ಬುಧವಾರ, ಫೆಬ್ರವರಿ 27

ಅದು ಹೇಗೆ ಕಾಗೆ ಬಂದು ಮುಟ್ಟುತ್ತಿತ್ತೋ.......

ಚಿಕ್ಮಾ, ಚಿಕ್ಮಾ... ಚಿಕ್ಮಾ,... ಮಿಲನಕ್ಕನನ್ನು ಕಾಗೆ ಮುಟ್ಟಿದೆ ಅಂತ, ನನ್ನನ್ನು ದೂರದಿಂದ ಕಂಡ ಮೇಘು ಓಡೋಡಿ ಗೇಟ್ ಬಳಿ ಬಂದು ವರದಿಯೊಪ್ಪಿಸಿದಳು. ಅವಳ ಅಮಾಯಕತೆ ಕಂಡು ಸಣ್ಣ ನಗುವೊಂದು ನನ್ನೊಳಗೆ ನುಸುಳಿ ಮಾಯವಾಯಿತು. ಮಿಲನ(ನೆರೆ ಮನೆ ಹುಡುಗಿ)ಳೂ ಸೇರಿದಂತೆ ಅವರ ಗ್ಯಾಂಗೇ ಅಲ್ಲಿ ಲಗೋರಿಯಾಡುತ್ತಿತ್ತು. ಏಳ್ನೇ ಕ್ಲಾಸು ಹುಡುಗಿಯದು. ಛೇ, ಈಗಿಂದಲೇ ತಿಂಗಳು ತಿಂಗಳು ಒದ್ದಾಡಬೇಕಲ್ಲ ಎಂಬ ಸಂಕಟ ನನ್ನನ್ನು ಕಾಡಿತು.

ಏನ್ಮಾಡೋದು, ಸೃಷ್ಠಿ ನಿಯಮವೋ, ಪ್ರಕೃತಿ ನಿಯಮವೋ ಇಲ್ಲ, ದೈಹಿಕ ಪ್ರಕ್ರಿಯೆಯೋ ಅಂತೂ ತಪ್ಪಿಸಿಕೊಳ್ಳುವಂತಿಲ್ಲ. ಇದು ವರ ಮತ್ತು ಶಾಪ ಎರಡೂ ಹೌದು! ಹೌದಾ ಮಿಲನಾ ಅಂದೆ. ಇಶ್ಶಿ ನಂಗೆ ನಾಚಿಕೆ ಆಗ್ತದೆ ಅಂತ ಓಡಿತು. ಹಾಗೆ ನೋಡಿದರೆ, ಉಳಿದವರೆಲ್ಲರ ಕೀಟಲೆ, ತಮಾಷೆಯಿಂದಾಗಿ ಅವಳೂ ಅದನ್ನು ಬಯಸಿದಂತಿತ್ತು.

ಅವ್ವನನ್ನು ಅದ್ಯಾವ ಮಾಯದಲ್ಲಿ ಕಕ್ಕೆ ಬಂದು ಮುಟ್ಟುತ್ತಿತ್ತೋ, ಏನೇನು ಮಾಡಿದರೂ ಗೊತ್ತೇ ಆಗುತ್ತಿರಲಿಲ್ಲ. ಈ ಸತ್ತ ಕಕ್ಕೆಯೊಂದು ಅವ್ವನನ್ನು ಮುಟ್ಟಿ ಹಿಂಸೆ ಯಾಕೆ ಕೊಡುತ್ತದೆ ಎಂಬುದು ಪುಟ್ಟ ಶಾನಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಬಿಡುತ್ತಿತ್ತು. ಹಬ್ಬ-ಹರಿದಿನ, ನೆಂಟರೆಲ್ಲ ಬರುವ ದಿನ ಅಥವಾ ಬರುವ ಸೂಚನೆ ಇದ್ದರೆ ನಾನು ಅವ್ವನನ್ನು ತೋಟಕ್ಕೆಲ್ಲ ಹೋಗಬೇಡಿ ಅಂತಿದ್ದೆ. ಹಾಗೊಮ್ಮೆ ಅವರು ಹೊರಟರೂ ಕೈಯಲ್ಲಿ ಕೋಲು ಹಿಡಿದ ನಾನೂ ಅವ್ವನ ಹಿಂದೆಯೇ ನಡೆದು 'ಕಕ್ಕೆ ಮುಟ್ಟದಂತೆ' ಕಾಯುತ್ತಿದ್ದೆ.

