ಅಲ್ಲಾ, ಈ ಥರಾನೂ ನೀವು ಒಬ್ಬ ಫೂಲನ್ನು ಫೂಲ್ ಮಾಡೋದಾ? ನನ್ನ ದಿನವಾದ ಇಂದು ನಂಗೆ ಶುಭಾಶಯ ಕೋರ್ತೀರಾಂತ ಬೆಳಬೆಳಗ್ಗೇನೇ ಬೇಗನೆದ್ದು ಕೂತಿದ್ದೆ। ನಾಟ್ ಈವನ್ ಒನ್ ಎಸ್ಸೆಮ್ಮೆಸ್. ಹೋಗಲಿ ಒಂದು ಮೇಲ್? ಮೇಲೂ ಇಲ್ಲ; ಫೀಮೇಲೂ ಇಲ್ಲ! ನೀವೂ ಫೂಲ್ ಮಾಡಿದ್ರಿ ಬಿಡ್ರಿ. ಆದರೆ, ನೀವೆಂದಿಗೂ ಮೂರ್ಖರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.
ನಂಬುಗೆ, ಸಂಬಂಧ, ಹಣಕಾಸು ಮುಂತಾದ ಮಿಕ್ಕೆಲ್ಲ ಹಾಳೂಮೂಳೂ ವಿಚಾರದಲ್ಲಿ ಇತರರು ನನ್ನನ್ನು ಮೂರ್ಖಳನ್ನಾಗಿಸಿದ್ದರೆ, ಹುಟ್ಟಿದ ದಿನಾಂಕದ ಈ ವಿಚಾರದಲ್ಲಿ ನನ್ನ ಅಮ್ಮನೇ ನನ್ನನ್ನು ಯಾಮಾರಿಸಲು ಯತ್ನಿಸುತ್ತಾರೆ।
ಏಪ್ರಿಲ್ ಒಂದನೇ ತಾರೀಕೇ ನಾನು ಹುಟ್ಟಿದ ದಿನ ಅಂತ ನನ್ನ ಸ್ವಭಾವ, ವ್ಯಕ್ತಿತ್ವ ಹೇಳುತ್ತೆ। ಆದರೆ ನಿರಕ್ಷರಿಯಾದ ನನ್ನಮ್ಮ, ಬರೆದಿಟ್ಟ ದಿನಾಂಕದ್ದೋ; ಇಲ್ಲ ಜಾತಕದ್ದೋ ಪುರಾವೆಯನ್ನು ಒದಗಿಸಲಾಗದ ಕಾರಣ, ಅವರದ್ದೇ ಆದ ವಾದ ಮಂಡಿಸುತ್ತಾರೆ. ಅವರು ಹೇಳುವ ಪ್ರಕಾರ, ನಾನು ಜೋರು ಜಡಿಮಳೆ ಸುರಿಯೋ ದಿನ ಹುಟ್ಟಿದ್ದಂತೆ. ಕಾರ್ತಿಂಗಳ(ಕಾರ್ತೆಲ್) ಆ ದಿನ ಆಗಸಕ್ಕೇ ತೂತು ಬಿದ್ದಂತೆ, ದಿನ ಪೂರ್ತಿ ಧಿಸಿಲ್ಲನೆ ಮಳೆ ಸುರಿಯುತ್ತಲೇ ಇತ್ತಂತೆ. ಅಲ್ಲದೆ ಅಂದು ಕರ್ಕೂಟಿ(ಗಾಢ) ಕತ್ತಲೆ ಇತ್ತಂತೆ. ನನ್ನೂರಿನಲ್ಲಿ ಏಪ್ರಿಲ್ ತಿಂಗಳಲ್ಲಂತೂ ಈ ಪರಿ ಮಳೆ ಸುರಿಯಲು ಸಾಧ್ಯವೇ ಇಲ್ಲ. ಹಾಗಾಗಿ ನೀನು ಏಪ್ರಿಲ್‌ನಲ್ಲಿ ಹುಟ್ಟಿದ್ದಲ್ಲಂತ ಅವರ ವಾದ. ಹಾಗೂ ಹೀಗೂ ಆಗಸ್ಟ್ ತಿಂಗಳಿಗೆ ಅವರು ಇದನ್ನು ಥಳುಕು ಹಾಕುತ್ತಾರೆ.
