ಗುರುವಾರ, ಡಿಸೆಂಬರ್ 20

ಮೋತಿಯ ಮೂತಿಯ ಮೇಣ ತೆಗೆಯಲು..........

ಹೊಟ್ಟೆ ತುಂಬಾ ಹಲಸಿನ ಹಣ್ಣು ತಿಂದು ಬಂದ ನಮ್ಮ ಮೋತಿ ಕಂಯ್ಕ್...ಕುಂಯ್ಕ್... ಅನ್ನುತ್ತಾ ನಿಂತಲ್ಲಿ ನಿಲ್ಲಲಾರದೆ ಅತ್ತಿತ್ತ ಓಡಾಡುತ್ತಿತ್ತು. ನಾನು ದೊಡ್ಡ ವೈದ್ಯಳಂತೆ ಹಲಸಿನ ಹಣ್ಣು ತಿಂದು ನಾಯಿಗೆ ಉಬ್ಬಸದಿಂದಾಗಿ ಹೊಟ್ಟೆ ಬೇನೆ ಶುರುಹತ್ತಿದೆ ಅಂತ ನಿರ್ಧರಿಸಿದೆ. ಅಡುಗೆ ಮನೆಗೆ ಓಡಿ ಹೋಗಿ ಅವ್ವನಿಗೆ ಕಾಣದಂತೆ ಎರಡು ಬೆಳ್ಳುಳ್ಳಿ ಎಸಳು ತಂದು ಅದರ ಬಯಿಯ ಬಳಿ ಹಾಕಿ ಹುಂ... ತಕೋ ಅಂತ ಹೇಳಿದೆ. ಆದರೆ ಮೋತಿ ನನ್ನನ್ನು ಮೇಲಿಂದ ಕೆಳಕ್ಕೆ ನೋಡುತ್ತಿದೆಯೇ ವಿನಹ ಏನಾದರೂ ತಿಂಡಿ ಹಾಕಿದ ತಕ್ಷಣ ಗಬಕ್ಕನೆ ಬಾಯಿಗೆ ಹಾಕುವಂತೆ ಆತುರ ತೋರುತ್ತಿಲ್ಲ. ಕನಿಷ್ಟ ಪಕ್ಷ ಮೂಸಿ ಸಮೇತ ನೋಡುತ್ತಿಲ್ಲ. 'ಅಬ್ಬ ನಿನ್ನ ಆಂಕಾರವೇ' ಅನ್ನುತ್ತಾ ಅದರ ಕುತ್ತಿಗೆಯಲ್ಲಿ ಹಿಡಿದು ಮತ್ತೊಮ್ಮೆ ತಕೋ ಅಂದೆ. ದಯನೀಯ ಮುಖ ಮಾಡಿ ನನ್ನನ್ನು ನೋಡುತ್ತಿದೆಯೇ ವಿನಹ ನಾನು ನೀಡಿದ 'ಮದ್ದು' ತಿನ್ನಲು ಮುಂದಾಗುವುದಿಲ್ಲ.

ನಂಗೆ ಹೊಟ್ಟೆ ನೋವಾದಾಗೆಲ್ಲ "ಅವ್ವಾ... ಹೊಟ್ಟೆ ನೋವೆಂದು" ಹೇಳಿದರೆ, ಅವ್ವ ಬೆಳ್ಳುಳ್ಳಿ ಎಸಳು ನೀಡಿ ತಿನ್ನು ಅನ್ನುತ್ತಿದ್ದರು. ಜಾಸ್ತಿ ಹಠ ಮಾಡಿದರೆ ಏಟು ಬೀಳುತ್ತದೆ ಎಂಬ ಭಯಕ್ಕೆ ಖಾರಖಾರ ಬೆಳ್ಳುಳ್ಳಿಯನ್ನು ತಿಂದು "ಹೊಟ್ಟೆನೋವು ಹೋಯ್ತು....." ಅಂತಿದ್ದೆ. ಹಾಗೆ, ನಂಗೆ ಗೊತ್ತಿದ್ದ ವೈದ್ಯವನ್ನೇ ಮೋತಿ ಮೇಲೆಯೂ ಪ್ರಯೋಗಿಸಿ ಫಲಿತಾಂಶಕ್ಕೆ ಕಾದರೆ ಮೋತಿ ಬಾಲ ಅಲ್ಲಾಡಿಸುತ್ತದೆಯೇ ವಿನಹ ಬೆಳ್ಳುಳ್ಳಿ ತಿನ್ನಲು ಮುಂದಾಗುವುದಿಲ್ಲ.(ಆ ವಯಸ್ಸಿನಲ್ಲಿ ಅದನ್ನು ಮೋತಿ ತಿನ್ನುತ್ತದೆಯೋ ಇಲ್ಲವೋ ಎಂಬ ಅರಿವೂ ನನಗಿರಲಿಲ್ಲ).

