ಶುಕ್ರವಾರ, ಜೂನ್ 15

ಬುಧವಾರ, ಮೇ 16

ಮತದಾನ ಮಾಡಿಯೇ ಮಾಡಿದೆ!


ಏನೋ ಕೆಲಸ ನಿಮಿತ್ತ ಬೆಂಗಳೂರಲ್ಲಿದ್ದೆ. ಮೇ 11ರಂದು ಊರಿಗೆ ಬರಬೇಕೆಂದು 1018 ರೂಪಾಯಿ ಕಕ್ಕಿ ಎಸ್ಆರ್‌ಎಸ್ ರಾತ್ರಿ ಬಸ್ಸಲ್ಲಿ ಬುಕ್ ಮಾಡಿದ್ದೆ. ನಾನು ಟಿಕೆಟ್ ಬುಕ್ ಮಾಡಲು ಹೊರಟಾಗ ಯಾವ ಕೆಎಸ್ಆರ್‌ಟಿಸಿ ಬಸ್ಸಲ್ಲಿ ಸೀಟ್ ಇರಲಿಲ್ಲ. ಕೆಎಸ್ಆರ್‌ಟಿಸಿ ವೋಲ್ವೋ ಬಸ್ಸಲ್ಲಾದರೆ ನನ್ನೂರಿಗೆ ಟೆಕೆಟ್ ದರ 800 ರೂಪಾಯಿ ಒಳಗೆ. ಇತರೇ ಖಾಸಗಿ ಬಸ್‌‌ಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು ನೀಡಿದ ರಿವ್ಯೂ ನೋಡಿ ಇದ್ದುದರಲ್ಲಿ ಎಸ್ಆರ್‌ಎಸ್ ಬೆಟರ್ ಎಂಬ ತೀರ್ಮಾನಕ್ಕೆ ಬಂದಿದ್ದೆ. ಮೇ 11ರಂದು ರಾತ್ರಿಯ ಬೆಂಗಳೂರು ಮಳೆಯಿಂದಾಗಿ ಪ್ರೋಗ್ರಾಂ ಎಲ್ಲಾ ಉಲ್ಟಾಪಲ್ಟಾ. ಎಲ್ಲಾರು ಟ್ರೈ ಮಾಡಿದ್ದೇ ಮಾಡಿದ್ದು; ನನ್ನ ಸಮಯಕ್ಕೆ ಯಾವ ಕ್ಯಾಬೂ ದಕ್ಕಲಿಲ್ಲ. ಮಳೆ ನಿಂತ ಬಳಿಕ ಹೇಳಿದ ಪಿಕಪ್ ಪಾಯಿಂಟಿಗೆ ತಲುಪಲು ವ್ಯವಸ್ಥೆ ಇರಲಿಲ್ಲ! ಬೇರೆ ಹತ್ತಿರದ ಪಿಕಪ್ ಪಾಯಿಂಟ್‌ಗೆ ಬರಬಹುದೇ ಮತ್ತು ಎಲ್ಲಿದೆಯೆಂದು ವಿಚಾರಿಸೋಣ ಎಂದು ಎಸ್ಆರ್‌ಎಸ್ ‌ಕಾಲ್ ಸೆಂಟರ್‌ನ ಮೂರು ನಂಬರ್‌ಗಳಿಗೆ ಫೋನ್ ಮಾಡಿದರೆ ಯಾವ ನಂಬರೂ ಎತ್ತುತ್ತಿಲ್ಲ. ಯಾವ ಕರ್ಮಕ್ಕೆ ನಂಬರ್ ಕೊಡ್ತಾರೋ... ರಿಸ್ಕ್ ತಗೊಂಡು ಎಲ್ಲೆಲ್ಲೋ ಹೋಗಿ, ಅತ್ತ ಬಸ್ಸು ಸಿಗದೆ, ಇತ್ತ ಬರಲಾಗದೆ ಇನ್ನೊಂದು ಸಮಸ್ಯೆಯಲ್ಲಿ ಸಿಲುಕೋದು ಬೇಡ ಅನ್ನಿಸ್ತು. ಗಂಟು ಮೂಟೆಯೊಂದಿಗೆ ಮಳೆಯನ್ನೇ ಅರ್ಧಗಂಟೆ ತದೇಕ ಚಿತ್ತದಿಂದ ವೀಕ್ಷಿಸಿ ಸಾವಿರದ ಹದಿನೆಂಟು ರೂಪಾಯಿ ಢಮಾರೆಂದು ದೊಡ್ಡದೊಂದು ನಿಟ್ಟುಸಿರು ಬಿಟ್ಟು ಸುಮ್ಮನಾಗೋದಷ್ಟೆ ಇದ್ದಿದ್ದ ಆಯ್ಕೆ. ಅದನ್ನೇ ಮಾಡಿದೆ.

