(ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.)
ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ ಆಚರಣೆಯ ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಕೃಷಿಕ ಕುಟುಂಬದ ನಮಗಾಗ ಹಬ್ಬ ಅಂದರೆ ಅದು ದೀಪಾವಳಿ.
ಕಾಡಿನಿಂದ ಹಾಲೆಮರವನ್ನು (ಇದನ್ನು ನಾವು ಬಲಿಯೇಂದ್ರ ಮರವೆಂದೇ ಹೇಳುವುದು) ದೀಪಾವಳಿ ಅಮವಾಸ್ಯೆಯಂದು ಬೆಳಗ್ಗೆ ಅಪ್ಪ ಕಡಿದು ತರುತ್ತಿದ್ದರು. ಅಂದು ರಾತ್ರಿ ಮರವನ್ನು ಮನೆಯೆದುರು ಅಂಗಳದಲ್ಲಿ ತುಳಸಿ ಕಟ್ಟೆಯ ಪಕ್ಕ ನೆಟ್ಟು ಪ್ರತಿಷ್ಠಾಪಿಸುವಲ್ಲಿಂದ ನಮ್ಮ ಹಬ್ಬ ಶುರು. ಈ ಮರವೇ ನಮ್ಮನಮ್ಮಗಳ ಶಕ್ತ್ಯಾನುಸಾರ, ಚಾಕಚಕ್ಯತೆಗನುಗುಣವಾಗಿ ಶೃಂಗಾರಗೊಂಡು ಬಲಿಯೇಂದ್ರನಾಗಿ ನಮ್ಮ ಮನೆ-ಮನದಂಗಳದಲ್ಲಿ ಹಬ್ಬದ ಮೂರ್ನಾಲ್ಕು ದಿನ ರಾರಾಜಿಸುತ್ತಿದ್ದುದು. ಕೆಲವು ಮನೆಗಳಲ್ಲಿ ಒಂಟಿ ಮರದ ಬಲಿಯೇಂದ್ರ. ಆದರೆ ನಮ್ಮದು ಜೋಡಿಮರಗಳ ಬಲಿಯೇಂದ್ರ. ಪುಟ್ಟದಾದ ಮರ (ಕೊಂಬೆ) ಒಂದು ದನದಹಟ್ಟಿಯ ಎದುರು. ಅದೇ ಗಾತ್ರದ ಇನ್ನೊಂದು ಮರ ಗದ್ದೆಯಲ್ಲಿ. ನೆಡುವ ಮರಗಳ ಮೇಲ್ತುದಿಯಲ್ಲಿ ರೆಂಬೆ ಒಡೆದ ಕವಲುಗಳನ್ನು ಅಲ್ಲಿ ಹಣತೆ ಕುಳಿತುಕೊಳ್ಳುವಂತೆ ಚೆನ್ನಾಗಿ ಕತ್ತರಿಸಿಯೇ ತರಲಾಗುತ್ತಿತ್ತು. ಮರದಲ್ಲಿ ಹಬ್ಬದ ಎಲ್ಲ ದಿನಗಳೂ ದೀಪ ಇರಿಸುತ್ತಿದ್ದದು ರೂಢಿ.
