ಬಲ್ಲಿರೇನಯ್ಯಾ......
ಭಳಿರೇ ಪರಾಕ್ರಮ ಕಂಠೀರವಾ.......
ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಈ......ಅಖ್ಹಂಡ್ಹ ಭರತಖಂಡದ ಭಾವೀ ಸಾಮ್ರಾಟರಾರೆಂದು ಕೇಳಿ ಬಲ್ಲಿರೀ....
ಕಾಲ ಕೃಷ್ಣ ಅಡ್ಡವಾಣಿ ಎಂದು ಬಾ ರತಿಯ ಜನ ತಾ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ....
ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....
ಇರುವಂತಹಾ ಸ್ಥಳ.....?
ನವದೆಹಲಿ ಎಂದುಕೊಳ್ಳಬಹುದೂ...
ಬಂದಂತಹಾ ಕಾರ್ಯ....?
ಮೊನ್ನೆ ನಡೆದ ಚ್ಹುನ್ಹಾವಣಾ.....ಯುದ್ಧದಲ್ಲಿ ಬಾ ರತಿಯ ಪಕ್ಷಕ್ಕೆ ಮತದ್ಹಾ....ರ ಮಹಾಪ್ರಭು ನೀಡಿರುವ ಟಾಂಗಿನ ವಿಮರ್ಷೆ.... ಎಲ್ಲಿತಪ್ಪಿದ್ದೇವೆಂಬ ಆತ್ಮ ನಿವೇದನೆ, ಮುಂದಿನ ಮಹಾಕದನದ ರಣತಂತ್ರ.... ಒಂದೇ....? ಎರಡೇ.....? ಅನ್ಹೇಕವಿದೆ..... ಅನ್ಹೇಕವಿದೆ..... ಅನ್ಹೇಕವಿದೆ.....
ಹಯ್ಯೋ ಶ್ರೀ ರಾಮಚಂದ್ರಾ.... ಇದೇನಾಗಿ ಹೋಯಿತು ತಂದೇ..... ನಿನ್ನ ಹೆಸರನ್ನು ಮುಂದಿಟ್ಟು ನಾವು ಅದೆಷ್ಟೇ ಕಾರ್ಯತಂತ್ರಗಳನ್ನು ಹಣೆದರೂ, ಸಾಧ್ಯವಿರುವಲ್ಲೆಲ್ಲ ಬೆಂಕಿಯನ್ನೇ ಹಚ್ಟಿದರೂ ನಮ್ಮ ಕಾರ್ಯವೇಕೆ ಸಫಲವಾಗಲಿಲ್ಲ. ನಮಗ್ಯಾಕೆ ನಿನ್ನ ಸಂಪೂರ್ಣ ಯಶಸ್ಸಿಲ್ಲಾ....? ಹೀಗಾದರೇ ನಾವು ಹೇಗೆ ಸುಲಭವಾಗಿ ಭರತಖಂಡದ ಸಾಮ್ರಾಟರಾಗುವುದೂ....? ಆ ಗದ್ದುಗೆಯನ್ನು ಏರುವುದಾದರೂ ಹೇಗೆ...? ಇದೇ ಚಿಂತೆ ನಮ್ಮನ್ನು ಹಗಲಿರುಳೂ ಕಾಡುತ್ತಿದೆ. ಈ ನಮ್ಮ ದೆಹಲಿಯ ಕೊರೆಯುವ ಚಳಿಯಲ್ಲೂ ಮೈಯೊಳು ಬೆವರೊಡೆವಂತೆ ಮಾಡಿದ್ದಾರೆ ನಮ್ಮ ಪ್ರಜೆ ಎಂಬ ಪ್ರಭುಗಳು. ಚಳಿಯನ್ನು ಹೊಡೆದೊಡಿಸಿ ಮೈಗೆ ಮುದನೀಡುವ ದಪ್ಪದಪ್ಪದ ಕಂಬಳಿಗಳನ್ನು ಹೊದ್ದು ಸುರುಟಿ ಮುರುಟಿ ಮಲಗಿದರೂ ನಿದಿರಾ ದೇವಿ ನಮ್ಮತ್ತ ಸುಳಿಯುತ್ತಲೇ ಇಲ್ಲವಲ್ಲಾ.....? ಆ ಅಸತ್ಯ ಅನ್ವೇಷಿಗಳು ಹೇಳುವಂತೆ ತಲೆಯನ್ನು ಪರಪರನೆಯೂ, ಬಳಿಕ ರಪರಪನೆಯೂ ಕೆರೆದುಕೊಂಡರೂ ಪ್ರಯೋಜನವಾಗುತ್ತಿಲ್ಲವಲ್ಲಾ..... ರಾಮಾ.... ಕೃಷ್ಣಾ..... ಡಂಗೂರದವರಿಗೆ ಯಾವ ಮುಖವನ್ನು ತೋರಿಸಲೀ...... ಅವರ ಬಾಯಿಬೇಧಿಗೆ ಯಾವ ಮದ್ದನ್ನು ಬಳಸಲೀ....ಒಡ್ಡೋಲಗವನ್ನೇ ಮಾಡದೆ ಕೆಲವು ದಿವಸಗಳಾದವ್ಹೂ..... ಎಷ್ಟುದಿನ ತಲೆಮರೆಸಿಕೊಳ್ಳಬಹುದೂ.... ಇನ್ನಿನ್ನೂ ಹೀಗೆ ಇರಲಾಗುವುದಿಲ್ಲ. ಅದೇನಾಗುತ್ತದೆಯೋ ನೋಡೇ ಬಿಡೋಣಾ.....
ಯಾರಲ್ಲೀ......?
ಸ್ವಾಮೀ ಕಾಲ ಕೃಷ್ಣರೇ........ ನಮನಗಳು.... ಕುಶಲವೇ....ಕ್ಷೇಮವೇ...
ಪ್ರತಿ ನಮನಗಳು.... ನಮ್ಮಪರಿಸ್ಥಿತಿಯನ್ನು ತಿಳಿದೂತಿಳಿದೂ ಕುಶಲವೇ... ಕ್ಷೇಮವೇ ಎಂದೆನ್ನುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯದಿರೀ ಭಾಗವತರೇ.... ಅದೇನು ಪ್ರಶ್ನೆಗಳನ್ನು ಹೊತ್ತು ತಂದಿರುವಿರೋ ನೇರವಾಗಿ ಕೇಳುವಂತವರಾಗಿ......
ಕಾಲ ಕೃಷ್ಣರೇ..... ಮೊನ್ನೆ ನಡೆದ ಕದನದಲ್ಲಿ ನಿಮ್ಮ ಎದುರಾಳಿಗಳು ನಿಮ್ಮ ಮೇಲೆ ಸವಾರಿ ಮಾಡಿದ್ದಾರೆ ಎಂದೆನ್ನಬಹುದು. ನಿಮ್ಮ ಕೈಯೊಳಗಿದ್ದ 'ರಾಜೇ' ಸ್ಥಾನ ಮತ್ತು ಬಹಳ ನಿರೀಕ್ಷೆ ಇಟ್ಟಿದ್ದ ದೆಹಲಿ ಪ್ರಾಂತ್ಯಗಳು ನಿಮ್ಮ ಎದುರಾಳಿಗಳ ಸುಪರ್ದಿಗೆ ಬಂದಿದೆ. ಮಧ್ಯಪ್ರದೇಶವೆಂಬ ಪ್ರಾಂತ್ಯ ನಿಮ್ಮ್ ಕೈಜಾರದಿದ್ದರೂ, ಹಿಡಿತದ ಬಿಗಿ ಸಡಿಲಗೊಂಡಿದೆಯಲ್ಲಾ ಪ್ರಭುಗಳೇ....? ಛತ್ತೀಸ್‌ಗಢವೆಂಬ ಪ್ರಾಂತ್ಯದಲ್ಲೂ ಹೀಗೇ ಆಗಿದೆ..... ಯಾಕೇ...? ಏನಾಯಿತೂ....? ಎಲ್ಲಿ ತಪ್ಪೀದ್ದೀರೀ.....?
