ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರ ಹುಟ್ಟೂರಿನಿಂದ ಸ್ಫರ್ಧಿಸಲು ನನಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ್ದರು. ನಾನು ಚುನಾವಣೆಗೆ ಸ್ಫರ್ಧಿಸಬೇಕೆಂಬ ಇರಾದೆಯಿಂದ ಇದ್ದವಳೇ ಅಲ್ಲ. ಸದಾನಂದರ ಹುಟ್ಟೂರಿನಿಂದ ಹೆಚ್ಚೆಂದರೆ ಗ್ರಾಮಪಂಚಾಯತ್ ಚುನಾವಣೆಗೆ ಸ್ಥಾನ ಲಭಿಸೀತು. ಆದರೆ ನಂಗೆ ಆಹ್ವಾನ ದೊರೆತದ್ದು ವಿಧಾನ ಸಭೆಗೆ! ರಾಜ್ಯಪಾಲ ಹುದ್ದೆ ತೊರೆದು ಬಂದ ಎಸ್ಸೆಂ ಕೃಷ್ಣರಂತಹ ಘಟಾನುಘಟಿಗಳಿಗೇ ಟಿಕೆಟ್ ಸಿಗದಿದ್ದಾಗ ಸೀನಲ್ಲೇ ಇಲ್ಲದ ಶಾನಿಗೆ ಹೇಗೆ ಟಿಕೆಟ್ ಸಿಕ್ಕಿತು ಅಂತ ತಲೆಕೆರೆಯಬೇಡಿ. ಕಾಂಗ್ರೆಸ್ ನಂಗೆ ಟಿಕೆಟ್ ನೀಡಿದ್ದು, ನಂಗೆ ನಿನ್ನ ಬಿದ್ದ ಕನಸಿನ ಹೆಡ್‌ಲೈನ್!
ಹಗಲೆಲ್ಲ ಚುನಾವಣೆ ಸುದ್ದಿಗಳನ್ನೇ ಪೇಪರ್‌ನಲ್ಲಿ ಓದುವುದಕ್ಕೋ ಅಥವಾ ಊರಿಂದ ದೂರದಲ್ಲಿ ಕುಳಿತ ನಾವುಗಳೆಲ್ಲ ಚುನಾವಣೆ ಕುರಿತು ಡಿಸ್ಕಸ್ ಮಾಡುವುದಕ್ಕೋ, ಅಂತೂ ಇದು ಸುಪ್ತ ಮನಸ್ಸಿನಲ್ಲಿ ತಳ ಊರಿದೆ ಎಂಬುದಾಗಿ ನಂಗೆ 'ಸಿಕ್ಕಿದ' ಟಿಕೆಟ್‌ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದ್ದೆ. ಆದರೂ, ಕಾಂಗ್ರೆಸ್ ಯಾಕೆ ನಂಗೆ ಕರೆದು ಟಿಕೆಟ್ ಕೊಟ್ಟಿತು ಅಂತ ಕನಸಿನುದ್ದಕ್ಕೂ ಯೋಚಿಸಿದ್ದು, ಎಚ್ಚರವಾದ ಮೇಲೂ ಮುಂದುವರಿದಿತ್ತು.
ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕನಸು ಕಾಣಿರಿ; ದೊಡ್ಡ ದೊಡ್ಡ ಕನಸು ಕಾಣಿರಿ ಎಂಬ ಕರೆನೀಡಿದ್ದಕ್ಕೇ ಇರಬೇಕು. ನಂಗೆ ರಾತ್ರಿ ನಿದ್ರೆಯಲ್ಲಿ ದೊಡ್ಡದೊಡ್ಡ ಕನಸುಗಳೇ ಬೀಳುವುದು. ಬಿಲ್ ಕ್ಲಿಂಟನ್ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರಲ್ಲಾ? ಆಗ ಅವರು ನಮ್ಮ ಮನೆಗೆ ಬಂದಂತೆ, ನಮ್ಮ ಅಂಗೈಯಗಲದ ತೋಟವೆಲ್ಲ ಸುತ್ತಾಡಿದಂತೆ, ಕೆಳಗಿನ ತೋಟದಲ್ಲಿ ಎಳನೀರು ಕುಡಿದಮೇಲೆ, ಅಲ್ಲಿಂದ ಅತ್ತಲೇ ಕಾಲ್ನಡಿಗೆಯಲ್ಲಿ ಕೊಡಗಿಗೆ ತೆರಳಿದಂತೆ (ನಮ್ಮ ಮನೆಯಿಂದ ಒಂದು ದಿಕ್ಕಿಗೆ ನಡೆದರೆ ಕೊಡಗೂ, ಇನ್ನೊಂದು ದಿಕ್ಕಿಗೆ ನಡೆದರೆ ಕೇರಳವೂ ಸಿಗುತ್ತದೆ) ಕನಸು ಬಿದ್ದಿತ್ತು. ಇನ್ನೊಮ್ಮೆ ವಾಯಪೇಯಿಯವರು ಪ್ರಧಾನಿಯಾಗಿದ್ದಾಗ ಅವರು ನಮ್ಮ ಹಟ್ಟಿಯಲ್ಲಿ ದನಗಳಿಗೆ ಹುಲ್ಲುಹಾಕಿದಂತೆ ಕನಸು. ಹೀಗೆ ಆಗೀಗ ನಾನು ದೊಡ್ಡದೊಡ್ಡ ವ್ಯಕ್ತಿಗಳನ್ನು ಭೇಟಿಯಾಗುತ್ತಿರುತ್ತೇನೆ, ಕನಸಿನಲ್ಲಿ.
ಚುನಾವಣೆ ದಿನಾಂಕ ಘೋಷಣೆಯಾಗುತ್ತಲೆ ಫೋನು ಮಾಡಿದ್ದ ಅಣ್ಣ, "ವೋಟಿಗೆ ಬಾ" ಅಂತ ಗದರುವ ದನಿಯಲ್ಲೇ ಹೇಳಿದ. ನನ್ನ ಪರಮೋಚ್ಚ ಹಕ್ಕಿನ ಚಲಾವಣೆಗೆ ಹೆಚ್ಚಾಗಿ ಹೋಗದಿರುವುದು, ಸದರೀ ಗದರಿಕೆಗೆ ಕಾರಣ. ಸರಿ, ಟ್ರೇನ್ ಟಿಕೆಟ್ ಕೊಡುಸ್ತಿಯಾ ಅಂದರೆ ಅದಕ್ಕೂ ಧನಾತ್ಮಕ ಉತ್ತರವನ್ನೇ ನೀಡಿದ. ಹೇಗಿದ್ದಾರೆ (ಮಾಜಿ)ಶಾಸಕರು, ಮಾತಿಗೆ ಸಿಗುತ್ತಾರಾ ಅಂತ ಕೇಳಿದೆ. ಇದಕ್ಕೇ ಕಾದವನಂತೆ, ಈಗ ಅವರ ಮೊಬೈಲ್ ಆಕ್ಸೆಸೇಬಲ್, ಇಲ್ಲವಾದರೆ ಯಾವಾಗಲೂ ಸ್ವಿಚ್‌ಆಫ್ ಆಗಿರುತ್ತಿತ್ತು ಅನ್ನುತ್ತಾ ನಕ್ಕ. ಆತನೂ ನಮ್ಮ ಎಮ್ಮೆಲ್ಯೆಯೂ ಒಂದು ಕಾಲದಲ್ಲಿ ಜತೆಗಿದ್ದವರು. ಆವರೀಗ ದೊಡ್ಡ ಲೀಡರಾಗಿದ್ದಾರೆ.
ನಾನೂ ಲೀಡರಾಗಿದ್ದವಳೇ.... ಮಾತ್ರ, ನಾಲ್ಕನೆ ಕ್ಲಾಸಿನಲ್ಲಿ ಕಲಿಯುತ್ತಿದ್ದಾಗ. ಮಾತನಾಡಿದವರ ಹೆಸರು ಬರೆಯುವುದು, (ಮಾಸ್ಟರ ಬಳಿ ಚಾಡಿ ಹೇಳುವುದು) ತರಗತಿಯಲ್ಲಿ ಎಲ್ಲರ ಕೋಪಿ ಪುಸ್ತಕ; ಯಾ; ಲೆಕ್ಕ ಪುಸ್ತಕ ಸಂಗ್ರಹಿಸಿ ಮೇಜಿನ ಮೇಲಿಡುವುದು ಮುಂತಾದುವುಗಳೆಲ್ಲ ನಾಯಕ/ಕಿಯರ ಜವಾಬ್ದಾರಿಗಳಾಗಿರುತ್ತಿದ್ದವು. ಮತ್ತೂ ಒಮ್ಮೆ ನಾಯಕಿಯಾಗ ಹೊರಟಿದ್ದೆ. ಇದು ಮಾತ್ರ ಕಾಲೇಜು ಮೆಟ್ಟಿಲೇರಿದ ಮೇಲೆ.
