ಸೋಮವಾರ, ಏಪ್ರಿಲ್ 14

ಸೊಳ್ಳೆಯ ಬಂಧ

ಸೊಳ್ಳೆಗಳು ಮತ್ತು ನನ್ನದು ಒಂಥರಾ ಬಿಡಿಸಲಾರದ(ಓಡಿಸಲಾರದ) ಸಂಬಂಧ. ಸೊಳ್ಳೆಯ (ಸು)ಸಂಸ್ಕೃತ ಹೆಸರು ಮಶಕ ಎಂದಂತೆ. ಅದಕ್ಕೇ ಇರಬೇಕು ಈ ಮಶಕಗಳು ಧಾಂಗುಡಿ ಇಡುವ ಪರಿಗೆ ಕೆಲವೊಮ್ಮೆ ಮಸ್ತಕವೇ ಬ್ಲಾಂಕ್ ಆಗಿಬಿಡುತ್ತೆ.

ನಾನು ವಿದ್ಯಾರ್ಥಿನಿಯಾಗಿದ್ದ ಹಂತದಲ್ಲೂ, ಆ ಬಳಿಕ ದುಡಿಯುವ ಮಹಿಳೆಯಾಗಿ ಪರಿವರ್ತನೆಗೊಂಡ ಬಳಿಕವೂ, ಎಲ್ಲೇ ಹೋದರೂ ನಂಗೆ ಊಟ ಮತ್ತಿತರ ಸೌಲಭ್ಯಗಳಿಗೆ ಒಂದಿಷ್ಚು ಕೊರತೆಯಾದರೂ, ಸೊಳ್ಳೆಗಳಿಗೆ ಮಾತ್ರಬರವೆಂಬುದು ಬಂದುದೇ ಇಲ್ಲ. ಈಗ ಇರುವಲ್ಲೂ ಸಹ. ಹಾಗಂತ, ಇವುಗಳಿಂದ ಇತರರು ಅನುಭವಿಷ್ಟು ಹಿಂಸೆ ನಾನು ಅನುಭವಿಸಿದ್ದೇನೆ ಎಂದೇನಾದರೂ ಹೇಳಿದರೆ ಸೊಳ್ಳೆಗೆ ಅನ್ಯಾಯವಾದೀತು. ಅವೇನಿದ್ದರೂ, ನನ್ನ ಸುತ್ತಮುತ್ತ ಡಂಯೀ... ಡುಂಯೀ.. ಎಂಬ ಹಾಡು ಹಾಡುತ್ತಾ, ಹಾರಾಡುತ್ತವೆಯೇ ವಿನಹ ಅಂಥ ಪರಿ ಕಚ್ಚುವುದಿಲ್ಲ. ಫ್ಯಾನಿಲ್ಲದೆ, ಸೊಳ್ಳೆ ಪರದೆ ಇಲ್ಲದೆ, ಕಾಯಿಲಿಲ್ಲದೆ, ಮ್ಯಾಟಿಲ್ಲದೆ, ಗುಡ್ ನೈಟೂ ಇಲ್ಲದೆ ಸೊಳ್ಳೆಗಳ ಸಂಗೀತ ಮಾತ್ರ ಕೇಳಿ ನಿದ್ರಿಸುತ್ತೇನೆ ನಾನು. ಇತರರೆಲ್ಲ ನನ್ನ ಈ ಸಿದ್ಧಿಗೆ ಬೆರಗಾಗಿ ಹೋಗುತ್ತಾರೆ. ಒಂದೊಮ್ಮೆ ಒಂದೆರಡು ಕಡಿದರೂ ಮರುದಿನ ಅದರ ಕುರುಹೇನೂ ಇರುವುದಿಲ್ಲ.

ಸೊಳ್ಳೆ ಕಡಿತವಾದರೂ ಸಹಿಸಿಕೊಳ್ಳಬಹುದು. ಅದರೆ ಅದು ಹಾರಾಡುತ್ತಾ ಹೊರಡಿಸುವ ಸಂಗೀತ ಯಾರಿಗಾದೀತು. ಅವುಗಳು ಕಿವಿಬಳಿಬಂದು ಅದೇನು ಹೇಳುತ್ತವೆ ಎಂಬುದು ನನ್ನ ಕುತೂಹಲ. ಮೂರ್ನಾಲ್ಕು ಭಾಷೆಗಳನ್ನು ಅರ್ಧಂಬರ್ಧ ಕಲಿತಿರುವ ನಾನು ಸೊಳ್ಳೆ ಭಾಷೆಯನ್ನೂ ಕಲಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮತ್ತು ಪ್ರಾಮಾಣಿಕವಾಗಿ ಸೋತಿದ್ದೇನೆ. ಹಾಗಾಗಿ ಅವುಗಳು ಬಹುಶಃ "ನಿನ್ನ ರಕ್ತ ಇಷ್ಟ್ಯಾಕೆ ಕಹಿ ಅಂತ ಕೇಳ್ತಿರಬಹುದು" ಅಂತ ಅಂದುಕೊಂಡಿದ್ದೇನೆ.

