ಶುಕ್ರವಾರ, ಫೆಬ್ರವರಿ 15

ಅರ್ಥವಾಗದಿದ್ದ ಅಪ್ಪ!


ಅಪ್ಪ ತೀರಿಕೊಂಡು ಇಂದಿಗೆ ಮೂರು ವರ್ಷ.  ಅಪ್ಪ ಎಂದರೆ ಬರೀ ಕೋಪ, ದರ್ಪ ಅಷ್ಟೇ ಗೊತ್ತಿದ್ದಿದು ಬಾಲ್ಯದಲ್ಲಿ. "ಅಪ್ಪಾ .... ಐ ಲವ್ ಯು ಪಾ.... ಎಂದೆಲ್ಲ ಹೇಳಲು-ಹಾಡಲು ಅವಕಾಶವೇ ಇರಲಿಲ್ಲ. (ಗೊತ್ತೂ ಇರಲಿಲ್ಲ) ಹಾಗೆ ಹೇಳುತ್ತಿದ್ದರೆ "ನಿನ್ನ ನೊಣೆ ತಕಂಡ್ ನಡಿ ಇಲ್ಲಿಂದ" ಅಂತ ಬಯ್ದು ಅಥವಾ ಹೊಡೆದು ಕಳುಹಿಸುತ್ತಿದ್ದರೇನೋ. ಹಿರಿಮಗನಾಗಿದ್ದ ಅವರು, ಅವರ ಬಾಲ್ಯದಲ್ಲಿ ಅವರಿವರ ಮನೆಗಳಲ್ಲಿ ದನಗಳನ್ನು ಮೇಯಿಸಿ, ಇತರ ಕೆಲಸ ಮಾಡಿ ಹೊಟ್ಟೆ ಹೊರೆದು ಕುಟುಂಬಕ್ಕೆ ಆಧಾರವಾಗಿದ್ದರು. ಬಳಿಕ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಮೈ ಮುರಿದು ದುಡಿಯುವುದಷ್ಟೆ ಗೊತ್ತಿದ್ದು ಅವರಿಗೆ. ರೈತ ಅನ್ನದಾತ, ದೇಶದ ಬೆನ್ನೆಲೆಬು ಎಂಬುದೆಲ್ಲ ಗೊತ್ತೇ ಇರಲಿಲ್ಲ ಅವರಿಗೆ. ಸಾಲಾಗಿ ಹುಟ್ಟಿದ್ದ ಐದು ಮಕ್ಕಳು, ಬಂದು ಹೋಗುವ ನೆಂಟರಿಷ್ಟರ ಹೊಟ್ಟೆತುಂಬಿಸಿ ದಿನದೂಡುವುದೇ ಅವರ ಪ್ರಧಾನ ಉದ್ದೇಶವಾಗಿತ್ತು. ಮೊದಲ ಮಗುವೆಂಬ ಮಮಕಾರದಿಂದ ದೊಡ್ಡಕ್ಕ ಮತ್ತು ಗಂಡುಮಗುವೆಂಬ ಪ್ರೀತಿಗೆ ಅಣ್ಣನನ್ನು ಎತ್ತಿ ಆಡಿಸಿದ್ದಿರಬಹುದು. ಯಾವಾಗಲಾದರೂ ಅಪರೂಪಕ್ಕೊಮ್ಮೆ ಆಟಿ ತಿಂಗಳ ಜಡಿ ಮಳೆಯೆಡೆಯಲ್ಲಿ ಸೂರ್ಯನ ಬೆಳಕು ಕಂಡಂತೆ ನನ್ನನ್ನು 'ಏ ಚಂದುಕುಟ್ಟೀ....' ಅಂತ ಮುದ್ದಾಡಿರಬಹುದು ಅಷ್ಟೆ. ಅವರ ಅಪರೂಪದ ಪ್ರೀತಿ ಎಂದರೂ ನನಗೆ ದಿಗಿಲೇ. ಅವರ ಬಳಿ ಹೋಗುವುದೇ ಭಯ.

