ಇದೇನಿದು ಹಂದಿಜ್ವರಕ್ಕೆ ಬಲಿಯಾಗುವವರ ಸಂಖ್ಯೆ ಕ್ರಿಕೆಟ್ ಸ್ಕೋರ್ ತರಹ ಪ್ರಕಟವಾಗುತ್ತಿದೆ ಅಂತ ಸಹೋದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದರು ಬೆಳಿಗ್ಗೆ. ಇದು ನಿಜ ಕೂಡ. ಇನ್ನು ಕೆಲವು ದಿನ ಕಳೆದರೆ ಮಾಧ್ಯಮಗಳಲ್ಲಿ 'ಹಂದಿಜ್ವರ: ಇಂದಿನ ಸ್ಕೋರ್' ಎಂಬ ಸುದ್ದಿಗಳು ಪ್ರಕಟವಾದಾವು ಅಂತ ಮತ್ತೊಬ್ಬರು ಸೇರಿಸಿದರು. ಮತ್ತೊಬ್ಬರ ಪ್ರಕಾರ ಇದು ಚುನಾವಣಾ ಫಲಿತಾಂಶದ ಸಂಖ್ಯೆಗಳಂತೆ ಘೋಷಣೆಯಾಗುತ್ತಿದೆ. ಅದೇನೆ ಇರಲಿ ಈ ಮಾರಣಾಂತಿಕ ರೋಗ ಆತಂಕಕಾರಿ ಮಾತ್ರ ನಿಜ.
ಈ ಸಂದೇಶವನ್ನು ನೀವು ಕಾಳಜಿವಹಿಸುವ ಎಲ್ಲರಿಗೂ ಕಳುಹಿಸಿ ಎಂಬ ಪೀಠಿಕೆಯೊಂದಿಗೆ ಇದ್ದ ಈ ಸಂದೇಶ ಗೆಳತಿ ಲಲಿತಳ ಮೊಬೈಲಿನಿಂದ ನಿನ್ನೆ ಮಧ್ಯರಾತ್ರಿ ನನ್ನ ಮೊಬೈಲಿಗೆ ಬಂದಿಳಿದಿತ್ತು. ನನ್ನ ಕಾಳಜಿಯ ಪಟ್ಟಿ ದೊಡ್ಡದೇ ಇದೆ. ಇದರಲ್ಲಿ ನೀವೂ ಸೇರಿರುವ ಕಾರಣ ಮತ್ತು ನಿಮ್ಮ ನಂಬರ್ ನನ್ನ ಬಳಿ ಇಲ್ಲದ ಕಾರಣ ಇದನ್ನು ಇಲ್ಲಿ ಹಂಚಿಕೊಳ್ಳೋಣ ಎಂದೆನಿಸಿತು. ಇದು ನಿಮಗೂ ಬಂದಿರಬಹುದು. ಆದರೂ ಒಮ್ಮೆ ಕಣ್ಣು ಹಾಯಿಸಿಬಿಡಿ.
ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.
* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ.
* ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ.
* ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು)
* ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ
* ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ
* ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ
* ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ
ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.
ಈ ರೋಗ ಯಾರಿಗೂ ಸೋಂಕದಿರಲಿ ಮತ್ತು ಸೋಂಕು ತಗುಲಿದವರು ಬೇಗ ಗುಣಮುಖವಾಲಿ ಎಂದು ಹಾರೈಸುತ್ತಾ, ಈ ರೋಗದ ಲಕ್ಷಣ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು 'ವೆಬ್ ದುನಿಯಾ' ಕನ್ನಡದಲ್ಲಿ ಪ್ರಕಟವಾದ ಬರಹವನ್ನು ಇಲ್ಲಿ ಎತ್ತಾಕಿದ್ದೇನೆ. ಯಾರಿಗಾದರೂ ಅನುಕೂಲವಾದರೂ ಆಗಬಹುದು.
ಈ ರೋಗದ ಲಕ್ಷಣಗಳೇನು? ಇಲ್ಲಿ ನೋಡೋಣ
ಸ್ವೈನ್ ಫ್ಲೂ ಒಂದು ವೈರಲ್ ಸೋಂಕು ಆಗಿದ್ದು ಅದರ ಸಾಮಾನ್ಯವಾದ ಲಕ್ಷಣಗಳೆಂದರೆ, ಕಟ್ಟಿದ ಮೂಗು ಅಥವಾ ನೆಗಡಿ, ವಾಕರಿಕೆ, ಚಳಿ, ಕೆಮ್ಮು, ಗಂಟಲು ಬಿಗಿತ, ಗಂಟಲು ಕೆರೆತ, ಗಂಟಲೂತ, ಮೈಕೈನೋವು, ನಿಶ್ಶಕ್ತಿ ಮತ್ತು ಸುಸ್ತು.
