ಡೆಂಟಿಸ್ಟ್ ಬಳಿ ಹೋಗಬೇಕು ಎನ್ನುತ್ತಾ ಒಂದು ಗಂಟೆ ಪರ್ಮಿಷನ್ ಕೇಳ್ತಿದ್ದೆ. ಅದಕ್ಯಾಕೆ ಡೆಂಟಿಸ್ಟ್ ಬಳಿ ಹೋಗ್ತಿಯಾ, ಹೇಗಿದ್ದ್ರೂ ಜಗಳಗಂಟಿ, ಯಾರ ಬಳಿಯಾದರೂ ಚೆನ್ನಾಗಿ ಜಗಳಮಾಡಿ ಕಪಾಳಕ್ಕೆ ಬಿಗಿಸ್ಕೊಂಡು ಹಲ್ಲುದುರಿಸ್ಕೋ ಅಂತ ಸಲಹೆ ಕೊಟ್ಟರು ನನ್ನ ಸಹೋದ್ಯೋಗಿ ಮಿತ್ರ. ಅವರ ಸಲಹೆ ಚೆನ್ನಾಗೇ ಇತ್ತಾದರೂ, ಹಲ್ಲೂ, ದವಡೆಯೂ ನನ್ನದಾದ ಕಾರಣ ನೋವನ್ನು(ಹಲ್ಲು) ಒಳಗಿರಿಸಿಕೊಂಡು, ನಗುವನ್ನು ಮಾತ್ರ ಹೊರಸೂಸಿದೆ.
ಎತ್ತ ಕಡೆಯಿಂದ ಎಣಿಸಿದರೂ ನನ್ನ ಬಾಯೊಳಗೆ 32 ಹಲ್ಲುಗಳು ಲೆಕ್ಕಕ್ಕೇ ಸಿಗುವುದಿಲ್ಲ. ಹೀಗಿರುವಾಗ ಇರೋ ಹಲ್ಲುಗಳನ್ನು ಉದುರಿಸಿಕೊಳ್ಳೋ ಬದಲಿಗೆ, ಹೇಗಾದರೂ ಮಾಡಿ ಉಳಿಸಿಕೊಳ್ಳೋ ಅನಿವಾರ್ಯತೆಗೆ ಬಿದ್ದಿದ್ದೇನೆ. ಇಷ್ಟಕ್ಕೂ, ನಾನೊಮ್ಮೆ ಬಾಯ್ಬಿಟ್ಟರೆ ಸಾಕು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಲವು ಮಾಹಿತಿ ಸಿಕ್ಕೀತು. ಒಂಥರಾ ಡೆಂಟಲ್ ಎಕ್ಸಿಬಿಷನ್ ಇದ್ದಂತೆ. ಸಿಮೆಂಟ್ ಫಿಲ್ಲಿಂಗು, ಸಿಲ್ವರ್ ಫಿಲ್ಲಿಂಗು, ಕಾಂಪೊಸಿಟ್ ಫಿಲ್ಲಿಂಗ್, ರೂಟ್ ಕೆನಾಲ್, ಬ್ರಿಜ್ಜು, ಕ್ರೌನ್, ಕ್ಯಾಪ್ ಮುಂತಾದ ವೈವಿಧ್ಯತೆಯಿಂದ ಕೂಡಿದ್ದು ಏಕ ಬಾಯೊಳಗೆ ಅನೇಕ ವಿಷಯಗಳು ಪ್ರತಿಷ್ಠಾಪಿಸಲ್ಪಟ್ಟಿವೆ.
ಇಷ್ಟೆಲ್ಲ ಇದ್ದರೂ, ದಿನಕ್ಕೊಂದು ಕ್ಲೋವು ಜಗಿಯುತ್ತಿದ್ದರೂ, ನಿರಂತರ ಇಪ್ಪತ್ತನಾಲ್ಕುಗಂಟೆ ಕೀಟಾಣುಗಳ ಜತೆಗೆ ಹೋರಾಡುವ ಟೂಥ್ ಪೇಸ್ಟ್ ಬಳಸುತ್ತಿದ್ದರೂ ನಾನು ದಂತಕ್ಷಯದಿಂದ ಸಂಪೂರ್ಣ ಮುಕ್ತಳಾಗಲಿಲ್ಲ!
ನನಗೆ ತಿಳುವಳಿಕೆ ಮೂಡಿದಂದಿನಿಂದ ಈ ಹಲ್ಲುಗಳು ನೀಡಿದಷ್ಟು ತೊಂದರೆ ಇನ್ಯಾರೂ ಕೊಟ್ಟಿರಲಿಕ್ಕಿಲ್ಲ. ತುಂಬ ಚಿಕ್ಕವಳಿದ್ದಾಗ, ಅಂಗಿಯ ಕಿಸೆಯಲ್ಲಿದ್ದ ಪುಳಿಂಕಟೆ(ಹುರಿದ ಹುಣಸೆ ಬೀಜ)ಯನ್ನು ಬಲಹಾಕಿ ಜಗಿದು ಇಬ್ಭಾಗವಾಗಿಸಲು ಯತ್ನಿಸಿದ್ದೆ. ಪುಳಿಂಕಟೆ ಹುಡಿಯಾಗಲಿಲ್ಲ, ಬದಲಿಗೆ ಅಲ್ಲಾಡುತ್ತಿದ್ದ ಹಲ್ಲು ಕಿತ್ತು ಕೈಗೆ ಬಂದಿತ್ತು. ಹಾಲುಹಲ್ಲುಗಳೆಲ್ಲ ಉದುರಿದಾಗ ನಾವೆಲ್ಲ ನಮ್ಮಮ್ಮನ ಡೈರೆಕ್ಷನ್‌ನಂತೆ, ಉದುರಿದ ಹಲ್ಲಿಗೆ ಸೆಗಣಿ ಮೆತ್ತಿ, 'ಅಜ್ಜಿಜ್ಜ್ಯೇ.... ನನ್ನ ಹಳೆ ಹಲ್ಲು ತಕೋ; ನಿನ್ನ ಹೊಸ ಹಲ್ಲುಕೊಡು' ಎಂದು ಕಾಣದ ಅಜ್ಜಿಯನ್ನು ರಿಕ್ವೆಸ್ಟ್ ಮಾಡುತ್ತಾ, ಕಿತ್ತ ಹಲ್ಲುಗಳನ್ನು ಕಲ್ಲಿನಡಿಗೋ ಅಥವಾ ಮನೆಯ ಮಾಡಿಗೋ ಎಸೆಯುತ್ತಿದ್ದೆವು. ನಮ್ಮ ಈ ವಿನಂತಿಯನ್ನು ಮನ್ನಿಸಿದ ಮಾಯಗಾತಿ ಅಜ್ಜಿಯೇ ನಮಗೆ ಹೊಸ ಹಲ್ಲುಗಳನ್ನು ದಯಪಾಲಿಸುತ್ತಾಳೆ ಎಂದು ನಂಬಿದ್ದೆವು ಕೂಡಾ.
ಆಮೇಲೆ ನಾನು ದುಡಿಯಲು ಆರಂಭಿಸಿದ ಬಳಿಕ ನನ್ನ ದುಡಿಮೆಯಲ್ಲಿ ಬಾಯಿಗೆ(ಹಲ್ಲಿಗೆ) ದೊಡ್ಡ ಮೊತ್ತವನ್ನೇ ಹಾಕಿದ್ದೇನೆ. ಡೆಂಟಿಸ್ಟ್ ಬಳಿಗೆ ತೆರಳಿ ಆ..... ಎಂಬುದಾಗಿ ಬಾಯ್ದೆರೆದು ಗಂಟೆಗಟ್ಟಲೆ ಕುಳಿತು, ಮರುದಿನ ಈ... ಎನ್ನಾಲಾಗದೆ ಒದ್ದಾಡಿದ್ದು ಉಂಟು. ಕಿರುಕುಳ ಕೊಡುವ ಒಂದು ಹಲ್ಲಿಗೆ ಸೇವೆ ನೀಡಿ ನೆಮ್ಮದಿಯ ಉಸಿರು ಬಿಡಬೇಕೆನ್ನುವಾಗಲೇ ಇನ್ನೊಂದು ಹಲ್ಲು ತನ್ನ ಇರವನ್ನು ಹೇಳಲಾರಂಭಿಸುತ್ತದೆ.