ಇಷ್ಟೆಲ್ಲ ಮುನ್ನೆಚ್ಚರಿಕೆ ತಗೊಂಡರೂ ತೋಟವೆಲ್ಲ ಸುತ್ತಿ ಕೊಕ್ಕೋ ಕೊಯ್ದು ಬುಟ್ಟೀಲಿ ತುಂಬಿಸಿಕೊಂಡು ಬಂದು, ಗೆದ್ದೆನೆಂದು ಬೀಗುತ್ತಿರುವಾಲೇ ಅಂಗಳದಲ್ಲಿ ನಿಂತ ಅವ್ವ 'ಮುಟ್ಟಿಕ್ಕಾಗದ್' (ಮುಟ್ಟಬಾರದು) ಅಂತೇಳಿ ಕೊಟ್ಟಿಗೆ ಸೇರಿದಾಗ ಮಾತ್ರ, ಇದು ಹೇಗಾಯಿತು ಅಂತ ತಲೆ ಕೆರೆದುಕೊಂಡರೆ ಉಗುರು ಕೊಳೆಯಾಯಿತೇ ವಿನಹ ಮತ್ತೇನು ಗೊತ್ತಾಗಿಲ್ಲ. ನನ್ನ ಈ ತಪತಪನೆ ಕಂಡ ಅವ್ವನೇ, "ಅದು ಒಮ್ಮೊಮ್ಮೆ ಸಣ್ಣ ಮಕ್ಕಳಿಗೆ ಕಾಣುವುದಿಲ್ಲ" ಎಂದು ಸಮಾಧಾನಿಸುತ್ತಿದ್ದರು.

ಅದೊಂದು ಸರ್ತಿ ನಾನು ಶಾಲೆಯಿಂದ ಬರುತ್ತಿರುವಾಗ ತೀರಾ ಕೆಳ ಎತ್ತರದಲ್ಲಿ ಹಾರುತ್ತಿದ್ದ ಕಾಗೆಯ ಕಾಲು ನನ್ನ ತಲೆ-ಭುಜಕ್ಕೆ ಸೋಕಿದ್ದು, ಛೇ.....ಛೇ... ನನ್ನನ್ನೂ ಕಾಗೆ ಮಟ್ಟಿತ್ತಲ್ಲ ಎಂಬ ಸಂಕಟ ಮತ್ತು ಸಂಭ್ರಮ ಉಂಟಾಗಿತ್ತು. ಮನೆಯಲ್ಲಿ ಬಂದು ನಾನೂ ಅಂಗಳದಲ್ಲಿ ನಿಂತು, ಜಂಭದಲ್ಲಿ ಮುಟ್ಟಿಕ್ಕಾದ್ ಅಂದಾಗ ವಿಷಯ ತಿಳಿದ ದೊಡ್ಡವರೆಲ್ಲ ನನಗೆ ಅವಮಾನವಾಗುವಂತೆ ಗೊಳ್ಳನೆ ನಕ್ಕು, ಚಿಕ್ಕವರನ್ನು ಕಾಗೆ ಮುಟ್ಟಿದರೆ ಏನಾಗುವುದಿಲ್ಲ ಎಂದು ಮನೆಯೊಳಗೆ ಸೇರಿಸಿಕೊಂಡಿದ್ದರು.