ಈ ಮೋತಿ ನನ್ನ ದೋಸ್ತಿಗಳಾಗಿದ್ದ ಟಾಮಿ ಮತ್ತು ಜೂಲಿಯ ಅಮ್ಮ. ಟಾಮಿ ಮತ್ತು ಜೂಲಿ ನನಗೆಷ್ಟು ಆತ್ಮೀಯರೆಂದರೆ ನಾನು, ಟಾಮಿ, ಜೂಲಿ ಮತ್ತು ಬಿಲ್ಲಿ(ಮಿಯಾಂ) ಒಂದೇ ಚಾಪೆಯಲ್ಲಿ ಮಲ್ಕೊಳ್ಳುತ್ತಿದ್ದೆವು. ಒಂದು ಸೈಡಲ್ಲಿ ಟಾಮಿ, ಕಾಲ ಬಳಿ ಜೂಲಿ, ಇನ್ನೊಂದು ಬದಿ ಬಿಲ್ಲಿ. ಮಧ್ಯರಾತ್ರಿ ಹೊದಿಕೆ ವಸ್ತ್ರ, ಅಂಗಿಯತುದಿ ಎಲ್ಲಾ ಒದ್ದೆಯಾಗಿರುವ ಕಾರಣ ಹೊದಿಕೆ ಜಾರಿ ಅವುಗಳ ಮೇಲೆ ಬೀಳುತ್ತಿತ್ತು. ಇವುಗಳೂ ಅಷ್ಟೇ ಚಾಕಚಕ್ಯತೆಯಿಂದ ಅದನ್ನು ಬದಿಗೆ ಸರಿಸಿ ಸುರುಟಿ ಮುರುಟಿ ಮಲಗಿಕೊಳ್ಳುತ್ತಿದ್ದವು. ಎಚ್ಚರವಾಗುವಾಗ ನಾನು 8 ಬರೆದಂತೆ ಮುರುಟಿ ಇರುತ್ತಿದ್ದೆ.

ನನ್ನ ಗಾಯತ್ರಕ್ಕ ಗುಡಿಸಿಕೊಂಡು ಬರುವತನಕ ನಾವುಗಳ್ಯಾರೂ ಏಳುತ್ತಿರಲಿಲ್ಲ. ನಮ್ಮೆಲ್ಲರನ್ನು ಆಕೆ ಬಲಗೈಲಿ ಪೊರಕೆ ಹಿಡಿದಂತೆಯೇ ಎಡಗೈಲಿ ಎಳೆದೆಳೆದು ಹಾಕುತ್ತಿದ್ದಳು. ನಾಯಿಮರಿಗಳನ್ನು ಎಳೆದು ಬಿಸಾಡಿದರೂ, ಅವು ಉರುಳಿರುಳಿ ಮತ್ತೆ ಎದ್ದು ನನ್ನ ಬಳಿ ಬರುವಾಗ ನನ್ನ ಕರುಳು ಕಿವುಚಿದಂತಾಗುತ್ತಿತ್ತು. ಇದರಿಂದುಂಟಾಗುವ ಅಪರಿಮಿತ ದುಃಖದಿಂದಲೂ, ಅಕ್ಕನನ್ನು ಎದುರಿಸಲಾಗದ ಹತಾಶೆಯಿಂದಲೂ ನನ್ನ ದಿನ ಅಳುವಿನಿಂದಲೇ ಪ್ರಾರಂಭಗೊಳ್ಳುತ್ತಿತ್ತು.
ಹೀಗೆ ಒಂದು ದಿನ ಗಾಯತ್ರಕ್ಕೆ ರಪರಪನೆ ಗುಡಿಸಿಕೊಂಡು ಬರುವಾಗ ನನ್ನ ಚಾಪೆಯ ಬಳಿಯಲ್ಲಿ 'ಅಲಸಂಡೆ'ಯೊಂದು ಬಿದ್ದಿತ್ತು. ಆಕೆ ಅವ್ವಾ ನೋಡಿ ಶಾನಿ...ಅಲಸಂಡೆ... ಅಂತ ದೂರು ಕೊಡುತ್ತಿರುವಂತೆಯೇ ತಣ್ಣತಣ್ಣಗಿದ್ದ ಅಲಸಂಡೆ ಯಾಕೋ ಮಿಸುಕಾಡಲಾರಂಭಿಸಿತ್ತು. ಕಿರುಚಿಕೊಂಡ ಆಕೆ 'ಅಲಸಂಡೆ'ಯನ್ನು ಅಲ್ಲೇ ದೊಪ್ಪನೆ ಹಾಕಿದಳು. ಅಷ್ಟರಲ್ಲಿ ನಾನು ಮತ್ತು ನನ್ನ ಬಳಗವನ್ನು ಆಕೆ ಎಳೆದೆಳೆದು ಹಾಕಿಯಾಗಿತ್ತು. ಅದು ಹಳ್ಳಿಗಳಲ್ಲಿ, ತೋಟದಲ್ಲಿ ಕಂಡುಬರುವ ಕಪ್ಪು, ಬಿಳಿ, ಮರೂನ್ ಬಣ್ಣದ ಹಾವಾಗಿತ್ತು. ಅಲಸಂಡೆ ಸೈಝಿನಲ್ಲಿದ್ದ ಕಾರಣ ಅಕ್ಕನಿಗೆ ಕನ್‌ಫ್ಯೂಸ್ ಆಗಿ ಅಲಸಂಡೆ ಅಂದಿದ್ದಳು.