ತಾಳ್ಮೆ ಮತ್ತು ನಾನು ಪರಸ್ಪರ ವಿರೋಧಾಭಾಸಗಳೇ.ಒಂದು ಸರ್ತಿ, ಎರಡು ಸರ್ತಿ, ಹೆಚ್ಚೆಂದರೆ ಮೂರು ಸರ್ತಿ. ಈ ಸೊಳ್ಳೆಗಳು ಡುಂಯ್‌ಡುಂಯ್ ಅನ್ನುತ್ತಾ ಕಿವಿ ಬಳಿ ಸುಳಿದಾಡುವಾಗ ಒಂಥರಾ ಕಿರಿಕಿರಿ. ಈ ಕಿರಿಕಿರಿ ಸ್ವಲ್ಪಹೊತ್ತಲ್ಲೇ ಮೈಯಿಡೀ ವ್ಯಾಪಿಸಿಕೊಂಡು ಉರಿಉರಿ ಅನ್ನತೊಡಗುತ್ತದೆ. ತಾಳ್ಮೆ ತಪ್ಪಿದರೆ, ಅದು ನನ್ನ ಹತ್ತಿರದವರಿರಲಿ, ದೂರದವರಿರಲಿ, ಗೆಳತಿಯರಿರಲಿ, ಉದ್ಯೋಗದಾತರಿರಲಿ, ಅಷ್ಟೆಲ್ಲ ಏಕೆ, ಇಂದಿಗೂ ನನ್ನನ್ನು ಕೂಸು... ಕೂಸು ಅನ್ನುತ್ತಾ ಜೋಪಾನ ಮಾಡುವ ಅಮ್ಮನೆ ಆಗಲಿ, ಯಾರೆಂದು ನೋಡದೆ, ನನ್ನೊಳಗಿನ ಕಿರಿಕಿರಿಯನ್ನು ಹೊರಗೆಡಹಿ ಬಿಡುತ್ತೇನೆ. ಇದರಿಂದ ಎಷ್ಟೋ ಅನಾಹುತಗಳು ಆಗಿವೆ. ಸ್ನೇಹಿತರು ವೈರಿಗಳಾಗಿದ್ದಾರೆ. ಹತ್ತಿರದವರು ದೂರಹೋಗಿದ್ದಾರೆ. ಕೆಲಸ ಕಳ್ಕೊಂಡಿದ್ದೇನೆ. ಅಹಂಕಾರಿ ಅನ್ನಿಸಿಕೊಂಡಿದ್ದೇನೆ. ಅದು ಹೌದೆಂದು ಗೋಚರವಾದರೂ, ಒಪ್ಪಿಕೊಳ್ಳಲು ಅಹಂಕಾರ ಅಡ್ಡಬರುವುದಿಲ್ಲವೇ... ಹಾಗಾಗಿ ಅದು ಅಹಂಕಾರವಲ್ಲ, ಅಲಂಕಾರ ಅಂತ ಸಮಾಧಾನಿಸಿಕೊಳ್ಳುತ್ತೇನೆ. ಹುಟ್ಟುಗುಣ ಹೋಗುತ್ತಾ...?