ಸುಮಾರು ಐದಾರು ವರ್ಷದ ಹಿಂದಿನ ಮಾತು. ಒಂದು ಹಲ್ಲಂತೂ ಭಾರೀ ತೊಂದರೆ ನೀಡುತ್ತಿತ್ತು. ಪದೇಪದೇ ಫಿಲ್ ಮಾಡ್ಸಿದ್ದರೂ, ಹೊರಟುಹೋಗುತ್ತಿತ್ತು. ಲಾಸ್ಟ್ ಹಲ್ಲಿಗೆ ಫಿಲ್ಲಿಂಗ್ ನಿಲ್ಲುವುದಿಲ್ಲ ಎಂದು ವೈದ್ಯರು ಹೇಳಿದಂತೆ ಮತ್ತೆಮತ್ತೆ ಎದ್ದು ಬರುತ್ತಿರುವ ಫಿಲ್ಲಿಂಗ್‌ನಿಂದ ಶಾಶ್ವತ ಮುಕ್ತಿಹೊಂದಲೆಂಬಂತೆ ಆ ಹಲ್ಲನ್ನು ಮುಗಿಸಿಯೇ ಬಿಡೋಣವೆಂದು ನಿರ್ಧರಿಸಿ ಕಣ್ಣಿಗೆ ಕಂಡ ಡೆಂಟಲ್ ಕ್ಲಿನಿಕ್ ಒಂದರೊಳಗೆ ನುಗ್ಗಿದೆ. ಕ್ಲಿನಿಕ್ ಹೆಸರು, ನನ್ನ ಫೇವರಿಟ್ ದೇವರಾದ ತಿರುಪತಿ ತಿಮ್ಮಪ್ಪನ ಇನ್ನೊಂದು ಹೆಸರು.
ವೈದ್ಯ ಮಹಾಶಯರು ಖಾಲಿ ಕುಳಿತಿದ್ದರು. ನನ್ನನ್ನು ಕಂಡವರೇ ದಡಬಡಿಸಿ ಎದ್ದು ಬಂದು ದಂತ ಛೇರೊಳಗೆ ಹುದುಗಿಸಿ, ಬಿಬ್ ಕಟ್ಟಿ ಬಾಯೊಳಗೆ ಲೈಟ್ ಬೀರುವಂತೆ ಅಡ್ಜಸ್ಟ್ ಮಾಡಿ ಆ... ಅನ್ನಲು ಹೇಳಿದರು, ನಾನು ಆ ಅಂದಿದ್ದೇ, ಅವರ ಬಳಿಯಿರುವ ಸಣ್ಣಸಣ್ಣ ಚಿಮುಟಗಳಂತಹ ಉಪಕರಣಗಳಿಂದ ಎಲ್ಲ ಹಲ್ಲುಗಳನ್ನು ಕುಟ್ಟಿ, ಒಕ್ಕಿ ನೋಡಿ ಎಕ್ಸೈಟ್ ಆದವರಂತೆ ಕ್ಯಾವಿಟಿ ಅಂದರು. ಅದಿರಲಿ, ನಂಗೆ ಕಡೆ ಹಲ್ಲು ತೆಗಿಸಬೇಕಿದೆ ಎಂದೆ. ಆದರೆ, ವೈದ್ಯರು ನನ್ನ ಕಡೆ ಹಲ್ಲಿನ ಮಾತನ್ನು ಕಡೆಗಣಿಸಿ, ನಂಗೆ ಅದುವರೆಗೆ ತಿಳಿದಿರದಿದ್ದ ಕಾಂಪೋಸಿಟ್ ಫಿಲ್ಲಿಂಗನ್ನು ವರ್ಣಿಸಿಯೇ ವರ್ಣಿಸಿದರು. ನಾಲ್ಕೈದು ಸಂದುಗೊಂದುಗಳಲ್ಲಿ ಕ್ಯಾವಿಟಿ ಇದ್ದುದರಿಂದ ಇದನ್ನೆಲ್ಲ ಫಿಲ್ ಮಾಡೋಣ. ಫಿಲ್ಲಿಂಗ್ ಗೊತ್ತೇ ಆಗೋದಿಲ್ಲ ಅಂತ ಬ್ರೇನ್‌ವಾಷ್ ಮಾಡಿದರು. ಒಂದು ಹಲ್ಲಿಗೆ ರೂ.350/- ದರ ನಿಗದಿಯೂ ಆಯಿತು.
