ಭಾನುವಾರ, ಜನವರಿ 20

ನೀನು ಮತ್ತೊಮ್ಮೆ ಬಾ ಪುಟ್ಟಾ...

ಗಗನ್ ಪುಟ್ಟಾ....,ಕಳೆದ ಹದಿಮೂರು ವರ್ಷಗಳಿಂದ ನೀನು ನಮ್ಮೊಡನಿದ್ದೆ ಮತ್ತು ಇರಲಿಲ್ಲ। ನೀನಿದ್ದಲ್ಲಿಂದ ಸುಮಾರು ಒಂಭೈನೂರು ಕಿಲೋ ಮೀಟರ್ ದೂರದಲ್ಲಿರುವ ನಾನು, ನಿನ್ನೆ ದಿನ ಶನಿವಾರ ಗಡಿಬಿಡಿಯಲ್ಲಿ ಆಫೀಸಿಗೆ ತೆರಳಲು ತಯ್ಯಾರಾಗುತ್ತಿದ್ದೆ। ಅಷ್ಟರಲ್ಲಿ ನಿನ್ನ ಮಾಮ, ನನ್ನ ಅಣ್ಣ ಫೋನು ಮಾಡಿದ್ದ। ಅವನು ಕುಶಲೋಪರಿ ವಿಚಾರಿಸಲು ನನ್ನೊಡನೆ ಮಾತಾಡುವ ಸಮಯವಲ್ಲದೆ ಇತರ ಅವೇಳೆಯಲ್ಲಿ ಪೋನು ಮಾಡಿದರೆ, ನಾನು ಒಂದು ರೀತಿಯ ದಿಗಿಲಿನಿಂದಲೇ ಕರೆಯನ್ನು ಸ್ವೀಕರಿಸುತ್ತೇನೆ. ಹಾಗೆ ಆಯಿತು ನೋಡು.


ಆದರೆ ಇಂತ ಸುದ್ದಿಯನ್ನು ನಾನು ನಿರೀಕ್ಷಿಸಿರಲಿಲ್ಲ। ನೀನು ನಮ್ಮ ಕುಟುಂಬಕ್ಕೆಲ್ಲ ಗಗ್ಗಣ್ಣ ಆಗಿದ್ದೆ. ಅದೇ ನಿನ್ನ ಮಾಮ, ರಾತ್ರಿ ಒಂದು ಗಂಟೆ ಸುಮಾರಿಗೆ ಗಗ್ಗಣ್ಣ ನಮ್ಮನ್ನು ಬಿಟ್ಟಗಲಿದ ಎಂದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ ಪುಟ್ಟಾ.... ಗಂಟಲುಬ್ಬಿತ್ತು. ಹೌದಾ, ಏನಾಗಿತ್ತು ಅಂತ ಕೇಳಲೂ ಶಕ್ತಿಗುಂದಿತ್ತು. ನಾನು ಹುಟ್ಟಿದ ಬಳಿಕ ನಮ್ಮ ಕುಟುಂಬ ಎದುರಿಸಿದ ಮೊದಲ ಸಾವಿದು.

ಗಗ್ಗಣ್ಣಾ... ಹುಟ್ಟಿದ ಆರು ತಿಂಗಳ ಬಳಿಕ ಹೇಗಿದ್ದಿಯೋ, ಹದಿಮೂರು ವರ್ಷದ ಬಳಿಕ ನಿನ್ನೆ ನೀನು ನಮ್ಮೆಲ್ಲರನ್ನು ಬಿಟ್ಟು ಹೋದಾಗಲೂ ಹಾಗೆಯೇ ಇದ್ದೆ। ತಾತಾ... ಮಾಮ॥ ಬಿಟ್ಟರೆ ನಿಂಗೆ ಬೇರೆ ಪದಗಳು ತಿಳಿದಿರಲಿಲ್ಲ. ಬಾಯಿಗೆ ಕೊಟ್ಟ ಆಹಾರವನ್ನು ಜಗಿಯಲೂ ಗೊತ್ತಿರಲಿಲ್ಲ. ನಿನ್ನ ಹೆತ್ತವರಾದ, ನನ್ನ ಪ್ರೀತಿಯ ಸಣ್ಣಕ್ಕ ಮತ್ತು ಭಾವ, ನೀನು ನಮ್ಮೆಲ್ಲರಂತಾಗಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡಿದರು. ಯಾರೇ ಯಾವುದೇ ಮೂಲಗಳನ್ನು ಹೇಳಿದರೂ, ನಮ್ಮ ಗಗ್ಗಣ್ಣ ಸರಿಹೋದಾನೆ ಎಂಬ ಆಸೆಯಲ್ಲಿ ಊರೂರು ಅಲೆದು ಔಷಧ, ಭಸ್ಮ, ಎಣ್ಣೆ, ಲೇಪ ಎಲ್ಲವನ್ನೂ ಪ್ರಯತ್ನಿಸಿದರು. ಊಹುಂ... ನೀನು ಚೇತರಿಸಿಕೊಳ್ಳಲೇ ಇಲ್ಲ.

