ಗುರುವಾರ, ಜೂನ್ 12

ಬ್ಲಾಗ್ತಾಯಿಗೆ ಬ್ಲಾಗ್ಮುದ್ದು!

ಮೊನ್ನೆ ಮೊನ್ನೆ ನನ್ನ ಬ್ಲಾಗುರು ಅಸತ್ಯ ಅನ್ವೇಷಿಯವರು 50 ಸಾವಿರ ಹಿಟ್ಟುತಿಂದ ಕುರಿತು ವರದಿಯಾಗಿತ್ತಲ್ಲಾ... ಹಾಗೇ... ನಾನು ನನ್ನ ಹಿಟ್ಟುಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಏನಾಶ್ಚರ್ಯ....? 50 ಸಾವಿರ ಹಿಟ್ಟುಗಳಿಲ್ಲ। ಆದರೆ ಸಾವಿರ ಹಿಟ್ಟುಗಳು ದಾಟಿವೆ! ಸಂಭ್ರಮಾಚರಣೆಗೆ ಯೋಗ್ಯತಾನೆ.

ಒಂದು ರೀತಿಯ ಜಡಹಿಡಿದಂತೆಯೇ ಇರುವ ನಂಗೆ ಉದಾಸೀನ ಸ್ವಲ್ಪ ಹೆಚ್ಚು। ಹುಟ್ಟಾ 'ಉದಾಸೀನಿ' ಎಂದರೂ ತಪ್ಪಾಗಲಾರದು. ಹಾಗಾಗಿ ಅಫ್‌ಡೇಶನ್ ಡಿಸೀಪ್ಲೀನ್ ಇಟ್ಟುಕೊಂಡಿಲ್ಲ. ಇದಕ್ಕೆ ಪುರ್ಸೋತ್ತಿಲ್ಲ ಎಂಬ ಕಾರಣವೂ ಇದೆ. ಆಚೆ(2006) ನವೆಂಬರಿನಿಂದಲೂ ಬ್ಲಾಗೊಂದನ್ನು ಸೃಷ್ಟಿಸಬೇಕೆಂಬ ಇರಾದೆ ಹುಟ್ಟಿಕೊಂಡಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿದ್ದು ಕಳೆದ(2007) ನವೆಂಬರಿನಲ್ಲಿ.

ಕಂಪ್ಯೂಟರ್ ಇಲ್ಲಿಟ್ರೇಟ್ ಆಗಿರುವ ನಾನೂ ಥೇಟ್ ಕಂಪ್ಯೂಟರಿನಂತೆ(ಹೇಳಿದಷ್ಟೆ ಮಾಡೋ ಜಾಯಮಾನ)। (ಅ)ಮಾನ್ಯ ಅಸತ್ಯ ಅನ್ವೇಷಿಯವರ ಬೆನ್ನು ಬಿದ್ದು, ನಂಗೂ ಬ್ಲಾಗ್ ಬೇಕೆಂದು ರಚ್ಚೆ ಹಿಡಿಯುತ್ತಾ, ಅದು ಹ್ಯಾಗೆಂದು ಹೇಳಿಕೊಡಿ ಎಂದು ಅವರ (ಇಲ್ಲದ) ತಲೆಯನ್ನು ತಿಂದಿದ್ದೆ. ಅದಕ್ಕೇನು ಆನೆ-ಕುದುರೆ ಬೇಕಿಲ್ಲ ಎಂದ ಅವರು, ಕಳೆದ ನವೆಂಬರ್‌ನ ಒಂದಿನ ಗೋಧೂಳಿ ಸಮಯದಲ್ಲಿ ಕರೆದು ಬ್ಲಾಗ್ ಸೃಷ್ಟಿಯ ಮಂತ್ರ ಪಠಿಸಿದರು.