ನನ್ನ ಅಸ್ತಿತ್ವದ ಬಹಳ ಸ್ಟ್ರಾಂಗ್ ಆದ ಪುರಾವೆಯಾಗಿರುವ ನನ್ನ ಎಸ್ಸೆಲ್ಸಿ ಸರ್ಟಿಫಿಕೇಟ್ ಹೇಳೋ ಮಾತೇ ಬೇರೆ। ಅದರ ಪ್ರಕಾರ ನಾನು ಹುಟ್ಟಿದ್ದು ಜೂನ್ ತಿಂಗಳಲ್ಲಿ. (ಈ ಮಧ್ಯೆ ರೇಶನ್ ಕಾರ್ಡ್ ಮತ್ತು ಶೇಷನ್ ಕಾರ್ಡ್‌ನಲ್ಲಿರುವ ಹುಟ್ಟಿದ ದಿನಾಂಕದ ವಿವರಗಳು ಇನ್ನೂ ಬೇರೆಬೇರೆ ಹೇಳುತ್ತೆ) ಆದರೆ, ಯಾರೇ- ಏನೇ ಹೇಳಲಿ, ನನ್ನ ನೇಚರೂ, ಫೀಚರೂ ಹೇಳುವಂತೆ ಅದು ಖಂಡಿತ ಏಪ್ರಿಲ್ ಫಸ್ಟೇ ಅಂತ ನಾನು ಗಟ್ಟಿ ಮಾಡಿಕೊಂಡಿದ್ದೇನೆ.
ಈ ದಿನವಂತೂ, ಹುಟ್ಟಾ ಮೂರ್ಖಳಾಗಿರುವ ಖಂಡಿತ ನಂದೇ, ಮತ್ತು ನೇರವಾಗೆ ನಂಗೆ ಸಂಬಂಧಿಸಿದ್ದು। ನಾನು ಮೂರ್ಖಳು ಅಂತ ಎಗ್ಗಿಲ್ಲದೆ ಒಪ್ಪಿಕೊಳ್ಳುವುದಕ್ಕೂ ನನ್ನ ಬಳಗದ ಕೆಲವರ ಆಕ್ಷೇಪ. ನೀನು ಹಾಗೆಲ್ಲ ಯಾಕೆ ಹೇಳ್ಕೋತಿಯಾ ಅಂತ ಸಿಡಿಮಿಡಿಗುಟ್ಟುತ್ತಾ ನನ್ನ ಸಂತೋಷಕ್ಕೇ ಅಡ್ಡಿ ಬರುತ್ತಾರವರುಗಳು. ಅವರಿಗೇನು ಗೊತ್ತು ಸದಾ ಮೂರ್ಖಳಾಗೇ ಇರೋದಲ್ಲಿರೋ ಸುಖ?
ಮೊದಮೊದಲೆಲ್ಲ ನಾನೂ ಈ ವಿಚಾರದಲ್ಲಿ ಒಂದು ನಮೂನೆಯ ಕನ್‌ಫ್ಯೂಶನ್‌ಗೆ ಬಿದ್ದಿದ್ದೆ। ಆದರೆ ಒಂದು ದಿನ ನಂಗೆ ಥಟ್ ಅಂತ ಜ್ಞಾನೋದಯವಾಯಿತು. ಆಗ ಬುದ್ಧನಷ್ಟೇ ವಯಸ್ಸಾಗಿತ್ತು. ಅದು ಮಧ್ಯರಾತ್ರಿಯಲ್ಲ. ನಟ್ಟ ನಡು ಹಗಲು. ಆದರೆ ನಾನು ಯಾವ ವೃಕ್ಷದಡಿಯೂ ಕುಳಿತಿರಲಿಲ್ಲ. ಬದಲಿಗೆ ಕೈಯಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಇತ್ತು. "ಈ ಮಧ್ಯೆ ನಡೆಯುವಾಗೆಲ್ಲ ನಾನು ಹೆಚ್ಚೆಚ್ಚು ಎಡವುತ್ತೇನೆ" ಎಂಬ ಪ್ರಶ್ನೆಯನ್ನು 'ಕೇಳಿ' ಅಂಕಣದಲ್ಲಿ ಯಾರೋ ಕೇಳಿದ್ದರು. ಅದಕ್ಕೆ ಉತ್ತರಿಸಿದ ರವಿಬೆಳಗೆರೆಯವರು "ಎಡವುದನ್ನೇ ಅಭ್ಯಾಸ ಮಾಡ್ಕೋ, ನಡೆಯೋದು ತಪ್ಪುತ್ತೆ" ಎಂಬ ಉತ್ತರ ಕೊಟ್ಟಿದ್ದರು.
