ಗೆಳತೀ... ಇದೇ ದಿನ ನಾನು ಮತ್ತು ನೀನು ಅಯೋಧ್ಯೆಯ ಮೂಲೆ ಟೇಬಲ್ಲಿನಲ್ಲಿ ಕುಳಿತು ಪೆಕರು ಪೆಕರಾಗಿ ನಕ್ಕಿದ್ದೆವು। (ಕಾರಣವೇ ಗೊತ್ತಿಲ್ಲದ ಪರಿಚಯದ ಮಾಣಿಯೂ ಬಂದು ನಕ್ಕಿದ್ದ) ಹೌದು. ನಾನು ನಕ್ಕಿದ್ದು, ಅತ್ತಿದ್ದು ಮತ್ತೆ ನಕ್ಕಿದ್ದು, ನನ್ನ ಜೀವನದ ವರದಿಯನ್ನು ಕರಡು ತಿದ್ದದೆ, ಎಡಿಟ್ ಮಾಡದೆ ಪ್ರಕಟಿಸಿದ್ದು ನಿನ್ನೆದುರು ಮಾತ್ರ. ಎಂಥ ಕರ್ಮವೋ, ಇಲ್ಲ ಸುಯೋಗವೋ ಹೊಸಹೊಸ ಆವೃತ್ತಿಗಳು ಸೇರುತ್ತಾ. ಕಳಚುತ್ತಾ ಹೋಗುತ್ತಲೇ ಇರುತ್ತವೆ. ಆದರೆ ನಿನ್ನ-ನನ್ನ ಸ್ನೇಹ ಮಾತ್ರ ಎಡಿಟೋರಿಯಲ್‌ನಂತೆ ಶಾಶ್ವತ.
ಅಂದ ಹಾಗೆ ಯಾಕೆ ನಕ್ಕಿದ್ದೆವು ಆ ದಿನ। ನನ್ನ ನೆನಪು ಸರಿ ಇದ್ದರೆ ಕೆಂಪಂಗಿಯ ಜೋಡಿಯೊಂದು ನಮ್ಮ ಪಕ್ಕದ ಟೇಬಲ್ ಬಳಿ ಕುಳಿತು ಜ್ಯೂಸ್ ಗ್ಲಾಸ್ ಎದುರಿದ್ದರೂ, ಮರೆತಂತೆ ಕಣ್ಣೊಳಗೆ ಕಣ್ಣಿಟ್ಟು ಮಂಗ-ಳೂರನ್ನೇ ಮರೆತಂತೆ ಕುಳಿತಿತ್ತು.
ನಾನಂದೆ ನಿಂಗೆ। ನೀನೂ ಇದ್ಯಾ ದಂಡ-ಪಿಂಡ, ತಲೆಯ ಮೇಲೆ ಬೆಳ್ಳಿ ಗೆರೆಗಳು ಮರೆಮಾಚುವಂತೆ ಬಾಚಿದರೂ ಇಣುಕುತ್ತಿವೆ; ಆದರೂ ಇನ್ನೂ ಒಬ್ಬನ ಕಣ್ಣೊಳಗೆ ಕಣ್ಣಿಟ್ಟು ನೋಡಲಾಗಿಲ್ಲ ಅಂತ ಪ್ರೀತಿಯ ಬಯ್ಗಳು ಎಸೆದೆ. ನಿನ್ನ ಮೇಲೆ ಹೂವು ಚೆಲ್ಲಿದಂತೆ ಭಾಸವಾಯಿತೋ ಗೊತ್ತಿಲ್ಲ. ಪ್ಹೋ.....ಪ್ಹೋ....ಹ್ಫೋ... ಹೋ.... ಅಂತ ಒಂದು ಸೆಕುಂಡು ಕತ್ತುಮುರಕೊಂಡಂತೆ ನಕ್ಕ ನೀನು, ಅದು ಬಾಲ ನರೆ ಅನ್ನದೆ, "ವಯಸ್ಸಿನ ಸಂಕೇತ ಅಲ್ಲ ಕಣೇ, ಪ್ರೌಢತೆಯ ಸಂಕೇತ" ಅನ್ನುತ್ತಾ ನನ್ನ ತಲೆ ಬುರುಡೆ ಸರ್ವೆ ಮಾಡಿದ್ದೆ. ನೀ ಏನು ದೊಡ್ಡ ಸುಭಗೆತಿಯಾ? ನಿಂಗೇನು ದಾಢಿ ಅಂತ ಸದರೀ ಪ್ರಶ್ನೆಯನ್ನು ನನಗೇ ತಿರುಗೆಸೆದೆ. ಅದೇ ಟೇಬಲ್ಲಿನ ಮೇಲೆಯೇ ಒಂದು ಹನಿಯುದುರಿಸಿದೆ. ನನ್ನ ನೆನಪಿಗೆ ಚ್ಯುತಿ ಇಲ್ಲದಿದ್ದರೆ ಅದು ಹೀಗಿತ್ತು,
ಕಣ್ಣೊಳಗೆ ಕಣ್ಣಿಟ್ಟು
ನೋಡಬೇಕೆಂದೇ ಇದ್ದೆ,
ಅದರೆ....