ವೋಟ್ ಹಾಕಲೇ ಬೇಕೆಂಬ ತುಡಿತ ಒಳಗಿಂದ.. ಸುಳ್ಯ ತಾಲೂಕಿನ ಬಡ್ಡಡ್ಕದ ಮತಗಟ್ಟೆಗೆ ನಾನು ತಲುಪಬೇಕಾದರೆ ಬೇಕಾಗೋ ಸಮಯ ಲೆಕ್ಕ ಹಾಕಿ, ಮರುದಿನ ನಾಲ್ಕೂವರೆಗೆ ಎದ್ದು ಬೇಗ ಗಮ್ಯ ಸೇರೋ ಇರಾದೆಯಿಂದ ಅರ್ಧ ದಾರಿ ರೈಲಲ್ಲಿ ಕ್ರಮಿಸಿ ಮಿಕ್ಕರ್ಧ ಬಸ್ಸಲ್ಲಿ ಸಾಗೋಣ ಅಂತ ನಿರ್ಧರಿಸಿ ರೈಲು ನಿಲ್ದಾಣಕ್ಕೆ ಬಂದರೆ... ಅಬ್ಬಾ.. ಜನವೋ ಜನ.. ಕಾಯ್ದಿರಿಸದ ಟಿಕೇಟ್ ಕೌಂಟರಲ್ಲಿ ಅಕ್ಷರಶಃ ಹರ ಸಾಹಸ ಮಾಡಿ ಮೈಸೂರಿಗೆ ಟಿಕೆಟ್ ಪಡೆದಿದ್ದು... ಜನ್ಮದಲ್ಲಿ ಮೊದಲ ಅನುಭವ, ತಳ್ಳಾಟ, ನೂಕು ನುಗ್ಗಲು... ಕೈಯಲ್ಲೊಂದು ಹೆಣ ಭಾರದ ಬ್ಯಾಗು.. ಭುಜಕ್ಕೆ ನೇತು ಹಾಕಿದ ಲ್ಯಾಪ್‌ಟಾಪ್ ಬ್ಯಾಗು... ಬೆಳಗೆದ್ದು ಏನು ತಿನ್ನದೇ ಸರಿಯಾಗಿ ನೀರೂ ಕುಡಿಯದೇ ಹಸಿವು, ಬಾಯಾರಿಕೆ.. ಒಂದೂ ಚೂರು ಅಡಿತಪ್ಪಿ ನೆಲಕ್ಕೆ ಬಿದ್ದರೆ ಕಾಲ್ತುಳಿತ ಖಂಡಿತ... 

ಅಂಥಾದ್ದರಲ್ಲಿ ಸರಿಯಾದ ಸರತಿ ಸಾಲಿನ ಎಳೆ ಹಿಡಿದು ಟಿಕೇಟ್ ಪಡೆದು, ಜನರ ಮಧ್ಯೆ ದಟ್ಟ ಕಾಡಿನಲ್ಲಿ ನುಸುಳಿಬಂದಂತೆ ಹೊರಬಂದಾಗ, ನನ್ನನ್ನು ಟೈಮಿಗೆ ಸರಿಯಾಗಿ ರೈಲು ನಿಲ್ದಾಣಕ್ಕೆ ತಲುಪಿಸುವ ಜವಾಬ್ದಾರಿ ಹೊತ್ತ ಫ್ರೆಂಡ್ ನನ್ನ ಮೇಲಿನ ಕಾಳಜಿಯಿಂದ "ಹಾಗೇ ಮಾಡಬೇಕಿತ್ತು... ಹೀಗೆ ಮಾಡಬಾರದಿತ್ತು" ಅನ್ನುತ್ತಾ ಆಕ್ಷೇಪಿಸುವ ದಾಟಿಯಲ್ಲಿ.... ಲಘುವಾಗಿ ಜರೆಯುತ್ತಿದ್ದುದು... ನನ್ನ ಅಸಹನೆಗೆ ತುಪ್ಪ ಸುರುವಿ ಬೆಂಕಿ ಎಬ್ಬಿಸಿದಂತಾಗಿ, ಎಲ್ಲ ಸೇರಿ ಆ ಚಳಿಯಲ್ಲೂ ಬೆವರು ಹುಟ್ಟಿಸಿತು.
ಟಿಕೆಟ್ ಹಿಡಿದು ಯುದ್ಧ ಗೆದ್ದ ಸಂಭ್ರಮದಲ್ಲಿ ಮೆಟ್ಟಿಲುಗಳನ್ನು ಹತ್ತಿ ಇಳಿದು ಸರಿಯಾದ ಫ್ಲಾಟ್‌ಫಾರಂಗೆ ಬರಬೇಕಿದ್ದರೆ ರೈಲು ಶಿಳ್ಳೆ ಹಾಕುತ್ತಾ ನನಗೇ ಕಾಯುತ್ತಿದ್ದಂತೆ ನಾನು ಕಾಲಿಡುತ್ತಲೇ ಹೊರಟು ಬಿಟ್ಟಿತು. ಅದು ವೇಗ ದೂತವಾದ ಕಾರಣ ಮಂಡ್ಯದಲ್ಲಿ ಮಾತ್ರ ಒಂದೇ ನಿಲುಗಡೆ ಇತ್ತು. ನೀರಾದರೂ ತಗೊಳ್ಳೋಣ ಎಂದರೆ ಲೇಡಿಸ್ ಕಂಪಾರ್ಟ್‌ಮೆಂಟ್ ಪಕ್ಕ ಯಾವ ನೀರೂ ಚಾಯ್ ಕಾಫಿವಾಲಗಳೂ ಸುಳಿಯಲ್ಲಿಲ್ಲ... ಅದೃಷ್ಟವೇ... ಅಂದ್ಕೊಂಡು ಸುಮ್ಮನಾದೆ. 