ಮನೆಗಳೆದುರು ಪ್ರತಿಷ್ಠಾಪನೆಗೊಳ್ಳುವ ಬಲಿಯೇಂದ್ರಗಳ ಸಿಂಗಾರದ ವಿಚಾರದಲ್ಲಿ ನಾವು ನೆರೆಹೊರೆಯ ಮಕ್ಕಳಲ್ಲಿ ಅಘೋಷಿತ ಸ್ಫರ್ಧೆ. ಎಲ್ಲ ಮನೆಗಳಲ್ಲೂ ಬಲಿಯೇಂದ್ರನ ಸಿಂಗಾರಕ್ಕಾಗೇ ಹೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆವು. ಮೇಲೆ ಹೇಳಿದ್ದೇನಲ್ಲಾ ಬಾಳೆಯ ರೆಂಬೆಗಳನ್ನು ಒಣಹಾಕುವ ವಿಚಾರ; ಇದ್ಯಾಕೆಂದರೆ, ಕಾಡಿನ, ಊರಿನ ಹೂವುಗಳನ್ನು ಅಂದವಾಗಿ ಪೋಣಿಸಲು ಹಗ್ಗ(ನಾರು) ತಯಾರಿಸಲು. ಹೀಗೆ ಒಣಗಿದ್ದ ರೆಂಬೆಯನ್ನು ಸಪೂರಕ್ಕೆ ಸೀಳಿ, ನೀರಿನಲ್ಲಿ ಅದ್ದಿ ದಟ್ಟವಾಗಿ ಬಣ್ಣಬಣ್ಣದ ವಿವಿಧ ಗಾತ್ರಗಳ ಹೂ ಮಾಲೆಕಟ್ಟಿ ಬಲಿಯೇಂದ್ರನಿಗೆ ಅರ್ಪಿಸುತ್ತಿದ್ದೆವು. ಅಪ್ಪನದ್ದು ಬೇರೆಯೇ ಟ್ರಿಕ್. ಬಾಳೆಯನ್ನು ಕಡಿದು ದಿಂಡಿನೊಳಗಿನ ಬಿಳಿಬಿಳಿ ಪದರಗಳನ್ನು (ನಾವಿದಕ್ಕೆ ಬಾಳೆರಂಬೆ ಅಂತೇವೆ) ತೆಗೆದು ಒಂದು ಭಾಗವನ್ನು ಹಲ್ಲುಹಲ್ಲಾಗಿ ಕತ್ತರಿಸಿ ಬಿದಿರನ್ನು ಸೀಳಿ ಮಾಡಿದ ಸಲಾಕೆಗಳ ಆಧಾರದೊಂದಿಗೆ ಎರಡೂ ಬಲಿಯೇಂದ್ರ ಮರಕ್ಕೆ ಜೋಡಿಸಿ ಕಟ್ಟಿದಾಗ ಶ್ವೇತವರ್ಣದ ಅದರ ಗೆಟಪ್ಪೇ ಗೆಟಪ್ಪು. ಇದರ ಮೇಲೆ ಬಣ್ಣಬಣ್ಣದ ವಿವಿಧ ಪುಷ್ಪಗಳ ಮಾಲೆಗಳು ಕಂಗೊಳಿಸುತ್ತಿದ್ದವು ನೋಡಿ, ಪಕ್ಕದ ಮನೆಯ ಬಲಿಯೇಂದ್ರಗಳೆಲ್ಲ ನಮ್ಮ ಬಲಿಯೇಂದ್ರನೆದುರು ಸಪ್ಪೆಸಪ್ಪೆ.
ಹಂದಿಬಳ್ಳಿ ಕಾಯಿ, ಕೇನೆ ಹೂವು, ಕೋಳಿ ಜುಟ್ಟು, ಪಿಂಗಾರ(ಹೊಂಬಾಳೆ) ಹಬ್ಬಲ್ಲಿಗೆ, ಗೋರಟೆ, ದಾಸವಾಳ, ತೇರು ಹೂವು, ಚೆಂಡು ಹೂವು (ಇವುಗಳೆಲ್ಲ ಕಾಡಿನಲ್ಲಿ ಬೆಳೆಯುವ, ಊರಲ್ಲಿ ಬೆಳೆಸುವ ಸುಂದರ ಪುಷ್ಪಗಳು. ಇವುಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಕ್ಷಮಿಸಿ)ಎಲ್ಲದರ ಮಾಲೆಯೊಂದಿಗೆ ಬಲಿಯೇಂದ್ರ ಜಿಗಿಜಿಗಿಯೊಂದಿಗೆ ಘಮಘಮ! ಬಲಿಯೇಂದ್ರನಿಗೆ ಪ್ರಭಾವಳಿಯನ್ನೂ ಇರಿಸುತ್ತಿದ್ದೆವು. ಅದು ನಮ್ಮ ಭಾಷೆಯಲ್ಲಿ ಪರ್ಬಾಳೆ ಆಗಿತ್ತು. ಬೆತ್ತದಲ್ಲಿ ನೇಯ್ದಿರುವ ಯು ಶೇಪಿನ ಪರ್ಮನೆಂಟ್ ಪ್ರಭಾವಳಿಯದು. ಹಬ್ಬವೆಲ್ಲ ಮುಗಿದು ಬಲಿಯೇಂದ್ರನ ವಿಸರ್ಜನೆಯ ವೇಳೆಗೆ ತಲೆಯಾಗಿದ್ದ ಪ್ರಭಾವಳಿಯನ್ನು ಮಾತ್ರ ಎತ್ತಿಟ್ಟು ಜೋಪಾನ ಮಾಡುತ್ತಿದ್ದೆವು. ತಲೆಯ ಭಾಗಕ್ಕೆ ಮಾತ್ರ ಹಳದಿ ಕೇಸರಿ ಮುಂತಾದ ವಿವಿಧ ಬಣ್ಣಗಳ ಚೆಂಡು(ಗೊಂಡೆ) ಹೂವು. ಇಷ್ಟು ಜತನದಿಂದ ಸಿಂಗರಿಸಿದ ಬಲಿಯೇಂದ್ರ ಬಿಸಿಲು-ಮಳೆಗೆ ನರಳಿದರೆ ನಮ್ಮ ಕರುಳು ಚುಳ್ ಎನ್ನುವುದಿಲ್ಲವೇ? ಈ ಕಾರಣಕ್ಕೂ ಮತ್ತು ಬಲಿಯೇಂದ್ರನ ಅಂದವನ್ನು ಹೆಚ್ಚಿಸಲೂ ಅರಳಿಸಿದ ಕೊಡೆಯ ಕಡ್ಡಿಗಳ ತುತ್ತತುದಿಯಲ್ಲಿ ತಾಜಾತಾಜಾ ಕೆಂಪಡಿಕೆಯನ್ನು ನೂಲಿನಲ್ಲಿ ಸುರಿದು ಕಟ್ಟಿ ಹ್ಯಾಂಗಿಂಗ್ ಥರ ಇಳಿಬಿಡುತ್ತಿದ್ದೆವು. ಆಹಾ..... ಇಂತಿಪ್ಪ ಬಲಿಯೇಂದ್ರನ ಸೌಂದರ್ಯವನ್ನು ತುಂಬಿಕೊಳ್ಳಲು ಆಗಿನ ಪುಟ್ಟ ಕಂಗಳು ಸಾಕಾಗುತ್ತಿರಲಿಲ್ಲ. (ಈಗವಾದರೆ ಕನ್ನಡಕವೂ ಸೇರ್ಪಡೆಗೊಂಡು ಕಣ್ಣು ನಾಲ್ಕಾಗಿದೆ, ಆದರೆ ಬಲಿಯೇಂದ್ರನಿಲ್ಲ!) ಅದೊಂದು ವರ್ಷ ಹೂವಿನ ಅಭಾವ ತೋರಿತ್ತು. ಆಗ ನಮ್ಮ ದೊಡ್ಡಕ್ಕನ ಐಡಿಯಾದಂತೆ ಬಣ್ಣದ ಕಾಗದವನ್ನು ಹೂವಿನ ಮಾಲೆಯಂತೆ ನೆರಿಗೆನೆರಿಗೆಯಾಗಿ ಹೊಲಿದು ಮಾಡಿದ್ದ ಸಿಂಗಾರ ನಮ್ಮೂರಲ್ಲಿ ಸೂಪರ್ ಹಿಟ್ ಆಗಿತ್ತು.
