ಶುಕ್ರವಾರ, ಮೇ 29

ಹೊಸಲಂಗದತ್ತ ಕೈಚಾಚಿ ಇದ್ದಲಂಗವನ್ನೂ ಕಳಕೊಂಡರು!

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ್ಹ......ಅಖ್ಹಂಡ್ಹ ಭರತಖಂಡದ ಸಾಮ್ರಾಟನಾರೆಂದು ಕೇಳಿ ಬಲ್ಲಿರೀ....

ಮಣಮಣ ಸಿಂಗ್ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಹೊಸದೆಹಲಿ ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ರಾಷ್ಟ್ರಕಟ್ಟಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ವಿರೋಧಿಗಳು ಸಂಪೂರ್ಣ ನೆಲಕಚ್ಚಬೇಕು.... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಪ್ರಪಂಚ ಅದೆಷ್ಟು ಸುಂದರವಾಗಿದೆ. ಭಾರತಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ನಮ್ಮೀ ಹವಾನಿಯಂತ್ರಿತ ಕೊಠಡಿಯ ಚುಮುಚುಮು ಚಳಿ, ಸುಂದರ ಕಾವ್ಯದಂತಹ ದೆಹಲಿ ನಗರದ ಅದ್ಭುತ ದೃಶ್ಯ, ಇವೆಲ್ಲಕ್ಕಿಂತಲೂ ಉಲ್ಲಾಸ, ಸಂತೋಷ ಪುಟಿಯುತ್ತಿರುವ ಮನಸ್ಸು.... ಮೈಯನ್ನು ಹಿತವಾಗಿ ಮೀಟುತ್ತಿರುವ ತಂಗಾಳಿ... ರವಿರಾಜನ ಬಂಗಾರ ಬಣ್ಣದ ಕಿರಣಗಳು ಇಳೆಯನ್ನು ಮುತ್ತಿಕ್ಕಲು ನಾಮುಂದು ತಾ ಮುಂದು ಎಂದು ಧಾವಿಸುತ್ತಿವೆ. ನಿದಿರಾ ದೇವಿಯ ಮಡಿಲಲ್ಲಿ ರಾಷ್ಟ್ರಕಟ್ಟುವ ಬೆಚ್ಚನೆಯ ಕನಸಿನಲ್ಲಿದ್ದ ನಾವು ಅತ್ಯಾಧುನಿಕ ತಲ್ಪದಿಂದ ಎದ್ದು ಪ್ರಾಥವಿಧಿಗಳನ್ನು ಪೂರೈಸಿದೆವು.

ಇಷ್ಟದೈವಗಳನ್ನು ಮನದಲ್ಲಿ ಪ್ರಾರ್ಥಿಸಿ, ನೋಸಿಯಾ ದೇವಿಯ ಚಿತ್ರಕ್ಕೆ ನಮಿಸಿದ್ದಾಯ್ತು. ಎಂದಿನಂತೆ ನಮ್ಮ ಸರಳ ಉಡುಗೆಯನ್ನು ತೊಟ್ಟು ಅದಕ್ಕೊಂದು ಮೇಲಂಗಿಯನ್ನೂ ಹಾಕಿಕೊಂಡೆವು. ಗಡ್ಡ ನೀವಿಕೊಂಡು ಆಕಾಶನೀಲಿ ಬಣ್ಣದ ಪೇಟವನ್ನು ಎಳೆದು ಕಟ್ಟುತ್ತಲೆ, ಅರ್ಧಾಂಗಿ ಶರಗುರುಣ ಕೌರ್ ತಂದಿಟ್ಟ ನಮ್ಮ ಆರೋಗ್ಯಕ್ಕೆ ಹೊಂದುವ ಸರಳ ಉಪಹಾರವನ್ನು ಸೇವಿಸಿಕೊಂಡೆವು. ರಥಿಕ ರಥವನ್ನುಮನೆಯ ಬಾಗಿಲಲ್ಲಿ ತಂದು ನಿಲ್ಲಿಸಿದ್ದಾನೆ. ಅಂಗರಕ್ಷಕರೊಡನೆ ಹೆಜ್ಜೆ ಹಾಕಿ ರಥವನ್ನೇರಿ ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೆ ನಮಸ್ಕರಿಸಿ, ಹಾರಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಂದುಗೊಂದುಗಳಲ್ಲಿ ತಲೆತೂರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಭದ್ರತಾ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಹಿರಿಯರು, ಕಿರಿಯರು, ಮಾಗಿದವರು, ಮಾಗಬೇಕಿರುವವರು, ಅನುಭವಿಗಳು, ಅರೆ ಅನುಭವಿಗಳು, ಅನನುಭವಿಗಳು.... ಆಹಾ... ಸಭೆಗೆ ಕಳೆಯೋ ಕಳೆ. ಇಂದು ನಮ್ಮ ಕನಸು ಸಂಪೂರ್ಣವಾಗಿ ನನಸಾಯಿತು. ಸ್ವಭಾವತಃ ಕಡಿಮೆ ಮಾತುಗಳನ್ನಾಡುವ ನಮಗೆ ಸಂತೋಷದಿಂದ ಇಂದು ಬಾಯಿಕಟ್ಟಿಯೇ ಹೋಗಿದೆ. ಮಾತೇ ಹೊರಡುತ್ತಿಲ್ಲ. ಆದರೆ, ನಾವಿಂದು ಮಾತಾಡಲೇ ಬೇಕಿದೆ. ಯಾರಲ್ಲೀ.......?

