ಸೋಮವಾರ, ಜುಲೈ 18

ರಕ್ಷಣೆ ಇಲ್ಲ ಅಂದರೆ ಏನರ್ಥ......?

ಬಲ್ಲಿರೇನಯ್ಯಾ.............?
ಭಳಿರೇ ಪರಾಕ್ರಮ ಕಂಠೀರವಾ....................!
ಭಾರತವೆಂಬೋ ಭಯದ ಉತ್ಪಾದನೆಯ ಬಲಿಪಶುಗಳ ಈ ಬಾಂಬುಭರಿತ ನಾಡಿನ ಗೃಹ ವ್ಯವಹಾರಗಳ ಜವಾಬುದಾರಿಯನ್ನು ಹೊತ್ತವರಾರು.......................?
ದಿಗಂ ಭರಂ ಎಂದು ಕೇಳಿಬಲ್ಲೆವೂ....
ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ............
ಇರುವಂತಹಾ ಸ್ಥಳ.........?
ರಾಷ್ಚ್ರದ ರಾಜಧಾನಿ ಎಂದುಕೊಳ್ಳಬಹುದು
ಬಂದಂತಂಹ ಕಾರ್ಯ........
ಅನೇಕವಿದೆ.......... ಅನೇಕವಿದೆ.......... ಅನೇಕವಿದೆ..........
ರಾಜಕಾರ್ಯ....... ರಾಜ ತಾಂತ್ರಿಕ ಕಾರ್ಯ............ ನಮ್ಮ ಬಲಹೀನತೆಯನ್ನು ಮರೆಮಾಚಿಕೊಳ್ಳುವ ಕಾರ್ಯ..............
ಸೊರ್ರನೆ ಸುರಿಯುತ್ತಿರುವ ಮಳೆಯ ಹಿತಕರವಾದ ಚಳಿಯ ಆಸ್ವಾದನೆಗಾಗಿ ಹೊದ್ದಿರುವ ಅತ್ಯಾಧುನಿಕ ಬೆಚ್ಚಬೆಚ್ಚನೆಯ ಹೊದಿಕೆಗಳನ್ನು ಬದಿಗೆ ಸರಿಸಿ ಹಾಸಿಗೆಯಿಂದೆದ್ದು, ಹದವಾದ ಬಿಸಿನೀರಿಗೆ ಮೈಯೊಡ್ಡಿ ಸುಗಂಧ ಬೀರುವ ಸಾಬೂನನ್ನು ತಿಕ್ಕಿತಿಕ್ಕಿ ನೊರೆ ಬರಿಸಿ ಸ್ನಾನ ಶೌಚಾದಿಗಳನ್ನು ತೀರಿಸಿಕೊಂಡದ್ದಾಯಿತು. ಇಂತಹ ಅಹ್ಲಾದಕರ ಹವೆಯಲ್ಲಿ ಸುಖನಿದ್ದೆಯನ್ನು ಆಸ್ವಾದಿಸಲು ಅಡ್ಡಿಯಾಗಿರುವ ಜವಾಬ್ದಾರಿಯನ್ನು ಶಪಿಸಿಕೊಳ್ಳುತ್ತಲೇ ಶ್ವೇತವಸ್ತ್ರಧಾರಿಗಳಾಗಿ ಕೂದಲನ್ನು ತಿದ್ದಿತೀಡಿಕೊಂಡದ್ದಾಯಿತು. ಹಲ್ಲನ್ನು ಸಿಕ್ಕಿಸಿಕೊಂಡು ಕನ್ನಡಿಯಲ್ಲಿ ನಮ್ಮನ್ನೇ ನಾವು ನೋಡಿಕೊಂಡೆವು. ಬಿಳಿಯ ಷರ್ಟಿನ ಮೇಲೆ ಬಿಳಿಯ ಅಂಗವಸ್ತ್ರವನ್ನೂ ಹೊದ್ದುಕೊಂಡೆವು. ನಮ್ಮ ನೋಸಿಯಾ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಸ್ಟಾಂಗವೆರಗಿದ್ದಾಯಿತು. ಪರಿಚಾರಕರು ಓಡೋಡಿ ಸಿದ್ಧವಾಗಿಸಿರುವ ಉಪಾಹಾರವನ್ನು ಮೆದ್ದುಕೊಂಡೆವು. ಈ ಹಾಳದ ತುತ್ತೂರಿಯವರು ಏನೇನು ತಲೆತಿನ್ನುವ ಪ್ರಶ್ನೆಗಳನ್ನು ಕೇಳುತ್ತಾರೋ...........? ಸತ್ತವರು ಹೋದರು......... ಈ ಮಾರಿಗಳು ಬೇಡದ ಪ್ರಶ್ನೆ ಕೇಳಿಯೇ ನಮ್ಮನ್ನು ಸಾಯಿಸುತ್ತಾರೆ. ಇರಲಿ...... ಕೆಲವೇ ದಿನಗಳಲ್ಲಿ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ. ಅಷ್ಟರ ತನಕ ನಾವು ಹೇಗಾದರೂ ಸುಧಾರಿಸಿಕೊಳ್ಳಬೇಕಿದೆ. ಅಹ್! ಸಭೆ ತುಂಬಿ ತುಳುಕಾಡುತ್ತಿದೆ....... ಸಂತುಷ್ಟರು, ಅಸಂತುಷ್ಟರು, ಸಂತ್ರಸ್ತರು, ವಂಧಿ ಮಾಗದರು, ಭಟ್ಟಂಗಿಗಳು..... ಅಳುತ್ತಿರುವವರು..... ದುಃಖಿತರು........ ಛೇ....... ಛೇ....... ಛೇ............. ನೋಡೋಣ ಏನೇನಾಗುತ್ತದೆಯೋ........?
ಯಾರಲ್ಲೀ......?
ಸ್ವಾಮೀ..... ದಿಗಂ ಬರಂ ಅವರೇ........ ನಮ್ಮೀ ಅಪರಿಮಿತ ಸಹನಾ ಶಕ್ತಿಯ ದೇಶದೋಳ್ ಸಾಮಾನ್ಯ ಪ್ರಜೆಗಳಿಗೆ ಸಂಪೂರ್ಣ ಸುರಕ್ಷೆ ಎಂಬುದು ಮರೀಚಿಕೆಯೇ? ಉಗ್ರರು ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೆಂದರಾಗ ಅಟ್ಟ ಹಾಸ ಗೈಯುತ್ತಲೇ ಇದ್ದರೂ ತಮ್ಮಂತಹವರು  ಎಂದಿನಂತೆ ನಿರಾಳವಾಗಿಯೇ ಇದ್ದೀರೀ........
ಭಾವವತರೇ.........., ಏನು ನಿಮ್ಮ ಮಾತಿನ ಅರ್ಥ? ಈ ನಮ್ಮ ಇಷ್ಟು ವಿಶಾಲವಾದ; ಪ್ರಜೆಗಳೇ ಪ್ರಭುಗಳಾಗಿರುವ ನಾಡಿನಲ್ಲಿ ಒಳಗಣ - ಹೊರಗಣ ಪ್ರಜೆಗಳಿಗೆ, ಅಪಾರವಾದ ಸ್ವಾತಂತ್ರ್ಯವಿದೆ. ಏನೋ ಬಾಂಬು ಪ್ರಿಯರಿಗೆ ಆಗೀಗ ನಮ್ಮ ದೇಶದಲ್ಲಿ ಬಂದು ಮನಸೋ ಇಚ್ಛೆ ದೀಪಾವಳಿ ಆಡುವ ಹುಮ್ಮಸ್ಸು. ಬರುತ್ತಾರೆ ಪಟಾಕಿ ಸಿಡಿಸುತ್ತಾರೆ. ನಮ್ಮ ಮಂದಿಗೆ ಬುದ್ಧಿಯಿಲ್ಲ. ಆ ಪಟಾಕಿಯಡಿ ಸಿಲುಕಿ ಸಾಯುತ್ತಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜನರಿನ್ನೂ ಹಸಿವಿನಿಂದಲೇ ಸಾಯುತ್ತಿರುವಾಗ ಹೀಗೆ ಒಂದಿಷ್ಟು ಮಂದಿ ಸಾಯುವುದೊಂದು ದೊಡ್ಡ ವಿಚಾರವೇ? ದಿನ ಬೆಳಗಾದರೇ ಪತ್ರಿಕೆಗಳಲ್ಲಿ ಸತ್ತವರ ಎಷ್ಟು ಫೋಟೋ ಬರುತ್ತಿಲ್ಲ? ಅಪಘಾತದಿಂದ, ನೀರಿನಲ್ಲಿ ಮುಳುಗಿ, ಬೆಂಕಿ ಬಿದ್ದು, ಪರಸ್ಪರ ಬಡಿದಾಡಿಕೊಂಡು ಅಷ್ಟೊಂದು ಮಂದಿ ಸಾಯುತ್ತಾರೆ, ಅವರಂತೆ ಇವರೆಂದು ಪರಿಗಣಿಸಲು ನಿಮಗೇನು ದಾಡಿ? ಒಂದೆಡೆ ಜನಸಂಖ್ಯೆ ಏರುತ್ತಿದೆ ಎಂದು ಬೊಬ್ಬಿಕ್ಕುವವರೂ ನೀವೇ..... ಇತ್ತ ಸಾಯುತ್ತಾರೆಂದಾರೆ ಬೊಬ್ಬಿಕ್ಕುವವರೂ ನೀವೇ........... ಇಷ್ಟಕ್ಕೂ ಮೊನ್ನೆಯ ದೀಪಾವಳಿ ಆಚರಣೆಯಲ್ಲಿ ವಿದೇಶಿಯರೇನಾದರೂ ಸತ್ತಿದ್ದಾರಾ? ಹಾಗದರೆ ಮರುಗಬೇಕಿತ್ತು. ಸತ್ತವರೆಲ್ಲ ಇಲ್ಲಿನ ಸ್ಥಳೀಯರು. ಸತ್ತರೇನಾಯಿತು? ಅವರಿಗೆ ಪರಿಹಾರ ನೀಡಲಾಗುತ್ತದೆ. ಅವಶ್ಯಕತೆ ಇದ್ದರೆ ಆ ಪರಿಹಾರದ ಚೆಕ್‌ಗಳು ಪಾಸಾಗದಂತೆಯೂ ಮಾಡಲಾಗುತ್ತದೆ......!
ಸ್ವಾಮೀ ಗೃಹ ಉಸ್ತುವಾರಿಗಳೇ....................    ಹಾಗಾದರೆ ನಮ್ಮ ಈ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ಜನರಿಗೆ ರಕ್ಷಣೆ ಇಲ್ಲವೇ.....?
ಜನರಿಗೆ ರಕ್ಷಣೆ ಇಲ್ಲ ಎಂದರೆ ಏನರ್ಥ ಭಾಗವತರೇ...? ನಿಮಗೆ ಕಣ್ಣು ಕಿವಿಗಳು ನೆಟ್ಟಗಿವೆಯೋ.......? ಪ್ರಜಾ ಪ್ರಭುತ್ವ ಅಂದರೇನು? ಪ್ರಜೆಗಳದ್ದೇ ಆಳ್ವಿಕೆ ತಾನೆ.....? ಇದಕ್ಕಾಗಿ ಜನಪ್ರತಿನಿಧಿಗಳನ್ನು ನಿಮ್ಮಂತಹ ಜನರೇ ತಾನೆ ಆರಿಸುವುದು.....? ಹಾಗಾಗಿ ಜನರನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳಿಗೆ ರಕ್ಷಣೆಯನ್ನು ಅಗತ್ಯವಿದ್ದರೂ.... ಇಲ್ಲದಿದ್ದರೂ ಒದಗಿಸುತ್ತಿಲ್ಲವೇ.....? ಹಾಗಾಗಿ ಜನಪ್ರತಿನಿಧಿಗಳಿಗೆ ರಕ್ಷಣೆ ನೀಡಿದರೆ ಅದು ಅವರು ಪ್ರತಿನಿಧಿಸುತ್ತಿರುವಂತಹ ಜನರಿಗೆ ನೀಡಿದಂತಹ ರಕ್ಷಣೆಯೇ ಆಗುತ್ತದೆ. ಸರ್ಕಾರ ಇದಕ್ಕಾಗಿ ಎಷ್ಟು ಖರ್ಚು ಮಾಡುತ್ತಿಲ್ಲ.... ನಿಮ್ಮಂತಹ ರಣ ಪೆದ್ದರಿಗೆ ಇದು ಅರ್ಥವಾಗುವುದಾದರೂ ಹೇಗೆ.......?
ಶ್ವೇತಾಂಬರಂ ಅವರೇ.... ಹಾಗಾದರೆ ಇದು ಭದ್ರತಾ ವೈಫಲ್ಯವೇ.....?