ಈ ಮಧ್ಯೆ ಸಹ ಪ್ರಯಾಣಿಕರಿಬ್ಬ ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಭಯಂಕರವಾಗಿ ಬಯ್ದಾಡಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದು ನನ್ನ 'ಭಯಂಕರ ಅನುಭವದ' ಪಟ್ಟಿಗೆ ಸೇರಿತು. ಥೇಟ್ ಕಿರಗೂರ ಗಯ್ಯಾಳಿಗಳ ವರಸೆಯಲ್ಲಿದ್ದ ಅವರ ಜಗಳ ಲೈವ್ ಆಗಿ ಕಂಡು ನನ್ನ ಡಿಕ್ಷ್ನರಿ ಸಂಪತ್ಬರಿತವಾಯಿತು! (ಇಂಥಾ ಜಗಳವನ್ನು ಓದಿದ್ದೆ, ಸಿನಿಮಾದಲ್ಲಿ ನೋಡಿದ್ದೆ) ಕೊನೆಗೆ ಅವರನ್ನು ಸುಮ್ಮನಾಗಿಸಲು ಬೋಗಿಯಲ್ಲಿದ್ದವರೆಲ್ಲ (ನಾನೂ ಸೇರಿದಂತೆ) ತಮ್ಮ ತಮ್ಮ ಬುದ್ದಿಗಳನ್ನು ಯಥೇಚ್ಛವಾಗಿ ಖರ್ಚು ಮಾಡಿದೆವು.  ಒಬ್ಬರು ಚೈನ್ ಎಳೆದು ರೈಲನ್ನೇ ನಿಲ್ಲಿಸ ಹೊರಟರು, ನಾನು ಮೊಬೈಲ್ ಹಿಡ್ಕೋಂಡು ಟ್ರೇನ್ ಕಂಪ್ಲೇಟ್ ನಂಬರ್ ಹುಡ್ಕಿದೆ. ಅಂತೂ ಇಂತೂ ಆ ಇಬ್ಬರಿಗೂ ಸುಸ್ತಾಯಿತೇನೋ ಅರ್ಧದಾರಿ ಸಾಗುವಷ್ಟರಲ್ಲಿ, ಜೋರು ಮಳೆ ನಿಧಾನಕ್ಕೆ ನಿಲ್ಲುತ್ತಾ ಬಂದಂತೆ ಕ್ರಮೇಣ ಸುಮ್ಮನಾದರು.  ಮೊದಲೇ ಬಾಯಾರಿಕೆ ಹಸಿವು... ಇವರ ಜಗಳ ಅಸಹ್ಯಕರ ಭಾಷೆ, ಲೇಡೀಸ್ ಕಂಪಾರ್ಟ್‌ಮೆಂಟಲ್ಲಿ ರಾಜಾರೋಷವಾಗಿ ಹತ್ತಿಕುಳಿತು ದರ್ಬಾರ್ ಮಾಡುತ್ತಿದ್ದ ಗಂಡಸರು ಎಲ್ಲವನ್ನೂ ಕಂಡು ಹೊಟ್ಟೆ ತೊಳೆಸಿದಂತಾಯಿತು.