ಸ್ವಾಮಿ ಮಣಮಣ ಸಿಂಗರೇ...... ನಿಮ್ಮೀ ಪ್ರಚಂಡ ವಿಜಯಕ್ಕೆ ಮೊದಲಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಿವೇ ನಿಮ್ಮನ್ನು ಚಿವುಟಿಚಿವುಟಿ ನೋಡಿಕೊಳ್ಳುವಂತೆ ಅದು ಹೇಗೆ ಈಪರಿಯ ವಿಜಯ ಪ್ರಾಪ್ತಿಯಾಯ್ತು....?

ಭಾಗವತರೇ... ನಿಮ್ಮೀ ಅಭಿನಂದನೆ ಸಲ್ಲಬೇಕಿರುವುದು ನಮ್ಮ ಕಾಂಗ್ರೆಸ್‌ನ ಮಹಾರಾಣಿ ನೋಸಿಯಾ ದೇವಿಯವರಿಗೆ, ಅವರ ಪುತ್ರ ಬಿಸಿರಕ್ತದ ತರುಣ ರಾಜಕುಮಾರ ಹಾರುಲ್ ಹಾಗೂ ರಾಜಕುಮಾರಿ ಪಿಂಕಿದೇವಿಯವರಿಗೆ ಸಲ್ಲಬೇಕು..... ನಮ್ಮದೇನಿದೆ.... ನಾವು ನಿಮಿತ್ತ ಮಾತ್ರ ಎಲ್ಲವೂ ಆ ತಾಯಿಯ ದಯೆ... ಸ್ವಾಮೀ ಭಾಗವತರೆ ನಿಮ್ಮ ಕೊಂಕು ಬೇಡ ನಾವು ಗೆಲ್ಲುವ ನಂಬುಗೆ ನಮಗಿತ್ತು. ನಮ್ಮ ವಿರೋಧಿಗಳ ರಣತಂತ್ರವೇ ನಮ್ಮನ್ನು ಗೆಲ್ಲಿಸಿತು. ಅವರ ಮಾತು, ನಡೆಗಳೇ ನಮ್ಮ ಗೆಲುವನ್ನು ಸುಲಭವಾಗಿಸಿತು.

ಸಾಮ್ರಾಟ ಸಿಂಗರೇ...... ಅತ್ಯಂತ ಸಭ್ಯ, ಸುಸಂಸ್ಕೃತ, ಸ್ವಚ್ಚ ನಡೆನುಡಿಯ, ಮೆದು ಮಾತಿನ ರಾಜಕಾರಣಿ ಎಂಬುದಾಗಿ ವಿರೋಧಿಗಳಿಂದಲೂ ವ್ಯಕ್ತವಾಗುವ ಮೆಚ್ಚುಗೆ. ಆದರೆ ಮಹಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಎದುರಾಳಿ ನಿಮ್ಮನ್ನು ದುರ್ಬಲ, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬರದವರು, ಎಲ್ಲಕ್ಕೂ ನಂ. 10, ಜನಪಥ ರಸ್ತೆಯತ್ತ ಮುಖಮಾಡುವವರು ಎಂದೆಲ್ಲಾ ಜರೆದರು. ಒಂದು ಹಂತದ ತನಕ ಇವೆಲ್ಲವನ್ನೂ ಸಹಿಸಿಕೊಂಡ ತಾವುಗಳು ಕೊನೆಗೆ ಅಷ್ಟೇ ಖಾರದ ತಿರುಗೇಟು ನೀಡಿದ್ದೀರಿ. ದುರ್ಬಲರೆಂದು ಹೇಳಿದವರು, ತಾವ್ಯಾಕೆ ದುರ್ಬಲವಾಗಿ ಹೋದೆವೆಂಬ ಕಾರಣ ಸಿಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಇದಕ್ಕೇನನ್ನುತ್ತೀರಿ ಸ್ವಾಮೀ....?

