(ಇದೂ ಸೊಳ್ಳೆಗೆ ಸಂಬಂಧಿಸಿದ್ದು. ಇವ್ಳಿಗೆ ಸೊಳ್ಳೆ ಬಿಟ್ರೆ ಬೇರೆ ವಿಷ್ಯವೇ ಇಲ್ವಾಂತ ಗೊಣಗಬೇಡಿ. ಇದು ಮಲೇರಿಯಾ ದಿನಕ್ಕಾಗಿ ಸ್ಪೆಷಲ್!)
ಹಾಗೆ ನೋಡಿದರೆ, ಒಂದಾನೊಂದು ಕಾಲದಲ್ಲಿ ನಾನು ಹುಟ್ಟುವ ಮುಂಚೆ ನನ್ನೂರು ಮಲೇರಿಯಾ ಫೇಮಸ್ ಆಗಿತ್ತಂತೆ. ಇದು ನಂಗೆ ಗೊತ್ತಾದ್ದು ನಾನು ಹುಟ್ಟಿ ಎಷ್ಟೂ ವರ್ಷಗಳ ಬಳಿಕ, ಯಾವುದೋ ಪುಸ್ತಕ ಓದಿದಾಗ. ಎಲ್ಲೇ ಹೋದರೂ ಹೋಗಿ ಬೀಳುವುದು ಸೊಳ್ಳೆ ಕೊಂಪೆಗೆ ಎಂದು ಈ ಮೊದಲು ಹೇಳಿದ್ದೇನೆ. ನಾನು ಪಿ.ಜಿ ಮಾಡೋವಾಗ ಇದ್ದು ಊರು ಸೊಳ್ಳೆ ಖ್ಯಾತಿಯದ್ದು. ಸೊಳ್ಳೆ ಬಂದು ,ಕಿವಿಯಲ್ಲಿ ಗುಂಯ್‌ಗುಡುತ್ತಾ ಗುಡ್‌ನೈಟ್ ಹೇಳಿದರೆ ಮಾತ್ರ ನಿದ್ರೆ ಅನ್ನೊವಷ್ಟು ನಾನವುಗಳಿಗೆ ಎಡಿಕ್ಟ್ ಆಗಿದ್ದೆ. ಇಂಥ ಸೊಳ್ಳೆ ಸಂಭ್ರಮದಲ್ಲಿ ನಾನು ಗಡದ್ದಾಗಿ ನಿದ್ದೆ ಹೊಡೆಯುವುದನ್ನು ಕಂಡ ಸ್ನೇಹಿತೆಯರು ನನ್ನನ್ನು ಛೇಡಿಸುತ್ತಿದ್ದರು. ಸೊಳ್ಳೆಯೂ ನಿನ್ನ ಬಳಿ ಸುಳಿಯುವುದಿಲ್ಲ ಎಂದಾದರೆ, ನೀನು ಅದ್ಯಾವ ಪರಿ ಕೊಳಕಿ ಇರಬಹುದು ಎಂಬುದು ರುಕ್ಮಿಣಿಯ ಸ್ಟೇಟ್‌ಮೆಂಟ್.
ನನ್ನ ರೂಂಮೇಟ್ ಮಲೇರಿಯಾ ಬಂದು ಮಲಗಿದ್ದರೂ ನಾನು ಸೊಳ್ಳೆ ಪರದೆ ಉಪಯೋಗಿಸದೆ ಇರುವುದನ್ನು ಕಂಡ ಜ್ಯೋತಿ, ಅನಾಫಿಲೀಸ್ ಹೆಣ್ಣು ಸೊಳ್ಳೆಯಾದ ಕಾರಣ ಈಕೆ ಬಳಿ ಸುಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಳು.