ಇಷ್ಟರಲ್ಲಿ ಬ್ಲೆಸ್ಸಿಂಗ್ ಇನ್ ಡಿಸ್‌ಗೈಸ್ ಎಂಬಂತೆ ರೈಲು ಮಾತ್ರ ಬಹು ಬೇಗ ಮೈಸೂರು ತಲುಪಿತು. ರೈಲು ನಿಲ್ದಾಣದಿಂದ ಫ್ರೀ ಪೇ ಆಟೋ ಹಿಡಿದು ಬಸ್ ನಿಲ್ದಾಣಕ್ಕೆ ಓಡೋಡಿ ಬಂದೆ. ಇದ್ದುದರಲ್ಲಿ ಸಮಾಧಾನ ಅಂದರೆ ಪ್ರೀ ಪೇ ಆದ ಕಾರಣ ಬರೀ ಇಪ್ಪತ್ತೈದೇ ರೂಪಾಯಿ... ಇಲ್ಲವಾದರೆ 40-50 ಪೀಕುತ್ತಿದ್ದರೇನೋ! ರಿಕ್ಷಾ ಇಳಿವಾಗ ಮಾಮೂಲಿಯಂತೆ ಥ್ಯಾಂಕ್ಸ್ ಅಂದೆ ರಿಕ್ಷಾ ಅಣ್ಣನಿಗೆ. ಅವನಿಗೆ 'ಚಿಕ್ಕ' ಬಾಡಿಗೆ ಸಿಕ್ಕ ನನ್ನ ಮೇಲೆ ಭಾರೀ ಕೋಪ ಬಂದಿರಬೇಕು. ಮುಖ ದುಮ್ಮಿಸಿಕೊಂಡಿದ್ದವನು ಅಂತಾ ಪ್ರತಿಕ್ರಿಯೆ ತೋರಿಲ್ಲ.

ಬಸ್ ನಿಲ್ದಾಣದ ಇನ್ನೊಂದು ಕೊನೆಯಲ್ಲಿ ನಮ್ಮೂರಕಡೆಯ ಬಸ್ಸುಗಳು ನಿಲ್ಲುವ ಕಾರಣ ಪುನಃ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಧಾವಂತದಿಂದ ಹೆಜ್ಜೆ ಹಾಕಿದೆ. ಒಂದು ಕಾಫಿಯನ್ನಾದರೂ ಕುಡಿಯೋಣ ಅಂತ ಲೆಕ್ಕ ಹಾಕುತ್ತಾ ಬಂದವಳಿಗೆ ಬಸ್‌ನಿಲ್ದಾಣದ ಮೈಕಿನ ದೊಡ್ಡ ಧ್ವನಿಯಲ್ಲಿ ಘೋಷಣೆ ಕಿವಿಗೆ ಬಿತ್ತು. ಚುನಾವಣಾ ಕಾರಣದಿಂದ ಬಸ್ಸುಗಳ ಸಂಖ್ಯೆಯಲ್ಲಿ ವಿಪರೀತ ಕೊರತೆ ಇದ್ದು ಪ್ರಯಾಣಿಕರು ಸಹಕರಿಸಬೇಕು... ಇದು ಕಿವಿಗೆ ಬೀಳುತ್ತಿದ್ದಂತೆ ನನ್ನ ನಡಿಗೆ ಇನ್ನೂ ಚುರುಕಾಯಿತು. ಅಷ್ಟರಲ್ಲೇ ಮಂಗಳೂರಿನ ಬೋರ್ಡ್ ಹೊತ್ತ ಬಸ್ಸು ಗರಗರ ಸದ್ದು ಮಾಡುತ್ತಾ ಹೊರಡಲಣಿಯಾಗುತ್ತಿತ್ತು. ಛೇ.... ಬಸ್ಸಿನ ಕೊರತೆಯಿಂದ ಸಹಕರಿಸಿ ಎನ್ನುವ ಕೆಎಸ್ಆರ್‌ಟಿಸಿಯ ಮನವಿಗೆ ಸ್ಪಂದಿಸಿ ಸಹಕರಿಸೋಣ ಎನ್ನುತ್ತಾ ಓಡಿ ಹೋಗಿ "ಸರ್ ಸರ್ ಒಂದು ನೀರು ತಗೊಂಡು ಬರ್ತೀನಿ" ಅಂತ ರಿಕ್ವೆಸ್ಟಿದೆ. ಬೇಗಬೇಗ ಟೈಮಾಯ್ತು ಅಂತ ಅವಸರಿಸಿದ ಡ್ರೈವರಣ್ಣ. ಪಕ್ಕದಲ್ಲಿದ್ದ ಅಂಗಡಿಯೊಂದರಲ್ಲಿ ಹೋಗಿ ಒಂದು ಲೀಟರ್ ನೀರು ಅಂದೆ. ನನ್ನ ಕೈಲಿದ್ದ ಪಚ್ಚೆ ಬಣ್ಣದ ನೋಟನ್ನು ಕಂಡ ಅವನು ಚಿಲ್ರೆ ಕೊಡಿ ಇಪ್ಪತ್ತು ರೂಪಾಯಿ ಅಂತ ಅತ್ತ ತಿರುಗಿದ. ಅಂಗಡಿಯ ನಾಲ್ಕೂ ಭಾಗಗಳಿಂದ ಆತ ಗ್ರಾಹಕರನ್ನು ವಿಚಾರಿಸಬಹುದಾದ ಕಾರಣದಿಂದ, ಚಿಲ್ಲರೆ ಇಲ್ಲದ ನನ್ನ ವ್ಯಾಪಾರವನ್ನು ಆತ 'ಚಿಲ್ಲರೆಯಾಗೇ' ಪರಿಗಣಿಸಿ ನನ್ನ ಯಾವ ಪ್ಲೀಸಿಗೂ ಮನ್ನಣೆ ಕೊಡಲಿಲ್ಲ. 