ನನ್ನ ದೊಡ್ಡ ಅಕ್ಕನನ್ನು 'ಕಾಗೆಮುಟ್ಟಿ'ದಾಗಲಂತೂ ಮನೆಯಲ್ಲಿ ಭಯಂಕರ ಸಂಭ್ರಮವಿತ್ತು. ಅವಳು ಅಳುತ್ತಾ ಹಲಸಿನ ಮರದ ಬುಡದಲ್ಲಿ ಕುಳಿತಿದ್ದಳು. ನೆರೆ ಹೊರೆಯವರನ್ನೆಲ್ಲ ಕರೆದು ಶಾಸ್ತ್ರಗೀಸ್ತ್ರ ಮಾಡಿ, ಗಮ್ಮತ್ ಊಟ...ತಿಂಡಿ. ನಾಲ್ಕು ದಿವಸ ಅಸ್ಪ್ರಶ್ಯಳಾಗಿದ್ದ ಅವಳನ್ನು ವಿಶೇಷ ಸ್ನಾನ ಮಾಡಿಸಿ ಮನೆಯೊಳಗೆ ಕರೆಸಿಕೊಂಡರೂ, ಎಲ್ಲವನ್ನೂ ಅವಳು ಮುಟ್ಟುವಂತಿಲ್ಲ. ಒನಕೆ, ಪೊರಕೆ ಎಲ್ಲ ಮುಟ್ಟಬಾರದಂತೆ. ಅವಳು ರಾಜಕುಮಾರಿಯಂತೆ ಕುಳಿತು, ಅವಳಿಗಾಗೇ ಬಂಧು-ಬಳಗ, ನೆರೆಹೊರೆಯವರು ತರುತ್ತಿದ್ದ ಒಳ್ಳೊಳ್ಳೆ ತಿಂಡಿ ಮೆಲ್ಲುತ್ತಿದ್ದಳು. ಮನೆಯಲ್ಲಿ ಅವ್ವನೂ, ಮೆಂತ್ಯ, ಎಳ್ಳು, ಕೊತ್ತಂಬರಿ ಅಂತ ಏನೇನೊ ಗಮಗಮ ತಿಂಡಿಗಳನ್ನು ಮಾಡುತ್ತಿದ್ದರು. ಹೆಸರು ಅವಳದ್ದಾದರೂ, ನಮಗೂ ಪಾಲಿರುತ್ತಿತ್ತು ಅನ್ನಿ.

ಅದಾದ ಬಳಿಕ ಹೊಲೆ ಹೋಗಬೇಕು; ಪಿಲೆತೆಗೆಯಬೇಕು ಎಂದೆಲ್ಲ ಮಾತಾಡುತ್ತಿದ್ದ ದೊಡ್ಡವರು, ಒಂದು ದಿನ ಮಿನಿ ಮದುವೆಯಂತಹ ಅದೇನೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಋತುಶಾಂತಿ ಮಾಡಿ, ಹೊಲೆಪಿಲೆಯೆಲ್ಲ ತೆಗೆದಿದ್ದರು. ಆಗ ಅವಳಿಗೆ ಕಾರ್ಯಕ್ರಮಕ್ಕೆ ಬಂದವರೆಲ್ಲ ದುಡ್ಡು, ಉಡುಗೋರೆ ನೀಡಿ ಹರಸಿದ್ದರು. ಅವಳಿಗೆ ಹೊಸಾ ಡ್ರೆಸ್ ಹೊಲಿಸಿದ್ದರು. ಇದನ್ನೆಲ್ಲ ಕಂಡು ನಂಗೂ, ನನ್ನನ್ನೂ ಕಕ್ಕೆ ಮುಟ್ಟಿದರೆ ಚೆನ್ನಾಗಿತ್ತು ಅಂತ ಒಳಗೊಳಗೆ ಅನಿಸಿದ್ದು ಸುಳ್ಳಲ್ಲ.

ಅದಾದ ಒಂದುದಿನ ಕುಳಿತು ಲೆಕ್ಕ ಹಾಕಿದ್ದೆ. ದೊಡ್ಡಕ್ಕಂದಾಯಿತು. ಇನ್ನು ಅಣ್ಣನದ್ದು. ಆಮೇಲೆ ಸಣ್ಣಕ್ಕ. ಅವಳಾದ ಮೇಲೆ ಕುಂಞಕ್ಕ. ಮತ್ತೆ.... ಕೊನೇಗೆ ನಾನು. ಛೇ.. ಎಷ್ಟು ಸಮಯಕಾಯಬೇಕು ಈ ಸಂಭ್ರಮಕ್ಕೆ ಅಂತ ಕಾಯುವಿಕೆಯ ದುಃಖವೂ ಆಗಿತ್ತು. ಚಿಕ್ಕವಳಾಗಿದ್ದಕ್ಕೆ ಸಿಟ್ಟೂ ಬಂದಿತ್ತು.

