ಗುರುವಾರ, ಡಿಸೆಂಬರ್ 20

ಮೋತಿಯ ಮೂತಿಯ ಮೇಣ ತೆಗೆಯಲು..........

ಹೊಟ್ಟೆ ತುಂಬಾ ಹಲಸಿನ ಹಣ್ಣು ತಿಂದು ಬಂದ ನಮ್ಮ ಮೋತಿ ಕಂಯ್ಕ್...ಕುಂಯ್ಕ್... ಅನ್ನುತ್ತಾ ನಿಂತಲ್ಲಿ ನಿಲ್ಲಲಾರದೆ ಅತ್ತಿತ್ತ ಓಡಾಡುತ್ತಿತ್ತು. ನಾನು ದೊಡ್ಡ ವೈದ್ಯಳಂತೆ ಹಲಸಿನ ಹಣ್ಣು ತಿಂದು ನಾಯಿಗೆ ಉಬ್ಬಸದಿಂದಾಗಿ ಹೊಟ್ಟೆ ಬೇನೆ ಶುರುಹತ್ತಿದೆ ಅಂತ ನಿರ್ಧರಿಸಿದೆ. ಅಡುಗೆ ಮನೆಗೆ ಓಡಿ ಹೋಗಿ ಅವ್ವನಿಗೆ ಕಾಣದಂತೆ ಎರಡು ಬೆಳ್ಳುಳ್ಳಿ ಎಸಳು ತಂದು ಅದರ ಬಯಿಯ ಬಳಿ ಹಾಕಿ ಹುಂ... ತಕೋ ಅಂತ ಹೇಳಿದೆ. ಆದರೆ ಮೋತಿ ನನ್ನನ್ನು ಮೇಲಿಂದ ಕೆಳಕ್ಕೆ ನೋಡುತ್ತಿದೆಯೇ ವಿನಹ ಏನಾದರೂ ತಿಂಡಿ ಹಾಕಿದ ತಕ್ಷಣ ಗಬಕ್ಕನೆ ಬಾಯಿಗೆ ಹಾಕುವಂತೆ ಆತುರ ತೋರುತ್ತಿಲ್ಲ. ಕನಿಷ್ಟ ಪಕ್ಷ ಮೂಸಿ ಸಮೇತ ನೋಡುತ್ತಿಲ್ಲ. 'ಅಬ್ಬ ನಿನ್ನ ಆಂಕಾರವೇ' ಅನ್ನುತ್ತಾ ಅದರ ಕುತ್ತಿಗೆಯಲ್ಲಿ ಹಿಡಿದು ಮತ್ತೊಮ್ಮೆ ತಕೋ ಅಂದೆ. ದಯನೀಯ ಮುಖ ಮಾಡಿ ನನ್ನನ್ನು ನೋಡುತ್ತಿದೆಯೇ ವಿನಹ ನಾನು ನೀಡಿದ 'ಮದ್ದು' ತಿನ್ನಲು ಮುಂದಾಗುವುದಿಲ್ಲ.

ನಂಗೆ ಹೊಟ್ಟೆ ನೋವಾದಾಗೆಲ್ಲ "ಅವ್ವಾ... ಹೊಟ್ಟೆ ನೋವೆಂದು" ಹೇಳಿದರೆ, ಅವ್ವ ಬೆಳ್ಳುಳ್ಳಿ ಎಸಳು ನೀಡಿ ತಿನ್ನು ಅನ್ನುತ್ತಿದ್ದರು. ಜಾಸ್ತಿ ಹಠ ಮಾಡಿದರೆ ಏಟು ಬೀಳುತ್ತದೆ ಎಂಬ ಭಯಕ್ಕೆ ಖಾರಖಾರ ಬೆಳ್ಳುಳ್ಳಿಯನ್ನು ತಿಂದು "ಹೊಟ್ಟೆನೋವು ಹೋಯ್ತು....." ಅಂತಿದ್ದೆ. ಹಾಗೆ, ನಂಗೆ ಗೊತ್ತಿದ್ದ ವೈದ್ಯವನ್ನೇ ಮೋತಿ ಮೇಲೆಯೂ ಪ್ರಯೋಗಿಸಿ ಫಲಿತಾಂಶಕ್ಕೆ ಕಾದರೆ ಮೋತಿ ಬಾಲ ಅಲ್ಲಾಡಿಸುತ್ತದೆಯೇ ವಿನಹ ಬೆಳ್ಳುಳ್ಳಿ ತಿನ್ನಲು ಮುಂದಾಗುವುದಿಲ್ಲ.(ಆ ವಯಸ್ಸಿನಲ್ಲಿ ಅದನ್ನು ಮೋತಿ ತಿನ್ನುತ್ತದೆಯೋ ಇಲ್ಲವೋ ಎಂಬ ಅರಿವೂ ನನಗಿರಲಿಲ್ಲ).

ಈ ಮೋತಿ ನನ್ನ ದೋಸ್ತಿಗಳಾಗಿದ್ದ ಟಾಮಿ ಮತ್ತು ಜೂಲಿಯ ಅಮ್ಮ. ಟಾಮಿ ಮತ್ತು ಜೂಲಿ ನನಗೆಷ್ಟು ಆತ್ಮೀಯರೆಂದರೆ ನಾನು, ಟಾಮಿ, ಜೂಲಿ ಮತ್ತು ಬಿಲ್ಲಿ(ಮಿಯಾಂ) ಒಂದೇ ಚಾಪೆಯಲ್ಲಿ ಮಲ್ಕೊಳ್ಳುತ್ತಿದ್ದೆವು. ಒಂದು ಸೈಡಲ್ಲಿ ಟಾಮಿ, ಕಾಲ ಬಳಿ ಜೂಲಿ, ಇನ್ನೊಂದು ಬದಿ ಬಿಲ್ಲಿ. ಮಧ್ಯರಾತ್ರಿ ಹೊದಿಕೆ ವಸ್ತ್ರ, ಅಂಗಿಯತುದಿ ಎಲ್ಲಾ ಒದ್ದೆಯಾಗಿರುವ ಕಾರಣ ಹೊದಿಕೆ ಜಾರಿ ಅವುಗಳ ಮೇಲೆ ಬೀಳುತ್ತಿತ್ತು. ಇವುಗಳೂ ಅಷ್ಟೇ ಚಾಕಚಕ್ಯತೆಯಿಂದ ಅದನ್ನು ಬದಿಗೆ ಸರಿಸಿ ಸುರುಟಿ ಮುರುಟಿ ಮಲಗಿಕೊಳ್ಳುತ್ತಿದ್ದವು. ಎಚ್ಚರವಾಗುವಾಗ ನಾನು 8 ಬರೆದಂತೆ ಮುರುಟಿ ಇರುತ್ತಿದ್ದೆ.

ನನ್ನ ಗಾಯತ್ರಕ್ಕ ಗುಡಿಸಿಕೊಂಡು ಬರುವತನಕ ನಾವುಗಳ್ಯಾರೂ ಏಳುತ್ತಿರಲಿಲ್ಲ. ನಮ್ಮೆಲ್ಲರನ್ನು ಆಕೆ ಬಲಗೈಲಿ ಪೊರಕೆ ಹಿಡಿದಂತೆಯೇ ಎಡಗೈಲಿ ಎಳೆದೆಳೆದು ಹಾಕುತ್ತಿದ್ದಳು. ನಾಯಿಮರಿಗಳನ್ನು ಎಳೆದು ಬಿಸಾಡಿದರೂ, ಅವು ಉರುಳಿರುಳಿ ಮತ್ತೆ ಎದ್ದು ನನ್ನ ಬಳಿ ಬರುವಾಗ ನನ್ನ ಕರುಳು ಕಿವುಚಿದಂತಾಗುತ್ತಿತ್ತು. ಇದರಿಂದುಂಟಾಗುವ ಅಪರಿಮಿತ ದುಃಖದಿಂದಲೂ, ಅಕ್ಕನನ್ನು ಎದುರಿಸಲಾಗದ ಹತಾಶೆಯಿಂದಲೂ ನನ್ನ ದಿನ ಅಳುವಿನಿಂದಲೇ ಪ್ರಾರಂಭಗೊಳ್ಳುತ್ತಿತ್ತು.
ಹೀಗೆ ಒಂದು ದಿನ ಗಾಯತ್ರಕ್ಕೆ ರಪರಪನೆ ಗುಡಿಸಿಕೊಂಡು ಬರುವಾಗ ನನ್ನ ಚಾಪೆಯ ಬಳಿಯಲ್ಲಿ 'ಅಲಸಂಡೆ'ಯೊಂದು ಬಿದ್ದಿತ್ತು. ಆಕೆ ಅವ್ವಾ ನೋಡಿ ಶಾನಿ...ಅಲಸಂಡೆ... ಅಂತ ದೂರು ಕೊಡುತ್ತಿರುವಂತೆಯೇ ತಣ್ಣತಣ್ಣಗಿದ್ದ ಅಲಸಂಡೆ ಯಾಕೋ ಮಿಸುಕಾಡಲಾರಂಭಿಸಿತ್ತು. ಕಿರುಚಿಕೊಂಡ ಆಕೆ 'ಅಲಸಂಡೆ'ಯನ್ನು ಅಲ್ಲೇ ದೊಪ್ಪನೆ ಹಾಕಿದಳು. ಅಷ್ಟರಲ್ಲಿ ನಾನು ಮತ್ತು ನನ್ನ ಬಳಗವನ್ನು ಆಕೆ ಎಳೆದೆಳೆದು ಹಾಕಿಯಾಗಿತ್ತು. ಅದು ಹಳ್ಳಿಗಳಲ್ಲಿ, ತೋಟದಲ್ಲಿ ಕಂಡುಬರುವ ಕಪ್ಪು, ಬಿಳಿ, ಮರೂನ್ ಬಣ್ಣದ ಹಾವಾಗಿತ್ತು. ಅಲಸಂಡೆ ಸೈಝಿನಲ್ಲಿದ್ದ ಕಾರಣ ಅಕ್ಕನಿಗೆ ಕನ್‌ಫ್ಯೂಸ್ ಆಗಿ ಅಲಸಂಡೆ ಅಂದಿದ್ದಳು.