ನಮ್ಮ ಬಲಿಯೇಂದ್ರನ ಸಿಂಗಾರ ಮುಗಿಸಿ ಪಕ್ಕದ ಸಿಂಗಮಾಮನ ಮನೆ ಬಲಿಯೇಂದ್ರನ ವೀಕ್ಷಣೆಗೆ ತೆರಳುತ್ತಿದ್ದೆವು. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನೀಯರ್. ಆಗ ನಮಗೆ ಬೆಂಗಳೂರೆಂದರೆ ಅದು ಭಾರೀ ದೂರದ ದೇಶ. ಅವರು ಹಬ್ಬಕ್ಕೆಂದೇ ಸ್ಪೆಷಲ್ ಆಗಿ ಬರುವಾಗ ಪಟಾಕಿ, ತಿಂಡಿ ತಿನಿಸುಗಳನ್ನು ಖಡ್ಡಾಯ ತರುತ್ತಿದ್ದರು. ಗೆಳತಿ ಕುಮ್ಮಿ (ಅವರ ತಂಗಿ, ನನ್ನ ಜೀವನದ ಪ್ರಪ್ರಥಮ ದೋಸ್ತಿ) ಬೇರೆ ಅಣ್ಣ ನೂ........ರು ರೂಪಾಯಿ ಪಟಾಕಿ ತಂದಿದ್ದಾರೆ ಎಂದಾಗ ಆಸೆ ಚಿಗುರದಿರುತ್ತದಾ? ನಮ್ಮಮನೆಯಲ್ಲೋ, ಅಪ್ಪ ಒಂದು ಬಾರಿ ಕಣ್ಣು ಕೆಕ್ಕರಿಸಿದರೆಂದರೆ ನಮ್ಮ ಪಟಾಕಿ(ಬೇಡಿಕೆಯ) ಸದ್ದು ಅಲ್ಲೇ ಅಡಗುತ್ತಿತ್ತು. ಅದು ಹೇಗೋ ಸಿಂಗತ್ತೆಗೆ ನನ್ನ ಪಟಾಕಿ ಆಸೆ ಗೊತ್ತಾಗಿ ಅವರ ಶಿಫಾರಸ್ಸಿನ ಮೇಲೆ ನಂಗೊಂದಿಷ್ಟು ಪಟಾಕಿ, ಒಂದು ಪ್ಯಾಕ್ ನಕ್ಷತ್ರ ಕಡ್ಡಿ ಸಿಗುತ್ತಿತ್ತು.
ಆದರೆ ನನ್ನ ಗಾಯತ್ರಕ್ಕಳಿಗೆ ಮಾತ್ರ ನಮ್ಮ ಅಂಗಳದಿಂದಲೂ ಪಟಾಕಿ ಸದ್ದು ಸಿಡಿಯಬೇಕೆಂಬ ಆಸೆ. (ಈಗ ಯಾರಾದರೂ ಅವಳ ಬಳಿ ಹಬ್ಬಕ್ಕೆ ಪಟಾಕಿ ತಗೊಂಡ್ರಾ ಅಂದ್ರೆ; ಇಲ್ಲ, ನಮ್ಮ ಮನೆಯಲ್ಲಿ ತಂಗಿ ಇದ್ದಾಳೆ ಅಂತಾಳೆ) ಅದಕ್ಕಾಗಿ ನಾವು ನಾಡ ಪಟಾಕಿ ತಯ್ಯಾರಿಸುತ್ತಿದ್ದೆವು. ನಾವು ಮಾತ್ರವಲ್ಲ, ನಮ್ಮ ಮನೆಯ ಉತ್ತರಕ್ಕಿದ್ದ ವೆಂಕಪ್ಪಣ್ಣನ ಮನೆ, ಎದುರಿಗಿದ್ದ ಚಿಕ್ಕಪ್ಪನ ಮನೆ, ಆಚೆಗಿದ್ದ ಮಾಲಿಂಗಣ್ಣ- ಎಲ್ಲರ ಮನೆಯಲ್ಲೂ ಇದೇ ಪಟಾಕಿ. ಚೆನ್ನಾಗಿ ಬೆಳೆದ ಹಸಿ ಬಿದಿರಿನ ಒಳಗಿನ ಗಂಟುಗಳನ್ನು ಹಾರಿಸಿ, ಎರಡೂ ಬದಿ ಬಂದ್ ಇರಿಸಿ ಮೇಲೆ ಒಂದು ಕಡೆಯಲ್ಲಿ ತೂತು ಮಾಡಿ ಅದರ ಒಳಭಾಗಕ್ಕೆ ಸೀಮೆ ಎಣ್ಣೆ ಚಿಮುಕಿಸಿ ಬೆಂಕಿ ತೋರಿಸುವ ಮೂಲಕ ಚೆನ್ನಾಗಿ ಬಿಸಿ ಮಾಡಬೇಕು. ಬಿದಿರು ಕಾದ ಬಳಿಕ ಸಣ್ಣದಾಗಿ ಮೇಲ್ಮುಖವಾಗಿ ಮಾಡಿದ ತೂತಿನಲ್ಲಿ ಚೆನ್ನಾಗಿ ಊದಿ, ಒತ್ತಡ ತುಂಬಿ ಬೆಂಕಿಯ ಜ್ವಾಲೆಯನ್ನು ಹಾಯಿಸಿದರೆ ಭಯಂಕರ ಸದ್ದು ಹೊರಡುತ್ತಿತ್ತು. (ನಿಮ್ಮ ಈಗಿನ ಮಾಲೆ ಪಟಾಕಿಗಿಂತ ಒಳ್ಳೆಯ ಶಬ್ದವೇ ಹೊರಡುತ್ತಿತ್ತು) ಪಟಾಕಿ ಸದ್ದಿನೊಂದಿಗೆ ವಿವಿಧ ಮನೆಗಳಲ್ಲಿ ಬಿದಿರನ್ನು ಊದುವ ಶಬ್ದವೂ ಅನುರಣಿಸುತ್ತಿತ್ತು. ಇದರಲ್ಲೂ ಕಾಂಪಿಟೇಶನ್. ಬಿದಿರು ಊದಿದವರ ಪುಪ್ಪುಸದ ಕಥೆ ಬಲಿಯೇಂದ್ರನಿಗೇ ಪ್ರೀತಿ. ಮರುದಿನದ ಕಿವಿನೋವು ಹಬ್ಬದ ಸಡಗರದಲ್ಲಿ ಲೆಕ್ಕಕ್ಕೇ ಇರುತ್ತಿರಲಿಲ್ಲ.
ಮುಸ್ಸಂಜೆ ಕಳೆದು ಕತ್ತಲಾಗುತ್ತಿರುವಂತೆ ಬಲಿಯೇಂದ್ರ ಕೂಗುವುದು ಇನ್ನೊಂದು ಸಂಭ್ರಮ. ಅದೇನು ಕಟ್ಟುಕಟ್ಟಳೆಯ ಶಬ್ದಗಳೋ ಅಂತು ಕೊನೆಯಲ್ಲಿ 'ಹರಿಯೇ ಸಿರಿಯೇ ಕೂ....' ಎಂಬುದು ಮಾತ್ರ ಸರಿಯಾಗಿ ಅರ್ಥವಾಗುತ್ತಿತ್ತು. ಒಟ್ಟಿನಲ್ಲಿ ಅದರ ತಾತ್ಪರ್ಯವೆಂದರೆ, ಕೆಟ್ಟದನ್ನು ಕೊಂಡೊಯ್ದು ಸಿರಿಯನ್ನು ತಾ ಎಂಬುದು ಬಲಿಯೇಂದ್ರನೊಡನೆ ಅರಿಕೆ. ಅರಿಕೆ ಮಾಡಿಕೊಳ್ಳುವುದು ಯಜಮಾನನ ಕರ್ತವ್ಯವಾದರೆ, ಕೊನೆಯಲ್ಲಿ ಕೂ.... ಎಂಬುದು ಮಾತ್ರ ಮನೆಯವರೆಲ್ಲರ ಕೋರಸ್. ಇದರಲ್ಲೂ ಯಾವ ಮನೆಯ ಕೂ..... ಎಂಬ ಕೂಗು(ಕಿರುಚು) ಹೆಚ್ಚು ಶಕ್ತಿಶಾಲಿ ಎಂಬ ಬಹುಮಾನರಹಿತ ಸ್ಫರ್ಧೆ.
