ಶುಕ್ರವಾರ, ಏಪ್ರಿಲ್ 11

ಕಂಕುಳಡಿಯಲಿ ಇಟ್ಟು ನಡೆದಳು...

ಗಜಮೂಖದವಗೇ..... ಗಣಪಗೇ.... ಶುರುವಾದರೂ ಅವ್ವನ ಹೊರಡಾಟ ಮುಗಿಯುತ್ತಿರಲೇ ಇಲ್ಲ। ಜಯಂತ್ಯಕ್ಕ ಬೆಳಿಗ್ಗೆಯಿಂದಲೇ ಗಿಡದಿಂದ ಕೊಯ್ದು ಕಟ್ಟಿದ ಅಬ್ಬಲ್ಲಿಗೆ(ಕನಕಾಂಬರ) ಹೂವಿನ ಮಾಲೆಯನ್ನು ಒಂದಿನಿತು ಹೆಚ್ಚು ಕಮ್ಮಿಯಾಗದಂತೆ ಹೊರಟು ರೆಡಿಯಾಗುತ್ತಿರುವ ಎಲ್ಲಾ ಹೆಣ್ಣು ತಲೆಗಳಿಗೂ ಸಮನಾಗಿ ಹಂಚುತ್ತಿದ್ದರೆ, ಗಾಯತ್ರಕ್ಕ ಇದ್ದುದರಲ್ಲಿ ಒಳ್ಳೆಯ ಚಾಪೆಯ ಆಯ್ಕೆ ಮಾಡುತ್ತಿದ್ದಳು. ದೊಡ್ಡಕ್ಕನಿಗೆ ನಮ್ಮ ವೇಷ - ಭೂಷಣಗಳ ಮೇಲ್ವಿಚಾರಣೆ....


ಇದು ನಮ್ಮೂರಲ್ಲಿ ಯಾವುದಾದರೂ ಮೇಳದವರು ವರ್ಷಕ್ಕೊಮ್ಮೆ ಹಾಕ್ಕೊಳ್ಳುತ್ತಿದ್ದ ಯಕ್ಷಗಾನ ಕಾರ್ಯಕ್ರಮದಂದು ನಮ್ಮ ಮನೆಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮ। ವರ್ಷಕ್ಕೊಂದಾವರ್ತಿಯ ನಮ್ಮೂರ ಏಕೈಕ ಮನರಂಜನೆಯಾದ ಯಕ್ಷಗಾನ ಇದೆ ಎಂದರೆ ನಮ್ಮಪ್ಪನ ಮುಖದಲ್ಲಿ ಕೋಪ ದಿಗಿಣಗುಟ್ಟುತ್ತಿತ್ತು. ನಾಟಕ, ಯಕ್ಷಗಾನ ಮುಂತಾದುವುಗಳಲ್ಲಿ ಆಸಕ್ತಿಯೇ ಇಲ್ಲದ ಅವರಿಗೆ "ಇವರೆಲ್ಲ(ಯಕ್ಷಗಾನದವರು) ಜನರೆಲ್ಲ ಮರುಳು ಮಾಡಲು ಬರುವವರು" ಎಂಬ ತಾತ್ಸಾರ. ಯಕ್ಷಗಾನವಿದ್ದರೆ ನಾವೆಲ್ಲ ಕಾಲಿಗೆ ಗೆಜ್ಜೆಕಟ್ಟಿಯೇ ಸಿದ್ಧ ಎಂದು ಗೊತ್ತಿರುವ ಅವರು, ಬೆಳಗ್ಗಿನಿಂದಲೇ ವಿನಾಕಾರಣ ಸಿಡಿಮಿಡಿಗುಟ್ಟಲಾರಂಭಿಸುತ್ತಾರೆ. ಅತ್ತ ಗಂಡನ ಕೋಪ, ಇತ್ತ ಮಕ್ಕಳ ಹಠದ ನಡುನೆ ಸಿಲುಕಿದ ಅವ್ವ, ಹೆದರಿಹೆದರಿ ಬೆದರಿ, ಅಪ್ಪನ ಬಳಿ, ಮಕ್ಕಳು ಆಟಕ್ಕೋಗಬೇಕೆನ್ನುತ್ತಾರೆ (ಯಕ್ಷಗಾನಕ್ಕೆ ಆಟ ಅನ್ನುವುದು ರೂಢಿ) ಎನ್ನುತ್ತಾ ಪರ್ಮಿಶನ್ ಕೇಳುತ್ತಾರೆ. ಇದಕ್ಕೆಂದೇ ಕಾಯುತ್ತಿದ್ದ ಅಪ್ಪ, ತನ್ನ ಉದ್ದ ಮೂಗನ್ನು ಇನ್ನಷ್ಟು ನೇತಾಡಿಸಿ, ನಮಗೂ, ಯಕ್ಷಗಾನ ಮೇಳಕ್ಕೂ ಇನ್ನಿಲ್ಲದಂತೆ ಚೆನ್ನಾಗಿ ಬಯ್ದು, ಹೋಗಿ ಸಾಯಿರಿ ಅನ್ನುತ್ತಾ ದುಡ್ಡು ಕೊಡದೆ ಪರ್ಮಿಶನ್ ಕೊಡುತ್ತಾರೆ. ನಾವಾದರೋ, ಗೇರುಬೀಜ, ಬಿದ್ದಆಡಿಕೆ, ಅಂಟುವಾಳಕಾಯಿ ಮುಂತಾದುವುಗಳನ್ನು ಸಂಗ್ರಹಿಸಿ ಮಾರಿದ ದುಡ್ಡನ್ನು ಒಟ್ಟುಗೂಡಿಸಿ ಯಕ್ಷಗಾನ ನೋಡಲು ಹೊರಟೇ ಹೊರಡುತ್ತೇವೆ.


