ಬುಧವಾರ, ಸೆಪ್ಟೆಂಬರ್ 22

ಚುನಾವಣೆ ಗೆಲ್ಲೋದು ಮಾತ್ರ ಅರ್ಹತೆಯಲ್ಲಾ...

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....

ಭಾಶೋ ರಕಂದ್ಲಾಜೆ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಬೆಂದಕಾಳೂರು ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಗ್ರಾಮೀಣ ಪರಿಸ್ಥಿತಿಯ ಸ್ಥಿತಿಗತಿಗಳು ಸುಧಾರಣೆಗೊಳ್ಳಬೇಕು, ಮಹಿಳಾ ಸಮುದಾಯ ಮುಂದೆ ಬರಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ಕರ್ನಾಟಕ ಸಾಮ್ರಾಟರ ಕೈ ಬಲಪಡಿಸಬೇಕು, .... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಅದೆಷ್ಟು ಸುಂದರಮಯ ವಾತಾವರಣ. ಕನ್ನಡಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ಉದ್ಯಾನನಗರಿಯ ಚುಮುಚುಮು ಚಳಿಗೆ ಹಿತವೆನ್ನಿಸುವ ಎಳೆಬಿಸಿಲು. ಅದ್ಭುತ ಕಾವ್ಯದಂತಾಗಿರುವ ಈ ನಮ್ಮ ಸಿಲಿಕಾನ್ ಕಣಿವೆ. ಮೈತುಂಬ ಉಲ್ಲಾಸ, ಸಂತೋಷ ಪುಟಿಯುತ್ತಿದ್ದು; ಹುಮ್ಮಸ್ಸಿನಿಂದ ಕುಣಿಯುತ್ತಿರುವ ಮನಸ್ಸು.... ಆದಿತ್ಯ ದೇವನ ಬಂಗಾರ ಕಿರಣಗಳು ಇಳೆಯನ್ನು ಮುತ್ತಿಕ್ಕಲು ಧಾವಂತದಿಂದಲೋ ಎಂಬಂತೆ ಧಾವಿಸುವ ನೋಟ. ಆಹಾ ಪ್ರಪಂಚವೀಗ ಹಿಂದೆಂದೂ ಇಲ್ಲದಷ್ಟು ಸುಂದರವಾಗಿ ಕಂಗೊಳಿಸುತ್ತಿದೆ.. ನಿದಿರಾ ದೇವಿಯ ಮಡಿಲಿನಿಂದ ಎದ್ದ ನಮ್ಮನ್ನು ಈ ಪರಿಯ ಸೊಬಗಿಂದ ಸ್ವಾಗತಿಸಿದೆ.

ನಮ್ಮ ಅಭ್ಯಾಸದಂತೆ ನಸುಕಿನಲ್ಲೇ ಎದ್ದು, ಸ್ನಾನ ಶೌಚಾದಿ ಪ್ರಾಥವಿಧಿಗಳನ್ನು ತೀರಿಸಿಕೊಂಡೆವು. ಮಂತ್ರವನ್ನು ಜಪಿಸಿ, ಪೂಜೆಯನ್ನು ಮಾಡುತ್ತಾ ಇಷ್ಟದೈವ ಪುತ್ತೂರಿನ ಮಾಲಿಂಗೇಶ್ವರನಿಗೆ ವಿಶೇಷವಾಗಿ ಮತ್ತು ಹೆಚ್ಚೂಕಮ್ಮಿ ದೇಶಾದ್ಯಂತವಿರುವ ಎಲ್ಲಾ ಕಾರ್ಣೀಕದ ದೇವರಿಗೆ ವಂದಿಸಿಕೊಂಡದ್ದಾಯ್ತು. ಬಳಿಕ ನಮ್ಮೂರ ಗ್ಲೋಬಲ್ ತಿಂಡಿಯಾಗಿರುವ ಪುಂಡಿಯೆಂಬ ಉಪಾಹಾರವನ್ನು ಸೇವಿಸಿ, ಎಂದಿನಂತೆ ಸರಳವಾಗಿ ಸಿಂಗರಿಸಿಕೊಂಡು, ಮಿಣಮಿಣ ಸೀರೆಯೊಂದನ್ನು ಒಪ್ಪವಾಗಿ ಉಟ್ಟು, ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೂ ಸಭೆಗೂ ವಂದಿಸಿ ಆಸೀನಾಳಾಗಿ ಸಭೆಯತ್ತ ನೋಟ ಹರಿಸುತ್ತೇವೇ..... ಆಶ್ಚರ್ಯ.... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಿಕ್ಕಸಿಕ್ಕಲ್ಲಿ ತಲೆತೂರುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರಿದ್ದಾರೆ. ವಂದಿ ಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ತಮ್ಮ ಆಯುಧಗಳನ್ನು ಸಿದ್ಧಪಡಿಸಿ ಕಾದಿದ್ದಾರೆ..... ಒಡ್ಡೋಲಗವನ್ನು ಆರಂಭಿಸಿಯೇ ಬಿಡೋಣವಂತೇ..... ಯಾರಲ್ಲೀ...