ಸರಿ. ಆದ್ರೆ ಫಸ್ಟ್ ಕಡೇ ಹಲ್ಲು ತೆಗೀರಿ ಅಂತ ನಾನು; ಅದು ಕೊನೆಗೆ ತೆಗೆಯೋಣ, ಫಸ್ಟ್ ಫಿಲ್ಲಿಂಗ್ ಮಾಡೋಣ ಅಂತ ಅವರು. ಹಲ್ಲಿನದ್ದೇ ಬಣ್ಣದ ಕಾಂಪೋಸಿಟ್ಟನ್ನು ಹಲ್ಲುಗಳಿಗೆಲ್ಲ ಮೆತ್ತಿ ನನ್ನ ದವಡೆ ಹಲ್ಲುಗಳು ಕೊಂಚ ಉಬ್ಬಿ ಬಸಿರು ಹೊತ್ತು ನಿಂತಂತೆ ಕಾಣಲಾರಂಭಿಸಿತು. ಪ್ರತೀ ಸಿಟ್ಟಿಂಗಲ್ಲೂ ನಾನು ಕಡೇ ಹಲ್ಲೂ... ಅಂತ ರಾಗ ತೆಗೆದರೆ, ಆಯ್ತು ಮೇಡಂ, ಎಲ್ಲ ಫಿಲ್ಲಿಂಗ್ ಆಗಲಿ, ಕೊನೆಗೆ ತೆಗೆಯೋಣ, ನಿಮ್ಗೆ ಪೇಯ್ನ್ ಇದ್ದರೆ ಕಷ್ಟ ಅಂತ ಸಮಜಾಯಿಷಿ ನೀಡಿದರು. ಕೊನೆಗೂ ಇಷ್ಟು ಹಲ್ಲುಗಳಿಗೆ ಕಾಂಪೊಸಿಟ್ ಮೆತ್ತಿಸಿಕೊಂಡಿದ್ದಕ್ಕೆ, ಅದೊಂದು ಹಲ್ಲನ್ನು ಫ್ರೀಯಾಗೆ ಕಿತ್ತರು. (ಫೀಸ್ ಚುಕ್ತಾ ಮಾಡಿದಾಗ ತಿರುಪತಿಗೆ ಹೋಗಿ ಬಂದ ಅನುಭವವಾಯ್ತು) ಇದು ಲೈಫ್ ಟೈಮ್ ಗ್ಯಾರಂಟಿ. ಇನ್ನು ನೀವಿರುವ ತನಕ ಹಲ್ಲಿನ ಸಮಸ್ಯೆ ಇರದು ಎಂಬ ಭರವಸೆಯೊಂದಿಗೆ ಬೀಳ್ಕೋಟ್ಟರು.
ನನಗಿನ್ನು ಹಲ್ಲು ನೋವಿನ ಬಾಧೆ ಇಲ್ಲವೆಂದು ಹಲ್ಲುಕಿತ್ತ ನೋವನ್ನೂ ಮರೆತು ಮನೆಗೆ ತೆರಳಿದೆ. ಆದರೆ ಎರಡ್ಮೂರು ದಿನ ಕಳೆದರೂ ಹಲ್ಲು ಕಿತ್ತ ನೋವು ಮುಗಿಯಲೇ ಇಲ್ಲ. ಪುನಃ ವೈದ್ಯರನ್ನು ಕಂಡರೂ, "ಒಂದೆರಡು ದಿನ ಪೇಯ್ನ್ ಇರುತ್ತೆ. ಫಸ್ ಆಗೋದು ಕಾಮನ್" ಅಂದು ಸಾಗಹಾಕಿದರು. ನಾಲ್ಕೈದು ದಿನದ ಬಳಿಕ ನಾನೇ ಮಾಡಿದ ಕ್ಯಾಬೇಜ್ ಪಲ್ಯದೊಂದಿಗೆ ಊಟಮಾಡುತ್ತಿದ್ದೆ. ಎಲುಬಿನ ತುಣುಕೊಂದು ಸಿಕ್ಕಂತಾಯಿತು. ಅರೆ, ಕ್ಯಾಬೇಜಿನಲ್ಲಿ ಎಲುಬಾಂತ ಪರೀಕ್ಷಿಸಿದರೆ, ಹಲ್ಲಿನ ತುಂಡು! ಕಿತ್ತ ಹಲ್ಲಿನ ಪಳಿಯುಳಿಕೆಯದು.