ಅವನಿಗೇನು ಗೊತ್ತು ನಾನು ಬೆಳಗ್ಗೆ ನಾಲ್ಕುವರೆಯಿಂದ ನೀರೂ ಮುಟ್ಟಿಲ್ಲ ಅಂತ... ಆತ ಎಷ್ಟು ನಿರ್ಲಕ್ಷದಿಂದ ವರ್ತಿಸಿದ ಅಂದರೆ ನನ್ನ ಕರೆ-ಮೊರೆ ಯಾವುದು ಲೆಕ್ಕಕ್ಕೇ ಬರಲಿಲ್ಲ. ನೀರನ್ನು ಎತ್ತಿಕೊಂಡು ಹಾಗೇ ಹೋಗಲೇ ಅನ್ನಿಸಿತು. ಆದರೆ ಹಾಗೇ ಮಾಡಿ ಅಭ್ಯಾಸ ಇಲ್ಲದ ಕಾರಣ ಮನಸೊಪ್ಪಲಿಲ್ಲ. ಇತ್ತಲಿಂದ ಕಂಡೆಕ್ಟರಣ್ಣ ಬೇಗ ಬನ್ನಿ ಅಂತ ಆವಾಜ್ ಹಾಕಿದಾಗ ಮೊದಲೇ ಬ್ಯಾಗುಗಳ ಭಾರದಿಂದ ಕಂಪಿಸುತ್ತಿದ್ದ ನಾನು ಮತ್ತಷ್ಟು ಕಂಪಿಸಿ ಹೋದೆ. ಈ ಬಸ್ಸು ಹೋಗಿ.. ನೆಕ್ಸ್ಟ್ ಬಸ್ಸ ಲೇಟಾಗಿ... ನಾನು ಊರಿಗೆ ತಲುಪಲಾಗದಿದ್ದರೆ .. ವೋಟ್ ಹಾಕಲಾಗದಿದ್ದರೆ... ಸಾಯ್ಲಾಚೆ ಬಸ್ಸು ಎಲ್ಲಾದರೂ ನಿಂತಾಗ ನೀರು ಕುಡಿಯೋಣ ಅಂತ ಓಡಿದೆ. ಪುಣ್ಯಕ್ಕೆ ಸೀಟು ಸಿಗ್ತು. 