ಅಮ್ಮಾ.... ರಕಂದ್ಲಾಜೆಯವರೇ.... ಅಂತೂ ಗೊಂದಲ, ಬೆದರಿಕೆ, ವಿರೋಧ ಅಸಮಾಧಾನಗಳ ನಡುವೆ ನಿರೀಕ್ಷೆಯಂತೆಯೇ ತಾವು ಸಚಿವೆ ಪಟ್ಟವನ್ನು ಮರಳಿ ಪಡೆದಿದ್ದೀರಿ. ಮತ್ತೆ ಮಂತ್ರಿ ಕುರ್ಚಿ ಏರಿರುವ ತಮಗೆ ಅಭಿನಂದನೆಗಳು...... ತಾವೂ..

ನಿಮ್ಮ ಅಭಿವಂದನೆಗಳಿಗೆ ಧನ್ಯವಾದಗಳು. ನೋಡಿ ಭಾಗವತರೇ, ನಮಗೆ ಸಿಕ್ಕಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ನಾವು ಮಾಡಿರುವ ಉತ್ತಮ ಕಾರ್ಯಗಳೇ ನಮ್ಮನ್ನು ಮತ್ತೆ ಮಂತ್ರಿ ಕುರ್ಚಿಗೆ ತಂದು ಕುಳ್ಳಿರಿಸಿದೆ. ನಮ್ಮದಲ್ಲದ ತಪ್ಪಿಗೆ ನಾವು ಈ ಹಿಂದೆ ರಾಜೀನಾಮೆ ನೀಡಬೇಕಾಯಿತು. ನಮ್ಮ ರಾಜೀನಾಮೆಗೆ ಗುಂಪೊಂದು ಒತ್ತಾಯಿಸಿದ್ದಾದರೂ ಯಾಕೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಮಂತ್ರಿಣಿಯವರೇ, ತಾವು ಈ ಸಂಸ್ಥಾನದ ಮಹಾರಾಜರಿಗೆ ನಿಕಟವೆಂಬೋ ಕಾರಣಕ್ಕೇ ಮಂತ್ರಿಗಿರಿ ಪಡೆದೀರೆಂದು ಜನತೆ ಹೇಳುತ್ತಾರೆಂದರೆ ಅದು ಕ್ಲೀಷೆಯ ಮಾತಾಗುತ್ತದೆ. ಮಂತ್ರಿ ಮಂಡಲದಲ್ಲಿ ಏಕೈಕ ಮಹಿಳೆಯಾಗಿದ್ದ ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಅರ್ಹರಾದ ನಾಯಕಿಯರು ತಮ್ಮ ಪಕ್ಷದಲ್ಲಿ ಇದ್ದರೂ, ಅದು ಖಾಲಿಯಾಗೇ ಇತ್ತು. ನೀವಂದು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಈ ನಾಡಿನ ಮಹಾರಾಜರು ಪ್ರಜೆಗಳ ಮುಂದೆ ಕಣ್ಣೀರುಗರೆದದ್ದೂ ಇದೆ. ಆದರೆ ಮಂತ್ರಿ ಸ್ಥಾನ ಹೋದರೂ ವಿಚಲಿತರಾದ ತಾವು ಮಾತ್ರ, ನನ್ನ ರಾಜೀನಾಮೆ ಕೇಳಲು ಕಾರಣವೇನೂ ಎಂದು ಗಟ್ಟಿಸಿ ಕೇಳಿ ಉತ್ತರ ಸಿಗದೆ ಸುಮ್ಮನಾದಿರಿ. ಘಟಾನುಘಟಿಗಳನ್ನೆಲ್ಲ ಬದಿಗೆ ಸರಿಸಿ ಅಧಿಕಾರ ಪಡೆದಿರುವವರು ತಾವು. ಇದೆಲ್ಲದರ ಒಳಗುಟ್ಟೇನೂ.....