ಅದು ಬಿಲ್ಲಿ ಮಹಾರಾಯ್ತಿಯ ಬೇಟೆ; ಅರೆ ಜೀವವಾಗಿ ಚಾಪೆಯಡಿ ಬಿದ್ದಿತ್ತು. ಇದಾದ ನಂತರ ಬಿಲ್ಲಿಗೆ ನನ್ನ ಚಾಪೆಗೆ ಎಂಟ್ರಿ ಇರಲಿಲ್ಲ. ನಾನು ನಿದ್ರಿಸಿದ ನಂತರ ಬಿಲ್ಲಿ, ಟಾಮಿ, ಜೂಲಿಗಳೆಲ್ಲವನ್ನೂ ಅಮ್ಮ ಹೊಡೆದೋಡಿಸುತ್ತಿದ್ದರು. ಆದರೂ ಅವುಗಳೆಲ್ಲ ಮಧ್ಯರಾತ್ರಿ ಹೇಗೋ ಬಂದು ನನ್ನ ಚಾಪೆಯನ್ನು ಹುಡುಕಿ ನೆಲೆ ಕಂಡುಕೊಳ್ಳುತ್ತಿದ್ದವು.

ಆ ಸಂದರ್ಭದಲ್ಲಿ ನನ್ನ ಮಾತು ಕೇಳುತ್ತಿದ್ದದ್ದು ಅವೆರಡು ನಾಯಿಮರಿಗಳು ಮಾತ್ರ. ಮತ್ತೆ ಯಾರಬಳಿಯೂ ನನ್ನ ಜಬರ್‌ದಸ್ತ್ ನಡೆಯುತ್ತಿರಲಿಲ್ಲ. ನಮ್ಮ ಮನೆ ಪಕ್ಕದ ಶ್ರೀಮಂತರ ಮನೆಯೊಂದರಲ್ಲಿ ಇದ್ದ ಚಂದದ (ಪಮೇರಿಯನ್) ಸೊಂಟ ಬಳಕಿಸುವ ನಾಯಿಯನ್ನು ಅವರ ಮಗ ಒಂದು ದಿನ 'ಕಾಮಿಯಾ' ಅಂತ ಕರೆಯುತ್ತಿರುವುದು ಕೇಳಿಸಿತ್ತು. ಅಲ್ಲಿಗೆ ಹೋಗಿದ್ದ ನಾನು ಅದರ ಹೆಸರು ಕಾಮಿಯಾವಾಂತ ಆ ಮನೆಯ ಯಜಮಾನಿಯನ್ನು ಕೇಳಿದ್ದೆ. ಅದಕ್ಕೆ ಅವರು(ವರಸೆಯಲ್ಲಿ ನನಗೆ ಅತ್ತೆ) ನಗುತ್ತಾ ಅಲ್ಲ 'ಕಂ ಹಿಯರ್' ಅಂದರೆ ಇಂಗ್ಲೀಷಿನಲ್ಲಿ 'ಇಲ್ಲಿ ಬಾ' ಅಂತ ಹೇಳಿಕೊಟ್ಟರು.