ಆ ಬಸ್ಸಿಗೂ ನನ್ನಂಗೆ ಅವಸರ. ಬಸ್ಸು ನಿಂತಲೆಲ್ಲ ಡೈರೆಕ್ಟ್ ಸೀಟ್ ಯಾರು ಇಳಿಬೇಡಿ ಟೈಮಿಲ್ಲ... ಅಂತ ಕಂಡೆಕ್ಟರಣ್ಣ ಘೋಷಿಸಿಬಿಟ್ಟ. ಆಯ್ಯೋ ದೇವ್ರೇ.... ಬಸ್ಸಿನಲ್ಲಿದ್ದವರೆಲ್ಲ ನೀರು ಕುಡೀವಾಗ ಇವರೆಲ್ಲ ಎಷ್ಟು ಶ್ರೀಮಂತರು ಅನಿಸುತಿತ್ತು ಬಳಲಿ ಬೆಂಡಾಗಿ ಬಾಯಾರಿ ಹಸಿದಿದ್ದ ನನಗೆ. ನನ್ನ ಪಕ್ಕ ಕುಳಿತಿದ್ದ ಎಳೆ ಜೋಡಿಯೊಂದು ಭವಿಷ್ಯದ ಬಗ್ಗೆ ಪ್ಲಾನ್ ಹಾಕುತ್ತಿದ್ದುದು ಬೇಡವೆಂದರೂ ಕಿವಿಗೆ ಬೀಳುತ್ತಿದ್ದು, ಕೇಳುತ್ತಾ ಕುಳಿತಿದ್ದವಳಿಗೆ ಅಲ್ಲೇ ಮಂಪರು ಬಂದಂತಾಗಿ ಪಕ್ಕದಲ್ಲಿದ್ದ ಹುಡುಗಿಗೆ ಜೋಲಿ ಹೊಡೆದೆ ಕಾಣುತ್ತೆ. ಕಸಿವಿಸಿಗೊಂಡ ಅವಳು ಕೊಸರಿದಾಗ ಎಚ್ಚೆತ್ತ ನಾನು ಮತ್ತೆ ಜಾಗರೂಕತೆಯಿಂದ ಜಂಟಲ್ ವುಮನ್ ಆಗಿ ಕುಳಿತೆ. ನಿದ್ದೆ ಇಲ್ಲದೆ ನೀರಿಲ್ಲದೆ ಆಹಾರ ಇಲ್ಲದೆ, ಈ ಇಲ್ಲಗಳನ್ನೆಲ್ಲಾ ಏಕಕಾಲಕ್ಕೆ ಅನುಭವಿಸಿದೆ.

ಮಡಿಕೇರಿಯಿಂದ ಘಾಟ್ ಸೆಕ್ಷನಲ್ಲಿ ಇಳಿವಾಗ ಹೆಚ್ಚಾಗಿ ರಸ್ತೆಯ ಒತ್ತಡಕ್ಕೆ ಟೈರ್‌ ಸುಟ್ಟ ವಾಸನೆ ಬರೋದು ಸಹಜ. ಆದರೆ ನಾ ಬಂದ ಬಸ್ಸಿನಲ್ಲಿ ಹೊಗೆಯೇ ಎದ್ದಿತ್ತು. ಪ್ರಯಾಣಿಕನೊಬ್ಬ ಟೈರ್ ಜಲ್ ರಹಾ ಹೇ ಎನ್ನುತ್ತಾ ಕಿರುಚಿದಾಗ ಮತ್ತೊಮ್ಮೆ ಮಂಪರು ಹತ್ತಿದ್ದ ನಾನು ಒಮ್ಮೆಗೆ ಅಲರ್ಟ್ ಆಗಿ ಬ್ಯಾಗಿಗೆ ಕೈ ಹಾಕಿ ಇಳಿಯಬೇಕೋ ಎಂಬ ಧಾವಂತಕ್ಕೆ ಬಿದ್ದೆ. ಏನಿಲ್ಲ... ಜಾಸ್ತಿ ಬ್ರೇಕ್ ಅಪ್ಲೈ ಮಾಡ್ಬೇಡ ಅಂತ ಡ್ರೈವರಿಗೆ ಕಂಡಕ್ಟರ್ ಹೇಳಿ, ರೈಟ್ ಎಂದಾಗ ಅಪಾಯವಿಲ್ಲ ಎಂಬ ಸಮಾಧಾನ ಆಯಿತಾದರೂ ಬಸ್ಸು ಮಾತ್ರ ಗಂಟೆಗೆ 5 ಕಿಮೀ ಸ್ಪೀಡಿನಲ್ಲಿ ಓಡುತ್ತಿದ್ದರೆ ನನ್ನ ಆತಂಕ ಮಾತ್ರ ಬುಲೆಟ್ ಟ್ರೈನಿನಂತೆ ಓಡುತ್ತಿತ್ತು. ಇಳಿಜಾರು ಮುಗಿಸಿ ಸಂಪಾಜೆ ದಾಟಿದ ಮೇಲೆ ಬಸ್ಸು ಮತ್ತೆ ತನ್ನ ಲಯಕ್ಕೆ ಮರಳಿತು. 