ಭಾಗವತರೇ.... ಇದಕ್ಕೆ ನಾವು ಅನ್ನಬೇಕಾದ್ದು ಏನೂ ಇಲ್ಲ. ನಮ್ಮ ಪ್ರಜೆಗಳೇ ಸೂಕ್ತವಾದ ಉತ್ತರ ನೀಡಿದ್ದಾರೆ. ಇದಕ್ಕಿಂತ ಸಮರ್ಥ ಉತ್ತರ ಬೇರೆ ಬೇಕಿಲ್ಲ. ಗದ್ದರಿಸಿ ಮಾತನಾಡುವುದೇ ಸಬಲತೆಯೋ? ನೀವೇ ನೋಡಿದ್ದೀರಿ..... ಖಾತೆ ಹಂಚಿಕೆಯ ವೇಳೆ ಆ ದ್ರಾವಿಡ ಪಕ್ಷದವರ ಎಲ್ಲಾ ಕ್ಯಾತೆಗಳಿಗೆ ನಾವು ಬಗ್ಗಿದ್ದೇವೆಯೇ? ಚುನಾವಣೆಗೆ ಮುನ್ನ ಆರು ಸ್ಥಾನ ಕೊಡುತ್ತೇವೆ ಅಂದೆವು. ಜೆಡಿಎಸ್ ಆಗ ಮುಖ ತಿರುವಿತು. ಈಗ ಬೇಷರತ್ ಬೆಂಬಲ ಘೋಷಿಸಿ ಸಚಿವಗಿರಿ ನೀಡಿರೆಂದು ಗಿಂಜಿದರು. ನಾವು ಬಗ್ಗಿದೆವಾ? ಹೇಳಿ ಇದು ದೌರ್ಬಲ್ಯವೇ....? 10, ಜನಪಥದತ್ತ ನೋಡಿದರೆ ಏನಾಯ್ತೀಗ, ಅಲ್ಲಿ ನಮ್ಮ ಶಕ್ತಿದೇವತೆ ಇದ್ದಾರೆ....

ಆದರೂ.... ಸಿಂಗರೇ ವಿರೋಧಿ ಪಕ್ಷಗಳು ಪ್ರಚಾರದ ವೇಳೆ ಚುನಾವಣಾ ವಿಚಾರಗಳನ್ನೇ ಎತ್ತಲಿಲ್ಲ.... ಅಗತ್ಯವಸ್ತುಗಳ ಬೆಲೆಗಳಂತೂ ರಾಕೆಟ್‌ಗಳಂತೆ ಮೇಲೆಮೇಲೆ ಹೋಗಿ ಆಕಾಶದಲ್ಲೇ ತೇಲುತ್ತಿವೆ. ವಾರವಾರ ಪ್ರಕಟವಾಗುವ ಹಣದುಬ್ಬರದ ದರ ಪಾತಾಳ ಕಂಡರೂ ಆಕಾಶದಲ್ಲಿರುವ ಬೆಲೆಗಳ್ಯಾಕೆ ಕೆಳಮುಖ ಮಾಡುತ್ತಿಲ್ಲ...? (ಕಳೆದ ಚುನಾವಣೆಯಲ್ಲೊಮ್ಮೆ ಈರುಳ್ಳಿ ಬೆಲೆ ದೆಹಲಿಯ ಬಿಜೆಪಿ ಸರ್ಕಾರವನ್ನು ಉರುಳಿಸಿತ್ತು) ಭಯೋತ್ಪಾದಕರನ್ನು ಸೂಕ್ತವಾಗಿ ಮಟ್ಟಹಾಕಲು ಆಗುತ್ತಿಲ್ಲ.... ಇದರಂತೆ ಅನೇಕ ವಿಚಾರಗಳಿವೆ. ಇವುಗಳನ್ನು ನಿಮ್ಮ ವಿರೋಧಿಗಳು ಮತದಾರರ ಮುಂದೆ ಎತ್ತದೇ ಇದ್ದುದೇ ನಿಮಗೆ ಅನುಕೂಲವಾಯಿತೇ.....?