ನನ್ನ ಗೆಳತಿಯೊಬ್ಬಳಿದ್ದಾಳೆ. ಅವ್ಳದ್ದು ಮಲೇರಿಯಾ ಫ್ಯಾಮಿಲಿ. ಅವಳ ಎರಡರ ಹರೆಯದ ಮಗುವನ್ನು ಬಿಡದೇ, ಅವರ ಮನೆಯಲ್ಲಿ ಎಲ್ಲರಿಗೂ, ತಿರುತಿರುಗಿ ಮಲೇರಿಯಾ ಅಟ್ಯಾಕ್ ಆಗಿತ್ತು. ಹೀಗೆ ಆಕೆಯ ತಂಗಿಗೊಂದು ಬಾರಿ ಮಲೇರಿಯಾ ಆಗಿದ್ದಾಗ ನಾನು ಆಸ್ಪತ್ರೆ ಡ್ಯೂಟಿ ಮಾಡಿದ್ದೆ. ಮಲೇರಿಯಾ ಪೇಶಂಟ್‌ಗೆ ನಾನು ವಾಚ್‌ವುಮನ್ ಅಗಿರುವ ಸುಳಿವು ಸಿಕ್ಕಿದ್ದ ನನ್ನ ಬಾಸ್ ಅದೊಮ್ಮೆ "ನೀವೂ ಒಂದು ಆಂಟಿ ಮಲೇರಿಯಾ ವ್ಯಾಕ್ಸೀನ್ ಮಾಡ್ಸಿಕೊಳ್ಳಿ" ಅಂದಿದ್ದರು. ಅದು ನನ್ನ ಮೇಲಿನ ಕಾಳಜಿಗೋ ಅಥವಾ ಈಕೆಗೆ ಮಲೇರಿಯಾ ತಗುಲಿಬಿಟ್ರೆ ರಜೆಕೊಡಬೇಕೆಂಬ ಅವರ ಚಿಂತೆಗೋ! ಬೇಕಿಲ್ಲ ಸಾರ್, ಎಷ್ಟೇ ಸೊಳ್ಳೆ ಕಡಿದರೂ ನನ್ನನ್ನು ಮಲೇರಿಯಾ ಬಾಧಿಸುವುದಿಲ್ಲ ಎಂಬ ಸಮಜಾಯಿಷಿ ನೀಡಿದ್ದೆ ಅವರಿಗಾಗ. ಮರುಮಾತಾಡದ ಅವರು ನಾನೇ ಒಂದು ಸೊಳ್ಳೆ ಎಂಬಂತಹ ಲುಕ್ ಕೊಟ್ಟಿದ್ದರು.
ಈ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ನನ್ನನ್ನು ಇನ್ನೊಮ್ಮೆ ನಗೆಪಾಟಿಲಿಗೀಡಾಗಿಸಿತ್ತು. ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಸಲ್ಲಿಸಿ ಕೆಲವು ತಿಂಗಳ ಬಳಿಕ ಲಿಖಿತ ಪರೀಕ್ಷೆಗೆ ಹಾಜರಾಗಲು ಆದೇಶ ಬಂದಿತ್ತು. ಒಂದು ಹುದ್ದೆಗೆ 80ಕ್ಕಿಂತಲೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಕುರಿತೇ ಹೆಚ್ಚು ಪ್ರಶ್ನೆಗಳು. ಅದರಲ್ಲೊಂದು ಪ್ರಶ್ನೆ ಮಲೇರಿಯಾ ರೋಗ ಹರಡುವ ಸೊಳ್ಳೆಯಾವುದು ಎಂಬುದಾಗಿ. ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಅಮಿತಾಭ್ ಬಚ್ಚನ್ ನೀಡಿದಂತೆ 'ಚಾರ್ ಆಪ್ಷನ್' ಇರಲಿಲ್ಲ, 'ಕಂಪ್ಯೂಟರ್ ಸಾಬೂ' ಇರಲಿಲ್ಲ.