ಬೆಳಿಗ್ಗೆಯೇ ಯಕ್ಷಗಾನದ ಪೀಠೋಪಕರಣ, ದಿರಿಸು, ಸಾಮಾನು-ಸರಾಂಜಾಮು ಹೇರಿಕೊಂಡು ಬರುವ ಲಾರಿ ಮೈಕ್ ಕಟ್ಟಿಕೊಂಡೇ ಬರುತ್ತದೆ। ಆ ಶಬ್ದ ಕೇಳಿದ ತಕ್ಷಣ ಊರಿಗೆ ಊರೇ ಪುಳಕಗೊಳ್ಳುತ್ತಿತ್ತು. ಯಾವಾಗೊಮ್ಮೆ ರಾತ್ರಿಯಾಗಲಿಲ್ಲ ಎಂಬ ಕಾತರ ನನ್ನಂತೂ ಕಾಡುತ್ತಿತ್ತು. ಮೂರುಗಂಟೆಗೆ ಬಿಸಿನೀರಿಗೆ(ನೀರೊಲೆಗೆ) ಬೆಂಕಿಹಾಕುವಲ್ಲಿಂದ ಯಕ್ಷಗಾನಕ್ಕೆ ಹೊರಡಲಾರಂಭ. (ನಮ್ಮ ಹಳ್ಳಿಗಳಲ್ಲೆಲ್ಲ ಸಂಜೆವೇಳೆ ಸ್ನಾನ) ದೊಡ್ಡಕ್ಕ ಅಡಗಿಸಿಡುತ್ತಿದ್ದ ಚಂದ್ರಿಕಾ ಸೋಪನ್ನು ಕದ್ದು, ಎರಡೆರಡು ಬಾರಿ ತಿಕ್ಕಿ ಸ್ನಾನಮಾಡಿ ಹೊರಡುವುದೆಂದರೆ ಖುಷಿಯೋ ಖುಷಿ. ಸಾಯಂಕಾಲವಾಗುತ್ತಲೇ ಮೈಕ್ ಜೋರುಜೋರಾಗುತ್ತದೆ. ಅಂದು ಅಡುಗೆ, ಊಟ ಎಲ್ಲ ಬೇಗಬೇಗ. ಏಳುಗಂಟೆಯ ವೇಳೆಗೆ ಕೇಳಿ ಹೊಡೆಯಲು ಆರಂಭಿಸಿ ಚೆಂಡೆಗೆ ಪೆಟ್ಟು ಬಿತ್ತೆಂದರೆ ನನ್ನ ಕಾಲು ನೆಲದಮೇಲೆ ನಿಲ್ಲುತ್ತಿರಲಿಲ್ಲ.