ಆಹಾ... ಭಾಗವತರೇ...... ಏನಾಗಿ ಹೋಯಿತೆಂಬುದೂ ನಮಗೂ ಸರಿಯಾಗಿ ಗೊತ್ತಿಲ್ಲ. ಕೈ ತಪ್ಪಿದ 'ರಾಜೇ' ಸ್ಥಾನದಲ್ಲಿ ರಾಣಿಯವರ ದರ್ಬಾರಿನ ಅಬ್ಬರ ನಮ್ಮ ಸಾಮಂತರುಗಳಿಗೇ ಸಹಿಸಲು ಒಂದಿಷ್ಟು ಕಷ್ಟಕರವಾಗಿತ್ತಂತೆ. ಅದೂ ಅಲ್ಲದೇ.... ಅಲ್ಲಿನ ಆಂತರಿಕ ವಿಚಾರಗಳು, ಜಾತೀ ರಾಜಕೀಯಗಳು, ರಾಣಿಯರ ದುರಹಂಕಾರಗಳು...... ಕಾರಣವಿರಬಹುದು. ಆದರೇ..... ಇಲ್ಲಿ ಕೇಳಿ ಭಾಗವತರೆ, ಆ ಸೀತಾಮಾತೆ ನಮ್ಮ ಕೈಬಿಡಲಿಲ್ಲ. ಛತ್ತೀಸ್‌ಗಡ ಶ್ರೀರಾಮಚಂದ್ರನ ಸತಿ ಸೀತಾಮಾತೆ ಮೆಟ್ಟಿದ, ಓಡಾಡಿದ ನೆಲ. ರಾಮಭಕ್ತರಾದ ನಮ್ಮನ್ನು ಆ ತಾಯಿಯೇ ಕಾಪಾಡಿ ಮರಳಿ ಅಧಿಕಾರ ಧಕ್ಕುವಂತೆ ಮಾಡಿದ್ದಾಳೆ.
ಅರ್ಥವಾಯಿತು, ಅರ್ಥವಾಯಿತು ಅಡ್ಡವಾಣಿಯವರೇ......, ಮಧ್ಯಪ್ರದೇಶಕ್ಕೆ ಬರೋಣವಂತೆ. ನಿಮ್ಮ ಶಿಷ್ಯೆ ಆಗಿದ್ದು ನಿಮ್ಮ ಮೇಲೆ ಮುನಿಸಿಕೊಂಡು ಎದ್ದು ನಡೆದು, ತನ್ನದೆ ಸಂಸ್ಥಾನ ಕಟ್ಟುವ ದಿಸೆಯತ್ತ ಹೆಜ್ಜೆ ಹಾಕಿ, ನಿಮಗೆ ಮಗ್ಗುಲ ಮುಳ್ಳಾಗಿದ್ದ ಉರಿಭಾರತಿಯವರು ತಮ್ಮ ತವರೂರಿನಲ್ಲೇ ನೆಗೆದು ಬೀಳುವಂತೆ ಮತದಾರ ಪ್ರಭು ತೀರ್ಪು ನೀಡಿದ್ದಾನೆ. ತಾಕತ್ತಿದ್ದರೆ ನನ್ನೆದುರು ಕಾಲ ಕೃಷ್ಣ ಸ್ಫರ್ಧಿಸಲಿ ಎಂದು ತೋಳೇರಿಸಿದ್ದ ಉರಿಭಾರತಿಯವರನ್ನು ಸೂಟೆಕಟ್ಟಿ(ದೊಂದಿ) ಹುಡುಕಿದರೂ ಅವರೀಗ ಸಿಕ್ಕುತ್ತಿಲ್ಲ. ಇದಕ್ಕೇನನ್ನುತ್ತೀರೀ ಸ್ವಾಮ್ಹೀ.....?