ಇದನ್ನು ಓದುತ್ತಲೇ ಚಕ್ಕನೆ ನನ್ನ (ಇಲ್ಲದ)ಮೆದುಳೊಳಗೆ ಏನೋ ಸಂಚಾರವಾದಂತಾಗಿ, ಮಿಂಚು ಮೂಡಿತು। ಪದೇಪದೇ ಮೂರ್ಖಳಾದೆ, ಮೂರ್ಖಳಾದೆ ಅಂತ ಕೊರಗುವುದಕ್ಕಿಂತ ಪರ್ಮನೆಂಟ್ ಮೂರ್ಖಳೇ ಆಗಿ ಬಿಟ್ಟರೆ, ಮತ್ತೆ ಮತ್ತೆ ಯಾರು ಮೂರ್ಖಳಾಗಿಸಲು ಸಾಧ್ಯ? ಇದನ್ನೇ ಅಭ್ಯಾಸ ಮಾಡ್ಕೊಂಡಂದಿನಿಂದ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೂರ್ಖತನದೊಂದಿಗೆ ಸುಖ ಸಂತೋಷದಿಂದ ಬಾಳಿ ಬದುಕುತ್ತಿದ್ದೇನೆ.
ಈ ವರ್ಷವಂತೂ ನನ್ನ ಪಾಲಿಗೆ ಶುಭಾರಂಭವೇ। ಕರೆಕ್ಟಾಗಿ ಜನವರಿ ಒಂದರಂದು ನನ್ನ ಜಂಗಮವಾಣಿಯನ್ನು ಆಕ್ರಮಿಸಿಕೊಂಡಿದ್ದ ನಂಬರೊಂದು "ನೀನೊಂದು ಈಡಿಯೆಟ್, ಆದ್ರೆ ಸ್ವೀಟ್ ಈಡಿಯೆಟ್" ಅಂತ ಸ್ವೀಟಾದ ಎಸ್ಸೆಮ್ಮೆಸ್ಸೂ ಕಳಿಸಿತ್ತು. ಹೀಗೆ ಕಾಲಕಾಲಕ್ಕೆ ಸಾದ್ಯಂತವಾಗಿ ಸಂತಸದಿರುವಂತೆ, ನನಗೇ ತಿಳಿಯದಂತೆ ಘಟನೆಗಳು ಘಟಿಸಿಬಿಡುತ್ತವೆ. ಹಾಗಾಗೀ-
ಗಗನವೇ ಉರುಳಲಿ, ಭೂಮಿಯೇ ನಡುಗಲಿ, ಸುನಾಮಿ ಉಕ್ಕಲಿ, ಯಾರೇ ಸೊಕ್ಕಲಿ ಮೂರ್ಖಳಾಗದಿರಲಾರೇ.... ನಾನು ಮೂರ್ಖಳಾಗದಿರಲಾರೆ.....
ಲೇಖನ ಉತ್ತಮವಾಗಿದೆ.
ಪ್ರತ್ಯುತ್ತರಅಳಿಸಿನಾಗೇಂದ್ರ ತ್ರಾಸಿ.
ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಪ್ರತ್ಯುತ್ತರಅಳಿಸಿನಾಗೇಂದ್ರ ತ್ರಾಸಿ.
ತ್ರಾಸಿಯವರೇ....,
ಪ್ರತ್ಯುತ್ತರಅಳಿಸಿಲೇಖನ ಉತ್ತಮವಾಗಿದೆಯಾ ಇಲ್ಲ ಮೂರ್ಖತನ ಉತ್ತಮವಾಗಿದೆಯಾ ::))