ಇದಲ್ಲದೆ, ಉಸಿರಾಟದ ತೊಂದರೆ ಹಾಗೂ ಭೇದಿಯೂ ಕಾಣಿಸಿಕೊಳ್ಳಬಹುದು.
ಕೆಮ್ಮು, ಸೀನು ಅಥವಾ ಸೋಂಕುಪೀಡಿತ ಸ್ಥಳ ಅಥವಾ ವಸ್ತುಗಳನ್ನು ಮುಟ್ಟಿದ ಬಳಿಕ ನಿಮ್ಮ ಬಾಯಿ ಅಥವಾ ಮೂಗನ್ನು ಮುಟ್ಟುವ ಮೂಲಕ ಸೋಂಕು ಹಬ್ಬುತ್ತದೆ.
ನೀವು ಸೋಂಕು ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದರೆ ಅಥವಾ ಸೋಂಕು ಪೀಡಿತ ವ್ಯಕ್ತಿಯನ್ನು ಭೇಟಿಯಾದರೆ, ನಿಕಟ ಸಂಪರ್ಕಕ್ಕೆ ಬಂದರೆ ಎಚ್1ಎನ್1 ತಪಾಸಣೆ ಮಾಡಿಸಿಕೊಳ್ಳಿ.
ದೀರ್ಘಕಾಲ ವೈರಲ್ ಸೋಂಕಿನಿಂದ ಬಳಲುತ್ತಿದ್ದರೂ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ನಿರ್ಲಕ್ಷಿಸಬೇಡಿ.
ಮುಂಜಾಗೃತಾ ಕ್ರಮಗಳೇನು?
ಶಾಲಾ ಕಾಲೇಜುಗಳಿಗೆ ತೆರಳುವವರು ಹಾಗೂ ಕೆಲಸಕ್ಕಾಗಿ ಮನೆಯಿಂದ ತೆರಳುವವರಿಗೆ ಅಪಾಯ ಹೆಚ್ಚು. ಹವಾನಿಯಂತ್ರಿತ ಕೊಠಡಿಗಳು ಹಾಗೂ ಮುಚ್ಚಿದ ವಾತಾವರಣದಲ್ಲಿ ಇರುವವರಿಗೂ ತಕ್ಷಣವೇ ರೋಗ ತಗಲುವ ಅಪಾಯ ಹೆಚ್ಚು.
ಬಳಸಿ ಎಸೆಯುವ(ಡಿಸ್ಪೋಸೇಬಲ್) ಟಿಶ್ಯೂಗಳನ್ನೇ ಬಳಸಿ. ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಯಾವಾಗಲೂ ಮುಚ್ಚಿಕೊಳ್ಳಿ. ಎಂಜಲು, ಕಫ ಉಗುಳುವ ವೇಳೆ ಬಳಸಿದ ಟಿಶ್ಯೂ ಎಸೆಯುವ ವೇಳೆ ಅತಿ ಜಾಗರೂಕತೆ ವಹಿಸಿ.
ಟೇಬಲ್ ಟಾಪ್‌ಗಳು, ಟೆಲಿಫೋನ್‌ಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ಯಾವಾಗಲೂ ಕೆಲವು ವೈರಸ್‌ಗಳಿರುತ್ತವೆ. ಹಾಗಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬೇಡಿ.
ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಸೋಂಕು ತಡೆಗೆ ಪರಿಣಾಮಕಾರಿ ಮಾರ್ಗ. ಆಲ್ಕೋಹಾಲ್ ಆಧಾರಿತ ಜೆಲ್ ಅಥವಾ ನೊರೆಬೀರುವ ಸ್ಯಾನಿಟೈಸರ್‌ಗಳ ಬಳಕೆ ಈ ವೈರಸ್‌ಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ.