ಅಲ್ಲಿಂದ ಬಂದ ನಂತರ ನನಗೂ, ನನ್ನ ನಾಯಿಗಳಿಗೆ ಹೇಗಾದರೂ ಮಾಡಿ ನನಗೆ ಗೊತ್ತಿರುವ ಈ ಇಂಗ್ಲೀಷ್ ಕಲಿಸಲೇಬೇಕೆಂಬ ಹಠ ಹುಟ್ಟಿಕೊಂಡಿತ್ತು. ಹಾಗಾಗಿ ಟಾಮಿ ಮತ್ತು ಜೂಲಿಯನ್ನು ಹೊಡೆದು ದೂರ ಓಡಿಸಿ, ಕಂ.. ಕಂ.. ಅಂತ ಬಳಿಗೆ ಕರೆದು, ಕಂ ಅಂದರೆ ಬರಬೇಕು ಎಂಬ ಶತಪ್ರಯತ್ನ ಮಾಡಿ ಅಮ್ಮನಿಗೂ ನಾಯಿಮರಿಗಳನ್ನು ಕಂ ಅಂತಲೇ ಕರಿಬೇಕು ಎಂದು ತಾಕೀತು ಮಾಡಿದ್ದೆ. ಅವ್ವನಿಗೆ ಕೆಲಸದ ಗಡಿಬಿಡಿಯಲ್ಲಿ ಇಂಗ್ಲೀಷ್ ಪಂಗ್ಲೀಷ್‌ಗಳೆಲ್ಲ ಮರೆತುಹೋಗಿ ಅವರು ಮಾತ್ರ ಮಾಮೂಲಿನಂತೆ "ಕೂರಿ, ಕೂರಿ" ಅಂತಲೇ ಕರೆಯುತ್ತಿದ್ದರು. ಆಗೆಲ್ಲ ಛೇ.. ನನ್ನ ದೋಸ್ತಿಗಳಾಗಿರುವ ಟಾಮಿ, ಜೂಲಿಗೆರಡು ಇಂಗ್ಲಿಷ್ ಕಲಿಸುವ ಅಂದರೆ ಈ ಅವ್ವ ಸಹಕರಿಸುತ್ತಿಲ್ಲವೇ.. ಎಂಬ ಸಂಕಟವಾಗುತ್ತಿತ್ತು.

ಇಂಥ ಅಟ್ಯಾಚ್‌ಮೆಂಟಿರವ ಜೂಲಿ ಟಾಮಿಯ ಅಮ್ಮನಿಗೆ ಏನೋ ಆಗಿರುವುದು ನನಗೆ ನಿಜಕ್ಕೂ ಕಾಳಜಿ ಕೆರಳಿಸಿತ್ತು. ಹಾಗೆ ನೋಡಿದರೆ ಮೋತಿ ಒಂದು ತರದಲ್ಲಿ ವಿಲನ್. ಯಾಕೆಂದರ್ ವಿದ್ಯುತ್ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಮಿಣುಕು ಚಿಮಿಣಿ ಬಡ್ಡಿಯೇ ಬೆಳಕು. ಹೀಗೆ ಅರ್ಧ ಕತ್ತಲು ಅರ್ಧ ಬೆಳಕಿರುವಾಗ ನಮ್ಮ ಮನೆಯಲ್ಲಿದ್ದ ಏಕೈಕ ಪೀಠೋಪಕರಣವಾಗಿದ್ದ ಒಂದು ಮರದ ಬೆಂಚಿನಡಿಯಲ್ಲಿ ಅದು ಕಣ್ಣು ಪಿಳುಕಿಸುತ್ತಾ ಮಲಗಿರುತ್ತಿತ್ತು. ಕತ್ತಲಲ್ಲಿ ಹೊಳೆಯುವ ಅದರ ಹಸಿರು ಕಣ್ಣನ್ನು ನೋಡಿದರೆ ನಂಗೆ ವಿಪರೀತ ಭಯ. ಮುಸ್ಸಂಜೆ ಹೊತ್ತಿಗೆ ಹಸಿವು ಭರಿತ ನಿದ್ದೆ ತೂಗಲಾರಂಭಿಸುವ ನಾನು ಸಿಕ್ಕಾಪಟ್ಟೆ ಹಠಮಾಡುತ್ತಾ ಅಳುತ್ತಿದ್ದಾಗ ನನ್ನನ್ನು ಸಮಾಧಾನಿಸಲಾಗದಿದ್ದರೆ, ಅಮ್ಮನಂತೆ ಸಲಹುತ್ತಿದ್ದ ನನ್ನ ಸಣ್ಣಕ್ಕ ಮೆಲ್ಲನೆ, ಅಲ್ಲಿನೋಡು ಅನ್ನುತ್ತಾ ಆ ನಾಯಿಯ ಕಣ್ಣನ್ನು ತೋರಿಸುತ್ತಿದ್ದಳು. ಆ ಭಯಕ್ಕೆ ನನ್ನ ಅಳು ಬಂದ್ ಆಗಿ ಗಪ್‌ಚಿಪ್ ಆಗುತ್ತಿದ್ದೆ.