ಜೀ ಮೇಲ್ ಅಕೌಂಟ್ ಆರಂಭದಿಂದ ಹಿಡಿದು ಬ್ಲಾಗೀಗ ಯಾವ ರೂಪದಲ್ಲಿ ಬಿತ್ತರವಾಗುತ್ತಿದೆಯೋ ಅಲ್ಲಿತಂಕ ಅವರದ್ದೇ ಬಾಯ್ವಾಡ। ಕಂಪ್ಯೂಟರ್ ಮುಂದೆ ಕುಳಿತಿದ್ದ ನಾನು ಥೇಟ್ ಕಂಪ್ಯೂಟರ್ ಥರಾನೆ ಅವರು ಹೇಳಿದಂತೆಯೇ ಗುಂಡಿಗಳನ್ನು ಅದುಮುತ್ತಾ, ಕೀಲಿಗಳನ್ನು ಕುಟ್ಟುತ್ತಾ ನನ್ನ ಬ್ಲಾಗ್ ಕಟ್ಟಿ ಒಡ್ಡೋಲಗ ಮಾಡಿದ್ದೆ. ಬಳಿಕ ಬರಹಕ್ಕೆ, ಪ್ಲಾನೆಟ್ ಕನ್ನಡಕ್ಕೆ ಲಿಂಕಿಸುವ ಕುರಿತೂ ಅವರೇ ಹೇಳಿಕೊಟ್ಟಿದ್ದರು. ಅದು ಬಿಡಿ, ಈ ಬ್ಲಾಗ್ ಭೇಟಿಗರ ಸಂಖ್ಯೆಯ ಲೆಕ್ಕ ಹಾಗುವ ಕುರಿತೂ ಅವರೇ ಹೇಳಿದ್ದು. ಇದೆಲ್ಲ ನಂಗೆ ಗೊತ್ತೇ ಇರಲಿಲ್ಲ. ಹಾಗೀಗ ನಾನು ಸಂಪೂರ್ಣ ಅವರ ಬ್ಲಾಗ್ರುಣದಲ್ಲೇ ಇರುವುದು ಅಂತ ಯಾವ ಮುಲಾಜೂ ಇಲ್ಲದೆ ಹೇಳಿಕೊಳ್ಳುವೆ.

ಏನು ಬರೆಯಲೀ ಎಂಬ ಸಮಸ್ಯೆ ನನ್ನನ್ನು ಕಾಡುವುದಿಲ್ಲವಾದರೂ, ಪಿರ್ಕಿಪಿರ್ಕಿ ಬರೆಯಬೇಕೆಂಬುದೇ ಆಸೆ। ಮೊನ್ನೆ ಮಾರ್ಚಿ ತಿಂಗಳಲ್ಲಿ ನಡೆದ ಕನ್ನಡ ಬ್ಲಾಗಿರ ಪ್ರಥಮ ಸಮ್ಮೇಳನ ಚೆನ್ನಾಗಾಯ್ತಂತೆ ಎಂಬುದಾಗಿ, ಸಮ್ಮೇಳನಕ್ಕೆ ಹೋಗದೆ ಇಲ್ಲೇ ಕುಳಿತು ಬರೆದಿದ್ದೆನಲ್ಲಾ, ಅದನ್ನು ದಟ್ಸ್ ಕನ್ನಡದವರು ಲಿಂಕಿಸಿದ್ದರು. ಆವಾಗ ಶಾನಿಯ ಡೆಸ್ಕಿಗೆ ತುಂಬ ವೀಕ್ಷಕರು ಬಂದಿದ್ದರು. ಹಿಟ್ಟುಗಳ ಸಂಖ್ಯೆ ನಂಗೇ ಅಚ್ಚರಿ ಅನ್ನೋ ರೀತಿ ಏರಿತ್ತು. ಆ ಬಳಿಕ ಕೆಂಡಸಂಪಿಗೆಯ ದಿನದ ಬ್ಲಾಗಂಗಳದಲ್ಲಿ ಪರಿಚಯಿಸುತ್ತಾ ಕಥೆ, ಕವನ ಎಲ್ಲಾ ಬರೆಯುತ್ತೇನೆಂದು ಆರೋಪಿಸಿದ್ದರು. ಆದಾದ ಬಳಿಕ ಹಿಟ್ಟಿಗರ ಸಂಖ್ಯೆಯಲ್ಲಿ ಮತ್ತೂ ಹೆಚ್ಚಳವಾಯಿತು. ಅಂದ ಹಾಗೆ ಅದೊಮ್ಮೆ ಹಿರಿಯ ಮಿತ್ರರೊಬ್ಬರು ಹಿಟ್ ಶಬ್ದ ಬಳಸಬೇಡ, ಅದು ಸೂಕ್ತಪದ ಅಲ್ಲ ಅಂತ ಬಯ್ದಿದ್ದರು. ಮತ್ತೇ...? ಅಂತ ತಿರುಗಿ ಪ್ರಶ್ನಿಸಿದ್ದಕ್ಕೆ, ವೀಕ್ಷಕರು ಅಂತ ಹೇಳಬಹುದು ಎಂಬ ಸಲಹೆ ಕೊಟ್ಟಿದ್ದಾರೆ. ಆದರೆ, ಬ್ಲಾಗ್ ಲೋಕದಲ್ಲಿ ಹರಿದಾಡುವ ಶಬ್ದಗಳಲ್ಲಿ 'ಹಿಟ್‌' ಎಂಬ ಶಬ್ದವೇ ಹಿಟ್ ಆಗಿರುವ ಕಾರಣ ಸದ್ಯ ನಾನೂ ಇಲ್ಲಿ ಅದನ್ನೇ ಬಳಸುತ್ತಿದ್ದೇನೆ.