ಅದು ಬಿಲ್ಲಿ ಮಹಾರಾಯ್ತಿಯ ಬೇಟೆ; ಅರೆ ಜೀವವಾಗಿ ಚಾಪೆಯಡಿ ಬಿದ್ದಿತ್ತು. ಇದಾದ ನಂತರ ಬಿಲ್ಲಿಗೆ ನನ್ನ ಚಾಪೆಗೆ ಎಂಟ್ರಿ ಇರಲಿಲ್ಲ. ನಾನು ನಿದ್ರಿಸಿದ ನಂತರ ಬಿಲ್ಲಿ, ಟಾಮಿ, ಜೂಲಿಗಳೆಲ್ಲವನ್ನೂ ಅಮ್ಮ ಹೊಡೆದೋಡಿಸುತ್ತಿದ್ದರು. ಆದರೂ ಅವುಗಳೆಲ್ಲ ಮಧ್ಯರಾತ್ರಿ ಹೇಗೋ ಬಂದು ನನ್ನ ಚಾಪೆಯನ್ನು ಹುಡುಕಿ ನೆಲೆ ಕಂಡುಕೊಳ್ಳುತ್ತಿದ್ದವು.

ಆ ಸಂದರ್ಭದಲ್ಲಿ ನನ್ನ ಮಾತು ಕೇಳುತ್ತಿದ್ದದ್ದು ಅವೆರಡು ನಾಯಿಮರಿಗಳು ಮಾತ್ರ. ಮತ್ತೆ ಯಾರಬಳಿಯೂ ನನ್ನ ಜಬರ್‌ದಸ್ತ್ ನಡೆಯುತ್ತಿರಲಿಲ್ಲ. ನಮ್ಮ ಮನೆ ಪಕ್ಕದ ಶ್ರೀಮಂತರ ಮನೆಯೊಂದರಲ್ಲಿ ಇದ್ದ ಚಂದದ (ಪಮೇರಿಯನ್) ಸೊಂಟ ಬಳಕಿಸುವ ನಾಯಿಯನ್ನು ಅವರ ಮಗ ಒಂದು ದಿನ 'ಕಾಮಿಯಾ' ಅಂತ ಕರೆಯುತ್ತಿರುವುದು ಕೇಳಿಸಿತ್ತು. ಅಲ್ಲಿಗೆ ಹೋಗಿದ್ದ ನಾನು ಅದರ ಹೆಸರು ಕಾಮಿಯಾವಾಂತ ಆ ಮನೆಯ ಯಜಮಾನಿಯನ್ನು ಕೇಳಿದ್ದೆ. ಅದಕ್ಕೆ ಅವರು(ವರಸೆಯಲ್ಲಿ ನನಗೆ ಅತ್ತೆ) ನಗುತ್ತಾ ಅಲ್ಲ 'ಕಂ ಹಿಯರ್' ಅಂದರೆ ಇಂಗ್ಲೀಷಿನಲ್ಲಿ 'ಇಲ್ಲಿ ಬಾ' ಅಂತ ಹೇಳಿಕೊಟ್ಟರು.

ಅಲ್ಲಿಂದ ಬಂದ ನಂತರ ನನಗೂ, ನನ್ನ ನಾಯಿಗಳಿಗೆ ಹೇಗಾದರೂ ಮಾಡಿ ನನಗೆ ಗೊತ್ತಿರುವ ಈ ಇಂಗ್ಲೀಷ್ ಕಲಿಸಲೇಬೇಕೆಂಬ ಹಠ ಹುಟ್ಟಿಕೊಂಡಿತ್ತು. ಹಾಗಾಗಿ ಟಾಮಿ ಮತ್ತು ಜೂಲಿಯನ್ನು ಹೊಡೆದು ದೂರ ಓಡಿಸಿ, ಕಂ.. ಕಂ.. ಅಂತ ಬಳಿಗೆ ಕರೆದು, ಕಂ ಅಂದರೆ ಬರಬೇಕು ಎಂಬ ಶತಪ್ರಯತ್ನ ಮಾಡಿ ಅಮ್ಮನಿಗೂ ನಾಯಿಮರಿಗಳನ್ನು ಕಂ ಅಂತಲೇ ಕರಿಬೇಕು ಎಂದು ತಾಕೀತು ಮಾಡಿದ್ದೆ. ಅವ್ವನಿಗೆ ಕೆಲಸದ ಗಡಿಬಿಡಿಯಲ್ಲಿ ಇಂಗ್ಲೀಷ್ ಪಂಗ್ಲೀಷ್‌ಗಳೆಲ್ಲ ಮರೆತುಹೋಗಿ ಅವರು ಮಾತ್ರ ಮಾಮೂಲಿನಂತೆ "ಕೂರಿ, ಕೂರಿ" ಅಂತಲೇ ಕರೆಯುತ್ತಿದ್ದರು. ಆಗೆಲ್ಲ ಛೇ.. ನನ್ನ ದೋಸ್ತಿಗಳಾಗಿರುವ ಟಾಮಿ, ಜೂಲಿಗೆರಡು ಇಂಗ್ಲಿಷ್ ಕಲಿಸುವ ಅಂದರೆ ಈ ಅವ್ವ ಸಹಕರಿಸುತ್ತಿಲ್ಲವೇ.. ಎಂಬ ಸಂಕಟವಾಗುತ್ತಿತ್ತು.

ಇಂಥ ಅಟ್ಯಾಚ್‌ಮೆಂಟಿರವ ಜೂಲಿ ಟಾಮಿಯ ಅಮ್ಮನಿಗೆ ಏನೋ ಆಗಿರುವುದು ನನಗೆ ನಿಜಕ್ಕೂ ಕಾಳಜಿ ಕೆರಳಿಸಿತ್ತು. ಹಾಗೆ ನೋಡಿದರೆ ಮೋತಿ ಒಂದು ತರದಲ್ಲಿ ವಿಲನ್. ಯಾಕೆಂದರ್ ವಿದ್ಯುತ್ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಮಿಣುಕು ಚಿಮಿಣಿ ಬಡ್ಡಿಯೇ ಬೆಳಕು. ಹೀಗೆ ಅರ್ಧ ಕತ್ತಲು ಅರ್ಧ ಬೆಳಕಿರುವಾಗ ನಮ್ಮ ಮನೆಯಲ್ಲಿದ್ದ ಏಕೈಕ ಪೀಠೋಪಕರಣವಾಗಿದ್ದ ಒಂದು ಮರದ ಬೆಂಚಿನಡಿಯಲ್ಲಿ ಅದು ಕಣ್ಣು ಪಿಳುಕಿಸುತ್ತಾ ಮಲಗಿರುತ್ತಿತ್ತು. ಕತ್ತಲಲ್ಲಿ ಹೊಳೆಯುವ ಅದರ ಹಸಿರು ಕಣ್ಣನ್ನು ನೋಡಿದರೆ ನಂಗೆ ವಿಪರೀತ ಭಯ. ಮುಸ್ಸಂಜೆ ಹೊತ್ತಿಗೆ ಹಸಿವು ಭರಿತ ನಿದ್ದೆ ತೂಗಲಾರಂಭಿಸುವ ನಾನು ಸಿಕ್ಕಾಪಟ್ಟೆ ಹಠಮಾಡುತ್ತಾ ಅಳುತ್ತಿದ್ದಾಗ ನನ್ನನ್ನು ಸಮಾಧಾನಿಸಲಾಗದಿದ್ದರೆ, ಅಮ್ಮನಂತೆ ಸಲಹುತ್ತಿದ್ದ ನನ್ನ ಸಣ್ಣಕ್ಕ ಮೆಲ್ಲನೆ, ಅಲ್ಲಿನೋಡು ಅನ್ನುತ್ತಾ ಆ ನಾಯಿಯ ಕಣ್ಣನ್ನು ತೋರಿಸುತ್ತಿದ್ದಳು. ಆ ಭಯಕ್ಕೆ ನನ್ನ ಅಳು ಬಂದ್ ಆಗಿ ಗಪ್‌ಚಿಪ್ ಆಗುತ್ತಿದ್ದೆ.