ಪರೀಕ್ಷೆ ಮುಗಿಸಿ ನನ್ನೂರಿಗೆ ತಲುಪುವ ಧಾವಂತದಲ್ಲಿ ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದೆ. ದಾರಿಯಲ್ಲಿ ಸಿಕ್ಕ ಸಹ ಅಭ್ಯರ್ಥಿಯೊಬ್ಬಾತ, ಹಲೋ ಮೇಡಂ ಹೇಗೆ ಮಾಡಿದ್ದೀರಿ ಅಂತ ವಿಚಾರಿಸಿದ. ಪರವಾಗಿಲ್ಲ ಅಂದೆ. ಆತನ ಹೆಸರು ಶರತ್ಚಂದ್ರ ಎಂತಲೂ, ಕುಮುಟಾದಲ್ಲಿ ವಕೀಲನೆಂದೂ ಗೊತ್ತಾಯಿತು. ನನ್ನ ಜತೆ ಹೆಜ್ಜೆ ಹಾಕಿದ ಆತ ಪ್ರಶ್ನೆಗಳ ಬಗ್ಗೆ ಚರ್ಚಿಸಿದ. ಎಲ್ಲದಕ್ಕೂ ಸರಿಯುತ್ತರ ಬರೆದಿದ್ದೇನೆಂಬ ಹಂಡ್ರೆಡ್ ಪರ್ಸೆಂಟ್ ನಂಬುಗೆಯಲ್ಲಿದ್ದ ನಾನು ಎಲ್ಲ ಪ್ರಶ್ನೆಗಳಿಗೂ ಚಟಪಟ ಉತ್ತರ ಹೇಳುತ್ತಾ ಹೋದೆ. ಸೊಳ್ಳೆಯ ಪ್ರಶ್ನೆಗೂ ಉತ್ತರಿಸುತ್ತಾ, 'ಸಿಫಿಲೀಸ್' ಅಂದೆ. ಆತ ಒಮ್ಮೆಗೇ ಮುಖವನ್ನು ಒಂದಿಂಚು ಹಿಂದೆ ಸರಿಸಿದನಾದರೂ ಮತ್ತೆ ಸರಾಗವಾಗೇ ವರ್ತಿಸಿದ.
ಪರೀಕ್ಷೆ ಮುಗಿಸಿ ಹಾಸ್ಟೆಲ್‌ಗೆ ಮರಳಿದಾಗ, ಲೆಕ್ಚರರ್ ಆಗಿದ್ದ ಗೆಳತಿ ಅನಿತಾ ಪ್ರಶ್ನೆ ಪತ್ರಿಕೆ ಇಸಿದುಕೊಂಡಳು. ಅದರ ಕುರಿತು ದೊಡ್ಡ ಚರ್ಚೆಯೇ ಆಯಿತು. ಸೊಳ್ಳೆ ಪ್ರಶ್ನೆ ಬಂದಾಗ, ಹೇಳು ನೋಡೋಣ ಇದ್ಯಾವ ಸೊಳ್ಳೆ ಅಂತ ಪ್ರಶ್ನಿಸಿದಳು. ಅಷ್ಟೂ ಗೊತ್ತಿಲ್ವ ಸಿಫಿಲೀಸ್ ಅಂತ ಮತ್ತಷ್ಟು ದೃಢವಾಗಿ ಅಂದೆ. ಎಲ್ಲರೂ ಬಿದ್ದುಬಿದ್ದು ನಗಲಾರಂಭಿಸಿದರು. ಯೇ.... ಕತ್ತೆ ಇದು ಅನಾಫಿಲೀಸ್. ಸಿಫಿಲೀಸ್ ಅಂದರೆ ಲೈಂಗಿಕ ಕಾಯಿಲೆ ಅಂದಳು. ಶರತ್ಚಂದ್ರನೆಂಬ ಕುಮುಟಾದ ವಕೀಲ ನನ್ನ ಉತ್ತರ ಕೇಳಿ ಯಾಕೆ ಮುಖವನ್ನು ಒಂದಿಂಚು ಹಿಂದೆ ಸರಿಸಿದನೆಂದು ಆಗ ಹೊಳೆಯಿತು!