ಅದರ ಕಣ್ಣು ಪಿಣಿಪಣಿ, ಅದೇನಿದ್ದರೂ ರಾತ್ರಿಯ ಮಲಾಮತ್ತು. ಹಗಲು ಅದೆಲ್ಲ ನೆನಪಾಗುತ್ತಿರಲಿಲ್ಲ. ಈ ನಾಯಿಗೆಂಥ ಕಾಯಿಲೆ ಬಂದಿದೆಯಪ್ಪಾ ಅಂತ ನನ್ನ ಪುಟ್ಟ ತಲೆಗೆ ಅಲೋಚನೆ ಹೊಕ್ಕಿತ್ತು. ಕಡೆಗೆ ಸೂಕ್ಷ್ಮವಾಗಿ ಅದರ ಬಾಯಿಯ ಬಳಿ ಗಮನಿಸಿದಾಗ ಅದರ ಬಾಯಿ ಬಲವಂತದಿಂದ ಬಂದ್ ಆಗಿತ್ತು. ಬೆಣ್ಣೆಯಂಥ ರುಚಿರುಚಿಯ ಹಲಸಿನ ಹಣ್ಣು ಬೀಳುತ್ತಲೇ ಅದರ ಶಬ್ದಕ್ಕೆ ಓಡಿ ತಾಜಾ ಹಣ್ಣನ್ನು ಇಡಿಯಾಗಿ ಕಬಳಿಸಿತ್ತು.

ಹೊಟ್ಟೆಬಾಕ ಮೋತಿ ಗಬಗಬನೆ ಕಬಳಿಸುವಾಗ ಮೇಣವೆಲ್ಲ ಅದರ ಬಾಯಿಸುತ್ತ ಇರುವ ರೋಮಕ್ಕೆ ಅಂಟಿಕೊಂಡು ಅದರ ಮೂಗಿನಿಂದ ಹಿಡಿದು ಕೆಳದವಡೆಯ ತನಕ ಅಂಟಿ ಹೋಗಿತ್ತು. ಅದನ್ನು ಬಿಡಿಸಿಕೊಳ್ಳಲು ತನ್ನ ಮೂತಿಯನ್ನು ಹುದುಗಿಸಿ ತಿಕ್ಕಿದ ಪರಿಣಾಮ ಒಂದೆರಡು ತರಗೆಲೆ, ಮಣ್ಣು ಹುಲ್ಲು ಎಲ್ಲ ಅಂಟಿಕೊಂಡು ಅದರ ಬಾಯಿಗೆ ವಾಶರ್ ಹಾಕಿದಂತಾಗಿತ್ತು. ಒಟ್ಟಾರೆ ಮೋತಿಯ ಮುಖದ ರೂಪ ವಿಚಿತ್ರವಾಗಿತ್ತು.