ಇಂತಿಪ್ಪ ಅಪ್ಪ ಊರಿಗೆ ಉಪಕಾರಿ. ಯಾರೇ ಬಂದು ಏನೇ ಕೇಳಿದರೂ ಒಂದು ಕೇಳಿದವರಿಗೆ ಎರಡು ಕೊಟ್ಟು ಕಳುಹಿಸುತ್ತಿದ್ದರು. ಅನಕ್ಷರಸ್ಥನಾದರೂ ಅಲ್ಲಿಇಲ್ಲಿ ಕರೆದವರ ಪಂಚಾತಿಕೆಗೆ, ನ್ಯಾಯತೀರ್ಮಾನಕ್ಕೆ ಹೋಗುತ್ತಿದ್ದರು. ಒಂದೆಡೆ ಸಿಟ್ಟಿನಿಂದ ಸಿಡಿಸಿಡಿ ಅಂದರೆ; ಇನ್ನೊಂದೆಡೆ ಅವರ ಓರಗೆಯವರು ಭಾವಂದಿರನ್ನೆಲ್ಲ ಕಂಡಾಗ, ಭೇಟಿಯಾಗಾದ ತಮ್ಮೊಳಗೆ ಹುದುಗಿದ್ದ ವಿಪರೀತವಾದ ಹಾಸ್ಯಪ್ರಜ್ಞೆ ಮೆರೆಯುತ್ತಿದ್ದರು. ಆವಾಗೆಲ್ಲ ಅವರು ಇತರರನ್ನು ನಗಿಸಿ ನಕ್ಕಾಗ ಅಪ್ಪನಿಗೆ ನಗಲೂ ಗೊತ್ತುಂಟು ಎಂಬುದೇ ನನಗೊಂದು ಕೌತುಕ. ಮನೆಯಲ್ಲಿ ನಮ್ಮೊಡನೆ ಸಲಿಗೆಯಿಂದ ಮಾತಾಡಿ ನಕ್ಕುಬಿಟ್ಟಲ್ಲಿ ಅವರ ಯಜಮಾನಿಕೆಯ ಘನತೆಗೆ ಕುಂದುಂಟಾಗುತ್ತಿತ್ತೋ ಏನೋ! ಅದ್ಭುತವಾದ ಬಾಣಸಿಗ. ಮದುವೆ, ಗೃಹಪ್ರವೇಶ, ಭೂತದ ಕೋಲ ಮುಂತಾದ ಸಮಾರಂಭಗಳ ಅಡುಗೆ ಜವಾಬ್ದಾರಿ ಇವರನ್ನು ಹುಡುಕಿ ಬರುತ್ತಿತ್ತು. ಸೋಮಯಣ್ಣನ ಅಡುಗೆ ಎಂದರೆ ಅದಕ್ಕೆ ಬೇರೆಯದೆ ರುಚಿ. ಆಗೆಲ್ಲ ಕೇಟರಿಂಗ್ ಸರ್ವೀಸ್‌ಗಳು ಇಲ್ಲದ ಕಾಲ. ಅಂತ ಸಂದರ್ಭದಲ್ಲಿ ಇವರದ್ದು ಕಾಂಪ್ಲಿಮೆಂಟರಿ ಸೇವೆ.

ಯಾವಾಗಲಾದರೂ ಮನಸ್ಸಾದರೆ, ಸಂತುಷ್ಟತೆಯಿಂದ ಇದ್ದಾಗ, ಅವರು ಕೇಳಿತಿಳಿದಿದ್ದ ಜಾನಪದ ಹಾಡುಗಳು, ದೇವಿಪೂಂಜನ ಸಂಧಿ, ಪಾಡ್ದಾನಗಳು, ನೇಜಿ ಹಾಡುಗಳನ್ನೆಲ್ಲ ಸುಶ್ರಾವ್ಯವಾಗಿ ಹಾಡುತ್ತಿದ್ದರು. ವಾದ್ಯಸಂಗೀತವೆಂದರೆ ಬಲುಇಷ್ಟ. ಅಪರೂಪಕ್ಕೆ ಯಾರಾದರೂ ಬಸವನನ್ನು ಕುಣಿಸಿಕೊಂಡು ಬಂದಾಗ ಅಥವಾ ಇನ್ನಾವುದಾದರೂ ಓಲಗದವರು ಯಾರಾದರೂ ಬಂದರೆ ಕುಳ್ಳಿರಿಸಿ ವಾದ್ಯ ಊದಿಸಿ ಕುಷಿಪಡುತ್ತಿದ್ದರು. ಅವರಪ್ಪ ತೀರಿಕೊಂಡಾಗ ಶವಸಂಸ್ಕಾರಕ್ಕೆ ವಾದ್ಯದವರನ್ನು ಕರೆಸಿದ್ದಂತೆ.