ಅದು ಹ್ಯಾಗೆ ಫಿಲ್ಲಿಂಗ್ ಮಾಡಿದ್ದರೋ, ಒಂದೇ ವರ್ಷಕ್ಕೆ ಅಷ್ಟೂ ಹಲ್ಲುಗಳಲ್ಲಿ ಯಾವುದೋ ಒಂದು ನೋಯಲಾರಂಭಿಸಿತು. ಮುಖವಿಡೀ ಸಿಡಿಯುತ್ತದೆಯೇ ವಿನಹ ಯಾವ ಹಲ್ಲೆಂದು ಗೊತ್ತಾಗುತ್ತಿಲ್ಲ. ಇನ್ನೊಂದು ದಂತವೈದ್ಯರ ಬಳಿ ಹೋಗಿ ಆಂ....... ಅಂದೆ. ಎಕ್ಸರೇ ಮಾಡಿದ ಬಳಿಕ ಕಾಂಪೊಸಿಟ್ ಫಿಲ್ಲಿಂಗ್ ಒಳಗೆ ಫಸ್ ಆಗಿದೆ, 'ಅವನೆಂಥಾ ವೈದ್ಯ' ಅಂತ ಮೊದಲಿನ ವೈದ್ಯರಿಗೆ ಬೈಯ್ದರು. ಆಂ... ಎಂದು ಬಿಟ್ಟಿದ್ದ ಬಾಯಿ ಅಲ್ಲಾಡಿಸಲಾಗದ ಪರಿಸ್ಥಿತಿಯದ್ದ ಕಾರಣ ಪ್ರತಿಕ್ರಿಯಿಸಲು ನನಗಾಗಲಿಲ್ಲ. ಅದೇ ಹಲ್ಲನ್ನು ಓಪನ್ ಮಾಡಿ, ರೂಟ್ ಕೆನಾಲ್ ಮಾಡಿ ಕ್ರೌನ್ ತೊಡಿಸಿ ಚಂದ ಮಾಡಿ ಕಳುಹಿಸಿದರು.
ಈಗ ಇನ್ಯಾವುದೊ ಒಂದು ಕಾಂಪೊಸಿಟ್ ನೋಯಲಾರಂಭಿಸಿದೆ. ಅಂತೂ ಈ 'ಹುಳುಕಿ'ನಿಂದ ಸಂಪೂರ್ಣ ಮುಕ್ತಿ ಎಂಬುದು ಇಲ್ಲ ಅನಿಸುತ್ತೆ!!!
ನಿಮ್ಮ ಬರಹ ಓದಿದ ಮೇಲೆ ನಾನೂ ಹಲ್ಲು ನೋವಿನಿಂದ ಒದ್ದಾಡಿದ್ದು ನೆನಪಿಗೆ ಬಂತು. ಹಲ್ಲು ನೋವು ನಮ್ಮ ಶತ್ರುಗಳಿಗೆ ಮಾತ್ರ ಬರಬೇಕು ಕಣ್ರೀ :D
ಪ್ರತ್ಯುತ್ತರಅಳಿಸಿರೂಟ್ ಕೆನಾಲ್ ಅಂದ್ರೆ " ಒಳಗೆ ಹೆಗ್ಗಣ ಬಿಟ್ಟು, ಮೇಲೆ ಗೂಡು ಮುಚ್ಚಿದ ಹಾಗಂತೆ ಕಣ್ರೀ...." ನಾನೂ RCT ಮಾಡಿಸಿಕೊಂಡು ನೋವಿನಿಂದ ಮುಕ್ತಳಾಗಿದ್ದೇನೆ.
Sorry ಶಾನಿ,
ಪ್ರತ್ಯುತ್ತರಅಳಿಸಿನೀವು ಹಲ್ಲುನೋವು ಅಂತ ಪರದಾಡ್ತಾ ಇರೋದನ್ನ ಓದ್ತಾ ಓದ್ತಾ ಒಳ್ಳೇ ನಗು ಬರತಾ ಇತ್ತು.
ನೀವೇ ಪುಣ್ಯವಂತರು ನೀಲಗಿರಿಯವರೇ. RCT ಮಾಡ್ಸಿ ನೋವಿನಿಂದ ಮುಕ್ತರಾಗಿದ್ದೀರಿ. ನಂಗಿನ್ನೂ ಸಂಪೂರ್ಣ ಮುಕ್ತಿ ಇಲ್ಲ(:
ಪ್ರತ್ಯುತ್ತರಅಳಿಸಿಛೆ, sorry ಯಾಕೆ ಸುನಾಥರೆ, ನೀವು ನಕ್ಕಿದ್ದು ಕಂಡು ನನ್ನ ನೋವೇ(ಹಲ್ಲು) ಮರೆತೆ!