ನನ್ನನ್ನು ನೋಡುತ್ತಾ ಅದರ ಕೈಗಳಿಂದ ನನ್ನ ಕಾಲನ್ನು ಪರಡುತ್ತಾ ಸಹಾಯ ಯಾಚಿಸುತ್ತಿತ್ತು. ವೋ... ಇದ್ಕೆ ಹೊಟ್ಟೆ ನೋವಲ್ಲ ಬಾಯಿ ಬಂದ್ ಆಗಿದೆ, ಮೇಣ ಮೆತ್ತಿಕೊಂಡಿದೆ ಅಂತ ಗೊತ್ತಾಯ್ತು. ಅದರೆಡೆಯಲ್ಲೂ ಮೋತಿಯ ಮೇಲೆ ಕೋಪ ಬರದಿರಲಿಲ್ಲ. ಯಾಕೆಂದರೆ ಅದು ಕದ್ದು ತಿಂದದ್ದು ನನ್ನ ಫೇವರಿಟ್ ಮರದ ಹಲಸಿನ ಹಣ್ಣು. ನಮ್ಮ ಮನೆಯಲ್ಲಿರುವ ಹಲಸಿನ ಮರಕ್ಕೆಲ್ಲ ಒಂದೊಂದು ಹೆಸರಿದೆ. ಯಾಕೆಂದರೆ ಒಂದೊಂದು ಮರದ ಫಲಕ್ಕೂ ಒಂದೊಂದು ಸ್ಪೆಷಾಲಿಟಿ. ಒಂದು ಮರ ಹಪ್ಪಳಕ್ಕೆ ಫೇಮಸ್. ಇನ್ನೊಂದು ಪಾಯಸಕ್ಕೆ, ಮತ್ತೊಂದು ಉಪ್ಪು ನೀರಲ್ಲಿ ಹಾಕಿಡಲು, ಮಗದೊಂದು ಸೋಳೆ ಒಣಗಿಸಲು. ಮೂಲೆ ಮರ ಬೇಯಿಸಿ ತಿನ್ನಲು, ಅದರಾಚೆಯದ್ದು ಪದಾರ್ಥಕ್ಕೆ... ಹೀಗೆ ಮರಗಳನ್ನು ಗುರುತಿಸುವುದೇ ಅದರ ವೈಶಿಷ್ಠ್ಯದಿಂದ.

ಈ ನಾಯಿ ಕದ್ದು ತಿಂದ ಮರದ ಹಲಸಿನ ಹಣ್ಣಂತೂ ಅಬಾಲವೃದ್ಧರಾಧಿಯಾಗಿ ಪ್ರೀತಿಸಬೇಕಾದದ್ದೇ. ಯಾಕೆಂದರೆ ಬೆಣ್ಣೆಯಂತಿರುವ ಅದರ ಸೋಳೆಗಳು ಬಾಯಿಗಿಟ್ಟ ತಕ್ಷಣ ಕರಗುವ ಕಾರಣ 'ಬುಳುಂಕ್ ಬುಳುಂಕ್' ಅಂತ ನುಂಗುವುದೇ ಅದರ ಗಮ್ಮತ್ತು.
ಅದೆಲ್ಲ ಹಾಳಾಗ್ಲಾಚೆ. ಈಗ ನಾಯಿಗೇನಾದರೂ ಮಾಡಬೇಕಲ್ವಾ ಅಂತ ಯೋಚಿಸಿದೆ. ಮೇಣ ತೆಗೆಯಲು ಸುಲಭೋಪಾಯ ಕಣ್ಣಮುಂದೆ ಬಂತು. ಹಲಸಿನ ಕಾಯಿ ಕತ್ತರಿಸಿದ ಬಳಿಕ ಮೇಲೆ ಅಮ್ಮ ಕತ್ತಿಯನ್ನು ಒಯ್ದು ಒಲೆಯಲ್ಲಿನ ಬೆಂಕಿಗೆ ಹಿಡಿದಾಗ ಝಂಯ್ ಝಂಯ್ ಸದ್ದಿನೊಂದಿಗೆ ಮೇಣ ಕರಗುವ ದೃಶ್ಯ ಕಣ್ಣ ಮುಂದೆ ಬಂದಿದ್ದೇ, ಮೋತಿಗೆ ಇಲ್ಲೇ ಇರು ಈಗ ಬಂದೆ ಅಂತಂದೆ.
ಒಳಗೆ ಹೋಗಿ ಸೀಮೆಎಣ್ಣೆ ಬುಡ್ಡಿಯನ್ನು ಉರಿಸಿ ತಂದು ಮೋತಿಯನ್ನು ಎಷ್ಟು ಸಾಧ್ಯವೋ ಅಷ್ಟು ಶಕ್ತಿಯಿಂದ ಒತ್ತಿ ದೀಪದ ಜ್ವಾಲೆಯನ್ನು ಅದರ ಮುಖಕ್ಕೆ ಹಿಡಿದೆ. ಮೋತಿಗೆ ಏನಾಗುತ್ತದೆ ಎಂಬ ಅರಿವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ಅದರ ಮುಖಕ್ಕಂಟಿದ್ದ ತರಗೆಲೆ ಚಟ್ ಪಟ್ ಅಂತ ಸದ್ದುಮಾಡಿತು. ಇನ್ನೇನು ಝಂಯ್ ಝಂಯ್ ಸದ್ದು ಬರುತ್ತದೆ, ಮೇಣ ಕೆಳಗೆ ಸುರಿಯುತ್ತದೆ ಅನ್ನುತ್ತಾ ನಾನು ನಿರೀಕ್ಷಿಸುತ್ತಿದ್ದರೆ ಅದರ ರೋಮ ಸುಟ್ಟ ಭಯಂಕರ ವಾಸನೆ ಹೊರಟಿತು. ನನ್ನ ಕೈಯಲ್ಲಿದ್ದ ನಾಯಿ ಕೊಸರಾಡುತ್ತಾ ತಿರುಗಿ ನಂಗೆ ಕಚ್ಚಿ ಒಂದೇ ಏಟಿಗೆ ಬಾಯಿ ತೆರೆದು ಬೊಬ್ಬೆ ಹೊಡೆಯುತ್ತಾ ನೋವು ಸಹಿಸಿಕೊಳ್ಳಲಾರದೆ ಕೆಳಗಿನ ತೋಟಕ್ಕೆ ಓಡಿತು.