ಸುಳ್ಯದಲ್ಲಿ ನಾನು ಬಸ್ಸಿಳಿಯ ಹೊರಟಾಗ ಕಂಡೆಕ್ಟರಣ್ಣನ ಅನೌಂಸುಮೆಂಟು... ಡೈರೆಕ್ಟು ಸೀಟು ಊಟಕ್ಕೆ ಟೈಮಿದೆ.... ನಗುಒಂದು ಸುಳಿಯಿತು ನನ್ನ ತುಟಿಯಲ್ಲಿ. ಇವರ ಟೈಮಿದ್ದರೂ ಇಲ್ಲದಿದ್ದರೂ ನಂಗೇನು; ಇಲ್ಲಿ ನಾನು ಊಟನೋ... ತಿಂಡಿಯೋ... ಜ್ಯೂಸೋ ಏನಾದರೂ ಸೇವಿಸಿಯೇ ಸಿದ್ಧ ಅಂತ ಗಟ್ಟಿಯಾಗೇ ನಿರ್ಧರಿಸಿ, ಸ್ವಲ್ಪ ರಿಲಾಕ್ಸ್ ಆಗಿ ಹೋಗೋಣ ಎಂದಿದ್ದೆ. ಬ್ಯಾಗ್ ಹಿಡಕೊಂಡು ಅಡ್ಸರ-ಬಡ್ಸರ ಹೆಜ್ಜೆ ಹಾಕುತ್ತಾ ಸಾಗಬೇಕಿದ್ದರೆ ನನ್ನೂರು ದಾಟಿ ಸಾಗುವ, ಬಹುತೇಕ ನಮ್ಮ ಮನೆ ಮುಂದೆ ಅನ್ನಬಹುದು; ಕೇರಳ ರಾಜ್ಯದ ಮಲಯಾಳಿ ಬಸ್ಸು ಹೊರಡುತ್ತಿತ್ತು. ಬಸ್ಸಿನೊಳಗಿರುವ ಕೆಲವರು ಪರಿಚಯದ ನಗು ಬೀರಿದರು. ಈ ಬಸ್ಸು ಬಿಟ್ಟರೆ ನೆಕ್ಸ್ಟ್ ಬಸ್ ಲೇಟಾಗುತ್ತೆ ಮತ್ತು ಅದು ಪ್ರೈವೇಟ್ ಬಸ್ ಆದ ಕಾರಣ ನಾನು ಆ ಬಸ್ಸಿಗಾಗಿ ಮತ್ತಷ್ಟು ದೂರ ಸಾಗಬೇಕು.... ಹಾಗಾಗಿ ಸ್ವಯಂಚಾಲಿತ ಮೆಶಿನ್ ‌ನಂತೆ ಆ ಬಸ್ಸೇರಿದೆ. ನನ್ನ ಆಹಾರ ಸೇವನೆಯ ನಿರ್ಧಾರ ಮತ್ತೊಮ್ಮೆ ಸುಳ್ಳಾಗಿ ನೆನೆಗುದಿಗೆ ಬಿತ್ತು.