ಯಾರು ಹೇಳಿದ್ದು ನಿಮಗೆ ಭದ್ರತಾ ವೈಫಲ್ಯವೆಂದು....? ನಾವೆಲ್ಲರೂ ಭದ್ರತಾ ವೈಫಲ್ಯ ಅಲ್ಲವೇ ಅಲ್ಲವೆಂದು ಸಾರಾಸಗಟಾಗಿ ಹೇಳಿಕೆ ನೀಡಲಿಲ್ಲವೇ...? ಎಲ್ಲರೂ ಎದ್ದು ಬಿದ್ದು ಘಟನೆಯನ್ನು ಖಂಡಿಸಿದ್ದೇವೆ. ಸತ್ತವರಿಗೆ ಸಂತಾಪವನ್ನೂ ಸೂಚಿಸಿದ್ದೇವೆ. ಬದುಕುಳಿದು ದಿನನಿತ್ಯ ಸಾಯುತ್ತಿರುವ ಸತ್ತವರ ಕುಟುಂಬಿಕರಿಗೆ ಸಾಂತ್ವಾನವನ್ನೂ ಹೇಳಿದ್ದೇವೆ. ಆಸ್ಪತ್ರೆಗೂ ಭೇಟಿ ನೀಡಿದ್ದೇವೆ. ಎಲ್ಲವೂ ಮಾಧ್ಯಮಗಳಲ್ಲಿ ಭಿತ್ತರವಾಗಿವೆ. ಇನ್ನೇನು...........?   ಸರ್ಕಾರ ಮಾಡಬೇಕಾದುದನ್ನೆಲ್ಲ ಮಾಡಿದೆ. ಏನೋ ಪಾಪ, ಕಳೆದ ಭಾರಿ 2008ರಲ್ಲಿ ದೀಪಾವಳಿ ಆಚರಿಸಲು ನೆರೆ ಊರಿಂದ ಬಂದ ನಮ್ಮ ನೆಂಟ ಕಸಬ ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ. ನಮ್ಮ ಅತಿಥಿಯಾಗಿರುವ (ಅವನ ಅಪರಾಧ ಸಾಬೀತಾಗುವ ತನಕ ಅವನು ಅತಿಥಿ ತಾನೆ?) ಅವನಿಗೇ ಅದೇ ಜೈಲಿನಲ್ಲಿ ಕುಳಿತೂ ಕುಳಿತೂ ಬೋರ್ ಆಗುವುದಿಲ್ಲವೇ...? ಜೈಲಿನಲ್ಲಿ ಇದ್ದರೇನಾಯಿತು? ಹುಟ್ಟು ಹಬ್ಬ ಆಚರಿಸಿಕೊಳ್ಳಬಾರದೆಂದಿದೆಯೇ? ಇಷ್ಟಕ್ಕೂ ಆತ ಆಪಾದಿತ. ಇದನ್ನು ಮನಗಂಡ ಆತನ ಬಂಧುಗಳು ಇಲ್ಲಿಬಂದು ಅವರ ಸಂಪ್ರದಾಯದಂತೆ ಹುಟ್ಟುಹಬ್ಬ ಆಚರಿಸಿದರು. ಸಂಭ್ರಮಕ್ಕಾಗಿ ಒಂದೆರಡು ಪಟಾಕಿ ಸಿಡಿಸಿದರು. ಇದಕ್ಕೆ ಮಾಧ್ಯಮಗಳು, ಜನರು ಇಷ್ಟೊಂದು ಹುಯಿಲೆಬ್ಬಿಸುವುದು ಯಾಕೆಂದು ನಮ್ಮ ಸರ್ಕಾರಕ್ಕೆ ಗೊತ್ತಾಗ್ತಾ ಇಲ್ಲಪ್ಪ. ಆಯ್ತೀಗ... ಜನರಿಗೆ ಇದು ಇಷ್ಟವಿಲ್ಲ ಎಂದಾದರೆ, ಇನ್ನು ಮುಂದೆ ಇಂತದನ್ನು ತಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂಬುದಾಗಿ ನಮ್ಮ ನಿಧಾನಿಗಳಾದ ಮಣಮಣ ಸಿಂಗರೇ ಬಾಯ್ಬಿಟ್ಟು ಹೇಳಿಲ್ಲವೇ...? ಎಷ್ಚು ಸಮಯವಾಗಿತ್ತು ಅವರು ಬಾಯಿಗೆ ಬೀಗ ಹಾಕಿ ಕುಳಿತು. ಇದೀಗ ಅವರೇ ಬಾಯ್ಬೀಗ ತೆರೆದಿದ್ದಾರೆಂದರೇ... ನಿಮಗೆಲ್ಲ ಅರ್ಥವಾಗುತ್ತಿಲ್ಲವೇ.....?