ಶಾನಿಗೆ ಬಿಟ್ಟ ಅಭ್ಯರ್ಥಿ ಯಾರು? ಆಕೆಯೇ ಅಭ್ಯರ್ಥಿ ಎಂಬ ಒಕ್ಕೊರಲ ಅಭಿಪ್ರಾಯವನ್ನು ನಮ್ಮ ಕ್ಲಾಸು ಹೊರಹಾಕಿದ್ದಾಗ, ಉತ್ಸಾಹ ಪುಟಿಯುವ ಆ ವಯಸ್ಸಿನಲ್ಲಿ ಸುಮ್ಮನಿರಲಾಗುತ್ತದಾ? ಅಣ್ಣನ ಕಿಸೆಯಿಂದ ಹಾರಿಸಿದ ನೋಟುಗಳನ್ನು ಒಟ್ಟುಮಾಡಿ ಠೇವಣಿ ಇರಿಸಿ ಸೆನೆಟ್ ಎಲೆಕ್ಷನ್‌ಗೆ ನಾಮಪತ್ರ ಸಲ್ಲಿಸಿಯಾಯಿತು. ಕಾಲೇಜಿನ ಪ್ರತೀ ವಿದ್ಯಾರ್ಥಿಗೂ ಮತಹಾಕುವ ಅವಕಾಶ ಇರುವ ಕಾರಣ, ಮತ್ತು ನಾನೋರ್ವ ಜನಪ್ರಿಯ ವಿದ್ಯಾರ್ಥಿನಿಯಾಗಿದ್ದ ಕಾರಣ ಗೆಲುವು ನನ್ನದೇ ಎಂದು ನನ್ನ ದೋಸ್ತಿಗಳು ಮತ್ತು ಕೆಲವು ಲೆಕ್ಚರರ್ಸ್‌ಗಳೂ ಲೆಕ್ಕಹಾಕಿದ್ದರು.
ನನ್ನ ಎದುರಾಳಿ ಅಭ್ಯರ್ಥಿನಿ ವರಸೆಯಲ್ಲಿ ನಂಗೆ ನೆಂಟತಿಯೇ. ಆಕೆ ಅಂತಿಮ ಬಿ.ಎ. ನಾನು ಅಂತಿಮ ಬಿ.ಕಾಂ. ಕನ್ನಡ ಮೇಜರ್ ವಿದ್ಯಾರ್ಥಿನಿಯಾಗಿದ್ದ ಅವಳಿಗೆ ನೆಟ್ಟಗೆ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಒಂದು ವಾಕ್ಯದಲ್ಲಿ ಕನಿಷ್ಠ ಎರಡಾದರೂ ಮಾತೃಭಾಷಾ ಪದಗಳು ಮಿಳಿತಗೊಂಡಿರುತ್ತಿದ್ದವು. ಭಾಷಣ ಮಾಡಲು ಬರುತ್ತಿರಲಿಲ್ಲ. ಬರೆದು ತಂದು ಓದುತ್ತಿದ್ದಳು. ಆಕೆ ಯಾವ ಚಟುವಟಿಕೆಯಲ್ಲಿ ಇದ್ದವಳಲ್ಲ. ನಾನಾದರೋ, ಎನ್ಎಸ್ಎಸ್ ನಂದೇ. ಡ್ರಾಮಾದಲ್ಲೂ ನಾನೇ, ಸಾಂಸ್ಕೃತಿಕ ಸಂಘಟನೆಯಲ್ಲೂ ನಾನೇ. ಕಾಲೇಜಿನ ಕಂಬಕಂಬಕ್ಕೂ ಶಾನಿಯಾರೆಂದು ಗೊತ್ತು. ಹೀಗಿರುವಾಗ ಗೆಲುವು ನಮ್ಮದೇ ಎಂಬ ಗ್ಯಾರಂಟಿ.
ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯೊಂದು ಆಕೆಯ ಬೆಂಬಲಕ್ಕಿದೆ ಎಂದು ಗೊತ್ತಿದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ಶಾನಿಯ ಫೇವರ್ ಅಂತ, ನನ್ನ ಗೆಳತಿಯರ ಬಳಗದ ಸಮೀಕ್ಷೆ ಹೇಳಿತ್ತು. ಹಾಗಾಗಿ ನಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿಯೂ ಇದನ್ನು ಪ್ರಸ್ತಾಪಿಸಿ, ಯಾರದ್ದೇ ಬೆಂಬಲದ ಹಂಗಿಲ್ಲದ, ಸ್ವಂತ ಸಾಮರ್ಥ್ಯದ ಮೇಲೆ ಸ್ಫರ್ಧಿಸುತ್ತಿರುವ ಚುರಕಿನ, ಸ್ವತಂತ್ರ, ಅರ್ಹ ಅಭ್ಯರ್ಥಿ ಎಂದೆಲ್ಲ ಹೇಳುತ್ತಾ, ಮೇಜು ಗುದ್ದಿಗುದ್ದಿ, ಆಕೆಯ ಕ್ಲಾಸಿನಿಂದಲೇ ಭಾಷಣ ಆರಂಭಿಸಿದ್ದೆವು.
ಸಿಕ್ಕಸಿಕ್ಕವರ ಬಳಿ ಹಲ್ಲುಕಿರಿಯುತ್ತಾ ಮತಯಾಚನೆ ಮಾಡುವ ಕಾರಣ ನಮಗೆ ಬಾಯ್ಮುಚ್ಚುವುದೇ ಮರೆತುಹೋಗಿತ್ತು. ಚುನಾವಣೆಗೆ ಎರಡು ದಿನವಿರಬೇಕಿದ್ದರೆ ನನ್ನ ಹತ್ತಿರದ ಸಂಬಂಧಿಯೊಬ್ಬ ಕಾಲೇಜಿನ ಹೊರಗೆ ಸಿಕ್ಕಿದ. "ನಂಗೇ ವೋಟ್ ಹಾಕ್ತೀಯಲ್ಲಾ, ನಿನ್ನಬಳಿಯೂ ನಾನು ಕೇಳ್ಬೇಕಾ" ಅಂದೆ. ಬೇರೆಯೇ ಮಾತನ್ನಾಡಿದ ಆತ "ಒಂದು ಮಾತು. ನೀವು ಸೋತರೆ ಬೇಸರ ಮಾಡಬಾರದು" ಅಂದ. ಎಂಥಾ ಮಾತಾಡ್ತೀಯಾ? ನಾನೇ ಗೆಲ್ಲೋದು ಅಂತ ಕಾಲೇಜಿಗೆ ಕಾಲೇಜೇ ಮಾತಾಡ್ತಿದೆ, ನಿಂಗೆಲ್ಲೋ ಭ್ರಾಂತು ಅಂದೆ.