ಭಾಗವತರೇ......, ತುಳುವಿನಲ್ಲೊಂದು ಗಾದೆ ಮಾತಿದೆ. 'ಮಗಳ್ ಮುಂಡೆ ಮುಚ್ಚ್‌ಂಡಲಾ ಮಲ್ಲೆಜ್ಜಿ, ಮರ್ಮಯೆ ಸಯ್ಯೋಡು', ಅಂದರೇ...... ಮಗಳು ವಿಧವೆಯಾದರೂ ಪರ್ವಾಗಿಲ್ಲ, ಅಳಿಯ ಸಾಯಬೇಕು ಎಂಬುದು ಇದರರ್ಥ. ಹಾಗೆಯೇ ಆ ಉರಿಭಾರತಿ "ನನ್ನ ಗೆಲುವಿಗಿಂತಲೂ ಬಾ ರತಿಯ ಜನ ತಾ ಪಕ್ಷದ ಸೋಲೇ ನನ್ನ ಗುರಿ" ಎಂದು ದಿಗಿಣ ಹೊಡೆದಿದ್ದರು. ಆದರೆ ಭಾಗವತರೇ......., ವ್ಯಕ್ತಿಗಿಂತಲೂ ಪಕ್ಷದೊಡ್ಡದು..... ಪಕ್ಷದೊಡ್ಡದೂ.... ಇದು ಈಗ ಆ ಮಹಾತಾಯಿಗೆ ಅರ್ಥವಾಗಿರಬಹುದು.
ಅಯ್ಯಾ ಕೃಷ್ಣರೇ......, ಪಕ್ಷದೊಡ್ಡದು ಅನ್ನುತ್ತೀರೀ....., ಆದರೆ ಜನರ ಭಾವನೆಗಳ ಮೇಲೆ ಸುಲಭವಾಗಿ ಸವಾರಿ ಮಾಡಬಹುದು ಎಂಬುದಾಗಿ ನಿಮ್ಮ ಪಕ್ಷ ಭಾವಿಸಿಕೊಂಡಿತ್ತು ಎಂಬುದು ಸಾರ್ವತ್ರಿಕ ಭಾವನೆ. ಭಗವಾನ್ ಶ್ರೀರಾಮಚಂದ್ರನನ್ನು ಜಗ್ಗಾಡಿ ಹಿಂದೆ ಪಟ್ಟಕ್ಕೇರಿದ್ದೀರಿ ಎಂಬ ಮಾತಿದೆ; ಮತ್ತೆ ಆತನನ್ನು ಮರೆತಿರುವಿರೀ ಎಂಬ ದೂರೂ ಇದೆ. ಮುಂಬೈ ಎಂಬ ಮಾಯಾ ನಗರಿಯಲ್ಲಿ ದುರುಳರು ನಡೆಸಿದ ಅಟ್ಟಹಾಸ ನಿಮ್ಮ ಯುದ್ಧತಂತ್ರಕ್ಕೆ ಸಹಾಯವಾಗಲೇ ಇಲ್ಲವಲ್ಲಾ...? ಯಾಕೇ.... ಪ್ರಜೆಗಳಲ್ಲಿ ನಿಮ್ಮ ಪಕ್ಷದ ಕುರಿತೇ ಭಯದ ಉತ್ಪಾದನೆಯಾಗುತ್ತಿದೆಯೇ.....?
ಬಾಯಿಮುಚ್ಚಿ ಭಾಗವತರೇ..... ನಮ್ಮ ಪಕ್ಷದ ಮೇಲೆ ಬಹು ಸಂಖ್ಯಾತರಿಗೆ ಪ್ರೀತಿ ಇದ್ದೇ ಇರುತ್ತದೆ. ಸಣ್ಣಸಣ್ಣ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮೊನ್ನೆ ನಡೆದ ಸಣ್ಣಪುಟ್ಟ ಕದನಗಳ ಸೋಲಿಗೆ ಪ್ರಾಂತೀಯ ಸಮಸ್ಯೆಗಳು ಕಾರಣವಾಗಿಬಹುದು. ಆದರೆ ನಿಮ್ಮಂತಹ ತುತ್ತೂರಿಯವರು ಇದನ್ನೇ ವೈಭವೀಕರಿಸಬೇಕಾದ ಅಗತ್ಯವಿಲ್ಲ......... ಮಹಾಯುದ್ಧಕ್ಕೆ ಸಾಕಷ್ಟು ಸಮಯವಿದೆ. ಶ್ರೀ ರಾಮಚಂದ್ರನಿದ್ದಾನೆ. ಎಲ್ಲಿಬೇಕೋ ಅಲ್ಲೆಲ್ಲ ಬೆಂಕಿ ಇಕ್ಕಲು ನಮ್ಮ ಸೇನಾನಿಗಳು ಸೊಂಟ ಕಟ್ಟಿದ್ದಾರೆ. ಏನಾಗುವುದೋ ಎಂಬುದನ್ನು ಕಾದು ನೋಡಿ. ಏಳು ತಿಂಗಳಿಗೇ ಜನಿಸಿದಂತೆ ಅವಸರದ ತೀರ್ಮಾನಕ್ಕೆ ಬರಬೇಡಿ..... ಎಚ್ಚರಿಕೆ...!
ಸರಿ, ಕಾಲ್ ಕೃಷ್ಣರೆ ನಿಮ್ಮ ಕೋಪ ಅರ್ಥವಾಗುವಂತಾದ್ದು. ಆದರೂ ಬರಿಯ ರಾಜಕೀಯವನ್ನೇ ಮಾಡಿದರೆ, ಅದನ್ನು ಅರಿತುಕೊಳ್ಳುವಷ್ಚು ಪ್ರಜೆಗಳೂ ಬುದ್ದಿವಂತರಾಗುತ್ತಿದ್ದಾರೆ ಎಂಬುದಕ್ಕೆ ಇದೀಗ ಅಂತ್ಯಗೊಂಡ ಕಾಳಗವೇ ಸಾಕ್ಷಿ! ಪ್ರಜೆಗಳಿಗೆ ಒಳಿತಾಗುವ ಕಾರ್ಯವನ್ನು ಮಾಡುವಂತೆ ಶ್ರೀರಾಮಚಂದ್ರ ನಿಮಗೆ ಮನಸ್ಸು ಕೊಡಲೀ.... ಹಾಗಾದಾಗಾ... ಖಂಡಿತಕ್ಕೂ ಪ್ರಜೆ ಎಂಬ ಪ್ರಭು ನಿಮ್ಮನ್ನು ಮರೆಯಲಾರ; ಮತ್ತು ಶ್ರೀರಾಮನ ಆಶೀರ್ವಾದ ಇಲ್ಲದೆಯೇ ಗದ್ದುಗೆ ಏರಬಲ್ಲಿರೀ ಎಂಬುದು ಸತ್ಯಸ್ಯ ಸತ್ಯ ಅಧ್ವಾನರೇ.... ಮಾತು ಮುಂದುವರಿಸುವ ಇಚ್ಚೆ ನಿಮಗಿದ್ದಂತಿಲ್ಲ. ಇನ್ಯಾವಾಗಲಾದರೂ ಒಡ್ಡೋಲಗದಲ್ಲಿ ಭೇಟಿಯಾಗೋಣವಂತೆ...
ಇಂದಿಗೆ ಮಂಗಳ ಹಾಡೋಣ.... ಸರ್ವರಿಗೂ ಒಳಿತಾಗಲೀ....
||ಮಂಗಳಂ||
ಹ್ಹಹ್ಹಹ್ಹಾ!
ಪ್ರತ್ಯುತ್ತರಅಳಿಸಿಕಾಲಕೃಷ್ಣ ಅಡ್ಡವಾಣಿಯವರ ಪರಾಭವ ಪ್ರಸಂಗ ನೋಡಿ(=ಓದಿ)
ಭಾರೀ ಮಜಾ ಬಂತು ಶಾನಿಯಮ್ಮಾ!
ಇದೀಗ ಮಹೀಶೂರು ಪ್ರಾಂತದಲ್ಲಿ ಚಡ್ಡಿವೀರಪ್ಪನವರ ಕಾಳಗ ಪ್ರಸಂಗದಲ್ಲಿ ಜಯಮಾಲೆ ಯಾರಿಗೆ ಅಂತ ನೋಡೋಣವೆ?
haage maadonavanthe!!!
ಪ್ರತ್ಯುತ್ತರಅಳಿಸಿ