ನಮ್ಮ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ, ರಕ್ಷಣಾ ವ್ಯವಸ್ಥೆ ಸರಿಯಾಗಿದೆಯೇ.....?
ಏನಾಗಿದೆ ಕಾನೂನು ಸುವ್ಯವಸ್ಥೆಗೆ. ಕಾನೂನು ರಾಕ್ಷಸರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದವರನ್ನು, ಮಾಡದೇ ಇರುವವರನ್ನು, ಅಸಹಾಯಕರನ್ನು ಅವಕಾಶ ಸಿಕ್ಕಿದಾಗ ಹೇಗೆಲ್ಲ ರುಬ್ಬುತ್ತಾರೆ...? ನೂರು ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಚಿಂತಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ನೀತಿಯಲ್ಲವೇ.....? ನಮ್ಮ ಭಾವೀ ಪ್ರಧಾನಿಗಳೆಂದು ಬಿಂಬಿತವಾಗಿರುವ ಯುವರಾಜರೇ ಹೇಳಿಲ್ಲವೇ....? ಇತರೇ ಪಟಾಕಿ ಸಿಡಿಯುವ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಎಷ್ಟೋ ಪರ್ವಾಗಿಲ್ಲ.  ಆಫ್ಘಾನಿಸ್ತಾನ, ಇರಾಕ್‌ಗಳಲ್ಲಿ ಪ್ರತಿದಿನ ಪಟಾಕಿಗಳು ಸಿಡಿಯುತ್ತಿವೆ ಎಂಬುದಾಗಿ ಸಾಕ್ಷಾತ್ ಯುವರಾಜರೇ ಹೇಳಿದ್ದಾರೆಂದ ಮೇಲೆ... ನಿಮ್ಮದೇನು ಅಧಿಕಪ್ರಸಂಗ...?
ಸ್ವಾಮೀ ಬರಂ............. ಹಾಗಾದರೆ ನಿಮ್ಮ ಪ್ರಕಾರ ಎಲ್ಲಾ ಲೆಕ್ಕಾಚಾರಗಳೂ ಸರಿ ಇವೆ ಎಂದರ್ಥವೇ......?
ಏನು ನಿಮ್ಮ ಕರ್ಮದ ಲೆಕ್ಕಾಚಾರ. ಎಲ್ಲವೂ ಸರಿ ಇದೆ. ಎಷ್ಟೆ ಸರಿಇದ್ದರೂ ಕೆಲವೊಮ್ಮೆ ಲೋಪದೋಷಗಳು ಸಹಜ. ಕಾಲಕಾಲಕ್ಕೆ ತಕ್ಕಂತೆ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ನೀವು ಲೆಕ್ಕಾಚಾರ ಅಂದಾಗ ನಾವಿಲ್ಲಿ ಲೆಕ್ಕಾಚಾರಕ್ಕೆ ಸಂಬಂಧಿಸಿದ ನಮ್ಮದೆ ಸ್ವಂತ ಉದಾಹರಣೆ ನೀಡಬೇಕಾಗುತ್ತದೆ. ನೋಡಿ ಮಹಾನ್ ಚುನಾವಣೆ ನಡೆದಾಗ ನಮ್ಮ ಕ್ಷೇತ್ರದಲ್ಲಿ ನಮ್ಮ ವಿರೋಧಿ ಪಕ್ಷ (ಒಮ್ಮೊಮ್ಮೆ ಅದೇ ಪಕ್ಷ ಮೈತ್ರಿ ಪಕ್ಷವೂ ಆಗುತ್ತದೆ) ಒಂದರ ಪ್ರತಿನಿಧಿ ಸುಮಾರು ಎರಡು ಸಾವಿರ ಮತಗಳಲ್ಲಿ ನಮ್ಮನ್ನು ಸೋಲಿಸಿದರೆಂದಾಯಿತು. ಇದಾದರೆ ಲೋಪದೋಷದ ತಪ್ಪು ಲೆಕ್ಕಾಚಾರ. ಮರಳಿ ಲೆಕ್ಕ ಮಾಡಿದಾಗ ನಾವು ಗೆಲ್ಲಲಿಲ್ಲವೇ? ಒಂದೊಮ್ಮೆ ಆ 'ಲೋಪದೋಷ' ಸರಿಪಡಿಸದೇ ಇರುತ್ತಿದ್ದರೆ ನಾವಿಂದು ಈ ಆಯಕಟ್ಟಿನ ಜಾಗದಲ್ಲಿ ಇರುತ್ತಿದ್ದೆವೇ......? ಇದನ್ನು ಪ್ರಶ್ನಿಸಿ ಖಟ್ಲೆ ಹೂಡಲಾಗಿದೆ. ಇದು ಮುಗಿಯುವ ವೇಳೆ ನಾವು ನಮ್ಮ ಅಧಿಕಾರಾವಧಿ ಮುಗಿದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೂ ಕುಳಿತುಕೊಂಡಿರಬಹುದು. ಹಾಗಾಗಿ ನೀವುಗಳೆಲ್ಲ ನಮ್ಮ ಆಡಳಿತೆಯ ಕುರಿತು ತಪ್ಪು ಲೆಕ್ಕಾಚಾರ ಹಾಕಬೇಡಿ.