ನಂಗೊತ್ತು ನನ್ನ ಬ್ಲಾಗ್ ಅಂಥಾ ಚೆಂದದ್ದೇನೂ ಅಲ್ಲ। ತುಂಬ ಕೊಚ್ಚಿಕೊಳ್ಳುವಂತೆಯೂ ಇಲ್ಲ. ಆದರೂ 'ಬ್ಲಾಗ್ತಾಯಿಗೆ, ಬ್ಲಾಗ್ಮುದ್ದು' ತಾನೆ. ಅದಿರಲಿ, ಇದೀಗ ನಂಗೂ ಬ್ಲಾಗೆಳೆಯರು, ಬ್ಲಾಗೆಳೆತಿಯರು ಇದ್ದಾರೆ ಎಂಬುದು ಖುಷಿ, ಖುಷಿ. ಮತ್ತೆ ಸಹಸ್ರಕ್ಕೂ ಮಿಕ್ಕು ಭೇಟಿಗರೂ ಬಂದು ಹೋಗಿರುವುದೂ ಮತ್ತೂ ಖುಷ್! ಇದೆಲ್ಲದರ ಕ್ರೆಡಿಟ್ಟೂ... ನನ್ನ ಬ್ಲಾಗುರುವಿಗೆ.

ಕೆಲವು ಸಹಬ್ಲಾಗಿಗರು ಅವರ ಪಟ್ಟಿಯಲ್ಲಿ ನನ್ನ ಬ್ಲಾಗನ್ನು ಲಿಂಕಿಸಿಕೊಂಡಿದ್ದಾರೆ. ಮತ್ತೆ ಕೆಲವರು ಕಮೆಂಟಿಸುತ್ತಾ, ಮೇಲ್ ಮಾಡುತ್ತಾ ಪ್ರೋತ್ಸಾಹಿಸಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವೂ ನಂಗೊಂದು ಬ್ಲಾಖುಷಿ ತಂದಿಟ್ಟಿದೆ. ಬಂದ, ಬಂದು ಹೋದ, ಮತ್ತೆ ಬರುತ್ತಿರುವ, ಮತ್ತು ಇನ್ನು ಬರಲಿರುವ ಎಲ್ಲರಿಗೂ ನಮೋಃ ನಮಃ

5 ಕಾಮೆಂಟ್‌ಗಳು:

  1. ಅವಮಾನ ನಷ್ಟ ಕ್ಲೇಮು ಮಾಡಲು ಎಲ್ಲಿ ಅವಕಾಶ ಸಿಗುತ್ತೆ ಅಂತ ಕಾಯ್ತಾ ಕೂತಿರೋವಾಗ ನಿಮ್ಮ ಈ ಪೋಸ್ಟ್ ಸಿಕ್ಕಿತು.