ಕನ್ನಡ ಮೀಡಿಯಂಗಳು ಫ್ರೀ ಎಜುಕೇಶನ್ ವ್ಯವಸ್ಥೆಯಲ್ಲೇ ನಾನು ಓದಿದ್ದರೂ, ಆರ್ಥಿಕ ಬಿಕ್ಕಟ್ಟೇ ಉದ್ದಕ್ಕೂ ಇದ್ದುದರಿಂದ ಬಸ್ ಪಾಸಿಗೆ ಹದಿನೈದು ರೂಪಾಯಿ ಕೇಳಲೂ ಹೆದರಿಕೆ. ಅಂಜಿಕೆಯಿಂದಲೇ ಕೇಳಿದಾಗ ನಡೆದು ಹೋಗಲೇನು ಕಾಲಿಗೆ ರೋಗ ನಿಮಗೆ (10 ಕಿ.ಮೀ ದೂರ) ಎಂದು ಬಯ್ದೇ ಹಣ ಕೊಡುತ್ತಿದ್ದರು. ಕಾಲೇಜು ಮುಗಿದ ಬಳಿಕ ನಾನು ಒಂದುವರ್ಷದ ಕೋರ್ಸೆಂದು ಸುಳ್ಳು ಹೇಳಿ ಎಂ.ಎಗೆ ಸೇರಿದ್ದೆ. ಇನ್ನೊಂದು ವರ್ಷ ಮುಂದುವರಿಸಬೇಕು ಎಂದಾಗಲೂ ಎಗಾದಿಗಾ ಉಗಿದಿದ್ದರು. ಆದರೆ, ಎಂ.ಎ ಉತ್ತೀರ್ಣಳಾದ ಬಳಿಕ, ಅವರಿಗೆ ನನ್ನ ಮಗಳು ತುಂಬ ಓದಿದ್ದಾಳೆಂದು ಹೆಮ್ಮೆ. ನಂತರದಲ್ಲಿ ಕೆಎಎಸ್ ಪರೀಕ್ಷೆ ಪಾಸಾಗಿದ್ದೇನೆಂದು ಹೇಳಿದ್ದಾಗ ಅದೇನೆಂದು ಗೊತ್ತಿಲ್ಲದಿದ್ದರೂ ದೊಡ್ಡ ಪರೀಕ್ಷೆ ಪಾಸುಮಾಡಿದ್ದಾಳೆಂದು ಅವರ ದೋಸ್ತಿಗಳಿಗೆ ಹೇಳುತ್ತಿದ್ದರು. (ಬ್ರಹ್ಮಾಂಡ ಭ್ರಷ್ಟಾಚಾರದ ವ್ಯವಸ್ಥೆಯಿಂದಾಗಿ ನಾನು ಕೆಎಎಸ್ ಪಾಸಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತ್ತು) ನಾನು ಮನಗೆ ಹೋಗುವಾಗೆಲ್ಲ ಅವರ ಕಣ್ಣಲ್ಲಿ ಹೊಳಪು ಕಾಣುತ್ತಿದ್ದೆ. ನಾನು ದುಡಿಯಲಾರಂಭಿಸಿದ ನಂತರದಲ್ಲಿ ಮನೆಗೆ ಹೋದಾಗ ಅವರ ಕೈಯಲ್ಲಿ ಅಷ್ಟಿಷ್ಟು ದುಡ್ಡುಕೊಟ್ಟು ಏನು ಬೇಕಾದರೂ ತಕ್ಕೊಳ್ಳಿ ಅಂತ ಹೇಳುತ್ತಿದ್ದೆ. ಎಂದಿಗೂ ನಿನ್ನ ಸಂಬಳವೇನು? ಹೇಗೆ ಖರ್ಚು ಮಾಡ್ತಿಯಾ ಎಂದೆಲ್ಲ ಒಂದು ಮಾತೂ ಕೇಳಿದವರಲ್ಲ. ದುಂದುವೆಚ್ಚ ಮಾಡಬೇಡ ಎಂದಷ್ಟೇ ಅವರು ಹೇಳುತ್ತಿದ್ದುದು.