ಬಲಿಯೇಂದ್ರನ ಬಳಿ ಅರಿಕೆ ಮಾಡಿದ ಬಳಿಕ ಮನೆಯವರೆಲ್ಲರೂ ಸಾಲಾಗಿ ನಿಂತು ಪ್ರತಿಷ್ಠಾಪಿತ ಬಲಿಯೇಂದ್ರನಿಗೆ ಅವಲಕ್ಕಿ ಎರಚಿ ಅಥವಾ ಚಿಮ್ಮಿ ಪ್ರಾರ್ಥಿಸುವುದು ಕ್ರಮ. ನಾನಾಗ ನಾಲ್ಕೋ ಇಲ್ಲ ಐದರ ಹರೆಯದವಳು. ಅಪ್ಪ ಎಲ್ಲರ ಕೈಗೆ ಅವಲಕ್ಕಿ ಕೊಟ್ಟಿದ್ದರು. ಆಗೀಗ ನಮ್ಮಲ್ಲಿ ಅಗತ್ಯ ತೋಟದ ಕೆಲಸವೇನಾದರೂ ಇದ್ದರೆ ಬಂದು ಸಹಕರಿಸುತ್ತಿದ್ದ, ನೆರೆಮನೆಯ ಮೇಸ್ತ್ರಿ ಚೋಮಣ್ಣ ವಿಶೇಷ ಆಹ್ವಾನಿತರಾಗಿದ್ದರು. ಅಪ್ಪ ಅವರೊಂದಿಗೆ ಕಟ್ಟುಪಾಡಿನ ಮಾತುಗಳನ್ನು ಹೇಳುತ್ತಾ ಬಲಿಯೇಂದ್ರನಿಗೆ ಅರಿಕೆ ಮಾಡುತ್ತಿದ್ದರು. ಚೋಮಣ್ಣ 'ಆಂ, ಹೌದೌದು, ಸರಿ' ಎಂದೆಲ್ಲ ಹೇಳುತ್ತಾ ಅಪ್ಪನಿಗೆ ಸಾಥ್ ನೀಡುತ್ತಿದ್ದರು. ನಾನು ಆ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂಬ ಉದ್ದೇಶದಿಂದಲೋ, ಅಥವಾ ಅದನ್ನು ತಿನ್ನಲು ಕೊಟ್ಟಿದ್ದಾರೆಂದೋ, ಸದ್ದಿಲ್ಲದೆ ಕೈಯಲ್ಲಿದ್ದ ಅವಲಕ್ಕಿಯನ್ನು ಮೆದ್ದಿದ್ದೆ. (ಅದು ಮನೆಯಲ್ಲೇ ಅಮ್ಮ ಕುಟ್ಟಿ ಮಾಡುತ್ತಿದ್ದ ರುಚಿಯಾದ ಅವಲಕ್ಕಿ) ಕೊನೆಯಲ್ಲಿ ಕೂ.... ಹೇಳುವ ವೇಳೆಗೆ ಎರಚಲು ನನ್ನ ಕೈಯಲ್ಲಿ ಅವಲಕ್ಕಿ ಇಲ್ಲದೆ, ಇಂಗು(ಅವಲಕ್ಕಿ)ತಿಂದ ಮಂಗಿಯಾಗಿದ್ದೆ.
ಇನ್ನೊಂದು ಘಟನೆಯನ್ನೂ ಹೇಳಲೇ ಬೇಕು. ಮೂರು ದಿವಸ ಶೃಂಗಾರ ಪೂಜೆ ಎಲ್ಲ ಆದ ಮೇಲೆ ಕೊನೆಯ ದಿವಸ ಮುಂಜಾನೆಯೇ ಬಲಿಯೇಂದ್ರನ ವಿಸರ್ಜನೆ. ಅಂದರೆ ಮನೆಯ ಮುಂದೆ ರಾರಾಜಿಸುತ್ತಿದ್ದ ಜೋಡಿಮರವನ್ನು ಶೃಂಗಾರ ಸಮೇತ ಕಿತ್ತು ಹರಿಯುವ ನೀರಿನ ಬಳಿಯಲ್ಲಿ ಇರಿಸಲಾಗುತ್ತದೆ. ನಮ್ಮ ಬಲಿಯೇಂದ್ರನನ್ನು ಕೆಳಗಿನ ತೋಟದಲ್ಲಿ ಹರಿಯುವ ತೊರೆಯ ಬದಿಯಲ್ಲಿ ಇರಿಸುವುದು ವಾಡಿಕೆ. ಮೂರು ದಿವಸಗಳ ಕಾಲ ಬಲಿಯೇಂದ್ರನೇ ಸರ್ವಸ್ವವಾಗಿದ್ದು, ಅವಿನಾಭಾವ ನಂಟು ಉಂಟಾಗಿರುತ್ತಿದ್ದ ನನಗೆ ಬಲಿಯೇಂದ್ರನನ್ನು ಅಗಲುವುದು ಬಹಳ ಕಷ್ಟಕರ ವಿಚಾರವಾಗಿತ್ತು. ಬಲಿಯೇಂದ್ರ ವಿಸರ್ಜನೆಯ ಮಾತುಕತೆ ನಡೆಯುತ್ತಿದ್ದ ವೇಳೆ, ನಾನು ಅಪ್ಪನನ್ನು ಬಲಿಯೇಂದ್ರ ವಿಸರ್ಜನೆ ಬೇಡವೇ ಬೇಡವೆಂಬ ಹಠದೊಂದಿಗೆ ವಿನಂತಿಸಿಕೊಂಡಿದ್ದೆ. ಆ ಕ್ಷಣಕ್ಕೆ 'ಆಯ್ತು ಮಗಾ, ಈಗ ನಿದ್ದೆ ಮಾಡು' ಎಂದು ಸಮಾಧಾನಿಸಿದ್ದರು.