ನಾಯಿ ಕೊಸರಾಡಿ ತಿರುಗಿ ನಂಗೆ ಕಚ್ಚುವಾಗ ನನ್ನ ಕೈಲಿದ್ದ ದೀಪ ನನ್ನ ಕಾಲ ಮೇಲೆ ಬಿತ್ತು. ಸದ್ಯ ಅದು ನಂದಿ ಹೋಯಿತು. ನಾಯಿಯ ಬೊಬ್ಬೆ, ನನ್ನ ಕಿರುಚಾಟ ಎಲ್ಲ ಕೇಳಿ ಒಳಗಿದ್ದ ಸಣ್ಣಕ್ಕ, ಅವ್ವ ಮಗೂಗೇನಾಯ್ತೋ ಎಂಬ ಧಾವಂತದಲ್ಲಿ ಓಡಿ ಬಂದು, ಏನಾಯ್ತು ಅಂತ ಕೇಳಿದಾಗ ಮೋತಿ ಕಚ್ಚಿತು ಅಂತ ಬೆಂರ್ರೇ..... ಎಂದು ಅಳಲಾರಂಭಿಸಿದೆ. ಅದು ಬುದ್ಧಿಯ ಮೋತಿ. ಅದರ ಬಾಯಿಯೊಳಗೆ ಬೆರಳು ತುರುಕಿಸಿದರೂ ಕಚ್ಚದ ಮೋತಿ ಏಕಾಏಕಿ ಇವಳಿಗೇಕೆ ಕಚ್ಚಿತು ಅಂತ ಅವ್ವನಿಗೆ ಅಚ್ಚರಿ. ಉರುಳಿ ಬಿದ್ದಿದ್ದ ದೀಪ, ಚೆಲ್ಲಿ ಹೋಗಿದ್ದ ಸೀಮೆಎಣ್ಣೆ ಎಲ್ಲವೂ ಏನೋ ನಡೆದಿದೆ ಅಂತ ಕಥೆ ಹೇಳಿದವು. ಏನಾಯಿತು, ಏನು ಮಾಡ್ದೆ ಮೋತಿಗೆ ಅಂತ ಗದರಿದರು. ನಾನು ನನ್ನ ಬಾಲಬಾಷೆಯಲ್ಲಿ ಮೋತಿಯ ಮೂತಿಯ ಮೇಣ ತೆಗೆಯಲು ಬೆಂಕಿ ಇಕ್ಕಿದ್ದಾಗಿ ಹೇಳಿದೆ.