ಈ ಅವ್ವಂದು ಎಷ್ಟು ಹೊರಟರೂ ಮುಗಿಯುತ್ತಿರಲಿಲ್ಲ। ಅಪರೂಪಕ್ಕೆ ಮನೆಯಿಂದ ಹೊರಡುವ ಅವರಿಗೆ ತಲೆ ಬಾಚಿದಷ್ಟೂ ಸಮಾಧಾನವಿಲ್ಲ. ತಲೆಕಟ್ಟಕ್ಕೆ ಹೇಗೇಗೆ ಹುದುರಿ ಹಾಕಿದರೂ, ಮುಳ್ಳು ಚುಚ್ಚಿದರೂ ಅದು ಸೊಟ್ಟವೇ ಆಗುತ್ತದೆ ಎಂಬುದು ಅವರ ಅನಿಸಿಕೆ. ಈ ಮಧ್ಯೆ ನಾಯಿ ಅನ್ನತಿನ್ನದಿದ್ದರೆ, ಬೆಕ್ಕು ಬರದೇ ಇದ್ದರೆ, ರಾತ್ರಿಯ ಊಟದ ಬಳಿಕ ಉಳಿಯುವ ಸಾರು ಪದಾರ್ಥಗಳನ್ನು ಚೆನ್ನಾಗಿ ಕುದಿಸದೇ ಇದ್ದರೆ ಅವರ ತಲೆಬಿಸಿಯೇ ಬೇರೆ. ಮುಖಕ್ಕೆ ಢಾಳಾಗಿ ಮೆತ್ತುವ ಕುಟ್ಟಿಕೂರ ಪೌಡರನ್ನು ಬಟ್ಟೆಯಲ್ಲಿ ತಿಕ್ಕಿತಿಕ್ಕಿ ಮುಖ ನೋಯಿಸಿಕೊಳ್ಳುತ್ತಿದ್ದರು ಪಾಪ. (ಇಲ್ಲವಾದರೆ ದೊಡ್ಡಕ್ಕ ಇದೆಂತದು, ಬೂದಿ ಮೆತ್ತಿದಾಂಗೆ ಅಂತ ಬಯ್ತಾಳಲ್ಲ)


ಚೆಂಡೆಸದ್ದು ಕೇಳಿದ ತಕ್ಷಣ ಯಕ್ಷಗಾನ ಆರಂಭವಾಗೇ ಹೋಯಿತೆನ್ನುವ ನನಗೆ ಅವರ ಮೇಲೆ ಕೆಟ್ಟ ಸಿಟ್ಟು ಬರುತ್ತಿತ್ತು॥ ಕೇಳಿಹೊಡೆದಾಗಿ, ಗಜಮೂಖದವಗೇ...... ಆಗಿ, ಚಿಕ್ಕಪ್ರಾಯದ ಬಾಲೆ.... ಶುರುವಾದರೂ ಹೊರಟಾಗುತ್ತಿರಲಿಲ್ಲ। ಮನೆಯ ಸಮೀಪವೇ ಇರುವ ಶಾಲೆಯ ಮೈದಾನದಲ್ಲೇ ಆಟ. ಗಾಯತ್ರಕ್ಕನೂ ಅವ್ವನ ಮೇಲೆ ಸಿಡಿಮಿಡಿಗುಟ್ಟುತ್ತಿದ್ದಳು. ಯಾಕೆಂದರೆ ನಮ್ಮ ಬಜೆಟ್ಟಿಗೆ ನಿಲುಕುವುದು ಎರಡು ರೂಪಾಯಿ ಟಿಕೆಟ್ಟು. ಈ ಟಿಕೆಟಿಗೆ ಯಾವುದೇ ಆಸನಗಳಿಲ್ಲ. ನೆಲದ ಮೇಲೇ ಕುಳಿತುಕೊಳ್ಳಬೇಕು. ರಾತ್ರಿಯಿಡೀ ಬರಿಯ ನೆಲದ ಮೇಲೆ ಕುಳಿತು (ಮಲಗಿ) ಆಟ ನೋಡುವಾಗ ಕಲ್ಲೊತ್ತುತ್ತದೆಯೆಂದು ಚಾಪೆ ಒಯ್ಯುತ್ತಿದ್ದೆವು. ಅದನ್ನು ಹಾಸಿ ಕುಳಿತುಕೊಳ್ಳಲು, ತಡವಾದರೆ ಆಯಕಟ್ಟಿನ ಜಾಗ ದೊರೆಯದು ಎಂಬುದು ಅವಳ ಕಳವಳ.