ಭಾಗವತರೇ ನಿಮ್ಮ ರಂಪಿಗೆ ನಾಲಗೆಯನ್ನು ಹೇಗೆಬೇಕೂ ಹಾಗೆ ಹರಿಯಬಿಡಬೇಡಿ. ನಾವೇನೂ ಅಧಿಕಾರಕ್ಕಾಗಿ ಎಲ್ಲಿಯೂ ಗುಂಪುಗಾರಿಕೆ ನಡೆಸಿಲ್ಲ. ಪಕ್ಷಕ್ಕೆ ಕಾಲಿಟ್ಟಲ್ಲಿಂದ ಒಪ್ಪಿಸಿದ ಅಧಿಕಾರವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಿಕೊಂಡು ಬಂದು ಪಕ್ಷದ ಹಿರಿಯರ ಮೆಚ್ಚುಗೆ ಗಳಿಸಿದವರು ನಾವು. ನಮ್ಮ ಕಾರ್ಯವೈಖರಿಯನ್ನು ಕಂಡಿರುವ ಮಹಾರಾಜರು ನಮ್ಮನ್ನು ಪುತ್ರಿಯಂತೆ ಪೋಷಿಸುತ್ತಿದ್ದಾರೆ. ಇದನ್ನು ಕಂಡರಾಗದವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ಕಣ್ಣಿಗೆ ಮುಳ್ಳಾಣಿ ಬಡಿಯಲಿ. ಮಂತ್ರಿಯಾಗಲು ಚುನಾವಣೆಯಲ್ಲಿ ಗೆಲ್ಲುವುದೇ ಅರ್ಹತೆ ಅಂದುಕೊಳ್ಳಲಾಗುತ್ತದಾ? ಅದೃಷ್ಟವಿರಬೇಕು, ಜನಸೇವೆ ಮಾಡಲು ತಿಳಿದಿರಬೇಕು. ರಾಜಕೀಯವನ್ನೂ ಮಾಡಬೇಕು ಗೊತ್ತಾಯಿತೇ.... ಈಗ ನೋಡಿ ನಾವು ಅಧಿಕಾರದಲ್ಲಿಲ್ಲದಾಗಲೂ ಜನಸೇವೆ ನಿಲ್ಲಿಸಿದ್ದೇವಾ? ಉತ್ತರ ಕರ್ನಾಟಕದ ಪ್ರವಾಹ ಪೀಡಿತರನ್ನು ಸಂತೈಸಲು ನಾವು ತೆರಳಿದ್ದೆವು. ಎಂಡೋಸಲ್ಫಾನ್ ಪೀಡಿತರ ಕಷ್ಟಕ್ಕೆ ಸ್ಪಂದಿಸಿದೆವು. ಹೀಗೆ ಪಟ್ಟಿಮಾಡಿದರೆ ಹಲವುಂಟು. ಗೆದ್ದು ಸಮ್ಮನೆ ಕುದ್ದರೆ ಸಾಕಾಗುವುದಿಲ್ಲ. ಉದಾಹರಣೆಗೆ ನೋಡಿ. ನಮ್ಮೂರಿನಿಂದ ಅತ್ತ ತಿರುಗಿದರೆ ಇರುವ ಸುಳ್ಯದ ಶಾಸಕ ರಂಗಾರ, ಇತ್ತತಿರುಗಿದರೆ ಕಾಣುವ ಮಂಗ್ಳೂರಿನ ಶೋಯೋಗಿ ಭಟ್ಟರು, ಕುಂದಾಪುರದ ಲಹಾಡಿ ನೀಶ್ರಿವಾಸ ಶೆಟ್ಟರು- ಇವರೆಲ್ಲ ನಾಲ್ಕುನಾಲ್ಕು ಬಾರಿ ಗೆದ್ದು, ಮಂತ್ರಿ ಸ್ಥಾನ ಸಿಗದೆ ಬಿದ್ದವರು. ಸುಳ್ಯವೆಂಬೋ ಕ್ಷೇತ್ರಕ್ಕೂ ಒಬ್ಬ ಶಾಸಕರಿದ್ದಾರೆಯೇ ಎಂದು ಜನರು ಕೇಳುವಷ್ಟು ಮಟ್ಟಿಗೆ ತಣ್ಣಗಿದ್ದಾರೆ ರಂಗಾರ. ಇವರೆಲ್ಲ ಪಕ್ಷದ ತೀರ್ಮಾನಕ್ಕೆ ಸದ್ದುಸುದ್ದಿಯಿಲ್ಲದೇ ಬದ್ಧರಾಗಿರುವಾಗ ಕೆಲಕೆಲವರು ಕೆರಳಿದರೆ ನಮಗೇನಂತೇ? ಈಗ ನೋಡಿ ಮಂಗಳೂರನ್ನೇ ತೆಗೆದುಕೊಳ್ಳಿ. ಹಲವು ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ಭಟ್ಟರನ್ನು ಪಕ್ಕದ ಸುರತ್ಕಲ್ ಶಾಸಕ ಲೇಪಮಾರರು ಬದಿಗೆ ಸರಿಸಿ ಮಂತ್ರಿಯಾಗಿಲ್ಲವೇ... ಪ್ರತಿಯೊಂದಕ್ಕೂ ಅದರದ್ದೇ ಕಾರಣಗಳಿರುತ್ತವೆ. ರಾಜನೀತಿಯಲ್ಲಿ ಅವುಗಳನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲಾ...