ಆಮೇಲಾಮೇಲೆ ಸಣ್ಣಕ್ಕನನ್ನು 'ಕಕ್ಕೆಮುಟ್ಟಿ'ದ ಮೇಲೆ, ಕಕ್ಕೆಮುಟ್ಟವ ಮರ್ಮದ ಸೂಕ್ಷ್ಮಗಳು ಸ್ವಲ್ಪಸ್ವಲ್ಪವೆ ಅರಿವಾಗ ಹತ್ತಿದ್ದವು. ಆಗೆಲ್ಲ ನಮ್ಮ ಹಳ್ಳಿಗಿನ್ನೂ, ವಿಸ್ಪರ್, ಸ್ಟೇಫ್ರೀಗಳೂ ಬಂದಿರಲಿಲ್ಲ. ಬಂದರೂ ಆದನ್ನು ಖರೀದಿಸಿ ಕೊಡುವವರೂ ಇರಲಿಲ್ಲ. ಇವರುಗಳು ಪದೇಪದೇ ಬಟ್ಟೆ ಒಗೆಯುವುದು, ಹೊಟ್ಟೆನೋವೆಂದು ಕಷಾಯ ಕುಡಿಯುವುದು ಕಂಡಾಗ 'ಮುಟ್ಟಿಕಾಗ'ದಿರುವುದೆಂದರೆ, ಕಾಗೆ ಮುಟ್ಟವುದಕ್ಕಿಂತ ಇನ್ನೇನೋ ಇದೆ ಎಂಬುದು ಅರೆಬರೆಯಾಗಿ ಗೊತ್ತಾಗಿತ್ತು.

ಮೊದಲ ಮಗಳು ದೊಡ್ಡಕ್ಕನಿಗೆ ಮಾಡಿದ ಋತುಶಾಂತಿಯ ಗೌಜಿಯೆಲ್ಲ ಸಣ್ಣಕ್ಕ, ಕುಂಞಕ್ಕಗಳಿಗೆ ಇರಲಿಲ್ಲ. ಎಲ್ಲವೂ ಶಾಸ್ತ್ರಕ್ಕೆತಕ್ಕವಾಗಿತ್ತು. ಶಾಸ್ತ್ರಕ್ಕೆತಕ್ಕವಾದರೂ ಅವರಿಗೆ ದೊರೆತ ಉಡುಗೋರೆ, ದುಡ್ಡು, exclusive ಹೊಸ ವಸ್ತ್ರಗಳನ್ನು ನೋಡಿದಾಗ ನಂಗೂ ಬೇಗ ಆಗಬೇಕು ಎಂಬ ಪ್ರಲೋಭನೆಗೆ ನಾನು ಒಳಗಾಗದೇ ಇರಲಿಲ್ಲ. ಅದು ಆದಾಗ ಅವರೆಲ್ಲ ಕಂಪಲ್ಸರಿ ಎಂಬಂತೆ ಹಲಸಿನ ಮರದ ಬುಡದಲ್ಲಿ ನಿಂತು ಅತ್ತಿದ್ದರು. ಹಾಗೆ ಅಳಲು ನಾನು ಸಹ (ಯಾರೂ ನೋಡದಿದ್ದಾಗ) practice ಮಾಡಿದ್ದೆ.

ಮತ್ತೆಮತ್ತೆ ದಿನಕಳೆದಂತೆ, ನಮ್ಮದು ಹೆಣ್ಣುಮಕ್ಕಳ ಬಾಹುಳ್ಯವಿರುವ ಮನೆಯಾದ ಕಾರಣ ವಿಷಯಗಳು ಚೆನ್ನಾಗಿ ಅರಿವಾಗತೊಡಗಿ, ಉಡುಗೋರೆಯ ಜಾಗದಲ್ಲಿ ಒಂಥರಾ ಧಾವಂತದ ಭಯ ಆವರಿಸಿತ್ತು. ಆರು ವರ್ಷದಿಂದ ಕಾದದ್ದು 16ನೇ ವರ್ಷಕ್ಕೆ ಬಂದಾಗ ಮಾತ್ರ ನಾನು ಯಾರಿಗೂ ಹೇಳಲೇ ಇಲ್ಲ!