ಆಹಾರಪದಾರ್ಥಗಳು
ಈ ರೋಗಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಯಾಕೆಂದರೆ, ಇದು ಆಹಾರ ಸಂಬಂಧೀ ಕಾಯಿಲೆಯಲ್ಲ. ಸೋಂಕು ಪೀಡಿತ ರೋಗಿಗಳು ಕೆಮ್ಮುವ, ಸೀನುವವೇಳೆ ಹರಡುವ ಗಾಳಿಯಲ್ಲಿ ಹಬ್ಬಬಹುದು. ಅಥವಾ ಕೈಗಳಲ್ಲಿರುವ ರೋಗಾಣುಗಳು ಅಥವಾ ಮೇಲ್ಮೈ ಮೂಲಕ ಹಬ್ಬಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಾದ ಮಾಸ್ಕ್ ಧರಿಸುವುದೂ ಸಹ ಉತ್ತಮವೇ ಆದರೂ, ಮಾಸ್ಕೊಂದೇ ನಿಮ್ಮನ್ನು ರೋಗದಿಂದ ತಡೆಯದು.
ಸಾಕಷ್ಟು ನೀರು ಸೇವಿಸಿ ಹಾಗೂ ಸಾಕಷ್ಟು ನಿದ್ದೆ ಮಾಡಿ. ನಿದ್ದೆಗೆಡುವುದು ಅನಾರೋಗ್ಯಕರ ಅಭ್ಯಾಸ ಹಾಗೂ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.
ರೋಗಪೀಡಿತರ ನಿಕಟ ಸಂಪರ್ಕದಿಂದ ದೂರವಿರಿ. ಶ್ವಾಸಕೋಶದ ಸೋಂಕಿನಿಂದ ಬಳುಲುತ್ತಿರುವವರಿಂದ ಕನಿಷ್ಠ ಮೂರು ಅಡಿಗಳ ದೂರದಲ್ಲಿ ನಿಲ್ಲಿ.
ಮನೆಯೊಳಗೆ ಸೂರ್ಯನ ಕಿರಣಗಳು ಬೀಳುವಂತೆ ಕಿಟಿಕಿ ಬಾಗಿಲುಗಳು ತೆರೆದಿರಲಿ. ಅಡುಗೆ ಮನೆ ಹಾಗೂ ವಿಶ್ರಾಂತಿ ಕೊಠಡಿಗಳು ಸ್ವಚ್ಛವಾಗಿರಲಿ.
ಒಂದು ವೇಳೆ ಇದಾಗಲೇ ಸೋಂಕು ತಗುಲಿದ್ದರೆ,
ಕಾಯಿಲೆ ಸಂಪೂರ್ಣ ಗುಣವಾಗುವ ತನಕ ನೀವು ಕೊಠಡಿಯೊಳಗೆಯೇ ಇರಿ. ಮಾಸ್ಕ್ ಧರಿಸುವುದು ಕಡ್ಡಾಯ.
ಸಾಮಾಜಿಕ ಸಮಾರಂಭಗಳು, ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಿಗೆ ಹೋಗದಿರಿ. ಇದರಿಂದ ಸೋಂಕು ಹಬ್ಬುವುದನ್ನು ತಪ್ಪಿಸಬಹುದಾಗಿದೆ,
ಹಂದಿಜ್ವರವು ಮೊದಲ ಐದು ದಿನಗಳ ಕಾಲ ಅತಿಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಮಕ್ಕಳಾಗಿದ್ದಲ್ಲಿ ಹತ್ತು ದಿನಗಳ ಕಾಲ ರೋಗವು ಸಾಂಕ್ರಾಮಿಕವಾಗಿರುತ್ತದೆ.
ಹೆಲ್ಪ್‌ಲೈನ್ ಫೋನ್ ನಂಬರ್‌ಗಳು
ಆಲ್ ಇಂಡಿಯಾ ಉಚಿತ ಎಚ್1ಎನ್1 ಹೆಲ್ಪ್‌ಲೈನ್: 1075 ಅಥವಾ 1800-11-4377
ಬೆಂಗಳೂರು: ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ - 91-80-26632634
ದೆಹಲಿ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ: 011-24525211, 23404328, 23365525
ದೀನ್ ದಯಾಳ್ ಆಸ್ಪತ್ರೆ: 011-25125259
ಚೆನ್ನೈ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 044-25912686
ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ: 09442012555
ಕೋಲ್ಕತಾ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 09433392182/09434009077
ಹೈದರಾಬಾದ್: ಆಂಧ್ರ ಪ್ರದೇಶ ಎದೆ ರೋಗಗಳ ಆಸ್ಪತ್ರೆ: 040-23814939
ಮುಂಬೈ: ಕಸ್ತೂರ್ಬಾ ಆಸ್ಪತ್ರೆ: 022-23083901, 23083902, 23083903, 23083904
ಪುಣೆ: ಡಾ| ನಾಯ್ಡು ಸಾಂಕ್ರಾಮಿಕ ರೋಗ ಆಸ್ಪತ್ರೆ - 09923130909