ತಮ್ಮ ಮುಂದಿನ ಯೋಜನೆಗಳೇನೂ ತಾಯೀ...
ನಮಗೆ ಒಪ್ಪಿಸಿದ ಕಾರ್ಯವನ್ನು ಮುತುವರ್ಜಿಯಿಂದ ವಹಿಸಿಕೊಳ್ಳುತ್ತೇವೆ. ಯಾವುದೇ ಜವಾಬ್ದಾರಿಗೂ ಸಿದ್ಧ. ಜನತೆಯ ಅದರಲ್ಲೂ ಗ್ರಾಮೀಣ ಜನತೆಯ ಉದ್ಧಾರವೇ ನಮ್ಮ ಗುರಿ. ಅದರಲ್ಲೂ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಕಷ್ಟಕೋಟಲೆಯಿಂದ ಹೊರಬರಬೇಕೆಂಬುದೇ ನಮ್ಮ ಹೋರಾಟ. ಭಾಗವತರೇ ಕಾದು ನೋಡುವಿರಂತೇ.... ಎಲ್ಲವೂ ಪುತ್ತೂರಿನ ಮಹಾಲಿಂಗೇಶ್ವರನ ಇಚ್ಛೆ.

ಸರಿ ರಕಂದ್ಲಾಜೆಯವರೇ.... ಇಂದಷ್ಟೆ ಅಧಿಕಾರ ಸ್ವೀಕರಿಸಿರುವ ತಾವು ಅವಸರದಲ್ಲಿದ್ದಂತೆ ತೋರುತ್ತದೆ. ಮತ್ತೊಮ್ಮೆ ಸಾವಕಾಶವಾಗಿ ಭೇಟಿಯಾಗೊಣ ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ. ಎಲ್ಲರಿಗೂ ಒಳಿತಾಗಲೀ.. ಸರ್ವೇಜನ ಸುಖಿನೋಭವಂತು...!