ಒಂದು ದಿನ ಮಳೆಗಾಲದಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಗಾಳಿಮಳೆಗೆ ಸಿಲುಕಿದ್ದೆ. (ಹತ್ತು ಕಿ.ಮೀ ದಾರಿಯದು. ನಡೆದೇ ಕ್ರಮಿಸಬೇಕು) ಏನೂ ಮಾಡಲು ತೋಚದ ನಾನು ಗಾಳಿಗೆ ಕೊಡೆ ಆಧರಿಸಿಕೊಳ್ಳಲಾಗದಿದ್ದರೂ ಸಪೂರದ ಗದ್ದೆ ಬದುವಿನ ಮೇಲೆ ಹರಸಾಹಸದಿಂದ ನಡೆದು ಹೋಗುತ್ತಿದ್ದೆ. ಎದುರಿನಿಂದ ಯಾರೋ ಬಂದರು. ಅವರಿಗೆ ಸೈಡ್ ಕೊಡಲೆಂದು ಸರಿದು ನಿಂತು ಕೊಡೆ ತಿರುಗಿಸಿದ್ದೆ. ಅಷ್ಟೆ. ಗಾಳಿಯ ವಿರುದ್ಧ ದಿಕ್ಕಿಗೆ ಕೊಡೆ ಹಿಡಿದಾಗ ಕೊಡೆಯೊಳಗೆ ಗಾಳಿತುಂಬಿ ಏನಾಗುತ್ತಿದೆ ಎಂದು ಗೊತ್ತಾಗುವಾಗ ನಾನು ಇಡಿಯಾಗಿ ಸುಮಾರು ಐದಾರಡಿ ಕೆಳಗೆ ಬಿದ್ದಿದ್ದೆ. ಸರಿಯಾಗಿ ತಾಳೆ ಮರದ ಬುಡಕ್ಕೇ ಎಸೆದಂತೆ ಬಿದ್ದಿದ್ದೆ. ಚಪ್ಪಲಿ ಇಲ್ಲದ ಬರಿಗಾಲು. ಬಿದ್ದ ರಭಸಕ್ಕೆ ತಾಳೆ ಮರದ ಬುಡದಲ್ಲಿದ್ದ ಗರಗಸದಂತಹ ಅಲುಗು ಅಂಗಾಲಿಗೆ ತಗುಲಿ ಅಂಗಾಲನ್ನು ಮಧ್ಯಕ್ಕೆ ಅಡ್ಡಕ್ಕೆ ಸೀಳಿ ಮಾಂಸ ಹೊರಗೆ ಬಂದಿತ್ತು. ಅಲ್ಲಿಂದ ಮತ್ತೆ ನಮ್ಮ ಮನೆಗೆ ಸುಮಾರು ಮೂರೂವರೆ ಕಿ.ಮಿ ದೂರ. ಅದು ಹ್ಯಾಗೆ ಕುಂಟುತ್ತಾ ಬಂದೆನೋ.... ಅಬ್ಬಾ... ಆ ಸನ್ನಿವೇಶವನ್ನು ನೆನಪಿಸಿಕೊಳ್ಳಲೂ ಭಯವಾಗುತ್ತೆ.