ಹೀಗಿರುವಾಗ ನಾನು ಈ ಯಕಶ್ಚಿತ್ ಸೊಳ್ಳೆಯ ಬಳಿ ತಾಳ್ಮೆಯಿಂದ ವರ್ತಿಸಲಾಗುತ್ತಾ? ಅದ್ಕೇ, ಅದೊಂದು ಸರ್ತಿ ನನ್ನ ಬಲಗಿವಿಯ ಬಳಿ ಓಡಿಸಿದಷ್ಟೂ, ಮತ್ತೆಮತ್ತೆ ವಕ್ಕರಿಸಿ ಕರ್ಣಕಠೋರ ಸಂಗೀತ ಹಾಡುತ್ತಿದ್ದ ಸೊಳ್ಳೆಯೊಂದಕ್ಕೆ ಕಲಿಸಬೇಕೆಂದು, ಎಷ್ಟು ಸಾಧ್ಯವೋ ಅಷ್ಟು ಶಕ್ತಿಹಾಕಿ, ಬಲವಾಗಿ ಅಪ್ಪಳಿಸಿದೆ. ಸೊಳ್ಳೆ ಸತ್ತಿತೋ, ಓಡಿತೋ ಯಾರಿಗೆ ಗೊತ್ತು. ಆದರೆ, ಆ ಬಲವಾದ ಏಟು ಆಯಕಟ್ಟಿನ ಜಾಗಕ್ಕೆ ಬಿದ್ದು ಶ್ರವಣ ಸಮಸ್ಯೆಯುಂಟಾಯಿತು. ಬಲಗಿವಿಯ ಕತೆ ಹೀಗಾದರೆ; ಎಡಗಿವಿಯ ಕತೆ ಬೇರೆಯೇ ಇದೆ. ಚಿಕ್ಕಂದಿನಲ್ಲಿ ಲಾಗಹಾಕುವ ವೇಳೆ ಬಿದ್ದು ಎಡ ಕಿವಿ ಮೊದಲೇ ಸಮಸ್ಯೆಯಲ್ಲಿತ್ತು. ಇದೀಗ ಎರಡೂ ಕಿವಿಯ ಶ್ರವಣ ಶಕ್ತಿ ಒಂದೇ ನಮೂನೆಯಾಗಿ ಹೋಗಿದೆ. ಹಾಗಾಗಿ ಈ ಸೊಳ್ಳೆಯ ದೆಸೆಯಿಂದಾಗಿ ಮೊದಲೇ ಕುರುಡುತನ ಅನುಭವಿಸುತ್ತಿದ್ದ ನನ್ನೊಂದಿಗೆ ಕಿವುಡುತನವೂ ಸೇರಿಕೊಂಡಿದೆ. ಹಾಗಂತ ನಂಗೇನು ಚಿಂತೆ ಇಲ್ಲ. ಇದರಿಂದ ನಂಗೆ ಅನುಕೂಲವೇ ಆಗಿದೆ. ಬೇಕಿರುವುದನ್ನು ಮಾತ್ರ ಕೇಳಿಸಿಕೊಂಡು, ಬೇಡದಿರುವುದನ್ನು ಕೇಳದಂತೆ ನಟಿಸುತ್ತೇನೆ. (ಹೆಚ್ಚಾಗಿ ಬಾಸ್ ಬಯ್ಯುವ ವೇಳೆ). ಸ್ನೇಹಿತೆಯ ಬಳಿ ಕೈಸಾಲವೇನಾದರೂ ಪಡೆದರೆ, ಫೋನ್ ಮೂಲಕ ಅವಳಾಚೆಯಿಂದ, ದುಡ್ಯಾವಾಗ ಹಿಂತಿರುಗಿಸುತ್ಯಾ... ಅಂತ ಕೇಳಿದರೆ, ಎಂಥಾ.... ಎಂಥಾ ಅನ್ನುತ್ತಾ ಅವಳಿಗೇ ದಾಕ್ಷಿಣ್ಯವಾಗಿ ವಿಷಯ ಮಾಚುವಂತೆ ನೋಡಿಕೊಳ್ಳುತ್ತೇನೆ.

ಆದರೆ ಇದನ್ನೇ ನೆಪವಾಗಿಟ್ಟು ಸರ್ಕಾರಿ ಕೆಲಸ ಗಿಟ್ಟಿಸಿ ದೂರುಗಳ ವಿಭಾಗಕ್ಕೇನಾದರೂ ಸೇರೋಣವೆಂದರೆ, ಅತ್ತ ಅಂಗವಿಕಲ ಕೋಟಾದಡಿಗೂ ಬರುವುದಿಲ್ಲ. ಏಕೆಂದರೆ ಈಚೆ ಪೂರ್ತಿ ಕುರುಡಿಯೂ ಅಲ್ಲ; ಆಚೆ ಪೂರ್ತಿ ಕೆಪ್ಪಿಯೂ ಅಲ್ಲವಲ್ಲ!