ಅದರ ಕಣ್ಣು ಪಿಣಿಪಣಿ, ಅದೇನಿದ್ದರೂ ರಾತ್ರಿಯ ಮಲಾಮತ್ತು. ಹಗಲು ಅದೆಲ್ಲ ನೆನಪಾಗುತ್ತಿರಲಿಲ್ಲ. ಈ ನಾಯಿಗೆಂಥ ಕಾಯಿಲೆ ಬಂದಿದೆಯಪ್ಪಾ ಅಂತ ನನ್ನ ಪುಟ್ಟ ತಲೆಗೆ ಅಲೋಚನೆ ಹೊಕ್ಕಿತ್ತು. ಕಡೆಗೆ ಸೂಕ್ಷ್ಮವಾಗಿ ಅದರ ಬಾಯಿಯ ಬಳಿ ಗಮನಿಸಿದಾಗ ಅದರ ಬಾಯಿ ಬಲವಂತದಿಂದ ಬಂದ್ ಆಗಿತ್ತು. ಬೆಣ್ಣೆಯಂಥ ರುಚಿರುಚಿಯ ಹಲಸಿನ ಹಣ್ಣು ಬೀಳುತ್ತಲೇ ಅದರ ಶಬ್ದಕ್ಕೆ ಓಡಿ ತಾಜಾ ಹಣ್ಣನ್ನು ಇಡಿಯಾಗಿ ಕಬಳಿಸಿತ್ತು.

ಹೊಟ್ಟೆಬಾಕ ಮೋತಿ ಗಬಗಬನೆ ಕಬಳಿಸುವಾಗ ಮೇಣವೆಲ್ಲ ಅದರ ಬಾಯಿಸುತ್ತ ಇರುವ ರೋಮಕ್ಕೆ ಅಂಟಿಕೊಂಡು ಅದರ ಮೂಗಿನಿಂದ ಹಿಡಿದು ಕೆಳದವಡೆಯ ತನಕ ಅಂಟಿ ಹೋಗಿತ್ತು. ಅದನ್ನು ಬಿಡಿಸಿಕೊಳ್ಳಲು ತನ್ನ ಮೂತಿಯನ್ನು ಹುದುಗಿಸಿ ತಿಕ್ಕಿದ ಪರಿಣಾಮ ಒಂದೆರಡು ತರಗೆಲೆ, ಮಣ್ಣು ಹುಲ್ಲು ಎಲ್ಲ ಅಂಟಿಕೊಂಡು ಅದರ ಬಾಯಿಗೆ ವಾಶರ್ ಹಾಕಿದಂತಾಗಿತ್ತು. ಒಟ್ಟಾರೆ ಮೋತಿಯ ಮುಖದ ರೂಪ ವಿಚಿತ್ರವಾಗಿತ್ತು.

ನನ್ನನ್ನು ನೋಡುತ್ತಾ ಅದರ ಕೈಗಳಿಂದ ನನ್ನ ಕಾಲನ್ನು ಪರಡುತ್ತಾ ಸಹಾಯ ಯಾಚಿಸುತ್ತಿತ್ತು. ವೋ... ಇದ್ಕೆ ಹೊಟ್ಟೆ ನೋವಲ್ಲ ಬಾಯಿ ಬಂದ್ ಆಗಿದೆ, ಮೇಣ ಮೆತ್ತಿಕೊಂಡಿದೆ ಅಂತ ಗೊತ್ತಾಯ್ತು. ಅದರೆಡೆಯಲ್ಲೂ ಮೋತಿಯ ಮೇಲೆ ಕೋಪ ಬರದಿರಲಿಲ್ಲ. ಯಾಕೆಂದರೆ ಅದು ಕದ್ದು ತಿಂದದ್ದು ನನ್ನ ಫೇವರಿಟ್ ಮರದ ಹಲಸಿನ ಹಣ್ಣು. ನಮ್ಮ ಮನೆಯಲ್ಲಿರುವ ಹಲಸಿನ ಮರಕ್ಕೆಲ್ಲ ಒಂದೊಂದು ಹೆಸರಿದೆ. ಯಾಕೆಂದರೆ ಒಂದೊಂದು ಮರದ ಫಲಕ್ಕೂ ಒಂದೊಂದು ಸ್ಪೆಷಾಲಿಟಿ. ಒಂದು ಮರ ಹಪ್ಪಳಕ್ಕೆ ಫೇಮಸ್. ಇನ್ನೊಂದು ಪಾಯಸಕ್ಕೆ, ಮತ್ತೊಂದು ಉಪ್ಪು ನೀರಲ್ಲಿ ಹಾಕಿಡಲು, ಮಗದೊಂದು ಸೋಳೆ ಒಣಗಿಸಲು. ಮೂಲೆ ಮರ ಬೇಯಿಸಿ ತಿನ್ನಲು, ಅದರಾಚೆಯದ್ದು ಪದಾರ್ಥಕ್ಕೆ... ಹೀಗೆ ಮರಗಳನ್ನು ಗುರುತಿಸುವುದೇ ಅದರ ವೈಶಿಷ್ಠ್ಯದಿಂದ.

ಈ ನಾಯಿ ಕದ್ದು ತಿಂದ ಮರದ ಹಲಸಿನ ಹಣ್ಣಂತೂ ಅಬಾಲವೃದ್ಧರಾಧಿಯಾಗಿ ಪ್ರೀತಿಸಬೇಕಾದದ್ದೇ. ಯಾಕೆಂದರೆ ಬೆಣ್ಣೆಯಂತಿರುವ ಅದರ ಸೋಳೆಗಳು ಬಾಯಿಗಿಟ್ಟ ತಕ್ಷಣ ಕರಗುವ ಕಾರಣ 'ಬುಳುಂಕ್ ಬುಳುಂಕ್' ಅಂತ ನುಂಗುವುದೇ ಅದರ ಗಮ್ಮತ್ತು.
ಅದೆಲ್ಲ ಹಾಳಾಗ್ಲಾಚೆ. ಈಗ ನಾಯಿಗೇನಾದರೂ ಮಾಡಬೇಕಲ್ವಾ ಅಂತ ಯೋಚಿಸಿದೆ. ಮೇಣ ತೆಗೆಯಲು ಸುಲಭೋಪಾಯ ಕಣ್ಣಮುಂದೆ ಬಂತು. ಹಲಸಿನ ಕಾಯಿ ಕತ್ತರಿಸಿದ ಬಳಿಕ ಮೇಲೆ ಅಮ್ಮ ಕತ್ತಿಯನ್ನು ಒಯ್ದು ಒಲೆಯಲ್ಲಿನ ಬೆಂಕಿಗೆ ಹಿಡಿದಾಗ ಝಂಯ್ ಝಂಯ್ ಸದ್ದಿನೊಂದಿಗೆ ಮೇಣ ಕರಗುವ ದೃಶ್ಯ ಕಣ್ಣ ಮುಂದೆ ಬಂದಿದ್ದೇ, ಮೋತಿಗೆ ಇಲ್ಲೇ ಇರು ಈಗ ಬಂದೆ ಅಂತಂದೆ.
ಒಳಗೆ ಹೋಗಿ ಸೀಮೆಎಣ್ಣೆ ಬುಡ್ಡಿಯನ್ನು ಉರಿಸಿ ತಂದು ಮೋತಿಯನ್ನು ಎಷ್ಟು ಸಾಧ್ಯವೋ ಅಷ್ಟು ಶಕ್ತಿಯಿಂದ ಒತ್ತಿ ದೀಪದ ಜ್ವಾಲೆಯನ್ನು ಅದರ ಮುಖಕ್ಕೆ ಹಿಡಿದೆ. ಮೋತಿಗೆ ಏನಾಗುತ್ತದೆ ಎಂಬ ಅರಿವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ಅದರ ಮುಖಕ್ಕಂಟಿದ್ದ ತರಗೆಲೆ ಚಟ್ ಪಟ್ ಅಂತ ಸದ್ದುಮಾಡಿತು. ಇನ್ನೇನು ಝಂಯ್ ಝಂಯ್ ಸದ್ದು ಬರುತ್ತದೆ, ಮೇಣ ಕೆಳಗೆ ಸುರಿಯುತ್ತದೆ ಅನ್ನುತ್ತಾ ನಾನು ನಿರೀಕ್ಷಿಸುತ್ತಿದ್ದರೆ ಅದರ ರೋಮ ಸುಟ್ಟ ಭಯಂಕರ ವಾಸನೆ ಹೊರಟಿತು. ನನ್ನ ಕೈಯಲ್ಲಿದ್ದ ನಾಯಿ ಕೊಸರಾಡುತ್ತಾ ತಿರುಗಿ ನಂಗೆ ಕಚ್ಚಿ ಒಂದೇ ಏಟಿಗೆ ಬಾಯಿ ತೆರೆದು ಬೊಬ್ಬೆ ಹೊಡೆಯುತ್ತಾ ನೋವು ಸಹಿಸಿಕೊಳ್ಳಲಾರದೆ ಕೆಳಗಿನ ತೋಟಕ್ಕೆ ಓಡಿತು.

