸ್ನೇಹಿತೆ ಅದೊಂದು ದಿನ ಮುಂಜಾನೆ ಬೆಳಕು ಹರಿಯೋ ಮುನ್ನ ವಾಕ್ ಹೋಗಿದ್ದರಂತೆ. ವಾಕ್ ಮಗಿಸಿ ಬಂದು ನೋಡುವಾಗಲೇ ಆಕೆಗೆ ತಿಳಿದದ್ದು, ತಾನು ಚೂಡಿದಾರದ ದುಪ್ಪಟ್ಟದ ಬದಲಿಗೆ ಪ್ಯಾಂಟನ್ನೇ ದುಪ್ಪಟ್ಟ ತರ ಹೊದೆದುಕೊಂಡಿದ್ದದ್ದು!!!

7 ಕಾಮೆಂಟ್‌ಗಳು:

 1. :-). ನೀವು ಸೀರೆಗಳಿಗೆ ಮೋಕ್ಷ ಕಾಣಿಸಿದ್ದು, ಬಟ್ಟೆಯನ್ನು ತಿರುವಿ ಹಾಕ್ಕೊಂಡಿದ್ದು ಹಾಗೇ ಇನ್ನೊಬ್ಬರ ಮರೆಗುಳಿ ಕೇಸುಗಳನ್ನು ಓದಿ ...ನಕ್ಕೂ ನಕ್ಕೂ ಬಿದ್ದಾಯ್ತು !.

  ಪ್ರತ್ಯುತ್ತರಅಳಿಸಿ
 2. ಶಾನಿ,
  ನಿಮ್ಮ ಪ್ರಮಾದಗಳನ್ನೋದಿ ನಗು ತಡೆಯದಾದೆ, ungentlemanly ಅಂತ ಅನ್ನಿಸಿದರೂ ಸಹ! ನಗುತ್ತಲೇ ನಿಮಗಿದೊ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. ಸುಧೇಶ್,
  ನೀವೂ ಸಹ ನಕ್ಕೂ ನಕ್ಕೂ ಬಿದ್ರಾ......? ಸಂತೋಸಾಂಡ್.... ಸಂತೋಸಾಂಡ್....... ಸಂತೋಸಾಂಡ್......!

  ಪ್ರತ್ಯುತ್ತರಅಳಿಸಿ
 4. ನಿಮ್ಮ ಬ್ಲಾಗ್‌ಗೆ, ನಿಮ್ಮ ಅಭಿಮಾನಿ ಬಳಗಕ್ಕೆ ನನ್ನದು ಹೊಸ ಸೇರ್ಪಡೆ.... ಚಂದ ಚಂದದ ಬರಹಗಳು, ಕಣ್ಣಿಗೆ ಕಟ್ಟುವಂತೆ ಘಟನೆಗಳನ್ನ ಬರೆಯಬಲ್ಲಿರಿ. ನವಿರು ಹಾಸ್ಯವಂತೂ ಒಬ್ಬಟ್ಟಿನ ಹೂರಣ. ನಗುತ್ತಿರಿ, ನಗಿಸುತ್ತಿರಿ. ನಿಮ್ಮ ಅನುಮತಿ ಇಲ್ಲದೇ ನನ್ನ ಬ್ಲಾಗ್‌ನ ನೆಚ್ಚಿನ ಜಾಲತಾಣಕ್ಕೆ ನಿಮ್ಮ ಬ್ಲಾಗ್ ಲಿಂಕ್ ಸೇರಿಸಿರುವೆ. ಮೆಚ್ಚಿಕೊಳ್ಳಲು ಅನುಮತಿ ಬೇಕಿಲ್ಲವಲ್ಲ. :)

  ಪ್ರತ್ಯುತ್ತರಅಳಿಸಿ
 5. ಪ್ರೀತಿಯ ರಾಜಿ,
  ನಿಮ್ಮ ಮೆಚ್ಚುಗೆಗೆ ವಂದನೆಗಳು. ಇರೋ ಎರಡು ದಿವಸದ ಬಾಳ್ವೆಯಲ್ಲಿ ಒಂದಷ್ಟು ನಕ್ಕು, ನಗಿಸೋಣ ಅಂತ. ಪುರ್ಸೋತ್ತಾದಾಗ ಬನ್ನಿ ಹರಟೆ ಹೊಡೆಯೋಣವಂತೆ!

  ಪ್ರತ್ಯುತ್ತರಅಳಿಸಿ