ಊಟ-ತಿಂಡಿ, ನಿದ್ರೆಯ ವಿಚಾರದಲ್ಲಿ ಅಂತಾ ಶಿಸ್ತಿನವಳಲ್ಲದ ನಂಗೆ ಅದೊಮ್ಮೆ ಮಧ್ಯರಾತ್ರಿ ಪೂರಿ ಮಾಡಬೇಕೆಂಬ ತುಡಿತ ಉಂಟಾಗಿತ್ತು. ಕಾರಣ ಮತ್ತೇನಿಲ್ಲ, ಹೊಟ್ಟೆಹಸಿವು. ಈ ಹಸಿವು ನನ್ನನ್ನು ಬೆಡ್‌ರೂಮಿನಿಂದ ಕಿಚನ್‌ಗೆ ತಂದು ನಿಲ್ಲಿಸಿತ್ತು. ಕಿಚನ್ನಲ್ಲಿ ಲೈಟ್ ಕಂಡದ್ದೇ, ಅಲ್ಲಿಗೆ ಬಂದ ಸೊಳ್ಳೆಗಳು, ನಾನು ಪೂರಿ ಲಟ್ಟಿಸುತ್ತಿರಬೇಕಿದ್ದರೆ ಸುತ್ತುಮುತ್ತು ಹಾರ(ಡ)ಲಾರಂಭಿಸಿದವು. ಕೈಯಲ್ಲಿ ಲಟ್ಟಣಿಗೆ ಇತ್ತಾದರೂ ಇದರಲ್ಲಿ ಸೊಳ್ಳಗೆ ಹೊಡೆದರೆ, ಸೊಳ್ಳೆಗಿಂತ ನಂಗೇ ಡೇಂಜರೆಂದು, ಬೇಕಾದ್ದು ಮಾಡಿಕೊಳ್ಳಲಿ ಅಂತ ನನ್ನಪಾಡಿಗೆ ನಾನಿದ್ದೆ. ಅಷ್ಟರಲ್ಲಿ ಸೊಳ್ಳೆಯೊಂದು ಹಾರುಹಾರುತ್ತಲೆ ಒಲೆ ಮೇಲೆ ಎಣ್ಣೆ ಮಳಲುತ್ತಿದ್ದ ಬಣಲೆಯೊಳಗೆ ಬಿತ್ತು. ಪೂರಿಯೊಂದು ಅದೇ ಎಣ್ಣೆಯಲ್ಲಿ ಕಾಯುತ್ತಿತ್ತು. ಯಾವುದನ್ನು ಬಿಸಾಕಲೀ.... ಎಣ್ಣೆಯನ್ನೋ? ಪೂರಿಯನ್ನೋ? ಬಿದ್ದು ಮರಗಟ್ಟಿದ ಸೊಳ್ಳೆಯನ್ನೋ....? ಹೊಟ್ಟೆಯೊಳಗಿನ ಹಸಿವು ಮತ್ತೊಮ್ಮೆ ಕುದಿಯಿತು. ಸೊಳ್ಳೆಯನ್ನು ತೆಗೆದೆಸೆದು, ಉಬ್ಬಿದ ಪೂರಿಯನ್ನು ಎಣ್ಣೆಯಿಂದ ತೆಗೆದು ಅದೇ ಎಣ್ಣೆಯಲ್ಲಿ ಇನ್ನೊಂದು ಪೂರಿ ಬಿಟ್ಟೆ...!!!

4 ಕಾಮೆಂಟ್‌ಗಳು:

  1. ನಿಮ್ಮ ಬರಹದ ಕೊನೆಯನ್ನು ಓದಿ ನಗು ತಡೆಯಲಾಗುತ್ತಿಲ್ಲ. :) :) :)
    ಒಳ್ಳೆಯ ನಗೆ ಬರಹ..
    ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಸೊಳ್ಳೆ ಕಥನ ಚೆನ್ನಾಗಿದೆ. ಸೊಳ್ಳೆಗಳನ್ನು ಇಷ್ಟು ಹತ್ತಿರದಿಂದ ಅನುಭವಿಸಿದ್ದೀರಿ. ಚೆನ್ನಾಗಿದೆ.
    ನನ್ನ ಬ್ಲಾಗಿಗೂ ಒಮ್ಮೆ ಭೆಟ್ಟಿ ನೀಡಿ ಶಾನಿ. ನಿಮ್ಮ ಹೆಸರೇನೆಂದು ಕೇಳಬಹುದಾ?

    http://nannadoswalpa.blogspot.com/

    ಪ್ರತ್ಯುತ್ತರಅಳಿಸಿ
  3. ಬಾನಾಡಿಯವರೇ,
    ನಿಮಗೆ ನಗುಬಂದಿರುವುದು ಸಂತಸ ತಂದಿದೆ. ಆದರೆ, ಈಗ ಬರಹದ ಸುರು, ನಡು ಎಲ್ಲ ನನ್ನ ಮೇಲೆ ಮುನಿಸಿಕೊಂಡಿದೆ.:))

    ಪ್ರತ್ಯುತ್ತರಅಳಿಸಿ
  4. ರೇಣುಕರಿಗೆ ಸ್ವಾಗತ,
    ನಿಮ್ಮ ಬ್ಲಾಗಿಗೆ ಒಂದು ಸುತ್ತು ಹಾಕಿದೆ. ತುಂಬ ಚೆನ್ನಾಗಿದೆ. ಇನ್ಮುಂದೆ ಆಗೀಗ ಬರುತ್ತಿರುತ್ತೇನೆ. ಮತ್ತೆ ನನ್ನ ಹೆಸರೂ..ರೂ..ರೂ... ಶಾನಿ ಎಂದಿರಲಿ:)

    ಪ್ರತ್ಯುತ್ತರಅಳಿಸಿ