ನಾಯಿ ಕೊಸರಾಡಿ ತಿರುಗಿ ನಂಗೆ ಕಚ್ಚುವಾಗ ನನ್ನ ಕೈಲಿದ್ದ ದೀಪ ನನ್ನ ಕಾಲ ಮೇಲೆ ಬಿತ್ತು. ಸದ್ಯ ಅದು ನಂದಿ ಹೋಯಿತು. ನಾಯಿಯ ಬೊಬ್ಬೆ, ನನ್ನ ಕಿರುಚಾಟ ಎಲ್ಲ ಕೇಳಿ ಒಳಗಿದ್ದ ಸಣ್ಣಕ್ಕ, ಅವ್ವ ಮಗೂಗೇನಾಯ್ತೋ ಎಂಬ ಧಾವಂತದಲ್ಲಿ ಓಡಿ ಬಂದು, ಏನಾಯ್ತು ಅಂತ ಕೇಳಿದಾಗ ಮೋತಿ ಕಚ್ಚಿತು ಅಂತ ಬೆಂರ್ರೇ..... ಎಂದು ಅಳಲಾರಂಭಿಸಿದೆ. ಅದು ಬುದ್ಧಿಯ ಮೋತಿ. ಅದರ ಬಾಯಿಯೊಳಗೆ ಬೆರಳು ತುರುಕಿಸಿದರೂ ಕಚ್ಚದ ಮೋತಿ ಏಕಾಏಕಿ ಇವಳಿಗೇಕೆ ಕಚ್ಚಿತು ಅಂತ ಅವ್ವನಿಗೆ ಅಚ್ಚರಿ. ಉರುಳಿ ಬಿದ್ದಿದ್ದ ದೀಪ, ಚೆಲ್ಲಿ ಹೋಗಿದ್ದ ಸೀಮೆಎಣ್ಣೆ ಎಲ್ಲವೂ ಏನೋ ನಡೆದಿದೆ ಅಂತ ಕಥೆ ಹೇಳಿದವು. ಏನಾಯಿತು, ಏನು ಮಾಡ್ದೆ ಮೋತಿಗೆ ಅಂತ ಗದರಿದರು. ನಾನು ನನ್ನ ಬಾಲಬಾಷೆಯಲ್ಲಿ ಮೋತಿಯ ಮೂತಿಯ ಮೇಣ ತೆಗೆಯಲು ಬೆಂಕಿ ಇಕ್ಕಿದ್ದಾಗಿ ಹೇಳಿದೆ.

ನನ್ನ ಕಚೇರಿಯಲ್ಲಿ ನನಗೊಬ್ಬ ಪುಟ್ಟ ಗೆಳತಿ ಇದ್ದಾಳೆ. ನಾಯಿ-ಬೆಕ್ಕೆಂದರೆ ಅಪರಿಮಿತ ಪ್ರೀತಿ. ಆಕೆ ಯಾವುದೇ ಕಂಪ್ಯೂಟರಿನಲ್ಲಿ ಕೂತರೂ ಬೆಕ್ಕುಗಳ ಒಂದು ಝಿಪ್ ಫೈಲ್ ಅಲ್ಲಿ ಇನ್‌ಸ್ಟಾಲ್ ಆಯ್ತು ಅಂತ ಲೆಕ್ಕ. ಇಂತಿಪ್ಪ ಅವಳು ಅದೊಂದು ದಿನ ಚಿಕ್ಕ ಮುಖ ಮಾಡಿದ್ದಳು. ಏನಾಯ್ತೇ..... ಅಂತ ಕೇಳಿದರೆ, ಹೂತು ಹೋದ ದನಿಯಿಂದ ಏನಿಲ್ಲ ಅಂತ ಸುಮ್ಮನಾದಳು. ನಾನು ಅಷ್ಟಕ್ಕೆ ಸುಮ್ಮನಾಗಲಾಗುತ್ತದಾ...? ತನಿಖೆ ಮಾಡಿದೆ. ಗೊತ್ತಾದ ವಿಚಾರವೆಂದರೆ, ಆಕೆಯ ಅಣ್ಣ ಊರಿಗೆ ಹೋದವರು ಹಿಂತಿರುಗಿ ಬರುವಾಗ ಬೆಕ್ಕು, ನಾಯಿಯ ಫೋಟೋ ತನ್ನಿ ಎಂಬ ಈಕೆಯ ವಿನಂತಿಯನ್ನು ಮನ್ನಿಸಿರಲಿಲ್ಲ.

ಯಾಕೆ ಪೊಟೋ ತೆಗೆದಿಲ್ಲ ಎಂಬುದಕ್ಕೆ, ಬೆಕ್ಕಿನ ಪೋಟೋ ತೆಗೆಯಲು ನಾಯಿ ಬಿಟ್ಟಿಲ್ಲ. ನಾಯಿ ಪೋಟೋ ತೆಗೆಯಲು ಬೆಕ್ಕು ಅಡ್ಡಬಂತು ಎಂಬ 'ಬೊಗಳೆ' ಬಿಟ್ಟಿದ್ದರು. ಅದಕ್ಕೆ ನಮ್ಮ ಸಹೋದ್ಯೋಗಿ ಮಿತ್ರ ತ್ರಾಸಿ, ಪಕ್ಕಾ ಕುಂದಾಪುರ ಆಕ್ಸೆಂಟಲ್ಲಿ ಹೌದೌದು.... ನಾಯಿ ಭಯಂಕರ ಜೋರು ಅಂತ ಒಗ್ಗರಣೆ ಹಾಕಿದ್ದರು. ಹೀಗೆ ಅಲ್ಲಿದ್ದ ಎಲ್ಲರೂ ತಲೆಗೊಂದರಂತೆ ಸಲಹೆ ಸೂಚನೆ ಕೊಡುತ್ತಿರುವಾಗ ಮಾತು ಬೆಕ್ಕಿಗೆ ಭಾಷೆ ಕಲಿಸುವಲ್ಲಿಗೆ ಬಂತು. ನಾನು ಸುಮ್ಮನಿರಲಾಗುತ್ತದಾ, ತಮಿಳ್ನಾಡಲ್ಲಿರುವ ನೀನು, ನಿನ್ನ ನಾಯಿ-ಬೆಕ್ಕುಗಳಿಗೂ ನಿನ್ನ ಹರಕು ತಮಿಳು ಕಲಿಸು ಅಂದೆ. ಪುತಕ್ಕನೆ ನಕ್ಕಳು ಹುಡುಗಿ.

ಇಷ್ಟೆಲ್ಲ ಆಗುವಾಗ ನನ್ನ ಈ ಹಳೆಯ ಪ್ರವರ ನೆಂಪಾಯಿತು ನೋಡಿ. ಅಷ್ಟೆ!

ಶನಿವಾರ, ಡಿಸೆಂಬರ್ 1

ಯುದ್ಧ ಮತ್ತು ಪ್ರೀತಿಯಲ್ಲೀ........

ಬಲ್ಲಿರೇನಯ್ಯಾ........?

ಈ ನರ್ಕಾಟಕದ ಸಂಸ್ಥಾನದ ಕೊನೆಯ ಅಧಿಪತಿ ಯಾರೆಂದು ಕೇಳಿಬಲ್ಲಿರಿ............?
ರಾಡಿಯೂರಪ್ಪ ಎಂದು ಕೇಳಿ ಬಲ್ಲೆವು........

ಹಾಗೆಂದುಕೊಳ್ಳಬಹುದು......... ಹಾಗೆಂದುಕೊಳ್ಳಬಹುದು.... ಬಂತದಂತಹ ಕಾರ್ಯ..............?