ಸ್ವಾಮಿ ಭಾಗವತರೇ..... ಈ ಕುರಿತು ನಮಗೂ ಆಂತರ್ಯದಲ್ಲಿ ತಿಪುತಿಪು ಅನ್ನುತ್ತಲೇ ಇತ್ತು. ಅದೃಷ್ಟವಶಾತ್ ನಮ್ಮ ವಿರೋಧಿಗಳು ಈ ವಿಚಾರಗಳನ್ನು ಎತ್ತಲೇ ಇಲ್ಲ. ಕಡಿ, ಕೊಚ್ಚು, ದುರ್ಬಲ ಅನ್ನುತ್ತಲೇ ಪ್ರಚಾರ ಮಾಡಿದರು. ನಮ್ಮನ್ನು ಅಂದೊಮ್ಮೆ ಬೀಳಿಸಲು ಹೊರಟ ರಕಾಸ್ ಪಾರಟ್ ಎಂಬವರು ಮೂರನೇ ಲಂಗವೊಂದನ್ನು ಹುಟ್ಟು ಹಾಕಿದರು ನೋಡಿ. ಅದನ್ನು ಕಂಡು ನಮಗೂ ಜುಂಜುಂ ಅಂದಿದ್ದೂ ಸುಳ್ಳಲ್ಲ. ನಮ್ಮಯುವರಾಜರ ಕೈಲಿ ಹೇಳಿಕೆ ನೀಡಿಸಿ ಚುನಾವಣೆ ನಡೆಯುತ್ತಿರುವಾಗಲೇ ಇವರಿಗೆಲ್ಲ ಮತ್ತೆ ಆಹ್ವಾನ ನೀಡಿದ್ದೆವು. ದಕ್ಷಿಣದ ಅಮ್ಮನನ್ನೂ, ಬಿಹಾರದ ಕುಮಾರರನ್ನೂ ಹೊಗಳಿಸಿದ್ದೆವು. ಪರಿಸ್ಥಿತಿ ಹೇಗೆ ತಿರುಗುತ್ತದೆ ನೋಡಿ.... ಕಾಂಗ್ರೆಸ್ ಎಲ್ಲಿ ಕುಸಿಯುತ್ತದೋ ಎಂದು ಬೆದರಿದ ಕೆಲವು ಮಿತ್ರ(ದ್ರೋಹಿಗಳು)ರು ಅತ್ತ ತೃತೀಯ ಲಂಗದತ್ತಲೂ ಒಂದು ಕಣ್ಣಟ್ಟು ನಾಲ್ಕನೆ ಲಂಗ ಹುಟ್ಟುಹಾಕಿದರು. ಮತದಾರ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ. ಹೊಸಹೊಸ ಲಂಗದತ್ತ ಮನಸ್ಸು ಹರಿಬಿಟ್ಟವರೆಲ್ಲ, ಇದ್ದ ಲಂಗವನ್ನೂ ಕಳೆದುಕೊಂಡು ಬೆತ್ತಲಾದರು...ಚಾತುರ್ಯ ಮೆರೆದವರು ರಾಜರಾದರು!

ಪ್ರಧಾನಿಗಳೇ.... ಕಳೆದ ಬಾರಿಗಿಂತಲೂ ಈ ಸರ್ತಿ ತಾವು ಹೆಚ್ಚು ಗಟ್ಟಿಯಾಗಿದ್ದೀರಿ. ಆದರೂ ನಿಮ್ಮ ಸೆರಗಿನಲ್ಲಿ ಕೆಂಡವಿದ್ದೇ ಇರುತ್ತದೆ. ತಮಮಾ ಬಾನರ್ಜಿ ಎಂಬ ಗಟ್ಟಿಗಿತ್ತಿ ನಾರಿ ತಮ್ಮ ಹಠಿಸಾಧಿಸುವಲ್ಲಿ ಪ್ರಸಿದ್ಧರು. ದ್ರಾವಿಡ ಪಕ್ಷದವರು ತಮ್ಮ ನೆಲ, 'ಜಲ' ಭಾಷೆ ಅಂದಾಗ ಪಕ್ಷಬೇಧ ಮರೆತು ಕ್ರಾವ್... ಕ್ರಾವ್... ಕ್ರಾವ್... ಅನ್ನುವವರು. ಇವರನ್ನೆಲ್ಲ ಸಂಭಾಳಿಸಿಕೊಂಡು... ವೈವಿಧ್ಯಮಯ ಸಂಸ್ಕೃತಿಯ ಈ ವಿಶಾಲ ಭರತಖಂಡವನ್ನು ಆಳಬೇ.....