    ನೀವು ಹೀಗೆಲ್ಲಾ ಸುಖಾಸುಮ್ಮನೆ ನಮಗೆ ಕ್ರೆಡಿಟ್ಟು ಕಾರ್ಡು ಕೊಟ್ಟು ಕಳುಹಿಸುವುದು ನೋಡುತ್ತಿದ್ದರೆ, ಚೆನ್ನಾಗಿಯೇ ನಿದ್ದೆ ಮಾಡುತ್ತಿರುವ ನಮ್ಮ ನಿದ್ದೆಗೆಡಿಸಲು ಈ ಕ್ರೆಡಿಟ್ಟುಕಾರ್ಡಿನ ಸಾಲವನ್ನೇ ಬಳಸುತ್ತೀರೆಂಬುದು ಪತ್ತೆಯಾಗಿದೆ.

    ಹೀಗಾಗಿ ಖಂಡಿತಾ ನಮ್ಮ ಕ್ರೆಡಿಟ್ಟುಕಾರ್ಡು ಸಾಲ ತೀರಿಸುವ ನಿಟ್ಟಿನಲ್ಲಿ ನಮಗೆ ಈ ಅವಮಾನ ನಷ್ಟ ಮೊಕದ್ದಮೆ ಪೂರಕವಾಗುತ್ತದೆ. ಎಷ್ಟು ಬೇಕಾದರೂ ಅವಮಾನ ನಷ್ಟ ಮಾಡಿಕೊಳ್ಳಲು ಸಿದ್ಧ. ಆದರೆ ಕ್ರೆಡಿಟ್ ಕಾರ್ಡು ಸಾಲ ಮಾತ್ರ ತೀರಲೇ ಬೇಕು...

    ಪ್ರತ್ಯುತ್ತರಅಳಿಸಿ
  2. ಹೋಗೀ ಹೋಗೀ ಆ ಅನ್ವೇಷಿಗಳ ಕಡೆಯಿಂದ ಕಲ್ತುಕೊಂಡಿರೇನ್ರಿ?
    ಅಂದ ಮ್ಯಾಲ, ನೀವು ಎಷ್ಟು ಖರೇ ಬರೀತೀರಿ ತಿಳಧಂಗಾತು.
    (ನನಗೂ ಅವರೇ ಗುರುಗಳು).

    ಪ್ರತ್ಯುತ್ತರಅಳಿಸಿ
  3. 1000 ಹಿಟ್ಟು ತಿಂದಿದ್ದಕ್ಕೆ ಅಭಿನಂದನೆಗಳು ಶಾನಿಯವರೇ. ನಾನೂ ದಟ್ಸ್ ಕನ್ನಡದಿಂದ ನಿಮ್ಮ ಬ್ಲಾಗು ಹುಡುಕಿದವಳೇ! ಆದರೆ ನಿಮ್ಮ ಗುರುಗಳು ಅನ್ವೇಷಿಗಳು ಅಂತ ಇವತ್ತೇ ಗೊತ್ತಾಗಿದ್ದು.

    ನನಗೂ ಬ್ಲಾಗಿಗರ ಪರಿಚಯವಾದದ್ದು ಬೊ-ರ ದಿಂದಲೇ. ಆದರೆ ಗುರುಗಳು ಮಾತ್ರ 3ಶ್ರೀಗಳು :)

    ಪ್ರತ್ಯುತ್ತರಅಳಿಸಿ
  4. I too reitrate the sense HIT is a wrong word for those who play on internt and blogs. Its PAGE VIEWS./DYNAMIC USER..

    ಪ್ರತ್ಯುತ್ತರಅಳಿಸಿ