ಇದಾದ ಬಳಿಕ ನನ್ನ ಗೆಳತಿಯರಿಗೆ ಈ ಸಿಫಿಲೀಸ್ ವಿಚಾರ ಎತ್ತಿ ದಿನಕೊಮ್ಮೆಯಾದರೂ ನನ್ನನ್ನು ಲೇವಡಿಮಾಡದಿದ್ದರೆ ಸೂರ್ಯ ಮುಳುಗುತ್ತಿರಲಿಲ್ಲ. ವಿಷಯ ತಿಳಿದ ಜ್ಯೋತಿ ನಿಂಗಂತೂ ಆ ಕೆಲಸ ಖಂಡಿತ ಸಿಗುವುದಿಲ್ಲ ಎಂದು ಷರಾ ಬರೆದಿದ್ದಳು. ನಾಳೆ ನೀನು ಹೀಗೆ ಗಡಿಬಿಡಿಯಲ್ಲಿ ಒಂದರ ಬದಲು ಇನ್ನೊಂದರ ಪ್ರಕಟಣೆ ಮಾಡಿದರೆ ಗೋ......ವಿಂದ ಅಂತ ಟಿಪ್ಪಣಿಯನ್ನೂ ಸೇರಿಸಿದ್ದಳು.
ಕೊನೆಗೆ ನಾನೇ, ಹೋಗಲಿ ಕೊನೆಯ ಮೂರು ಅಕ್ಷರಗಳು ಸರಿ ಇವೆಯಲ್ವೇ, ಅರ್ಧ ಮಾರ್ಕಾದರೂ ಕೊಟ್ಟಾರು ಅಂತ ಹೇಳಿಕೊಂಡಿದ್ದೆ. ಇದಾದ ಬಳಿಕ ಕ್ರಮೇಣ ಆ ವಿಷಯವನ್ನೂ, ಆ ಪರೀಕ್ಷೆಯನ್ನೂ ನಾವೆಲ್ಲರೂ ಮರೆತಿದ್ದೆವು.
ಆದರೆ, ಒಂದು ದಿನ ನನಗೆ ಆಶ್ಚರ್ಯ ಹುಟ್ಟುವಂತೆ, ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ ನನ್ನನ್ನು ಆಡಿಯೋ ಟೆಸ್ಟ್‌ಗೆ ಕರೆದಿದ್ದರು. ನನ್ನ ಸ್ನೇಹಿತೆಯರಿಗೆ ಇದು ಇನ್ನೊಮ್ಮೆ ನಗುವಿನ ವಿಷಯವಾಗಿತ್ತು. 20 ಮಂದಿಯಲ್ಲಿ ಆಯ್ಕೆಗೊಂಡ ಐದು ಮಂದಿಯಲ್ಲಿ, ನನ್ನ ಹೆಸರಿದ್ದು ಅಂತಿಮ ಸುತ್ತಿನ ಸಂದರ್ಶನಕ್ಕೆ ಅರ್ಹತೆ ಗಳಿಸಿದ್ದೆ. ಅದೇದಿನ ಅಪರಾಹ್ನ ಸಂದರ್ಶನ. ಶರತ್ಚಂದ್ರನೂ ಬಂದಿದ್ದನಾದರೂ, voice testನಲ್ಲಿ ಫೇಲಾಗಿದ್ದ. ಹೀಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ಸಿಗದ ಸಹ ಅಭ್ಯರ್ಥಿಗಳು ಶಾನಿಯೇ ಆಯ್ಕೆಯಾಗಲಿ ಅಂತ ಹಾರೈಸಿ ಹೋಗಿದ್ದರು. ಶರತ್ಚಂದ್ರ ಸ್ವಲ್ಪ ಹೆಚ್ಚೇ ಹಾರೈಸಿದ್ದ. ಮುಕ್ಕಾಲು ಗಂಟೆ ಸಂದರ್ಶನ ಮಾಡಿದ್ದರು. ಅದಾಗ ಓದು ಮುಗಿಸಿದ್ದೆ ಅಷ್ಟೆ ನೋಡಿ, ಉತ್ಸಾಹದ ಮೂಟೆಯಾಗಿದ್ದ ನಾನು ಅದಮ್ಯ ಆತ್ಮವಿಶ್ವಾಸದಲ್ಲಿ ಪ್ರಶ್ನೆಗಳನ್ನು ಎದುರಿಸಿ ಕಂಡಾಪಟ್ಟೆ ಉತ್ತರ ಕೊಟ್ಟಿದ್ದೆ.