ಆದರೆ, ಅದೇನೋ ಸಿಕ್‌ಸ್ತ್ ಸೆನ್ಸ್ ಇರಬೇಕು. ಮರುದಿನ ನಸುಕಿನಲ್ಲಿ ಎಚ್ಚರವಾಗಿತ್ತು. (ಇಲ್ಲವಾದರೆ ನಾನು ಕುಂಭಕರ್ಣಿ) ಎದ್ದ ತಕ್ಷಣ ಆಗ ನೇರ ಬಲಿಯೇಂದ್ರನ ಬಳಿಸಾರಿಯೇ ಕಣ್ಣು ಬಿಡುತ್ತಿದ್ದದ್ದು. ಅಂದು ಎದ್ದು ನೋಡುತ್ತಿರಬೇಕಿದ್ದರೆ, ಅಪ್ಪ ಮರವನ್ನು ಕೀಳುತ್ತಿದ್ದಾರೆ. ಪುಟ್ಟ ಹೃದಯಕ್ಕೆ ಎಷ್ಟು ನೋವಾಯಿತೆಂದರೆ, ಅದನ್ನಿಲ್ಲಿ ಹೇಳಲಾಗುತ್ತಿಲ್ಲ. ಪ್ರತಿಭಟಿಸಿದೆ. ಊಹೂಂ... ಪರಿಣಾಮ ಸಾಲದಾಯಿತು. ಅಪ್ಪ ಅವರ ಪಾಡಿಗೆ ಬಲಿಯೇಂದ್ರನನ್ನು ಬೆನ್ನ ಮೇಲಿರಿಸಿ ಶೋಭಾಯಾತ್ರೆ(ಒಬ್ಬರೇ) ಹೊರಟರು. ನಾನೂ ಸದ್ದಿಲ್ಲದೆ ಕಣ್ಣಲ್ಲಿ ನೀರು ಸುರಿಸುತ್ತಾ ಅವರ ಹಿಂದೆಯೇ ನಡೆದಿದ್ದೆ. ತೊರೆಬದಿಯಲ್ಲಿ ಮರವಿಳಿಸಿ ಹಿಂತಿರುಗಿ ನೋಡುವ ವೇಳೆ ನಿಯಂತ್ರಿಸಲಾಗದ ದುಃಖ ಉಮ್ಮಳಿಸುತ್ತಾ, ಬಿಕ್ಕುತ್ತಾ ನಿಂತಿದ್ದ ನನ್ನನ್ನು ಅಪ್ಪ ಹೆಗಲ ಮೇಲೆ ಕೂರಿಸಿ ಕರೆತಂದಿದ್ದರು (ಅವರಿಗೂ ದುಃಖವಾದದ್ದು ತಿಳಿಯುತ್ತಿತ್ತು). ಈ ಕತೆ ನಮ್ಮ ಮನೆಯಲ್ಲಿ ಎವ್ವರ್ ಗ್ರೀನ್. ಪ್ರತೀ ದೀಪಾವಳಿ ವೇಳೆ ಒಬ್ಬರಿಲ್ಲವಾದರೆ ಒಬ್ಬರು ನೆಪಿಸಿಯೇ ಸಿದ್ಧ. ನನ್ನ ಮೋಡರ್ನ್ ಮಕ್ಕಳಿಗೆ(ಅಕ್ಕನ) ಅದೊಂದು ನಗೆ ಸರಕು.