ಪ್ರತ್ಯುತ್ತರಅಳಿಸಿಹಲ್ಲಿರೋದೆ ನೋವು ಬರೋಕೆ.. ಹಲ್ಕಟ್ ಡಾಕ್ಟರ್! ಅಯ್ಯೋ ಬೈಲಿಲ್ಲ(ಹಲ್ಲು ಕಟ್ಟುವ ಡಾಕ್ಟರ್ ) ಹತ್ರ ಹೋಗದೆ ಇರೋವ್ರೆ ಇಲ್ಲ ಅನ್ಸತ್ತೆ ! ಇವಾಗಿನ ಟ್ರೆಂಡ್ ಏನು ಗೊತ್ತ? ಯಾವ್ದು ಹಲ್ಲಿಗೆ ಬರಿ ಫಿಲ್ಲಿಂಗ್ ಮಡೋಕೇ ಬರಲ್ಲ ಏನಿದ್ರು ರೂಟ್ ಕೆನಾಲ್ ಮಾಡಿಸಿಬಿಡಿ ಅಂತಾರೆ ಕಣ್ರೀ! ಲೇಖನ ತುಂಬ ಚನ್ನಾಗಿದೆ.. ಹಲ್ಲು ನೋವು ಬಂದಾಗೆಲ್ಲ ಈ ಲೇಖನ ಓದ್ತೀನಿ! ಈಗ ನೋವಿತ್ತ ಕೇಳಿದ್ರ?!.. (brush twice a day to make ur paste maker richer!..
ಪ್ರತ್ಯುತ್ತರಅಳಿಸಿಲೋ ತಮ್ಮಾ ಈ ಆರ್ಟಿಕಲ್ ನೋಡೋ. ಹೇಗಿದೆ ಅಂತಾ ಹೇಳೋ ಅಂತಾ ನೀವು ಕೇಳಿದ್ರಿ. ಓದಿದ ಮೇಲೆ ತುಂಬಾ ಚೆನ್ನಾಗಿದೆ ಅಂತಾ ಹೇಳಿದೆ. ಲೇಖನದ ಕೊನೆಗೆ ಪುಟ್ಟದಾಗಿ 'ಶಾನಿ' ಅಂತಾ ಇತ್ತು. ಯಾರ್ರೀ ಇದು ಶಾನಿ ಅಂದಾಗ, ಇದ್ದಾಳೆ ಒಬ್ಬಳು ದಡ್ಡಿ ಅಂತಾ ಸುಮ್ಮನೆ ನೀವು ನಕ್ಕಿದ್ರಿ... ಇದು ಎರಡು ವರ್ಷದ ಹಿಂದಿನ ಮಾತು.
ಪ್ರತ್ಯುತ್ತರಅಳಿಸಿಆಗ ಸಿಗುತ್ತಿದ್ದ 'ಶಾನಿ' ಮತ್ತೆ ಸಿಗಲೇ ಇಲ್ಲ. ಇಂದು ಅಚಾನಕ್ ಬ್ಲಾಗಾಯಣದಲ್ಲಿ 'ಶಾನಿ' ನೋಡಿ ತುಂಬಾ ಖುಷಿ ಆಯ್ತು. ಈಗಷ್ಟೇ ನಿಮ್ಮ ಬ್ಲಾಗ್ ಪ್ರಪಂಚದೊಳಗೆ ಬಂದಿದೀನಿ. ಕಮೆಂಟ್ ಆಮೇಲೆ....
ತಿಳಿ ಹಾಸ್ಯ ಮಿಶ್ರಿತ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಚೆನ್ನಾಗಿ ಬರಿತೀರ,, Keep it up...
ಪ್ರತ್ಯುತ್ತರಅಳಿಸಿತಿಳಿ ಹಾಸ್ಯ ಮಿಶ್ರಿತ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಚೆನ್ನಾಗಿ ಬರಿತೀರ,, keep it up
ಪ್ರತ್ಯುತ್ತರಅಳಿಸಿತಿಳಿ ಹಾಸ್ಯ ಮಿಶ್ರಿತ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಚೆನ್ನಾಗಿ ಬರಿತೀರ,,
ಪ್ರತ್ಯುತ್ತರಅಳಿಸಿThanks Kanthi,
ಪ್ರತ್ಯುತ್ತರಅಳಿಸಿNeevu nakkare ade nange udugore!!
Nanna blagmanege banni