ಅಕ್ಕಂದಿರ ವಿವಾಹ ವಿಳಂಬವಾದ ಕಾರಣ, ಮತ್ತು ಓದು, ಹಾಳುಮೂಳು ಪರೀಕ್ಷೆಗಳೆಂದು ಈಗಬೇಡ ಮತ್ತೆಬೇಡ ಎಂದು ನಾನು ಹೇಳುತ್ತಿದ್ದುದರಿಂದಲೂ ನನ್ನ ವಿವಾಹದ ವಯಸ್ಸು ಮೀರುತ್ತಿತ್ತು. ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಮ್ಮೆ ಮನೆಗೆ ಹೋಗಿ ಹೊರಟು ನಿಂತು ಅವರ ಕಾಲಿಗೆ ನಮಸ್ಕರಿಸಿದಾಗ "ನಿಂಗೆ ಅಲ್ಲಿ ಯಾರಾದರೂ ಇಷ್ಟವಾದರೆ ಮದುವೆಯಾಗು, ಈಗ ಜಾತಿನೀತಿ ಎಲ್ಲ ಇಲ್ಲ" ಎಂದರು.  ದೇಶ ಸುತ್ತದ ಕೋಶ ಓದದ ಅಪ್ಪನ ಬಾಯಲ್ಲಿ ಈ ಮಾತು ಕೇಳಿ ಬೆರಗಾಗಿ ಹೋಗಿದ್ದೆ.

ಬಳಿಕ ಸ್ನೇಹಿತೆಯೊಬ್ಬಳು ತಂದಿದ್ದ ಅಂತರ್ಜಾತಿ ಸಂಧಾನದ ಮದುವೆ ಮಾತುಕತೆಗೆ ಸಂತೋಷದಿಂದಲೇ ಒಪ್ಪಿದ್ದರು. ಎರಡೇ ವರ್ಷಕ್ಕೆ ನನ್ನ ಗಂಡ ತೀರಿಕೊಂಡಾಗ ಪುಟ್ಟಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದರು. ಮನೋಹರ ತೀರಿಹೋದ ಬಳಿಕ ಒಮ್ಮೆ ಮನೆಗೆ ಹೋಗಿ ಅವರ ರೂಮಲ್ಲಿ ಅವರ ಪಕ್ಕ ಕುಳಿತು ಮಾತನಾಡುತ್ತಿದ್ದಾಗ, "ಈಗ ನಿಂಗೊಂದು ಜನ ಆಗ್ಬೇಕಲ್ಲ" ಅಂತ ಇದ್ದಕ್ಕಿದ್ದಂತೆ ಇನ್ನೊಂದು ಮದುವೆ ಆಗು ಅಂತ ಅವರು ಹೇಳಿದಾಗ ನಾನು ಮತ್ತೊಮ್ಮೆ ಬೆರಗಾಗಿದ್ದೆ.
ಹೆಣ್ಣುಮಕ್ಕಳು ಹಾಗಿರಬೇಕು, ಹೀಗಿರಬೇಕು ಎಂಬೆಲ್ಲ ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿತರಾಗಿದ್ದ ಕಾಲದಲ್ಲಿ ನಮ್ಮಪ್ಪ ನಾವು ಹೆಣ್ಣುಮಕ್ಕಳನ್ನು ಸೇರಿಸಿಕೊಂಡು ಗುಳಿಗನಿಗೆ ಅಗೇಲು ಹಾಕುತ್ತಿದ್ದರು. ನಂಗೆ ದೇವರು ಹೆಣ್ಣು ಮಕ್ಕಳನ್ನೇ ಕೊಟ್ಟದ್ದು, ಬನ್ನಿಮಕ್ಕಳೇ ಅಂತ ಗುಳಿಗನ ಕಲ್ಲಿನ ಬಳಿ ಕರೆದೊಯ್ಯುತ್ತಿದ್ದರು. ಇಲ್ಲವಾದರೆ ಹೆಣ್ಣುಮಕ್ಕಳಿಗೆ ಇದು ನಿಷಿದ್ಧ.
ಬರೀ ಅಪ್ಪನ ಸಿಟ್ಟಿನ ಮುಖವನ್ನೇ ಕಂಡಿದ್ದ, ಅಪ್ಪ ಅಂದರೆ ಬರೀ ಕೋಪ ಎಂದೇ ಅಂದುಕೊಂಡಿದ್ದ ನನಗೆ ಅವರ ಇನ್ನೊಂದು ಉದಾತ್ತ ಮುಖವನ್ನು ಗುರುತಿಸಲು ಬಹಳ ಸಮಯವೇ ಹಿಡಿದಿತ್ತು.