ಚುನಾವಣೆ ದಿನ ಬಂದೇ ಬಿಡ್ತು. (ಶಾಂತಿಯುತ) ಮತದಾನವಾಯ್ತು. ಮತಎಣಿಕೆ ದಿನದಂದು ಮಾತ್ರ ಆತ್ಮವಿಶ್ವಾಸದ ಜಾಗದಲ್ಲಿ ಸ್ವಲ್ಪ ಜ್ವರಬಂದಂತೆ ಭಾಸವಾಗುತ್ತಿತ್ತು. ಎಣಿಕೆ ಆರಂಭವಾಯ್ತು. ಆರಂಭದ 50 ವೋಟುಗಳ ತನಕ ನನ್ನ ಎದುರಾಳಿಯ ಅಕೌಂಟ್ ಓಪನ್ ಆಗಿರಲೇ ಇಲ್ಲ. ಬಳಿಕವೂ ಒಂದು ಹಂತದ ತನಕ ಶಾನಿಯೇ ಮುಂದಿದ್ದಳು. ಕೊನೆಕೊನೆಗೆ ಆಕೆಯ ಮತಗಳ ಸಂಖ್ಯೆ ಹೆಚ್ಚುತ್ತಿತ್ತು. ಒಮ್ಮೆ ಹಿನ್ನಡೆ, ಮತ್ತೊಮ್ಮೆ ಮುನ್ನಡೆ ಹೀಗೆ ಸಾಗಿತು. ಅಂತಿಮವಾಗಿ ಶಾನಿ 40 ವೋಟಿಗೆ ಸೋತಳು! ಸೋಲಿನ ಬಗ್ಗೆ ತಪ್ಪಿಯೂ ಆಲೋಚಿಸಿಯೇ ಇರದಿದ್ದ ನಾನು ಸೋತಾಗ ಹೇಗಾಗಬೇಕು? ಇಂಗು ತಿಂದ ಮಂಗಿಯಂತಾಗಿದ್ದ ನನಗೆ ಆಕೆಯನ್ನು ಅಭಿನಂದಿಸಬೇಕು ಎಂದೂ ಹೊಳೆಯಲಿಲ್ಲ. ಪ್ರಿನ್ಸಿಪಾಲರು ಹೇಳಿದಾದ ಎಚ್ಚರಗೊಂಡವಳಂತೆ ಶೇಕ್‌ಹ್ಯಾಂಡ್ ಮಾಡಿ, ನನಗಾಗಿ ನನ್ನ ಬಳಗ ತಂದಿದ್ದ ಹೂವಿನ ಹಾರವನ್ನು ಆಕೆಗೆ ಹಾಕಿ, ರಾಕೆಟ್‌ನಂತೆ ಸ್ನೇಹಿತೆ ಶಾಂತಿಯೊಂದಿಗೆ ಕಾಲೇಜು ಆವರಣದಿಂದ ಹೊರಬಿದ್ದೆ.
ನನ್ನ ಅಹಂಕಾರಕ್ಕೆ ಎಷ್ಟು ದೊಡ್ಡ ಏಟು ಬಿದ್ದಿತ್ತೆಂದರೆ ಅಲ್ಲಿಂದ ಬಸ್ ನಿಲ್ದಾಣಕ್ಕೆ ತೆರಳಲೂ ಅವಮಾನವಾದಂತಾಗುತ್ತಿತ್ತು. ಕಂಡವರೆಲ್ಲ ನನ್ನನ್ನೇ ನೋಡುತ್ತಿದ್ದಾರೆ, ಸೋತವಳೆಂದು ಹೀಯಾಳಿಸುತ್ತಾರೆ, ನಾನು ಸೋತೆ, ನಾನು ಸೋತೆ ಎಂಬುದೇ ತಲೆಯೊಳಗೆ ಗಿರಿಗಿಟ್ಲೆ ಹೊಡೆಯುತ್ತಿತ್ತು. ಹೇಗೋ ಅಂದು ಮನೆ ಸೇರಿದವಳು ಒಂದು ವಾರ ಮನೆಯಿಂದ ಹೊರಡಲೇ ಇಲ್ಲ. ಈಗ ನಗು ಬರುತ್ತದೆ.
ಒಂದು ವಾರ ನನ್ನ ಪತ್ತೆ ಇಲ್ಲದ್ದು ಕಂಡ ನಮ್ಮ ಅಕೌಂಟೆನ್ಸಿ ಸರ್ ಫೋನ್ ಮಾಡಿ, ಬಾಯ್ಮುಚ್ಚಿ ಕಾಲೇಜಿಗೆ ಬಾ ಅಂದರು. ಸ್ಫರ್ಧೆ ಅಂದರೆ ಸೋಲು, ಗೆಲುವು ಸಹಜ. ಇಷ್ಟಕ್ಕೂ ನೀನು ಸೋತಿದ್ದು ಬರಿಯ ನಲ್ವತ್ತು ವೋಟಿಗೆ. ಯಾವುದೇ ಹಂಗಿಲ್ಲದೆ ಅಷ್ಟು ವೋಟ್ ಪಡೆದದ್ದು ಗ್ರೇಟ್ ಅಂದಾಗ ನನ್ನ ಅವಮಾನ ಇಳಿಮುಖವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