ಏನೆಂದು ಹೇಳಲೀ..... ಇಲ್ಲ ಹಳಿಯಲೀ...... ನಮ್ಮ ಕರ್ಮವನ್ನೂ........ ಬಂದ ಕಾರ್ಯ ಅನೇಕವಿದೆ.... ಕೈಗೆ ಬಂದೂ...... ಬಾಯಿಗೆ ಹೋಗಿಯೂ... ಬಾಯಿಂದ ಪುತಕ್ಕೆಂದು ಉರುಳಿದ ತುತ್ತನ್ನು ಹೆಕ್ಕಬೇಕಿದೆ....... ನಮ್ಮ ನಾಟಕವನ್ನು ಬಿಟ್ಟಬಾಯಿ ಬಿಟ್ಟಂತೆ ನೋಡುತ್ತಿರುವ ಮತದಾರರನ್ನು ಓಲೈಸಬೇಕಿದೆ. ಯಾವುದೇ ಸಮಯದಲ್ಲೂ ಎದುರಾಗುವ ಚುನಾವಣೆಗೆ ಟೊಂಕ ಕಟ್ಟಬೇಕಿದೆ........ ನಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕಿದೆ.... ವೇದೇ ಡೌಗ ಮತ್ತು ಮಕ್ಕಳು ಕಂಪೆನಿಯ ಇರುವ, ಇಲ್ಲದ ಹುಳುಕುಗಳನ್ನು ಹೆಕ್ಕಿಹೆಕ್ಕಿ ಬಿಕ್ಕಬೇಕಿದೆ..... ಪಟ್ಟಿಮಾಡುತ್ತಾ ಹೋದರೆ ಅದೇ ಆದೀತೂ............ಕಾರ್ಯಗಳು ಅನೇಕ ಇವೆ....... ಅನೇಕ ಇವೆ.....

ಮುಂಜಾನೆಯ ಮೈಕೊರೆಯುವ ಚಳಿಯಲ್ಲಿ ಮಿಂದು, ಜ್ಯೋತಿಷರು ಹೇಳಿರುವ ವಿಧಾನದಲ್ಲಿ ಪೂಜಾ ವಿಧಾನಗಳನ್ನು ಸಂಪನ್ನಗೊಳಿಸಿ, ಸೂರ್ಯನಾದಿಯಾಗಿ ಮುಕ್ಕೋಟಿ ದೇವರುಗಳಲ್ಲಿ ಕೆಲವು ಪ್ರಮುಖ ದೇವರುಗಳನ್ನು ನಿರ್ದಿಷ್ಟವಾಗಿಯೂ, ಉಳಿದ ದೇವರುಗಳನ್ನು ಸಾಮೂಹಿಕವಾಗಿಯೂ ಪ್ರಾರ್ಥಿಸಿ, ಹಣೆಯಲ್ಲಿ ಜಾಗ ಇರುವಷ್ಟು ಮಟ್ಟಿಗೆ ಪ್ರಸಾದ, ಭಸ್ಮಗಳನ್ನು ಬಳಿದುಕೊಂಡದ್ದಾಯಿತು. ನಮ್ಮ ಘನತೆಗೆ ತಕ್ಕಂತೆ ಉಡುಪನ್ನು ಧರಿಸಿ ಇರುವ ಬೆಳ್ಳಿಕೂದಲನ್ನು ಒಪ್ಪವಾಗಿ ಹಿಂದಕ್ಕೆ ಬಾಚಿ ಉಪಹಾರವನ್ನು ಸೇವಿಸಿ ಸಭೆಗೆ ಬಂದು ಆಸನವನ್ನು ಅಲಂಕರಿಸಿ ಸಭೆಯತ್ತ ಒಂದು ದೃಷ್ಟಿಹರಿಸುತ್ತೇವೆ.......ಏನಿದು..... ಏನಿದು ಚೋದ್ಯ........? ಮೊನ್ನೆ ಮೊನ್ನೆ ನಾವು ಈ ನಾಡಿನ ಅಧಿಪತಿಯಾಗಿ ಅಧಿಕಾರ ಸ್ವೀಕರಿಸುವ ದಿನ ಇದ್ದ ಗೌಜಿ ಗದ್ದಲಗಳೆಲ್ಲಿ......? ಆ ಅಭಿಮಾನಿ ಸಂಕುಲವೆಲ್ಲಿ........? ಹಾರತುರಾಯಿಗಳೆಲ್ಲಿ.........? ಕೈಬೀಸುವ, ಕಾಲಿಗೆ ಬೀಳುವ, ಕೈಮುಗಿಯುವ ವಂಧಿ ಮಾಗದರೆಲ್ಲಿ.......... ಏಳೇ ದಿನ ಬಹುಪರಾಕ್ ಹೇಳಿದ ಭಟ್ಟಂಗಿಗಳೆಲ್ಲಿ......? ಆ ದಿನದ ನಮ್ಮ ಸಭೆಯ ಶೋಭೆ ಎಲ್ಲಿ......? ರಂಗು ಎಲ್ಲಿ....? ಶಿವಶಿವ ಏನು ನಿನ್ನ ಮಾಯೆ.....? ಏನು ನಿನ್ನ ಲೀಲೆ.........?

ರಾಡಿಯೂರಪ್ಪನವರೇ....... ನೀವು ಯಾರನ್ನು ಮಿತ್ರಪಕ್ಷವೆಂದು ಪರಿಗಣಿಸಿದ್ದೀರೋ ಅದರ ಮುಖಂಡರಿಗೆ ತನಗೆ, ತನ್ನ ಮಕ್ಕಳಿಗಲ್ಲದೆ ಇತರರಿಗೆ ಅಧಿಕಾರ ನೀಡಬಾರದು ಎಂಬ ಖಾಯಿಲೆ ಅಂಟಿಕೊಂಡಿರುವ ವಿಚಾರ ಆಬಾಲ ವೃದ್ದರಾದಿಯಾಗಿ ನಾಡಿಗೇ ತಿಳಿದ ವಿಚಾರ. ಇಂತಿಪ್ಪಗ, ನೀವು ಅವರನ್ನು ಹೇಗಾದರೂ ನಂಬಿದಿರಿ....? ಒಂದೊಮ್ಮೆ ಅವರು ನಿಮ್ಮ ಆಡಳಿತದ ಬಗ್ಗೆ ವಿಶ್ವಾಸ ತೋರ್ಪಡಿಸಿದ್ದರೂ ಒಂದಲ್ಲ ಒಂದು ದಿನ ಎಳೆದುರುಳಿಸುತ್ತಿದ್ದುದು ನಿಚ್ಚಳ. ಹಾಗಿದ್ದರೂ ಅವರನ್ನು ನಂಬಿ ಅವರ ತಾಳಕ್ಕೆ ತಕ್ಕಂತೆ ಇನ್ನಿಲ್ಲದ ತಾಳ್ಮೆಯಿಂದ ಕುಣಿಯುತ್ತಾ ಹೋಗಿರುವುದು ಅಧಿಕಾರಕ್ಕೇರಬೇಕೆಂಬ ಒಂದೇ ವಾಂಛೆಯೇ.....?

ಏನು ಮಾತೂಂತ ಆಡುತ್ತೀರಿ ಭಾಗವತರೇ......? ನಿಮ್ಮ ಕಣ್ಣಿಗೆ ಮುಳ್ಳಾಣಿ ಏನಾದರೂ ಬಡಿದಿದೆಯೇ......? ಅವರು ವಿಶ್ವಾಸ ದ್ರೋಹ ಮಾಡಿದಾಗ ನಾವು ಅವರನ್ನು ಧಿಕ್ಕರಿಸಿ ಬರಲಿಲ್ಲವೇ.......? ಅವರ ಮನ ಪರಿವರ್ತನೆ ಯಾಯಿತೆಂದು ಭಾವಿಸಿದ ನಾವು, ನಮ್ಮ ಮೈತ್ರಿಯ ಮುಂದುವರಿಕೆಗೆ ಅವರಿಗೊಂದು ಅವಕಾಶ ಕೊಟ್ಟೆವು. ಆದರೆ ಅವರ ಹುಟ್ಟಾ ಚಾಳಿಯದು ಮತ್ತೆ ಮೋಸ ಮಾಡಿದರು...... ನಾವು ಇನ್ನೆಂದಿಗೂ ಅವರೊಂದಿಗೆ ಮೈತ್ರಿ ಮಾಡಲಾರೆವು........

ಮಾಜಿ ಮುಕ್‌ಮಂತ್ರಿಗಳೇ, ಮಾಜೀ ಉಪಮುಕ್‌ಮಂತ್ರಿಗಳೇ.... ವೇದೇ ಡೌಗ...