ನನ್ನ ಕಚೇರಿಯಲ್ಲಿ ನನಗೊಬ್ಬ ಪುಟ್ಟ ಗೆಳತಿ ಇದ್ದಾಳೆ. ನಾಯಿ-ಬೆಕ್ಕೆಂದರೆ ಅಪರಿಮಿತ ಪ್ರೀತಿ. ಆಕೆ ಯಾವುದೇ ಕಂಪ್ಯೂಟರಿನಲ್ಲಿ ಕೂತರೂ ಬೆಕ್ಕುಗಳ ಒಂದು ಝಿಪ್ ಫೈಲ್ ಅಲ್ಲಿ ಇನ್‌ಸ್ಟಾಲ್ ಆಯ್ತು ಅಂತ ಲೆಕ್ಕ. ಇಂತಿಪ್ಪ ಅವಳು ಅದೊಂದು ದಿನ ಚಿಕ್ಕ ಮುಖ ಮಾಡಿದ್ದಳು. ಏನಾಯ್ತೇ..... ಅಂತ ಕೇಳಿದರೆ, ಹೂತು ಹೋದ ದನಿಯಿಂದ ಏನಿಲ್ಲ ಅಂತ ಸುಮ್ಮನಾದಳು. ನಾನು ಅಷ್ಟಕ್ಕೆ ಸುಮ್ಮನಾಗಲಾಗುತ್ತದಾ...? ತನಿಖೆ ಮಾಡಿದೆ. ಗೊತ್ತಾದ ವಿಚಾರವೆಂದರೆ, ಆಕೆಯ ಅಣ್ಣ ಊರಿಗೆ ಹೋದವರು ಹಿಂತಿರುಗಿ ಬರುವಾಗ ಬೆಕ್ಕು, ನಾಯಿಯ ಫೋಟೋ ತನ್ನಿ ಎಂಬ ಈಕೆಯ ವಿನಂತಿಯನ್ನು ಮನ್ನಿಸಿರಲಿಲ್ಲ.

ಯಾಕೆ ಪೊಟೋ ತೆಗೆದಿಲ್ಲ ಎಂಬುದಕ್ಕೆ, ಬೆಕ್ಕಿನ ಪೋಟೋ ತೆಗೆಯಲು ನಾಯಿ ಬಿಟ್ಟಿಲ್ಲ. ನಾಯಿ ಪೋಟೋ ತೆಗೆಯಲು ಬೆಕ್ಕು ಅಡ್ಡಬಂತು ಎಂಬ 'ಬೊಗಳೆ' ಬಿಟ್ಟಿದ್ದರು. ಅದಕ್ಕೆ ನಮ್ಮ ಸಹೋದ್ಯೋಗಿ ಮಿತ್ರ ತ್ರಾಸಿ, ಪಕ್ಕಾ ಕುಂದಾಪುರ ಆಕ್ಸೆಂಟಲ್ಲಿ ಹೌದೌದು.... ನಾಯಿ ಭಯಂಕರ ಜೋರು ಅಂತ ಒಗ್ಗರಣೆ ಹಾಕಿದ್ದರು. ಹೀಗೆ ಅಲ್ಲಿದ್ದ ಎಲ್ಲರೂ ತಲೆಗೊಂದರಂತೆ ಸಲಹೆ ಸೂಚನೆ ಕೊಡುತ್ತಿರುವಾಗ ಮಾತು ಬೆಕ್ಕಿಗೆ ಭಾಷೆ ಕಲಿಸುವಲ್ಲಿಗೆ ಬಂತು. ನಾನು ಸುಮ್ಮನಿರಲಾಗುತ್ತದಾ, ತಮಿಳ್ನಾಡಲ್ಲಿರುವ ನೀನು, ನಿನ್ನ ನಾಯಿ-ಬೆಕ್ಕುಗಳಿಗೂ ನಿನ್ನ ಹರಕು ತಮಿಳು ಕಲಿಸು ಅಂದೆ. ಪುತಕ್ಕನೆ ನಕ್ಕಳು ಹುಡುಗಿ.

ಇಷ್ಟೆಲ್ಲ ಆಗುವಾಗ ನನ್ನ ಈ ಹಳೆಯ ಪ್ರವರ ನೆಂಪಾಯಿತು ನೋಡಿ. ಅಷ್ಟೆ!

1 ಕಾಮೆಂಟ್‌:

  1. ಮೋತಿಯ ಮೂತಿಯ ಮೇಣ ತೆಗೆಯಲು ಅದರ ಮೂತಿಗೆ ಬೆಂಕಿ ಹಚ್ಚೀದ್ದೀರಲ್ಲಾ ಮೇಡಂ ಪಾಪ! ಹೋಗಲಿ ಬಿಡಿ, ಅಂದಹಾಗೆ ಪಕ್ಕದ ಮನೆಯ ಕಾಮಿಯಾ ಹೇಗಿದೆ? ತುಂಬಾ ನವಿರಾದ ಬರಹ. ಸಹಜವಾಗಿ ಓದಿಸಿಕೊಂಡು ಹೋಯಿತು.


    ಧನ್ಯವಾದಗಳು
    ಜೋಮನ್

    ಪ್ರತ್ಯುತ್ತರಅಳಿಸಿ