ಹೋಯ್ ಭಾಗವತರೇ... ಅಧಿಕಪ್ರಸಂಗ ಸಾಕು... ಚುನಾವಣೆಯಲ್ಲಿ ಗೆದ್ದವರಿಗೆ ಮುಂದೆ ದೇಶವನ್ನು ಹೇಗೆ ಮುನ್ನಡೆಸಬೇಕೆಂಬುದು ತಿಳಿದಿರುತ್ತದೆ.... ಕಳೆದ ಬಾರಿಯ ಅಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಮಾತನಾಡದೆಯೇ ಎಲ್ಲವನ್ನೂ ಸಂಭಾಳಿಸಲಿಲ್ಲವೇ.....? ಸಂಪುಟದಲ್ಲಿ ಅತಿರಥಮಹಾರಥ ಮಂತ್ರಿಗಳಿದ್ದಾರೆ. ನಮ್ಮ ಅಧಿನಾಯಕಿ ಇದ್ದಾರೆ.... ನಾವು ಹೆಚ್ಚೇನು ಮಾಡಬೇಕಾಗಿರುವುದಿಲ್ಲ. ವಿಶ್ವಾಸ ಮತ ಎದುರಿಸಬೇಕಿದ್ದರೆ ಸೂಟ್ಕೇಸ್‌ಗಳಿವೆ. ಆಧುನಿಕ ಚಿಂತನೆಗೆ ಯುವರಾಜ ಹಾರುಲರು ಜತೆಯಲ್ಲೇ ಇರುತ್ತಾರೆ.... ಇದೆಲ್ಲಕ್ಕೂ ಮಿಕ್ಕು ನಮ್ಮಬಳಿ ಅಗಾಧವಾದ ಅನುವಭವಿದೆ.... ಆತ್ಮವಿಶ್ವಾಸವಿದೆ.... ಎಲ್ಲವೂ ಸುಲಲಿತವಾಗಿ ನಡೆಯುತ್ತದೆ.

ನಿಮ್ಮ ದೃಢವಿಶ್ವಾಸಕ್ಕೆ ಅಭಿನಂದನೆಗಳು ಸಾಮ್ರಾಟರೇ.... ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣಿರಿ.... ಮತಬ್ಯಾಂಕಿನ ಮೇಲೆಯೇ ನಿಮ್ಮ ಕಣ್ಣುಹೆಚ್ಚು ಹೋಗದಿರಲಿ. ಯಾವಧರ್ಮ, ಜಾತಿ, ಪಂಗಡವಿರಲೀ.... ಬಡವರೆಲ್ಲ ಬಡವರೇ... ಹಸಿವು ಕಷ್ಟಗಳೂ ಎಲ್ಲರಿಗೂ ಒಂದೇ.... ಅದರಲ್ಲಿ ಮೇಲ್ಜಾತಿ, ಕೀಳ್ಜಾತಿ, ಆ ಧರ್ಮ, ಈ ಧರ್ಮ ಎಂಬ ಭೇದಭಾವವಿಲ್ಲ... ಜಾತ್ಯತೀತರೆಂದು ತೋರಿಸಿಕೊಳ್ಳುವ ರಭಸದಲ್ಲಿ ಯಾವುದಾದರೂ ನಿರ್ದಿಷ್ಟ ಜಾತಿ-ಧರ್ಮವನ್ನು ಓಲೈಸಿದಿರೋ..., ತಾವು ಜಾತ್ಯತೀತ ಕೋಮುವಾದಿಗಳಾಗುತ್ತೀರಿ. ಪಕ್ಷಪಾತವಿಲ್ಲದ ಆಡಳಿತನೀಡಿ, ಮತಗಳು ನಿಮ್ಮತ್ತ ಹರಿದುಬರುತ್ತವೆ.

ಆ ಭಾರತಾಂಬೆ ಸರ್ವರಿಗೂ ಒಳಿತಾಗುವಂತ ಆಡಳಿತವನ್ನು ನಿಮ್ಮಿಂದ ನೀಡಿಸಲೀ... ಸರ್ವೇಜನ ಸುಖಿನೋಭವಂತು...

ಮಂಗಳಂ......!

1 ಕಾಮೆಂಟ್‌:

  1. ಒಹೋ ‘ನಿಶಾ’ ಅವರೆ,
    ಎಲ್ಲಿ ಕಾಣೆಯಾಗಿದ್ದಿರಿ? ಅಂತ ಹುಡುಕ್ತಾ ಇದ್ದೆ. ಮಣಮಣ ಸಿಂಗನ ಆಸ್ಥಾನದಲ್ಲಿ ನೀವು ಇದ್ದದ್ದು ಈಗ ಗೊತ್ತಾಯ್ತು.

    ಪ್ರತ್ಯುತ್ತರಅಳಿಸಿ