ಕನ್ನಡಕ ಅಡ್ಡ ಬಂತು!
ಪ್ರೀತಿ ಮಾಡಿ ಕೈ ಸುಟ್ಟುಕೊಂಡ, ಅಲ್ಲಲ್ಲ... ಹೃದಯ ಸುಟ್ಟುಕೊಂಡ ನಮ್ಮ ಇನ್ನೊಬ್ಬ ಗೆಳತಿಗೆ ನಾವಿಬ್ಬರು ಅಲ್ಲಿಂದಲೇ ತಾನೆ ಮೊಬೈಲಾಯಿಸಿದ್ದು. ಮತ್ತೆಮತ್ತೆ ಆಕೆಗಾದ ಮೋಸಕ್ಕೆ ಒಂದು ಕ್ಷಣ ಪುರುಷ ಹೃದಯಗಳನ್ನೆಲ್ಲ ಒಂದೇ ತಕ್ಕಡಿಗೆ ಹಾಕಿ ತೂಗಿದ್ದು...
ಒಳಗಿನ ಧಗೆ ಕೊತಕೊತ ಕುದಿಯುತ್ತಿದ್ದರೂ, ಹಾಸ್ಯ ಚಟಾಕಿ ಹಾರಿಸಿ ಮುಖದಲ್ಲಿ ನಗೆ ತುಳುಕಿಸುವ ಅದ್ಭುತ ಶಕ್ತಿಯಿದ್ದ ಅವಳೇ ಅಂದಿದ್ದಳಲ್ವೇ.... ಹೋಗ್ಲಿ ಬಿಡ್ರೇ.... ಪ್ರೀತಿಗೆ ಸಂಬಂಧಿಸಿದಂತೆ ನನ್ನ ವಾಸ್ತು ಸರಿ ಇಲ್ಲ ಅಂತ।
ಹೌದಾ...? ಪ್ರೀತಿಗೂ ವಾಸ್ತು ಸರಿ ಇರಬೇಕಾ...?
ಇವತ್ತು ಪ್ರೇಮಿಗಳ ದಿನವಂತೆ। ಪ್ರೀತಿಯ ಆಚರಣೆಯಂತೆ। ಇಲ್ಲೂ ನನ್ನದೊಂದು ಭಂಡ ಅಥವಾ ಬಂಡಾಯದ ಪ್ರಶ್ನೆ. ಪ್ರೀತಿ ಅಂದರೆ ಅದು ಗಂಡು-ಹೆಣ್ಣಿನ ನಡುವಿನ ಪ್ರೀತಿಯ ಆಚರಣೆ ಮಾತ್ರ ಯಾಕಾಗಬೇಕು? ನನ್ನ ನಿನ್ನ ನಡುವಿನ ಸ್ನೇಹ ಮೊಳೆಸಿರುವ, ವಿನಾಕಾರಣ, ಸಿಹಿಸಿಹಿ ಪ್ರೀತಿಯ ಆಚರಣೆಗೆ ಯೋಗ್ಯತೆ ಇಲ್ವೇನೆ? ಏನಂತಿ?
ಛುಪ್....! ಹಿಂದೆ...., ರೋಮ್ ದೇಶದಲ್ಲಿ...., ವ್ಯಾಲಂಟೈನ್ ಎಂಬ ಕ್ರೈಸ್ತ ಪಾದ್ರಿ...... ಎಂಬೋ ಕಥೆ ಎಲ್ಲ ಹೇಳ್ಬೇಡ.... ನಾನೂ ಅದನ್ನು ಓದಿರುವೆ।
PÉÆqÀÄwÛ®
ಪ್ರತ್ಯುತ್ತರಅಳಿಸಿಅಯ್ಯೋ.... ಅನಾಮಧೇಯರೇ.... ಏನು ಬರೆದಿದ್ದೀರೆಂಬುದನ್ನು ಓದಲು ಆಗುತ್ತಿಲ್ಲ!
ಪ್ರತ್ಯುತ್ತರಅಳಿಸಿ