ಸಂದರ್ಶನ ಮುಗಿಸಿ ತೆರಳುವ ವೇಳೆಗೆ ಅನಿತ ಮತ್ತು ಇತರ ಗೆಳತಿಯರು ನಗುವಿಗೇನಾದರೂ ಹೊಸ ಸರಕಿದೆಯಾ ಎಂಬಂತೆ ಕಾಯುತ್ತಿದ್ದರು. ಜ್ಯೋತಿ ಮಾತ್ರ ಗಂಭೀರವಾಗಿ, ನಿಂಗೆ ಅರ್ಹತೆ ಇತ್ತೂ ಅಂತ ನೀನು ಧ್ವನಿಪರೀಕ್ಷೆಯಲ್ಲಿ ಪಾಸಾಗಿಲ್ಲ. ಸ್ನೇಹಿತೆಯೆಂಬ ದಾಕ್ಷಿಣ್ಯಕ್ಕೆ ನಿನ್ನ ಗೊರಗೊರ ಧ್ವನಿಯನ್ನು ಸುಮಧುರ ಅಂತ ನಾವು ಸಹಿಸಿಕೊಳ್ಳುತ್ತೇವೆ. ಆದರೆ ಅನಾಫಿಲೀಸನ್ನು ಸಿಫಿಲೀಸ್ ಅಂತ ಬರೆದವರ್ಯಾರು ಎಂಬ ನಿನ್ನ ಮೂತಿ ನೋಡುವ ಒಂದೇ ಉದ್ದೇಶದಿಂದ ನಿನ್ನನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆಂದಳು!! (ಇರಬಹುದಾ?)
ನನಗೂ ಸೊಳ್ಳೆಗೂ ಸೇಮ್ ಸಂಬಂಧ! ಎಲ್ಲರೂ ಸೊಳ್ಳೆ ಹೊಡೆಯಲು ಪಡುವ ಕಷ್ಟ ನೋಡಿದರೆ ನಗು ಬರುತ್ತಿತ್ತು. ಪಟ್ ಪಟ್ ಎಂದು ಬರೀ ತಮ್ಮ ಕೈಗೇ ಹೊಡೆದು ಕೊಳ್ಳುತ್ತಿರುವಾಗ, ನಾನು ಕೇವಲ ಒಂದೇ ಲಬಕ್ ಎಂದು ಹಿಡಿದು ಹೊಸಕಿ ಹಾಕುತ್ತಿದ್ದೆ:D.
ಪ್ರತ್ಯುತ್ತರಅಳಿಸಿನಿಮ್ಮ ಬರಹ ಸಕತ್ತಾಗಿದೆ:)
ನಮಸ್ತೆ ನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನಮ್ಮದು ಸಮಾನ ಸಂಬಂಧ ಅಂದ ಹಾಗಾಯಿತು. ಸೊಳ್ಳೆ ಹೊಸಕಾಟಕ್ಕೆ ನಿಮ್ಮ ಬಳಿ ತರಬೇತಿ ಪಡೆಯೋಣಾ ಅಂತಿದ್ದೇನೆ. ಏನಂತೀರಿ...:)