"ಚಿಕ್ಕ ಪ್ರಾಯದ ಬಾಲೆ ಚದುರೇ......" ಅಂತ ಭಾಗವತರು ಶುರುವಿಟ್ಟುದು ಮೈಕ್‌ನಲ್ಲಿ ಕೇಳಿದ ತಕ್ಷಣ, ಚಿಕ್ಕ ಪ್ರಾಯದ ಬಾಲೆಯಾದ ನನ್ನ ಮೇಲೆಯೇ ನನಗೆ ಕೋಪವುಕ್ಕುತ್ತಿತ್ತು। ಸ್ವಲ್ಪ ದೊಡ್ಡ ಪ್ರಾಯದ ಬಾಲಕ ನಾನಾಗುತ್ತಿದ್ದರೆ, ಇವರ್ಯಾರ ಹಂಗಿಲ್ಲದೇ ನನ್ನಷ್ಟಕೇ ನಾನು ಆಟ ನೋಡಲು ಹೋಗುತ್ತಿದ್ದೆ. ಛೇ.... ಅವ್ವ ಒಂದು, ಹೀಗೆ ಸಿಟ್ಟು ಮಾಡಿಕೊಂಡು ಅತ್ತು, ಜಗಳವಾಡಿ, ಹಾಗೂಹೀಗೂ ಕೊನೆಯ ಬಾರಿಗೊಮ್ಮೆ ಸೀರೆಯ ನೆರಿಗೆಯನ್ನು ಬಗ್ಗಿ ನೋಡಿ, 'ಹುಂ ಹೊರಡುವಾ' ಅಂತ ಸೂಟೆಗೆ ಬೆಂಕಿ ಇಕ್ಕುವಾಗ ಆತುರ, ಕಾತುರ, ನಿರಾಶೆ, ಕೋಪ, ದುಃಖದಿಂದ ಹೈರಾಣಾಗಿರುತ್ತಿದ್ದೆ.