ಅಯ್ಯೊಯ್ಯೋ.... ಎಲ್ಲಿ.... ಎಲ್ಲಿದ್ದಾರೆ ಡೌಗರು...... ಎಲ್ಲಿ ಬಂದರು.... ಇಲ್ಲಿದ್ದಾರೆಯೇ... ಎಲ್ಲಿ...ಎಲ್ಲಿ....?

ಅರೆರೆರೆರೆರೆರೆರೆರೇ..... ಡೌಗರು ಎಂದಾಗ ನೀವ್ಯಾಕೆ ಬೆಚ್ಚಿಬೆಚ್ಚಿ ಎದ್ದೆದ್ದು ಬೀಳುತ್ತೀರಿ......? ಅಲ್ಲಾ ಡೌಗರು ನಿಮಗೆ ಮಾಟ ಮಾಡಿದ್ದಾರೆ ಎಂದು ಹೇಳಿದ್ದೀರಿ.... ಮಾಟ - ಮಂತ್ರ - ಮಾಯೆ ಇವೆಲ್ಲವನ್ನೂ ಒಂದು ನಾಡಿನ ಅತ್ಯುನ್ನತ ಹುದ್ದೆಯನ್ನು ಏರಿ ಅದೇ ರಭಸಕ್ಕೆ ಇಳಿದ ನೀವು ನಂಬುತ್ತೀರೋ......? ಭಾಗವತರೆ...... ಇದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಡೌಗರ ಹೋಮ ಹವನ ಪೋಜೆ ಪುನಸ್ಕಾರಗಳು ಜಗತ್ಪ್ರಸಿದ್ಧ. ಅವುಗಳು ಪತ್ರಿಕೆಗಳ ಬಹುಭಾಗವನ್ನು ಆಕ್ರಮಿಸಿದ್ದು ನಿಮಗೆ ತಿಳಿಯದ ವಿಚಾರವೇ.....? ಹಾಗಿರುವಾಗ..... ತನ್ನ ಮಕ್ಕಳೇ ಅಧಿಕಾರದಲ್ಲಿರಬೇಕೆಂಬ ಏಕಂಶದ ಕಾರ್ಯಕ್ರಮದ ಡೌಗರು ಏನೂ ಮಾಡಿಯಾರು ಅನ್ನೋದು ನಿಮಗೆ ತಿಳಿಯದ ವಿಚಾರವೇನು......? ಯಾವುದೇ ಸ್ಥಾನ ಅಲಂಕರಿಸಿದರೇನಾಯಿತು.....? ನಮ್ಮನಮ್ಮ ಹುಟ್ಟುಗುಣಗಳು ಅಂತೆಂಬುದು ಘಟ್ಟಹತ್ತಿದರೂ ನಮ್ಮನ್ನು ಬಿಡವಂತೆ. ಬಲ್ಲವರು ಹೇಳಿದ್ದಾರೆ....

ರಾಡಿಯೂರಪ್ಪರೇ..... ನಿಮ್ಮಮುಂದೆ ಈಗ ಅನೇಕ ಸವಾಲುಗಳು ಬೆಟ್ಟದಂತೆ ನಿಂತಿವೆ. ಆದರೂ, ಡೌಗ ಮತ್ತು ಅವರ ಕಂಪೆನಿಯ ವಿರುದ್ಧ ಬಾಯಿಗೆ ಬಂದಂತೆ ಬಯ್ದು, ಯಾತ್ರೆ ಹೊರಟು, ಬೀದಿಯಲ್ಲಿ ಮಲಗಿ ಏನೆಲ್ಲಾ ಮಾಡಿದ್ದೀರಿ..... ಈ ನರ್ಕಾಟಕ ಈ ಹಿಂದೆ ಕಂಡು ಕೇಳರಿಯದ ನಾಟಕವನ್ನು ದಾಖಲಿಸಿತು. ಆಮೇಲೆ ಅವರು ನಿಮಗೆ ಸಹಕಾರದ ಮಾತನ್ನು ಹೇಳುತ್ತಲೇ ಪ್ರಿಯಕರನೊಂದಿಗೆ ರಾಜಿಯಾದ ಪ್ರೇಯಸಿಯಂತೆ ಎಲ್ಲವನ್ನೂ ಮರೆತು ಓಡಿ ಬಂದಿರಿ. ಇದೀಗ ಅವರು ಮಾತು ತಪ್ಪುತ್ತಲೇ ಮತ್ತೆ ಅವರನ್ನು ಹಳಿಯಲು, ತೊಳೆಯಲು ಆರಂಭಿಸಿರುವಿರಿ.... ಇದನ್ನೆಲ್ಲ ನೋಡಿದ ಜನತೆ ನಿಮ್ಮ ಮೇಲೆ ಇರಿಸಿದ್ದ ವಿಶ್ವಾಸವನ್ನೂ ಕಳೆದುಕೊಳ್ಳುವುದಿಲ್ಲವೇ....? ನಿಮ್ಮ ಹೋರಾಟದ ವಿಧಾನ, ಬಳಸುವ ಶಬ್ದಗಳು, ನಿಮ್ಮ ಮೇಲೆ ಅನುಕಂಪ ಹುಟ್ಟಿಸುವುದಕ್ಕಿಂತಲೂ ರೇಜಿಗೆ ಹುಟ್ಟಿಸುತ್ತವೆ....

ನಿಮಗೇನು ಗೊತ್ತು ರಾಜಕೀಯ ಭಾಗವತರೇ.....? ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬ ಗಾದೆಯ ಮಾತೊಂದಿದೆ. ನಮ್ಮ ವಿಚಾರದಲ್ಲಿ, ನಮ್ಮ ರಾಜಕೀಯ ಯುದ್ಧದಲ್ಲಿ ಈ ಮಾತು ನೂರಕ್ಕೆ ನೂರರಷ್ಟು ಸರಿ ಹೊಂದುತ್ತದೆ. ನಾವು ಏಳೇ ದಿನ ಸಿಂಹಾಸನದಲ್ಲಿ ಇದ್ದರೇನಾಯಿತಂತೆ....? ಎಷ್ಟೊಂದು ದಾಖಲೆಗಳನ್ನು ಬರೆದಿಲ್ಲ... ಹ್ಞಾಂ..... ನಮ್ಮ ದಕ್ಷಿಣದಲ್ಲಿ ನಮ್ಮ ಪಾಳಯ ಅಧಿಕಾರ ಹಿಡಿದದ್ದು, ನಮ್ಮ ಪಾಳಯದ ಮೊದಲ ಮುಕ್‌ಮಾಂತ್ರಿ ಆದದ್ದು, ಏಳೇ ದಿನ ಇದ್ದದ್ದು, ಇತರ ಯಾವುದೇ ಪಾಳಯಕ್ಕಿಂತ ಹೆಚ್ಚು ಅದ್ಧೂರಿಯಾಗಿ ಧಾಂ ಧೂಂ ಆಗಿ ಪಟ್ಟಾಭಿಷೇಕ ಮಾಡಿದ್ದು..... ಭಾಗವತರೇ ನಮಗೇನು ಅಧಿಕಾರದ ಅಸೆ ಇಲ್ಲ. ಹಾಗಿರುತ್ತದ್ದರೆ ಆ ಡೌಗರು ನಮ್ಮ ಮುಂದೆ ಹಿಡಿದಿದ್ದ ಶರಾಬತ್ತನ್ನು ಕಣ್ಮುಚ್ಚಿ ಕುಡಿಯುತ್ತಿದ್ದೆವು. ಆದರೆ ಆ ಶರಾಬತ್ತಿನ ಸ(ಸಾ)ವಿಗಿಂತ ನಮಗೆ ಆತ್ಮಗೌರವ, ಪ್ರಜೆಗಳ ಮೇಲಿನ ನಿಷ್ಠೆ ಹೆಚ್ಚೆಂದು ಕಂಡಿದ್ದರಿಂದ ಏಳೇದಿನಗಳಲ್ಲಿ ಎಲ್ಲವನ್ನೂ ಬಿಟ್ಟು ಬಂದೆವು.... ಭಾಗವತರೇ ನೋಡುತ್ತಾ ಇರಿ..... ನಾವು ಮತ್ತೆ ಪ್ರಜೆಗಳ ಬಳಿ ಹೋಗುತ್ತೇವೆ. ಅವರ ಆಶೀರ್ವಾದ ಪಡೆಯುತ್ತೇವೆ. ಮತ್ತೊಮ್ಮೆ ಅದ್ದೂರಿಯ ಒಡ್ಡೋಲಗ ಮಾಡೋಣವಂತೆ. ಈಗ ನಾವು ಹೊರಡುತ್ತೇವೆ. ಹಲವಾರು ಯಾತ್ರೆಗಳನ್ನು ಮಾಡಿ ಗಮಾರ ಮತ್ತು ಡೌಗರನ್ನು ಎಲ್ಲೆಲ್ಲೆ ಸಾಧ್ಯವೋ ಅಲ್ಲೆಲ್ಲ ಬಯ್ಯಬೇಕಿದೆ.....