ಹುಲಿಯಂತೆ ಅಬ್ಬರಿಸುತ್ತಿದ್ದ, ಸಿಂಹದಂತೆ ಘರ್ಜಿಸುತ್ತಿದ್ದ ಅಪ್ಪ ನನ್ನಮ್ಮ ತೀರಿದ ಬಳಿಕ ಮೆತ್ತಗಾಗಿದ್ದರು. ಬಳಿಕ ಅಂಗಳದ ಬದಿಯಲ್ಲಿ ಬಿದ್ದು ಕಾಲಿಗೆ ಆದ ಗಾಯ ಅವರನ್ನು ತೀರಾ ಕಂಗೆಡಿಸಿತ್ತು. ಅಲೋಪತಿ ಔಷಧಿ ತಿಂದೇ ಗೊತ್ತಿಲ್ಲದಿದ್ದ ಅವರು ಕಾಲುನೋವಿಗಾಗಿ ಆಸ್ಪತ್ರೆ ವಾಸಿಯಾದಾಗ ತೀವ್ರ ಚಡಪಡಿಕೆಗೆ ಈಡಾಗಿದ್ದರು. ಕೆಲವೊಮ್ಮೆ ಚಿತ್ತ ಭ್ರಮಣೆಯಾದಂತೆ ವರ್ತಿಸುತ್ತಿದ್ದರು. ಗಾಯದ ವಾಸಿಗಾಗಿ ಮಾಡಿದ ಆಪರೇಶನ್ ಬಳಿಕ ಸಂಪೂರ್ಣ ಕುಸಿದು ಹೋದವರು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಕಾಲುನೋವು ಗುಣವಾಗದೇ ಸಂಪೂರ್ಣ ಹಾಸಿಗೆವಾಸಿಯಾಗಿ ಅಸಹಾಯಕರಾಗಿ ಹೋದರು. ಶ್ರವಣ ಶಕ್ತಿಯೂ ಇಂಗಿ ಹೋಗಿತ್ತು. ಕೊನೆಕೊನೆಯಲ್ಲಿ ನಮ್ಮನ್ನೆಲ್ಲ ಕಾಣುವಾಗ ಕಣ್ಣೀರು ಸುರಿಸುತ್ತಿದ್ದರು. ತೀರಿಕೊಳ್ಳುವ ನಾಲ್ಕುದಿನ ಹಿಂದೆ ಮನೆಗೆ ಹೋಗಿದ್ದೆ. ಕಿತ್ತಳೆ ಹಣ್ಣು ಸುಲಿದು ಬಾಯಿಗೆ ಕೊಟ್ಟಾಗ ಪುಟ್ಟಮಕ್ಕಳಂತೆ ಚೀಪಿಚೀಪಿ ತಿಂದಿದ್ದರು. ಅದೇ ಕೊನೆ. ನಾಲ್ಕು ದಿನದ ಬಳಿಕ ಅಪ್ಪನೆಂಬ ದೀರ್ಘಾಯುಷಿಯ ಅಧ್ಯಾಯ ಮುಗಿಯಿತು.