ನಾನು ನಡೆದ ದಾರಿಯುದ್ದಕ್ಕೂ ರಕ್ತ ಚೆಲ್ಲಿತ್ತು. ಟೈಲರ್ ಕೆಲಸ ಕಲಿಯಲು ಪೇಟೆಗೆ ಹೋಗುತ್ತಿದ್ದ, ನಮ್ಮೂರ ಕೇಶವ ಮತ್ತು ನವೀನ ಹಿಂದಿನಿಂದ ಬರುತ್ತಿದ್ದರು. ದಾರಿಯುದ್ದಕ್ಕೂ, ಚೆಲ್ಲಿದ್ದ ನೆತ್ತರು ಕಂಡು ಓಡೋಡಿ ಬಂದ ಅವರು ನನ್ನುನ್ನು ಕಂಡು, ಛೇ... ಪಾಪಾ, ಶಾನಿ, ಅನ್ನುತ್ತಾ ಅವರ ಕೈಯಲ್ಲಿದ್ದ ಬಟ್ಟೆ ತುಂಡನ್ನು ಕಾಲಿಗೆ ಬಿಗಿಯಾಗಿ ಕಟ್ಟಿ ನಡೆಯಲನುಕೂಲ ಮಾಡಿಕೊಟ್ಟಿದ್ದರು. ಒಬ್ಬ ನನ್ನೊಡನೆ ನಿಂತರೆ ಇನ್ನೊಬ್ಬ ಓಡಿ ಹೋಗಿ ಮನೆಗೆ ಸುದ್ದಿ ಮುಟ್ಟಿಸಿದ.


ಹೀಗೆ ಕೊಯ್ದು ಹೋದ ಕಾಲಿನಿಂದಾಗಿ ನಡೆದಾಡಲಾಗದೆ ಕುಳಿತಲ್ಲೇ ನಾನಾಗಿದ್ದಾಗ, ಒಂದು ದಿನ ಅದಾಗಿತ್ತು. ಹೇಳದಿರುವುದು ಮಹಾಪಾಪ, ಶಾಸ್ತ್ರಗಳನ್ನು ಮಾಡದಿದ್ದರೆ ಕಣ್ಣು ಕುರುಡಾಗುತ್ತದೆ ಎಂದೆಲ್ಲ ಕೇಳಿದ್ದ ನನಗೆ ಒಳಗೆ ಭಯವಿದ್ದರೂ, ಮೇಲಿನ ಭಂಡತನ ಯಾರಿಗೂ ಹೇಳಲೇ ಬೇಡ ಅಂದಿತ್ತು. ಹೇಳಿದರೋ, ಅಪ್ಪ ಊರೆಲ್ಲ ಟಾಂ ಟಾಂ ಮಾಡುತ್ತಾರೆ. ನೆರೆ ಹೊರೆಯವರೆಲ್ಲ ಬಂದು ಕೀಟಲೆ ಮಾಡುತ್ತಾರೆ. ಈ ಕಾಲು ಬೇರೆ ನೋವು!

ಉಡುಗೋರೆ, ಹಣ, ಹೊಸ ಬಟ್ಟೆಗಳ ಆಸೆಯ ಜಾಗಕ್ಕೆ ನಾಚಿಕೆ ಕುಳಿತಿತ್ತು. ಹಾಗಾಗಿ ಹಲಸಿನ ಮರದ ಬುಡದಲ್ಲಿ ನಿಂತು ಅಳಲು ಮಾಡಿದ್ದ ಪ್ರಾಕ್ಟೀಸ್ ಉಪಯೋಗಕ್ಕೆ ಬರಲೇಯಿಲ್ಲ. ಹಲವು ತಿಂಗಳ ಬಳಿಕ ಅದೊಂದು ದಿನ ಉಡುಪಿನ ಮೇಲಿನ ಕಲೆ ಕಂಡ ಅವ್ವ ಹೌದಾ? ಯಾವಾಗ? ಅಂತ ಕೇಳಿದ್ದರು. ನಿನ್ಯಾಕೆ ಹೇಳಿಲ್ಲ ಅನ್ನುತ್ತಾ ಅವರೇ ಅತ್ತು ಬಿಟ್ರು!

1 ಕಾಮೆಂಟ್‌:

 1. ಪ್ರಿಯರೇ,

  ನಮಸ್ಕಾರ. ಹೇಗಿದ್ದೀರಿ?

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,

  ಸುಶ್ರುತ ದೊಡ್ಡೇರಿ

  ಪ್ರತ್ಯುತ್ತರಅಳಿಸಿ