ಅಂತೂ ಇಂತೂ ಬಸ್ಸು ಹೊರಟು ನನ್ನ ಗಮ್ಯ ತಲುಪಿದೆ. ಬಸ್ಸಿಳಿಯುವಾಗ ಬಸ್ಸಿನ ಕೈಗೆ ನನ್ನ ಬಾಗಿಲು ಅಲ್ಲಲ್ಲ..... ನನ್ನ ಕೈಗೆ ಬಸ್ಸಿನ ಬಾಗಿಲು ಬಡಿಯಿತು. ಬ್ಯಾಗುಗಳನ್ನು ಹೇರಿಕೊಂಡು ಅಡ್ಡಾಡಿ ಒದ್ದಾಡಿದ್ದಕ್ಕೆ ಕಿರೀಟ ಇಟ್ಟಂತೆ ಈ ನೋವೂ ಸೇರಿಕೊಂಡಿತು. ಬಸ್ಸಿಳಿಯುತ್ತಲೇ ಎಲ್ಲಾ ನೋವುಗಳು ಒಟ್ಟಿಗೆ ಮೇಳೈಸಿದವು. ಅದಾಗಲೇ ಮಧ್ಯಾಹ್ನ ಮೂರು ದಾಟಿತ್ತು. ನಮ್ಮ ಬೂತಿನ ಹತ್ತಿರದಲ್ಲೇ ನಮ್ಮ ಮನೆ ಇರೋ ಕಾರಣ ವೋಟಿನ ದಿನ ಖಂಡಿತವಾಗಿಯೂ ಯಾರಾದರೂ ಊಟಕ್ಕೇ ಇದ್ದೇ ಇರುತ್ತಾರೆ. (ಹಿಂದೆಲ್ಲಾ ವೋಟಿನ ದಿನವೆಂದರೆ ಹಬ್ಬದಂತೆ. ವೋಟಿಗೆ ಬಂದ ನೆಂಟರಿಷ್ಟರೆಲ್ಲ ನಮ್ಮ ಮನೆಗೆ ತಂಡ ತಂಡವಾಗಿ ಭೇಟಿ ನೀಡುತ್ತಿದ್ದರು) ಮನೆಯಲ್ಲೂ ಊಟವಾದರೂ ಇದೆಯೋ ಇಲ್ಲವೋ ಎನ್ನುತ್ತಾ ನಮ್ಮ ಮನೆಯಂಗಳಕ್ಕೆ ಅಡಿ ಇಟ್ಟೆ. ದೂರದಲ್ಲಿದ್ದ ನಾಯಿ ಓಡೋಡಿ ಬಂದು ಮೈಮೇಲೆ ಎಗರಿ ನನ್ನ ಬ್ಯಾಗುಗಳನ್ನು ಜಗ್ಗಿತು. ಪಾಪ ಅದು ಪ್ರೀತಿ ತೋರುತ್ತಿತ್ತು ನನ್ನ ಕೈಕಾಲೆಲ್ಲ ನೋಯುತ್ತೇಂತ ಅದಕ್ಕೇನು ಗೊತ್ತು.

ಇಲ್ಲಿ ಅದೃಷ್ಟ ಕೈ ಕೊಡಲಿಲ್ಲ... ಅಡುಗೆ ಮನೆಗೆ ನುಗ್ಗಿ ನೋಡಿದಾಗ ಅನ್ನ ಸಾರಿತ್ತು. ಹಸಿವು ಬಾಯಾರಿಕೆಯಿಂದ ಬರಗೆಟ್ಟು ಹೋಗಿದ್ದ ನಂಗೆ ಯಾಕೋ ಅಂದುಕೊಂಡಂತೆ ಉಣ್ಣಲೇ ಆಗಿಲ್ಲ! ಒಂದಿಷ್ಟು ಉಂಡಂತೆ ಮಾಡಿ ಮತಗಟ್ಟೆಗೆ ನಡೆದು ನನ್ನ ಹಕ್ಕು, ನನ್ನ ಪರಮೋಚ್ಛ ಅಧಿಕಾರವನ್ನು ಚಲಾಯಿಸಿದೆ. "ಯಾರು ಗೆದ್ರೂ ಯಾರೂ ಸೋತ್ರೂ ನಂಗೇನು... ನಾನು ತಿನ್ಬೇಕಿದ್ರೆ ನಾನು ದುಡೀಬೇಕು" ಅನ್ನೋದು ನನ್ನ ಮಾಮೂಲಿ ಡಯಲಾಗ್. ಇಷ್ಟೆಲ್ಲ ಅನುಭವ ಹೊತ್ತು ವೋಟ್ ಮಾಡಿದ ಮರುದಿನ ಮಾತ್ರ ಭುಜ, ರಟ್ಟೆ, ಬಸ್ಸಿನ ಬಾಗಿಲು ಬಡಿದ ಕೈ ಹೈರಾಣಾದ ದೇಹ ಮತ್ತು ಇದಕ್ಕೆ ಕಳಶವಿಟ್ಟಂತೆ ಹಳೆಯ ಭುಜದ ನೋವೂ ಎಲ್ಲ ಸೇರಿಕೊಂಡು ನೋಯುತ್ತಾ ನೀನು ವೋಟ್ಮಾಡಿದ ಪ್ರತಿಫಲ ಅನ್ನುತ್ತಿವೆ....

ಕೆಲವೆಡೆ ಒಂದು ವೋಟಿಗೆ ಇಷ್ಟೆಂದು ನೋಟು ಕೊಡ್ತಾರಂತೆ.... ನಾನು ಮಾತ್ರ ನೋಟು ಕಳಕೊಂಡು.... ನೋವುಂಡು.....
(15-5-18 ರಂದು ಅವಧಿಯಲ್ಲಿ ಪ್ರಕಟಿತ  http://avadhimag.com/?p=198188 )