4 ಕಾಮೆಂಟ್‌ಗಳು:

 1. ಶಾನಿ ಮೇಡಮ್, ನೀವು ಈ ಲೇಖನ ಬರೆದು ಸುಮಾರು ಎರಡು ತಿಂಗಳ ಬಳಿಕ ನಾನು ಪ್ರತಿಕ್ರಿಯಿಸುತ್ತಿದ್ದೇನೆ. ಕಾರಣವೇನೆಂದರೆ ನಾನು ಡಿಶಂಬರ ೧೫ರಿಂದ ಎಪ್ರಿಲ್ ೬ರವರೆಗೆ ಊರಿನಲ್ಲಿ ಇರಲಿಲ್ಲ. ಅಲ್ಲದೆ ನನ್ನ ಬಳಿ ಅಂತರ್ಜಾಲಕ್ಕೆ ಹೋಗಲು ಯಾವ ಸಾಧನವೂ ಇರಲಿಲ್ಲ. ಇದೀಗ ನಾನು ನೋಡದ ಹಳೆಯ postಗಳನ್ನು ಹುಡುಕುವಾಗ ನಿಮ್ಮ post ಕಣ್ಣಿಗೆ ಬಿದ್ದು ಸುಖವಾಯಿತು. ಆದರೆ ಓದುತ್ತಿದ್ದಂತೆ, ಅಪ್ಪನನ್ನು ಕಳೆದುಕೊಂಡ ನಿಮ್ಮ ಬಗೆಗೆ ವಿಷಾದವೂ ಆಯಿತು. ಸಮಾಧಾನ ಮಾಡಿಕೊಳ್ಳಿರಿ ಎಂದಷ್ಟೇ ಹೇಳಬಲ್ಲೆ.

  ಪ್ರತ್ಯುತ್ತರಅಳಿಸಿ
 2. ಧನ್ಯವಾದಗಳು ಕಾಕ. ನಾನು ಇದೀಗ ಅದೆಷ್ಟೋ ದಿನಗಳ ಬಳಿಕ ಬ್ಲಾಗ್ ಓಪನ್ ಮಾಡಿದೆ. ತಕ್ಷಣ ಧನ್ಯವಾದಗಳನ್ನು ಅರ್ಪಿಸದಿರುವುದಕ್ಕೆ ಕ್ಷಣೆ ಇರಲಿ

  ಪ್ರತ್ಯುತ್ತರಅಳಿಸಿ
 3. ಶಾನಿಯವರೇ,ಈ ಬರಹ ತುಂಬ ಮುದ್ದಾಗಿ, ಫಲಾಪೇಕ್ಷೆಯಿಲ್ಲದೇ ಬಂದಂತಿದೆ. ನನಗೂ ನನ್ನ ತಂದೆಯವರ ಕೊನೆಯ ದಿನಗಳಲ್ಲಿ ಇಂಥದ್ದೇ ಭಾವನೆ.ಅವರವರ ಕಾಲಘಟ್ಟದ ಕಷ್ಟದಲ್ಲೂ ಅವರು ನಮ್ಮನ್ನೆಲ್ಲ ಒಂದಿಷ್ಟು ಓದಿಸಿ, ಬೆಳೆಸಿದ್ದು ಸಣ್ಣ ಮಾತೇನಲ್ಲ ಅಂತ ನನ್ನ ಇವತ್ತಿನ ಅನಿಸಿಕೆ.ಮತ್ತೊಮ್ಮೆ, ತುಂಬ ಚೆಂದವಿದೆ ನಿಮ್ಮ ಬರಹ. 
  -ರಾಜೋ  

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. ನಿಮ್ಮ ಕಾಮೆಂಟನ್ನು ಒಂದೂಮುಕ್ಕಾಲು ವರ್ಷ ಕಳೆದು ನೋಡುತ್ತಿದ್ದೇನೆ. ತುಂಬ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ
   -ಶಾನಿ

   ಅಳಿಸಿ