ನಾನು ಊರಿಗೆ ಬರುವಾಗ ನಿನ್ನ ಅಣ್ಣ-ತಂಗಿಯರಿಗೆಲ್ಲ ಏನಾದರೂ ತಂದರೆ ನಿಂಗೂ ಒಂದು ಪಾಲಿರುತ್ತಿತ್ತು। ಆದರೆ ಉಳಿದ ಮಕ್ಕಳು ಚಿಕ್ಕಮ್ಮೂ... ಅದು ಚೆನ್ನಾಗಿಲ್ಲ, ಇದು ಚೆನ್ನಾಗಿದೆ ಎಂದೋ, ಇಲ್ಲ ಹಂಚುವಿಕೆ ಸರಿಹೋಗಿಲ್ಲ ಎಂದೋ ನಗುತ್ತಾ, ಅಳುತ್ತಾ, ಮುಷ್ಕರ ಹೂಡುತ್ತಾ, ಮುಸಿಮುಸಿ-ದಸುಮುಸು ಮಾಡುತ್ತಾ ನನ್ನ ಸುತ್ತುಮುತ್ತು ಗಿರಕಿ ಹೊಡೆಯುತ್ತಿದ್ದರೆ, ಅಥವಾ, ನನ್ನ ತಲೆಯನ್ನು ಅವರ ಸುಪರ್ದಿಗೆ ಪಡೆದು ಜಡೆಹಾಕುತ್ತಲೋ, ಸಿಂಗಾರ ಮಾಡುತ್ತಲೋ ಇದ್ದರೆ ನಿಂಗೆ ಇದು ಯಾವುದೂ ಗೊತ್ತಾಗುತ್ತಿರಲಿಲ್ಲ. ನನ್ನ ಮಡಿಲಲ್ಲಿದ್ದರೂ ನಿನ್ನ ಸ್ಪಂದನವಿರುತ್ತಿರಲಿಲ್ಲ. ನಿನ್ನ ಪಾಡಿಗೆ ನೀನು ಮಲಗಿಯೇ ಇರುತ್ತಿದ್ದೆ. ಉಳಿದ ಮಕ್ಕಳ ಕಣ್ಣಲ್ಲಿ ಕಾಣುವ ಹೊಳಪು, ಅಳು, ನಗು, ಕುಣಿತ ಕೀಟಲೆ ಯೂವುದೂ ನಿಂಗೇ ಗೊತ್ತೇ ಇರಲಿಲ್ಲ ಎಂಬ ಸಂಕಟ ನಮ್ಮೆಲ್ಲರದಾಗಿತ್ತು ಕಂದಾ...

ನೀನೂ ಸಾಕಷ್ಟು ಕಷ್ಟ ಅನುಭವಿಸಿದೆ। ಏನಾಗುತ್ತದೆ ಎಂದು ಹೇಳಲು ನಿಂಗೆ ಗೊತ್ತಾಗುತ್ತಿರಲಿಲ್ಲ. ನೀನು ಕನಿಷ್ಠಪಕ್ಷ ಮಲಗಿದಲ್ಲಿಂದ ಎದ್ದು ನಡೆದಾಡುವಂತಷ್ಟಾದರೂ ಆಗಬೇಕೆಂದು ನಾವೆಲ್ಲ, ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದ್ದೆವು. ನಮಗೆ ಪರಸ್ಪರ ಅದೃಷ್ಟವಿರಲಿಲ್ಲ.

ನಿನ್ನ ಅಗಲಿಕೆ, ಆ ಖಾಲಿತನ ತುಂಬುವುದಿಲ್ಲವೆಂಬುದು ಕಟು ವಾಸ್ತವ ಗಗ್ಗಣ್ಣಾ। ನಿನ್ನಂತೆಯೇ ಅಮಾಯಕಳು ನಿನ್ನ ಹೆತ್ತಮ್ಮ. ನಿನ್ನನ್ನು ಜತನದಿಂದ ಕಾಪಾಡಿಕೊಂಡಂತೆ, ಒಂದು ಕಾಲದಲ್ಲಿ ನನ್ನನ್ನೂ ಕಾಯ್ದವಳು. ಹೆತ್ತ ಹೊಟ್ಟೆಯ ಸಂಕಟ ಎದುರಿಸುವ ಶಕ್ತಿ ಅವಳಿಗೆ ಲಭಿಸಲಿ. ಮತ್ತು,

ಜನ್ಮ, ಋಣಾನುಬಂಧ ಎಂಬುದೆಲ್ಲ ನಿಜವಾಗಿದ್ದರೆ, ನೀನು ಮತ್ತೊಮ್ಮೆ ಬಾ... ಅದ್ಯಾವ ಜನ್ಮದಲ್ಲಿ ಏನು ತಪ್ಪಾಗಿತ್ತೋ, ಈ ಜನ್ಮದ ನಿನ್ನ ಬದುಕು ಬದುಕೇ ಅಲ್ಲ. ನೀನು ಹೋದಲ್ಲಿ ನಿನ್ನ ಆತ್ಮ ಶಾಂತಿಯಿಂದಿರಲಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