ಆಸನದಲ್ಲಿ ಕುಳಿತು ಚಡಪಡಿಸುವ ನಿಮ್ಮ ಅವಸರ ನಮಗೆ ಅರ್ಥವಾಗುತ್ತದೆ. ನಮ್ಮ ಪ್ರಶ್ನೆಗೆ ಮಂಗಳ ಹಾಡುತ್ತೇವೆ. ನಿಮ್ಮ ಅವಸರ ಅರ್ಥವಾಗುವಂತದ್ದು ಅಂತ ಈಗಾಗಲೇ ಹೇಳಿದ್ದೇವೆ. ಮತ್ತೊಮ್ಮೆ ಭೇಟಿಯಾಗೋಣ...
ಎಲ್ಲರಿಗೂ ಮಂಗಳವಾಗಲೀ........
ಸರ್ವೇಜನೋ ಸುಖಿನೋಭವಂತು.........

ಗುರುವಾರ, ನವೆಂಬರ್ 1

ಒಡ್ಡೋಲಗ

ಬಲ್ಲಿರೇನಯ್ಯ.........?

ಈ ಬ್ಲಾಗ್ ಸಂಸ್ಥಾನಕ್ಕೆ ಯಾರೆಂದು ಬಲ್ಲಿರೀ.......

ಶಾನಿ ಎಂದು ಕೇಳಿಬಲ್ಲೆವು...........!

ಹಾಗೆಂದುಕೊಳ್ಳಬಹುದು...... ಹಾಗೆಂದುಕೊಳ್ಳಬಹುದು......

ಇರುವಂತಹ ಸ್ಥಳ.......?

ಶಾನಿಯ ಡೆಸ್ಕೆಂಬ ಸಂಸ್ಥಾನ........

ಬಂದಂತಹ ಕಾರ್ಯ.........?ಅಂತರ್ರ್ ರ್ರ್ ರ್ರ್......ಜಾಲ ಕುತೂಹಲ........, ಬ್ಲಾಗುಗಳ ವೀಕ್ಷಣೆ, ಹೊಸತುಗಳ ಹುಡುಕಾಟ...... ಲೋಕೋಪಚಾರ ಕುತೂಹಲ..... ಒಂದೇ......, ಎರಡೇ...., ಅನೇಕವಿದೆ, ಅನೇಕವಿದೆ......

ಮುಂಜಾನೆಯ ಚುಮುಚುಮು ಮಂಜನ್ನು ತೊರೆದು ಸೂರ್ಯರಶ್ಮಿ ಭೂದೇವಿಯನ್ನು ತಲುಪುವ ಮುನ್ನವೇ ನಮ್ಮ ತಲ್ಪರಹಿತ ತುಕ್ಕುಹಿಡಿದ ಕಬ್ಬಿಣದ ಮಂಚದಿಂದ ದಢಬಡಾಯಿಸೆದ್ದು, ಬಕೆಟನ್ನು ಹಿಡಿದು ಹಾಸ್ಟೇಲಿನ ಕೊಳಕು ಬಚ್ಚಲು ಮನೆಗೆ ತೆರಳಿದರೆ ಹನುಮನ ಬಾಲದಂತಹ ಸರತಿ. ನಿಂತು, ಕುಳಿತೆದ್ದು, ಮತ್ತೆ ಪವಡಿಸಿ ನಮ್ಮ ಸರದಿ ಬರುತ್ತಲೇ ಶೌಚ ಸ್ನಾನಾದಿ ಕಾರ್ಯಗಳನ್ನು ಮುಗಿಸೀ....... ದೇವರಿಗೆ ವಂದಿಸಿ, ತಟ್ಟೆ ಹಿಡಿದು ಭೋಜನಶಾಲೆಯತ್ತ ಓಡಿದೆವು.

ಕನಕನ ಕಿಂಡಿಯಂತಹ ಕಿಂಡಿಯೊಂದರಲ್ಲಿ ಒಡ್ಡಿದ ತಟ್ಟೆಗೆ ಸಿಡುಕು ಮುಖವೊಂದು ಉದುರಿಸಿದ ವೆಣ್ ಪೊಂಗಲನ್ನು ಕಾಣುತ್ತಲೇ ಶತ್ರುಸೇನೆ ದಂಡೆತ್ತಿ ಬಂದಂತಹ ಅನುಭವವಾಗಿ ಜಂಘಾಬಲವವೇ ಉಡುಗಿದಂತಾಯಿತು. ಅದನ್ನೇ ಒಂದಿಷ್ಟು ಮೆದ್ದು, ಅರ್ಧದಲ್ಲೇ ಎದ್ದು, ಸಹವಾಸಿಯ ಹಣ್ಣುಗಳನ್ನು ಕದ್ದು ತಿಂದದ್ದಾಯಿತು.

ಅರಾಜಕತೆಯ ಪ್ರಜೆಗಳಂತೆ ಹಾರಾಡುತ್ತಾ ಇನ್ನೂ ಉದುರದೇ ಇರುವ ಮೂರು ತಲೆಗೂದಲನ್ನು ಓರಣಗೊಳಿಸಿ, ರಬ್ಬರ್ ಬ್ಯಾಂಡೊದನ್ನು ಬಿಗಿದೂ..... ಮುಖಕ್ಕೊಂದಿಷ್ಟು ಸೌಂದರ್ಯ ಮುಲಾಮುಗಳನ್ನು ಬಳಿದು, ಓಡೋಡಿ ರೈಲೇರಿ ಕಚೇರಿಗೆ ಓಡೋಡುತ್ತಲೇ ಬಂದೆವು. ಅದೇ ವೇಗದಲ್ಲಿ ಕಚೇರಿಯ ಕನ್ನಡಿಯ ಬಳಿಗೋಡಿ, ಕೂದಲೇನಾದರೂ ಕೊಂಕಿದೆಯೇ, ತುಟಿಯ ರಂಗೇನಾದರೂ ಬಿಂಕಿದೆಯೇ ಎಂದು ನೋಡಿ, ನಮ್ಮ ಪ್ರತಿಬಿಂಬಕ್ಕೆ ನಾವೇ ಬೆಚ್ಚಿ, ಮತ್ತೋಡಿ ಬಂದು, ಸಿಂಹಾಸನಕ್ಕೆ ವಂದಿಸಿ, ಅದನ್ನೇರಿ ಕರ್ತವ್ಯಕ್ಕೆ ಹಾಜರಾದ ಸಂದೇಶವನ್ನು ರವಾನಿಸಿ ಇನ್ನೇನಾದರೂ ಪ್ರಮುಖ ಸಂದೇಶಗಳಿವೆಯೇ ಎಂಬ ಪರಿಶೀಲನೆಯ ಬಳಿಕ ಒಂದಿಷ್ಟು ವಿರಮಿಸಿ ಬ್ಲಾಗು ಲೋಕದತ್ತ ಕಣ್ಣು ಹಾಯಿಸಿದಾಗಾ........!

ಇದೇನಾಶ್ಚರ್ಯ........... ಪರಮಾಶ್ಚರ್ಯ........ ಬ್ಲಾಗುಗಳು ತುಂಬಿತುಳುಕುತ್ತಿವೆ...... ಒಂದೆರಡೇ.... ನೂರಾರು........... ಅಬ್ಬಬ್ಬಬ್ಬಬ್ಬಬ್ಬಬ್ಬಾಬ್ಬಾಬ್ಬಾ........ ಎಷ್ಟೊಂದಿವೆ, ಎಷ್ಟೊಂದಿವೆ....ಎಷ್ಟೊಂದಿವೆ.

ಕನಸುಗಳ ಬೆಂಬತ್ತಿ ನಡೆಯುತ್ತಿರುವ ಅವಧಿ ಇದೆ. ಅತ್ತ ನೋಡಿದರೆ, ಅಂತರಂಗದ ಬಹಿರಂಗವಿದೆ..... ಕನ್ನಡ ಸಾಹಿತ್ಯ ಲೋಕದ ಹಿರಿಯರ, ಅತ್ಯುನ್ನತ ಪುರಸ್ಕಾರಕ್ಕೆ ಭಾಜನರಾಗಿರುವವರ ಋಜುವಾತಿದೆ. ಅssssಲ್ಲೀ.... ಅಲ್ಲಿ ನೋಡಿದರೆ ಕುಂಟೀನೀ ಎಂಬ ಒಳ್ಳೆ ಹುಡುಗ ಕಾಣುತ್ತಿದ್ದಾರೆ. ಮತ್ತಾಚೆಗೆ ಕಣ್ಣು ಹಾಸಿದರೆ, ಜೋಗಿಮನೆಯೊಳಗೆ ಎಷ್ಟೊಂದು ಸಿಹಿ...!