ಮಂಗಳಂ......

4 ಕಾಮೆಂಟ್‌ಗಳು:

  1. ಶಾನಿ ಎನ್ನುವ ಭಾಗವತರು ಸಾರಿದ ಭಾಶೋ ರಕಂದ್ಲಾಜೆ ಪ್ರಕರಣವನ್ನು ಕೇಳಿ ನಮ್ಮ ಜೀವನ ಸಾರ್ಥಕವಾಯಿತು.ನರ್ಕಾಟಕ ಯಕ್ಷಘಾಣ ಮಂಡಲಿಯ ಇಂತಹ ಪ್ರಕರಣಗಳನ್ನು ಶಾನಿ ಭಾಗವತರು ಮೇಲಿಂದ ಮೇಲೆ ಕೇಳಿಸಿ ನಮ್ಮ ಜೀವನವನ್ನು ತೊಳೆಯಬೇಕೆಂದು ಈ ಪುಟ್ಟ ಬಾಲಕನ ಪ್ರಾರ್ಥನೆ!

    ಪ್ರತ್ಯುತ್ತರಅಳಿಸಿ
  2. ಪುಟ್ಟ ಬಾಲಕ(?)ರೇ,
    ನಿಮ್ಮ ಜೀವನ ಸಾರ್ಥಕವಾದರೆ ನಾವು ಬ್ಲಾಗ್ ಸಾಮ್ರಾಜ್ಯ ಕಟ್ಟಿಕೊಂಡದ್ದು ಸಾರ್ಥಕವಾದಂತೆ! ತಮ್ಮ ಜೀವನವನ್ನು ತೊಳೆಯಲು ನಾವು ಸದಾ ಸಿದ್ಧ. ಆದರೆ ಪರಿಸ್ಥಿತಿಗಳು ಅವಕಾಶ ನೀಡುತ್ತಿಲ್ಲವೇ.

    ಪ್ರತ್ಯುತ್ತರಅಳಿಸಿ
  3. shani bhagavathare..

    yeshtu varushagaLinda blog bareyuttiddeeri! nimma blog namma kaNNige beeLadhe hodhudhu ondhu sojigavE sari.... :)

    thumba chennaagi bareyuttiddeeri.. eega uLida barahagaLannu odhalu horatE.. heege mundhuvariyali thamma bhaagavathike :)

    ಪ್ರತ್ಯುತ್ತರಅಳಿಸಿ
  4. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಸುಧೇಶ್. ಪುರುಸೊತ್ತಾದಾಗ ಬರೀತೀನಿ ಅಷ್ಟೆ. ಮತ್ತೆ ನಾನು ಅಲ್ಲಿ ಇಲ್ಲಿ ಹೋಗಿ ಕಮೆಂಟ್ ಮಾಡೋದು ಕಮ್ಮಿ. ಹಾಗಾಗಿ ನನ್ನ ಬ್ಲಾಗ್ ಎಲೆ ಮರೆಯ ಕಾಯಿ ಆಗಿಯೇ ಉಳಿದಿರಬಹುದು. ನಾನು ಈ ಹಿಂದೆ ಕೆಲಸ ಮಾಡ್ತಿದ್ದ ಕಚೇರಿಯಲ್ಲಿ ಎಲ್ಲ ಸೈಟ್‌ಗಳು ಬ್ಲಾಕ್ ಆಗಿದ್ದವು. ನನ್ನ ಬ್ಲಾಗ್ ಓದಿ ನಿಮ್ಮ ಮುಖದಲ್ಲೊಂದು ನಗುವಿನ ಎಳೆ ಮೂಡಿದರೆ ಸಾರ್ಥಕವಾದಂತೆ

    ಪ್ರತ್ಯುತ್ತರಅಳಿಸಿ