ಹಾಗಾದರೆ ನಮ್ಮಂತಹ ಜನಸಾಮಾನ್ಯರ ಗತಿಯೇನು ಸ್ವಾಮೀ.......?
ಏನಾಗಿದೆ ಜನಸಾಮಾನ್ಯರಿಗೆ.......? ಜನರು ಆರಾಮವಾಗಿದ್ದಾರೆ. ಮಹಾ ನಗರಿ ಮುಂಬಯಿಯನ್ನೇ ತೆಗೆದುಕೊಳ್ಳಿ. ಇಲ್ಲಿನ ಜನರು ಅಲ್ಲಲ್ಲಿ ಆಗಾಗ ಪಟಾಕಿಗಳು ಸಿಡಿಯುವುದು ಸಾಮಾನ್ಯ ಎಂಬಂತೆ ಒಗ್ಗಿಕೊಳ್ಳಲಿಲ್ಲವೇ...? ಪ್ರತೀ ಪಟಾಕಿ ಸಿಡಿದಾಗಲೂ ಅವರು ಮತ್ತಷ್ಟು ಸದೃಢರಾಗುತ್ತಿದ್ದಾರೆ ಮತ್ತು ಬದುಕಿನ ಆಸೆಯನ್ನು ಬಿಡುತ್ತಿದ್ದಾರೆ. ಸಾಯಬೇಕಿಂದಿದ್ದರೆ ಬಾಂಬೇ ಸಿಡಿಯಬೇಕೇನೂ? ನಡೆಯುವಾಗ ಎಡವಿ ಬಿದ್ದು ಸಾಯೋದಿಲ್ಲವಾ.....? ಎಲ್ಲವೂ ವಿಧಿ ಲಿಖಿತ. ಮಾನವನ ವಿಧಿಯನ್ನು ತಪ್ಪಿಸಲಾಗುತ್ತದೆಯೇ.....? ಈಗ ನೋಡಿ ನಮ್ಮಂತವರನ್ನು ಸಹಿಸಿಕೊಳ್ಳುವುದು ನಿಮ್ಮ ವಿಧಿ.
ಭಾಗವತರೇ.... ಅನಗತ್ಯ ಪ್ರಶ್ನೆಗಳನ್ನೆಸೆಯುತ್ತಾ ಕಾಲ ಹರಣ ಮಾಡಬೇಡಿ.... ನಮಗೆ ನಮ್ಮನ್ನು, ನಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುವಂತಹ, ವಿರೋಧ ಪಕ್ಷಗಳ ಬಾಯಿಮುಚ್ಚಿಸುವ ಮತ್ತಿತರ ಅನೇಕ ರಾಜಕಾರ್ಯಗಳಿವೆ.
ಸ್ವಾಮಿ ದಿಗಂ ಅಂಬರರೇ............ ಅರ್ಥವಾಯಿತು ನಿಮ್ಮ ಅವಸರ.
ಭಗವಂತನು ನಿಮ್ಮಂತಹ ಆಡಳಿತಾರೂಢರಿಗೆ ಸದ್ಬುದ್ಧಿಯನ್ನು ಇನ್ನಾದರೂ ಕರುಣಿಸಿ ಭಯದಿಂದ ಭಾರತಾಂಬೆಯನ್ನು ಮುಕ್ತಿಗೊಳಿಸಲೀ ಎಂದು ಪ್ರಾರ್ಥಿಸುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೇ...........
||ಸರ್ವೇಜನೋ ಸುಖಿನೋಭವಂತು||
||ಮಂಗಳಂ||