ಬೊಗಳೂರ ಮಂದಿಯ ಹಿತವಾದ ರಗಳೆ, ಉಕ್ಕಿಬರುವ ನಗು ತಡೆಯಲಾಗುತ್ತಿಲ್ಲ. ಮಜಾವಾಣಿಯವರ ಮಜಾವೇ ಬೇರೆ. ಬರೆವಬದುಕಿನ ತಲ್ಲಣವೂ ಇದೆ..... ಆssssಚೆ ನೋಡಿ, ಕಿವಿಗೊಟ್ಟು ನೋಡಿ, ಅಲ್ಲಿಂದ 'ನನ್ನ ಹಾಡು' ಕೇಳಿಸುತ್ತಿದೆ. ಅಲ್ಲೇ.... ಪಕ್ಕದಲ್ಲೇ ಮಳೆಹನಿಗಳು ಸುರಿಯುತ್ತಿವೆ. ಮಲೆನಾಡ ಮಳೆಗಾಲದಲ್ಲಿ ನುಸುಳುವ ಬಿಸಿಲಿನಂತೆ ಕನ್ನಡ ಸಾರಥಿಯವರು ಇಣುಕುತ್ತಿದ್ದಾರೆ. ಬ್ರಹ್ಮಾನಂದ ಓಂಕಾರವೂ ಮೊಳಗುತ್ತಿದೆ. ಕೇಳುತ್ತಿದೆ ಏನ್ಗುರು ಅವರ ಹೊರಾಟದ ಧಮ್ಕಿ....... ಹೇಳುತ್ತಾ
ಹೋದರೆ ಒಡ್ಡೋಲಗದ ಮೇಲೆ ಒಡ್ಡೋಲಗ ಬೇಕಾದೀತು. ಭಾಗವತರು ಜಾಗಟೆ ಹಿಡಿದು ಕಾಯುತ್ತಿದ್ದಾರೆ.....

ಶಾನಿಯವರೇ ಇದೇನು ಇಂದು ಇದ್ದಕ್ಕಿದ್ದಂತೆ ಒಡ್ಡೋಲಗ? ಕುಂಭಕರ್ಣ ಮೈಕೊಡವಿ ಎದ್ದಂತೆ ಬ್ಲಾಗುಗಳತ್ತ ನೋಟ ಹರಿಸುತ್ತಿದ್ದೀರಿ......... ಏನಿದರ ಒಳಮರ್ಮ........?

ಭಾಗವತರೇ... ಬ್ಲಾಗುಗಳತ್ತ ನಾವು ನಮ್ಮ ಗಾಢ ನಿದ್ರೆಯ ಮಧ್ಯೆಯೂ ಆಗೀಗ ನೋಟ ಹರಿಸುತ್ತಲೇ ಇರುತ್ತೇವೆ. ಈ ಸಾಮ್ರಾಜ್ಯದಲ್ಲಿ ನಮಗೂ ನಮ್ಮದೇ ಆದ ಪುಟ್ಟ ಸಂಸ್ಥಾನವೊಂದನ್ನು ಕಟ್ಟಿಕೊಳ್ಳಬೇಕೆಂಬ ಇರಾದೆ ಇತ್ತು. ಆದರೇ.......... ಯಾವುದೇ ಕಾರ್ಯವನ್ನು ನಾಳೆ ನಾಳೆ ಎಂದು ಮುಂದೂಡುವ ಪ್ರವೃತ್ತಿಯವರಾಗಿರುವ ನಾವು ಜಡಭರತ ವಂಶಸ್ಥರು. ಹಾಗಾಗಿ ಕಳೆದೊಂದು ವಸಂತದಿಂದಲೂ ಈ ಯೋಜನೆಯನ್ನು ನಾಳೆಗೆ ದೂಡುತ್ತಲೇ ಬಂದಿದ್ದೆವು. ಇಂ...

ಶಾನಿಯವರೇ..... ತಮ್ಮ ಯೋಜನೆಯನ್ನೂ ಮತ್ತೂ ನಾಳೆಗೆ ಮುಂದೂಡುವ ಬದಲಿಗೆ ಅಪರೂಪಕ್ಕೆ ಸರಕಾರ ಯೋಜನೆಗಳನ್ನು ಜಾರಿಗೆ ತರುವಂತೆ ಅದೇನು ಬ್ಲಾಗ್ ಲೋಕಕ್ಕೆ ಇಳಿದೇ ಬಿಟ್ಟಿದ್ದೀರೀ.......?

ಇದೇನಿದು ಮಾತಿನ ಮಧ್ಯೆ ಬಾಯಿ ಹಾಕುವ ಚಾಳಿ ನಿಮ್ಮದು. ಇರಲಿ...... ಭಾಗವತರೇ.... ಯಾವುದಕ್ಕೂ ಒಂದು ಸಮಯ ಸಂದರ್ಭ ಎಂದೆಂಬುದಿರುತ್ತದೆ. ಕಾಲನ ಮಹಿಮೆಯನ್ನು ಯಾರು ತಾನೆ ಬಲ್ಲರು........? ಇದನ್ನು ಯಾರಾದರೂ ಪ್ರಶ್ನಿಸಲುಂಟೇ.........? ಹಾಗೇ ಈ ತಾಣ ದೈವದ ಮಹಿಮೆಯಿಂದ ನಮ್ಮ ಸಂಸ್ಥಾನಾರಂಭದ ಕಾಲಕೂಡಿ ಬಂದಿದೆ ಅಂತ ನಾವು ಹೇಳಬಹುದು.......

ಶಾನಿಯವರೇ.... ನಮ್ಮ ಇನ್ನೊಂದು ಪ್ರಶ್ನೆ ಇದೆ...... ನಿಮ್ಮ ಆಸ್ಥಾನದಲ್ಲಿ ಇಂತಹ ಒಡ್ಡೋಲಗಗಳು ಹೀಗೆಯೇ ನಿಯಮಿತವಾಗಿ ಮುಂದುವರಿಯುವುದೇ....ಇಲ್ಲ ಹುಟ್ಟಿದಂತೆಯೇ ಸಾಯುತ್ತಿರುವ ಅನೇಕ ಸಂಸ್ಥಾನಗಳ ಪಟ್ಟಿಗೆ ಇದೂ ಸೇರ.......

ಮುಚ್ಚಿಬಾಯಿ ಭಾಗವತರೇ...... ಶುಭಶುಭ ಅನ್ನಬೇಕಿರುವಲ್ಲಿ ನಿಮ್ಮದೇನಿದು ಅಪಶಕುನದ ರಗಳೆ......? ನಿಮ್ಮ ಒಟ್ಟೆ ಬಾಯಲ್ಲಿ ಯಾಕಿಂತಹ ಮಾತೂ..... ಕಾದು ನೋಡುವ ತಾಳ್ಮೆ ಇಲ್ಲವೇ ನಿಮಗೇsssssss

ನಿಧಾನ........ ನಿಧಾನ...... ಶಾನಿಯವರೇ.... ಇದೇನಿದು....? ಇದ್ದುದನ್ನು ಇದ್ದಂತೆ ಹೇಳಿದರೆ ಎದ್ದುಬಂದು ಎದೆಗೆ ಒದ್ದರು ಎಂಬ ನಾಣ್ನುಡಿಯನ್ನು ಬಲ್ಲವರು ಹುಟ್ಟುಹಾಕಿದ್ದಾರೆ..... ಹಾಗಾಯಿತು ನಿಮ್ಮ ಕತೆ! ನಮ್ಮಲ್ಲಿ ಮೂಡಿದ ಸಂಶಯವನ್ನು ನಿಮ್ಮಮುಂದಿಟ್ಟೆವು ಅಷ್ಟೆ. ಅಷ್ಟಕ್ಕೇ ಇಷ್ಟೇಕೆ ದಿಗಿಣ ಹೊಡೆಯುತ್ತೀರಿ.....? ನಿಮ್ಮ ಸಂಸ್ಥಾನವನ್ನು ನೀವೇ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗಿ...... ಇದೀಗ ಇವತ್ತಿಗೆ ಮಂಗಳ ಹಾಡೋಣವೇ.....?

ಮಂಗಳಂ..... ಎಲ್ಲರಿಗೂ ಒಳಿತಾಗಲಿ..... ಸರ್ವೇ ಜನ ಸುಖಿನೋ ಭವಂತು......

ಶುಕ್ರವಾರ, ಅಕ್ಟೋಬರ್ 19