ಆದರೂ, ಅವ್ವ ನಮಗೆಲ್ಲ ದಾರಿ ಕಾಣಲಿ ಎಂಬುದಾಗಿ ಹಿಡಿಯುತ್ತಿದ್ದ ಮಡಲಿನ ಸೂಟೆ(ತೆಂಗಿನ ಗರಿಯದೊಂದಿ)ಯ ಬೆಳಕಿನಲ್ಲಿ, ಪೆಟ್ಟಿಗೆಯೊಳಗಿಡುವ ಕರ್ಪೂರದ ಘಮಬೀರುವ ಅಂಗಿಯ ನೆರಿಗೆಯಾಡಿಸಿಕೊಂಡು, ನನ್ನ ಮುಂದಕ್ಕೆ, ಒಮ್ಮೊಮ್ಮೆ ಉದ್ದವಾಗಿ, ಗಿಡ್ಡವಾಗಿ ನನ್ನೊಂದಿಗೆ ಸ್ಫರ್ಧಿಸುತ್ತಿದ್ದ, ನನ್ನದೇ ನೆರಳನ್ನು ಓಡಿಸುವಂತೆ ನಡೆಯುತ್ತಿದ್ದೆ। ಗಾಯತ್ರಕ್ಕ ಕಂಕುಳಡಿಯಲ್ಲಿ ಚಾಪೆ ಇರಿಸಿಕೊಂಡು ಯಾವಾಗ ಜಾಗ ಸೆಲೆಕ್ಟ್ ಮಾಡಿ ಇದನ್ನು ಹಾಸಿಯೇನೂ ಎಂಬ ಧಾವಂತದಲ್ಲಿ ನಡೆಯುತ್ತಿದ್ದಳು. ಅವಳು ಚಾಪೆ ಹಿಡಿದು ನಡೆವ ಆ ಭಂಗಿ ನೆನಪಿಸಿಕೊಂಡರೆ, ಈಗ ನನಗೆ ಕೈಲಿ ಜಾಗಟೆ ಹಿಡಿದು ಭಾಗವತಿಯಾಗಿ "ಕಂಕುಳಡಿಯಲಿ ಇಟ್ಟು ನಡೆದಳು ಸುರುಳಿ ಸುತ್ತಿದ ಒಲಿಯ ಚ್ಹಾಪೆಯ್ಹಾ....." ಎಂಬುದಾಗಿ ಹಾಡಬೇಕೆಂದು ಟೆಮ್ಟ್ ಆಗುತ್ತದೆ. ಸಾಧು ಸ್ವಭಾವದ ಜಯಂತ್ಯಕ್ಕ, ಅವಸರದಲ್ಲಿ ಓಡುವ ನನ್ನ ಕೈ ಹಿಡಿದುಕೊಳ್ಳಲು ಬರುತ್ತಿದ್ದಳು. ದೊಡ್ಡಕ್ಕ ಮಾತ್ರ ನಮ್ಮೆಲ್ಲರ ಮೇಸ್ತ್ರಿಯಂತೆ, ಘನಗಾಂಭೀರ್ಯದಲ್ಲಿ, ಕೈಯಲ್ಲಿ ಪರ್ಸು ಹಿಡಿದು ಹದಾ ಗತ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದಳು.


ಜನ್ರೇಟರ್ ಸಹಾಯದಿಂದ ಉರಿವ ಸಾಲಾಗಿ ಕಟ್ಟಿದ ಟ್ಯೂಬುಲೈಟುಗಳ ಬೆಳಕು ಕಾಣುತ್ತಲೇ ಬೆಂಕಿ ನಂದಿಸಿ ಸೂಟೆ ಬಿಸಾಡುತ್ತಿದ್ದೆವು। ಆ ಲೈಟುಗಳ ಬೆಳಕು ಮೈಮೇಲೆ ಬೀಳುತ್ತಲೇ ಅನಿವರ್ಚನೀಯ ಆನಂದ ಉಂಟಾಗುತ್ತಿತ್ತು. ಒಂದು ಸ್ವಲ್ಪ ನಾಚಿಕೆ, ಮುಜುಗರ, ಸಂಕೋಚ ಎಲ್ಲ ಏಕಕಾಲಕ್ಕೆ ಮಿಳಿತಗೊಂಡು ಎಲ್ಲರೆದುರು ಹೆಜ್ಜೆ ಹಾಕಲೇ ಕಷ್ಟವೆನ್ನುವ ಪರಿಸ್ಥಿತಿ. ಅಂತೂ ಡೇರೆಯ ಒಳಗೆ ಹೋಗಿ ಕುಳಿತು ರಂಗಸ್ಥಳ ನೋಡಿದಾಗಲೇ ಸಮಾಧಾನ.


ರಂಗಸ್ಥಳದಲ್ಲಿ ಕೋಡಂಗಿ ಕುಣಿತ, ಸ್ತ್ರೀ ವೇಷ ಕುಣಿತಗಳೆಲ್ಲ ಮುಗಿದು, ಒಡ್ಡೋಲಗದ ಹೊತ್ತಿಗೆ ನಾನು ಮೆಲ್ಲ ನಿದ್ರೆಗೆ ಜಾರುತ್ತಿದ್ದೆ। ಇದು ಎಚ್ಚರಾವಾಗುವುದು ಒಂದೋ ರಾವಣನ(ಎಲ್ಲ ಬಣ್ಣದ ವೇಷವೂ ನನಗಾಗ ರಾವಣನೇ) ಪ್ರವೇಶದ ಸಂದರ್ಭದಲ್ಲಿ. ಯಾಕೆಂದರೆ, ಬಿರುಸಿನ ಚೆಂಡೆ, ಅವಸರದ ಮದ್ದಳೆ, ಇದಕ್ಕೆ ಸರಿಹೊಂದುವ ಚಕ್ರತಾಳ, ಭಾಗವತರ ಜಾಗಟೆಯ ಜೋರಿನೊಂದಿಗೆ ರಾವಣನ ಅಟ್ಟಹಾಸಕ್ಕೆ ಆಗಷ್ಟೆ ಎಚ್ಚರಗೊಂಡು ನಿದ್ದೆಯ ಮಂಪರಿನಲ್ಲೇ ಇರುತ್ತಿದ್ದ ನನ್ನಂಥವರಿಗೆ ಒಂದು ರೀತಿಯ ಕುತೂಹಲ ಮಿಶ್ರಿತ ಭಯವಾಗುತ್ತಿತ್ತು. ರಾವಣನ ಕಿರುಚಾಟಕ್ಕೆ ಮೈಯೀಡೀ ಕಂಪನ. ಅದು ದೇವಿಮಹಾತ್ಮೆ ಆಟವಾದರೆ ಮುಗಿಯಿತು. ಮಹಿಷಾಸುರ ಆರ್ಭಟಿಸುತ್ತಾ, ಸಭೆಯಲ್ಲಿ ಬೆಂಕಿಯೊಂದಿಗೆ ಆಟವಾಡುತ್ತಾ ಬರುವಾಗ ಕುಳಿತಲ್ಲಿಂದ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದೆವು. ಜಯಂತ್ಯಕ್ಕ ನನ್ನನ್ನು ಅವಚಿ ಹಿಡಿದುಕೊಂಡರೆ, ಗಾಯತ್ರಕ್ಕನಿಗೆ ಎಲ್ಲರೂ ತುಳಿದು ಚಾಪೆ ಹಾಳಾದೀತ ಎಂಬ ಚಿಂತೆ.


ನಿದ್ದೆಯಿಂದ ಎಚ್ಚರವಾಗುವ ಇನ್ನೊಂದು ಸಂದರ್ಭವೆಂದರೆ ಆಯಿಸಗಾರನ (ಹಾಸ್ಯಗಾರನಿಗೆ ನಮ್ಮ ವರ್ಷನ್!) ಪ್ರವೇಶ. ಜಯಂತ್ಯಕ್ಕ ಆಯಿಸಗಾರ ಬಂದ, ಏಳುಏಳು ಅಂತ ಎಬ್ಬಿಸುತ್ತಿದ್ದಳು. ಇಲ್ಲವಾದರೆ, ಮರುದಿನ ಅವರೆಲ್ಲ, ಹಾಸ್ಯಗಾರನ ಡಯಲಾಗ್‌ಗಳನ್ನು ಹೇಳುತ್ತಾ ರಸಸ್ವಾದ ಮಾಡುವಾಗ ನನ್ನ್ಯಾಕೆ ಎಬ್ಬಿಸಿಲ್ಲಾಂತ ಕಿರಿಕಿರಿ ಮಾಡುತ್ತೇನಲ್ಲಾ....
ಯಕ್ಷಗಾನಕ್ಕೆ ಹೊರಡುವುದೇ ಗೌಜಿ. ಅಲ್ಲಿ ತಲುಪಿದ ಬಳಿಕ ರಾತ್ರಿಯಿಡೀ ಎಷ್ಟು ಯಕ್ಷಗಾನ ನೋಡುತ್ತೇನೆ ಬಿಡುತ್ತೇನೆ ಎಂಬುದು ಬೇರೆ ವಿಚಾರ. ಮುಕ್ಕಾಲು ಪಾಲು ನಿದ್ರೆ. ಬೆಳಗಿನ ಜಾವ 'ಮಂಗಳಂ' ಆದಬಳಿಕ ಯಕ್ಷಗಾನ ಸ್ಪೆಷಲ್ ಕೃಷ್ಣ ಬಂಟ್ರ ಹೊಟೇಲಿನಿಂದ ಗರಿಗರಿ ಈರುಳ್ಳಿ ಬಜ್ಜಿ ಕಟ್ಟಿಸಿಕೊಂಡು ಹೋಗಿ ಮನೆಯಲ್ಲಿ ಅಪ್ಪನಿಗೆ ಕೊಟ್ಟು, ನಾವು ಹಂಚಿ ತಿನ್ನುವಲ್ಲಿಗೆ ಆ ವರ್ಷದ ಯಕ್ಷಗಾನ ಸಂಭ್ರಮ ಮುಗಿದು ಕಣ್ಣುರಿಯ ಸಂಭ್ರಮ ಆರಂಭಗೊಳ್ಳುತ್ತದೆ.

4 ಕಾಮೆಂಟ್‌ಗಳು:

  1. ಸೂರ್ಯ ಕಂತುತ್ತಿದ್ದಂತೆ ಚೆಂಡೆಯ ಪೆಟ್ಟು ಕೇಳತೊಡಗುತ್ತದೆ. ನಮ್ಮ ಎದೆಯಲ್ಲೂ (ಯಕ್ಷಗಾನ) ಆಟಕ್ಕೆ ಹೋಗುವ ಡವಡವ ಉತ್ಸಾಹ, ಚಡಪಡಿಕೆ ಹೆಚ್ಚಿ ಮನಸ್ಸು ಹತೋಟಿ ಕಳಕೊಳ್ಳುತ್ತದೆ. ನೆನಪುಗಳು ಮತ್ತೆ ಸುಳಿದು ಬಂದವು. ಒಂದೊಂದು ಸಾಲುಗಳಲ್ಲೂ ಯಕ್ಷಗಾನ ಕುಣಿಯುತ್ತಿತ್ತು. ಉತ್ತಮ ಬರಹ.
    ಒಲವಿನಿಂದ
    ಬಾನಾಡಿ

    ಪ್ರತ್ಯುತ್ತರಅಳಿಸಿ
  2. ಯಾಬ್ಬಾ...

    ಇಷ್ಟೆಲ್ಲಾ ಕಷ್ಟಪಟ್ಟು, ವಾರವಿಡೀ ಸಂಭ್ರಮಿಸಿ, ಆಟ ನೋಡಲು ಹೋಗಿ, ಡೇರೆಯೊಳಗೆ ಸೇರಿಕೊಂಡು ಮಲಗಿ ಬಿಟ್ಟರೆ ಎಲ್ಲಾ ಆಟ ಮುಗಿದಂತೆಯಾ? ನನಗೆ ಗೊತ್ತೇ ಇರಲಿಲ್ಲ.

    ಇನ್ನು ಮುಂದೆ ನಾನೂ ಹಾಗೇ ಮಾಡುವೆ.... ಸುಮ್ಮನೆ ರಾತ್ರಿಯಿಡೀ ನಿದ್ದೆಗೆಡೋದು ಯಾಕೆ... ಅಲ್ವಾ?

    ಪ್ರತ್ಯುತ್ತರಅಳಿಸಿ
  3. ಹಾರಿ ಬಂದ ಬಾನಾಡಿಯವರಿಗೆ ಸ್ವಾಗತ. ಯಕ್ಷಗಾನದ ನೆನಪುಗಳು ಹಾಗೆ. ಮತ್ತೆಮತ್ತೆ ಕುಣಿಯುತ್ತಿರುತ್ತವೆ. ನಿಮ್ಮ ಪ್ರತಿಕ್ರಿಯೆಗೆ ಆಭಾರಿ.

    ಪ್ರತ್ಯುತ್ತರಅಳಿಸಿ
  4. ಅನ್ವೇಷಿಗಳೇ...
    ಸೌಖ್ಯನೋ? ಈ ಹಿಂದೆ ಆದರೆ ಪರವಾಗಿರಲಿಲ್ಲ. ಇನ್ನು ಮುಂದೆ ನೀವು ಅಂಚ ಮಲ್ಪುವ ಹಾಗಿಲ್ಲ. ಅಪಗ ಡೇರೆಯೊಳಗೆ ಸೇರಿಕೊಳ್ಳುವುದೇ ಮಲ್ಲ ವಿಷಯ.

    ಪ್ರತ್ಯುತ್ತರಅಳಿಸಿ