ಕಾಡಿಗೆ ತೆರಳಿ ಮರತರಲು ಅಪ್ಪನಿಲ್ಲ. ಅಣ್ಣನಿಗೆ ಇಂಟರೆಸ್ಟ್ ಇಲ್ಲ. ಭತ್ತದಗದ್ದೆ ಇದ್ದಲ್ಲಿ ಅಡಿಕೆ ತೋಟವಿದೆ. ಹಟ್ಟಿ ತುಂಬ ಇರುತ್ತಿದ್ದ ದನಗಳ ಸಂಖ್ಯೆ ಕಮ್ಮಿಯಾಗಿದೆ. ಇಚ್ಚೆಯಂತೆ ನಮಗೆ ಹಬ್ಬಕ್ಕೆ ತೆರಳಲಾಗುತ್ತಿಲ್ಲ. ಹಬ್ಬಬಂದಾಗೆಲ್ಲ ಆ ಸಂಭ್ರಮ, ಹರ್ಷೋತ್ಕರ್ಷದ ನೆನಪಿನ ಹೂವುಗಳು ಮನದೊಳಗೆ ಬಿರಿಯುತ್ತವೆ, ಮುದಗೊಳ್ಳುತ್ತೇನೆ.
(ಈ ಬರಹ ಈ ಹಿಂದೆ ಬೇರೆಡೆ ಪ್ರಕಟವಾಗಿತ್ತು.)

ಶಾನಿ,
ಪ್ರತ್ಯುತ್ತರಅಳಿಸಿ‘ಎಲ್ಲಿ ಹೋದವೊ ಗೆಳೆಯಾ ಆ ಕಾಲ?’ ಎನ್ನುವಂತಾಗಿದೆ. ನಿಮ್ಮ ಆಚರಣೆಯ ವಿವರಣೆಗಳನ್ನು ಓದಿ, ‘ಅಹಾ, ಎಷ್ಟು ಸಂತೋಷ ನೀಡುವ ಆಚರಣೆಗಳಿವು!’ ಎನಿಸುತ್ತದೆ. ಈಗ? ಕಾಲಾಯ ತಸ್ಮೈ ನಮಃ! ಹೃದಯಸ್ಪರ್ಶಿ ಲೇಖನಕ್ಕಾಗಿ ಧನ್ಯವಾದಗಳು.
ಶಾನಿ;ನಿಮ್ಮ ಹಬ್ಬದ ವಿವರಗಳನ್ನು ಓದಿ ನಾವು ಸಣ್ಣವರಿದ್ದಾಗಿನ ಹಬ್ಬದ ಸಡಗರ ಸಂಭ್ರಮಗಳು ನೆನಪಾದವು.ಧನ್ಯವಾದಗಳು.ಹಬ್ಬ ನಿಮ್ಮೆಲ್ಲರಿಗೂ ಶುಭ ತರಲಿ.
ಪ್ರತ್ಯುತ್ತರಅಳಿಸಿದೀಪಾವಳಿಯ ಶುಭಾಶಯಗಳು...
ಪ್ರತ್ಯುತ್ತರಅಳಿಸಿಸುನಾಥ್ ಕಾಕಾ...,
ಪ್ರತ್ಯುತ್ತರಅಳಿಸಿಆ ದಿನಗಳಿಗೂ ಈ ದಿನಗಳಿಗೂ ಹೋಲಿಸಿದರೆ ತುಂಬಾ ವಿಷಾದವಾಗುತ್ತದೆ. ಆಧುನಿಕತೆಯ ಸೋಗು ಹಾಕಿರುವ ಕೃತಕತೆ ಎಲ್ಲವನ್ನೂ ನುಂಗಿಬಿಟ್ಟಿದೆ. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು.
ಡಾಕ್ಟರ್ ಸಾರ್....,
ಸಣ್ಣವರಾಗಿದ್ದಾಗ ಅನುಭವಿಸಿದಂತೆ ಸಂತೋಷ-ಸಂಭ್ರಮಗಳನ್ನು ಈಗ ಅನುಭವಿಸಲಾಗುತ್ತಿಲ್ಲ. ನಾವು ಸಣ್ಣವರೇ ಆಗಿರುತ್ತಿದ್ದರೆ ಎಷ್ಚು ಚೆನ್ನಾಗಿರುತ್ತಿತ್ತು!
ಪ್ರೀತಿಯ ಮೌನರಾಗ,
ನಿಮಗೆ ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು!