ಶುಕ್ರವಾರ, ಫೆಬ್ರವರಿ 15

ಅರ್ಥವಾಗದಿದ್ದ ಅಪ್ಪ!


ಅಪ್ಪ ತೀರಿಕೊಂಡು ಇಂದಿಗೆ ಮೂರು ವರ್ಷ.  ಅಪ್ಪ ಎಂದರೆ ಬರೀ ಕೋಪ, ದರ್ಪ ಅಷ್ಟೇ ಗೊತ್ತಿದ್ದಿದು ಬಾಲ್ಯದಲ್ಲಿ. "ಅಪ್ಪಾ .... ಐ ಲವ್ ಯು ಪಾ.... ಎಂದೆಲ್ಲ ಹೇಳಲು-ಹಾಡಲು ಅವಕಾಶವೇ ಇರಲಿಲ್ಲ. (ಗೊತ್ತೂ ಇರಲಿಲ್ಲ) ಹಾಗೆ ಹೇಳುತ್ತಿದ್ದರೆ "ನಿನ್ನ ನೊಣೆ ತಕಂಡ್ ನಡಿ ಇಲ್ಲಿಂದ" ಅಂತ ಬಯ್ದು ಅಥವಾ ಹೊಡೆದು ಕಳುಹಿಸುತ್ತಿದ್ದರೇನೋ. ಹಿರಿಮಗನಾಗಿದ್ದ ಅವರು, ಅವರ ಬಾಲ್ಯದಲ್ಲಿ ಅವರಿವರ ಮನೆಗಳಲ್ಲಿ ದನಗಳನ್ನು ಮೇಯಿಸಿ, ಇತರ ಕೆಲಸ ಮಾಡಿ ಹೊಟ್ಟೆ ಹೊರೆದು ಕುಟುಂಬಕ್ಕೆ ಆಧಾರವಾಗಿದ್ದರು. ಬಳಿಕ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಮೈ ಮುರಿದು ದುಡಿಯುವುದಷ್ಟೆ ಗೊತ್ತಿದ್ದು ಅವರಿಗೆ. ರೈತ ಅನ್ನದಾತ, ದೇಶದ ಬೆನ್ನೆಲೆಬು ಎಂಬುದೆಲ್ಲ ಗೊತ್ತೇ ಇರಲಿಲ್ಲ ಅವರಿಗೆ. ಸಾಲಾಗಿ ಹುಟ್ಟಿದ್ದ ಐದು ಮಕ್ಕಳು, ಬಂದು ಹೋಗುವ ನೆಂಟರಿಷ್ಟರ ಹೊಟ್ಟೆತುಂಬಿಸಿ ದಿನದೂಡುವುದೇ ಅವರ ಪ್ರಧಾನ ಉದ್ದೇಶವಾಗಿತ್ತು. ಮೊದಲ ಮಗುವೆಂಬ ಮಮಕಾರದಿಂದ ದೊಡ್ಡಕ್ಕ ಮತ್ತು ಗಂಡುಮಗುವೆಂಬ ಪ್ರೀತಿಗೆ ಅಣ್ಣನನ್ನು ಎತ್ತಿ ಆಡಿಸಿದ್ದಿರಬಹುದು. ಯಾವಾಗಲಾದರೂ ಅಪರೂಪಕ್ಕೊಮ್ಮೆ ಆಟಿ ತಿಂಗಳ ಜಡಿ ಮಳೆಯೆಡೆಯಲ್ಲಿ ಸೂರ್ಯನ ಬೆಳಕು ಕಂಡಂತೆ ನನ್ನನ್ನು 'ಏ ಚಂದುಕುಟ್ಟೀ....' ಅಂತ ಮುದ್ದಾಡಿರಬಹುದು ಅಷ್ಟೆ. ಅವರ ಅಪರೂಪದ ಪ್ರೀತಿ ಎಂದರೂ ನನಗೆ ದಿಗಿಲೇ. ಅವರ ಬಳಿ ಹೋಗುವುದೇ ಭಯ.

ಇಂತಿಪ್ಪ ಅಪ್ಪ ಊರಿಗೆ ಉಪಕಾರಿ. ಯಾರೇ ಬಂದು ಏನೇ ಕೇಳಿದರೂ ಒಂದು ಕೇಳಿದವರಿಗೆ ಎರಡು ಕೊಟ್ಟು ಕಳುಹಿಸುತ್ತಿದ್ದರು. ಅನಕ್ಷರಸ್ಥನಾದರೂ ಅಲ್ಲಿಇಲ್ಲಿ ಕರೆದವರ ಪಂಚಾತಿಕೆಗೆ, ನ್ಯಾಯತೀರ್ಮಾನಕ್ಕೆ ಹೋಗುತ್ತಿದ್ದರು. ಒಂದೆಡೆ ಸಿಟ್ಟಿನಿಂದ ಸಿಡಿಸಿಡಿ ಅಂದರೆ; ಇನ್ನೊಂದೆಡೆ ಅವರ ಓರಗೆಯವರು ಭಾವಂದಿರನ್ನೆಲ್ಲ ಕಂಡಾಗ, ಭೇಟಿಯಾಗಾದ ತಮ್ಮೊಳಗೆ ಹುದುಗಿದ್ದ ವಿಪರೀತವಾದ ಹಾಸ್ಯಪ್ರಜ್ಞೆ ಮೆರೆಯುತ್ತಿದ್ದರು. ಆವಾಗೆಲ್ಲ ಅವರು ಇತರರನ್ನು ನಗಿಸಿ ನಕ್ಕಾಗ ಅಪ್ಪನಿಗೆ ನಗಲೂ ಗೊತ್ತುಂಟು ಎಂಬುದೇ ನನಗೊಂದು ಕೌತುಕ. ಮನೆಯಲ್ಲಿ ನಮ್ಮೊಡನೆ ಸಲಿಗೆಯಿಂದ ಮಾತಾಡಿ ನಕ್ಕುಬಿಟ್ಟಲ್ಲಿ ಅವರ ಯಜಮಾನಿಕೆಯ ಘನತೆಗೆ ಕುಂದುಂಟಾಗುತ್ತಿತ್ತೋ ಏನೋ! ಅದ್ಭುತವಾದ ಬಾಣಸಿಗ. ಮದುವೆ, ಗೃಹಪ್ರವೇಶ, ಭೂತದ ಕೋಲ ಮುಂತಾದ ಸಮಾರಂಭಗಳ ಅಡುಗೆ ಜವಾಬ್ದಾರಿ ಇವರನ್ನು ಹುಡುಕಿ ಬರುತ್ತಿತ್ತು. ಸೋಮಯಣ್ಣನ ಅಡುಗೆ ಎಂದರೆ ಅದಕ್ಕೆ ಬೇರೆಯದೆ ರುಚಿ. ಆಗೆಲ್ಲ ಕೇಟರಿಂಗ್ ಸರ್ವೀಸ್‌ಗಳು ಇಲ್ಲದ ಕಾಲ. ಅಂತ ಸಂದರ್ಭದಲ್ಲಿ ಇವರದ್ದು ಕಾಂಪ್ಲಿಮೆಂಟರಿ ಸೇವೆ.

ಯಾವಾಗಲಾದರೂ ಮನಸ್ಸಾದರೆ, ಸಂತುಷ್ಟತೆಯಿಂದ ಇದ್ದಾಗ, ಅವರು ಕೇಳಿತಿಳಿದಿದ್ದ ಜಾನಪದ ಹಾಡುಗಳು, ದೇವಿಪೂಂಜನ ಸಂಧಿ, ಪಾಡ್ದಾನಗಳು, ನೇಜಿ ಹಾಡುಗಳನ್ನೆಲ್ಲ ಸುಶ್ರಾವ್ಯವಾಗಿ ಹಾಡುತ್ತಿದ್ದರು. ವಾದ್ಯಸಂಗೀತವೆಂದರೆ ಬಲುಇಷ್ಟ. ಅಪರೂಪಕ್ಕೆ ಯಾರಾದರೂ ಬಸವನನ್ನು ಕುಣಿಸಿಕೊಂಡು ಬಂದಾಗ ಅಥವಾ ಇನ್ನಾವುದಾದರೂ ಓಲಗದವರು ಯಾರಾದರೂ ಬಂದರೆ ಕುಳ್ಳಿರಿಸಿ ವಾದ್ಯ ಊದಿಸಿ ಕುಷಿಪಡುತ್ತಿದ್ದರು. ಅವರಪ್ಪ ತೀರಿಕೊಂಡಾಗ ಶವಸಂಸ್ಕಾರಕ್ಕೆ ವಾದ್ಯದವರನ್ನು ಕರೆಸಿದ್ದಂತೆ.

ಕನ್ನಡ ಮೀಡಿಯಂಗಳು ಫ್ರೀ ಎಜುಕೇಶನ್ ವ್ಯವಸ್ಥೆಯಲ್ಲೇ ನಾನು ಓದಿದ್ದರೂ, ಆರ್ಥಿಕ ಬಿಕ್ಕಟ್ಟೇ ಉದ್ದಕ್ಕೂ ಇದ್ದುದರಿಂದ ಬಸ್ ಪಾಸಿಗೆ ಹದಿನೈದು ರೂಪಾಯಿ ಕೇಳಲೂ ಹೆದರಿಕೆ. ಅಂಜಿಕೆಯಿಂದಲೇ ಕೇಳಿದಾಗ ನಡೆದು ಹೋಗಲೇನು ಕಾಲಿಗೆ ರೋಗ ನಿಮಗೆ (10 ಕಿ.ಮೀ ದೂರ) ಎಂದು ಬಯ್ದೇ ಹಣ ಕೊಡುತ್ತಿದ್ದರು. ಕಾಲೇಜು ಮುಗಿದ ಬಳಿಕ ನಾನು ಒಂದುವರ್ಷದ ಕೋರ್ಸೆಂದು ಸುಳ್ಳು ಹೇಳಿ ಎಂ.ಎಗೆ ಸೇರಿದ್ದೆ. ಇನ್ನೊಂದು ವರ್ಷ ಮುಂದುವರಿಸಬೇಕು ಎಂದಾಗಲೂ ಎಗಾದಿಗಾ ಉಗಿದಿದ್ದರು. ಆದರೆ, ಎಂ.ಎ ಉತ್ತೀರ್ಣಳಾದ ಬಳಿಕ, ಅವರಿಗೆ ನನ್ನ ಮಗಳು ತುಂಬ ಓದಿದ್ದಾಳೆಂದು ಹೆಮ್ಮೆ. ನಂತರದಲ್ಲಿ ಕೆಎಎಸ್ ಪರೀಕ್ಷೆ ಪಾಸಾಗಿದ್ದೇನೆಂದು ಹೇಳಿದ್ದಾಗ ಅದೇನೆಂದು ಗೊತ್ತಿಲ್ಲದಿದ್ದರೂ ದೊಡ್ಡ ಪರೀಕ್ಷೆ ಪಾಸುಮಾಡಿದ್ದಾಳೆಂದು ಅವರ ದೋಸ್ತಿಗಳಿಗೆ ಹೇಳುತ್ತಿದ್ದರು. (ಬ್ರಹ್ಮಾಂಡ ಭ್ರಷ್ಟಾಚಾರದ ವ್ಯವಸ್ಥೆಯಿಂದಾಗಿ ನಾನು ಕೆಎಎಸ್ ಪಾಸಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತ್ತು) ನಾನು ಮನಗೆ ಹೋಗುವಾಗೆಲ್ಲ ಅವರ ಕಣ್ಣಲ್ಲಿ ಹೊಳಪು ಕಾಣುತ್ತಿದ್ದೆ. ನಾನು ದುಡಿಯಲಾರಂಭಿಸಿದ ನಂತರದಲ್ಲಿ ಮನೆಗೆ ಹೋದಾಗ ಅವರ ಕೈಯಲ್ಲಿ ಅಷ್ಟಿಷ್ಟು ದುಡ್ಡುಕೊಟ್ಟು ಏನು ಬೇಕಾದರೂ ತಕ್ಕೊಳ್ಳಿ ಅಂತ ಹೇಳುತ್ತಿದ್ದೆ. ಎಂದಿಗೂ ನಿನ್ನ ಸಂಬಳವೇನು? ಹೇಗೆ ಖರ್ಚು ಮಾಡ್ತಿಯಾ ಎಂದೆಲ್ಲ ಒಂದು ಮಾತೂ ಕೇಳಿದವರಲ್ಲ. ದುಂದುವೆಚ್ಚ ಮಾಡಬೇಡ ಎಂದಷ್ಟೇ ಅವರು ಹೇಳುತ್ತಿದ್ದುದು.

ಅಕ್ಕಂದಿರ ವಿವಾಹ ವಿಳಂಬವಾದ ಕಾರಣ, ಮತ್ತು ಓದು, ಹಾಳುಮೂಳು ಪರೀಕ್ಷೆಗಳೆಂದು ಈಗಬೇಡ ಮತ್ತೆಬೇಡ ಎಂದು ನಾನು ಹೇಳುತ್ತಿದ್ದುದರಿಂದಲೂ ನನ್ನ ವಿವಾಹದ ವಯಸ್ಸು ಮೀರುತ್ತಿತ್ತು. ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಮ್ಮೆ ಮನೆಗೆ ಹೋಗಿ ಹೊರಟು ನಿಂತು ಅವರ ಕಾಲಿಗೆ ನಮಸ್ಕರಿಸಿದಾಗ "ನಿಂಗೆ ಅಲ್ಲಿ ಯಾರಾದರೂ ಇಷ್ಟವಾದರೆ ಮದುವೆಯಾಗು, ಈಗ ಜಾತಿನೀತಿ ಎಲ್ಲ ಇಲ್ಲ" ಎಂದರು.  ದೇಶ ಸುತ್ತದ ಕೋಶ ಓದದ ಅಪ್ಪನ ಬಾಯಲ್ಲಿ ಈ ಮಾತು ಕೇಳಿ ಬೆರಗಾಗಿ ಹೋಗಿದ್ದೆ.

ಬಳಿಕ ಸ್ನೇಹಿತೆಯೊಬ್ಬಳು ತಂದಿದ್ದ ಅಂತರ್ಜಾತಿ ಸಂಧಾನದ ಮದುವೆ ಮಾತುಕತೆಗೆ ಸಂತೋಷದಿಂದಲೇ ಒಪ್ಪಿದ್ದರು. ಎರಡೇ ವರ್ಷಕ್ಕೆ ನನ್ನ ಗಂಡ ತೀರಿಕೊಂಡಾಗ ಪುಟ್ಟಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದರು. ಮನೋಹರ ತೀರಿಹೋದ ಬಳಿಕ ಒಮ್ಮೆ ಮನೆಗೆ ಹೋಗಿ ಅವರ ರೂಮಲ್ಲಿ ಅವರ ಪಕ್ಕ ಕುಳಿತು ಮಾತನಾಡುತ್ತಿದ್ದಾಗ, "ಈಗ ನಿಂಗೊಂದು ಜನ ಆಗ್ಬೇಕಲ್ಲ" ಅಂತ ಇದ್ದಕ್ಕಿದ್ದಂತೆ ಇನ್ನೊಂದು ಮದುವೆ ಆಗು ಅಂತ ಅವರು ಹೇಳಿದಾಗ ನಾನು ಮತ್ತೊಮ್ಮೆ ಬೆರಗಾಗಿದ್ದೆ.
ಹೆಣ್ಣುಮಕ್ಕಳು ಹಾಗಿರಬೇಕು, ಹೀಗಿರಬೇಕು ಎಂಬೆಲ್ಲ ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿತರಾಗಿದ್ದ ಕಾಲದಲ್ಲಿ ನಮ್ಮಪ್ಪ ನಾವು ಹೆಣ್ಣುಮಕ್ಕಳನ್ನು ಸೇರಿಸಿಕೊಂಡು ಗುಳಿಗನಿಗೆ ಅಗೇಲು ಹಾಕುತ್ತಿದ್ದರು. ನಂಗೆ ದೇವರು ಹೆಣ್ಣು ಮಕ್ಕಳನ್ನೇ ಕೊಟ್ಟದ್ದು, ಬನ್ನಿಮಕ್ಕಳೇ ಅಂತ ಗುಳಿಗನ ಕಲ್ಲಿನ ಬಳಿ ಕರೆದೊಯ್ಯುತ್ತಿದ್ದರು. ಇಲ್ಲವಾದರೆ ಹೆಣ್ಣುಮಕ್ಕಳಿಗೆ ಇದು ನಿಷಿದ್ಧ.
ಬರೀ ಅಪ್ಪನ ಸಿಟ್ಟಿನ ಮುಖವನ್ನೇ ಕಂಡಿದ್ದ, ಅಪ್ಪ ಅಂದರೆ ಬರೀ ಕೋಪ ಎಂದೇ ಅಂದುಕೊಂಡಿದ್ದ ನನಗೆ ಅವರ ಇನ್ನೊಂದು ಉದಾತ್ತ ಮುಖವನ್ನು ಗುರುತಿಸಲು ಬಹಳ ಸಮಯವೇ ಹಿಡಿದಿತ್ತು.

ಹುಲಿಯಂತೆ ಅಬ್ಬರಿಸುತ್ತಿದ್ದ, ಸಿಂಹದಂತೆ ಘರ್ಜಿಸುತ್ತಿದ್ದ ಅಪ್ಪ ನನ್ನಮ್ಮ ತೀರಿದ ಬಳಿಕ ಮೆತ್ತಗಾಗಿದ್ದರು. ಬಳಿಕ ಅಂಗಳದ ಬದಿಯಲ್ಲಿ ಬಿದ್ದು ಕಾಲಿಗೆ ಆದ ಗಾಯ ಅವರನ್ನು ತೀರಾ ಕಂಗೆಡಿಸಿತ್ತು. ಅಲೋಪತಿ ಔಷಧಿ ತಿಂದೇ ಗೊತ್ತಿಲ್ಲದಿದ್ದ ಅವರು ಕಾಲುನೋವಿಗಾಗಿ ಆಸ್ಪತ್ರೆ ವಾಸಿಯಾದಾಗ ತೀವ್ರ ಚಡಪಡಿಕೆಗೆ ಈಡಾಗಿದ್ದರು. ಕೆಲವೊಮ್ಮೆ ಚಿತ್ತ ಭ್ರಮಣೆಯಾದಂತೆ ವರ್ತಿಸುತ್ತಿದ್ದರು. ಗಾಯದ ವಾಸಿಗಾಗಿ ಮಾಡಿದ ಆಪರೇಶನ್ ಬಳಿಕ ಸಂಪೂರ್ಣ ಕುಸಿದು ಹೋದವರು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಕಾಲುನೋವು ಗುಣವಾಗದೇ ಸಂಪೂರ್ಣ ಹಾಸಿಗೆವಾಸಿಯಾಗಿ ಅಸಹಾಯಕರಾಗಿ ಹೋದರು. ಶ್ರವಣ ಶಕ್ತಿಯೂ ಇಂಗಿ ಹೋಗಿತ್ತು. ಕೊನೆಕೊನೆಯಲ್ಲಿ ನಮ್ಮನ್ನೆಲ್ಲ ಕಾಣುವಾಗ ಕಣ್ಣೀರು ಸುರಿಸುತ್ತಿದ್ದರು. ತೀರಿಕೊಳ್ಳುವ ನಾಲ್ಕುದಿನ ಹಿಂದೆ ಮನೆಗೆ ಹೋಗಿದ್ದೆ. ಕಿತ್ತಳೆ ಹಣ್ಣು ಸುಲಿದು ಬಾಯಿಗೆ ಕೊಟ್ಟಾಗ ಪುಟ್ಟಮಕ್ಕಳಂತೆ ಚೀಪಿಚೀಪಿ ತಿಂದಿದ್ದರು. ಅದೇ ಕೊನೆ. ನಾಲ್ಕು ದಿನದ ಬಳಿಕ ಅಪ್ಪನೆಂಬ ದೀರ್ಘಾಯುಷಿಯ ಅಧ್ಯಾಯ ಮುಗಿಯಿತು.

ಶುಕ್ರವಾರ, ಜೂನ್ 15

ಬುಧವಾರ, ಮೇ 16

ಮತದಾನ ಮಾಡಿಯೇ ಮಾಡಿದೆ!


ಏನೋ ಕೆಲಸ ನಿಮಿತ್ತ ಬೆಂಗಳೂರಲ್ಲಿದ್ದೆ. ಮೇ 11ರಂದು ಊರಿಗೆ ಬರಬೇಕೆಂದು 1018 ರೂಪಾಯಿ ಕಕ್ಕಿ ಎಸ್ಆರ್‌ಎಸ್ ರಾತ್ರಿ ಬಸ್ಸಲ್ಲಿ ಬುಕ್ ಮಾಡಿದ್ದೆ. ನಾನು ಟಿಕೆಟ್ ಬುಕ್ ಮಾಡಲು ಹೊರಟಾಗ ಯಾವ ಕೆಎಸ್ಆರ್‌ಟಿಸಿ ಬಸ್ಸಲ್ಲಿ ಸೀಟ್ ಇರಲಿಲ್ಲ. ಕೆಎಸ್ಆರ್‌ಟಿಸಿ ವೋಲ್ವೋ ಬಸ್ಸಲ್ಲಾದರೆ ನನ್ನೂರಿಗೆ ಟೆಕೆಟ್ ದರ 800 ರೂಪಾಯಿ ಒಳಗೆ. ಇತರೇ ಖಾಸಗಿ ಬಸ್‌‌ಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು ನೀಡಿದ ರಿವ್ಯೂ ನೋಡಿ ಇದ್ದುದರಲ್ಲಿ ಎಸ್ಆರ್‌ಎಸ್ ಬೆಟರ್ ಎಂಬ ತೀರ್ಮಾನಕ್ಕೆ ಬಂದಿದ್ದೆ. ಮೇ 11ರಂದು ರಾತ್ರಿಯ ಬೆಂಗಳೂರು ಮಳೆಯಿಂದಾಗಿ ಪ್ರೋಗ್ರಾಂ ಎಲ್ಲಾ ಉಲ್ಟಾಪಲ್ಟಾ. ಎಲ್ಲಾರು ಟ್ರೈ ಮಾಡಿದ್ದೇ ಮಾಡಿದ್ದು; ನನ್ನ ಸಮಯಕ್ಕೆ ಯಾವ ಕ್ಯಾಬೂ ದಕ್ಕಲಿಲ್ಲ. ಮಳೆ ನಿಂತ ಬಳಿಕ ಹೇಳಿದ ಪಿಕಪ್ ಪಾಯಿಂಟಿಗೆ ತಲುಪಲು ವ್ಯವಸ್ಥೆ ಇರಲಿಲ್ಲ! ಬೇರೆ ಹತ್ತಿರದ ಪಿಕಪ್ ಪಾಯಿಂಟ್‌ಗೆ ಬರಬಹುದೇ ಮತ್ತು ಎಲ್ಲಿದೆಯೆಂದು ವಿಚಾರಿಸೋಣ ಎಂದು ಎಸ್ಆರ್‌ಎಸ್ ‌ಕಾಲ್ ಸೆಂಟರ್‌ನ ಮೂರು ನಂಬರ್‌ಗಳಿಗೆ ಫೋನ್ ಮಾಡಿದರೆ ಯಾವ ನಂಬರೂ ಎತ್ತುತ್ತಿಲ್ಲ. ಯಾವ ಕರ್ಮಕ್ಕೆ ನಂಬರ್ ಕೊಡ್ತಾರೋ... ರಿಸ್ಕ್ ತಗೊಂಡು ಎಲ್ಲೆಲ್ಲೋ ಹೋಗಿ, ಅತ್ತ ಬಸ್ಸು ಸಿಗದೆ, ಇತ್ತ ಬರಲಾಗದೆ ಇನ್ನೊಂದು ಸಮಸ್ಯೆಯಲ್ಲಿ ಸಿಲುಕೋದು ಬೇಡ ಅನ್ನಿಸ್ತು. ಗಂಟು ಮೂಟೆಯೊಂದಿಗೆ ಮಳೆಯನ್ನೇ ಅರ್ಧಗಂಟೆ ತದೇಕ ಚಿತ್ತದಿಂದ ವೀಕ್ಷಿಸಿ ಸಾವಿರದ ಹದಿನೆಂಟು ರೂಪಾಯಿ ಢಮಾರೆಂದು ದೊಡ್ಡದೊಂದು ನಿಟ್ಟುಸಿರು ಬಿಟ್ಟು ಸುಮ್ಮನಾಗೋದಷ್ಟೆ ಇದ್ದಿದ್ದ ಆಯ್ಕೆ. ಅದನ್ನೇ ಮಾಡಿದೆ.

ವೋಟ್ ಹಾಕಲೇ ಬೇಕೆಂಬ ತುಡಿತ ಒಳಗಿಂದ.. ಸುಳ್ಯ ತಾಲೂಕಿನ ಬಡ್ಡಡ್ಕದ ಮತಗಟ್ಟೆಗೆ ನಾನು ತಲುಪಬೇಕಾದರೆ ಬೇಕಾಗೋ ಸಮಯ ಲೆಕ್ಕ ಹಾಕಿ, ಮರುದಿನ ನಾಲ್ಕೂವರೆಗೆ ಎದ್ದು ಬೇಗ ಗಮ್ಯ ಸೇರೋ ಇರಾದೆಯಿಂದ ಅರ್ಧ ದಾರಿ ರೈಲಲ್ಲಿ ಕ್ರಮಿಸಿ ಮಿಕ್ಕರ್ಧ ಬಸ್ಸಲ್ಲಿ ಸಾಗೋಣ ಅಂತ ನಿರ್ಧರಿಸಿ ರೈಲು ನಿಲ್ದಾಣಕ್ಕೆ ಬಂದರೆ... ಅಬ್ಬಾ.. ಜನವೋ ಜನ.. ಕಾಯ್ದಿರಿಸದ ಟಿಕೇಟ್ ಕೌಂಟರಲ್ಲಿ ಅಕ್ಷರಶಃ ಹರ ಸಾಹಸ ಮಾಡಿ ಮೈಸೂರಿಗೆ ಟಿಕೆಟ್ ಪಡೆದಿದ್ದು... ಜನ್ಮದಲ್ಲಿ ಮೊದಲ ಅನುಭವ, ತಳ್ಳಾಟ, ನೂಕು ನುಗ್ಗಲು... ಕೈಯಲ್ಲೊಂದು ಹೆಣ ಭಾರದ ಬ್ಯಾಗು.. ಭುಜಕ್ಕೆ ನೇತು ಹಾಕಿದ ಲ್ಯಾಪ್‌ಟಾಪ್ ಬ್ಯಾಗು... ಬೆಳಗೆದ್ದು ಏನು ತಿನ್ನದೇ ಸರಿಯಾಗಿ ನೀರೂ ಕುಡಿಯದೇ ಹಸಿವು, ಬಾಯಾರಿಕೆ.. ಒಂದೂ ಚೂರು ಅಡಿತಪ್ಪಿ ನೆಲಕ್ಕೆ ಬಿದ್ದರೆ ಕಾಲ್ತುಳಿತ ಖಂಡಿತ... 

ಅಂಥಾದ್ದರಲ್ಲಿ ಸರಿಯಾದ ಸರತಿ ಸಾಲಿನ ಎಳೆ ಹಿಡಿದು ಟಿಕೇಟ್ ಪಡೆದು, ಜನರ ಮಧ್ಯೆ ದಟ್ಟ ಕಾಡಿನಲ್ಲಿ ನುಸುಳಿಬಂದಂತೆ ಹೊರಬಂದಾಗ, ನನ್ನನ್ನು ಟೈಮಿಗೆ ಸರಿಯಾಗಿ ರೈಲು ನಿಲ್ದಾಣಕ್ಕೆ ತಲುಪಿಸುವ ಜವಾಬ್ದಾರಿ ಹೊತ್ತ ಫ್ರೆಂಡ್ ನನ್ನ ಮೇಲಿನ ಕಾಳಜಿಯಿಂದ "ಹಾಗೇ ಮಾಡಬೇಕಿತ್ತು... ಹೀಗೆ ಮಾಡಬಾರದಿತ್ತು" ಅನ್ನುತ್ತಾ ಆಕ್ಷೇಪಿಸುವ ದಾಟಿಯಲ್ಲಿ.... ಲಘುವಾಗಿ ಜರೆಯುತ್ತಿದ್ದುದು... ನನ್ನ ಅಸಹನೆಗೆ ತುಪ್ಪ ಸುರುವಿ ಬೆಂಕಿ ಎಬ್ಬಿಸಿದಂತಾಗಿ, ಎಲ್ಲ ಸೇರಿ ಆ ಚಳಿಯಲ್ಲೂ ಬೆವರು ಹುಟ್ಟಿಸಿತು.
ಟಿಕೆಟ್ ಹಿಡಿದು ಯುದ್ಧ ಗೆದ್ದ ಸಂಭ್ರಮದಲ್ಲಿ ಮೆಟ್ಟಿಲುಗಳನ್ನು ಹತ್ತಿ ಇಳಿದು ಸರಿಯಾದ ಫ್ಲಾಟ್‌ಫಾರಂಗೆ ಬರಬೇಕಿದ್ದರೆ ರೈಲು ಶಿಳ್ಳೆ ಹಾಕುತ್ತಾ ನನಗೇ ಕಾಯುತ್ತಿದ್ದಂತೆ ನಾನು ಕಾಲಿಡುತ್ತಲೇ ಹೊರಟು ಬಿಟ್ಟಿತು. ಅದು ವೇಗ ದೂತವಾದ ಕಾರಣ ಮಂಡ್ಯದಲ್ಲಿ ಮಾತ್ರ ಒಂದೇ ನಿಲುಗಡೆ ಇತ್ತು. ನೀರಾದರೂ ತಗೊಳ್ಳೋಣ ಎಂದರೆ ಲೇಡಿಸ್ ಕಂಪಾರ್ಟ್‌ಮೆಂಟ್ ಪಕ್ಕ ಯಾವ ನೀರೂ ಚಾಯ್ ಕಾಫಿವಾಲಗಳೂ ಸುಳಿಯಲ್ಲಿಲ್ಲ... ಅದೃಷ್ಟವೇ... ಅಂದ್ಕೊಂಡು ಸುಮ್ಮನಾದೆ. 

ಈ ಮಧ್ಯೆ ಸಹ ಪ್ರಯಾಣಿಕರಿಬ್ಬ ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಭಯಂಕರವಾಗಿ ಬಯ್ದಾಡಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದು ನನ್ನ 'ಭಯಂಕರ ಅನುಭವದ' ಪಟ್ಟಿಗೆ ಸೇರಿತು. ಥೇಟ್ ಕಿರಗೂರ ಗಯ್ಯಾಳಿಗಳ ವರಸೆಯಲ್ಲಿದ್ದ ಅವರ ಜಗಳ ಲೈವ್ ಆಗಿ ಕಂಡು ನನ್ನ ಡಿಕ್ಷ್ನರಿ ಸಂಪತ್ಬರಿತವಾಯಿತು! (ಇಂಥಾ ಜಗಳವನ್ನು ಓದಿದ್ದೆ, ಸಿನಿಮಾದಲ್ಲಿ ನೋಡಿದ್ದೆ) ಕೊನೆಗೆ ಅವರನ್ನು ಸುಮ್ಮನಾಗಿಸಲು ಬೋಗಿಯಲ್ಲಿದ್ದವರೆಲ್ಲ (ನಾನೂ ಸೇರಿದಂತೆ) ತಮ್ಮ ತಮ್ಮ ಬುದ್ದಿಗಳನ್ನು ಯಥೇಚ್ಛವಾಗಿ ಖರ್ಚು ಮಾಡಿದೆವು.  ಒಬ್ಬರು ಚೈನ್ ಎಳೆದು ರೈಲನ್ನೇ ನಿಲ್ಲಿಸ ಹೊರಟರು, ನಾನು ಮೊಬೈಲ್ ಹಿಡ್ಕೋಂಡು ಟ್ರೇನ್ ಕಂಪ್ಲೇಟ್ ನಂಬರ್ ಹುಡ್ಕಿದೆ. ಅಂತೂ ಇಂತೂ ಆ ಇಬ್ಬರಿಗೂ ಸುಸ್ತಾಯಿತೇನೋ ಅರ್ಧದಾರಿ ಸಾಗುವಷ್ಟರಲ್ಲಿ, ಜೋರು ಮಳೆ ನಿಧಾನಕ್ಕೆ ನಿಲ್ಲುತ್ತಾ ಬಂದಂತೆ ಕ್ರಮೇಣ ಸುಮ್ಮನಾದರು.  ಮೊದಲೇ ಬಾಯಾರಿಕೆ ಹಸಿವು... ಇವರ ಜಗಳ ಅಸಹ್ಯಕರ ಭಾಷೆ, ಲೇಡೀಸ್ ಕಂಪಾರ್ಟ್‌ಮೆಂಟಲ್ಲಿ ರಾಜಾರೋಷವಾಗಿ ಹತ್ತಿಕುಳಿತು ದರ್ಬಾರ್ ಮಾಡುತ್ತಿದ್ದ ಗಂಡಸರು ಎಲ್ಲವನ್ನೂ ಕಂಡು ಹೊಟ್ಟೆ ತೊಳೆಸಿದಂತಾಯಿತು.

ಇಷ್ಟರಲ್ಲಿ ಬ್ಲೆಸ್ಸಿಂಗ್ ಇನ್ ಡಿಸ್‌ಗೈಸ್ ಎಂಬಂತೆ ರೈಲು ಮಾತ್ರ ಬಹು ಬೇಗ ಮೈಸೂರು ತಲುಪಿತು. ರೈಲು ನಿಲ್ದಾಣದಿಂದ ಫ್ರೀ ಪೇ ಆಟೋ ಹಿಡಿದು ಬಸ್ ನಿಲ್ದಾಣಕ್ಕೆ ಓಡೋಡಿ ಬಂದೆ. ಇದ್ದುದರಲ್ಲಿ ಸಮಾಧಾನ ಅಂದರೆ ಪ್ರೀ ಪೇ ಆದ ಕಾರಣ ಬರೀ ಇಪ್ಪತ್ತೈದೇ ರೂಪಾಯಿ... ಇಲ್ಲವಾದರೆ 40-50 ಪೀಕುತ್ತಿದ್ದರೇನೋ! ರಿಕ್ಷಾ ಇಳಿವಾಗ ಮಾಮೂಲಿಯಂತೆ ಥ್ಯಾಂಕ್ಸ್ ಅಂದೆ ರಿಕ್ಷಾ ಅಣ್ಣನಿಗೆ. ಅವನಿಗೆ 'ಚಿಕ್ಕ' ಬಾಡಿಗೆ ಸಿಕ್ಕ ನನ್ನ ಮೇಲೆ ಭಾರೀ ಕೋಪ ಬಂದಿರಬೇಕು. ಮುಖ ದುಮ್ಮಿಸಿಕೊಂಡಿದ್ದವನು ಅಂತಾ ಪ್ರತಿಕ್ರಿಯೆ ತೋರಿಲ್ಲ.

ಬಸ್ ನಿಲ್ದಾಣದ ಇನ್ನೊಂದು ಕೊನೆಯಲ್ಲಿ ನಮ್ಮೂರಕಡೆಯ ಬಸ್ಸುಗಳು ನಿಲ್ಲುವ ಕಾರಣ ಪುನಃ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಧಾವಂತದಿಂದ ಹೆಜ್ಜೆ ಹಾಕಿದೆ. ಒಂದು ಕಾಫಿಯನ್ನಾದರೂ ಕುಡಿಯೋಣ ಅಂತ ಲೆಕ್ಕ ಹಾಕುತ್ತಾ ಬಂದವಳಿಗೆ ಬಸ್‌ನಿಲ್ದಾಣದ ಮೈಕಿನ ದೊಡ್ಡ ಧ್ವನಿಯಲ್ಲಿ ಘೋಷಣೆ ಕಿವಿಗೆ ಬಿತ್ತು. ಚುನಾವಣಾ ಕಾರಣದಿಂದ ಬಸ್ಸುಗಳ ಸಂಖ್ಯೆಯಲ್ಲಿ ವಿಪರೀತ ಕೊರತೆ ಇದ್ದು ಪ್ರಯಾಣಿಕರು ಸಹಕರಿಸಬೇಕು... ಇದು ಕಿವಿಗೆ ಬೀಳುತ್ತಿದ್ದಂತೆ ನನ್ನ ನಡಿಗೆ ಇನ್ನೂ ಚುರುಕಾಯಿತು. ಅಷ್ಟರಲ್ಲೇ ಮಂಗಳೂರಿನ ಬೋರ್ಡ್ ಹೊತ್ತ ಬಸ್ಸು ಗರಗರ ಸದ್ದು ಮಾಡುತ್ತಾ ಹೊರಡಲಣಿಯಾಗುತ್ತಿತ್ತು. ಛೇ.... ಬಸ್ಸಿನ ಕೊರತೆಯಿಂದ ಸಹಕರಿಸಿ ಎನ್ನುವ ಕೆಎಸ್ಆರ್‌ಟಿಸಿಯ ಮನವಿಗೆ ಸ್ಪಂದಿಸಿ ಸಹಕರಿಸೋಣ ಎನ್ನುತ್ತಾ ಓಡಿ ಹೋಗಿ "ಸರ್ ಸರ್ ಒಂದು ನೀರು ತಗೊಂಡು ಬರ್ತೀನಿ" ಅಂತ ರಿಕ್ವೆಸ್ಟಿದೆ. ಬೇಗಬೇಗ ಟೈಮಾಯ್ತು ಅಂತ ಅವಸರಿಸಿದ ಡ್ರೈವರಣ್ಣ. ಪಕ್ಕದಲ್ಲಿದ್ದ ಅಂಗಡಿಯೊಂದರಲ್ಲಿ ಹೋಗಿ ಒಂದು ಲೀಟರ್ ನೀರು ಅಂದೆ. ನನ್ನ ಕೈಲಿದ್ದ ಪಚ್ಚೆ ಬಣ್ಣದ ನೋಟನ್ನು ಕಂಡ ಅವನು ಚಿಲ್ರೆ ಕೊಡಿ ಇಪ್ಪತ್ತು ರೂಪಾಯಿ ಅಂತ ಅತ್ತ ತಿರುಗಿದ. ಅಂಗಡಿಯ ನಾಲ್ಕೂ ಭಾಗಗಳಿಂದ ಆತ ಗ್ರಾಹಕರನ್ನು ವಿಚಾರಿಸಬಹುದಾದ ಕಾರಣದಿಂದ, ಚಿಲ್ಲರೆ ಇಲ್ಲದ ನನ್ನ ವ್ಯಾಪಾರವನ್ನು ಆತ 'ಚಿಲ್ಲರೆಯಾಗೇ' ಪರಿಗಣಿಸಿ ನನ್ನ ಯಾವ ಪ್ಲೀಸಿಗೂ ಮನ್ನಣೆ ಕೊಡಲಿಲ್ಲ. 

ಅವನಿಗೇನು ಗೊತ್ತು ನಾನು ಬೆಳಗ್ಗೆ ನಾಲ್ಕುವರೆಯಿಂದ ನೀರೂ ಮುಟ್ಟಿಲ್ಲ ಅಂತ... ಆತ ಎಷ್ಟು ನಿರ್ಲಕ್ಷದಿಂದ ವರ್ತಿಸಿದ ಅಂದರೆ ನನ್ನ ಕರೆ-ಮೊರೆ ಯಾವುದು ಲೆಕ್ಕಕ್ಕೇ ಬರಲಿಲ್ಲ. ನೀರನ್ನು ಎತ್ತಿಕೊಂಡು ಹಾಗೇ ಹೋಗಲೇ ಅನ್ನಿಸಿತು. ಆದರೆ ಹಾಗೇ ಮಾಡಿ ಅಭ್ಯಾಸ ಇಲ್ಲದ ಕಾರಣ ಮನಸೊಪ್ಪಲಿಲ್ಲ. ಇತ್ತಲಿಂದ ಕಂಡೆಕ್ಟರಣ್ಣ ಬೇಗ ಬನ್ನಿ ಅಂತ ಆವಾಜ್ ಹಾಕಿದಾಗ ಮೊದಲೇ ಬ್ಯಾಗುಗಳ ಭಾರದಿಂದ ಕಂಪಿಸುತ್ತಿದ್ದ ನಾನು ಮತ್ತಷ್ಟು ಕಂಪಿಸಿ ಹೋದೆ. ಈ ಬಸ್ಸು ಹೋಗಿ.. ನೆಕ್ಸ್ಟ್ ಬಸ್ಸ ಲೇಟಾಗಿ... ನಾನು ಊರಿಗೆ ತಲುಪಲಾಗದಿದ್ದರೆ .. ವೋಟ್ ಹಾಕಲಾಗದಿದ್ದರೆ... ಸಾಯ್ಲಾಚೆ ಬಸ್ಸು ಎಲ್ಲಾದರೂ ನಿಂತಾಗ ನೀರು ಕುಡಿಯೋಣ ಅಂತ ಓಡಿದೆ. ಪುಣ್ಯಕ್ಕೆ ಸೀಟು ಸಿಗ್ತು. 

ಆ ಬಸ್ಸಿಗೂ ನನ್ನಂಗೆ ಅವಸರ. ಬಸ್ಸು ನಿಂತಲೆಲ್ಲ ಡೈರೆಕ್ಟ್ ಸೀಟ್ ಯಾರು ಇಳಿಬೇಡಿ ಟೈಮಿಲ್ಲ... ಅಂತ ಕಂಡೆಕ್ಟರಣ್ಣ ಘೋಷಿಸಿಬಿಟ್ಟ. ಆಯ್ಯೋ ದೇವ್ರೇ.... ಬಸ್ಸಿನಲ್ಲಿದ್ದವರೆಲ್ಲ ನೀರು ಕುಡೀವಾಗ ಇವರೆಲ್ಲ ಎಷ್ಟು ಶ್ರೀಮಂತರು ಅನಿಸುತಿತ್ತು ಬಳಲಿ ಬೆಂಡಾಗಿ ಬಾಯಾರಿ ಹಸಿದಿದ್ದ ನನಗೆ. ನನ್ನ ಪಕ್ಕ ಕುಳಿತಿದ್ದ ಎಳೆ ಜೋಡಿಯೊಂದು ಭವಿಷ್ಯದ ಬಗ್ಗೆ ಪ್ಲಾನ್ ಹಾಕುತ್ತಿದ್ದುದು ಬೇಡವೆಂದರೂ ಕಿವಿಗೆ ಬೀಳುತ್ತಿದ್ದು, ಕೇಳುತ್ತಾ ಕುಳಿತಿದ್ದವಳಿಗೆ ಅಲ್ಲೇ ಮಂಪರು ಬಂದಂತಾಗಿ ಪಕ್ಕದಲ್ಲಿದ್ದ ಹುಡುಗಿಗೆ ಜೋಲಿ ಹೊಡೆದೆ ಕಾಣುತ್ತೆ. ಕಸಿವಿಸಿಗೊಂಡ ಅವಳು ಕೊಸರಿದಾಗ ಎಚ್ಚೆತ್ತ ನಾನು ಮತ್ತೆ ಜಾಗರೂಕತೆಯಿಂದ ಜಂಟಲ್ ವುಮನ್ ಆಗಿ ಕುಳಿತೆ. ನಿದ್ದೆ ಇಲ್ಲದೆ ನೀರಿಲ್ಲದೆ ಆಹಾರ ಇಲ್ಲದೆ, ಈ ಇಲ್ಲಗಳನ್ನೆಲ್ಲಾ ಏಕಕಾಲಕ್ಕೆ ಅನುಭವಿಸಿದೆ.

ಮಡಿಕೇರಿಯಿಂದ ಘಾಟ್ ಸೆಕ್ಷನಲ್ಲಿ ಇಳಿವಾಗ ಹೆಚ್ಚಾಗಿ ರಸ್ತೆಯ ಒತ್ತಡಕ್ಕೆ ಟೈರ್‌ ಸುಟ್ಟ ವಾಸನೆ ಬರೋದು ಸಹಜ. ಆದರೆ ನಾ ಬಂದ ಬಸ್ಸಿನಲ್ಲಿ ಹೊಗೆಯೇ ಎದ್ದಿತ್ತು. ಪ್ರಯಾಣಿಕನೊಬ್ಬ ಟೈರ್ ಜಲ್ ರಹಾ ಹೇ ಎನ್ನುತ್ತಾ ಕಿರುಚಿದಾಗ ಮತ್ತೊಮ್ಮೆ ಮಂಪರು ಹತ್ತಿದ್ದ ನಾನು ಒಮ್ಮೆಗೆ ಅಲರ್ಟ್ ಆಗಿ ಬ್ಯಾಗಿಗೆ ಕೈ ಹಾಕಿ ಇಳಿಯಬೇಕೋ ಎಂಬ ಧಾವಂತಕ್ಕೆ ಬಿದ್ದೆ. ಏನಿಲ್ಲ... ಜಾಸ್ತಿ ಬ್ರೇಕ್ ಅಪ್ಲೈ ಮಾಡ್ಬೇಡ ಅಂತ ಡ್ರೈವರಿಗೆ ಕಂಡಕ್ಟರ್ ಹೇಳಿ, ರೈಟ್ ಎಂದಾಗ ಅಪಾಯವಿಲ್ಲ ಎಂಬ ಸಮಾಧಾನ ಆಯಿತಾದರೂ ಬಸ್ಸು ಮಾತ್ರ ಗಂಟೆಗೆ 5 ಕಿಮೀ ಸ್ಪೀಡಿನಲ್ಲಿ ಓಡುತ್ತಿದ್ದರೆ ನನ್ನ ಆತಂಕ ಮಾತ್ರ ಬುಲೆಟ್ ಟ್ರೈನಿನಂತೆ ಓಡುತ್ತಿತ್ತು. ಇಳಿಜಾರು ಮುಗಿಸಿ ಸಂಪಾಜೆ ದಾಟಿದ ಮೇಲೆ ಬಸ್ಸು ಮತ್ತೆ ತನ್ನ ಲಯಕ್ಕೆ ಮರಳಿತು. 

ಸುಳ್ಯದಲ್ಲಿ ನಾನು ಬಸ್ಸಿಳಿಯ ಹೊರಟಾಗ ಕಂಡೆಕ್ಟರಣ್ಣನ ಅನೌಂಸುಮೆಂಟು... ಡೈರೆಕ್ಟು ಸೀಟು ಊಟಕ್ಕೆ ಟೈಮಿದೆ.... ನಗುಒಂದು ಸುಳಿಯಿತು ನನ್ನ ತುಟಿಯಲ್ಲಿ. ಇವರ ಟೈಮಿದ್ದರೂ ಇಲ್ಲದಿದ್ದರೂ ನಂಗೇನು; ಇಲ್ಲಿ ನಾನು ಊಟನೋ... ತಿಂಡಿಯೋ... ಜ್ಯೂಸೋ ಏನಾದರೂ ಸೇವಿಸಿಯೇ ಸಿದ್ಧ ಅಂತ ಗಟ್ಟಿಯಾಗೇ ನಿರ್ಧರಿಸಿ, ಸ್ವಲ್ಪ ರಿಲಾಕ್ಸ್ ಆಗಿ ಹೋಗೋಣ ಎಂದಿದ್ದೆ. ಬ್ಯಾಗ್ ಹಿಡಕೊಂಡು ಅಡ್ಸರ-ಬಡ್ಸರ ಹೆಜ್ಜೆ ಹಾಕುತ್ತಾ ಸಾಗಬೇಕಿದ್ದರೆ ನನ್ನೂರು ದಾಟಿ ಸಾಗುವ, ಬಹುತೇಕ ನಮ್ಮ ಮನೆ ಮುಂದೆ ಅನ್ನಬಹುದು; ಕೇರಳ ರಾಜ್ಯದ ಮಲಯಾಳಿ ಬಸ್ಸು ಹೊರಡುತ್ತಿತ್ತು. ಬಸ್ಸಿನೊಳಗಿರುವ ಕೆಲವರು ಪರಿಚಯದ ನಗು ಬೀರಿದರು. ಈ ಬಸ್ಸು ಬಿಟ್ಟರೆ ನೆಕ್ಸ್ಟ್ ಬಸ್ ಲೇಟಾಗುತ್ತೆ ಮತ್ತು ಅದು ಪ್ರೈವೇಟ್ ಬಸ್ ಆದ ಕಾರಣ ನಾನು ಆ ಬಸ್ಸಿಗಾಗಿ ಮತ್ತಷ್ಟು ದೂರ ಸಾಗಬೇಕು.... ಹಾಗಾಗಿ ಸ್ವಯಂಚಾಲಿತ ಮೆಶಿನ್ ‌ನಂತೆ ಆ ಬಸ್ಸೇರಿದೆ. ನನ್ನ ಆಹಾರ ಸೇವನೆಯ ನಿರ್ಧಾರ ಮತ್ತೊಮ್ಮೆ ಸುಳ್ಳಾಗಿ ನೆನೆಗುದಿಗೆ ಬಿತ್ತು.

ಅಂತೂ ಇಂತೂ ಬಸ್ಸು ಹೊರಟು ನನ್ನ ಗಮ್ಯ ತಲುಪಿದೆ. ಬಸ್ಸಿಳಿಯುವಾಗ ಬಸ್ಸಿನ ಕೈಗೆ ನನ್ನ ಬಾಗಿಲು ಅಲ್ಲಲ್ಲ..... ನನ್ನ ಕೈಗೆ ಬಸ್ಸಿನ ಬಾಗಿಲು ಬಡಿಯಿತು. ಬ್ಯಾಗುಗಳನ್ನು ಹೇರಿಕೊಂಡು ಅಡ್ಡಾಡಿ ಒದ್ದಾಡಿದ್ದಕ್ಕೆ ಕಿರೀಟ ಇಟ್ಟಂತೆ ಈ ನೋವೂ ಸೇರಿಕೊಂಡಿತು. ಬಸ್ಸಿಳಿಯುತ್ತಲೇ ಎಲ್ಲಾ ನೋವುಗಳು ಒಟ್ಟಿಗೆ ಮೇಳೈಸಿದವು. ಅದಾಗಲೇ ಮಧ್ಯಾಹ್ನ ಮೂರು ದಾಟಿತ್ತು. ನಮ್ಮ ಬೂತಿನ ಹತ್ತಿರದಲ್ಲೇ ನಮ್ಮ ಮನೆ ಇರೋ ಕಾರಣ ವೋಟಿನ ದಿನ ಖಂಡಿತವಾಗಿಯೂ ಯಾರಾದರೂ ಊಟಕ್ಕೇ ಇದ್ದೇ ಇರುತ್ತಾರೆ. (ಹಿಂದೆಲ್ಲಾ ವೋಟಿನ ದಿನವೆಂದರೆ ಹಬ್ಬದಂತೆ. ವೋಟಿಗೆ ಬಂದ ನೆಂಟರಿಷ್ಟರೆಲ್ಲ ನಮ್ಮ ಮನೆಗೆ ತಂಡ ತಂಡವಾಗಿ ಭೇಟಿ ನೀಡುತ್ತಿದ್ದರು) ಮನೆಯಲ್ಲೂ ಊಟವಾದರೂ ಇದೆಯೋ ಇಲ್ಲವೋ ಎನ್ನುತ್ತಾ ನಮ್ಮ ಮನೆಯಂಗಳಕ್ಕೆ ಅಡಿ ಇಟ್ಟೆ. ದೂರದಲ್ಲಿದ್ದ ನಾಯಿ ಓಡೋಡಿ ಬಂದು ಮೈಮೇಲೆ ಎಗರಿ ನನ್ನ ಬ್ಯಾಗುಗಳನ್ನು ಜಗ್ಗಿತು. ಪಾಪ ಅದು ಪ್ರೀತಿ ತೋರುತ್ತಿತ್ತು ನನ್ನ ಕೈಕಾಲೆಲ್ಲ ನೋಯುತ್ತೇಂತ ಅದಕ್ಕೇನು ಗೊತ್ತು.

ಇಲ್ಲಿ ಅದೃಷ್ಟ ಕೈ ಕೊಡಲಿಲ್ಲ... ಅಡುಗೆ ಮನೆಗೆ ನುಗ್ಗಿ ನೋಡಿದಾಗ ಅನ್ನ ಸಾರಿತ್ತು. ಹಸಿವು ಬಾಯಾರಿಕೆಯಿಂದ ಬರಗೆಟ್ಟು ಹೋಗಿದ್ದ ನಂಗೆ ಯಾಕೋ ಅಂದುಕೊಂಡಂತೆ ಉಣ್ಣಲೇ ಆಗಿಲ್ಲ! ಒಂದಿಷ್ಟು ಉಂಡಂತೆ ಮಾಡಿ ಮತಗಟ್ಟೆಗೆ ನಡೆದು ನನ್ನ ಹಕ್ಕು, ನನ್ನ ಪರಮೋಚ್ಛ ಅಧಿಕಾರವನ್ನು ಚಲಾಯಿಸಿದೆ. "ಯಾರು ಗೆದ್ರೂ ಯಾರೂ ಸೋತ್ರೂ ನಂಗೇನು... ನಾನು ತಿನ್ಬೇಕಿದ್ರೆ ನಾನು ದುಡೀಬೇಕು" ಅನ್ನೋದು ನನ್ನ ಮಾಮೂಲಿ ಡಯಲಾಗ್. ಇಷ್ಟೆಲ್ಲ ಅನುಭವ ಹೊತ್ತು ವೋಟ್ ಮಾಡಿದ ಮರುದಿನ ಮಾತ್ರ ಭುಜ, ರಟ್ಟೆ, ಬಸ್ಸಿನ ಬಾಗಿಲು ಬಡಿದ ಕೈ ಹೈರಾಣಾದ ದೇಹ ಮತ್ತು ಇದಕ್ಕೆ ಕಳಶವಿಟ್ಟಂತೆ ಹಳೆಯ ಭುಜದ ನೋವೂ ಎಲ್ಲ ಸೇರಿಕೊಂಡು ನೋಯುತ್ತಾ ನೀನು ವೋಟ್ಮಾಡಿದ ಪ್ರತಿಫಲ ಅನ್ನುತ್ತಿವೆ....

ಕೆಲವೆಡೆ ಒಂದು ವೋಟಿಗೆ ಇಷ್ಟೆಂದು ನೋಟು ಕೊಡ್ತಾರಂತೆ.... ನಾನು ಮಾತ್ರ ನೋಟು ಕಳಕೊಂಡು.... ನೋವುಂಡು.....
(15-5-18 ರಂದು ಅವಧಿಯಲ್ಲಿ ಪ್ರಕಟಿತ  http://avadhimag.com/?p=198188 )

ಮಂಗಳವಾರ, ಡಿಸೆಂಬರ್ 26

ನಲ್ಲ?!

ನಾ
ನಿನ್ನ
ನಲ್ಲ
ಅಂದಿದ್ದ
ಅವನು
ನಲ್ಲನೇ?
ನಾನಲ್ಲವೇ
ಅಲ್ಲ
ಅನ್ನುತ್ತಿದ್ದಾನಲ್ಲ!

ಶನಿವಾರ, ಡಿಸೆಂಬರ್ 23

ಗುರುವಾರ, ಡಿಸೆಂಬರ್ 7

ಭಾವ - ಬಾಳ - ಯಾನ

ನೀನಂದೆ ಪದ್ಯ ಬರೆಯೇ
ನಾನಂದೆ ಅದೆನಗೆ ನಿಲುಕಲ್ಲ
ನಾ ಬರೆಯಲಿಲ್ಲ - ನೀ ಬಿಡಲಿಲ್ಲ
ನೀ ದೂರಿ ನಾ ಹಾರಿ
ನೀ ಏತಿ ನಾ ಪ್ರೇತಿ
ಬರೆದೆ, ನಾ ಬರೆದೇ ಬರೆದೇ
ಆಗಷ್ಟೆ ಸಂಸಾರದ ಸರಿಗಮ
ಪರಿಣಯದಾರಂಭಕೆ
ತಾಳಕ್ಕೆ ತಕ್ಕ ಮೇಳವಿರಲಿಲ್ಲ
ಪ್ರಣಯದ ಪರಿಯಲ್ಲಿದರಿಯಲಿಲ್ಲ
ತೊಟ್ಟಿಲು ತೂಗಿತು ಶರೀರ ಮಾಗಿತು
ಶಾರೀರ ಬೆರೆಯಿತು
ತಾಳಕ್ಕೆ ತಕ್ಕ ಮೇಳವಾಯಿತು
ರಾಗಕ್ಕೂ ತಾಳಕ್ಕೂ ಶೃತಿ ಸೇರಿತು
ಸಮಯ ಜಾರಿತು ವರ್ಷಗಳು ಪೇರಿತು
ಎಲ್ಲೋಯಿತೋ ಆ ಗೌಜಿ ಗಿಜಿಗಿಜಿ
ಆ ಗದ್ದಲ ಆ ವಿಜೃಂಭಣೆ
ಎಲ್ಲ ಈಗ ಖಾಲಿ ಖಾಲಿ
ಕೊನೆಯಲ್ಲಿ
ನನಗೆ ನೀನು ನಿನಗೆ ನಾನು
ಅದೇ ರಾಗ ಅದೇ ತಾಳ
ನಮ್ಮೊಳಗೀಗ ಅದೆಂಥಾ ಪ್ರೀತಿ
ಜವರಾಯಗೂ ನಮ್ಮೆಡೆಗೆ
ದಿಟ್ಟಿಸಲು ಭೀತಿ
ಎಷ್ಟು ದೂರವೋ ಸಾಗೋಣ ಹಾಡೋಣ
ಶೃತಿ ತಪ್ಪುವ ಭೀತಿಯಂತೂ
ಈಗಿಲ್ಲವಲ್ಲ ನನ್ನ ನಲ್ಲಾ

(ಚಿತ್ರ ಯಾರದ್ದು ಗೊತ್ತಿಲ್ಲ. ಎಲ್ಲಿತ್ತೆಂದೂ ಗೊತ್ತಿಲ್ಲ. ಮಿತ್ರ ಮಂಜು ಈ ಚಿತ್ರಕ್ಕೆ ಕವಿತೆ ಬರಿ ಎಂದಾಗ ತಿಣುಕಿ ತಿಣುಕಿ ಬರೆದದ್ದು)


ಮಂಗಳವಾರ, ಮಾರ್ಚ್ 14

ಎತ್ತಣ ನಾಯ್ಮರಿ....... ಎತ್ತಣ ಬಿಸ್ಕೇಟೂ.....

(ಚಿತ್ರ ಯಾರದ್ದು ಗೊತ್ತಿಲ್ಲ)
ನಾನು ಮತ್ತು ಗೆಳತಿ ಮಡಿಕೇರಿಯಿಂದ ಸುಳ್ಯಕ್ಕೆ ಹೊರಟಿದ್ದೆವು. ನಮ್ಮನ್ನು ಬಸ್‌ಸ್ಟಾಂಡಿಗೆ ಡ್ರಾಪ್ ಮಾಡಲು ಹೊರಟಿದ್ದ ಆಕೆಯ ಸಹೋದ್ಯೋಗಿ ಮಿತ್ರ ಬಸ್ ಅದಾಗಲೇ ಹೊರಟು ಬರುತ್ತಿರುವುದನ್ನು ಕಂಡು ಕೈ ತೋರಿಸಿ ನಿಲ್ಲಿಸಿದರು. ಮಾರ್ಗಮಧ್ಯೆ ಇದ್ದ ನಾವು ದಡಬಡಾಯಿಸಿ ಕಾರಿನಿಂದ ಇಳಿದು ಎದುರಿನಿಂದ ಯಾವುದಾದರೂ ವಾಹನ ಬರುತ್ತಿದೆಯೇ ಎಂಬುದನ್ನೂ ಲೆಕ್ಕಿಸದೆ ಹಾರಿಬಿದ್ದು ಧಾವಂತದಲ್ಲಿ ಬಸ್ ಏರಲು ಓಡಿದೆವು. ಒಂದು ವೇಳೆ ಎದುರಿಂದ ಯಾವುದಾದರೂ ವಾಹನ ಬಂದಿದ್ದರೆ ಇದು ಅಪ್‌ಡೇಟ್ ಆಗುತ್ತಿರಲಿಲ್ಲ! ವಾಹನಗಳ ಪುಣ್ಯ; ಯಾವುದೂ ಬಂದಿರಲಿಲ್ಲ.

ಹೀಗೆ ಅವಸರದಲ್ಲಿ ಬಸ್ ಏರಿ ಸೀಟ್ ಇದೆಯೋ ಎಂದು ಕಣ್ಣಾಡಿಸಿ ಸಿಕ್ಕ ಸೀಟಲ್ಲಿ ಹೋಗಿ ಸೆಟ್ಲ್ ಆಗುತ್ತಿರಬೇಕಾದರೆ ನಾಯಿಮರಿಯೊಂದರ ಆರ್ತನಾದ ಕೇಳುತ್ತಿತ್ತು. ಹ್ಹೇ... ಬಸ್ಸಲ್ಲಿ ನಾಯಿಮರಿ ಇರಬೇಕು ಎಂದೆ ನಾನು. ಗೆಳತಿ ಎದ್ದು ನಿಂತು ಸರ್ವೇ ಮಾಡಿ ಡ್ರೈವರ್ ಸೀಟಿನ ಹಿಂಭಾಗದಲ್ಲಿ ನಾಯಿ ಇರುವುದಾಗಿಯೂ, ಅದು ರಟ್ಟಿನ ಪೆಟ್ಟಿಗೆಯಲ್ಲಿ ಬಂದಿ ಆಗಿರುವುದಾಗಿಯೂ ಪತ್ತೆ ಹಚ್ಚಿದರು. ಅದರ ಪಕ್ಕದ ಸೀಟಿನಲ್ಲಿ ಕುಳಿತಿರುವವರು ನಾಯಿಮರಿ ಬಗ್ಗೆ ಸಾಕಷ್ಟು ಕಾಳಜಿ ವಹಿಸದೇ ಇರುವುದಕ್ಕೆ ಅಸಮಾಧಾನಗೊಂಡು ಗೊಣಗುಟ್ಟಲಾರಂಭಿಸಿರು. ಅದ್ಕೆ ಏನಾರು ಹಾಕ್ಬಾರ್ದಾ ಎಂದು ಎದುರಿಗಿದ್ದ ಇಬ್ಬರು ಯುವಕನ್ನು ಸ್ವಲ್ಪ ಜೋರಾಗಿಯೇ ಕೇಳಿದಳು. ಏ್ಹ..... ಅದು ನಮ್ದಲ್ಲಾ ಮೇಡಾಂ.... ಯಾರೋ ಬಿಟ್ಟ್ಹೋಗಿದ್ದಾರೆ ಎಂದು ಅವರೂ ಅಷ್ಟೇ ಜೋರಾಗಿಯೇ ಹೇಳಿದರು. ಛೇ ಹೀಗಾ ಮಾಡೋದು.... ಪಾಪಾ.... ಅಷ್ಟು ಚಿಕ್ಕ ನಾಯ್ಮರಿ.... ಎಂದು ಮರುಗಿದ ನನ್ನ ಗೆಳತಿಗೆ ಈಗ ಲೇಟಾಯಿತೆಂಬ ಧಾವಂತ ಹೋಗಿ ನಾಯ್ಮರಿಯ ಯೋಗಕ್ಷೇಮ ಆವರಿಸಿಕೊಂಡಿತು. 

ಪಾಪ ನಾಯ್ಮರಿಗೆ ಏನಾದರೂ ಕೊಡ್ಬೇಕಲ್ಲಪ್ಪಾ ಎನ್ನುತ್ತಾ ಬಗಲಿನ ಬ್ಯಾಗನ್ನು ತಡಕಾಡಲು ಆರಂಭಿಸಿದರು. ಸಮ್ಮೋಹಿನಿಗೆ ಒಳಗಾದಂತೆ ನಾನೂ ನನ್ನ ಭುಜದ ಬ್ಯಾಗನ್ನು ಮಡಿಲಿಗೆ ತಂದು ಏನಾದರೂ ಸಿಗುತ್ತದೆಯೇ ಎಂದು ಹುಡುಕಿದೆ. ಹೇ ಸಿಗ್ತಪ್ಪಾ ಎನ್ನುತ್ತಾ ಹಸಿರು ಕವರ್‌ರಿನ ಗುಡ್ ಡೇ ಬಿಸ್ಕತ್ತು ಪ್ಯಾಕೇಟನ್ನು ಎದುರಿನ ಸೀಟಲ್ಲಿದ್ದ ಯುವಕರಿಗೆ ಹಸ್ತಾಂತರಿಸಿ, ತಗೊಳ್ರಪ್ಪ ನಾಯ್ಮರಿಗೆ ಹಾಕಿ ಎಂದು ಉಸ್ಸಪ್ಪಾ ಅನ್ನುತ್ತಾ ಕುಳಿತರು. ಗೆದ್ದೆನೆಂದ ಸಂತಸದಲ್ಲಿದ್ದ ಅವರು, ಅದು ನೀವು ಕೊಟ್ಟ ಬಿಸ್ಕತ್ತು ಅಂದರು. ಆ್ಯಕ್ಚುವಲೀ ಅದು ನನ್ನಕ್ಕ ನನ್ನಲ್ಲಿಗೆ ಬಂದಾಗ ತಂದಿದ್ದಳು. ಅಕ್ಕನ ಮನೆಗೆ ಯಾರೋ ತಂದಿದ್ದ ಅದನ್ನು ಆಕೆ ಎಮರ್ಜೆನ್ಸಿಗೆ ಇರಲಿ ಎಂದು ಬ್ಯಾಗಲ್ಲಿ ಹಾಕ್ಕೊಂಡಿದ್ದಳು. ನನ್ನಲ್ಲಿಗೆ ಬಂದಾಗ ತಂಗಿಗೆಂದು ಬಿಟ್ಟು ಹೋಗಿದ್ದಳು. ನಾನು ಅದನ್ನು ನನ್ನ ಆಪತ್‌ಬಾಂಧವಿ ಗೆಳತಿಯೊಂದಿಗೆ ಗ್ರೀನ್ ಟೀ ಜೊತೆಗೆ ತಿನ್ನುವಾ ಎಂದು ಹಿಂದಿನ ದಿನ ಅವರ ಟೀಪಾಯಿ ಮೇಲೆ ಇರಿಸಿದ್ದೆ. ಎಲ್ಲಿಂದೆಲ್ಲಿಗೆ ಕನೆಕ್ಷನ್ ಅನ್ನಿಸಿ ಎತ್ತಣ ನಾಯ್ಮರಿ ಎತ್ತಣ ಬಿಸ್ಕೆಟ್ ಅಲ್ಲವೇ ಎಂದೆ ಗೆಳತಿಗೆ.

ಬಿಸ್ಕತ್ತು ಹಾಕಿದ ಬಳಿಕ ಎರಡು ನಿಮಿಷ ಮರಿನಾಯಿ ಕುಂಯಿಗುಟ್ಟುವಿಕೆ ನಿಂತಿತಾದರೂ ಮತ್ತೆ ಪುನಃ ಕೂಗು ಆರಂಭ. ಬಿಸ್ಕೇಟು ಪಸಂದಾಗಿಲ್ವೋ, ಅದರ ಬ್ರಾಂಡು ಗುಡ್ ಡೇ ಅಲ್ವೇನೋ ಅಂತ ನಾನು ಯೋಚಿಸುತ್ತಿರಬೇಕಾದರೆ, ಈಕೆ ಛೈ....... ಪಾಪ ನಾಯಿಗೆ ಬೋರಾಗ್ತಿದೆ ಎಂದು ನಾಯಿ ಸೈಕಾಲಜಿ ತಿಳಿದವರಂತೆ ತೀರ್ಮಾನಕ್ಕೆ ಬಂದರು. ನಾಯಿಗೆ ಹಾಡು ಹಾಕ್ಬೇಕಿತ್ತು ಅಂತ ಎದುರಿನ ಹುಡುಗರಿಗೆ ಹೇಳಲನುವಾದರು. ಪಾಪ ಮೊಬೈಲಲ್ಲಿ ಹಾಡು ಹಾಕೋಣ್ವಾ ಅಂತ ಚಡಪಡಿಸಲು ಆರಂಭಿಸಿದರು. ಎಂದಿನಂತೆ ಅವರ ಮೊಬೈಲ್ ಚಾರ್ಜಿಲ್ಲದೆ ನಿಸ್ತೇಜವಾಗಿತ್ತು. ರಟ್ಟಿನ ಪೆಟ್ಟಿಗೆಯೊಳಗಿದ್ದ ನಾಯ್ಮರಿ ಕಿವಿಗೆ ಜಾಕ್ ಹೇಗೆ ಸೆಟ್ ಮಾಡ್ತಿತ್ತಿದ್ರೋ......? ಮೊಬೈಲ್ ಹಾಡ್ಯಾಕೆ, ನೀವೆ ಹೋಗಿ ಅದರ ಪಕ್ಕದಲ್ಲಿ ಕುಳಿತು ಹಾಡಿ ನಾನು ಕಿವಿ ಮಚ್ಚಿಕೊಳ್ಳುತ್ತೇನೆ ಎಂಬ ಬಿಟ್ಟಿ ಸಲಹೆ ನೀಡಿದೆ. ನಾಯಿಮರಿ ಬಳಿ ಕುಳಿತು ಅವರು ಹಾಡುವ ದೃಶ್ಯ ನನ್ನ ಕಣ್ಣೆದುರು ಮೂಡಿದಂತಾಗಿ ನನ್ನ ಮುಖದಲ್ಲಿ ನಗುವೊಂದು ಹಾದುಹೋಯಿತು. ಅವರಿಗೆ ಏನನ್ನಿಸಿತೋ ಸುಮ್ಮನಾದರು. ಆದರೂ..... ನಾಯಿಮರಿ ನಾಯಿಮರಿ ತಿಂಡಿಬೇಕೇ ಎಂಬಲ್ಲಿಂದ ಹಿಡಿದು ನಾಯಿಗೆ ಸಂಬಂಧಿಸಿದ ಹಾಡುಗಳನ್ನು ನೆನಪಿಸಿಕೊಳ್ಳುತ್ತಿದ್ದರು. ತಿರುವು ಮುರುವು ರಸ್ತೆಯಲ್ಲಿ ಬಸ್ಸು ವೇಗದಿಂದ ಇಳಿಯುವಾಗ ಹೊಟ್ಟೆತೊಳಸಿಂತಾಗುವುದು ಸಾಮಾನ್ಯ. ಪಾಪ ನಾಯಿಗೆ ವಾಂತಿ ಬರುತ್ತದೇನೋ ಅಂತ ನಾನು ಸ್ವಯಂ ಆಗಿ ಅಬ್ಬೇಪಾರಿ ನಾಯಿಮರಿಯ ಯೋಗಕ್ಷೇಮ ವಹಿಸಿಕೊಂಡ ಗೆಳತಿಯನ್ನು ಕಿಚಾಯಿಸಿದೆ. ಛೀ.... ಎಂಬಂತೆ, ನಾನೇ ವಾಂತಿ ಮಾಡಿದಂತೆ ನನ್ನ ಮೇಲೆ ಒಂದು ಹೇಸಿಗೆ ನೋಟ ಹರಿಸಿ ಬಿಟ್ಟರು. ಇಷ್ಟೇನಾ ನಾಯಿ ಪ್ರೀತಿ ಅಂತ ನಂಗೆ ನಗು ಬಂತು. 

ನನ್ನ ಗೆಳತಿಯ ನಾಯಿಸತ್ಕಾರದಿಂದಾಗಿ ದಾರಿಸಾಗಿದ್ದು ತಿಳಿಯಲಿಲ್ಲ. ನಮ್ಮ ಗಮ್ಯ ಹತ್ತಿರವಾಗುತ್ತಲೇ ಕೇಳಿದೆ; ನಾಯ್ಮರಿ ಜತೆ ಸೆಲ್ಫೀ ಬೇಡ್ವೇ ಅಂತ! ಅದು ಬಾಕ್ಸಿನೊಳಗಿದೆ ಅಂದ್ರು. ಬಾಕ್ಸ್ ಸಮೇತ ಬೊಂಬಾಟ್ ಫೋಟೋ ತೆಗೆದುಕೊಡುತ್ತೇನೆಂದೆ. ಖಿಲ್ಲನೆ ನಗುತ್ತಾ ಇಳಿಯಲಣಿಯಾದರು....!

ಮಂಗಳವಾರ, ಮೇ 24

ಸತ್ತು - ಬದುಕಿ

ಭಾವ ತೀವ್ರತೆಯಲ್ಲೊಮ್ಮೆ
ಬರೆದಿದ್ದೆ ಮತ್ತು ಹರಿದಿದ್ದೆ-
"ನೀ ಸಾಯಬೇಕು
ನನ್ನವ್ವಾ....
ನೀ ಸತ್ತ ಮರುಕ್ಷಣ
ನಾ ಹೆಣವಾಗಬೇಕು!"
ನೀನೂ ಹೆಣವಾದೆ;
ನಾನೂ ಹೆಣವಾದೆ-
ನೀ ಸತ್ತು - ನಾ ಬದುಕಿ!

ಗುರುವಾರ, ಫೆಬ್ರವರಿ 11

ಗ್ರಹಚಾರ

ಕಾರ್ಯ ನಿಮಿತ್ತ
ಹೊರಟಿದ್ದೆ,
ಅಡ್ಡ ದಾಟಿದ್ದವು
ನಾಲ್ಕೈದು ಬೆಕ್ಕುಗಳು;
ಏನು ಕಾದಿದೆಯೋ,
ಗ್ರಹಚಾರ -
ಬೆಕ್ಕುಗಳಿಗೆ!
****

ಸತ್ತು
ಬದುಕಿದೆ!
ಛೇ, ಒಂದೊಮ್ಮೆ
ಪೂರಾ ಸತ್ತಿದ್ದರೇ....
ಎಷ್ಟೊಂದು
ಬದುಕು
ಮಿಸ್ಸಾಗೋಗ್ತಿತ್ತು!

****
ಬದುಕಲೇ
ಬೇಕಂತಿತ್ತು
ಜೀವ -
ಸತ್ತೇ
ಹೋದಂಗಿತ್ತು
ಭಾವ.....
****

ನಾ
ಬರೆದೆ;
ಬರಿದೆ-
ಎಲ್ಲಾ
ಬರಿದು!

ಗುರುವಾರ, ಡಿಸೆಂಬರ್ 17

ಮಡಿ ಉಪ್ಪಿಟ್ಟು ಮಾಡ್ಕೊಳಿ.... ತಿಂದ್ಕೊಳಿ....

ಈಗೀಗ ನಾನೇ ಅಡುಗೆ ಮಾಡಿ ಅದನ್ನು ನಾನೇ ತಿನ್ನುವ ಸುಖಃ ಮತ್ತು ಕಷ್ಟಕ್ಕೆ ನನ್ನನ್ನು ಒಡ್ಡಿಕೊಂಡಿರುವುದರಿಂದ ಬ್ಲಾಗಿನಲ್ಲೊಂದು ರೆಸಿಪಿ ಬರೆಯಬೇಕೆಂದು ಬಹಳವಾಗಿ ಅನಿಸುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವಿದು.

ಹಾಗಾಗಿ ನಿಮಗೊಂದು ಯಮ್ಮೀಯಾಗಿರುವ 'ಮಡಿ ಉಪ್ಪಿಟ್ಟು' ಮಾಡುವ ವಿಧಾನ ಹೇಳೇಬಿಡುವ ಎಂದು ಹೊರಟಿದ್ದೇನೆ. ಮಡಿ ಉಪ್ಪಿಟ್ಟು ಎಂದರೆ ಈರುಳ್ಳಿ ಬೆಳ್ಳುಳ್ಳಿ ಹಾಕದೇ ಮಾಡುವ ರುಚಿರುಚಿ ಉಪ್ಪಿಟ್ಟು. ಹಾಗಾಗಿ ಇದು ವೃತ, ಉಪವಾಸ, ಒಪ್ಪತ್ತಿನವರಿಗೂ ಅನುಕೂಲವಾಗುತ್ತದೆ.

ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ಚಂದವಂತೆ. ನನ್ನ ಅಣ್ಣ ಮತ್ತು ಅಕ್ಕಗಳ ದಯೆಯಿಂದ ನನಗೆ ತೆಂಗು ಧಾರಾಳವಿದೆ. ಇಂಗು ಮಾತ್ರ ಖರೀದಿಸಿದರೆ ಆಯ್ತು. ಇಷ್ಟಾದರೂ ನನ್ನಡುಗೆಯ ಚಂದವೋ.....? ದೇವರಿಗೇ ಪ್ರೀತಿ; ಅದೇ ದೇವರಿಗೆ ನೈವೇದ್ಯವೇನಾದರೂ ಮಾಡಿದರೆ ಪಛೀತಿ!

ಈಗ ಉಪ್ಪಿಟ್ಟಿಗೆ ಬರೋಣ. ಇದನ್ನು ಮಾಡಲು ಬೇಕಾಗುವ ಸಾಮಾಗ್ರಿಗಳು ಕೆಳಗಿನಂತಿವೆ:

ಮೂಲ ಸಾಮಾಗ್ರಿಗಳು:
ಉಪ್ಪಿಟ್ಟು (ಚಿಕ್ಕ) ರವೆ, ಉಪ್ಪು. ಹಸಿಮೆಣಸು, ತೆಂಗಿನ ಕಾಯಿ ತುರಿ, ನೀರು ಮತ್ತು ಪಾತ್ರೆ ಹಾಗೂ ಸೌಟು.

ಒಗ್ಗರಣೆ ಸಾಮಾಗ್ರಿಗಳು:
ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡ್ಲೆಬೇಳೆ. ನೆಲಗಡಲೆ. ಕರಿ ಬೇವು ಮತ್ತು ಎಣ್ಣೆ.

ಹೆಚ್ಚುವರಿ ಸಾಮಾಗ್ರಿಗಳು:
ತುಪ್ಪ, ಗೋಡಂಬಿ, ಬೀನ್ಸ್, ಕ್ಯಾರೆಟ್, ಬಟಾಣಿ, ದೊಣ್ಣೆ ಮೆಣಸು, ಟೊಮ್ಯಾಟೋ, ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು, ಸಕ್ಕರೆ ಇತ್ಯಾದಿ ಮತ್ತು ಅಕ್ಕನ ಮಗ. ಹಾಗೂ......, ಹೇಗೇ ಆದರೂ ಕೊಂಕು ಮಾತಾಡದೆ ತಿಂದು ಮುಗಿಸುವ ತಾಕತ್ತು ಇರುವ ಜನರು 3-5.

ಉಪ್ಪಿಟ್ಟು ಮಾಡುವ ವಿಧಾನ:
ಮೊದಲಿಗೆ ಅಕ್ಕನ ಮಗನನ್ನು ಕರೆದು  (ಅವನು ಗೊಣದೇ ಇದ್ದರೆ) ಬೇಕಾದಷ್ಟು ತೆಂಗಿನ ಕಾಯಿ ತುರಿಯಲು ಹೇಳಬೇಕು. ಅಕ್ಕನ ಮಗನೇ ಆಗಬೇಕೆಂದಿಲ್ಲ, ಮಗಳೂ ಆಗಬಹುದು. ಸ್ವಂತ ಮಗ ಅಥವಾ ಮಗಳು, ಇಲ್ಲವೇ ಪತಿ ಯಾ ಪತ್ನಿ ಅಥವಾ ತೆಂಗಿನ ಕಾಯಿ ತುರಿಯಲು ಗೊತ್ತಿರುವ ಇತರ ಯಾರೂ ಆಗಬಹುದು. (ನನಗೆ ಸ್ವಂತದ ಗಂಡ-ಮಕ್ಕಳು ಇಲ್ಲದ ಕಾರಣ ನನ್ನ ಜೊತೆಗಿರುವ ಅಕ್ಕನ ಮಗನನ್ನು ಬಳಸಿಕೊಳ್ಳುತ್ತೇನೆ) - ಇವರು ಯಾರೂ ಆ ಸಮಯದಲ್ಲಿ ಲಭ್ಯವಿಲ್ಲವಾದರೇ ನೀವೇ ತುರಿದುಕೊಳ್ಳತಕ್ಕದ್ದು. ಬೇರೆಯವರು ತುರಿಯುವುದಾದಲ್ಲಿ ಒಂದಿಡಿ ತೆಂಗಿನ ಕಾಯಿಯೇ ತುರಿಯಲು ಹೇಳಿ. ಮಿಕ್ಕಿದರೆ ನಂತರದಲ್ಲಿ ಬೇರೆ ಇತರೇ ಪದಾರ್ಥಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ :-).

ಒಂದು ಅಳತೆ ರವೆಗೆ ನಾಲ್ಕು ಅಳತೆಯಷ್ಟು ನೀರನ್ನು ಒಂದು ಒಲೆಯಲ್ಲಿ ಕುದಿಯಲು ಬಿಡಬೇಕು. ಈ ನಡುವೆ, ಅವಸರವಿದ್ದರೆ ಮಧ್ಯದ ಚಿಕ್ಕ ಒಲೆಯಲ್ಲಿ ಕಾಫಿ ಅಥವಾ ಟೀ ಇಡಬಹುದು. ಪುರುಸೊತ್ತಿದ್ದರೆ (ಬೇಕಿದ್ದರೆ) ಕೊನೆಯಲ್ಲಿ ಮಾಡಿಕೊಂಡರೂ ಆಗುತ್ತದೆ. ಇನ್ನೊಂದು ಒಲೆಯಲ್ಲಿ ಅಗಲ ಬಾಯಿಯ ಪಾತ್ರೆ ತೆಗೆದುಕೊಂಡು ಒಂದಿಷ್ಟು ತುಪ್ಪ ಹನಿಸಿ ರವೆಯನ್ನು ಹುರಿಯಬೇಕು. ರವೆ ಕೆಂಪಗಾಗುತ್ತಲೆ ಅದನ್ನು ಒಂದು ತಟ್ಟೆಗೆ ಸುರಿದು ಪಕ್ಕಕ್ಕಿಡಿ. ಅಕ್ಕನ ಮಗಳ ಬಳಿ (ಇಲ್ಲಿಯೂ ತೆಂಗಿನಕಾಯಿ ತುರಿಯಲು ಬಳಸುವ ವ್ಯಕ್ತಿಯ ನಿಯಮವೇ ಅನ್ವಯವಾಗುತ್ತದೆ), ಟೊಮ್ಯಾಟೋ, ಹಸಿಮೆಣಸಿನ ಕಾಯಿ ಕತ್ತರಿಸಲು ಹೇಳಿ, ಆಕೆ ಕತ್ತರಿಸಿದವುಗಳನ್ನು ಅನುಕೂಲವಾದ ಕಡೆಯಲ್ಲಿ ಇರಿಸಿಕೊಳ್ಳಬೇಕು. ಕೈ, ಸೌಟು, ಪಾತ್ರೆ ಅಥವಾ ಇನ್ನೇನಾದರೂ ತಾಗಿ ಅಡುಗೆ ಮನೆ ಕಟ್ಟೆಯಿಂದ ಇದೆಲ್ಲ ಕೆಳಕ್ಕೆ ಬೀಳಬಾರದು. ಬಿದ್ದರೆ ಅದನ್ನು ಹೆಕ್ಕುವುದು ಮತ್ತೊಂದು ಕೆಲಸವಾಗುತ್ತದೆ.

ಬಣಲೆಗೆ ಅಥವಾ ನೀವು ಉಪ್ಪಿಟ್ಟು ಮಾಡುವ ಪಾತ್ರೆಗೆ ಎಣ್ಣೆ, ರುಚಿ ಪ್ರಿಯರಾಗಿದ್ದರೆ ತುಪ್ಪ (ತೂಕ ಕಳಕಳಿ ಇದ್ದರೆ ತುಪ್ಪ ಬಳಸುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು) ಸುರಿದು ಕಾದ ಮೇಲೆ ಸಾಸಿವೆ ಹಾಕಿ. ಅದು ಬಿಸಿ ತಾಳದೆ ಒದ್ದಾಡುತ್ತಾ ಚಡಪಡಿಸುವಾಗ ಜೀರಿಗೆ ಹಾಕಿ, ಜೀರಿಗೆಗಳು ಉಬ್ಬಿ ಎಣ್ಣೆಯ ಮೇಲೆ ತೇಲಲಾರಂಭಿಸಿದಾಗ ಉದ್ದಿನ ಬೇಳೆ ಹಾಕಿರಿ. ಅದು ಎಣ್ಣೆಯ ಕಾವಿಗೆ ನಾಚಿ ಕೆಂಪಾಗುವ ಹೊತ್ತಿಗೆ ಕಡ್ಲೆ ಬೇಳೆ ಹಾಕಿರಿ. ಕಡ್ಲೆಬೇಳೆಯನ್ನು ಕೋಪದಿಂದ ಕಪ್ಪಗಾಗಲು ಬಿಡಬಾರದು. ನೀವು ನೆಲಗಡಲೆ ಪ್ರಿಯರಾಗಿದ್ದರೆ ನೆಲಗಡಲೆ ಹಾಕಿ. (ಬಟಾಣಿ ಬಳಸುವುದಾದರೆ ನೆಲಗಡಲೇ ಬೇಕಾ? ಯೋಚಿಸಿ) ನೆಲಗಡಲೆ ಎಣ್ಣೆಯಲ್ಲಿ ಸೊಕ್ಕಿ ಅದು ಬಿರಿಯಲಾರಂಭಿಸುವಾಗ ಕರಿಬೇವು ಹಾಕಿರಿ. ಇದು ಘಮ್ಮೆನ್ನುವ ಪರಿಮಳ ಸೂಸುತ್ತಾ ಹಸಿರಾಗುತ್ತಾ ನಸುನಗುವಾಗ ಹಸಿ ಮೆಣಸು ಹಾಕಿ. ಘಾಟಿನಿಂದ ನಿಮ್ಮನ್ನು ಬೆದರಿಸುವಾಗ ಟೊಮ್ಯಾಟೋ, ದೊಣ್ಣೆ ಮೆಣಸು ಹಾಕಿ ಕೈಯಾಡಿಸಿ ಹಸಿಮೆಣಸಿನ ಘಾಟಿನ ಸೊಕ್ಕಡಗಿಸಿ. ಎಲ್ಲವೂ ಸರಿಯಾಯಿತೆನ್ನುವಾಗ, ಮೇಲೆ ತಿಳಿಸಿದ ಇತರೆ ತರಕಾರಿ, ಬಟಾಣಿ ಹಾಕುತ್ತೀರಾದರೆ ಅವುಗಳನ್ನು ಮೊದಲೆ ಸ್ವಲ್ಪ ಬೇಯಿಸಿಟ್ಟು ಇದಕ್ಕೆ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಹೊಂದಿಸಿ, ಅವೆಲ್ಲವುಗಳು ರಂಗುರಂಗಿನಿಂದ ಎಣ್ಣೆಯಲ್ಲಿ ಒಂದೇ ರಿದಂಗೆ ಒಗ್ಗಿ ಕುಣಿಯಲಾರಂಭಿಸುತ್ತವೆ. ಅಷ್ಟರಲ್ಲಿ ಇದಕ್ಕೆ ಕುದಿಯುವ ನೀರು ಬೆರೆಸಿ. ಉಪ್ಪು ಸೇರಿಸಿ.  ಒಂದೆರಡು ಚಿಕ್ಕ ಚಮಚ ಸಕ್ಕರೆ ಸೇರಿಸಿ. ನಿಮ್ಮ ರುಚಿಗೆ ತಕ್ಕನಾದ ಹದದಲ್ಲಿ ತುರಿದ ತೆಂಗಿನಕಾಯಿ ಸೇರಿಸಿ.
(ಚಿತ್ರ ದೇವರಾಣೆಗೂ ಸ್ವಂತದ್ದಲ್ಲ, ಸಿಕ್ಕಲ್ಲಿಂದ ತೆಗೆದದ್ದು)

ನೀರು ಚೆನ್ನಾಗಿ ಗುಳುಗುಳು ಕುದಿಯುತ್ತಾ ತೆಂಗಿನ ತುರಿಯ ರುಚಿ ಬಿಡುತ್ತಲೇ ಒಂದು ನಿಂಬೆ ಹಣ್ಣು ಕತ್ತರಿಸಿ ಹಿಂಡಿ, ಬೀಜ ತೆಗೆದು ಕುದಿಯವ ನೀರಿಗೆ ಸೇರಿಸಿ (ಉಪ್ಪಿಟ್ಟಿನ ಪ್ರಮಾಣಕ್ಕೆ ತಕ್ಕಂತೆ ನಿಂಬೆ ಹಣ್ಣನ್ನು ಹೆಚ್ಚಿಸುವ ಅಥವಾ ಕಡಿಮೆಗೊಳಿಸುವ ಹದವನ್ನು ನೀವೇ ಮೈಗೂಡಿಸಿಕೊಳ್ಳಬೇಕು- ಇದು ಇತರೆಲ್ಲ ಸಾಮಾಗ್ರಿಗಳಿಗೂ ಅನ್ವಯಿಸುತ್ತದೆ). ಇಷ್ಟಾದ ಮೇಲೆ, ಬೇಕಿದ್ದರೆ ಒಂದು ಚಿಕ್ಕ ತಟ್ಟೆಯಲ್ಲಿ ಸುರಿದು ಉಪ್ಪು ಕಾರ ಸರಿ ಇದೆಯೇ ಎಂದು 'ತಿಂದು ಅಥವಾ ಕುಡಿದು' ಪರೀಕ್ಷಿಸಬಹುದು. ಇದು ನಿಮಗೆ ಮತ್ತು ನಿಮ್ಮ ಆತ್ವವಿಶ್ವಾಸಕ್ಕೆ ಬಿಟ್ಟ ವಿಚಾರ. ಸರಿ ಇದೆ ಅನಿಸಿದರೆ ರವೆಯನ್ನು ಒಂದು ಬದಿಯಿಂದ ಹಾಕಿರಿ. ಇದು ನೀರಿನಲ್ಲಿ ಚೆನ್ನಾಗಿ ಬೆರೆತು ಹೊಂದಿಕೊಳ್ಳುವಂತೆ ಕೂಡಕೂಡಲೇ ತಿರುಗಿಸಬೇಕು. ಉಪ್ಪಿಟ್ಟಿನ ಹದಕ್ಕೆ ಗಟ್ಟಿಯಾಗುತ್ತಲೆ ಚಿಕ್ಕದಾಗಿ ಕತ್ತರಿಸಿಟ್ಟ ಹಸಿರಾಗಿರುವ ಕೊತ್ತಂಬರಿ ಸೊಪ್ಪು ಸೇರಿಸಿ ತಿರುವಿ ಒಲೆ ಆರಿಸಿ ಮುಚ್ಚಿಡಿ. ಉಪ್ಪಿಟ್ಟು ತೀರಾ ಗಟ್ಟಿಯಾಗಬಾರದು ಮತ್ತು ತೀರಾ ನೀರಾಗಬಾರದು. ಹದವಾಗಿ ಮೆತ್ತಗಾಗಿದ್ದರೇ ಅದರ ಸವಿ ಬೇರೆಯದೇ ಆಗಿರುತ್ತದೆ. ಬಲ್ಲವನೇ ಬಲ್ಲ ಉಪ್ಪಿಟ್ಟಿನ ರುಚಿ!

ಸ್ವಲ್ಪ ತಣ್ಣಗಾದ ಬಳಿಕ, ಬಟ್ ಬಿಸಿ ಆರುವ ಮುನ್ನವೇ, ನಿಮ್ಮ ಮೇಲೆ ನಂಬಿಕೆ ಇರುವ ಅಥವಾ ಇಲ್ಲದಿದ್ದರೂ ಪರ್ವಾಗಿಲ್ಲ; ಒಟ್ಟಿನಲ್ಲಿ ತಿನ್ನಲು ಸಿದ್ಧವಿರಬೇಕು, ಅಂತಹವರಿಗೆ (ಮೇಲೆ ಹೇಳಿದ ತಿನ್ನಲು ಬೇಕಿರುವ ಜನರಿಗೆ) ಬಡಿಸಿರಿ. ಅವರೇನಾದರೂ ಕಾರ, ಉಪ್ಪು ಎಂದೆಲ್ಲ ದೂರಿದರೆ ಸ್ವಲ್ಪ ಸಕ್ಕರೆಯೋ, ತುಪ್ಪವೋ, ತೆಂಗಿನ ತುರಿಯೋ ಬೇಕಾಗಿರುವುದನ್ನು ಬಡಿಸಿ ಬಾಯಿ ಮುಚ್ಚಿಸಲು ಪ್ರಯತ್ನಿಸಬಹುದು. ಬದಿಯಲ್ಲಿ ಕುಡಿಯಲು ಬೇಕಿದ್ದರೆ ನೀರೋ ಅಥವಾ ಚಹವೋ, ಕಾಫಿಯೋ, ಗ್ರೀನ್ ಟೀಯೋ, ಬ್ಲಾಕ್ ಟೀಯೋ, ಇಲ್ಲ ಬೇರೇನಾದರೋ- ಅವರವರ ಅಭ್ಯಾಸಕ್ಕೆ - ಬೇಡಿಕೆಗೆ ತಕ್ಕಂತೆ ನೀಡಬಹುದು. ಉಪ್ಪಿಟ್ಟು ಬಡಿಸುವಾಗ ಅಥವಾ ಪ್ರಸ್ತುತ ಪಡಿಸುವಾಗ ನಿಮಗೆ ಹೇಗೆ ಬೇಕೋ ಹಾಗೆ, ಉಪ್ಪಿಟ್ಟಿನ ಮೂಲ ರುಚಿಗೆ ಧಕ್ಕೆಯಾಗದಂತೆ ಅಲಂಕರಿಸಬಹುದು.

ಇವರೆಲ್ಲರೂ ತಿಂದು ಕುಡಿದು ಅರ್ಧಗಂಟೆ ಕಳೆದ ಬಳಿಕ ಎಲ್ಲರೂ ಚೆನ್ನಾಗಿದ್ದರೆ, ಯಾರೂ ಹೊಟ್ಟೆ ನೀವಿಕೊಳ್ಳದೇ ಇದ್ದರೆ ನೀವು ತಿನ್ನಲು ಪ್ರಯತ್ನಿಸಬಹುದು!

ನಾನು ಹೇಳಿದ ಶೈಲಿ ನಿಮಗೆ ಒಗ್ಗಲಿಲ್ಲವೆಂದಾದರೆ, ನೀವು ಟಿವಿ ವಾಹಿನಿಗಳ ಹೊಸರುಚಿ ತೋರುವ - ಹೇಳುವ ಶೈಲಿಗೆ ಮಾರು ಹೋಗಿದ್ದೀರೆಂದಾದರೆ, ಒಗ್ಗರಣೆ ಡಬ್ಬಿಯ ಮುರಳಿಯೋ, ಸವಿರುಚಿಯ ಇನ್ನೊಬ್ಬರೋ, ಬಪ್ಪರೆ ಭೋಜನದ ಮತ್ತೊಬ್ಬರೋ, ಇಲ್ಲವೇ ನಿಮಗಿಷ್ಟವಾದ ವಾಹಿನಿಯ ಇತರ ಆ್ಯಂಕರ್‌ಗಳು ಹೇಳುವ "ನೋಡ್ಕೊಳಿ, ಮಾಡ್ಕೊಳಿ, ತಿಂದ್ಕೊಳಿ; ಅಥವಾ ಬೇರೆ ರೀತಿಯಲ್ಲಿ; ಇಲ್ಲವಾದರೆ ಎಲ್ಲರೂ ಹೇಳುವುದನ್ನೆಲ್ಲ ಬಳಸಿದ ಹೊಸದೊಂದು ನಮೂನೆಯ ಮಿಶ್ರ ರೀತಿಯಲ್ಲಿ" - ಹೇಗೆ ಬೇಕೋ ಹಾಗೆಯೇ ಹೇಳಿದ್ದೇನೆಂದು ದಯವಿಟ್ಟು ಊಹಿಸಿಕೊಳ್ಳಿ, ಕಲ್ಪಿಸಿಕೊಳ್ಳಿ - ಮಡಿ ಉಪ್ಪಿಟ್ಟು ಮಾಡಿಕೊಳ್ಳಿ - ತಿಂದುಕೊಳ್ಳಿ - ಹೇಗಿತ್ತೆಂದು ನನ್ನೊಡನೆ ಹೇಳಿಕೊಳ್ಳಿ!

(ವಿ.ಸೂ.: ನಾನು ಇಂದು ಬೆಳಗ್ಗೆ ಈ ಉಪ್ಪಿಟ್ಟು ಮಾಡಿ ಬಡಿಸಿ ತಿಂದು ಇನ್ನೂ ಚೆನ್ನಾಗೇ ಇದ್ದೇನೆ. ಮತ್ತು ನನ್ನೊಡನೆ ಇದನ್ನು ಸವಿದ ಅಕ್ಕನ ಮಗ ಮತ್ತು ಮಗಳಿಬ್ಬರೂ ಮನೆಗೆ ಹೋಗಿ ಬರುತ್ತೇವೆಂದು ಹೊರಟು ನಿಂತಿಲ್ಲ)



ಭಾನುವಾರ, ಸೆಪ್ಟೆಂಬರ್ 6

ಪಕ್ಕದ್ಮನೆ ಕುಕ್ಕರ್ ಕೂಗಿದಾಗ.....

ಇಂದು ಬೆಳಿಗ್ಗೆ ಹುಟ್ಟಿದ ಹೊಸ ಗಾದೆ....



ಪಕ್ಕದ್ಮನೆ ಕುಕ್ಕರ್ ಕೂಗಿದಾಗ ತಮ್ಮ ಮನೆಯ ಗ್ಯಾಸ್ ಆಫ್ ಮಾಡಿದ್ರಂತೆ!

ಒಂಚೂರು ಅನುಭವವೂ ಸೇರಿದೆ !

ಸೋಮವಾರ, ಆಗಸ್ಟ್ 31

ರೈಡ್ ಗಿಯ್ಡ್ ಏನಾದರೂ ಆದೀತಾಂತ?

ಇಷ್ಟೂ ಈರುಳ್ಳಿ ಒಮ್ಮೆಗೇ ಖರೀದಿ ಮಾಡಿದ್ದೇನೆ. ಮನೆಯಲ್ಲಿ ಇಟ್ಟುಕೊಳ್ಳಲು ಭಯ. ರೈಡ್ ಗಿಯ್ಡ್ ಏನಾದರೂ ಆದೀತಾಂತ?

ಬುಧವಾರ, ಮಾರ್ಚ್ 11

ಅಡುಗೆ


 ಅಡುಗೆ

    ಅಡುಗೆ ಕಲಿ ಕಲೀ ಕಲೀ....
ಒತ್ತಡ ತಾಳದೆ
ಅಡುಗೆ ಕಲಿತೆ;
ಮಿಕ್ಕವರದನ್ನು
ತಿನ್ನಲು 
ಕಲಿಯಲೇ ಇಲ್ಲ!

ಮಂಗಳವಾರ, ಜನವರಿ 6

ಒಂದೇ ಒಂದು ಹನಿ





ಬದುಕು

ಬದುಕು ಕಟ್ಟಿಕೊ ಎಂದರು -

ನಾನು ಕಟ್ಟಿಕೊಳ್ಳುತ್ತಾ ಹೋದೆ;

ಬದುಕು ನನ್ನಿಂದ

ಬಿಚ್ಚಿಕೊಳ್ಳುತ್ತಲೇ ಹೋಯಿತು!

ಮಂಗಳವಾರ, ಸೆಪ್ಟೆಂಬರ್ 23

ಔಟಲ್ವಾ..... ಸ್ವಾಮೀ ದೇವರೇ.....

ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು...
ಅಮ್ಮ- ಹೊಡ್ದನಾ.... ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ.... ಯಾಕೆ ಹೊಡ್ದದ್ದು...?
ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ.
ಅಮ್ಮ- ಹ್ಞಾ.. ಹಾಗಾ.... ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ.
ನಾನು- ಹ್ಹೋ.... ವೋ..... ವಿಕೆಟ್.... ಇಲ್ಲ ಥರ್ಡ್ ಅಂಪಾಯರ್
ಅಮ್ಮ- ಏನಾಯ್ತು....ಏನಾಯ್ತು...
ನಾನು- ಸ್ವಲ್ಪ ಇರಿ.... ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ
ಅಮ್ಮ- ಅದ್ಯಾರು?
ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ.
ಶ್ರೀಪತಿ- ಥರ್ಡ್ ಅಂಪಾಯರ್ ಅಂದ್ರೇ....(ಸಾಗಿತು ವಿವರಣೆ)
ನಾನು- ಅಬ್ಬಾ... ನಾಟೌಟ್!
ಅಮ್ಮ- ಇಲ್ವಾ ಸದ್ಯ. ಸ್ವಾಮೀ ದೇವರೇ... (ಮಿಕ್ಕಂತೆ ದೇವರನ್ನು ನಂಬದವರು)
ಶ್ರೀಪತಿ- ಆಹಾ.... ಆರ್ರ್ಹಾ...... ಫೋರ್... ಯೇ... ಇಲ್ಲಲ್ಲ ಸಿಕ್ಸ್
ಅಮ್ಮ- ಅದೆಂಥ?
ನಾನು- ಫೋರ್ ಅಂದ್ರೇ.....(ಫೋರ್- ಸಿಕ್ಸ್ ಬಗ್ಗೆ ಸಣ್ಣ ಉಪನ್ಯಾಸ)
ನಾನು- ವ್ಹಾವ್..... ಹ್ಯೂಜ್ ಸಿಕ್ಸ್!
ಶ್ರೀಪತಿ- ಮತ್ತೊಂದು ಸಿಕ್ಸ್
(ಅಷ್ಟರಲ್ಲಿ ನಾನು ಎದ್ದು ಟಾಯ್ಲೆಟ್‌ಗೆ ಹೋದೆ)
ಅಮ್ಮ- ನೀನು ಎಲ್ಲಿ ಹೋದ್ದು...? ಅಂವ ಸುಮಾರು ಬೌಂಡರಿ ಹೊಡ್ದ. ಆದ್ರೆ ಆಚೆಯ ಹಸಿರು ಡ್ರೆಸ್ ಹಾಕಿದವರು ಗೆರೆ ದಾಟಲು ಬಿಡುವುದೇ ಇಲ್ಲ......
ಶ್ರೀಪತಿ- ಅಯ್ಯೋ ಅದು ಅವರ ಆಟ ಅಮ್ಮಾ. ಇವರು ಬೌಂಡರಿ ಹೊಡೆಯದಂತೆ ತಡೆಯೋದೆ ಅವರ ಕೆಲಸ ಮತ್ತು ಚಾಕಚಕ್ಯತೆ.
ಅಮ್ಮ- ಹೌದಾ..... ಹಾಗಾ..
(ಅಷ್ಟರಲ್ಲಿ ಮೈದುನನ ಅಗಮನ)
ಅಮ್ಮ-  ಹೇ... ನೀನು ಯಾಕೆ ಊಟಕ್ಕೆ ಬರ್ಲಿಲ್ಲಾ..... ಆಞ... ಅದೆಂಥ ಕೈಯಲ್ಲಿ..... ಈಗ ಊಟ ಮಾಡ್ತಿಯಾ.... ರಾತ್ರಿ ಊಟಕ್ಕಿದ್ದಿಯಾ..... ಬೇಗ ಬಾ ಮನೆಗೆ.... (ಹೀಗೆ ಮೈದುನ ಹಿಂದೆ ಹೋಗಿ ಒಂದು ಹದ್ನೈದು ನಿಮಿಷ ಹೋಯ್ತು)
ಶ್ರೀಪತಿ: ಹೇ.... ನೋಡ್ನೋಡ್ನೋಡು ಹೇಗೆ ಡೈವ್ ಹೊಡ್ದ. ಎಕ್ಸೆಲಂಟ್ ಕ್ಯಾಚ್....... (ಅವರಿಗೆ ಇಷ್ಟವಾಗಿದ್ದ ಹಳೆಯ ಕ್ಯಾಚ್‌ಗಳ ವಿವರಣೆ.....)
ಅಮ್ಮ: ಮರಳಿ ಬಂದು ಅವರ ಜಾಗದಲ್ಲಿ ಕುಳಿತು, ಏನಾಯ್ತು, ಎಷ್ಟಾಯ್ತು...? ನಂಗೆ ಟೆನ್ಷನ್ ಆಗ್ತದೆ...
ನಾನು:  ಯಾಕೆ?
ಅಮ್ಮ: ಇಂಡಿಯಾ ಸೋತರೇ....?
ನಾನು: ಸೋತರೆ ಏನಾಯ್ತು? ಆಟವನ್ನು ಆಟವಾಗಿ ನೋಡಿ, ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ತಾರೆ.
ಅಮ್ಮ: ನಂಗೆ ಟೆನ್ಷನ್ ಆಗ್ತದೆ....
ಶ್ರೀಪತಿ: ಈ ಅಮ್ಮನಿಗೆ ಹೀಗೆ ಬೇಡದ ವಿಷಯಕ್ಕೆ ಟೆನ್ಷನ್ ಮಾಡೇ ಬಿಪಿ ಜಾಸ್ತಿ ಆಗೋದೂ........
ಅಮ್ಮ: ಲಲಿತ್ಮಾಯಿಗೆ ಫೋನ್ ಮಾಡ್ತೇನೆ....
ನಾನು:  ಯಾಕೆ?
ಅಮ್ಮ: ಅವಳಿಗೆ ಕ್ರಿಕೆಟ್ ಚೆನ್ನಾಗಿ ಗೊತ್ತು. ಭಾರತ ಸೋಲ್ತದ ಗೆಲ್ತದಾಂತ ಅವಳು ಹೇಳ್ತಾಳೆ.
ನಾನು ಇವರು ಮುಖ-ಮುಖ ನೋಡ್ಕೊಂಡೆವು

(ವರ್ಷಗಳ ಹಿಂದೆ ಕ್ರಿಕೆಟ್ ನೋಡ್ತಿದ್ದಾಗ ಬರೆದಿದ್ದೆ. ಅರ್ಧಕ್ಕೆ ಬರೆದಿದ್ದ ಇದು ಭೂ(ಕಂಪ್ಯೂಟರ್)ಗತ ವಾಗಿತ್ತು. ಮತ್ತೆ ಹೇಗೆ ಮುಂದುವರಿಸಬೇಕಿದ್ದೆ ಎಂಬುದ ನಂಗೆ ಈಗ ಮರೆತು ಹೋಗಿದೆ. ಹೇಗಿತ್ತೋ ಹಾಗೇ ಪೋಸ್ಟ್ ಮಾಡೋಣ ಅನ್ನಿಸಿತು, ಹಾಗೇ ಮಾಡುತ್ತಿದ್ದೇನೆ)


ಶನಿವಾರ, ಮೇ 4

ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ

ಪ್ರಜಾವಾಣಿ ಬ್ಲಾಗಿಲನು ತೆರೆದಾಗ........
ಸಾಕ್ಷಿ ಶಾನಿಯನ್ನು ಕಂಡದ್ದು ಹೀಗೆ


ಬ್ಲಾಗಿಲನು ತೆರೆದು...

ಶಾನಿಯ ರೈಲು!





ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು!
ಹೀಗೆ ತಮಾಷೆಯಾಗಿ ಬರೆಯುವ, ತನ್ನನ್ನೇ ತಮಾಷೆ ಮಾಡಿಕೊಳ್ಳುವ `ಶಾನಿ' ಅವರ ಬ್ಲಾಗು `ಶಾನಿಯ ಡೆಸ್ಕಿನಿಂದ' (shaanidesk.blogspot.in). ಯಾರೀ ಶಾನಿ- ಎನ್ನುವ ಕುತೂಹಲದಿಂದ ಇಣುಕಿ ನೋಡಿದರೆ ಹೆಚ್ಚಿನ ಮಾಹಿತಿಯೇನೂ ಸಿಗುವುದಿಲ್ಲ. `ಹೋಗಿದ್ದೇ ಊರು, ಸಾಗಿದ್ದೇ ದಾರಿ' ಎನ್ನುವ ಮನೋಭಾವದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- “ಕಂಡಾಪಟ್ಟೆ ಮೂರ್ಖತನ.
ಹುಟ್ಟಾ ಪೆದ್ದು. ಎರಡು ಬಾರಿ `ಅಂತಾರಾಷ್ಟ್ರೀಯ ಮೂರ್ಖ' ಪ್ರಶಸ್ತಿ ಲಭಿಸಿದೆ”. ಇಂಥ ಶಾನಿ, ವಿಮಾನ ಬಿಡಬೇಕು ಎಂದುಕೊಂಡಿದ್ದರಂತೆ. ಅದು ಒಗ್ಗದೆ ಹೋದ ಕಾರಣ ರೈಲು ಬಿಡಲು ಹೊರಟಿದ್ದಾರೆ, ಬ್ಲಾಗಿನ ಮೂಲಕ.
ಈಗ ಡೆಸ್ಕ್‌ನಲ್ಲಿ ಇಣುಕೋಣ. ಇಲ್ಲಿರುವುದೆಲ್ಲ ಹೆಚ್ಚೂಕಡಿಮೆ ರೈಲು ಬಿಡುವ ಬರಹಗಳೇ. `ಕ್ರಿಕೆಟ್ ತಂಡಗಳೂ ನಮ್ಮ ಹೀರೋಗಳೂ...' ಎನ್ನುವ ಬರಹ ನೋಡಿ:
“ಇವತ್ತು ಬೆಳ್ಳಂಬೆಳಿಗ್ಗೆ ನನ್ನ ಇಮೇಲ್ ಖಾತೆ ತೆರೆದು ನೋಡಿದಾಗ ಮಹೇಶ್ ಭಟ್ರ ಸಂದೇಶವಿತ್ತು. `ನಿಮ್ಮ ಇತ್ತೀಚಿನ ಬರಹಗಳಲ್ಲಿ ಗಂಡನ ಮನೆಯ ವ್ಯವಹಾರಗಳನ್ನು ಗುರಿಯಾಗಿಸಿದ್ದೀರಿ. ಯಾಕೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ `ಬೇರೆಯವರ ಗಂಡನ ಮನೆಯ ಬಗ್ಗೆ ಬರೆಯೋದಕ್ಕಿಂತ ನನ್ನ ಗಂಡನ ಮನೆಯ ವ್ಯವಹಾರಗಳನ್ನು ಬರೆಯುವುದೇ ಸೇಫ್ ತಾನೆ. ಹುಟ್ಟಾ ಸೋಂಬೇರಿಯಾಗಿರುವ ಮತ್ತು ತಲೆ ಇಲ್ಲದ ನನಗೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ' ಎಂದು ಉತ್ತರಿಸಿ ಬಚಾವಾಗಲು ಪ್ರಯತ್ನಿಸಿದ್ದೆ (ಈ ಹೇಳಿಕೆಯ ಮೇರೆಗೆ ಶಾನಿ ಅವರನ್ನು ಸ್ತ್ರೀಲಿಂಗಕ್ಕೆ ಸೇರಿಸಬಹುದು -ಸಾಕ್ಷಿ).
ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಟಿಕರ್ತ. ಇದನ್ನು ನಿಮಗೂ ಯಾರಾದರೂ ಕಳುಹಿಸಿರಲೂಬಹುದು. ಇಲ್ಲವಾದರೆ ಸುಮ್ಮನೆ ನಕ್ಕುಬಿಡಿ.
ಆಸ್ಟ್ರೇಲಿಯಾ ತಂಡ = ರಾಜ್‌ಕುಮಾರ್ (ಯಾವಾಗಲೂ ಹಿಟ್!). ದಕ್ಷಿಣ ಆಫ್ರಿಕಾ = ಶಂಕರ್ ನಾಗ್ (ಪ್ರತಿಭಾವಂತ, ಆದರೆ ದುರದೃಷ್ಟವಂತ). ಶ್ರೀಲಂಕಾ = ಸುದೀಪ್ (ಪ್ರತಿಭಾವಂತ, ಆದರೆ ನೋ ಹಿಟ್!). ಬಾಂಗ್ಲಾದೇಶ = ಪ್ರೇಮ್ (ಅದೃಷ್ಟವಂತ). ನ್ಯೂಜಿಲೆಂಡ್ = ರಮೇಶ್ (ಸದ್ದಿಲ್ಲದಂತೆ ಉನ್ನತಿ). ಇಂಗ್ಲೆಂಡ್ = ಶಿವರಾಜ್‌ಕುಮಾರ್ (ಹಿಟ್ಟಾ ಫ್ಲಾಪಾ ಗೊತ್ತಿಲ್ಲ!). ಐರ್ಲೆಂಡ್ = ಗಣೇಶ್ (ಮೆಗಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ). ವೆಸ್ಟಿಂಡೀಸ್ = ವಿಜಯ್ (ಸದ್ದು ಮಾತ್ರ, ಪರ್ಫಾಮೆನ್ಸ್ ಸುದ್ದಿ ಇಲ್ಲ). ಪಾಕಿಸ್ತಾನ = ವಜ್ರಮುನಿ (ಯಾವಾಗಲೂ ಖಳನಾಯಕನೇ). ಭಾರತ = ಜಗ್ಗೇಶ್ (ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!)”.
ಕ್ರಿಕೆಟ್ ಬಗೆಗಿನ ಮೇಲಿನ ಬರಹದಲ್ಲಿನ ಹೋಲಿಕೆಗಳು ಈಗ ಕೊಂಚ ಹಳತು ಎನ್ನಿಸುವಂತಿವೆ. ಹಾಗೆಂದು, ಶಾನಿಯವರ ಹಾಸ್ಯಪ್ರಜ್ಞೆಗೆ ಸಮಕಾಲೀನ ಸ್ಪರ್ಶವಿಲ್ಲ ಎನ್ನುವಂತಿಲ್ಲ. ಇದಕ್ಕೆ ಉದಾಹರಣೆ, `ನಮ್ಮನೆಯಲ್ಲೂ ಪಟ್ಟಿ ಬಿಡುಗಡೆಯಾಯ್ತು!' ಎನ್ನುವ ಟಿಪ್ಪಣಿ. ಪ್ರಸ್ತುತ ನಾಡನ್ನೆಲ್ಲ ವ್ಯಾಪಿಸಿರುವ ಚುನಾವಣಾ ಜ್ವರದ ಕಾವು ಈ ಬರಹಕ್ಕೆ ಪ್ರೇರಣೆಯಾಗಿದೆ. ವಿವಿಧ ಪಕ್ಷಗಳ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಶಾನಿ, ತಮ್ಮ ಮನೆಯ ದಿನಸಿ ಪಟ್ಟಿಗೆ ಹೋಲಿಸುತ್ತಾರೆ. ಮನೆಯ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿ ಸ್ವಾರಸ್ಯಕರವಾಗಿದೆ. ಅದನ್ನು ಬ್ಲಾಗಿನಲ್ಲೇ ಓದಿ.
ಶಾನಿ ಅವರ ಡೆಸ್ಕ್‌ನ ವಸ್ತು ವೈವಿಧ್ಯ ಗಮನಸೆಳೆಯುವಂತಿದೆ. ತಮ್ಮ ಹುಟ್ಟಿದ ದಿನ ಗೊತ್ತಿಲ್ಲದೇ ಇರುವುದರಿಂದ ಸಾಕಷ್ಟು ಲಾಭವಾಗಿದೆ ಎನ್ನುತ್ತ, `ಹನ್ನೆರಡು ರಾಶಿಯೊಳಗೊಂದು ರಾಶಿ' ಬರಹದಲ್ಲಿ ಹದಿಮೂರನೇ ರಾಶಿಯನ್ನು ಬ್ಲಾಗಿಗರು ಸೃಷ್ಟಿಸುತ್ತಾರೆ. ಮರೆಗುಳಿ ಪ್ರೊಫೆಸರರೊಬ್ಬರ ಬಗ್ಗೆ ಸೊಗಸಾದ ಬರಹವಿದೆ. `ಮಳೆ, ಆಷಾಢ, ಅಳಿಯ, ಎಮ್ಮೆ, ಇತ್ಯಾದಿ...' ಬರಹ ಲಲಿತ ಪ್ರಬಂಧದ ಗುಣಗಳನ್ನು ಹೊಂದಿದೆ.
ಗದ್ಯದಿಂದ ಮತ್ತೆ ಪದ್ಯಕ್ಕೆ ಬರೋಣ. `ಏಡ್ಸ್' ಎನ್ನುವುದೊಂದು ಚುಟುಕು. ಅದು ಹೇಳುತ್ತದೆ- `ಏಡ್ಸ್ ಬಾರದಿರಲು / ಏನು ಮಾಡಬೇಕು? / ಏನೂ / ಮಾಡದಿರಬೇಕು!'. ಈ ಹನಿಗೆ ಓದುಗರ ಒಂದು ಪ್ರತಿಕ್ರಿಯೆ- `ಏನೂ ಬರೀಬೇಡಿ ಮತ್ತೆ. ರಾಜ್ಯಪಾಲರು ಡಾಕ್ಟರೇಟ್ ಕೊಡಲ್ಲ!'.
ನಗಿಸುವುದರಲ್ಲಿ ಶಾನಿ ಅವರು ತಮ್ಮ ಬರಹಗಳಲ್ಲಿ ಯಶಸ್ವಿ ಆಗಿರುವಂತೆಯೇ ವಿಫಲವಾಗಿರುವುದೂ ಇದೆ. ಆದರೆ, ನಗಿಸಲಿಕ್ಕಾಗಿ ಅವರು ಅಡ್ಡಮಾರ್ಗ ಹಿಡಿದಿಲ್ಲ ಎನ್ನುವುದನ್ನು ಮೆಚ್ಚಿಕೊಳ್ಳಬೇಕು.
-ಸಾಕ್ಷಿ.

ಶುಕ್ರವಾರ, ಏಪ್ರಿಲ್ 19


ಯಾರ ಕಣ್ಣೋ
ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು...!
---

ನಾನೂ ನಕ್ಕೆ
ಅವಳು -
ಅವರ ನೋಡಿ ನಕ್ಕಳಂತೆ
ಅವರಿಗೀಗ -
ಎರಡು ಮಕ್ಕಳಂತೆ
(ಹೀಗೆ ಹೇಳಿದರು ಡುಂಡಿ)
ನಾನೂ ಅವನ ನೋಡಿ ನಕ್ಕೆ
ಅಂವ ಕೇಳಿದ
ನಿಂಗೇನು ಸೊಕ್ಕೇ?
---

ಶನಿವಾರ, ಏಪ್ರಿಲ್ 6

ನಮ್ಮನೆಯಲ್ಲೂ ಪಟ್ಟಿ ಬಿಡುಗಡೆಯಾಯ್ತು!


ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಹೆಣಗಾಡುತ್ತಿರುವಂತೆ ನಮ್ಮನೆಯಲ್ಲೂ ಪಟ್ಟಿಯ ಕುರಿತು ಗೊಂದಲ, ಆತಂಕ, ಅನುಮಾನ, ಸಮ್ಮತಿ, ಅಸಮ್ಮತಿಗಳೆಲ್ಲ ನಡೆಯುತ್ತಿದ್ದವು. ಪಕ್ಷಗಳ ಹೈ ಕಮಾಂಡಿನಂತೆಯೇ ನಮ್ಮನೆಯ ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ತಲೆಯನ್ನು ಕೆರೆದು ಕೊರೆದೂ ತಯ್ಯಾರಿಸಿದ ಪಟ್ಟಿ ಕೊನೆಗೂ 36 ಗಂಟೆಗಳ ಬಳಿಕ ಅಂತಿಮವಾಗಿ ಓಕೆಯಾಯಿತು. ಪಟ್ಟಿಯನ್ನು ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ಅಳೆದೂ ಸುರಿದೂ ಒಪ್ಪಿ ಕೊನೆಗೂ ನನ್ನ ಕೈಗೊಪ್ಪಿಸಿದರು.

ನಮ್ಮನೆಯ ಹೈಕಮಾಂಡ್ ಆಗಿರುವ ಅ(ತ್ತೆ)ಮ್ಮ ಸತತ ಮೂರು ದಿನಗಳ ಕಾಲ ತಲೆ ಕೆಡಿಸಿಕೊಂಡು ತಯಾರಿಸಿದ ಪಟ್ಟಿಯನ್ನು ಇಂದು ಬೆಳಗ್ಗೆ ನಾನು ಹೊರಟು ನಿಂತಾಗ ಸಾಮಾನಿನ ಮಾಮೂಲಿ ಚೀಲದೊಡನೆ ನನ್ನ ಕೈಯಲ್ಲಿಟ್ಟರು.

ಬಿಡಿಸಿ ನೋಡಿದೆ. ಅನ್ನದ ಕ್ಷೇತ್ರದಿಂದ ಅಕ್ಕಿಗೆ ಜಾಗವಿತ್ತು. ಇಂಗು ಒಮ್ಮೆ ಸ್ಥಾನ ಪಡೆದಿದ್ದರೂ, ಮತ್ತೆ ಕಳೆದುಕೊಂಡಿತ್ತು. ಸಾಂಬಾರ ಕ್ಷೇತ್ರದಿಂದ ಸಾಂಬಾರ್ ಪೌಡರ್ ಹಾಗೂ ರಸಂ ಪೌಡರ್ ಎರಡಕ್ಕೂ ಧಕ್ಕಿದೆ. ಚಹಾ-ಕಾಫಿ ಕ್ಷೇತ್ರದಲ್ಲಿ ಸಕ್ಕರೆ ಸ್ಥಾನ ಪಡೆದಿದ್ದರೆ, ಕಾಳುಗಳ ಕಡೆಯಿಂದ ಕಡ್ಲೆ, ತಿಂಗಳವರೆ, ರಾಜ್ಮಾಗಳು ಅವಕಾಶ ಪಡೆದುಕೊಂಡಿದ್ದವು. ಮಿಕ್ಕಂತೆ ಎಣ್ಣೆ, ಗೋಧಿ ಹುಡಿ, ಹಪ್ಪಳ, ಪಪ್ಪಡ, ಸೆಂಡಿಗೆ, ಮೆಣಸಿನ ಹುಡಿ ಇವುಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದವು.

ವಿಷಯವಿಷ್ಟೆ. "ಮುಂದಿನವಾರ ನಾನು ಒಂದು ನಾಲ್ಕು ದಿನ ತವರಿಗೆ ಹೋಗುತ್ತಿದ್ದೇನೆ. ಏನಾದರೂ ಅಗತ್ಯ ವಸ್ತುಗಳು ಬೇಕಿದ್ದರೆ ಹೇಳಿ" ಎಂದಿದ್ದೆ ಅಮ್ಮನಿಗೆ. ಹಾಗಾಗಿ ಅವರು ತೀವ್ರವಾಗಿ ತಲೆಕೆಡಿಸಿಕೊಂಡು ಪಟ್ಟಿ ತಯ್ಯಾರಿಸಿದ್ದರು. "ಮೆಣಸು ಸ್ವಲ್ಪ ಇದೆ, ಬರಿಬೇಕೋ, ಬೇಡ ಕಾಣ್ತದೆ, ನಾಲ್ಕು ದಿನದಲ್ಲಿ ನೀನು ಬರ್ತಿಯಲ್ಲ" ಎನ್ನುತ್ತಾ ಪ್ರತಿಯೊಂದು ವಸ್ತುವನ್ನು ಬರೆದು - ಹೊಡೆದು - ಹರಿದು ಕುಳಿತಿದ್ದರು. ಏನೂ ಗಡಿಬಿಡಿ ಇಲ್ಲ ನಿಮಗೆ ನೆನಪಾದಂತೆಲ್ಲ ಬರೆಯುತ್ತಾ ಹೋಗಿ ಅಂತ ನಾನವರಿಗೆ 36 ಗಂಟೆಗಳ ಸಮಯಾವಕಾಶ ನೀಡಿದ್ದೆ.

 ಬೈ ಡಿಫಾಲ್ಟ್ ಆಗಿ ಕ್ಷುಲ್ಲಕ ವಿಚಾರಗಳಿಗೆಲ್ಲ ಬೇಕೋ- ಬೇಡವೋ, ಅದೋ-ಇದೋ ಎಂದೆಲ್ಲ ತಲೆ ಕೆಡಿಸಿಕೊಳ್ಳುತ್ತಾ ಗೊಂದಲಕ್ಕೆ ಬೀಳುವ ಅವರು ಈ ಸಾಮಾನು ಪಟ್ಟಿ ಮಾಡುವ ವಿಚಾರದಲ್ಲೂ ತಲೆಕೆಡಿಸಿಕೊಳ್ಳುತ್ತಿರುವುದು ನನಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪಟ್ಟಿ ತಯ್ಯಾರಿಯಂತೆಯೇ ಕಂಡಿತ್ತು!

ಗುರುವಾರ, ಫೆಬ್ರವರಿ 14

ಅವಳ ಹಿಂದೆ ನೀನು ನಡೆದು......



ಬಂಗಾರಪ್ಪೀ....,
ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು ಅಂತ ಟೀಕಿಸಿದವರೆ, ಆದರೆ ಈ ಸರ್ತಿ ಮಾತ್ರ ಪ್ರೇಮಿಗಳ ದಿನಾಚರಣೆ ಅಂದಾಗ ನಿನ್ನ ನೆನಪು ತುಂಬ ತುಂಬ ಆಗ್ತಾ ಇದೆ.

ನಾವು ಪ್ರೇಮಿಗಳಾಗದೇ ಸೀದ ಮದುವೆಯೇ ಆಗಿಬಿಟ್ಟೆವು. ಮತ್ತೆ ಪುರ್ಸೊತ್ತಲ್ಲಿ ಪ್ರೇಮಿಗಳಾಗೋಣ ಅಂತ ಭಾವಿಸಿದ್ದೆವು. ಸಿನಿಮೀಯ ರೀತಿಯಲ್ಲಿ ನಮ್ಮ ಮದುವೆ ಆಯಿತು. ನಮ್ಮ ಮದುವೆಯ ವೇಳೆಗೆ ನಾವಿಬ್ಬರು ಹದಿ ಹರೆಯ ದಾಟಿ, ಯೌವ್ವನದ ಕೊನೆಯಂಚಿಗೆ ಬಂದು ಮುದಿ ಹರೆಯದ ಹೊಸ್ತಿಲಲ್ಲಿದ್ದೆವು. ನಮ್ಮದು ಅಂತರ್ಜಾತಿ ವಿವಾಹ ಅಂದಾಗ, ಲವ್ವಾ ಅಂತ ಮಂದಿ ಕೇಳುತ್ತಿದ್ದರು. ಆದಕ್ಕೆ ನಾವು ಇಲ್ಲ ಇನ್ಮೇಲೆ ಲವ್ವು ಅನ್ನುತ್ತಾ ನೆಗಾಡಿದ್ದೆವಲ್ಲ.

ಸ್ವತಂತ್ರವಾಗಿ ಒಂಟಿಯಾಗೇ ಬದುಕುತ್ತಿದ್ದ ನಾವಿಬ್ಬರು ಮದುವೆಯ ಬಳಿಕದ ಜಂಟಿ ಜೀವನಕ್ಕೆ ಒಗ್ಗಿಕೊಂಡು ಸ್ವಲ್ಪ ದಿವಸ ಮಾತ್ರವೇ ಆಗಿತ್ತು. ಪರಸ್ಪರ ಅರ್ಥ ಮಾಡಿಕೊಂಡೆವೋ; ಅಥವಾ ಅಪಾರ್ಥ ಮಾಡಿಕೊಂಡೆವೋ ಅಂತೂ ಇನ್ನು ಪರ್ವಾಗಿಲ್ಲ ಅಂತ ಜೀವನದಲ್ಲಿ ಭದ್ರ ಹೆಜ್ಜೆಯೂರಿ ಮುನ್ನುಗ್ಗುತ್ತಿರುವಾಗಲೇ ಬಿತ್ತಲ್ಲ ಬ್ರೇಕ್!

ಒಂದು ವರ್ಷ ಕಳೆದು ಎರಡನೇ ವರ್ಷಕ್ಕೆ ಅಡಿ ಇಟ್ಟಿದ್ದೆವು ಅಷ್ಟೆ. ನಮಗೆ ಈ ವಯಸ್ಸಲ್ಲಿ ಮಗು ಬೇಡವೆಂದು ನಿರ್ಧರಿಸಿದ್ದರೂ, ಮಗು ಬೇಕೆಂಬ ನನ್ನ ಸ್ತ್ರೀ ಸಹಜ ಬಯಕೆ ನಿನಗೆ ಅರ್ಥವಾಯಿತೋ ಎಂಬಂತೆ ನೀನೇ ನನಗೆ ಮಗುವಾಗಿ ಬಿಟ್ಟೆ!
ನಿನ್ನ ಫ್ರೆಂಚ್ ಫ್ರೆಂಡ್ ಒಬ್ಬಾಕೆ ನಿನನ್ನು ಮನುವಾ ಅಂತ ಕರೆಯುತ್ತಿದ್ದಳಂತೆ. ಆಗೊಮ್ಮೆ ಈಗೊಮ್ಮೆ ನಾನೂ ನಿನ್ನ ಮನುವಾ ಅಂದರೆ ನೀನೆಷ್ಟು ಪುಳಕಗೊಳ್ಳುತ್ತಿದ್ದೆ. ಫ್ರೆಂಚ್ ಭಾಷೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ನೀನು ನನಗೆ ಪಾರ್ ಅಮೋರ್, ಮುನಾಮಿ, ಬೀಝೂ... ಎಂಬೆಲ್ಲ ಶಬ್ದಗಳನ್ನು ಕಲಿಸಿದ್ದೆ. ನಿಂಗೊತ್ತಾ..... ನಮಗೇನು ಹದಿಹರೆಯವೇ ಎಂದೆಲ್ಲ ಒಣಜಂಭ ಕೊಚ್ಚಿಕೊಳ್ಳುತ್ತಿದ್ದ ನಾವುಗಳು ನಮಗೇ ಗೊತ್ತಿಲ್ಲದಂತೆ ಗಾಢವಾದ ಪ್ರೀತಿಗೆ ಬಿದ್ದಿದ್ದೆವು!

ನೀನು ನನಗೆ ಬೇಕು; ನಾನು ನಿನಗೆ ಬೇಕು- ಪ್ರಪಂಚ ಸುತ್ತಬೇಕು ಎಂದೆಲ್ಲ ಅನಿಸಲಾಂಭಿಸಿದ ಹೊತ್ತಲ್ಲಿ ಮಧ್ಯದಲ್ಲಿ ಅವಳು ಬಂದಳಲ್ಲ ಮಾರಿ. ಬಂದವಳು ನನ್ನಿಂದ ನಿನ್ನನ್ನು ಕಸಿದೇ ಬಿಟ್ಟಳು! ನಿನ್ನಲ್ಲಿದ್ದ ಗಾಢವಾದ ಇಚ್ಛಾಶಕ್ತಿಯನ್ನು ಬಲ್ಲವಳಾಗಿದ್ದ ನಾನು, ನೀನೇನು ಅವಳ ವಶವಾಗಲಾರೆ ಎಂದೇ ನಂಬಿದ್ದೆ. ಆದರೆ ಅವಳ ವಿರುದ್ಧದ ನಮ್ಮ ಹೋರಾಟ ವ್ಯರ್ಥವೇ ಆಯಿತು ಮತ್ತು ಕ್ಯಾನ್ಸರೆಂಬ ರಕ್ಕಸಿ ಹೆಸರಿನ ಅವಳೇ ಗೆದ್ದುಬಿಟ್ಟಳು.

ನೀನು ಅವಳ ಹಿಂದೆ ನಡೆದು ಒಂದು ವರ್ಷವೇ ಆಗುತ್ತಾ ಬಂತು. ಅಂದ ಹಾಗೆ ನಮ್ಮ ಮದುವೆಯ ಬಳಿಕ ಇದು ಮೂರನೆಯ ವ್ಯಾಲಂಟೈನ್ಸ್ ಡೇ. ಮೊದಲ ಬಾರಿ ಫೆಬ್ರವರಿ 14ರಂದು  ನಮಗೆ ಮದುವೆಯಾಗಿ ಒಂದೂ ಮುಕ್ಕಾಲು ತಿಂಗಳು ಆಗಿತ್ತು. ಆ ದಿನ ನಿನ್ನೊಬ್ಬ ಸ್ನೇಹಿತ ಬಾಂಬೆಯಿಂದ ಬಂದಿದ್ದರು ಅಂತ ನೀನು ನನ್ನನ್ನು ಬಿಟ್ಟು ಅವರೊಂದಿಗೆ ಹೋಗಿದ್ದೆ. ಮಿತ್ರರ ಮಧ್ಯೆ ನಾನ್ಯಾಕೆ ಇನ್ನೂ ಬೇಕಾದಷ್ಟು ಫೆಬ್ರವರಿಗಳು ಬರ್ತಾವಲ್ಲ ಅಂತ ನಾನೂ ಸುಮ್ಮನಿದ್ದೆ. ಎರಡನೇ ವರ್ಷದ ವ್ಯಾಲಂಟೈನ್ ಡೇಯಂದು ದಿನಗಳನ್ನೆಣಿಸುತ್ತಾ ಕೆಎಂಸಿ ಆಸ್ಪತ್ರೆಯಲ್ಲಿ ಮಲಗಿದ್ದೆ ನೀನು. ಅಂದು ನೋಡಲು ಬಂದ ನಿನ್ನ ಆಪ್ತಮಿತ್ರ ಹೌ ಆರ್ ಯೂ ಮೈ ವ್ಯಾಲಂಟೈನ್ ಅಂದಾಗ ಸಂಪೂರ್ಣ ಅಶಕ್ತನಾಗಿದ್ದ ನಿನ್ನ ಕಣ್ಣಲ್ಲಿ ಸುಳಿದ ಮಿಂಚು ಕಂಡು ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆದಾದ ಮೂರೇ ದಿವಸಕ್ಕೆ ನನ್ನನ್ನು ಶಾಶ್ವತವಾಗಿ ತೊರೆದು ಹೋಗಿದ್ದೆ.

ನೋಡ ನೋಡುತ್ತಿರುವಂತೆ ನನ್ನ ಕೈಯಿಂದ ಯಾರೋ ಕಸಿದುಕೊಂಡಂತೆ, ನನ್ನ ಕೈಗಳಲ್ಲೇ ನೀನು ಕೊನೆಯುಸಿರು ಬಿಟ್ಟೆ. ನೀನು ಸತ್ತ ಮೇಲೂ ನೀನು ಬದುಕಿರಬೇಕಿತ್ತು ಮುದ್ದಪ್ಪೀ.... ಕೊನೆ ಪಕ್ಷ. ನೀನು ಇರುವಾಗ ನಿನ್ನನ್ನು ದೂಷಿಸುತ್ತಿದ್ದವರೆಲ್ಲ ನಿನ್ನನ್ನು ಹಾಡಿಹಾಡಿ ಹೊಗಳುವುದನ್ನು ನೋಡುವುದಕ್ಕೆ ನೀನಿರಬೇಕಿತ್ತು. ನಂಬಿದ ಜನರ ತಿರುಗಿ ನಿಲ್ಲುವ ಪರಿ ಮತ್ತು ಅವರ ಮಾತು ವರ್ತನೆಗಳನ್ನು ನೋಡುವುದಕ್ಕಾದರೂ ನೀನಿರಬೇಕಿತ್ತು. ಒಂದೇ ಒಂದು ನಿಮಿಷದಲ್ಲಿ ಪ್ರಪಂಚ ಪರಿವರ್ತನೆಯಾಗಿರುವದನ್ನು ನೋಡುವುಕ್ಕೂ ನೀನು ಇರ ಬೇಕಿತ್ತು.

ಇರಲಿ, ನೀನು ಸತ್ತು ಬದುಕಿದೆ. ನಾನು ಬದುಕಿ ಸತ್ತೆ. ನನ್ನ ಆಧ್ಯಾತ್ಮ ಗುರುಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆತ್ಮಕ್ಕೆ ಸಾವಿಲ್ಲವಂತೆ. ಶಕ್ತಿ ಎಂದಿಗೂ ನಾಶವಾಗದು ಅದು ಬದಲಾಗುತ್ತದೆ ಅಥವಾ ರೂಪಾಂತರವಾಗುತ್ತದೆಯಂತೆ. ಹಾಗಾಗಿ ನೀನು ದೇಹ ತ್ಯಾಗ ಮಾಡಿದ ಬಳಿಕ ಹೇಗಿದ್ದಿ ನನಗೆ ಗೊತ್ತಿಲ್ಲ. ಎಲ್ಲಿದ್ದಿ ಎಂಬುದೂ ನನಗೆ ಗೊತ್ತಿಲ್ಲ. ಎಲ್ಲಿಯಾದರೂ ಇದ್ದಿಯಾ ಎಂಬುದಾಗಿ ಗಟ್ಟಿಯಾಗೇ ನಂಬಿದ್ದೇನೆ ನಾನು.

ನೀನು ಸತ್ತಮೇಲೆ ನಿನ್ನ ಮೇಲೆ ದೂರುಗಳಿಲ್ಲ. ನನ್ನೊಂದಿಗೆ ಬರುವುದಿಲ್ಲ, ಮಾತನಾಡುವುದಿಲ್ಲ ಎಲ್ಲೂ ಕರೆದೊಯ್ಯುವುದಿಲ್ಲ ಎಂಬ ಮುನಿಸೂ ಇಲ್ಲ. ಯಾಕೆಂದರೆ ಎಲ್ಲಿದ್ದರೂ, ಹೇಗಿದ್ದರೂ, ಯಾವಾಗಿದ್ದರೂ ನೀನು ನನ್ನೊಂದಿಗೇ, ನನ್ನೊಳಗೇ ಇರುತ್ತಿಯಲ್ಲ. ಕಾಯುವ, ಬೇಯುವ ಬೇಗೆಯಂತೂ ಇಲ್ಲವೇ ಇಲ್ಲ ಈಗ.

ಬದುಕಿದ್ದಾಗ ತಮಾಷೆಗೂ ನಿನ್ನನ್ನು ಏಕವಚನದಲ್ಲಿ ಕರೆಯುತ್ತಿರಲಿಲ್ಲ. ನೀನು ಸಹ ಆದಿಯಿಂದ ಅಂತ್ಯದ ತನಕವೂ ನನ್ನನ್ನು ಬಹುವಚನದಲ್ಲೇ ಮಾತನಾಡಿಸುತ್ತಿದ್ದೆ. ಆದರೆ, ನಾನು ನಿನಗೆ ಬರೆಯುತ್ತಿರುವ ಮೊದಲ ಪ್ರೇಮಪತ್ರವಿದು. ನೀನೀಗ ಅನುಗಾಲವೂ ನನ್ನಂತರಾತ್ಮವೇ ಆಗಿರುವುದರಿಂದ ನೀವು ಅಂದರೆ ಯಾರೋ ದೂರದವರು ಅಂದಹಾಗನಿಸುತ್ತದೆ. ಹಾಗಾಗಿ ನೀನು ಅಂದಿರುವೆ. ಕೋಪಿಸಬೇಡ. ಅಗೌರವ ಎಂದಂತೂ ಭಾವಿಸಲೇ ಬೇಡ.

ನನ್ನ ಅತ್ತೆ, ನಿನ್ನ ಅಮ್ಮನಾಗಿರುವ ಅತ್ತೆಮ್ಮ ಯಾವಾಗಲೂ ಹೇಳುತ್ತಿದ್ದರು, ಹೋದ ಜನ್ಮದ ನಿನ್ನ ಋಣವನ್ನು ನಾನು ಬಾಕಿ ಇರಿಸಿಕೊಂಡದ್ದಿಕ್ಕೇ ನಮ್ಮ ಮದುವೆಯಾಯಿತಂತೆ. ಮತ್ತು ಆ ಆರೇಳು ತಿಂಗಳು ನೀನು ನನಗೆ ಮಗುವೇ ಆಗಿದ್ದೆ. ಹಾಗಾಗಿ ನನ್ನ ಋಣವೇನೋ ಸಂದಾಯವಾಗಿರಬಹುದು. ಆದರೆ ಈ ಜನ್ಮದಲ್ಲಿ ನಮ್ಮ ಪ್ರೀತಿಯ ಋಣ ಹಾಗೇ ಬಾಕಿ ಉಳಿದಿದೆಯಲ್ಲಾ. ಅದಕ್ಕಾಗಿಯಾದರೂ ಮತ್ತೊಮ್ಮೆ ನಾನು ಮತ್ತು ನೀನು ಒಂದಾಗುವಾ. ಆಗ ಇನ್ನಷ್ಟು ಗಾಢವಾಗಿ, ಇನ್ನಷ್ಟು ಆಪ್ತವಾಗಿ ಪ್ರೀತಿಸೋಣ, ಏನಂತೀ?

ಚಿನ್ನಪ್ಪೀ.... ಪಾರ್ ಅಮೋರ್, ಮುನಾಮಿ, ಬೀಝೂ...